ಪ್ರಶಸ್ತಿಯ ಝಳಕಿನಲ್ಲಿ ಸನದಿ, ಶ್ರೀಮತಿ ನೇಮಿಚಂದ್ರರು

Update: 2016-03-05 18:03 GMT

ಕನ್ನಡದ ಪ್ರಮುಖ ವಿಮರ್ಶಕರಾದ ಕೀರ್ತಿನಾಥ ಕುರ್ತಕೋಟಿಯವರು ‘ಯುಗಧರ್ಮ ಮತ್ತು ಸಾಹಿತ್ಯ ದರ್ಶನ’ದಲ್ಲಿ ನುಡಿದಿರುವ ಭವಿಷ್ಯವೊಂದು ಪಂಪ ಪ್ರಶಸ್ತಿ ಪ್ರಕಟವಾಗಿರುವ ಈ ಸಂದರ್ಭದಲ್ಲಿ ನೆನಪಾಗುತ್ತಿದೆ. ‘ನಾಡು-ನುಡಿಗಳ ಅಭಿಮಾನ, ಜಾಗೃತಿ, ನಿಸರ್ಗದ ಚೆಲುವು’ ಇವೇ ಮೊದಲಾದವು ಮನಸೆಳೆದ ಕವಿಗಳ ಬಗ್ಗೆ ಬರೆಯುತ್ತ, ಕುರ್ತಕೋಟಿಯವರು, ಇದೇ ರೀತಿಯ ಕವಿಗಳ ಬಳಗವೊಂದು ಕೃಷ್ಣೆಯ ತೀರದಲ್ಲಿ ಮುಂದೆ ಬರುತ್ತಿದೆ. ಭುಜೇಂದ್ರ ಮಹಿಷವಾಡಿ, ಸನದಿ, ಶ್ರೀಕಾಂತ ಶಮನೇವಾಡಿಯಂಥವರು ಮುಂದೆ ಬರಲಿದ್ದಾರೆ ಎಂದು ಹೊಸ ಪೀಳಿಗೆಯ ಕವಿಗಳು ಮುನ್ಸೂಚನೆ ನೀಡಿದ್ದಾರೆ. ಆರೇಳು ದಶಕಗಳ ಈ ಅವಧಿಯಲ್ಲಿ ಕೃಷ್ಣೆಕಾವೇರಿಯರಲ್ಲಿ ಕನ್ನಡ ಕಾವ್ಯಗಂಗೆ ಸಮೃದ್ಧವಾಗಿ ಮೈತುಂಬಿ ಹರಿದಿದೆ. ಈ ಸಮೃದ್ಧಿಯ ಒಂದು ತೊರೆ ಈಗ ನಮ್ಮ ಕಣ್ಣಮುಂದಿದೆ. ಅವರು: ಕವಿ ಬಿ.ಎ. ಸನದಿ. ಕರ್ನಾಟಕ ಸರಕಾರ ನೀಡುವ ಪಂಪ ಪ್ರಶಸ್ತಿ ಈ ವರ್ಷ ಈ ಕವಿಯ ಬಾಗಿಲು ಬಡಿದಾಗ ‘ಉಘೇ’ ಎಂದರು ಕನ್ನಡದ ಸಮಸ್ತರು. ಬಾಬಾ ಸಾಹೇಬ ಅಹ್ಮದ್ ಸಾಹೇಬ ಸನದಿಯವರ ಮಾತೃಭಾಷೆ ಉರ್ದು, ಆದರೂ ಹುಟ್ಟಿದ್ದು ಅಚ್ಚ ಕನ್ನಡದ ನೆಲದಲ್ಲಿ. ಎಂದೇ, ಸನದಿಯವರು, ‘ಮೊದಲು ತಾಯ ಹಾಲ ಕುಡಿದು’ ಉರ್ದುವಿನಲ್ಲಿ ಉಗ್ಗಡಿಸಿರಬಹುದಾದರೂ, ಅವರು ‘ಲಲ್ಲೆಯಿಂದ ತೊದಲಿ ನುಡಿದು ಕೆಳೆಯರೊಡನೆ ಬೆಳೆದುಬಂದ’ ಭಾಷೆ ಕನ್ನಡ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಸಿಂದೊಳ್ಳಿಯಲ್ಲಿ. 1933ರ ಆಗಸ್ಟ್ 18ರಂದು. ಬಡ ಬೇಸಾಯಗಾರರ ಮನೆತನದಲ್ಲಿ. ಬೆಳಗಾವಿಯ ಲಿಂಗರಾಜಾ ಕಾಲೇಜಿನಲ್ಲಿ ಸ್ನಾತಕದವರೆಗೆ ಶಿಕ್ಷಣ. ಬೆಳಗಾವಿ ಹಾಗೂ ಮಹಾರಾಷ್ಟ್ರದ ಛೇತಕಿಹಾಳ-ಶಮನವಾಡಿ ಗಡಿಗ್ರಾಮಗಳ ಪ್ರೌಢಶಾಲೆಯಲ್ಲಿ ಶಿಕ್ಷಕ ವೃತ್ತಿ. ಈ ಮಧ್ಯೆ ಶಿವಾಜಿ ವಿಶ್ವವಿದ್ಯಾನಿಲಯದಿಂದ ಕನ್ನಡ ಮತ್ತು ಸಂಸ್ಕೃತಗಳಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು. ಮುಂದೆ ಕೇಂದ್ರ ಸರಕಾರದ ವಾರ್ತಾ ಇಲಾಖೆಯಲ್ಲಿ ಉದ್ಯೋಗ. ಕ್ಷೇತ್ರ ಪ್ರಚಾರ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾಗಲೇ ಅವರ ಸೃಜನಶೀಲ ಪ್ರತಿಭೆಯನ್ನು ಅರಿತೋ ಏನೋ ಆಕಾಶವಾಣಿ ಕೈ ಬೀಸಿ ಕರೆಯಿತು. ಪ್ರಸಾರಕರಾಗಿ ದೀರ್ಘಕಾಲ ಮುಂಬೈಯಲ್ಲಿ ಸೇವೆ. ಮುಂಬೈ ಕರ್ನಾಟಕ ಸಂಘ ಮತ್ತು ಮುಂಬೈ ವಿಶ್ವವಿದ್ಯಾನಿಲಯಗಳೊಂದಿಗೆ ಆಪ್ತಸಂಬಂಧ ಕುದುರಿ ಸನದಿಯವರ ಸೃಜನಶೀಲತೆ ಗರಿಗೆದರಿತು. ಕಾವ್ಯರಚನೆ ಮತ್ತು ಕನ್ನಡ ಚಟುವಟಿಕೆಗಳು ಪರಸ್ಪರ ಪೂರಕವಾಗಿ ನವಚೈತನ್ಯದಿಂದ ಕ್ರಿಯಾಶೀಲವಾದವು.
ಸನದಿಯವರ ಮೊದಲ ಕವನ ಸಂಕಲನ ‘ಆಶಾಕಿರಣ’ ಪ್ರಕಟವಾದದ್ದು 1957ರಲ್ಲಿ. ಅವರು ಕಾವ್ಯಕೃಷಿ ಆರಂಭಿಸಿದಾಗ ನವೋದಯ ಕಾವ್ಯ ಭರಪೂರ ಸಿರಿ ಸುಗ್ಗಿಯ ಸಂಭ್ರಮದಲ್ಲಿದ್ದು, ‘ಚಂಡಮದ್ದಳ’ಯಿಂದ(1954) ನವ್ಯ ಕಾವ್ಯದ ಉದ್ಘೋಷವಾಗಿತ್ತು. ಒಂದು ಕಡೆ ನವೋದಯದ ಶ್ರೀಮಂತ ಪರಂಪರೆಯ ಒಜ್ಜು, ಮತ್ತೊಂದು ಕಡೆ ನವ್ಯದ ಹೊಸ ಗಾಳಿ. ಸಾಹಿತ್ಯ ಚರಿತ್ರಕಾರ ರಂ.ಶ್ರೀ.ಮುಗಳಿಯವರು ಸನದಿಯವರ ಪ್ರವೇಶವನ್ನು ಪುನರ್ನವೋದಯವೆಂದು ಕರೆದರೆ, ಹಿರಿಯ ವಿಮರ್ಶಕ ಗೌರೀಶ ಕಾಯ್ಕಿಣೆಯವರು, ಪರಿಸರದ ಬಿಸಿಲುಗಾಳಿಗಳಲ್ಲಿ ಕಾವುಗೊಂಡು ಕಸುವು ಪಡೆದು ತಾನೇ ತಾನಾಗಿ ದಷ್ಟಪುಷ್ಟವಾಗಿ ಪ್ರಸನ್ನವಾಗಿ ಬೆಳೆದ ಕವಿಗಳು ಎನ್ನುತ್ತಾರೆ. ಹೀಗೆ ಸನದಿಯವರು-
ಉರುಳಿ ಹೋಗುತಿಹ ಹಳೆಯ ದಿನಗಳೇ
ನಿಮಗೆ ನಮಸ್ಕಾರ
ಹೊಸತು ಕನಸುಗಳ ತರುವ ಕ್ಷಣಗಳೇ
ನಿಮಗೂ ನಮಸ್ಕಾರ
ಎಂದು ಎರಡನ್ನೂ ಗೌರವಿಸಿ ತಮ್ಮ ಅನನ್ಯತೆ ಕಾಯ್ದುಕೊಂಡರು.
ಇಲ್ಲಿಯವರೆಗೆ ಹದಿನೆಂಟಕ್ಕೂ ಹೆಚ್ಚು ಸಂಕಲನಗಳನ್ನು ಪ್ರಕಟಿಸಿರುವ ಸನದಿಯವರ ಮೂರನೆಯ ಸಂಕಲನ ‘ತಾಜ್‌ಮಹಲ್’(1962). ಭಾವಗೀತೆಗಳ ಈ ಸಂಕಲನಕ್ಕೆ ಬರೆದಿರುವ ಮುನ್ನುಡಿಯಲ್ಲಿ ಬೇಂದ್ರೆಯವರು ಇದನ್ನು ‘ಅಖಂಡ ಪ್ರೀತಿಯ’ ಭಾವಗೀತೆಗಳ ಖಂಡಖಂಡ ಶರ್ಕರಾಪಿಂಡವಾಗಿ ರಾಶಿಗೊಂಡಿರುವ ಖಂಡ ಕಾವ್ಯವೆಂದು ಕರೆದಿರುವುದು ಆ ಕಾಲಘಟ್ಟಕ್ಕೆ ಸರಿ ಎನಿಸಬಹುದಾದರೂ, ಮುಂದೆ ಕವಿ ಭಾವಗೀತೆಯ ಲಾವಣ್ಯದಿಂದ ಮುಕ್ತನಾಗಿ ಹೊಸ ದಿಕ್ಕುಗಳತ್ತ ಕೈಚಾಚಿರುವ ಬೆಳವಣಿಗೆ ಕಾಣುತ್ತದೆ.
 ಕಾವ್ಯರಚನೆಯ ಮೂಲ ಕೇಂದ್ರಬಿಂದು ಮನುಷ್ಯ;... ಸಾಮಾಜಿಕ ಪರಿವರ್ತನೆ ಸಂಭವಿಸಬೇಕಾದರೆ ಮುಖ್ಯತ: ಮನುಷ್ಯನ ಮನಸ್ಸಿನಲ್ಲಿ ಪರಿವರ್ತನೆ ಸಂಭವಿಸಬೇಕು. ಈ ಕ್ರಿಯೆಗೆ ಆಯಾಕಾಲದ ಸಾಹಿತ್ಯ ಸಚೇತಕ ಶಕ್ತಿಯೂ ಹೌದು, ಸಂವಾಹಕ ಶಕ್ತಿಯೂ ಹೌದು ಎನ್ನುವ ಕವಿ ಸನದಿಯವರಿಗೆ ಕಾವ್ಯದ ಉದ್ದೇಶ ಮತ್ತು ಗುರಿಗಳ ಬಗ್ಗೆ ಪ್ರಜ್ಞಾಪೂರ್ವಕ ಅರಿವಿದೆ. ಎಂದೇ ಅವರದು ಜನಪರ ಕಾವ್ಯ. ಈ ಕಾಳಜಿ-
ಎಲ್ಲಿ ಹುಡುಕಲಿ ಹೇಳಿ
ಮನುಜ ಮನುಜನ ಗುರುತು
ಹಿಡಿವ ನನ್ನ ಮಾಲಕೀ
ಮುಗುಳು ನಗೆ ಛತ್ತರಿಗೆ?
-ಇಂಥ ಆತ್ಮಶೋಧದೊಂದಿಗೇ ಶುರುವಾಗುತ್ತದೆ. ಕವಿ ಮನ ಕಕ್ಕುಲಾತಿಯಿಂದ ನೆನೆಯುತ್ತದೆ:
ಈಶ್ವರ ಅಲ್ಲಾ ತೇರೆ ನಾಮ
ಸಬ್‌ಕೋ ಸನ್ಮ್ನತಿ ದೇ ಭಗವಾನ್
ಸಜ್ಜನರು ದಣಿಯದಯೆ ಹಾಡಿದರು.
ಆದರೆ, ಹಿಂದಿನಿಂದಲೇ ಗುನುಗುನಿಸಿ ಬರುತಿಹವು/ಹಮ್‌ಭೀ ದುಷ್ಮನ್ ತುಮ್‌ಭೀ ದುಷ್ಮನ್. ಎಂದೇ ಕವಿ ಕೇಳುತ್ತಾರೆ:
ಯಾತಕಯ್ಯ ನಮ್ಮ ಅಂಗಳದಿ ವಾದ?
ಕಟ್ಟಲಾಗದ ನಮ್ಮ ಕೈಗಳಗೆ ಏತಕ್ಕೊ
ಕೆಡಹಿ ನೋಡುವ ಹುಲು ವಿನೋದ!
ಜೊತೆಗೆ-ಈ ದೇಶ ನಮ್ಮದು, ಅದರ ಅರಿವು ನಮ್ಮದೆ ಹೌದು ಎನ್ನುವ ಕವಿಯಲ್ಲಿ ಹಿಮಗಿರಿಯ ಮಡಿಲಲ್ಲಿ ಹಗೆಯ ಹೊಗೆಯೆದ್ದಾಗ/ಸಹ್ಯಾದ್ರಿಯೂ ಸಿಡಿದೆದ್ದು ಹೋರಾಡೀತು ಎಂಬ ದೇಶಾಭಿಮಾನವೂ ಪುಟಿಯದೇ ಇಲ್ಲ. ಮತಾಂಧತೆ, ದೇವರು-ಧರ್ಮಗಳ ಹೆಸರಿನಲ್ಲಿ ನಡೆಯುವ ಹಿಂಸಾಚಾರದ ಅವರ ಕಾವ್ಯ ಪ್ರತಿಭಟಿಸಿದ್ದೂ ಇದೆ.


 ಸನದಿಯವರು ಕಾವ್ಯಕರ್ಮದುದ್ದಕ್ಕೂ ಪ್ರಯೋಗಶೀಲತೆಯನ್ನು ಉಳಿಸಿಕೊಂಡು ಬಂದವರು. ಹಾಗೆಂದು ಪ್ರಯೋಗದ ಸಲುವಾಗಿ ತತ್ವ-ಸತ್ತ್ವಗಳೊಂದಿಗೆ ರಾಜಿ ಮಾಡಿಕೊಂಡವರಲ್ಲ. ಸನದಿಯವರ ಪ್ರಯೋಗಶೀಲತೆ ಶಿಶು ಕಾವ್ಯ, ಹನಿಗವನಗಳ ದಿಗಂತಗಳಿಗೂ ಚಾಚಿಕೊಂಡಿದೆ. ಈ ಪ್ರಕಾರಗಳಲ್ಲೂ ಅವರದು ಗಣನೀಯ ಕೊಡುಗೆ. ‘ಶಾಂತಿಗೊಂದು ಸವಾಲು’ ಆಯ್ದ ಪ್ರಾತಿನಿಧಿಕ ಕವನಗಳ ಸಂಕಲನ. ಕವಿ ಬಾಬಾ ಸಾಹೇಬ ಅಹ್ಮದ್ ಸಾಹೇಬ ಸನದಿಯವರನ್ನು ಹಲವಾರು ಸಮ್ಮಾನ, ಪ್ರಶಸ್ತಿ, ಪುರಸ್ಕಾರಗಳು ಅರಸಿ ಬಂದಿವೆ. ಸುಮಾರು ಅರವತ್ತು ಕೃತಿಗಳನ್ನು ರಚಿಸಿರುವ ಅವರಿಗೆ ಅಭಿಮಾನಿಗಳು ‘ಎಂಬತ್ತರ ಪಯಣ’ ಅಭಿನಂದನಾ ಗ್ರಂಥ ಅರ್ಪಿಸಿದ್ದಾರೆ. ಕರ್ನಾಟಕ ವಿಶ್ವವಿದ್ಯಾನಿಲಯ ಡಾಕ್ಟರೆಟ್ ನೀಡಿ ಗೌರವಿಸಿದೆ. ಈಗ ಈ ಅಘೋಷಿತ ನಾಡೋಜನಿಗೆ ನಾಡೋಜ ಪಂಪ ಪ್ರಶಸ್ತಿ. ಎದೆ ತುಂಬಿ ಹಾಡಿದ ಕವಿ ಜಿ.ಎಸ್. ಶಿವರುದ್ರಪ್ಪನವರು, ‘ಸಂಭವ’ ಮುನ್ನುಡಿಯಲ್ಲಿ ಹೇಳಿರುವಂತೆ, ಬಾಬಾ ಸಾಹೇಬ ಅಹ್ಮದ್ ಸಾಹೇಬ ಸನದಿಯವರು, ಬದುಕಿನಲ್ಲಿ ಗಾಢವಾದ ಅನುರಕ್ತಿಯನ್ನೂ ಮಾನವೀಯ ಸಂಬಂಧಗಳ ಬಗ್ಗೆ ಅದಮ್ಯವಾದ ಶ್ರದ್ಧೆಯನ್ನೂ ಉಳಿಸಿಕೊಂಡುಬಂದು. ಸಾಹಿತ್ಯಕವಾಗಿ ಮಾತ್ರವಲ್ಲ, ಸಾಂಸ್ಕೃತಿಕವಾಗಿಯೂ ಮುಖ್ಯರಾದವರು.


ಶ್ರೀಮತಿ ನೇಮಿಚಂದ್ರ: ಪಂಪನ ಭೂಮಿಕೆಯಿಂದ ಅತ್ತಿಮಬ್ಬೆ ಭೂಮಿಕೆಗೆ ಹೋಗುವುದೆಂದರೆ, ವೀರಬೋಗಗಳಿಂದ ನೇರವಾಗಿ ತಾಯ್ತನದ ಅಂತಃಕರಣದ ಮಡಿಲನ್ನು ಹೊಕ್ಕಂತೆ. ಅತ್ತಿಮಬ್ಬೆ ಪ್ರಶಸ್ತಿಗೆ ಪಾತ್ರರಾಗಿರುವ ನೇಮಿಚಂದ್ರರ ಒಟ್ಟು ಬರವಣೆಗೆಯ ಮೂಲ ದ್ರವ್ಯವೇ ಈ ಅಂತ:ಕರಣವಾಗಿದೆ. ವೃತ್ತಿಯಿಂದ ಇಂಜಿನಿಯರ್ ಆಗಿರುವ ನೇಮಿಚಂದ್ರ ಪ್ರವೃತ್ತಿಯಿಂದ ಲೇಖಕಿ. ಸಾಹಿತ್ಯ ಅವರ ವಂಶವಾಹಿಯಲ್ಲೇ ಇದೆ. ಅವರ ತಂದೆ ಗುಂಡಣ್ಣನವರು ನವೋದಯ ಕಾಲದಲ್ಲಿ ಸಾಕಷ್ಟು ಸಾಹಿತ್ಯ ಕೃಷಿ ಮಾಡಿದವರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿದ್ದರು.
ನವ್ಯ, ಬಂಡಾಯ, ಸ್ತ್ರೀವಾದಿ ಇತ್ಯಾದಿ ಯಾವುದೇ ಹಣೆಪಟ್ಟಿ ಹಚ್ಚಲಾಗದ ನೇಮಿಚಂದ್ರ, ಬದುಕನ್ನು ಅದು ಬಂದಂತೆಯೇ ಸ್ವೀಕರಿಸಿ, ತಮ್ಮ ಸಂವೇದನೆಯನ್ನು ಜಾಗೃತವಾಗಿಟ್ಟುಕೊಂಡು ಬರೆಯುತ್ತಿರುವ ಅಪ್ಪಟ ಲೇಖಕಿ. ‘ನಮ್ಮ ಕನಸುಗಳಲ್ಲಿ ನೀವಿದ್ದೀರಿ’ (1985)ಅವರ ಮೊದಲ ಕಥಾ ಸಂಕಲನ. ಐದು ವರ್ಷಗಳ ನಂತರ ಪ್ರಕಟವಾದ ‘ಮತ್ತೆ ಬರೆದ ಕಥೆಗಳು’ ಎರಡನೆಯ ಸಂಕಲನ. ಅಂತಃಕರಣ ಕಲಕುವ ಕಥೆಗಳನ್ನುಳ್ಳ ಈ ಸಂಕಲನ ಥಟ್ಟನೆ ವಿಮರ್ಶಕರ ಗಮನ ಸೆಳೆಯಿತು ‘ಒಂದು ಶ್ಯಾಮಲ ಸಂಜೆ (1995) ಇನ್ನೊಂದು ಕಥಾ ಸಂಕಲನ. ‘ನೇಮಿಚಂದರ್ರ ಕಥೆಗಳು’ ಸಮಗ್ರ ಕಥೆಗಳ ಸಂಪುಟ.
      

ಹೆಣ್ಣು ನೇಮಿಚಂದ್ರರ ಕಥೆಗಳ ಕೇಂದ್ರವಾದರೂ ಅವರ ಕಥೆಗಳನ್ನು ಸ್ತ್ರೀವಾದಿ ಕಥೆಗಳೆಂದು ವರ್ಗೀಕರಿಸಲಾಗದು. ಬದುಕನ್ನು ನೋಡುವ ನೇಮಿಚಂದ್ರರ ದೃಷ್ಠಿ ಸಕಾರಾತ್ಮಕವಾದದ್ದು, ಆರೋಗ್ಯಪೂರ್ಣವಾದದ್ದು. ಬದುಕಿನಲ್ಲಿ ಎದುರಾಗುವ ಪರಿಸ್ಥಿತಿಯ ಸಕಲ ಸಾಧ್ಯತೆಗಳನ್ನೂ ಸಂಯಮದಿಂದ ಪರಾಮರ್ಶಿಸುವುದು, ಹೊಸ ಅರಿವಿನತ್ತ ಮುಖಮಾಡುವುದು ನೇಮಿಚಂದ್ರರ ಕಥೆಗಳ ಮುಖ್ಯ ಗುಣ. ಅವರ ಕಥಾ ನಾಯಕಿಯರು ಆಧುನಿಕ ತಿಳಿವಳಿಕೆ ಮತ್ತು ಪ್ರಬುಧ್ಧ ಜೀವನ ದೃಷ್ಟಿಯುಳ್ಳ ಪಾತ್ರಗಳು. ಸಮಾಜ ಹೇರಿರಬಹುದಾದ ಸ್ತ್ರೀಬದ್ಧತೆ, ಬಂಧನಗಳಿಂದ ಬಿಡಿಸಿಕೊಂಡು ಹೊಸ ಬದುಕನ್ನು ಕಾಣಲು ಹಾತೊರೆಯುವ ಪಾತ್ರಗಳು. ಎಂದೇ ಅವರ ಕಥೆಗಳಲ್ಲಿ ಸಾಮಾಜಿಕ ಪ್ರಜ್ಞೆಯಂತೆಯೇ ಹೆಣ್ತನದ ಪ್ರಜ್ಞೆಯೂ ಹೆಚ್ಚು ಸುಸಂಗತವೂ ಪ್ರಸ್ತುತವೂ ಆಗುತ್ತದೆ. ಸಾಮಾನ್ಯವಾಗಿ ನಮ್ಮ ಕಥೆಗಾರ್ತಿಯರ ಸ್ತ್ರೀಕೇಂದ್ರಿತ ಕಥೆಗಳಲ್ಲಿ ಅಥವಾ ಸ್ತ್ರೀವಿಮೋಚನಾ ಕಥೆಗಳಲ್ಲಿ ಕಂಡುಬರುವಂಥ ಪುರುಷರ ಬಗೆಗಿನ ಪೂರ್ವಾಗ್ರಹಗಳು ನೇಮಿಚಂದ್ರರ ಕಥೆಗಳಲ್ಲಿ ಕಾಣುವುದಿಲ್ಲ ಎನ್ನವುದು ಅವರ ಕಥಾ ಸಾಹಿತ್ಯದ ಇನ್ನೊಂದು ವಿಶೇಷ. ಪುರುಷ ಪ್ರಧಾನ ಸಮಾಜದಲ್ಲಿನ ಗಂಡಿಸಿನ ದರ್ಪ, ದಬ್ಬಾಳಿಕೆ, ಮೇಲುಗೈತನಗಳ ಬಗ್ಗೆ ಬರವಣಿಗೆಯಲ್ಲಿ ಅಸಮಾಧಾನವಿದ್ದರೂ ಅದು ಆಕ್ರೋಶವಾಗುವುದಿಲ್ಲ. ಈ ನಿಟ್ಟಿನಲ್ಲಿ ಅವರ ಪ್ರಬುದ್ಧ ಜೀವನ ದೃಷ್ಟಿ ಮೆಚ್ಚುವಂಥಾದ್ದು. ನೇಮಿಚಂದ್ರರ ಬರವಣಿಗೆಯ ಆಸ್ಥೆ ಸಣ್ಣ ಕಥೆಗಷ್ಟೆ ಸೀಮಿತವಾದುದಲ್ಲ. ಅವರ ಸೃಜನಶೀಲ ಪ್ರತಿಭೆ, ಜೀವನ ಚರಿತ್ರೆ, ವಿಜ್ಞಾನ, ಪ್ರವಾಸ ಸಾಹಿತ್ಯ ಮೊದಲಾದ ಪ್ರಕಾರಗಳಲ್ಲೂ ಸೃಜನಶೀಲವಾಗಿರುವುದನ್ನು ನಾವು ಕಾಣುತ್ತೇವೆ. ಬಾಲ್ಯದಲ್ಲೇ ಓದಿದ ‘ಮೇರಿಕ್ಯೂರಿ’ ಸಣ್ಣ ಪುಸ್ತಿಕೆ ಗಾಢ ಪ್ರಭಾವ ಬೀರಿದೆ ಎನ್ನುವುದು ಅವರದೇ ಮಾತು.ಅವರ ಸೃಜನಶೀಲ ಪ್ರತಿಭೆಯನ್ನು ಬೆಳೆಸಿದ ಈ ಪ್ರಭಾವ ಮುಂದೆ ‘ಬೆಳಕಿನೊಂದು ಕಿರಣ’ ಜೀವನ ಚರಿತ್ರೆ ರಚನೆಗೂ ಪ್ರೇರಣೆ ಒದಗಿಸಿತು. ಅವರ ಇನ್ನೊಂದು ಗಮನಾರ್ಹ ಜೀವನ ಚರಿತ್ರೆ ‘ನೋವಿಗದ್ದಿದ ಕುಂಚ’. ಪ್ರಖ್ಯಾತ ವರ್ಣಚಿತ್ರ ಕಲಾವಿದ ವ್ಯಾನ್‌ಗಾಗ್‌ನ ಬದುಕು ಮತ್ತು ಕಲಾ ಸಂವೇದನೆಗಳನ್ನು ಚಿತ್ರಿಸುವ ಈ ರಚನೆ ಕನ್ನಡದ ಅತ್ಯುತ್ತಮ ಜೀವನ ಚಿತ್ರಗಳ ಸಾಲಿನಲ್ಲಿ ನಿಲ್ಲುವಂಥ ಕೃತಿ. ‘ಸಾಹಿತ್ಯ ಮತ್ತು ವಿಜ್ಞಾನ’, ‘ಇಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್’ ಉತ್ತಮ ವೈಜ್ಞಾನಿಕ ಕೃತಿಗಳು. ಪ್ರವಾಸ ನೇಮಿಚಂದ್ರ ಅವರ ತೀವ್ರ ಆಸಕ್ತಿಗಳಲ್ಲೊಂದು. ‘ಒಂದು ಕನಸಿನ ಪಯಣ’, ‘ಪೆರುವಿನ ಪವಿತ್ರ ಕಣಿವೆಯಲಿ’್ಲ, ಅವರ ಮುಖ್ಯ ಪ್ರವಾಸ ಕಥನಗಳು. ‘ಮಹಿಳಾ ಅಧ್ಯಯನ’ ವಿಮರ್ಶಾ ಗ್ರಂಥ. ‘ಬೆಳಗೆರೆ ಜಾನಕಮ್ಮ’ ಅವರ ಸಂಪಾದಿತ ಕೃತಿ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಇಂದಿರಾತನಯ ಪ್ರಶಸ್ತಿ, ಸಂದೇಶ ಪ್ರಶಸ್ತಿ, ರತ್ನಮ್ಮ ಹೆಗ್ಗಡೆ ಪ್ರಶಸ್ತಿ-ಹೀಗೆ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ನೇಮಿಚಂದ್ರರಿಗೆ ಈಗ ಕರ್ನಾಟಕ ಸರಕಾರದ ಅತ್ತಿಮಬ್ಬೆ ಪ್ರಶಸ್ತಿಯ ಹೆಗ್ಗಳಿಕೆ. ಭರತ ವಾಕ್ಯ: ಈ ಇಬ್ಬರು ಸಾಹಿತಿ ಮಿತ್ರರಿಗೂ ನೇಸರಾಭಿನಂದನೆ. ಅಭಿನಂದನೆಗೆ ಸನದಿಯವರು ನುಡಿದ ಮಾತೊಂದು ಇಲ್ಲಿ ದಾಖಲಾರ್ಹವಾದುದು:
ಮನುಷ್ಯ ಕುಲಂ ತಾನೊಂದೆ ವಲಂ -ಎಂದು ಹಳೆಗನ್ನಡದಲ್ಲೂ ಅರ್ಥವಾಗು ವಂತೆ ಪಂಪ ಹೇಳಿರುವ ಮಾತನ್ನು ಬರಹಗಾರರಾದ ನಾವೆಲ್ಲ ಸರಿಯಾಗಿ ಅರ್ಥೈಸಿಕೊಳ್ಳಬೇಕಾಗಿದೆ. ಬರಹಗಾರರಷ್ಟೆ ಏಕೆ, ಈ ದೇಶದ ಸಮಸ್ತ ಪ್ರಜೆಗಳಿಗೂ ಅನ್ವಯಿಸತಕ್ಕ ಚಿನ್ನದಂಥ ಮಾತಿದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News