ಜೆಎನ್‌ಯು ವಿವಾದ ಮತ್ತು ಸಂಘ ಪರಿವಾರದ ಅಸಲಿ ಕಾರ್ಯಸೂಚಿ

Update: 2016-03-11 17:25 GMT

 ಭಾಗ 2

ಅಫ್ಝಲ್ ಗುರುವನ್ನು ಗಲ್ಲಿಗೇರಿಸಿದುದು ಅನ್ಯಾಯ ಎಂದವರು ಕೇವಲ ಕಾಶ್ಮೀರಿಗಳು ಮತ್ತು ಜೆಎನ್‌ಯು ವಿದ್ಯಾರ್ಥಿಗಳಷ್ಟೆ ಅಲ್ಲ, ದೇಶದ ಹಲವಾರು ಖ್ಯಾತ ಲೇಖಕರು, ಚಿಂತಕರು, ಬುದ್ಧಿಜೀವಿಗಳು ಕೂಡ ಅಂದೇ ಇದನ್ನು ಹೇಳಿದ್ದಾರೆ. ಭಾರತದ ಸಂಸತ್ ಮೇಲಿನ ದಾಳಿಗೂ 30ರ ದಶಕದ ಜರ್ಮನ್ ಸಂಸತ್ ಮೇಲಿನ ದಾಳಿಗೂ ಸಾಮ್ಯಗಳಿಲ್ಲದಿಲ್ಲ ಎಂಬ ವಾದವೂ ಇದೆ. ಅದೇನೇ ಇರಲಿ. ಭಾರತದ ಸರ್ವೋಚ್ಚ ನ್ಯಾಯಾಲಯ ಅಫ್ಝಲ್ ಗುರು ದೋಷಿಯೆಂದು ತೀರ್ಮಾನಿಸಿದಾಗ ಆತನ ಪತ್ನಿ ತಬಸ್ಸುಮ್ ದಯಾಭಿಕ್ಷೆ ಕೋರಿ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಿದ್ದರೂ ಅದು ತಿರಸ್ಕೃತವಾಯಿತು. ಅರ್ಜಿಯನ್ನು ತಿರಸ್ಕರಿಸಿದ ವಿಷಯವನ್ನು ಆಕೆಗೆ ಸರಿಯಾದ ಸಮಯದಲ್ಲಿ ತಿಳಿಸದಿದ್ದ ಕಾರಣ ಅಫ್ಝಲ್‌ಗೆ ಭಾರತದ ನ್ಯಾಯಾಂಗ ವ್ಯವಸ್ಥೆಯಡಿ ಲಭ್ಯವಿರುವ ಪುನರ್‌ಪರಿಶೀಲನೆಯ ಅವಕಾಶವನ್ನು ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ.

ಅಫ್ಝಲ್‌ನನ್ನು ಗಲ್ಲಿಗೇರಿಸುವಾಗಲೂ ಇಂತಹದೇ ಘಟನೆ ನಡೆದಿದೆ. ಸರಕಾರ ಅಫ್ಝಲ್‌ನ ಕುಟುಂಬಕ್ಕಾಗಲಿ ಲಾಯರುಗಳಿಗಾಗಲಿ ಸೂಕ್ತ ಸಮಯದಲ್ಲಿ ಮಾಹಿತಿ ನೀಡದೆ ಅವಸರವಸರವಾಗಿ ಆತನನ್ನು ಗಲ್ಲಿಗೇರಿಸಿದೆ. ವ್ಯಕ್ತಿಯೋರ್ವನನ್ನು ಈ ರೀತಿ ಗುಟ್ಟಾಗಿ ನೇಣಿಗೇರಿಸುವುದು ನಿಯಮಬಾಹಿರವಾಗಿದೆ ಮತ್ತು ಸರ್ವೋಚ್ಚ ನ್ಯಾಯಾಲಯ ವಿಧಿಸಿರುವ ಕಾನೂನಿನ ಉಲ್ಲಂಘನೆಯೂ ಆಗಿದೆ. ಇದಕ್ಕೆ ಆಳುವ ಸರಕಾರಗಳು ಕದನಶೀಲ ದೇಶಭಕ್ತಿಯ ಭಾವನೆಗಳಿಗೆ ಮಣಿಯುವುದು ಒಂದು ಕಾರಣವಾದರೆ ಮತ್ತೊಂದು ಕಾರಣ ಮತಗಟ್ಟೆಯ ರಾಜಕಾರಣ. ಸ್ವತಃ ಒಳ್ಳೆಯ ವಕೀಲರನ್ನು ಇಟ್ಟುಕೊಳ್ಳುವಷ್ಟು ದುಡ್ಡು ಬಡಪಾಯಿ ಅಫ್ಝಲ್ ಬಳಿ ಇರಲಿಲ್ಲ. ಹಾಗಾಗಿ ಆತ ಸರಕಾರ ಮತ್ತು ನ್ಯಾಯಾಲಯದಿಂದ ಕಾನೂನಿನ ನೆರವು ಯಾಚಿಸಬೇಕಾಯಿತು. ಆಗ ಸೀಮಾ ಗುಲಾಟಿ ಮತ್ತು ನೀರಜ್ ಬನ್ಸಲ್ ಎಂಬಿಬ್ಬರು ವಕೀಲರನ್ನು ನ್ಯಾಯಾಲಯವೆ ನೇಮಿಸಿತು. ಈ ವಿಷಯಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯದ 1956ರ ತೀರ್ಪು (Hansraj and Ors vs State, AIR, 1956, p. 641 ) ಹೀಗೆ ಹೇಳುತ್ತದೆ:

ಪ್ರತಿಯೊಬ್ಬ ಆರೋಪಿಗೂ ತನ್ನ ಆಯ್ಕೆಯ ವಕೀಲರ ಮೂಲಕ ತನ್ನ ರಕ್ಷಣೆ ಮಾಡಿಕೊಳ್ಳುವ ಹಕ್ಕು ಇದೆ; ಈ ಹಕ್ಕನ್ನು ಆತನಿಂದ ಕಸಿದುಕೊಳ್ಳಲಾಗುವುದಿಲ್ಲ. ಇಲ್ಲಿ ಅಫ್ಝಲ್‌ಗೆ ತನ್ನ ಆಯ್ಕೆಯ ವಕೀಲರು ಸಿಕ್ಕಿಲ್ಲ. ವಿಚಾರಣೆಯ ಆರಂಭಿಕ ಹಂತದಲ್ಲೆ ಸೀಮಾ ಗುಲಾಟಿ, ಮೊದಲ ನೋಟಕ್ಕೆ ಸರಕಾರಿ ವಕೀಲರ ಬಳಿ ಆರೋಪ ಹೊರಿಸಲು ಬೇಕಾದ ಪುರಾವೆಗಳಿವೆ ಎಂದು ಒಪ್ಪಿಕೊಂಡರು. ಅಷ್ಟು ಮಾತ್ರವಲ್ಲ, ಸರಕಾರಿ ವಕೀಲರು ಹಾಜರುಪಡಿಸಿದ ಎಲ್ಲಾ ನಿರ್ಣಾಯಕ ದಾಖಲೆಪತ್ರಗಳು ಮತ್ತು ವಶಪಡಿಸಿಕೊಂಡ ವಸ್ತುಗಳಿಗೆ ಪುರಾವೆ ಒದಗಿಸುವಂತೆ ಕೇಳುವ ಬದಲು ಅವೆಲ್ಲವನ್ನೂ ಸೇರಿಸಿಕೊಳ್ಳಲು ಅನುಮತಿ ನೀಡಿದರು. ತರುವಾಯ ಇವೆಲ್ಲವುಗಳ ಆಧಾರದ ಮೇಲೆ ಅಫ್ಝಲ್‌ನನ್ನು ದೋಷಿಯೆಂದು ತೀರ್ಮಾನಿಸಲಾಯಿತು. ವಿಚಾರಣೆಯ ಮಧ್ಯದಲ್ಲಿ ಸೀಮಾ ಗುಲಾಟಿ ಬಿಟ್ಟುಹೋದಾಗ ನ್ಯಾಯಾಲಯ ಅವರ ಸ್ಥಾನಕ್ಕೆ ಅವರ ಜೂನಿಯರ್ ನೀರಜ್‌ರನ್ನು ನೇಮಿಸಿತು.

ತನಗೆ ಈ ವಕೀಲರ ಮೇಲೆ ವಿಶ್ವಾಸವಿಲ್ಲವೆಂದು ಅಫ್ಝಲ್ ಹಲವಾರು ಬಾರಿ ನ್ಯಾಯಾಲಯಕ್ಕೆ ತಿಳಿಸಿದನಾದರೂ ಆತನ ಕೋರಿಕೆಯನ್ನು ಕಡೆಗಣಿಸಲಾಯಿತು. ಸರಕಾರದ ವಾದಗಳನ್ನು ಸತ್ಯಾಂಶ ಅಥವಾ ಕಾನೂನಿನ ಆಧಾರದ ಮೇರೆಗೆ ವಿರೋಧಿಸುವ ವಿಚಾರದಲ್ಲಿ ನೀರಜ್ ಬನ್ಸಲ್ ವತಿಯಿಂದ ಹೆಚ್ಚುಕಮ್ಮಿ ಯಾವುದೇ ಪ್ರಯತ್ನ ಆಗದಿರುವುದು ಬಹಳ ಸ್ಪಷ್ಟವಿದೆ. ಕಾರ್ಯಸಮರ್ಥ ವಕೀಲರನ್ನು ಪಡೆಯುವ ಹಕ್ಕಿನ ಮಹತ್ವದ ಬಗ್ಗೆ ಸರ್ವೋಚ್ಚ ನ್ಯಾಯಾಲಯ ತನ್ನ 1978ರ ಒಂದು ತೀರ್ಪಿನಲ್ಲಿ ಜಟಿಲ ಕಾರ್ಯವಿಧಾನಗಳು, ಕಾನೂನಿನ ವಾದಮಂಡನೆ ಮತ್ತು ಪುರಾವೆಗಳ ವಿಮರ್ಶಾತ್ಮಕ ಪರಿಶೀಲನೆಗಳನ್ನು ಹೊಂದಿರುವ ನ್ಯಾಯಾಂಗ ವೃತ್ತಿಪರ ತಜ್ಞತೆಯನ್ನು ನೆಚ್ಚಿಕೊಂಡಿರುತ್ತದೆ. ಒಂದು ಪಕ್ಷದ ಬಳಿ ಅಂತಹ ಬೆಂಬಲ ನೀಡುವ ಕೌಶಲ ಇಲ್ಲದಿದ್ದಾಗ ಸಮಾನ ನ್ಯಾಯ ಒದಗಿಸುವಲ್ಲಿ ವೈಫಲ್ಯಗಳಾಗುವ ಸಾಧ್ಯತೆಗಳಿವೆ ಎಂದು ಹೇಳಿದೆ ( Madhav Hayawadanrao Hoskot vs State of Maharashtra, AIR 1978,SC 1548, para 3). ಇದನ್ನು ಅಫ್ಝಲ್ ಪ್ರಕರಣಕ್ಕೆ ಅನ್ವಯಿಸಿದಾಗ ಅಲ್ಲಿ ಸಮಾನ ನ್ಯಾಯದ ವೈಪಲ್ಯವನ್ನು ಕಾಣಬಹುದಾಗಿದೆ.

ನಾನು ಕೇವಲ ಕಾಶ್ಮೀರಿಗಳಿಗಷ್ಟೆ ಅಫ್ಝಲ್ ಅಲ್ಲ; ಭಾರತೀಯರಿಗೂ ನಾನು ಅಫ್ಝಲ್. ಆದರೂ ಅವರಿಬ್ಬರೂ ನನ್ನನ್ನು ತೀರಾ ವಿರುದ್ಧವಾಗಿ ಗ್ರಹಿಸಿಕೊಂಡಿದ್ದಾರೆ ಎಂದು ಅಫ್ಝಲ್ ಹೇಳಿದ್ದ. ದಿಲ್ಲಿಯಲ್ಲಿ ನೆಲಸಿರುವ ಕಾಶ್ಮೀರಿ ಮುಸ್ಲಿಮರ ಪಾಡು ಹೇಗಿದೆಯೆಂದರೆ ಅವರ ಮೇಲೆ ಯಾವ ಕ್ಷಣದಲ್ಲೂ ದಾಳಿ ನಡೆಯಬಹುದು; ದೌರ್ಜನ್ಯಗಳಾಗಬಹುದು; ಅವರು ಯಾವಾಗ ಜೈಲಿನ ಕಂಬಿ ಎಣಿಸಬೇಕಾಗಬಹುದೆಂದೂ ಹೇಳಬರುವುದಿಲ್ಲ.
ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಮರಣದಂಡನೆಯ ಶಿಕ್ಷೆ ಅಷ್ಟೊಂದು ಪರಿಣಾಮಕಾರಿಯಲ್ಲವೆಂಬುದು ಅನೇಕ ತಜ್ಞರ ಅಭಿಪ್ರಾಯವಾಗಿದೆ. ಸರಕಾರದ ವಿರುದ್ಧ ಸಮರ ಸಾರಿ ಅದನ್ನು ಉರುಳಿಸಲೆತ್ನಿಸಿದ ಆರೋಪಗಳಿರುವ ಸಂದರ್ಭದಲ್ಲಿ ಮೂಲತಃ ಅದೊಂದು ರಾಜಕೀಯ ವಿಚಾರಣೆ ಆಗುತ್ತದೆ. ಅಂತಹ ಪ್ರಕರಣಗಳಲ್ಲಿ ನ್ಯಾಯದಾನದ ಮೇಲೆ ಹೆಚ್ಚು ಪ್ರಭಾವ ಬೀರುವುದು ಬಹುಸಂಖ್ಯಾತರ ರಾಜಕೀಯ ಲೆಕ್ಕಾಚಾರಗಳು. ಅವು ಪ್ರಜಾತಾಂತ್ರಿಕ ವೌಲ್ಯಗಳ ಹೆಸರಿನಲ್ಲಿರುತ್ತವೆ ಅಷ್ಟೆ. ಅಫ್ಝಲ್ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಜನರ ಸಮಷ್ಟಿ ಅಂತಃಸಾಕ್ಷಿಯನ್ನು ತೃಪ್ತಿಪಡಿಸುವುದಕ್ಕೋಸ್ಕರ ಒಂದು ಪ್ರಾಣಬಲಿ ಕೊಡಬೇಕೆಂದು ಹೇಳಿರುವುದು ಇದನ್ನು ದೃಢಪಡಿಸುತ್ತದೆ. ಮರಣದಂಡನೆ ಎಂಬುದು ರಾಷ್ಟ್ರದ ಶಕ್ತಿ ಪ್ರದರ್ಶನ ಎಂಬಂತಾಗಿದೆ. ಇಲ್ಲಿ ಭಾರತದ ಸಮಗ್ರತೆ ಮತ್ತು ಸಾರ್ವಭೌಮತೆಗೆ ಅಪಾಯಕಾರಿಯಾದ ಉಗ್ರರನ್ನು ಗುರುತಿಸುವ ಪಾತ್ರವನ್ನು ನ್ಯಾಯಾಂಗ ವ್ಯವಸ್ಥೆ ಮತ್ತು ಮಾಧ್ಯಮಗಳು ವಹಿಸಿಕೊಂಡಿವೆ.

ಪಾಕಿಸ್ತಾನದ ವಿರುದ್ಧ ನಡೆಸಿದ ಆಪರೇಷನ್ ಪರಾಕ್ರಮ ಸೀಮಿತ ಯಶಸ್ಸು ಕಂಡ ನಂತರದ ಸಂಸತ್ ದಾಳಿಯ ಬಳಿಕ ರಾಷ್ಟ್ರಕ್ಕೆ ತನ್ನನ್ನು ತನ್ನ ವೈರಿಗಳಿಂದ ರಕ್ಷಿಸಿಕೊಳ್ಳಲು ಒಂದು ಬಲಿಯ ಅಗತ್ಯವಿತ್ತು. ಆಗ ಮಾಧ್ಯಮಗಳು, ಸೈನ್ಯ, ಗುಪ್ತಚರ ಇಲಾಖೆ ಮತ್ತು ರಾಜಕಾರಣಿಗಳೆಲ್ಲ ಅಫ್ಝಲ್ ಗುರುವಾದರೆ ಹೇಳಿಮಾಡಿಸಿದಂತಿರುವ ಶತ್ರು ಎಂಬ ಒಮ್ಮತಕ್ಕೆ ಬಂದರು. ಏಕೆಂದರೆ ಅವನೊಬ್ಬ ಕಾಶ್ಮೀರಿ ಮುಸ್ಲಿಮನಾಗಿದ್ದ; ಉಗ್ರಗಾಮಿಯಾಗಿ ವಿಫಲನಾದೆನೆಂದು ತಪ್ಪೊಪ್ಪಿಕೊಂಡಿದ್ದ; ಭದ್ರತಾಸಂಸ್ಥೆಗಳ ಮಾಹಿತಿದಾರನಾಗಿ ಕೆಲಸ ಮಾಡಲು ನಿರಾಕರಿಸಿದ್ದ; ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಕುಟುಂಬವನ್ನು ಸಲಹಲು ಪ್ರಯತ್ನಿಸುತ್ತಿದ್ದ; ಓರ್ವ ಒಂಟಿ ಜೀವಿಯಾಗಿದ್ದ ಅಫ್ಝಲ್ ವಸ್ತುತಃ ನಗಣ್ಯ ವ್ಯಕ್ತಿಯಾಗಿದ್ದ. ಆದರೆ ನ್ಯಾಯಾಲಯ ತನ್ನದೇ ನಿಯಮಗಳನ್ನು ಬದಿಗೊತ್ತಿ ಸಾಂದರ್ಭಿಕ ಪುರಾವೆಗಳ ಆಧಾರದಲ್ಲಿ ಆತನನ್ನು ದೋಷಿ ಎಂದು ತೀರ್ಮಾನಿಸಿತು. ಬಲಿ ಆಚರಣೆಗಳ ಪ್ರಾಮುಖ್ಯತೆಯನ್ನು ಗುರುತಿಸಿಯೊ ಎಂಬಂತೆ ಆತನನ್ನು ದೀಪಾವಳಿ ದಿನದಂದು ಗಲ್ಲಿಗೇರಿಸಬೇಕೆಂದು ನಿರ್ಧರಿಸಲಾಯಿತು.

ಉತ್ತರ ಭಾರತದ ಜನ ಅದೇ ದಿನದಂದು ರಾವಣನ ಪ್ರತಿಕೃತಿಯನ್ನು ದಹಿಸುವ ಮೂಲಕ ರಾವಣನ ವಿರುದ್ಧ ರಾಮನ ಗೆಲವಿನ ಉತ್ಸವಾಚರಣೆ ನಡೆಸುವುದನ್ನು ಗಮನಿಸಬೇಕು. ಈ ತೀರ್ಪನ್ನು ತಡೆಹಿಡಿಯುವಂತೆ ಅರ್ಜಿ ಸಲ್ಲಿಸಿದಾಗ ಅದನ್ನು ಪ್ರಶ್ನಿಸಿದ ಆರೆಸ್ಸೆಸ್ ಸೈದ್ಧಾಂತಿಕನಾದ ಸ್ವಪನ್ ದಾಸ್‌ಗುಪ್ತ, ಇದು ಭಾರತೀಯರು ಕೆಡುಕಿನ ವಿರುದ್ಧ ಒಳಿತಿನ ಗೆಲುವನ್ನು ಆಚರಿಸುವ ಸಮಯವಾಗಿದೆ.... ನಮ್ಮ ಧರ್ಮಪ್ರಜ್ಞೆಯನ್ನು ಇಲ್ಲವಾಗಿಸುವ ಉದ್ದೇಶದ ಈ ಅಹಿತಕರ ಕೋರಿಕೆ ಇಂದು ದೇಶದ ಮುಂದೆ ಬಂದಿರುವುದು ಒಂದು ವ್ಯಂಗ್ಯವೇ ಸರಿ ಎಂದು ಟೀಕಿಸಿದರು. ಹೀಗೆ ಧರ್ಮವನ್ನು ಎತ್ತಿಹಿಡಿಯುವವರು ಮತ್ತು ಧರ್ಮ ವಿರೋಧಿಗಳು ಎನ್ನಲಾದವರ ಮಧ್ಯೆ ಈಗಾಗಲೇ ಅಡ್ಡಗೆರೆಯೊಂದನ್ನು ಎಳೆಯಲಾಗಿದೆ. ಪಾಕಿಸ್ತಾನದ ಪ್ರಭುತ್ವ ಕಾಶ್ಮೀರದಲ್ಲಿ ಪರೋಕ್ಷ ಯುದ್ಧ ನಡೆಸುತ್ತಿದೆ ಎಂದು ಭಾವಿಸುವ ಭಾರತದ ಪ್ರಭುತ್ವ ಕಾಶ್ಮೀರದ ಸ್ವಾಯತ್ತತೆಯ ಚಳವಳಿಗೆ ಜನಬೆಂಬಲ ಇರುವುದನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ.

ಬದಲು ಆ ಚಳವಳಿಯನ್ನು ದಮನಿಸುವುದಕ್ಕಾಗಿ 25 ವರ್ಷಗಳಿಂದ ಸುಮಾರು 5 ಲಕ್ಷ ಸೈನಿಕರನ್ನು ನಿಯೋಜಿಸಲಾಗಿದೆ. ಆದರೆ ಸ್ವಾತಂತ್ರ್ಯಕ್ಕಾಗಿರುವ ಜನಹೋರಾಟಗಳ ಆಳದಲ್ಲಿ ಒಂದು ನೈತಿಕಪ್ರಜ್ಞೆ ಇದೆ. ಅಲ್ಲಿ ಸ್ವಾತಂತ್ರ್ಯಕ್ಕಾಗಿ ಆತ್ಮ ಸಮರ್ಪಣೆ ಮಾಡಿಕೊಳ್ಳುವ ಒಂದು ಗಟ್ಟಿಮುಟ್ಟಾದ ಸಂಪ್ರದಾಯವಿದೆ. ನೇಣುಕಂಬಕ್ಕೇರಿದ ವಿಫಲ ಸ್ವಾತಂತ್ರ್ಯ ಹೋರಾಟಗಾರ ಅಫ್ಝಲ್ ಗುರು ಇದೀಗ ಹುತಾತ್ಮನಾಗಿ ಮರಳಿದ್ದಾನೆ. ನಾವೀಗ ಅವನ ಹುತಾತ್ಮತೆಯ ಕಥಾಸುರುಳಿ ಬಿಚ್ಚಿಕೊಳ್ಳುತ್ತಿರುವುದನ್ನು ನೋಡುತ್ತಿದ್ದೇವೆ. ಅಲ್ಲಿಂದಲೆ ಹುಟ್ಟಿದೆ ‘ಎಷ್ಟೆ ಅಫ್ಝಲ್ ಗುರುಗಳನ್ನು ಸಾಯಿಸಿದರೂ ಮನೆಮನೆಯಿಂದ ಅಫ್ಝಲ್ ಗುರುಗಳು ಹುಟ್ಟಿಬರಲಿದ್ದಾರೆ’ ಎಂಬ ಘೋಷಣೆ.
ಕೊನೆಹನಿ: ಸಮಾಜವನ್ನು ಹೀಗೆ ದೇಶಪ್ರೇಮಿ-ದೇಶವಿರೋಧಿ, ಧರ್ಮಿಷ್ಟ-ಧರ್ಮವಿರೋಧಿ ಎಂದು ಕಪ್ಪುಬಿಳುಪಿನ ಹಾಗೆ ವಿಭಜಿಸುವುದರ ಪರಿಣಾಮ ಏನಿರಬಹುದು? ಕಳೆದ ಚುನಾವಣೆಗಳಲ್ಲಿ ಬಿಜೆಪಿಗೆ ಅರ್ಥಾತ್ ಮೋದಿಗೆ ಮತ ಹಾಕದವರು ದೇಶವಿರೋಧಿ, ಧರ್ಮವಿರೋಧಿಗಳೆಂದಾದರೆ ಅಂಥವರನ್ನೆಲ್ಲ ಜೈಲಿಗೆ ಕಳುಹಿಸಲಾಗುವುದೇ? ಆದರೆ ಈಗಾಗಲೇ ತುಂಬಿ ತುಳುಕುತ್ತಿರುವ ನಮ್ಮ ಸೆರೆಮನೆಗಳಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯ ಜನರನ್ನು ತುಂಬುವುದು ಅಸಾಧ್ಯದ ಮಾತಲ್ಲವೇ? ಹಾಗಾದರೆ ಮುಂದೇನು? ಪಿಡುಗು ನಿಯಂತ್ರಣ ಮಾಡುವೆವು, ಎಕೆ 47 ಬಳಸುವೆವು, ಯುದ್ಧ ಟ್ಯಾಂಕ್ ನಿಯೋಜಿಸುವೆವು, ಗುಂಡಿಕ್ಕಿ ಕೊಲ್ಲುವೆವು ಎಂಬ ಆಕ್ರಮಣಶೀಲ ಮಾತುಗಳನ್ನು ಕೇಳುವಾಗಲಂತೂ ಮುಂದಿನ ಹಂತ ಸೆರೆಶಿಬಿರಗಳೇ (ಕಾನ್ಸೆಂಟ್ರೇಷನ್ ಕ್ಯಾಂಪ್) ಆಗಿರಬಹುದೆಂದು ತೋರುವುದಿಲ್ಲವೇ?

(ಆಧಾರ: ಸಬ್‌ರಂಗ್‌ನಲ್ಲಿ ತಪನ್ ಬೋಸ್‌ರವರ ಲೇಖನ ‘Afzal Guru’s execution has made him a martyr’; ಸಂಶುಲ್ ಇಸ್ಲಾಂರವರ ‘Know the RSS’; ಎ.ಜಿ.ನೂರಾನಿಯವರ ಆರೆಸ್ಸೆಸ್ ಮತ್ತು ಬಿಜೆಪಿ )

Writer - ಸುರೇಶ್ ಭಟ್ ಬಾಕ್ರಬೈಲ್

contributor

Editor - ಸುರೇಶ್ ಭಟ್ ಬಾಕ್ರಬೈಲ್

contributor

Similar News