ಭಾರತ ಒಂದಾಗುವವರೆಗೆ ಯಾತ್ರೆ ಮುಂದುವರಿಯಲಿದೆ: ರಾಹುಲ್ ಗಾಂಧಿ
Yatra will continue till India is united: Rahul Gandhi
ಹೊಸದಿಲ್ಲಿ: ದ್ವೇಷ ನಿರ್ಮೂಲನೆಯಾಗುವವರೆಗೆ ಹಾಗೂ ಭಾರತ ಒಂದಾಗುವವರೆಗೆ ಯಾತ್ರೆ ಮುಂದುವರಿಯಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಹೇಳಿದ್ದಾರೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಕಳೆದ ವರ್ಷ ನಡೆದ ‘ಭಾರತ್ ಜೋಡೋ ಯಾತ್ರೆ’ಗೆ ಗುರುವಾರ ಒಂದು ವರ್ಷ ತುಂಬಿದೆ.
ಈ ಹಿನ್ನೆಲೆಯಲ್ಲಿ ಅವರು ಕಳೆದ ವರ್ಷ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಸಿದ 4 ಸಾವಿರಕ್ಕೂ ಅಧಿಕ ಕಿ.ಮೀ. ಯಾತ್ರೆಯ ಕುರಿತ ವೀಡಿಯೊ ತುಣುಕುಗಳನ್ನು ‘ಎಕ್ಸ್’ (ಈ ಹಿಂದಿನ ಟ್ವಿಟರ್)ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಹಿಂದಿ ಪೋಸ್ಟ್ ನಲ್ಲಿ ರಾಹುಲ್ ಗಾಂಧಿ, ‘‘ಭಾರತ್ ಜೋಡೊ ಯಾತ್ರೆಯಲ್ಲಿ ಪಾಲ್ಗೊಂಡ ಕೋಟಿ ಹೆಜ್ಜೆಗಳು ನೀಡಿದ ಏಕತೆ ಮತ್ತು ಪ್ರೀತಿ ದೇಶದ ಉತ್ತಮ ನಾಳೆಗೆ ಅಡಿಪಾಯವಾಗಿದೆ. ದ್ವೇಷ ನಿರ್ಮೂಲನೆಯಾಗುವ ವರೆಗೆ, ಭಾರತ ಒಂದಾಗುವ ವರೆಗೆ ಪಯಣ ಮುಂದುವರಿಯಲಿದೆ. ಇದು ನನ್ನ ಭರವಸೆ ’’ ಎಂದಿದ್ದಾರೆ.
ಈ ಯಾತ್ರೆಯ ಸಂದರ್ಭ ರಾಹುಲ್ ಗಾಂಧಿ ಅವರು 12 ಸಾರ್ವಜನಿಕ ಸಭೆ, 100ಕ್ಕೂ ಅಧಿಕ ಬೀದಿ ಬದಿಯ ಸಭೆ ನಡೆಸಿದ್ದರು ಹಾಗೂ 13 ಪತ್ರಿಕಾಗೋಷ್ಠಿಗಳನ್ನು ನಡೆಸಿದ್ದರು. 4 ಸಾವಿರಕ್ಕೂ ಅಧಿಕ ಕಿ.ಮೀ. ಯಾತ್ರೆ ನಡೆಸುವ ಮೂಲಕ ರಾಹುಲ್ ಗಾಂಧಿ ಬೆಂಬಲಿಗರು ಹಾಗೂ ವಿರೋಧಿಗಳ ಗಮನ ಸೆಳೆದಿದ್ದರು. ಈ ಯಾತ್ರೆಯಲ್ಲಿ ಸಿನೆಮಾ, ಟಿ.ವಿ. ಸೆಲೆಬ್ರಿಟಿಗಳಾದ ಕಮಲ್ ಹಾಸನ್, ಪೂಜಾ ಭಟ್, ರಿಯಾ ಸೇನ್, ಸ್ವರ ಭಾಸ್ಕರ್, ರಶ್ಮಿ ದೇಸಾಯಿ, ಆಕಾಂಕ್ಷ ಪುರಿ ಹಾಗೂ ಅಮೋಲ್ ಪಾಲೇಕರ್ ಸೇರಿದಂತೆ ಎಲ್ಲಾ ವರ್ಗದ ಜನರು ಪಾಲ್ಗೊಂಡಿದ್ದರು.
ಇವರಲ್ಲದೆ ಮಾಜಿ ಸೇನಾ ವರಿಷ್ಠ ಜನರಲ್ (ನಿವೃತ್ತ) ದೀಪಕ್ ಕಪೂರ್, ನೌಕಾ ಪಡೆಯ ಮಾಜಿ ಚೀಫ್ ಅಡ್ಮಿರಲ್ ಎಲ್. ರಾಮ್ದಾಸ್ ಸೇರಿದಂತೆ ಲೇಖಕರು ಹಾಗೂ ನಿವೃತ್ತ ಸೇನಾಧಿಕಾರಿಗಳು, ಆರ್ಬಿಐಯ ಮಾಜಿ ಗವರ್ನರ್ ರಘುರಾಮ ರಾಜನ್, ಮಾಜಿ ಹಣಕಾಸು ಕಾರ್ಯದರ್ಶಿ ಅರವಿಂದ ಮಾಯರಂ ಅವರಂತಹ ಪ್ರಮುಖ ವ್ಯಕ್ತಿಗಳು ಪಾಲ್ಗೊಂಡಿದ್ದರು.