ಸೌದಿ: ಹಸಿವಿನಿಂದ ಕಂಗೆಟ್ಟ 10 ಸಾವಿರ ಭಾರತೀಯರ ರಕ್ಷಣೆಗೆ ಧಾವಿಸಿದ ಕೇಂದ್ರ ಸರಕಾರ
ಜಿದ್ದಾ, ಆ.1: ಸೌದಿ ಅರಬಿಯಾ ಹಾಗೂ ಕುವೈತ್‌ನಲ್ಲಿ ಹಸಿವಿನಿಂದ ಕಂಗೆಟ್ಟಿರುವ 10 ಸಾವಿರ ಮಂದಿಯ ರಕ್ಷಣೆಗೆ ಭಾರತ ಸರಕಾರ ಧಾವಿಸಿದೆ. ಆಹಾರ ಖರೀದಿ ಅಥವಾ ತಾಯ್ನೆಲಕ್ಕೆ ವಾಪಾಸಾಗಲು ಟಿಕೆಟ್ ಪಡೆಯಲೂ ಹಣವಿಲ್ಲದೇ ಅತಂತ್ರ ಸ್ಥಿತಿಯಲ್ಲಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆಸಿಕೊಳ್ಳುವ ಬಗ್ಗೆಯೂ ಚಿಂತನೆ ನಡೆಸಿದೆ.
ಸೌದಿ ಅರಬಿಯಾದಲ್ಲಿ ಪರಿಸ್ಥಿತಿ ಚಿಂತಾಜನಕವಾಗಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿರುವ ಎಲ್ಲ ನಿರುದ್ಯೋಗಿ ಭಾರತೀಯರಿಗೆ ಉಚಿತ ರೇಶನ್ ನೀಡುವಂತೆ ರಿಯಾದ್‌ನಲ್ಲಿರುವ ಭಾರತೀಯ ದೂತಾವಾಸ ಕಚೇರಿಗೆ ಸೂಚನೆ ನೀಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಪ್ರಕಟಿಸಿದ್ದಾರೆ.
ಪಶ್ಚಿಮ ಏಷ್ಯಾ ದೇಶಕ್ಕೆ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ವಿ.ಕೆ.ಸಿಂಗ್ ಮುಂದಿನ ವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ, ಸಂಕಷ್ಟದಲ್ಲಿರುವ ಭಾರತೀಯರನ್ನು ವಿಮಾನದ ಮೂಲಕ ಕರೆತರುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಉನ್ನತ ಮೂಲಗಳು ಹೇಳಿವೆ.
ಭಾರತ ಸಮುದಾಯದ ನೆರವಿನೊಂದಿಗೆ ಕಳೆದ ಮೂರು ದಿನಗಳಲ್ಲಿ ರಿಯಾದ್ ದೂತಾವಾಸ ಕಚೇರಿ ಮೂಲಕ 15 ಸಾವಿರ ಕೆ.ಜಿ. ಆಹಾರಧಾನ್ಯವನ್ನು ಭಾರತೀಯರಿಗೆ ವಿತರಿಸಲಾಗಿದೆ. ಸಂಕಷ್ಟದಲ್ಲಿರುವ ಭಾರತೀಯ ಸಮುದಾಯಕ್ಕೆ ಎಲ್ಲ ಅಗತ್ಯ ನೆರವನ್ನು ನೀಡಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಎಂ.ಜೆ.ಅಕ್ಬರ್ ಟ್ವೀಟ್ ಮಾಡಿದ್ದಾರೆ. ಸೌದಿ ಅಧಿಕಾರಿಗಳು ಭಾರತೀಯರಿಗೆ ನಿರ್ಗಮನ ವೀಸಾ ನೀಡಲು ಮತ್ತು ವೇತನ ದಾವೆಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಒಪ್ಪಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.