ಬಾಲಾಪರಾಧಿಗೆ ಶಿಕ್ಷೆ: ಕಾಯ್ದೆಯಲ್ಲಿನ ಸವಾಲುಗಳು

Update: 2016-01-05 18:03 GMT

ದಿಲ್ಲಿಯಲ್ಲಿ 2012 ಡಿಸೆಂಬರ್ 16ರಂದು ರಾತ್ರಿ ಚಲಿಸುವ ಬಸ್ಸಿನಲ್ಲಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ನಿರ್ಭಯಾ ಮೇಲೆ ನಡೆದ ಗ್ಯಾಂಗ್ ರೇಪ್ ಅತ್ಯಂತ ಹೇಯವಾದ ಬರ್ಬರ ಪ್ರಕರಣವಾದ ಕಾರಣದಿಂದ ಈ ಅತ್ಯಾಚಾರದ ವಿರುದ್ಧ ಇಡೀ ದೇಶವೇ ಎಚ್ಚೆತ್ತು ಹಿಂದೆಂದೂ ಕೇಳರಿಯದ ರೀತಿಯಲ್ಲಿ ಇಡೀ ದೇಶವೇ ಆಕ್ರೋಶ ಎಬ್ಬಿಸಿ ಕಾನೂನಿನಲ್ಲಿ ಬದಲಾವಣೆ ತರಲು ಕಾರಣವಾಗಿತ್ತು. ಈ ಪ್ರಕರಣದ ನಾಲ್ವರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ ಮತ್ತು ಅದರಲ್ಲಿ ಪ್ರಮುಖ ಪಾತ್ರಧಾರಿಯಾಗಿದ್ದ 17 ವರ್ಷದ ಬಾಲಪರಾಧಿಯನ್ನು ಸುಧಾರಣಾ ಗೃಹದಲ್ಲಿರಿಸಿ 3 ವರ್ಷದ ನಂತರ ಈಗ ಬಿಡುಗಡೆಯಾಗಿದೆ. ‘‘ಈ ರೀತಿ ಬಿಡುಗಡೆಯಾದರೆ 18 ವರ್ಷದೊಳಗಿನ ಎಲ್ಲಾ ವ್ಯಕ್ತಿಗಳಿಗೂ ಅತ್ಯಾಚಾರವೆಸಗಲು ಪ್ರಮಾಣ ಪತ್ರ ದೊರಕಿದಂತಾಗುತ್ತದೆ’’ ಎಂದು ನಿರ್ಭಯಾ (ಜ್ಯೋತಿಸಿಂಗ್) ತಾಯಿ ಆಶಾದೇವಿ ಈ ಬಿಡುಗಡೆ ಪ್ರಕ್ರಿಯೆ ಕ್ರಮಬದ್ಧವಾಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ

ಹೆಣ್ಣು ಅಂದರೆ ಪುರುಷರ ಭೋಗಕ್ಕೆ ಇರುವವರು ಎಂಬ ಮನಸ್ಥಿತಿ ಇಂದು ಕೂಡಾ ಹಾಗೇ ಇದೆ. ಈ ಅತ್ಯಾಚಾರ ಪ್ರಕರಣದಲ್ಲಿ ‘ಗಲ್ಲು ಶಿಕ್ಷೆ’ಗೆ ಗುರಿಯಾಗಿರುವ ಕೈದಿಗಳನ್ನು ಸಂದರ್ಶಿಸಿದ ವಿದೇಶಿ ಮಹಿಳೆ ನಿರ್ದೇಶಿಸಿದ ಸಾಕ್ಷ ಚಿತ್ರ ‘‘ಇಂಡಿಯಾಸ್ ಡಾಟರ್’’ನಲ್ಲಿ ಮುಕೇಶ್ ಸಿಂಗ್ ಎಂಬ ಕೈದಿ ‘‘ರಾತ್ರಿ ಹೊತ್ತು ಹೊರಗೆ ಹೋಗುವ ಹೆಣ್ಣುಗಳೆಲ್ಲ ನೀತಿಗೆಟ್ಟವರು. ಅತ್ಯಾಚಾರಕ್ಕೆ ಕಾರಣ ಹೆಣ್ಣುಗಳೇ. ಅವಳು ಪ್ರತಿಭಟಿಸದೆ ಅತ್ಯಾಚಾರಕ್ಕೆ ಸಹಕಾರ ತೋರಿಸಿದ್ದರೆ ಹಿಂಸೆ ತಪ್ಪುತ್ತಿತ್ತು.’’ ಎಂಬಂತಹ ಮಾತುಗಳು ಅವರ ಮನೋಭಾವ ತೋರಿಸುತ್ತದೆ. ಮತ್ತು ಅವರ ಪರವಾಗಿ ವಾದಿಸಿದ ಕಾನೂನು ತಜ್ಞರೆನಿಸಿದ ಬುದ್ಧಿ ಜೀವಿಗಳೂ ಒಳ್ಳೆಯ ಹುಡುಗಿಯರು ದೀಪ ಹಚ್ಚಿದ ನಂತರ ಮನೆ ಬಿಟ್ಟು ಹೊರಗೆ ಹೋಗುವುದಿಲ್ಲ ಎಂಬ ಹೇಳಿಕೆ ನೀಡಿದ್ದು ನಮ್ಮ ನಾಗರಿಕ ಸಮಾಜ ಎತ್ತ ಸಾಗುತ್ತಿದೆ ಎನ್ನುವಂತಹದ್ದನ್ನು ತೋರಿಸುತ್ತದೆ.
15 ವರ್ಷದ ನಂತರ ಬಾಲಾಪರಾಧಿ ನ್ಯಾಯ ಕಾಯ್ದೆಗೆ ತಿದ್ದು ಪಡಿಯಾಗಿ ಅಂಗೀಕಾರ ಸಿಕ್ಕಿದೆ. ಹೊಸ ಮಸೂದೆ ಪ್ರಕಾರ 16ರಿಂದ 18 ವರ್ಷದೊಳಗಿನ ಬಾಲಕರು ಘೋರ ಅಪರಾಧವೆಸಗಿದರೆ ವಯಸ್ಕರನ್ನು ವಿಚಾರಣೆಗೆ ಒಳಪಡಿಸುವ ಕಾನೂನಿನಲ್ಲಿಯೇ ಅವರನ್ನು ವಿಚಾರಣೆಗೆ ಒಳಪಡಿಸಲು ಈ ತಿದ್ದುಪಡಿ ಅವಕಾಶ ಒದಗಿಸುತ್ತದೆ. ಒಟ್ಟಿನಲ್ಲಿ ಈ ಬಾಲಾಪರಾಧಿ ತಿದ್ದುಪಡಿ ಮಸೂದೆ ಅಂಗೀಕಾರಕ್ಕೆ ಒತ್ತಡ ಹೆಚ್ಚಾಗಿದ್ದ ಕಾರಣವೇ ಮಸೂದೆಗೆ ವಿರೋಧವಿದ್ದಾಗಲೂ ರಾಜ್ಯ ಸಭೆಯಲ್ಲೂ ಒಪ್ಪಿಗೆ ನೀಡಲಾಯಿತು, ಮೇನಕಾ ಗಾಂಧಿ (ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ)- ಶಿಕ್ಷೆ ನೀಡುವುದಕ್ಕಿಂತ ಅಪರಾಧ ಎಸಗದಂತೆ ತಡೆಯುವುದು ತಿದ್ದುಪಡಿಯ ಉದ್ದೇಶ ಎಂದಿದ್ದಾರೆ.
ಆದರೂ ಅನೇಕರು ಈ ತಿದ್ದುಪಡಿ ಬಗ್ಗೆ ಆಕ್ಷೇಪವೆತ್ತಿದ್ದಾರೆ. ಇದು ಅತ್ಯಂತ ತುರ್ತಿನಲ್ಲಿ ಜರಗಿದ ತಿದ್ದುಪಡಿ. ಸಮಂಜಸವಾದುದಲ್ಲ ಎಂದು ಬಾಲ ನ್ಯಾಯಮಂಡಳಿಯ ಆರೋಪ. ಹೀಗಾದರೆ ಬಾಲ ಅಪರಾಧಿಗಳು ವಯಸ್ಕ ಕ್ರಿಮಿನಲ್‌ಗಳ ಜೊತೆ ಸೇರಿ ಪಕ್ಕಾ ಕ್ರಿಮಿನಲ್‌ಗಳಾಗಿ ಮಾರ್ಪಾಟು ಆಗಲು ಸಾಧ್ಯ ಎನ್ನುವ ಆತಂಕ ಇದೆ. ಇನ್ನು ಒಂದು ಅಪರಾಧ ಮಾಡಿದ ಕಾರಣ ಮುಗ್ಧರಾದವರನ್ನು ಶಾಶ್ವತ ಅಪರಾಧಿಯನ್ನಾಗಿ ಮಾಡಿ ಶಿಕ್ಷೆಗೊಳಪಡಿಸುವುದು ನ್ಯಾಯಯುತವಲ್ಲವೆನ್ನುವುದೂ ಅಷ್ಟೇ ಸತ್ಯ. ಅದೂ ಅಲ್ಲದೇ ನಮ್ಮ ಜೈಲುಗಳೂ ಇದಕ್ಕೆ ಪೂರಕವಾಗಿ ಭ್ರಷ್ಟಾಚಾರದಿಂದೇನೂ ಹೊರತಾಗಿಲ್ಲ.
 ಇಂತಹ ಚಿಂತನೆಯಲ್ಲೂ ಅನೇಕ ಮಜಲುಗಳಿವೆ. ‘‘ಅತ್ಯಾಚಾರಕ್ಕೆ ಕಾರಣ ಹೆಣ್ಣುಗಳೇ. ಹಿಂದಿನಿಂದಲೂ ಇದು ನಡೆದು ಬಂದಿದೆ. ಈಗ ಹುಡುಗಿಯರು ಧರಿಸುವ ಉಡುಪುಗಳೇ ಇದಕ್ಕೆ ಕಾರಣವಾಗಿ ಇನ್ನೂ ಹೆಚ್ಚಾಗಿದೆ’’ ಎನ್ನುವ ಮಹಿಳೆಯರು ಪುರುಷ ವೌಲ್ಯವನ್ನೇ ಎತ್ತಿ ಹಿಡಿದು ವಿರುದ್ಧದ ದನಿಯನ್ನು ಅದುಮಿ ವ್ಯವಸ್ಥಿತವಾಗಿ ಮಹಿಳೆಯರ ಮೇಲೆ ಅಪರಾಧವನ್ನು ಹೊರಿಸುವ ಆದರ್ಶನಾರಿಯರು. ಇಂತಹ ಅಪಾಯ ತಮ್ಮದೇ ಕಾಲ ಬುಡಕ್ಕೆ ಬಂದಾಗ ಮಾತ್ರ ಅವರು ಅದರ ದುಷ್ಪರಿಣಾಮದ ಬಗ್ಗೆ ಚಿಂತಿಸುತ್ತಾರೆ.
ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳ ಸುರಕ್ಷಿತತೆಯ ಬಗ್ಗೆ ಮಹಿಳೆಯರು ಹೋರಾಡುವುದು ಸಹಜ. ಶಿಕ್ಷೆಯ ಭಯದ ಕಾರಣ ಇಂತಹ ಅಪರಾಧ ಕಡಿಮೆಯಾಗಲು ಸಾಧ್ಯ ಎನ್ನುವ ಮಾತಿನಲ್ಲಿ ಸ್ವಲ್ಪ ಮಟ್ಟಿನ ಸತ್ಯವಿದ್ದರೂ ನಮ್ಮ ನ್ಯಾಯ ವ್ಯವಸ್ಥೆಯಲ್ಲಿ ಬಡವರನ್ನು ಮಾತ್ರ ಗುರಿ ಮಾಡಿಸುವುದು ಅಷ್ಟೇ ಸತ್ಯ. ಇಲ್ಲಿ ಪರಿಶೀಲಿಸ ಬೇಕಾದ ಅನೇಕ ಪ್ರಶ್ನೆಗಳು ಇವೆ. ಬಾಲ ಅಪರಾಧಿಗಳು ಹೆಚ್ಚಾಗಿ ಕೊಳಗೇರಿಯ ಹಿಂದುಳಿದ ಸಮುದಾಯಕ್ಕೆ ಸೇರಿದವರು. ಸುಮಾರು ಹತ್ತು ವರ್ಷದ ಹಿಂದೆ ನಾನು ಅಖಿಲ ಕರ್ನಾಟಕ ಕೊಳಗೇರಿ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೆ. ಅಲ್ಲಿದ್ದ ಹೆಚ್ಚಿನ ಗಂಡಸರು ಮದ್ಯವ್ಯಸನಿಗಳಾಗಿದ್ದರು. ಒಮ್ಮೆ ಒಬ್ಬರು ತಮ್ಮ ಹತ್ತು ವರ್ಷದ ಮಗನೊಡನೆ ಮದ್ಯದ ಅಂಗಡಿಗೆ ಹೋಗಿ ಮದ್ಯದ ಬಾಟಲು ತರಲು ಹೇಳಿದಾಗ ಆ ಹುಡುಗ ಬಾಟಲಿಯಲ್ಲಿದ್ದ ಮದ್ಯದ ರುಚಿ ನೋಡಿ ಅದರಲ್ಲಿ ನೀರು ಬೆರೆಸಿ ತಂದುಕೊಟ್ಟಿದ್ದ. ಕುಡಿತದ ಚಟಕ್ಕೆ ಒಳಗಾದವರಿಂದ ಅಪರಾಧಗಳಾಗುವುದು ಸಹಜ. ಸರಿಯಾದ ಶಿಕ್ಷಣವೂ ಸಿಗದೇ ಪೋಷಕರ ಅವಗಣನೆಗೆ ತುತ್ತಾದ ಈ ಮಕ್ಕಳ ಬಗ್ಗೆ ಮಾನವೀಯವಾದ ಚಿಂತನೆ, ಸಂವೇದನೆ ಇರಬೇಕಾಗುತ್ತದೆ. ಈ ಕುರಿತು ಆಲೋಚಿಸಬೇಕಾದುದೂ ಮುಖ್ಯ. ಇದು ಬಡ ಮಕ್ಕಳ ಕತೆಯಾದರೆ ಐಷಾರಾಮಿನಲ್ಲಿ ಬೆಳೆಯುವ ಮಕ್ಕಳ ತಂದೆಯ ಕತೆ ಬೇರೆಯೇ ಇರುತ್ತದೆ.
ಇಂದಿನ ವ್ಯಾವಹಾರಿಕ ವ್ಯಾಪಾರಿ ಜಗತ್ತಿನ ಹದಗೆಟ್ಟ ಶಿಕ್ಷಣ ನೀತಿಯಿಂದ ಅಂತರ್ಜಾಲದಲ್ಲಿ ಲೈಂಗಿಕ ವೀಡಿಯೋ ದೃಶ್ಯಗಳು ನಿಯಂತ್ರಣವಿಲ್ಲದೆ ಹೊರ ಬರುತ್ತಿವೆ. ಹೆಚ್ಚಿನ ಯುವ ಪೀಳಿಗೆ ಇದನ್ನು ನೋಡುವುದರಲ್ಲಿ ತಮ್ಮ ಸಮಯ ಕಳೆಯುತ್ತಾರೆ ಮತ್ತು ಅದನ್ನು ಕಾರ್ಯಗತಗೊಳಿಸಲು ಹಾತೊರೆಯುತ್ತಾರೆ. ಇದು ನಮ್ಮ ಮುಂದಿರುವ ಕಟುವಾಸ್ತವ. ಇದನ್ನೆಲ್ಲಾ ಯೋಚಿಸದೆ ಕೇವಲ ಕಾನೂನು ಮತ್ತು ಶಿಕ್ಷೆ ಕೊಡುವುದರಿಂದ ಪರಿಹಾರವಾಗುವುದಿಲ್ಲ. ಇನ್ನು ನಮ್ಮ ಪೊಲೀಸ್ ವ್ಯವಸ್ಥೆಯಲ್ಲಿನ ನಿಷ್ಕ್ರಿಯತೆ ಹಾಗೂ ಸಂವೇದನಾ ಶೂನ್ಯತೆಯಿಂದ ಇಂತಹ ಅಪರಾಧಗಳು ಮಾಮೂಲಿಯಾಗಿ ಬಿಡುತ್ತವೆ. ಹೊಸ ಸಹಸ್ರಮಾನ ನಮ್ಮ ಯುವ ಪೀಳಿಗೆಯಿಂದ ವಿಶ್ವಾಸ ಗಳಿಸಿಕೊಳ್ಳುವ ಮೂಲಕ ಶಿಕ್ಷೆಗಿಂತ ರಿಯಾಯಿತಿ ನೀಡುವುದೂ ಮಾನವೀಯತೆಯ ಮಾರ್ಗವಾಗಬಹುದು.

Writer - ಕೆ. ತಾರಾಭಟ್

contributor

Editor - ಕೆ. ತಾರಾಭಟ್

contributor

Similar News