ಪಾಕ್ ಬಾಂಧವ್ಯ:ವಾಜಪೇಯಿ-ಮನಮೋಹನ್ ಹಾದಿಯನ್ನೇ ತುಳಿದ ಮೋದಿ

Update: 2016-04-04 06:14 GMT

 ಪಠಾಣ್‌ಕೋಟ್ ಭಯೋತ್ಪಾದಕ ದಾಳಿ ಪ್ರಕರಣದ ಹಿನ್ನೆಲೆಯಲ್ಲಿ ಕಳೆದ ಶುಕ್ರವಾರ ಪಠಾಣ್‌ಕೋಟ್ ವಾಯುನೆಲೆಗೆ ಭೇಟಿ ನೀಡಿದ ಪಾಕಿಸ್ತಾನಿ ಅಧಿಕಾರಿಗಳಲ್ಲಿ ಆ ದೇಶದ ಬೇಹುಗಾರಿಕಾ ಸಂಸ್ಥೆ ಐಎಸ್‌ಐನ ಅಧಿಕಾರಿ ಕೂಡಾ ಇದ್ದರೆಂದು ಪಿಟಿಐ ಸುದ್ದಿಸಂಸ್ಥೆಯ ಬಿಡಿ ವರದಿಗಾರನೊಬ್ಬನ ವರದಿಯು ಆ ನಗರದಲ್ಲಿ ಸಾಕಷ್ಟು ಕುತೂಹಲ, ಆತಂಕವನ್ನು ಸೃಷ್ಟಿಸಿತ್ತು. ಈ ವರದಿಯನ್ನು ಓದಿದ ಪಠಾಣ್‌ಕೋಟ್‌ನ ಪುಸ್ತಕದಂಗಡಿಯೊಂದರ ಮಾಲಕನೊಬ್ಬ, ‘‘ಐಎಸ್‌ಐ ಏಜೆಂಟರುಗಳ ಪಾತ್ರಗಳನ್ನು ಹಲವಾರು ಹಿಂ ದಿ ಸಿನೆಮಾಗಳಲ್ಲಿ ನೋಡಿದ್ದೇವೆೆ. ಆದರೆ ಇದೇ ಮೊದಲ ಬಾರಿಗೆ ಐಎಸ್‌ಐನ ವ್ಯಕ್ತಿಯೊಬ್ಬ ನಗರಕ್ಕಾಗಮಿಸಿದ್ದಾನೆ. ಹೀಗಾಗಿ ನಗರದಲ್ಲಿ ಭಾರೀ ಕುತೂಹಲವುಂಟಾಗಿರುವುದು ಸಹಜ’’ ಎನ್ನುತ್ತಾನೆ.
       ರಾಷ್ಟ್ರೀಯ ಪ್ರಬುದ್ಧತೆಯ ವಿಷಯದಲ್ಲಿ ಈಗ ಭಾರತದ ರಾಜಕೀಯವು ನಿಸ್ಸಂದೇಹವಾಗಿ ಇನ್ನೊಂದು ಮೈಲುಗಲ್ಲನ್ನು ತಲುಪಿದೆ. ಪಠಾಣ್‌ಕೋಟ್‌ನಲ್ಲಿ ‘ಐಎಸ್‌ಐ ಕಾ ಬಂಧಾ’ (ಐಎಸ್‌ಐ ವ್ಯಕ್ತಿ)ನ ಉಪಸ್ಥಿತಿಯನ್ನು, ಆಕ್ರಮಣಕಾರಿ ರಾಷ್ಟ್ರೀಯತೆ ಹಾಗೂ ತೋಳ್ಬಲದ ವಿದೇಶಾಂಗ ನೀತಿಯ ಕಟ್ಟಾ ಪ್ರತಿಪಾದಕರಾದ ಎಲ್.ಕೆ. ಅಡ್ವಾಣಿಯವರು ಐಎಸ್‌ಐನ್ನು ಹಿಗ್ಗಾಮಗ್ಗಾ ನಿಂದಿಸುತ್ತಿದ್ದ ದಿನಗಳೊಂದಿಗೆ ಹೋಲಿಸೋಣ. ಆಗ ಅವರು ಭಾರತದಲ್ಲಿ ಐಎಸ್‌ಐನ ದುಷ್ಟ ಸಂಚುಗಳನ್ನು ಬಯಲಿಗೆಳೆಯಲು ಸಾಧ್ಯವಾಗದೆ ಇದ್ದುದಕ್ಕಾಗಿ ಕಾಂಗ್ರೆಸ್ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು.

ಆಗ ಸಂಘ ಪರಿವಾರ ಹಾಗೂ ಬಿಜೆಪಿಯು ಐಎಸ್‌ಐನ ನಂಬಿಕೆದ್ರೋಹದ ಕುರಿತು ಭಾವೋದ್ವೇಗದ ಮಾತುಗಳನ್ನಾಡುತ್ತಾ, ಅಮಾಯಕ ಮತದಾರರನ್ನು ಮರುಳುಗೊಳಿಸುತ್ತಿತ್ತು. ದೇಶಭಕ್ತರಾದ ತಾವು ಒಮ್ಮೆ ದಿಲ್ಲಿಯಲ್ಲಿ ಅಧಿಕಾರಕ್ಕೇರಿದಲ್ಲಿ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಲಿದ್ದೇವೆಯೆಂದು ಹೇಳುತ್ತಲೇ ಬಂದಿತ್ತು. 1998ರಿಂದ 2004ರವರೆಗೆ ಆರು ವರ್ಷಗಳ ಕಾಲ ದೇಶಭಕ್ತರು ರೈಸಿನಾ ಹಿಲ್ ಪ್ರದೇಶದ ಸೊಗಸಾದ ಕಚೇರಿಗಳಲ್ಲಿ ಆಳ್ವಿಕೆ ನಡೆಸಿದ್ದರು. ತಾವು ಭರವಸೆ ನೀಡಿದ್ದ ಐಎಸ್‌ಐ ಕುರಿತ ಶ್ವೇತಪತ್ರವನ್ನಾಗಲಿ ಈ ಸಮಯದಲ್ಲಿ ಅವರು ಹೊರತರಲಿಲ್ಲ. ಹಿಂದಿನ ಸರಕಾರದ ಹಾಗೆ, ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ ಕೂಡಾ ಪಾಕ್ ಜೊತೆಗೆ ಯುದ್ಧ ಅಥವಾ ಶಾಂತಿಯ ಮಾಮೂಲಿ ವ್ಯವಹಾರಗಳನ್ನು ಮುಂದುವರಿಸುತ್ತಲೇ ಇತ್ತು.
     ಕಾರ್ಗಿಲ್ ಕದನ ಹಾಗೂ ಡಿಸೆಂಬರ್ 31,2001ರ ಸಂಸತ್ ಭವನ ದಾಳಿ ಘಟನೆ ನಡೆದ ಬಳಿಕವೂ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಇಸ್ಲಾಮಾಬಾದ್‌ಗೆ ಪ್ರಯಾಣಿಸಿದ್ದರು. ಹಾಗೆಯೇ ಆನಂತರ ಅಧಿಕಾರಕ್ಕೇರಿದ ಮನಮೋಹನ್‌ಸಿಂಗ್ ಕೂಡಾ ವಾಜಪೇಯಿ ನಡೆದ ದಾರಿಯಲ್ಲೇ ಸಾಗಿದರು. ಆಗ ನಮ್ಮ ದೇಶಭಕ್ತರು ಮನಮೋಹನ್‌ಸಿಂಗ್ ಅವರ ನಡೆಯನ್ನು ರಾಷ್ಟ್ರೀಯ ಹಿತಾಸಕ್ತಿಗೆ ಬಗೆದ ದ್ರೋಹವೆಂದು ಬೊಬ್ಬೆಹೊಡೆಯತೊಡಗಿದರು.

2014ರ ಮೇನಲ್ಲಿ ಮೋದಿ ನೇತೃತ್ವದ ಹೊಸ ಸರಕಾರ ಅಧಿಕಾರಕ್ಕೇರಿದಾಗ, ಇನ್ನು ಮುಂದೆ ಪಾಕಿಸ್ತಾನ ಸರಿಯಾಗಿ ನಡೆದುಕೊಳ್ಳದಿದ್ದರೆ, ಅದಕ್ಕೆ ಬುದ್ಧಿ ಕಲಿಸಲಾಗುವುದೆಂದು ನಾವೆಲ್ಲಾ ನಿಜವಾಗಿ ನಂಬಿದ್ದೆವು. ಧೈರ್ಯವಿದ್ದರೆ ಪಾಕ್ ನಮ್ಮ ತಂಟೆಗೆ ಬರಲಿ ಎಂದು ಸವಾಲೆಸೆದೆವು. ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರು ನಿರ್ಣಾಯಕ ನಾಯಕನೊಬ್ಬ ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಲಿದ್ದಾರೆಂದು ಘೋಷಿಸಿಯೇ ಬಿಟ್ಟರು. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕೂಡಾ ಪಾಕ್ ಜೊತೆ ಕಠಿಣವಾದ ನೀತಿಯನ್ನು ಅನುಸರಿಸುವ ಮಾತುಗಳನ್ನಾಡಿದರು.
    ಆದರೆ ಈ ನಡುವೆ ಅದೇನೋ ಎಡವಟ್ಟಾಯಿತು. ಪಾಕ್ ಕುರಿತ ಸರಕಾರದ ನಿಲುವಿನಲ್ಲಿ ಯಾಕೆ ಬದಲಾವಣೆಯಾಯಿತೆಂದು ಪ್ರಾಯಶಃ ಇಬ್ಬರು ವ್ಯಕ್ತಿಗಳು ಅಂದರೆ ಪ್ರಧಾನಿ ಹಾಗೂ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರ ಇವರು ಮಾತ್ರವೇ ಹೇಳಲು ಸಾಧ್ಯ. 20 ತಿಂಗಳುಗಳ ಹುಸಿ ಪೌರುಷವನ್ನು ಪ್ರದರ್ಶಿಸಿದ ನಾವು ಸದ್ದಿಲ್ಲದೆ ಹಿಂದಿನ ದಾರಿಯನ್ನೇ ಹಿಡಿದೆವು.
 ಪ್ರಧಾನಿ ನರೇಂದ್ರ ಮೋದಿಯವರು ಸ್ವಾರ್ಥಿ ಭದ್ರತಾ ತಜ್ಞರ ಹಿಡಿತದಿಂದ ಹೊರಬಂದಿರುವಂತೆ ಕಾಣುತ್ತದೆ. ಈ ಭದ್ರತಾ ಅಧಿಕಾರಿಗಳು ಪ್ರಾಮಾಣಿಕ ರಾಜಕೀಯ ವಿಶ್ಲೇಷಕರಾಗುವ ಬದಲು ಟೊಳ್ಳು ಪ್ರಚಾರಗಳಲ್ಲೇ ಹೆಚ್ಚು ನಿರತರಾಗಿರುವಂತೆ ಕಂಡುಬರುತ್ತದೆ. ಪ್ರಾಯಶಃ ಅವರ ಬೌದ್ಧಿಕ ಹಾಗೂ ವೃತ್ತಿಪರ ಅಪ್ರಾಮಾಣಿಕತೆಯ ಅನುಭವ ಮೋದಿಗೆ ಆಗಿರಬೇಕು. ಈ ವರ್ಷದ ಮೊದಲ ವಾರದಲ್ಲಿ ನಡೆದ ಪಠಾಣ್‌ಕೋಟ್ ದಾಳಿಯ ಬಳಿಕ ಮೋದಿ ಹಾಗೂ ಅವರ ತಂಡಕ್ಕೆ ನಮ್ಮ ಸಾರ್ವಭೌಮತೆಯ ಮೇಲಿನ ದಾಳಿಯು ಸ್ಥಳೀಯ ಕ್ರಿಮಿನಲ್ ಹಾಗೂ ರಾಜಕೀಯ ನಂಟಿಲ್ಲದೆ ನಡೆಯಲು ಸಾಧ್ಯವಿಲ್ಲವೆಂಬುದು ಮನವರಿಕೆಯಾಗಿರಬೇಕು.
   ಪಠಾಣ್‌ಕೋಟ್‌ನಲ್ಲಿ ‘ಐಎಸ್‌ಐ ವ್ಯಕ್ತಿಯ ಉಪಸ್ಥಿತಿ’ಯು ಹೊಸದಿಲ್ಲಿಯ ಚಿಂತನೆಯಲ್ಲಿ ಖಡಾಖಂಡಿತವಾದ ಬದಲಾವಣೆಯಾಗಿರುವ ಸಂಕೇತವನ್ನು ನೀಡುತ್ತದೆ. ಪಾಕ್ ತನಿಖಾ ತಂಡದಲ್ಲಿ ಐಎಸ್‌ಐ ವ್ಯಕ್ತಿಯಿರುವುದನ್ನು ಭಾರತ ಒಪ್ಪಿಕೊಂಡಿರುವುದನ್ನು ಕಂಡಾಗ ಕಳೆದ 20 ತಿಂಗಳುಗಳಲ್ಲಿ ಹೊಸದಿಲ್ಲಿಯ ನಿಲುವುಗಳನ್ನು ಅಣಕಿಸುತ್ತದೆ. ನಮ್ಮ ವಿಶ್ವವಿದ್ಯಾನಿಲಯಗಳಲ್ಲಿ ‘ದೇಶವಿರೋಧಿ’ಗಳ ನಡೆಗಳನ್ನು ಖಂಡಿಸುವ ಜೊತೆಗೆ ಮೋದಿ ಆಡಳಿತವು ಇಸ್ಲಾಮಾಬಾದ್ ಜೊತೆ ವ್ಯವಹಾರದಲ್ಲಿ ತೊಡಗಿದೆ.

ವಿದೇಶಿ ಹಸ್ತ
    ಮೋದಿ-ಧೋವಲ್ ಬಳಗದ ಮೇಲೆ ಅಮೆರಿಕನ್ನರ ಹಿಡಿತ ಬಲಗೊಳ್ಳುತ್ತಿರುವುದನ್ನು ಕೆಲವರು ಪತ್ತೆಹಚ್ಚಿರಬಹುದು. ಪಠಾಣ್‌ಕೋಟ್ ದಾಳಿ ಪ್ರಕರಣದ ತನಿಖೆಗೆ ಜಂಟಿ ತನಿಖಾ ತಂಡದ ಚಿಂತನೆಯು, ಅಮೆರಿಕನ್ನರ ಹಿಂಬಾಗಿಲಿನ ಮೂಲಕ ಸಲಹೆಗಳನ್ನು ನೀಡದೆ ಇದ್ದಲ್ಲಿ ಕಾರ್ಯಗತಗೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಪಾಕಿಸ್ತಾನದ ಕುರಿತ ನಮ್ಮ ವಿದೇಶಾಂಗ ನೀತಿಯು ಅಮೆರಿಕದ ಸೂಚನೆಗಳ ಪ್ರಕಾರ ನಡೆಯುತ್ತಿದೆಯೆಂದು ವಾದಿಸುವವರಿದ್ದಾರೆ. ಪಠಾಣ್‌ಕೋಟ್ ದಾಳಿ ಬಗ್ಗೆ ಮಾತುಕತೆ ನಡೆಸುವಂತೆ ಅಮೆರಿಕದ ಗಣನೀಯ ಒತ್ತಡ ಹೆಚ್ಚಿದಾಗ, ಅದರಿಂದ ಪಾರಾಗಲು ಚಾಣಾಕ್ಷ ನವಾಝ್ ಶರೀಫ್ ವಾಶಿಂಗ್ಟನ್‌ಗೆ ಪ್ರಯಾಣಿಸಿದ್ದನ್ನು ಗಮನಿಸಿದವರಿದ್ದಾರೆ. ಪಾಕಿಸ್ತಾನದ ವಿರುದ್ಧ ಮೋದಿ ಸರಕಾರವು ತನ್ನ ದಾರ್ಷ್ಟದ ನಿಲುವಿನಿಂದ ಹಿಂದೆ ಸರಿಯುವಂತೆ ಮಾಡಲು ಅಮೆರಿಕನ್ನರು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ.


 ಪ್ರಧಾನಿಯಾಗಿ ನರೇಂದ್ರ ಮೋದಿ, ಪಾಕಿಸ್ತಾನದ ವಿಷಯದಲ್ಲಿ ವಾಜಪೇಯಿ ಹಾಗೂ ಮನಮೋಹನ್‌ಸಿಂಗ್ ಅವರ ಹಾದಿಯನ್ನೇ ತುಳಿದಿದ್ದಾರೆ. ಪಾಕಿಸ್ತಾನದ ಜೊತೆ ಸಂಘರ್ಷಕ್ಕಿಳಿಯದೆ ಸಂಧಾನ, ಸಮಾಲೋಚನೆಯು ದಕ್ಷಿಣ ಏಶ್ಯಾದಲ್ಲಿ ಶಾಂತಿ ಸ್ಥಾಪನೆಗೆ ಇರುವ ಏಕೈಕ ದಾರಿಯೆಂದು ಅವರಿಗೆ ಮನದಟ್ಟಾಗಿದೆ. ನೆರೆಹೊರೆಯ ರಾಷ್ಟ್ರಗಳೊಂದಿಗೆ ಸರಕಾರವು ಸಂಘರ್ಷಕ್ಕಿಳಿದಲ್ಲಿ ವಿದೇಶ ಹಾಗೂ ಅಂತರಿಕ ಮಟ್ಟದಲ್ಲಿ ಯಾವುದೇ ಗಂಭೀರವಾದ ಹೂಡಿಕೆಗಳು ಬರಲಾರವು. ಪಾಕಿಸ್ತಾನದ ಜೊತೆ ಶತ್ರುತ್ವವನ್ನು ಬೆಳೆಸುವುದರಿಂದ ದೇಶದಲ್ಲಿ ಶಾಂತಿ ಅಥವಾ ಸಾಮಾಜಿಕ ಸೌಹಾರ್ದ ಬೆಳೆಯಲಾರವೆಂಬುದನ್ನು ಮನಮೋಹನ್‌ಸಿಂಗ್ ಹಾಗೂ ವಾಜಪೇಯಿ ಇಬ್ಬರೂ ಅರಿತುಕೊಂಡಿದ್ದರು. ಇದೀಗ ಪಠಾಣ್‌ಕೋಟ್ ವಾಯುನೆಲೆಯಲ್ಲಿ ‘ಐಎಸ್‌ಐ ವ್ಯಕ್ತಿ’ಯ ಉಪಸ್ಥಿತಿಯು ಕೂಡಾ ಮೋದಿ ಹಾಗೂ ಅವರ ಸಲಹೆಗಾರರು ಇದೇ ನಿರ್ಧಾರಕ್ಕೆ ಬಂದಿದ್ದಾರೆಂಬುದನ್ನು ಸೂಚಿಸಿದೆ.

Writer - ಹರೀಶ್ ಖರೆ

contributor

Editor - ಹರೀಶ್ ಖರೆ

contributor

Similar News