ಯೂಟ್ಯೂಬ್ ವೀಡಿಯೊಗಳನ್ನು ನೋಡಿ ಸ್ವಯಂ ಶಸ್ತ್ರಚಿಕಿತ್ಸೆ ; ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆ ಸೇರಿದ ಯುವಕ

ಸಾಂದರ್ಭಿಕ ಚಿತ್ರ | PC : freepik.com
ಲಕ್ನೋ: ಯೂಟ್ಯೂಬ್ ವೀಡಿಯೊಗಳನ್ನು ನೋಡಿ ತನ್ನ ಹೊಟ್ಟೆಗೆ ಸ್ವಯಂ ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದ ಯುವಕನೋರ್ವ ಗಂಭೀರ ಸಮಸ್ಯೆಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ.
ಬಿಬಿಎ ಪದವೀಧರನಾಗಿರುವ ರಾಜಾ ಬಾಬು(32) ಮಥುರಾದ ಸುನ್ರಖ್ ಗ್ರಾಮದಲ್ಲಿ ಒಂಟಿಯಾಗಿ ವಾಸವಾಗಿದ್ದು, ಕಳೆದ ಕೆಲವು ತಿಂಗಳುಗಳಿಂದ ಹೊಟ್ಟೆನೋವಿನಿಂದ ನರಳುತ್ತಿದ್ದ. ವೈದ್ಯಕೀಯ ಸಮಾಲೋಚನೆಗಳು ವಿಫಲಗೊಂಡ ಬಳಿಕ ಸ್ವಯಂ ಚಿಕಿತ್ಸೆ ಮಾಡಿಕೊಳ್ಳಲು ನಿರ್ಧರಿಸಿದ್ದ. ಯೂಟ್ಯೂಬ್ ವೀಡಿಯೊಗಳನ್ನು ನೋಡಿ ಬ್ಲೇಡ್, ನಿದ್ರಾಜನಕ ಇಂಜೆಕ್ಷನ್ ಹಾಗೂ ಹೊಲಿಗೆ ಹಾಕಿಕೊಳ್ಳಲು ಸೂಜಿ ಮತ್ತು ಪ್ಲಾಸ್ಟಿಕ್ ದಾರ ಸೇರಿದಂತೆ ಅಗತ್ಯ ವಸ್ತುಗಳನ್ನು ಜೊತೆಗೂಡಿಸಿಕೊಂಡಿದ್ದ.
ಕೊನೆಗೂ ಬುಧವಾರ ರಾಜಾ ಬಾಬು ತನ್ನ ಹೊಟ್ಟೆಯನ್ನು ಕೊಯ್ದುಕೊಂಡಿದ್ದು, ಬಳಿಕ 11 ಹೊಲಿಗೆಗಳೊಂದಿಗೆ ಅದನ್ನು ಮುಚ್ಚಿಕೊಂಡಿದ್ದ. ಆದರೆ ನೋವು ಅಸಹನೀಯವಾದಾಗ ಆತನ ಸಂಬಂಧಿಗಳು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದರು. ಸ್ಥಿತಿ ಗಂಭೀರವಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಿಸಿದ್ದ ವೈದ್ಯರು ಪ್ರಥಮ ಚಿಕಿತ್ಸೆಯನ್ನು ನೀಡಿ ಆಗ್ರಾದ ಎಸ್‌ಎನ್ ಮೆಡಿಕಲ್ ಕಾಲೇಜಿಗೆ ಸಾಗಹಾಕಿದ್ದರು.
ರಾಜಾ ಬಾಬು 15 ವರ್ಷಗಳ ಹಿಂದೆ ಅಪೆಂಡಿಸೈಟಿಸ್‌ಗಾಗಿ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಎಂದು ಜಿಲ್ಲಾಸ್ಪತ್ರೆಯ ವೈದ್ಯರೋರ್ವರು ತಿಳಿಸಿದರು.
ಹೊಸದಾಗಿ ನೋವು ಆರಂಭಗೊಂಡು ಉಲ್ಬಣಿಸಿದಾಗ ಆತ ಹೊಟ್ಟೆಯನ್ನು ಏಳು ಇಂಚುಗಳಷ್ಟು ಕೊಯ್ದುಕೊಂಡು ನಂತರ ಹೊಲಿಗೆ ಹಾಕಿಕೊಂಡಿದ್ದ. ಹೊಟ್ಟೆಯನ್ನು ಕೊಯ್ದುಕೊಂಡ ಬಳಿಕ ಆತ ನಿಖರವಾಗಿ ಮಾಡಿದ್ದೇನು ಎನ್ನುವುದು ಸ್ಪಷ್ಟವಾಗಿಲ್ಲ, ಆದರೆ ಸೋಂಕು ಉಂಟಾಗುವ ಹೆಚ್ಚಿನ ಅಪಾಯವಿತ್ತು. ಈ ಹಂತದಲ್ಲಿ ಸೋಂಕು ಎಷ್ಟರ ಮಟ್ಟಿಗೆ ಹರಡಿದೆ ಎನ್ನುವುದನ್ನು ಹೇಳಲು ವೈದ್ಯರಿಗೂ ಸಾಧ್ಯವಾಗಿಲ್ಲ.
ತಾನು ಕಳೆದ ನಾಲ್ಕು ತಿಂಗಳುಗಳಿಂದಲೂ ಹೊಟ್ಟೆನೋವಿನಿಂದ ನರಳುತ್ತಿದ್ದೆ ಮತ್ತು ತಾನು ಭೇಟಿಯಾಗಿದ್ದ ವೈದ್ಯರಿಗೆ ಕಾರಣವನ್ನು ಕಂಡುಕೊಳ್ಳಲು ಸಾಧ್ಯವಾಗಿರಲಿಲ್ಲ ಎಂದು ರಾಜಾ ಬಾಬು ಹೇಳಿದ. ಆತ ಅಲ್ಟ್ರಾಸೌಂಡ್ ಪರೀಕ್ಷೆಯನ್ನೂ ಮಾಡಿಸಿಕೊಂಡಿದ್ದ, ಆದರೆ ಅದರಿಂದ ಏನೂ ಗೊತ್ತಾಗಿರಲಿಲ್ಲ. ಹೀಗಾಗಿ ತನ್ನ ನಿಖರವಾದ ಸಮಸ್ಯೆಯೇನು ಎಂದು ತಿಳಿದುಕೊಳ್ಳಲು ಸ್ವಯಂ ಹೊಟ್ಟೆಯನ್ನು ಕೊಯ್ದುಕೊಳ್ಳಲು ನಿರ್ಧರಿಸಿದ್ದ. ತನ್ನ ಹೊಟ್ಟೆಯೊಳಗಿಂದ ‘ಏನನ್ನೋ’ ಹೊರಗೆಳೆಯಲು ತಾನು ಪ್ರಯತ್ನಿಸಿದ್ದೆನಾದರೂ ವಿಫಲಗೊಂಡಿದ್ದೆ ಎಂದೂ ರಾಜಾ ಬಾಬು ಹೇಳಿದ.
ಸದ್ಯ ಆಸ್ಪತ್ರೆಯಲ್ಲಿರುವ ಆತನ ದೇಹಸ್ಥಿತಿ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ ಎಂದು ವೈದ್ಯರು
ತಿಳಿಸಿದರು.