ಕಸಬ್ ಗೆ "ಬಿರಿಯಾನಿ" ತಿನ್ನಿಸಿದ ವಕೀಲರಿಗೊಂದು ಪದ್ಮ ಪ್ರಶಸ್ತಿ
ಪ್ಯೂಡಲ್ ದಿನಗಳಲ್ಲಿ ತಮಗೆ ನಿಷ್ಠರಾಗಿದ್ದ ಜನರಿಗೆ ರಾಜರು ಮತ್ತು ರಾಜಮನೆತನಗಳು ಗೌರವಿಸಿ ಸಮ್ಮಾನಿಸುವುದು ಸಹಜ ವಿದ್ಯಮಾನವಾಗಿತ್ತು.ಈಗಿನ ಪ್ರಜಾಪ್ರಭುತ್ವ ಕೂಡಾ ತನ್ನ ಮಾಯಮೋಸದ ಜೋಳಿಗೆಯಲ್ಲಿ ಒಂದಿಷ್ಟು ಬಿರುದು ಬಾವಲಿಗಳನ್ನು ತುಂಬಿಟ್ಟುಕೊಂಡು ಬೆರಳೆಣಿಕೆಯ ಕೆಲವು ಪ್ರಜೆಗಳಿಗೆ ಸನ್ಮಾನ ಮಾಡುವ ಹವ್ಯಾಸವನ್ನು ಉಳಿಸಿಕೊಂಡಿದೆ.ಈ ಪ್ರಭುತ್ವಗಳು ನೀಡುವ ಸನ್ಮಾನಗಳು ಕೇವಲ ಒಂದು ಸರಳವಾದ ಆಯ್ಕೆಯ ವಿಷಯವಲ್ಲ.
ಯಾವಾಗ ಈ ಪ್ರಭುತ್ವಗಳು ಒಂದಿಷ್ಟು ಜನರನ್ನು ಸನ್ಮಾನಿಸಲು ಆಯ್ದುಕೊಳ್ಳುತ್ತದೊ ಆಗ,ಅವು ಈ ಜನರ ಆಯ್ಕೆ,ಅಭಿಪ್ರಾಯ, ನಿಲುವು, ಪೂರ್ವಾಗ್ರಹಗಳೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುತ್ತವೆ. ನಮ್ಮಲ್ಲಿ ಕೊಡಮಾಡುವ ಪದ್ಮಪ್ರಶಸ್ತಿಗಳು ಸಹ, ಬ್ರಿಟನ್‌ನ ರಾಣಿಯ ಪ್ರಶಸ್ತಿಗಳಂತೆಯೇ, ಈ ಗೌರವವನ್ನು ಕೊಡಮಾಡುವ ಜನರ ಸಾಧನೆಯನ್ನು ಪರಿಗಣಿಸಿ,ಅದರ ಕುರಿತು ಸಹಮತವನ್ನು ತೋರಿ ತನ್ನ ನಿಲುವುಗಳನ್ನು ಪ್ರಶಸ್ತಿಗಳ ಮೂಲಕ ತೋರಿಸುತ್ತವೆ. ಪದ್ಮಪ್ರಶಸ್ತಿಗಳ ಪಟ್ಟಿಯು ಎಂದಿಗೂ ಸರಿಯಾಗಿ ಇದ್ದದ್ದಿಲ್ಲ.
ಈ ಪದ್ಮ ಪ್ರಶಸ್ತಿಗಳು ಸರಕಾರಗಳು ಮಾಡಿದ-ಅಥವಾ ಮಾಡದ-ಆಯ್ಕೆಗಳನ್ನು ಪ್ರತಿಬಿಂಬಿಸುತ್ತ ಒಂದು ಬಗೆಯಲ್ಲಿ ರಾಜಕೀಯ ವ್ಯವಸ್ಥೆಯೊಂದನ್ನು ರೂಪಿಸಿಕೊಳ್ಳುತ್ತವೆ. ಈ ಬಾರಿಯೂ ಸಹಾ ಗಣತಂತ್ರ ದಿವಸದಂದು ಸುಮಾರು 83ರಷ್ಟು ಮಹಿಳೆ ಮತ್ತು ಪುರುಷರನ್ನು ಈ ಗೌರವಕ್ಕೆ ಪಾತ್ರಮಾಡಲಾಯಿತು. ಕಳೆದ ಬಾರಿಯಂತೆಯೇ ಈ ಬಾರಿಯೂ, ಅಧಿಕಾರದಲ್ಲಿರುವ ಸರಕಾರವು ಗೌರವಕ್ಕೆ ಪಾತ್ರರಾದ ವ್ಯಕ್ತಿಗಳ ಕುರಿತು ತನಗೆ ಇರುವ ಉತ್ತಮ ಅಭಿಪ್ರಾಯವನ್ನು ಈ ಮೂಲಕ ವ್ಯಕ್ತಪಡಿಸಿತು. ಆದರೆ ಈ 83 ಜನರ ಪಟ್ಟಿಯಲ್ಲಿದ್ದ ಒಂದು ಹೆಸರು ಮಾತ್ರ ವಿಶೇಷ ಪರಿಗಣನೆಗೆ ಅರ್ಹವಾಗಿದೆ. ಏಕೆಂದರೆ,ಈ ಹೆಸರು ಅನೇಕ ಸಂಗತಿಗಳನ್ನು ಬಯಲಿಗೆಳೆಯುವಷ್ಟೇ ಸುಮ್ಮನಿರಿಸುವಂತೆಯೂ ಮಾಡುತ್ತದೆ. ಉಜ್ವಲ್ ನಿಕಂರಿಗೆ ಸಾರ್ವಜನಿಕ ಸೇವೆಯ ಅಡಿಯಲ್ಲಿ ಪದ್ಮ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ನಿಕಂ ಅವರು ಮಹಾರಾಷ್ಟ್ರ ಸರಕಾರದ ವಕೀಲರಾಗಿದ್ದಾರೆ. ಅವರು ಒಬ್ಬ ನಿಜವಾದ ಸಾಮರ್ಥ್ಯವುಳ್ಳ ವಕೀಲರಾಗಿದ್ದಾರೆ ಎಂಬುದರ ಬಗ್ಗೆ ಎರಡು ಮಾತಿಲ್ಲ. ಅವರಿಗಿರುವ ಈ ಮಹತ್ವ ದೇಶದ ಅನೇಕ ವಕೀಲರಿಗೂ, ನ್ಯಾಯಾಧೀಶರಿಗೂ ಇರುವುದಕ್ಕಿಂತ ಹೆಚ್ಚಿನದೇ ಎಂಬುದನ್ನೂ ಒಪ್ಪಬೇಕಾದ್ದೇ.ಆದರೆ ಅವರು ಒಬ್ಬ ಕಾನೂನು ಪರಿಣಿತರಲ್ಲ.ಅವರು ಒಬ್ಬ ಎಂ.ಸಿ ಸೆಟಲ್ವಾಡ್ ಆಗಲೀ ಅಥವಾ ಒಬ್ಬ ಫಾಲೀ ನಾರಿಮನ್ ಆಗಲಿ ಅಲ್ಲ.
ನಿಕಂ ಒಬ್ಬ ಪೂರ್ಣ ಪ್ರಮಾಣದ ಸರಕಾರಿ ವಕೀಲ. ಕಾನೂನನ್ನು ಮುರಿದ ವ್ಯಕ್ತಿಯನ್ನು ಪ್ರಭುತ್ವದ ಪರವಾಗಿ ಬಲಿಹಾಕುವ ತಂತ್ರಗಾರಿಕೆ,ಬುದ್ಧಿವಂತಿಕೆಯುಳ್ಳ ನಿಪುಣ ವಕೀಲ. ಬಲಿಬಿದ್ದ ಮನುಷ್ಯನನ್ನು ದೂರದಿಂದ ನಿಂತು ನೋಡಿ ಸಂತಾಪ ಸೂಚಿಸುತ್ತ ಅವನಿಗಾಗಿ ಹುಸಿಮರುಕ ತೋರುವ ಸಮಾಜವೊಂದರಲ್ಲಿ ನಿಕಂರು ಆ ವ್ಯಕ್ತಿಗೆ ಶಿಕ್ಷೆ ಕೊಡಿಸುವ ಕೆಲಸ ಮಾಡುತ್ತಾರೆ. ಕಠಿಣವಾದ ಶಿಕ್ಷೆ.ಮನುಷ್ಯನನ್ನು ನೇಣಿಗೇರಿಸುವಂತಹ ಶಿಕ್ಷೆ. ಒಬ್ಬ ಸರಕಾರಿ ವಕೀಲನಾಗಿ ಅವರು ನಮ್ಮೆಲ್ಲರ ಪರವಾಗಿ ಒಬ್ಬ ತಪ್ಪಿತಸ್ಥನ ವಿರುದ್ಧ ಸೇಡು ತೀರಿಸಿಕೊಳ್ಳುವಂತೆ ನ್ಯಾಯಾಂಗಕ್ಕೆ ಗಟ್ಟಿಯಾದ ಧ್ವನಿಯಲ್ಲಿ ಮೊರೆಯಿಡುತ್ತಾರೆ. ನಿಕಂರು ಅಜ್ಮಲ್ ಕಸಬ್‌ನನ್ನ್ನು ಹಾಗೂ ಯಾಕೂಬ್ ಮೆಮನ್‌ನನ್ನೂ ನೇಣಿಗೇರಿಸುವಲ್ಲಿ ಶ್ರಮಿಸಿದ ಕಾರಣಕ್ಕಾಗಿ ಪ್ರಸಿದ್ಧರಾಗಿದ್ದಾರೆ.ಈ ಇಬ್ಬರೂ ಸಾರ್ವಜನಿಕರ ಅಭಿಪ್ರಾಯದಲ್ಲಿ ನಮ್ಮ ಪ್ರಭುತ್ವದ ವಿರುದ್ಧ ಪಿತೂರಿ ನಡೆಸಿದ್ದರು.ನಿಕಂರು ಈ ಇಬ್ಬರನ್ನೂ ತುಂಬ ಕಾಲ ನಡೆದ ಸಾರ್ವಜನಿಕ ಮುದ್ದತ್ತಿನ ನಂತರ ನೇಣುಗಂಬಕ್ಕೆ ಕಳುಹಿಸುವಲ್ಲಿ ಯಶಸ್ವಿಯಾದರು.
ನಿಕಂರು ಇತರ ಅನೇಕ ಜನರನ್ನು ಈ ದಿಕ್ಕಿನಲ್ಲಿ ಕಳುಹಿಸಿರಬಹುದು.ಆದರೆ ಈ ಇಬ್ಬರು ಅಪರಾಧಿಗಳನ್ನು ಆ ಕಡೆ ಕಳುಹಿಸಿದ್ದು ಅವರನ್ನು ಪ್ರಸಿದ್ಧರನ್ನಾಗಿ ಮಾಡಿತು.ಹಾಗೂ ಸಮಾಜದ ಅನೇಕ ಕೋಟೆಗಳಲ್ಲಿ ಅವರ ಹೆಚ್ಚುಗಾರಿಕೆಯನ್ನು ಮೇಲೆತ್ತಿತು ಹಾಗೂ ಅವರನ್ನು ಆರಾಧಿಸುವಂತೆ ಮಾಡಿತು.ಹಾಗೂ ಈ ಪ್ರೀತಿಯ ಕುರಿತೇ ನಾವು ಸ್ವಲ್ಪ ಆಲೋಚನೆಯನ್ನು ಮಾಡಬೇಕಾಗಿದೆ. ಈ ಪ್ರಸಿದ್ಧ ಹಾಗೂ ಬುದ್ಧಿವಂತ ಸರಕಾರಿ ವಕೀಲರು ಮಾರ್ಚ್ 2015 ರಂದು ಒಂದು ಪ್ರಸಿದ್ಧ ಸಂಗತಿಯನ್ನು ಸಾರ್ವಜನಿಕರ ಗಮನಕ್ಕೆ ತಂದರು ಎಂಬುದನ್ನು ನೆನಪಿಸಿಕೊಳ್ಳಲು ಇದು ಸಕಾಲ.ಜೈಪುರದಲ್ಲಿ ನಡೆದ ಭಯೋತ್ಪಾದನೆಯ ವಿರುದ್ಧದ ಸಮಾವೇಶದಲ್ಲಿ ನಿಕಂರು ಈ ಸಂಗತಿಯನ್ನು ಹೊರಗೆಡಹಿದರು. ಕಸಬ್ ಎಂದೂ ಬಿರಿಯಾನಿಯನ್ನು ಕೇಳಿರಲಿಲ್ಲ. ಮತ್ತು ಸರಕಾರದ ಕಡೆಯಿಂದ ಅವನಿಗೆ ಯಾವುದೇ ಊಟವನ್ನೂ ಸರಬರಾಜು ಮಾಡಲಾಗಿರಲಿಲ್ಲ. ನಾನು ಈ ಒಂದು ಕತೆಯನ್ನು ಹುಟ್ಟಿಸಿದ್ದೇಕೆಂದರೆ, ಕಸಬ್ ನ ಕುರಿತು ಆ ಮೊಕದ್ದಮೆಯ ಸಂದರ್ಭದಲ್ಲಿ ಒಂದು ಬಗೆಯ ಪ್ರೀತ್ಯಾದರದ ಮನೋಭಾವನೆ ರೂಪುಗೊಳ್ಳುತ್ತಿತ್ತು.ಆ ಭಾವನೆಯನ್ನು ನಾನು ಮುರಿಯಬೇಕಿತ್ತು. ಎಂದರು ಅವರು.ಕಸಬ್ ಕುಸಿದು ಕಣ್ಣೀರಿಟ್ಟಾಗ ಆತನ ಪರವಾಗಿ ಬಹಳ ಕರುಣೆಯ ಪ್ರೀತಿಯೊಂದು ಮಡುಗಟ್ಟಲು ತೊಡಗಿತ್ತು. ಆಗ ದಿನಪತ್ರಿಕೆಗಳು ನಿಕಂರ ಮನೋಲಹರಿಯಲ್ಲಿ ಬಿಂಬಿಸಿದವು. ತಕ್ಷಣವೇ ಸುದ್ದಿವಾಹಿನಿಗಳು ಕಸಬ್‌ನ ಕಣ್ಣಲ್ಲಿ ನೀರು ಎಂಬ ತಲೆಬರಹದಲ್ಲಿ ಈ ಭಾವೋನ್ಮಾದಿ ಸುದ್ದಿಯನ್ನು ಬಿತ್ತರಿಸಲು ತೊಡಗಿದವು.ಅದು ರಾಖಿ ಹಬ್ಬದ ದಿನವಾಗಿತ್ತು. ಮತ್ತು ಕಸಬ್ ಆಗ ತನ್ನ ತಂಗಿಯನ್ನು ನೆನೆಸಿಕೊಂಡು ಅಳುತ್ತಿರಬಹುದು ಎಂದು ಎಲ್ಲರೂ ಭಾವಿಸಿದ್ದರು. ಕೆಲವರಂತೂ ಅತ ಭಯೋತ್ಪಾದಕ ಹೌದೋ ಅಲ್ಲವೋ ಎಂಬ ಬಗೆಯ ಪ್ರಶ್ನೆಗಳನ್ನೂ ಕೇಳಲು ಆರಂಭಿಸಿದ್ದರು. ಹಾಗಾಗಿ ನಿಕಂರು ಬೆಳೆಯುತ್ತಿದ್ದ ಈ ಭಾವೋನ್ಮಾದವನ್ನು ಕಡಿದುಹಾಕಲು ಆಲೋಚಿಸಿದರು.ಅವರು ಭಯೋತ್ಪಾದಕನೊಬ್ಬ ಬಿರಿಯಾನಿ ಬೇಕೆಂದು ಕೇಳಿದ್ದ ಎಂಬ ಕತೆಯೊಂದನ್ನು ಹುಟ್ಟು ಹಾಕಿದರು. ಅದರಲ್ಲೂ ಮಟನ್ ಬಿರಿಯಾನಿ, ದೇವರೇ, ಎಂಥ ಭಯಾನಕ ಸಂಗತಿ!
ಬಿರಿಯಾನಿಯನ್ನು ಆತನ ಆಯ್ಕೆಯ ತಿನಿಸನ್ನಾಗಿ ಬಿಂಬಿಸಿದ್ದು ಕೇವಲ ಒಂದು ನಿರಪಾಯಕರ ವಿಷಯವಾಗಿರಲಿಲ್ಲ. ಬಿರಿಯಾನಿ ಎಂಬುದು ರಾಜಕೀಯವಾಗಿ ಬಲಿಷ್ಠ ಪದವೇ ಸರಿ.ಈ ರುಚಿಕರವಾದ ಅವಧದ ತಿನಿಸಿಗೆ ರಾಜಕೀಯ ವಾಸನೆಯನ್ನು ಮೊದಲು ಲೇಪಿಸಿದ್ದು ಅಡ್ವಾಣಿಯವರು.ಅವರು ಯಾವಾಗಲೂ ಕಾಶ್ಮೀರದ ವಿಚ್ಛಿದ್ರಕಾರಿ ಉಗ್ರರಿಗೂ ಮತ್ತು ರಾಮಭಕ್ತರಿಗೂ ನಡುವೆ ಒಂದು ಹೋಲಿಕೆಯನ್ನು ಮಾಡುವಾಗ ಈ ಬಳಕೆಯನ್ನು ಮಾಡಿದ್ದರು.ಅವರು 1993 ಅಕ್ಟೋಬರ್ ನಲ್ಲಿ-ನರಸಿಂಹರಾವ್ ಸರಕಾರವನ್ನು ಟೀಕಿಸುವಾಗ, ಶ್ರೀನಗರದ ಹಝ್ರತಾಬಾರ್ ದೇಗುಲದಲ್ಲಿ ಅಡಗಿಕೂತಿರುವ ಭಯೋತ್ಪಾದಕರಿಗೆ ಆ ಸರಕಾರವು ಬಿರಿಯಾನಿ ತಿನ್ನಿಸುತ್ತ ಕಾಲಹರಣ ಮಾಡಿ ಕೂತಿದೆ ಎಂಬ ಟೀಕೆಯನ್ನು ಮಾಡಿದ್ದರು.ಆದರೆ ಅದೇ ಸರಕಾರವೇ ಕೇವಲ ಒಂದು ಮಸೀದಿಯನ್ನು ಕೆಡವಿ ರಾಮಮಂದಿರವನ್ನು ಕಟ್ಟಲು ಬಯಸುತ್ತಿರುವ ಶ್ರದ್ಧೆಯ ರಾಮಭಕ್ತರನ್ನು ಗುರಿಯಿಟ್ಟು ಹೊಡೆಯುತ್ತಿದೆ ಎಂಬ ಆರೋಪವನ್ನೂ ಮಾಡಿದ್ದರು.ಹಾಗೆಯೇ ಈ ತುಲನೆಯೂ ಸಹ. ನಾಯಕ ಮತ್ತು ಖಳನಾಯಕರ ನಡುವೆ, ದೇಶಭಕ್ತ ಮತ್ತು ದೇಶದ್ರೊಹಿಗಳ ನಡುವಿನ ವ್ಯತ್ಯಾಸವನ್ನು ಸೂಚಿಸಲು ಈ ರೂಪಕಾತ್ಮಕ ಹೋಲಿಕೆಯನ್ನು ಬಳಸಿದ್ದು. ಅಂದಿನಿಂದಲೂ ಬಿರಿಯಾನಿಯನ್ನು ಉಣಬಡಿಸುವುದುಎಂಬ ಪ್ರಯೋಗ ಜಿಹಾದಿ ಉಗ್ರರನ್ನು ದಮನಮಾಡಲು ಅಶಕ್ತವಾದ ಸರಕಾರವನ್ನೂ ಮತ್ತು ನಿಧಾನಗತಿಯ ನ್ಯಾಯಾಂಗವನ್ನೂ ಟೀಕೆ ಮಡಲು ಒದಗಿಬರುವ ಒಂದು ರೂಪಕವಾಗಿ ಬಳಕೆಯಲ್ಲಿದೆ.
ಇದೇ ರೂಪಕವನ್ನು ಈಚೆಗೆ ಬಿ.ಕೆ.ಲೊಶಾಲಿ ಎಂಬ ನೌಕಾರಕ್ಷಣಾ ದಳದ ಅಧಿಕಾರಿಯೊಬ್ಬರು ಉಪಯೋಗಿಸಿದ್ದರು.ಅವರು ಉದ್ರೇಕದಿಂದ ಸಮ್ಮತಿ ಸೂಚಕವಾಗಿ ಚೀರುತ್ತಿದ್ದ ಪ್ರೇಕ್ಷಕರಿಗೆ ತಾವು ಹೇಗೆ ಒಂದು ಪಾಕಿಸ್ಥಾನಿ ದೋಣಿಯನ್ನು ಉಢಾಯಿಸಿದೆವೆಂದೂ ಮತ್ತು ಅವರನ್ನು ಜೀವಂತ ಸೆರೆಹಿಡಿದು ನಮ್ಮ ಜೈಲುಗಳಲ್ಲಿ ಬಿರಿಯಾನಿಯನ್ನು ತಿನ್ನಿಸುತ್ತ ಕೂರುವುದನ್ನುಹೇಗೆ ತಪ್ಪಿಸಿದೆವೆಂದೂ ಹೆಮ್ಮೆಯಿಂದ ಹೇಳುತ್ತಿದ್ದರು. ಹಾಗೆಯೇ ಯಾವಾಗ (ಪದ್ಮಶ್ರೀ)ನಿಕಂರು ಈ ಪದಪುಂಜವನ್ನು ಬಳಸಿದರೋ,ಆಗ ಅವರು ರಾಜಕೀಯ ನಾಯಕರು ತಮ್ಮ ಲಾಭಕ್ಕೆ ಬಳಸುವ ಶಕ್ತಿಯುತ ಪದವೊಂದನ್ನು ಸಾರ್ವಜನಿಕ ಚರ್ಚೆಗೆ ಮತ್ತೆ ಎಳೆದು ತಂದರು.ಆ ಸಮಯದಲ್ಲಿ ಅವರು ಸಾರ್ವಜನಿಕರು ಅಪಾರ ಗೌರವದಿಂದ ನೋಡುವ, ಅತ್ಯುತ್ತಮವಾದ ಭಾರತೀಯ ನ್ಯಾಯವ್ಯವಸ್ಥೆಗೆ ಮೋಸಮಾಡಿದರು.ಬಹುಷಃ ನಿಕಂರು ಆಗ, ರುಜುವಾದ ಸಾಕ್ಷಿಗಳು ಹಾಗೂ ಉತ್ತಮ ವಾಕ್ಪಟುತ್ವಕ್ಕಿಂತಲೂ ನ್ಯಾಯಾಧೀಶರು ಸಾರ್ವಜನಿಕ ಅಭಿಪ್ರಾಯವನ್ನು ಹೆಚ್ಚು ಪರಿಗಣಿಸಬಹುದು ಎಂಬು ಭಾವಿಸಿದ್ದಿರಬೇಕು. ಹಾಗೆಯೇ ನಿಕಂರು ನಮ್ಮ ಕಾಲದ ದೂರದರ್ಶನ ವಾಹಿನಿಗಳಿಗೆ ಬೇಕಾದ ನಾಟಕೀಯತೆ,ಪ್ರಚೋದಕ ಬೈಟ್‌ಗಳು,ಇತ್ಯಾದಿಗಳನ್ನೂ ಕರತಲಾಮಲಕ ಮಾಡಿಕೊಂಡಿದ್ದಾರೆ.ಅವರು ಈ ಸುದ್ಧಿವಾಹಿನಿಗಳ ನರಮಂಡಲವನ್ನು ಜಾಣ್ಮೆಯಿಂದ ಸಿಗಿದರು.ಅವು ನಮ್ಮಲ್ಲಿ ಭಯವನ್ನು ಉಂಟುಮಾಡಿ ಅವುಗಳ ಒಳಗೆ ನ್ಯಾಯದಾನಕ್ಕೆ ಅಗತ್ಯವೆಂದು ಕಾಣುವಂತೆಬೇಕಾದ ಸಾರ್ವಜನಿಕ ಅಭಿಪ್ರಾಯವೊಂದು ರೂಪಿತಗೊಳ್ಳುವ ಹಾಗೆ ಮಾಡಿಬಿಟ್ಟರು.
ಒಂದು ಅಗತ್ಯ ಬಗೆಯ ಸಾರ್ವಜನಿಕ ಅಭಿಪ್ರಾಯವು ರಾಷ್ಟ್ರೀಯ ಪ್ರಜ್ಞೆಯೊಳಗೆ ತೂರಿಕೊಂಡುಬಿಟ್ಟಾಗ,ಅವು ನ್ಯಾಯಕ್ಕಿಂತಲೂ ಮಿಗಿಲಾದ ಬಹುಪ್ರಭಾವಶಾಲಿ ಶಕ್ತಿಯೊಂದನ್ನು ಆವಾಹಿಸಿಕೊಂಡು ಬಿಡುತ್ತವೆ. ಅಫ್ಝಲ್ ಗುರು ವಿನ ಮೊಕದ್ದಮೆಯ ಸಮಯದಲ್ಲಿ ಸುಪ್ರೀಂ ಕೋರ್ಟ್ ಸಹ ಸಾರ್ವಜನಿಕ ಅಭಿಪ್ರಾಯಎಂಬ ಸಂಗತಿಯ ಮೇಲೆ ತನ್ನದೊಂದು ಮುದ್ರೆಯನ್ನು ಒತ್ತಿದೆ.ಆತನನ್ನು ಪಾರ್ಲಿಮೆಂಟ್ ಮೇಲೆ ದಾಳಿ ನಡೆಸಿದ ಮೊಕದ್ದಮೆಯಲ್ಲಿ ತಪ್ಪಿತಸ್ಥನೆಂದು ರುಜುವಾತಾದ ಮೇಲೆ ಗಲ್ಲಿಗೇರಿಸಲಾಯಿತು.ಆ ಸಂದರ್ಭದಲ್ಲಿ ಉಚ್ಚ ನ್ಯಾಯಾಯಾಲಯವೇ ಈ ಘಟನೆಯು ಇಡೀ ದೇಶದ, ಸಾಮಾಜಿಕ ಮನಸ್ಸಿನ ಮೇಲೆ, ಪ್ರಜ್ಞೆಯ ಮೇಲೆ ಒಂದು ಪ್ರಭಾವೀ ಮುದ್ರೆಯನ್ನು ಒತ್ತಿದೆ. ಹಾಗಾಗಿ, ಈ ತಪ್ಪಿಗೆ ಗಲ್ಲು ಶಿಕ್ಷೆಯನ್ನು ಕೊಡುವ ಮೂಲಕ ಮಾತ್ರವೇ ಹೀಗೆ ಉಂಟಾಗಿರುವ ಸಾಮಾಜಿಕ ಘಾಸಿಯನ್ನು ತೊಳೆಯಲು ಸಾಧ್ಯಎಂದು ಅಭಿಪ್ರಾಯ ಪಟ್ಟಿತ್ತು.
ಉಜ್ವಲ್ ನಿಕಂರು ಸಹ ಈ ಬಗೆಯಲ್ಲಿ ಬಹುಸಂಖ್ಯಾತರು ಹೊಂದಿರುವ ಒಂದು ಪೂರ್ವಾಗ್ರಹವನ್ನು ರೂಪಿಸಿ,ರಚಿಸಿ,ಉತ್ಪಾದಿಸುವ ಅಗತ್ಯವನ್ನು ಮನಗಂಡಂತೆ ತೋರುತ್ತದೆ. ಅವರಿಗೆ ತಮ್ಮ ಅಭಿಪ್ರಾಯವಷ್ಟೇ ಅಲ್ಲ, ಅವರು ಮಾಡುತ್ತಿರುವ ಕೆಲಸದ ಅರಿವೂ ಇತ್ತು. ಹಾಗೂ ಆ ಮನಸ್ಸು ತುಂಬ ಉದಾರವಾದಿಯಾದದ್ದೂ ಸಹ ಆಗಿದೆ.
ಉಜ್ವಲ್‌ರಿಗೆ ಪದ್ಮ ಪ್ರಶಸ್ತಿ ಬಂದಿರುವುದಕ್ಕಾಗಿ ಯಾರೂ ದುಃಖಿಗಳೂ, ವ್ಯಗ್ರರೂ ಆಗಬೇಕಿಲ್ಲ. ಆದರೆ ಅವರಿಗೆ ಈ ಸಮ್ಮಾನವನ್ನು ಮಾಡಲು ಬಯಸಿದ ಹಾಗೂ ಅವರು ಶಿಕ್ಷೆಯನ್ನು ವೈಭವೀಕರಿಸುವುದನ್ನು ಮೆಚ್ಚುವವರ ಕುರಿತು ಚಿಂತಿತರಾಗಬೇಕು. ನಮ್ಮನ್ನು ಆಳುತ್ತಿರುವ ಸರಕಾರವೆ ನಮ್ಮಿಳಗೆ ದ್ವೇಷವನ್ನು ತುಂಬುತ್ತ, ನ್ಯಾಯದ ಶ್ರೇಷ್ಠತೆಯನ್ನು ನೆಲಕ್ಕೆ ಹಾಕುತ್ತ, ನಮ್ಮ ನ್ಯಾಯಾನ್ಯಾಯದ ನಂಬಿಕೆಗಳನ್ನೆ ಕಳಪೆಗೊಳಿಸುತ್ತ ನಡೆಯುವ ಆಯ್ಕೆಯನ್ನು ಮಾಡಿಕೊಂಡಿದೆ. ದುರಂತವೆಂದರೆ,ಈ ಒಂದು ಪದ್ಮಪ್ರಶಸ್ತಿಯೆ ನಮ್ಮ ದೇಶದ ಗೌರವವನ್ನು ಕಳೆದುಹಾಕಿದೆ.