ಅರಸು ದೊಡ್ಡತನ ಎಷ್ಟು ಹೇಳಿದರೂ ಕಮ್ಮಿಯೇ -ಗರುಡನಗಿರಿ ನಾಗರಾಜ
ವಾರ್ತಾಭಾರತಿ: ನಿಮ್ಮ ಕಾಲ ಪತ್ರಕರ್ತರು ಮತ್ತು ಪತ್ರಿಕೋದ್ಯಮ ಹೇಗಿತ್ತು?
ಗರುಡನಗಿರಿ ನಾಗರಾಜ: ಈ ಕಾಲದಲ್ಲಿ ಹೇಗಿದೆಯೋ ಹಾಗೆಯೇ ಇತ್ತು. ವಿಧಾನಸೌಧ, ಎರಡು ಹೊಟೇಲ್, ಶಾಸಕರ ಭವನ ರೆಗ್ಯುಲರ್ ಬೀಟ್. ರಾಜಕಾರಣಿಗಳು ಹಾಲಿನ ಹೊಳೆಯನ್ನೇ ಹರಿಸುತ್ತೇವೆ ಅಂದರೆ ಅದನ್ನೂ ಬರೀತಿದ್ರು. ವ್ಯತ್ಯಾಸವೇನಿಲ್ಲ. ಆದರೆ ಇವತ್ತಿನ ದೃಶ್ಯಮಾಧ್ಯಮದಂತಲ್ಲ. ಆಗ ವೃತ್ತಿಪರತೆ ಇತ್ತು. ಪತ್ರಿಕೋದ್ಯಮ ಉದ್ಯಮದ ಸ್ವರೂಪ ಪಡೆದಿರಲಿಲ್ಲ. ಪತ್ರಕರ್ತರಿಗೆ ತುಡಿತ, ಕಾಳಜಿಗಳಿದ್ದವು. ಪತ್ರಕರ್ತ ವೃತ್ತಿಗೆ ಘನತೆ, ಗೌರವವಿತ್ತು. ರಾಜಕಾರಣಿಗಳ ವಿರುದ್ಧವಾಗಿ, ಕಟುವಾಗಿ ಬರೆಯುವುದು ಕಡಿಮೆಯೇ, ಅಕಸ್ಮಾತ್ ಟೀಕಿಸಿ ಬರೆದರೂ ಸೌಜನ್ಯಯುತವಾಗಿ ನಡೆದುಕೊಳ್ಳುತ್ತಿದ್ದರು. ದೇವರಾಜ ಅರಸು ಅವರೂ ಅಷ್ಟೆ, ಯಾಕೆ ಬರೆದಿರಿ ಎಂದು ಯಾರನ್ನೂ ಕೇಳಿದ್ದಿಲ್ಲ, ಕೋಪಿಸಿಕೊಂಡವರೂ ಅಲ್ಲ.
ವಾಭಾ: ನಿಮ್ಮ ಪತ್ರಿಕೆಯನ್ನು ಅರಸು ಅವರು ಸುಟ್ಟುಹಾಕಿ ಎಂದು ಕರೆ ಕೊಟ್ಟಿದ್ದರಲ್ಲ?
ಗರುಡನಗಿರಿ: ಹ್ಹಾ... ಅದು ತುರ್ತು ಪರಿಸ್ಥಿತಿ ಸಮಯದಲ್ಲಿ ನಮ್ಮ ಪತ್ರಿಕೆ- ಇಂಡಿಯನ್ ಎಕ್ಸ್‌ಪ್ರೆಸ್ ಗ್ರೂಪ್- ಇಂದಿರಾ ಗಾಂಧಿಗೆ ವಿರುದ್ಧವಾಗಿತ್ತು. ಬಹಳ ಉಗ್ರ ಲೇಖನಗಳನ್ನು ಪ್ರಕಟಿಸಿ ಇಂದಿರಾರ ಕೆಂಗಣ್ಣಿಗೆ ಗುರಿಯಾಗಿತ್ತು. ತುರ್ತು ಪರಿಸ್ಥಿತಿಯ ನಂತರ ನಡೆದ ಚಿಕ್ಕಮಗಳೂರು ಲೋಕಸಭಾ ಉಪಚುನಾವಣೆಯಲ್ಲಿ ಇಂದಿರಾ ಗಾಂಧಿಯೇ ಅಭ್ಯರ್ಥಿಯಾದಾಗ, ನಾವು ಸಹಜವಾಗಿಯೇ ಅವರ ವಿರುದ್ಧವಾಗಿ ಬರೆದಿದ್ದೆವು. ಅದರಲ್ಲೂ ನಾನು, ಚಿಕ್ಕಮಗಳೂರಿನ ಚುನಾವಣಾ ಸಮೀಕ್ಷೆಗೆ ಹೋಗಿದ್ದವನು, ‘ಇಂದಿರಾ ಗಾಂಧಿ ಮುಖ ಬಾಡಿದೆ, ಕಳಾಹೀನವಾಗಿದೆ’ ಎಂದೆಲ್ಲ ಬರೆದಿದ್ದೆ. ಅದನ್ನು ನೋಡಿದ ದೇವರಾಜ ಅರಸು, ‘ಈ ಇಂಡಿಯನ್ ಎಕ್ಸ್‌ಪ್ರೆಸ್ ಮತ್ತು ಕನ್ನಡಪ್ರಭ ಪತ್ರಿಕೆಗಳನ್ನು ಸುಟ್ಟುಹಾಕಿ’ ಎಂದು ರೋಷದಿಂದ ಹೇಳಿದ್ದು ನಿಜ. ದುರದೃಷ್ಟಕ್ಕೆ, ಅರಸು ಪಕ್ಷದ ಕಾರ್ಯಕರ್ತರು ಕೆಲವು ಕಡೆ ನಮ್ಮ ಪತ್ರಿಕೆಯ ಬಂಡಲ್ ರವಾನಿಸುವ ವ್ಯಾನ್ ತಡೆದು ನಿಲ್ಲಿಸಿ, ಸುಟ್ಟುಹಾಕಿದ್ದರು. ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ನ ನಾನು ಮತ್ತು ರಾಮಪ್ರಸಾದ್ ಹೋಗಿ ಅರಸು ಅವರನ್ನು ಕಂಡು, ‘ಇವತ್ತು ನಮ್ಮ ಪತ್ರಿಕೆಯ ಬಂಡಲ್ ಸಾಗಿಸುವ ವ್ಯಾನ್ ಸುಟ್ಟಿದ್ದಾರೆ, ಮುಂದೆ ನಮ್ಮನ್ನೂ ಸುಡುತ್ತಾರೆ’ ಎಂದಾಗ ಅರಸು, ‘ಹೌದಲ್ಲ, ಏನೋ ಕೋಪದಲ್ಲಿ ಹೇಳಿಬಿಟ್ಟೆ, ತಪ್ಪಾಗಿದೆ ಕ್ಷಮಿಸಿ’ ಎಂದು ದೊಡ್ಡತನ ಮೆರೆದರು.
ವಾಭಾ: ಅರಸು ಅವರ ಈ ದೊಡ್ಡತನವನ್ನು ಇನ್ನಷ್ಟು ವಿವರಿಸುವುದಾದರೆ...
ಗರುಡನಗಿರಿ: ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಶಿವರಾಮ ಕಾರಂತ, ಗೋಪಾಲಕೃಷ್ಣ ಅಡಿಗ, ಲಂಕೇಶ್, ಮಾಸ್ಟರ್ ಹಿರಣ್ಣಯ್ಯ ಸರಕಾರವನ್ನು ಖಂಡಿಸಿ ಊರೂರಲ್ಲಿ ಭಾಷಣ ಮಾಡಿದ್ದರು. ಆದರೆ ಅರಸು ಅವರಾರನ್ನೂ ಬಂಧಿಸಲಿಲ್ಲ. ಕೇಂದ್ರದಿಂದ ಸೂಚನೆ ಬಂದರೆ ಮಾತ್ರ ಬಂಧಿಸಲಾಗುತ್ತಿತ್ತು. ಬಂಧಿತರನ್ನೂ ಕೂಡ ಅತಿಥಿಗಳಂತೆ ನೋಡಿಕೊಳ್ಳಲಾಗುತ್ತಿತ್ತು. ಬಿಹಾರದಿಂದ ಕರೆತಂದಿದ್ದ ಒಬ್ಬನಿಗೆ ಕಾಲಿಗೆ ಸರಪಣಿ ಹಾಕಿದ್ದನ್ನು ಕಂಡ ಅರಸು, ಜೈಲ್ ಐಜಿ ಮಲ್ಲಯ್ಯನವರನ್ನು ಕರೆದು, ‘ಮೊದಲು ಬಿಚ್ಚಿ, ಆತ ಕೈದಿಯಲ್ಲ, ಚೆನ್ನಾಗಿ ನೋಡಿಕೊಳ್ಳಿ’ ಎಂದಿದ್ದರು. ಅದೇ ಸಮಯದಲ್ಲಿ ಕವಿ ಅಡಿಗರು ಜನಸಂಘದ ಅಭ್ಯರ್ಥಿ ಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ, ಸೋತು, ಕೈಯಲ್ಲಿದ್ದ ಕೆಲಸ ಕಳೆದುಕೊಂಡು ಕೂತಿದ್ದರು. ಅವರ ಮನೆಯ ಪರಿಸ್ಥಿತಿಯನ್ನು ಹತ್ತಿರದಿಂದ ಕಂಡಿದ್ದ ನಾನು, ಅವರ ಮನವೊಲಿಸಿ, ಕಷ್ಟದಲ್ಲಿರು ವವರನ್ನು ಕಂಡರೆ ಕರಗುವ ಅರಸು ಅವರ ಬಳಿ ಕರೆದುಕೊಂಡು ಹೋಗಿದ್ದೆ. ಅರಸು ಕಂಡರಾಗದ ಅಡಿಗರು ಒಲ್ಲದ ಮನಸ್ಸಿನಿಂದಲೇ ವಿಧಾನಸೌಧದ ಮೆಟ್ಟಿಲು ಹತ್ತಿ ಬಂದರು. ಅಡಿಗರು ಬರುತ್ತಾರೆಂದು ತಿಳಿದಿದ್ದ ಅರಸು ಗಂಧದ ಹಾರ ಹಿಡಿದು ನಿಂತಿದ್ದರು. ಹಾರ ಹಾಕಿ, ‘ನಿಮ್ಮ ವಿಷಯವನ್ನೆಲ್ಲ ಗರುಡನಗಿರಿಯವರು ಹೇಳಿದ್ದಾರೆ, ನೀವು ಹೇಳಿದ್ದನ್ನು ಮಾಡಲು ನಾವು ಸಿದ್ಧರಿದ್ದೇವೆ, ಅಪ್ಪಣೆ ಕೊಡಿ ದೇವರು’ ಎಂದರು. ಅಡಿಗರು ಒಂದು ಕ್ಷಣ ಪೆಚ್ಚಾದರು. ಆದರೂ ಬಿಡದೆ, ತುರ್ತು ಪರಿಸ್ಥಿತಿ, ಇಂದಿರಾ ಸರ್ವಾಧಿಕಾರತ್ವವನ್ನು ಟೀಕಿಸಿದರು. ಅದಕ್ಕೂ ಸಿಟ್ಟಾಗದ ಅರಸು, ‘ಇದು ನಿಮ್ಮ ಅಭಿಪ್ರಾಯ, ನಮ್ಮ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಅತಿರೇಕವಾಗಿಲ್ಲ, ನಿಮ್ಮ ನಾಯಕ ಅಡ್ವಾಣಿ ಇಲ್ಲಿಯೇ ಸೆಂಟ್ರಲ್ ಜೈಲಿನಲ್ಲಿದ್ದಾರೆ, ಭೇಟಿ ಮಾಡಿ, ನಾವು ಹೇಗೆ ನಡೆಸಿಕೊಂಡಿದ್ದೇವೆ ಎಂಬುದು ತಿಳಿಯುತ್ತದೆ. ನೀವು ಕವಿಗಳು ಹೇಗೆ ಬೇಕಾದರೂ ವ್ಯಾಖ್ಯಾನ ಮಾಡಬಹುದು, ಇರಲಿ. ನಿಮ್ಮ ಮೋಹನ ಮುರಳಿ, ಕಟ್ಟುವೆವು ನಾವು ಕವನಗಳನ್ನು ಓದಿದ್ದೇನೆ. ನನ್ನ ಮೆಚ್ಚಿನ ಕವಿಗಳಲ್ಲಿ ನೀವು ಪ್ರಮುಖರು. ನನ್ನಿಂದಾಗುವ ಸಹಾಯ ಮಾಡಲು ಸಿದ್ಧ, ತಿಂಗಳಿಗೆ ಐದರಿಂದ ಎಂಟು ಸಾವಿರ ರೂಪಾಯಿ ಸರಕಾರದಿಂದ ದೊರೆಯುವಂತೆ ಮಾಡುವ ಹೊಣೆ ನನ್ನದು. ಇದು ನನ್ನ ಹಣವಲ್ಲ, ಜನರ ಹಣವನ್ನು ಜನರ ಕವಿಗೆ ಕೊಡುತ್ತಿದ್ದೇನೆ’ ಎಂದರು. ಅಡಿಗರು ಭಾವೋದ್ವೇಗಕ್ಕೆ ಒಳಗಾದರು. ಕಣ್ಣಂಚಿನಲ್ಲಿ ನೀರಾಡಿತು. ಸಹಾಯಕ್ಕೆ ಒಪ್ಪದ ಅಡಿಗರು, ‘ನಿಮ್ಮ ಬಗ್ಗೆ ತಪ್ಪು ತಿಳಿದಿದ್ದೆ, ನೀವು ನಿಜವಾಗಿಯೂ ದೊಡ್ಡ ಮನುಷ್ಯರಪ್ಪ. ನಿಮ್ಮ ಹೃದಯವಂತಿಕೆಯಿಂದ ನನ್ನ ಮನ ತುಂಬಿ ಬಂತು’ ಎಂದು ಅರಸರ ಕೈ ಹಿಡಿದುಕೊಂಡರು. ಅರಸು, ‘ಹೌದು, ನಾನೊಬ್ಬ ರಾಕ್ಷಸ, ಭ್ರಷ್ಟ ಎಂದು ಹೇಳುತ್ತಾರೆ. ಹೋಗಲಿ ನಿಮ್ಮಂಥ ಕವಿಗಳಾದರೂ ತಪ್ಪು ಅಭಿಪ್ರಾಯವನ್ನು ತೊಡೆದು ಹಾಕಿದರಲ್ಲ, ಅದೇ ಸಂತೋಷ. ವಿರಾಮವಾಗಿ ನನ್ನ ಮನೆಗೆ ಬನ್ನಿ ಸಾಹಿತ್ಯ ವಿಚಾರವನ್ನು ಮಾತನಾಡೋಣ’ ಎಂದು ಬಾಗಿಲವರೆಗೂ ಬಂದು ಕಳುಹಿಸಿಕೊಟ್ಟರು. ಸ್ವಲ್ಪ ದಿನ ಬಿಟ್ಟು ಅರಸು ನನ್ನನ್ನು ಕರೆದು, ‘ನಮ್ಮ ಕವಿಗಳು ಏನು ಹೇಳ್ತಾರಪ್ಪ’ ಎಂದರು. ನಾನು ಹೋಗಿಲ್ಲ, ಕೇಳಿಲ್ಲ ಸರ್ ಎಂದೆ. ಅದಕ್ಕೆ ಅವರು, ‘ಅವರಿಗೆ ಸಂಕೋಚವಾದರೆ, ಮನೆಯಲ್ಲಿದ್ದುಕೊಂಡೇ ಕೆಲಸ ಮಾಡಲಿ, ಅಲ್ಲಿಗೇ ಚೆಕ್ ಕಳುಹಿಸಿಕೊಡುವ ವ್ಯವಸ್ಥೆ ಮಾಡೋಣ, ಕೇಳಿ ನೋಡಿ’ ಎಂದರು. ಅಡಿಗರು ಯಾವುದಕ್ಕೂ ಒಪ್ಪಲಿಲ್ಲ. ಅದನ್ನು ಅರಸು ಅವರಿಗೆ ತಿಳಿಸಿದೆ. ಆಗ ಅರಸು, ‘ಹೋಗ್ಲಿ ಬಿಡಿ, ಅಡಿಗರು ದೊಡ್ಡ ಕವಿ. ಜೊತೆಗೆ ಸ್ವಾಭಿಮಾನಿ. ಅಂತಹ ವ್ಯಕ್ತಿಯ ಭೇಟಿ, ಈ ರೀತಿಯಲ್ಲಾದರೂ ಆಯಿತಲ್ಲ, ಸಂತೋಷ’ ಎಂದು, ‘ತಿಂಗಳಿಗೆ 500 ರೂ. ಗೌರವ ಮಾಸಾಶನ ವ್ಯವಸ್ಥೆ ಮಾಡಿದ್ದೇನೆ, ವಿನಂತಿಸಿಕೊಂಡಿದ್ದೇನೆಂದು ಹೇಳಿ ಒಪ್ಪಿಸಿ’ ಎಂದರು. ಅಡಿಗರು ಅರಸರನ್ನು ನೋಯಿಸದೆ ಒಪ್ಪಿಕೊಂಡರು. ಇಂತಹ ನಿದರ್ಶನಗಳು ಬೇಕಾದಷ್ಟಿವೆ.
ವಾಭಾ: ಪತ್ರಕರ್ತರಾಗಿ ನೀವು ಕಂಡ ಅರಸರ ಆಡಳಿತ ಮತ್ತು ಕಾರ್ಯವೈಖರಿಯ ಬಗ್ಗೆ ಹೇಳಿ?
ಗರುಡನಗಿರಿ: ಅವರ ಶೈಲಿಯೇ ಬೇರೆ. ನಿಂತ ನಿಲುವಿನಲ್ಲಿಯೇ ಕ್ರಮ. ಐಎಎಸ್, ಐಪಿಎಸ್ ಅಧಿಕಾರಿಗಳು ಗಡಗಡ ನಡುಗೋರು. ‘ನಾನೇ ಕಾನೂನು, ನಾನೇ ಸರಕಾರ, ಬಾಯಿ ಮುಚ್ಚಿಕೊಂಡು ಮೊದಲು ಜನರ ಕೆಲಸ ಮಾಡಿ, ನಂತರದ್ದು ನಾನು ನೋಡ್ಕೋತೀನಿ’ ಎನ್ನುತ್ತಿದ್ದರು. ಹೀಗೆ ಹೇಳುವ ಸಂದರ್ಭಗಳು ನಮ್ಮ ಕಣ್ಣಮುಂದೆಯೇ ನಡೆದುದಕ್ಕೆ ಬೇಕಾದಷ್ಟು ಉದಾಹರಣೆ ಕೊಡಬಹುದು. ನಮ್ಮೂರು ಗರುಡನಗಿರಿ ಬಯಲುಸೀಮೆ. ಕುಡಿಯೋ ನೀರಿಲ್ಲ, ಕರೆಂಟಿಲ್ಲ, ಆಸ್ಪತ್ರೆ, ರಸ್ತೆ, ಊರಿಗೆ ಬಸ್ಸು ಯಾವುದೂ ಇರಲಿಲ್ಲ. ನಮ್ಮೂರಿನ ಜನ ಬಂದು, ‘ನೀನು ಅರಸುಗೆ ಹತ್ತಿರವಂತೆ, ಏನಾದ್ರು ಮಾಡು’ ಎಂದರು. ನಾನು ಹೋಗಿ ಅರಸರಿಗೆ, ‘ನಮ್ಮೂರಿಗೆ ಒಂದು ಸಲ ನೀವು ಬರಬೇಕಲ್ಲ’ ಅಂದೆ, ‘ಆಗಲಿ’ ಎಂದರು. ಆದರೆ ನಮ್ಮ ಕ್ಷೇತ್ರದ ಶಾಸಕ, ಗರುಡನಗಿರಿ ಜನ ನಮಗೆ ಓಟಾಕಿಲ್ಲ ಅಂದು ಅರಸು ಹತ್ರ ದೂರು ಹೇಳಿ, ಬರಬೇಡಿ ಎಂದರು. ಆಗ ಅರಸು, ‘ಬರಬೇಡ ಎನ್ನಲು ನೀನ್ಯಾರು, ನಾನು ಕಾಂಗ್ರೆಸ್ ಸಿಎಂ ಅಲ್ಲ, ಇಡೀ ರಾಜ್ಯದ ಜನತೆಯ ಸಿಎಂ’ ಎಂದು ಬಯ್ದು, ಅದನ್ನು ನನಗೂ ಹೇಳಿ, ಊರಿಗೆ ಬಂದೇಬಿಟ್ಟರು. ಊರಿನ ಜನ ಸ್ವಾಗತ ಕೋರಿದ ಜಾಗದಲ್ಲಿಯೇ ನಿಂತು, ಏನೇನಾಗಬೇಕು ಹೇಳ್ರಪ್ಪ ಎಂದರು. ಜನ ಕರೆಂಟಿಲ್ಲ ಅಂದ್ರು. ಅಲ್ಲೆ ಇದ್ದ ಎಂಜಿನಿಯರ್‌ರ ಕರೆದ ಅರಸು, ‘ನೋಡ್ರಿ, ಮುಂದಿನ ತಿಂಗಳ 25ನೆ ತಾರೀಕು ಸ್ವಿಚ್ಚಾನ್ ಮಾಡಲು ನಾನು ಬರ್ತಿದ್ದೇನೆ, ಗೊತ್ತಾಯ್ತಲ್ಲ’ ಎಂದರು. ಆ ಅಧಿಕಾರಿ ಸಾರ್ ಅದು.. ಎಂದ. ‘ಅದು ಇದು ಏನಿಲ್ಲ, ಏನು ಮಾಡ್ತೀರೋ ಗೊತ್ತಿಲ್ಲ, ನಾನು ಬರುವ ವೇಳೆಗೆ ರೆಡಿಯಾಗಿರಬೇಕು’ ಅಂದರು. ಸ್ವಾಮಿ ನಮ್ಮೂರಿಗೆ ಬಸ್ಸು ಬರದಿಲ್ಲ ಅಂದ್ರು. ಅಲ್ಲೇ ಇದ್ದ ಡಿಪೋ ಮ್ಯಾನೇಜರ್ ಕರೆದು, ನಾಳೆಯಿಂದ ಊರಿಗೆ ಬಸ್ ಬರಬೇಕು ಅಂದರು. ಆತ, ಸಾರ್ ರಸ್ತೆ ಸರಿಯಿಲ್ಲ ಅಂದ. ಅದಕ್ಕೊಬ್ಬ ಎಂಜಿನಿಯರ್ ಕರೆದು ಅದೂ ಆಗಬೇಕು ಅಂದರು. ಇನ್ನೇನ್ರಪ್ಪ ಎಂದರು. ಸ್ವಾಮಿ ಕುಡಿಯೋ ನೀರಿಲ್ಲ ಅಂದರು. ಇಂಜಿನಿಯರ್ ಕರೆದು, ‘ನೋಡ್ರಿ, ನಾನು ಊಟ ಮಾಡಲಿಕ್ಕೆ ಹೋಗ್ತಿದೀನಿ, ಊಟ ಮುಗಿಸಿ ಬರೋದರೊಳಗೆ ಗಂಗೆಪೂಜೆಗೆ ಸಿದ್ಧ ಮಾಡಿರಬೇಕು’ ಅಂದರು. ಅಧಿಕಾರಿ ಉಸಿರೆತ್ತಲಿಲ್ಲ. ಅರ್ಧ ಊಟ ಆಗಿತ್ತು, ಜನ ಓಡಿಬಂದು ‘ಸ್ವಾಮಿ ನೀರು ಬಿತ್ತು’ ಅಂದರು. ಅರಸು ಹೇಳಿದಂತೆ ಗಂಗೆ ಪೂಜೆ ಮುಗಿಸಿಯೇ ಹೊರಟರು. ಇದು ಅವರ ವರ್ಕಿಂಗ್ ಸ್ಟೈಲ್. ಜನರ ನಾಡಿಮಿಡಿತ ಅರಿತಿದ್ದರು. ಜನರಿಂದ ಆರಿಸಿ ಬಂದಿದ್ದೀವಿ, ಜನರ ಸೇವೆ ಮಾಡಬೇಕು ಅನ್ನುವುದಷ್ಟೇ ಅವರ ಗುರಿಯಾಗಿತ್ತು.
ವಾಭಾ: ಸಿಎಂ ಅರಸರ ಜೊತೆ ನಿಮ್ಮ ಉತ್ತರ ಕರ್ನಾಟಕದ ಪ್ರವಾಸ ಹೇಗಿತ್ತು...?
ಗರುಡನಗಿರಿ:1973ರಲ್ಲಿ ಭೀಕರ ಬರಗಾಲ. ಉತ್ತರ ಕರ್ನಾಟಕದ ಬಿಜಾಪುರ, ಬೆಳಗಾವಿಗೆ ಮುಖ್ಯಮಂತ್ರಿ ಅರಸು ಪ್ರವಾಸ ಕೈಗೊಂಡರು. 14 ದಿನಗಳ ಪ್ರವಾಸವದು. ಅವರೊಂದಿಗೆ ನಾವು ನಾಲ್ಕು ಜನ ಪತ್ರಕರ್ತರೂ ಹೊರಟೆವು. ಆ ನಾಲ್ವರಲ್ಲಿ ನಾನು ಅವರಿಗೆ ತೀರಾ ಆತ್ಮೀಯನಾಗಿದ್ದೆ. ಮುಂದಿನ ಕಾರಲ್ಲಿ ಅವರು, ಹಿಂದಿನ ಕಾರಲ್ಲಿ ನಾವು. ಆ ಭಾಗದಲ್ಲಿ ಭೀಕರ ಬರಗಾಲ. ನೀರಿಲ್ಲ. ರಣಗುಡುವ ಬಿಸಿಲು. ನಿಲ್ಲೋದು ಕೂಡ ಕಷ್ಟವೇ. ಅಂತಹ ಸ್ಥಿತಿಯಲ್ಲೂ ಅಲ್ಲಿನ ಜನ ಕಲ್ಲು ಹೊಡೆಯುವ ಕೂಲಿ ಕೆಲಸದಲ್ಲಿ ನಿರತರಾಗಿದ್ದರು. ಅವರನ್ನು ಕಂಡು ವಿಚಾರಿಸಲು ಅರಸು ಅವರತ್ತ ಹೋದರು. ತಕ್ಷಣ ಅವರ ಆಪ್ತ ಸಹಾಯಕ ಅರಸರಿಗೆ ಕೊಡೆ ಹಿಡಿದ. ಅರಸರಿಗೆ ಸಿಟ್ಟು ಬಂದು, ನಾವು ನಿಲ್ಲಲಿಕ್ಕೇ ಕೊಡೆ ಹಿಡಿದುಕೊಳ್ಳುವುದೆ, ಅವರು ಅದೇ ಬಿಸಿಲಲ್ಲಿ ಕೆಲಸ ಮಾಡ್ತಾಯಿಲ್ವಾ, ಅವರು ಮನುಷ್ಯರಲ್ವಾ ಎಂದು ಆತನಿಗೆ ಬಯ್ದು ಕಳಿಸಿದರು. ಕೂಲಿಕಾರರನ್ನು ಹತ್ತಿರ ಕರೆದು ಮಾತಿಗೆಳೆದರು. ಕೂಲಿ, ಕಾಳು ಕೊಟ್ಟಿಲ್ಲ ಎಂದು ಅವರು ದೂರಿದರು. ಅವರು ಕೈ ಕಟ್ಟಿ ದಯನೀಯ ಸ್ಥಿತಿಯಲ್ಲಿ ಬೇಡಿಕೊಂಡಿದ್ದು ಏನನ್ನಿಸಿತೋ, ಹಿಂದೆ ಮುಂದೆ ನೋಡದ ಅರಸು, ಡಿಸಿ ಕರೆದು, ಈ ತಕ್ಷಣವೇ ಟ್ಯಾಂಕರ್ ತರಿಸಿ ನೀರು ಕೊಡಿ, ಕೂಲಿ ಎಷ್ಟು ಬಾಕಿ ಇದೆಯೋ ಅಷ್ಟನ್ನೂ ಇವತ್ತೇ ಚುಕ್ತಾ ಮಾಡಿ ಎಂದರು. ಬಿಜಾಪುರದ ಗೆಸ್ಟ್ ಹೌಸಲ್ಲಿ ನಮ್ಮ ವಾಸ್ತವ್ಯ. ಒಂದು ದಿನ ಬೆಳಗ್ಗೆ ಐದು ಗಂಟೆಗೆ ಎದ್ದ ನಾನು ಹೊರಗೆ ಬಂದು ಸಿಗರೇಟ್ ಸೇದುತ್ತಾ ನಿಂತಿದ್ದೆ. ಅಲ್ಲಿಗೆ ಚೆಡ್ಡಿ, ಜುಬ್ಬಾ, ತಲೆಗೆ ಟರ್ಕಿ ಟವೆಲ್ ಸುತ್ತಿಕೊಂಡ ವ್ಯಕ್ತಿ ಬಂದರು. ಹತ್ತಿರ ಬಂದಾಗ ಗೊತ್ತಾಯಿತು ಅವರು ಮುಖ್ಯಮಂತ್ರಿ ಅರಸು ಎಂದು. ಬನ್ನಿ, ಇಲ್ಲೇ ಹೋಗಿಬರೋಣ ಎಂದು ಕಾರನ್ನು ಅವರೇ ಡ್ರೈವ್ ಮಾಡಿಕೊಂಡು ಕುಷ್ಠರೋಗಿಗಳ ಪುನರ್ವಸತಿ ಕೇಂದ್ರಕ್ಕೆ ಕರೆದುಕೊಂಡು ಹೋದರು. ಅವರಿಗೆ ಇವರು ಯಾರು ಎನ್ನುವುದು ಗೊತ್ತಿಲ್ಲ. ಇವರೂ ಹೇಳಿಕೊಳ್ಳಲಿಲ್ಲ. ಅವರನ್ನೆಲ್ಲ ಕರೆದು, ಊಟ-ತಿಂಡಿ ವ್ಯವಸ್ಥೆಯಲ್ಲ ಹೇಗಿದೆ ಎಂದು ಕೇಳಿದರು. ಅಲ್ಲಿದ್ದ ಒಬ್ಬರು, ಒಬ್ಬರಿಗೆ ತಿಂಗಳಿಗೆ 20ರಿಂದ 25 ರೂಪಾಯಿ ಕೊಡ್ತಿದಾರೆ, ಏನೇನೂ ಸಾಲದು, ಯಾವ ಸೌಕರ್ಯವೂ ಇಲ್ಲ ಎಂದರು. ಅಷ್ಟೆ, ಎಲ್ಲವನ್ನು ಕೇಳಿಸಿಕೊಂಡ ಅರಸು ಸೀದಾ ಗೆಸ್ಟ್ ಹೌಸಿಗೆ ಬಂದವರೆ ಅಧಿಕಾರಿಗಳನ್ನು ಕರೆದು, ಊಟ-ತಿಂಡಿಗೆ ಒಬ್ಬ ಕುಷ್ಠರೋಗಿಗೆ ಇವತ್ತಿನಿಂದ 50 ರೂಪಾಯಿ ಮಾಡಿ ಎಂದರು. ಅಧಿಕಾರಿ ಕಾನೂನಿನ ಪ್ರಕಾರ ಅದು... ಅಂದ. ‘ಬಾಯಿ ಮುಚ್ಚು, ನಾನು ಹೇಳಿದ್ದು ಮಾಡು’ ಎಂದರು.
ವಾಭಾ: ಅವರ ಹವ್ಯಾಸ, ಅಭಿರುಚಿ ಏನಿತ್ತು?
ಗರುಡನಗಿರಿ: ವೆರಿಗುಡ್ ರೀಡರ್, ತುಂಬಾ ಒಳ್ಳೆಯ ಲೈಬ್ರರಿ ಇತ್ತು. ಯಾವ ಕಡೆಗೆ ಹೋಗಲಿ, ಎಂತಹ ಊಟವೇ ಇರಲಿ ಹೊಟ್ಟೆ ತುಂಬಾ ಊಟ ಮಾಡ್ತಿದ್ರು, ಭೋಜನಪ್ರಿಯ. ಉತ್ತಮ ಅಭಿರುಚಿಯುಳ್ಳ ವ್ಯಕ್ತಿ.
ವಾಭಾ: ಅರಸು ಅವರೊಂದಿಗೆ ವಾಕ್ ಹೋಗುತ್ತಿದ್ದ ಪತ್ರಕರ್ತರು ನೀವು, ಅಲ್ಲಿ ಏನೇನೆಲ್ಲ ಮಾತನಾಡ್ತಿದ್ರಿ..?
ಗರುಡನಗಿರಿ:ನನಗೆ ಹಳ್ಳಿ ಸುತ್ತೋದು ತುಂಬಾ ಇಷ್ಟದ ಕೆಲಸ. ಅದರಲ್ಲೂ ಉತ್ತರ ಕರ್ನಾಟಕದ ಕಡೆ ಹೆಚ್ಚಾಗಿ ಓಡಾಡಿ, ಅಲ್ಲಿನ ಜನರ ಕಷ್ಟಸುಖಗಳನ್ನೆಲ್ಲ ಬರೀತಿದ್ದೆ. ಅದು ಗೊತ್ತಿದ್ದ ಅರಸು, ‘ನನಗೆ ಉತ್ತರ ಕರ್ನಾಟಕ ಅಷ್ಟಾಗಿ ಗೊತ್ತಿಲ್ಲ, ಆ ಜನರ ಕಲೆ, ಸಂಸ್ಕೃತಿ, ಊಟೋಪಚಾರ, ಕಸುಬು, ನಡೆ ನುಡಿಯನ್ನೆಲ್ಲ ಹೇಳಬೇಕು’ ಎಂದು ಹೇಳಿ ಬೆಳಗಿನ ವಾಕಿಂಗ್‌ಗೆ ಬರಲಿಕ್ಕೇಳುತಿದ್ರು. ನಾನು ಯಾರಾದರೂ ನೋಡಿದ್ರೆ ಏನು ತಿಳಕೊಳ್ಳುತ್ತಾರೆ ಅಂತ, ಜಯನಗರದಿಂದ ಖಾಸಗಿ ಕಾರಿನಲ್ಲಿ ಹೋಗ್ತಿದ್ದೆ. ವಿಧಾನಸೌಧ, ಕೆ.ಆರ್.ಸರ್ಕಲ್ ಹೀಗೆ ರೌಂಡ್ ಹಾಕ್ತಿದ್ವಿ. ತಲೆಗೊಂದು ದಪ್ಪನೆ ಟರ್ಕಿ ಟವಲ್ ಕಟ್ಟಿಕೊಳ್ತಿದ್ರು, ದೊಡ್ಡ ದೊಗಳೆ ಚೆಡ್ಡಿ ಹಾಕ್ತಿದ್ರು. ಯಾರಿಗೂ ಗೊತ್ತಾಗ್ತಿರಲಿಲ್ಲ. ವಾಕಿಂಗ್‌ನಲ್ಲಿ ನಾನೊಂದು ಸಲ, ನಿಮ್ಮದು ಭ್ರಷ್ಟ ಸರಕಾರ ಅಂತ ಕರೀತಾರಲ್ಲ ಎಂದು ಪ್ರಶ್ನಿಸಿದ್ದೆ. ಅದಕ್ಕೆ ಅವರು, ‘ಪುಣ್ಯಾತ್ಮ, ನಾನು ಭ್ರಷ್ಟ ನಿಜ. ಯಾಕೆ? ಪ್ರತಿ ತಿಂಗಳು ಹೈಕಮಾಂಡಿಗೆ ಕೋಟಿಗಟ್ಟಲೆ ಕೊಡಬೇಕಲ್ಲಪ್ಪ, ಎಲ್ಲಿಂದ ತರಲಿ, ಅದಕ್ಕಾಗಿ ನಾಲ್ಕೈದು ಜನರನ್ನು ಇಟ್ಟುಕೊಂಡಿದ್ದೇನೆ, ಅವರು ತಲುಪಿಸುತ್ತಾರೆ. ನಾನು ಅವರು ಹೇಳಿದ ಕೆಲಸ ಮಾಡಿಕೊಡುತ್ತೇನೆ’ ಎಂದರು. ಒಂದು ಸಲ, ನಿನಗೆ ಮದುವೆಯಾಗಿದೆಯಾ ಅಂದ್ರು. ಏನ್ ಸಾರ್ ಹಿಂಗಂತೀರಾ, ಎರಡು ಮಕ್ಕಳಿದಾವೆ ಅಂದೆ. ಅದಕ್ಕವರು, ನಿಮ್ಮ ಪತ್ರಕರ್ತರು ಬಂದು ಏನೇನೋ ಮಾಡಿಸ್ಕೊಂಡು ಹೋಗ್ತಾರೆ, ನೀವು ಒಂದು ಸಲಾನೂ ಏನನ್ನೂ ಕೇಳಿದ್ದೇ ಇಲ್ವಲ್ಲಪ್ಪ ಅಂದರು. ಯಾವುದೋ ಒಂದು ಬೋರ್ಡಿಗೆ ಚೇರ್ಮನ್ ಮಾಡ್ತೀನಿ ಅಂದ್ರು. ನಾನು, ನಮ್ಮೂರಿಗೆ ಅಷ್ಟು ಮಾಡಿದ್ರಲ್ಲ, ಸಾಕು ಅಂದೆ.
ವಾಭಾ: ಪತ್ರಕರ್ತರ ರೌಂಡ್ಸ್‌ನಲ್ಲಿ ನಡೆದ ಯಾವುದಾದರೂ ಘಟನೆ?
ಗರುಡನಗಿರಿ: ಒಂದು ಸಲ ವಿಧಾನಸೌಧದ ಮೆಟ್ಟಿಲು ಇಳಿದು ಬರ್ತಿದ್ದರು. ಹಳ್ಳಿಯ ಬಡ ಹೆಂಗಸು ಅರಸರತ್ತ ಬರಲು ಯತ್ನಿಸುತ್ತಿದ್ದಳು. ಪೊಲೀಸರು ಹೊಡೆದು ದೂರ ತಳ್ಳುತ್ತಿದ್ದರು. ಅದನ್ನು ನೋಡಿದ ಅರಸು, ಆ ಪೊಲೀಸಿಗೆ ಬಯ್ದು, ಆ ಹೆಂಗಸನ್ನು ಹತ್ತಿರ ಕರೆದರು. ಆಕೆ, ಗಂಡ ಕಾಯಿಲೆಗೆ ತುತ್ತಾಗಿ ಬೋರಿಂಗ್ ಆಸ್ಪತ್ರೆಯಲ್ಲಿ ಮಲಗಿದ್ದಾನೆ, ಚಿಕಿತ್ಸೆಗಾಗಿ ತಂದಿದ್ದ ಹಣ ಕಳ್ಳತನವಾಗಿದೆ, ಏನಾದ್ರು ಮಾಡಿ ಸ್ವಾಮಿ ಎಂದು ಕೈ ಮುಗಿದು ಅಂಗಲಾಚಿದಳು. ಆ ತಕ್ಷಣವೇ ಅರಸು, ಜೇಬಿನಲ್ಲಿದ್ದಷ್ಟು ಹಣವನ್ನು ತೆಗೆದು ಆಕೆಗೆ ಕೊಟ್ಟು, ಆಕೆಯ ಪತಿಗೆ ಉಚಿತ ಚಿಕಿತ್ಸೆ, ಆಕೆಗೆ ವಸತಿ, ಊಟ-ತಿಂಡಿ ಎಲ್ಲವನ್ನು ವ್ಯವಸ್ಥೆ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಇಂತಹ ಘಟನೆಯನ್ನು ನಾನು ನನ್ನ ನಲವತ್ತು ವರ್ಷಗಳ ಪತ್ರಕರ್ತ ವೃತ್ತಿಯಲ್ಲಿ, ಯಾವ ಮುಖ್ಯಮಂತ್ರಿಗಳ ಅವಧಿಯಲ್ಲೂ ಕಾಣಲಿಲ್ಲ.