ಸೋಮನಾಥ ದೇವಾಲಯಕ್ಕೆ ಕೇಜ್ರಿವಾಲ್ ಭೇಟಿ

Update: 2016-07-10 18:53 GMT

ಅಹ್ಮದಾಬಾದ್, ಜು.10: ದಿಲ್ಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ತಮ್ಮ ಗುಜರಾತ್ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಸೋಮನಾಥಪುರ ದೇಗುಲಕ್ಕೆ ಶನಿವಾರ ಭೇಟಿ ನೀಡಿ, ಬಳಿಕ ರ್ಯಾಲಿಯಲ್ಲಿ ಪಾಲ್ಗೊಂಡರು.

ಸೂರತ್‌ನಲ್ಲಿ ಜುಲೈ 10ರಂದು ವ್ಯಾಪಾರಿಗಳ ಜೊತೆ ನಡೆಯಬೇಕಿದ್ದ ಸಭೆ ದಿಢೀರ್ ರದ್ದಾದ ಬಳಿಕ ಸೋಮನಾಥ ದೇವಸ್ಥಾನದಿಂದ ಆಪ್ ರ್ಯಾಲಿ ಆರಂಭಿಸಿದರು. 2017ರಲ್ಲಿ ನಡೆಯುವ ಚುನಾವಣೆಗೆ ಪೂರ್ವಭಾವಿಯಾಗಿ ರ್ಯಾಲಿ ಹಮ್ಮಿಕೊಂಡ ಹಿನ್ನೆಲೆಯಲ್ಲಿ, ಸೂರತ್ ಕಾರ್ಯಕ್ರಮ ರದ್ದಾಗುವಂತೆ ಗುಜರಾತ್ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ನೋಡಿಕೊಂಡಿದ್ದಾರೆ ಎಂದು ಕೇಜ್ರಿವಾಲ್ ವಾಗ್ದಾಳಿ ನಡೆಸಿದರು.
ಸೋಮನಾಥ ದೇವಾಲಯ ಆಡಳಿತ ಮಂಡಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಅವರು ಇರುವುದು ವಿಶೇಷ. ಕೇಜ್ರಿವಾಲ್ ತಮ್ಮ ತಂದೆ, ತಾಯಿ ಹಾಗೂ ಪತ್ನಿ ಸುನೀತಾ, ಆಪ್ ಮುಖಂಡ ಕುಮಾರ್ ವಿಶ್ವಾಸ್ ಜೊತೆ ಸೋಮನಾಥ ದೇಗುಲಕ್ಕೆ ಭೇಟಿ ನೀಡಿದರು. ದೇವಸ್ಥಾನದಲ್ಲಿ ಅವರ ಧ್ವಜಪೂಜೆ ಕಾರ್ಯಕ್ರಮ ನಡೆಯಿತು.
ಬಳಿಕ ಸದ್ಭಾವನಾ ಮೈದಾನದಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಸೂರತ್ ವ್ಯಾಪಾರಿಗಳನ್ನು ಭೇಟಿ ಮಾಡಲು ಅವಕಾಶ ನೀಡದಿದ್ದರೂ, ಗುಜರಾತ್ ಯಾತ್ರೆ ಸೋಮನಾಥದಿಂದ ಆರಂಭವಾಗಬೇಕು ಎಂದು ನಾನು ಬಯಸಿದ್ದೆ. ವ್ಯಾಪಾರಿಗಳು, ಸೂರತ್ ಭೇಟಿಗೆ ಒತ್ತಾಯಿಸಿದ್ದರು. ಆದರೆ ಗಾಂಧಿನಗರದಿಂದ ಅವರಿಗೆ ಬೆದರಿಕೆ ಬಂದಿದ್ದು, ವ್ಯಾಪಾರವನ್ನು ಹಾಳುಗೆಡವುದಾಗಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಸಭೆ ರದ್ದಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News