ಕಾದಂಬರಿ ಧಾರಾವಾಹಿ-22

Update: 2016-09-03 17:56 GMT

--ಅಜ್ಜಿಯ ಕಲಂಬಿಯಲ್ಲಿದ್ದ ಐಶ್ವರ್ಯ!--
ಭಾಗ - 3
ಮೊಮ್ಮಗಳು ಬಂದ ಮೇಲೆ ಅಜ್ಜಿ ಈಗ ಸ್ವಲ್ಪ ಚೇತರಿಸಿಕೊಂಡಿದ್ದರು. ನಡೆಯಲು ಈಗ ಅವರಿಗೆ ಕೋಲಿನ ಅಗತ್ಯವಿರಲಿಲ್ಲ. ಮೊದಲಿನಂತೆ ಮಾತು ಮಾತಿಗೂ ಕೋಪ ಬರುವುದಿಲ್ಲ. ಹಟ ಮಾಡುತ್ತಿರಲಿಲ್ಲ. ಈಗ ಅವರಿಗೆ ಮೊಮ್ಮಗಳೆಂದರೆ ಪ್ರಾಣ. ಬೆಳಗ್ಗೆ ಎದ್ದ ತಕ್ಷಣ ಮೊದಲು ಹುಡುಕಿಕೊಂಡು ಬರುವುದು ಮೊಮ್ಮಗಳನ್ನು. ಅವಳು ನಿದ್ದೆಯಲ್ಲಿದ್ದರೆ ಅವಳಿಗೆ ಯಾವಾಗ ಎಚ್ಚರವಾಗುತ್ತದೆ ಎಂದು ಗಳಿಗೆಗೊಮ್ಮೆ ಅವಳ ಬಳಿ ಸುಳಿದು ನೋಡುತ್ತಿದ್ದರು. ನಿದ್ದೆಯಲ್ಲಿದ್ದ ಅವಳ ಮುಖವನ್ನೇ ನೋಡುತ್ತಾ ಖುಷಿಪಡುತ್ತಿದ್ದರು. ಯಾವ ಕಾರಣಕ್ಕೂ ನಿದ್ದೆಯಿಂದ ಅವಳನ್ನು ಎಬ್ಬಿಸುತ್ತಿರಲಿಲ್ಲ. ಅಜ್ಜಿಯ ಚಡಪಡಿಕೆ ನೋಡಿ ಐಸು ಎಬ್ಬಿಸಲು ಹೋದರೆ ಬಿಡುತ್ತಿರಲಿಲ್ಲ.
ಈಗ ಅಜ್ಜಿಗೆ ಎಲ್ಲದಕ್ಕೂ ಮೊಮ್ಮಗಳೇ ಬೇಕು. ಊಟ ಮಾಡುವಾಗಲೂ, ತಿಂಡಿ ತಿನ್ನುವಾಗಲೂ, ಸ್ನಾನ ಮಾಡುವಾಗಲೂ ಮೊಮ್ಮಗಳು ಹತ್ತಿರವೇ ಬೇಕು. ನಡೆದಾಡುವಾಗಲೂ ಅವರು ಮೊಮ್ಮಗಳ ಹೆಗಲು ಹಿಡಿದೇ ನಡೆಯುತ್ತಿದ್ದರು. ಮೊಮ್ಮಗಳನ್ನು ಪುಟ್ಟ ಮಗುವಿನಂತೆ ತಬ್ಬಿಕೊಳ್ಳುವುದು, ಚುಂಬಿಸುವುದು, ಹೂ ಮುಡಿಸುವುದು, ತುತ್ತು ಬಾಯಿಗೆ ಕೊಡುವುದು, ಮಡಿಲಲ್ಲಿ ಮಲಗಿಸಿ ಹಾಡು, ಕಥೆ ಹೇಳುವುದು... ಹೀಗೆ ಅವರು ಮೊಮ್ಮಗಳನ್ನು ಒಂದು ಕ್ಷಣವೂ ಬಿಟ್ಟಿರಲಾರದ ಹಂತಕ್ಕೆ ಬಂದುಬಿಟ್ಟಿದ್ದರು.
ಅಜ್ಜಿಯ ಕೋಣೆಯಲ್ಲಿ ಕಲಂಬಿಯ ಮೇಲೆ ಕುಳಿತು ಎಳ್ಳು, ಬೆಲ್ಲ, ಕಾಯಿ ಹಾಕಿ ಕಲಸಿದ ಅವಲಕ್ಕಿಯನ್ನು ಬಾಯಿಗೆ ಹಾಕಿಕೊಳ್ಳುತ್ತಾ ತಾಹಿರಾ ಕೇಳಿದಳು
‘‘ಅಜ್ಜಿ ಇದೇನಿದು ಇಷ್ಟು ದೊಡ್ಡ ಪೆಟ್ಟಿಗೆ?’’
‘‘ಪೆಟ್ಟಿಗೆ ಅಲ್ಲಮ್ಮ ಅದು ಕಲಂಬಿ’’
‘‘ಕಲಂಬಿ...! ಹಾಗೆಂದರೆ?’’
‘‘ಹಾಗೆಂದರೆ ಚಿನ್ನ- ಬೆಳ್ಳಿಯ ಆಭರಣಗಳು, ಹಣ, ಸೀರೆಗಳನ್ನು ಇಡುವ ಕಲಂಬಿ. ಈಗ ನಿಮ್ಮ ಗೋದ್ರೇಜ್ ಕಪಾಟು ಅಂತ ಇಲ್ಲವಾ ಹಾಗೆಯೇ ಇದು. ನಿನ್ನಜ್ಜನ ಕಪಾಟು. ಈಗ ನನ್ನದು’’
‘‘ಇದರೊಳಗೆ ಏನಿದೆ?’’ ತಾಹಿರಾ ಕುತೂಹಲ ದಿಂದ ಕೇಳಿದಳು.
‘‘ಇದರಲ್ಲಿ ನನ್ನ ಮದುವೆ ಸೀರೆಗಳು, ಚಿನ್ನ, ಬೆಳ್ಳಿಯ ಒಡವೆಗಳು ಅಜ್ಜನ ಬಟ್ಟೆಗಳು, ಹಣ ಎಲ್ಲ ಇವೆ’’
‘‘ಅಜ್ಜಿ, ನನಗೆ ನಿಮ್ಮ ಮದುವೆ ಸೀರೆ, ಒಡವೆ ಗಳನ್ನೆಲ್ಲಾ ತೋರಿಸ್ತೀರಾ...?’’
‘‘ಮೊದಲು ಈ ಅವಲಕ್ಕಿಯನ್ನೆಲ್ಲಾ ತಿನ್ನು, ಆಮೇಲೆ ತೋರಿಸ್ತೇನೆ’’ ಅಜ್ಜಿ ಖುಷಿಯಿಂದ ಮೊಮ್ಮಗಳ ಕೆನ್ನೆ ಚಿವುಟಿದರು.
ತಾಹಿರಾ ಅವಲಕ್ಕಿಯನ್ನು ಬೇಗ ಬೇಗನೆ ತಿಂದು ಬಟ್ಟಲನ್ನು ಕೊಂಡುಹೋಗಿ ಅಡುಗೆ ಮನೆಯಲ್ಲಿಟ್ಟು ಬಂದಳು.
ಅಜ್ಜಿ ಹಾಸಿಗೆಯಡಿಲ್ಲಿದ್ದ ಬೀಗದ ಗೊಂಚಲನ್ನು ತಂದು ಕಲಂಬಿಯ ಬೀಗ ತೆರೆದರು. ಆದರೆ ಮಂಚದಷ್ಟು ದೊಡ್ಡದಿರುವ ಅದರ ಬಾಗಿಲನ್ನು ಅವರಿಗೆ ಎತ್ತಲಾಗಲಿಲ್ಲ. ತಾಹಿರಾ ಅದರ ಬಾಗಿಲನ್ನೆತ್ತಿ ಗೋಡೆಗೊರಗಿಸಿ ಒಳಗೆ ನೋಡಿದಳು. ಅವಳಿಗೆ ಆಶ್ಚರ್ಯವಾಗಿತ್ತು. ಹೊರಗೆ ಅದೊಂದು ಪೆಟ್ಟಿಗೆಯಂತೆ ಕಂಡರೂ ಅದರ ಒಳಗೆ ಒಂದು ಮನೆಯೇ ಅಡಗಿತ್ತು. ಪುಟ್ಟ ಪುಟ್ಟ ಕೋಣೆಗಳು, ಕೋಣೆಗಳಲ್ಲಿ ಪುಟ್ಟ ಪುಟ್ಟ ಮರದ, ಕಬ್ಬಿಣದ ಪೆಟ್ಟಿಗೆಗಳು, ಸೀರೆ, ಬಟ್ಟೆಗಳು...!
‘‘ಸುಮ್ಮನೆ ಕುಳಿತು ನೋಡಬೇಕು, ಯಾವುದನ್ನೂ ಮುಟ್ಟಬಾರದು’’ ಅಜ್ಜಿ ಆಜ್ಞೆ ಮಾಡಿದರು.
ಅಜ್ಜಿ ಕಪ್ಪುಬಣ್ಣದ ಒಂದು ಪುಟ್ಟ ಮರದ ಪೆಟ್ಟಿಗೆಯನ್ನು ಎತ್ತಿ ತಂದು ಹಾಸಿಗೆಯ ಮೇಲಿಟ್ಟರು. ತಾಹಿರಾ ಅದರ ಮುಂದೆ ಚಾತಕ ಪಕ್ಷಿಯಂತೆ ಚಕ್ಕಳಮಕ್ಕಳ ಹಾಕಿ ಕುಳಿತಳು. ಅಜ್ಜಿ ಮತ್ತೆ ಬೀಗದ ಗೊಂಚಲು ತಂದರು. ಅದರಲ್ಲಿರುವ ಪುಟ್ಟ ಕೀಲಿಕೈಯನ್ನು ಹುಡುಕಿ ತೆಗೆದು ಪೆಟ್ಟಿಗೆಗೆ ಹಾಕಿ ತಿರುಗಿಸಿ ಬಾಗಿಲು ತೆರೆದರು.
‘‘ಅಜ್ಜೀ...!’’ ಎಂದು ಕರೆದ ತಾಹಿರಾ ಕಣ್ಣು ಬಾಯಿ ಬಿಟ್ಟು ಆಶ್ಚರ್ಯದಿಂದ ನೋಡಿದರು. ಪೆಟ್ಟಿಗೆಯ ತುಂಬಾ ಪುಟ್ಟ ಪುಟ್ಟ ಕೋಣೆಗಳು. ಕೋಣೆ ತುಂಬಾ ಚಿನ್ನದ ಆಭರಣಗಳು. ತಾಹಿರಾ ಅದನ್ನು ಮುಟ್ಟಲು ಹೋದಾಗ ಅವಳ ಕೈಗೊಂದು ಹುಸಿ ಪೆಟ್ಟು ಕೊಟ್ಟು ‘‘ಮುಟ್ಟಬೇಡ, ನಾನು ಕೊಡ್ತೇನೆ. ಒಂದೊಂದನ್ನೇ ನೋಡಿ ಕೊಡಬೇಕು’’ ಎಂದು ಅಜ್ಜಿ ಗದರಿಸಿದರು.
ಅಜ್ಜಿ ಅದರಿಂದ ಒಂದು ಸರವನ್ನು ತೆಗೆದು ಅವಳ ಕೈಗೆ ನೀಡಿದರು. ಇದರ ಹೆಸರು ‘ಮಿಸ್ರಿ ಮಾಲೆ.’’
ತಾಹಿರಾ ಅದನ್ನು ತೆಗೆದು ಹಾಸಿಗೆಯ ಮೇಲೆ ಬಿಡಿಸಿ ನೋಡಿದಳು. ಅವಳ ಕಣ್ಣು, ಬಾಯಿ ಇನ್ನೂ ತೆರೆದೇ ಇತ್ತು.

‘‘ಇಗೋ, ಇದು ‘ಒತ್ತೆ ಉರ್ಕು ಮಾಲೆ’, ಇದು ‘ನೆಕ್ಲೇಸ್’. ಇವೆಲ್ಲ ಕತ್ತಿನ ಆಭರಣಗಳು. ನೋಡು ಇದು ‘ಅರೋಳಿ’, ಇದು ‘ಅಲಿಕಾತು’, ಇದು ‘ಓಲೆ’, ಇದು ‘ಬೆಂಡೋಲೆ’, ಇದು ‘ಕೊಪ್ಪು ಸರಪೊಲಿ’ - ಇವೆಲ್ಲ ಕಿವಿಯ ಅಭರಣಗಳು.
ಇದು ‘ಎದ್‌ರ್ ಬಲೆ’, ಇದು ‘ಸೊರಗೆ ಬಲೆ’ - ಇವೆಲ್ಲ ಕೈ ಬಳೆಗಳು.
ಇದು ‘ತಲೆ ಸಿಂಗಾರ’, ಇದು ‘ರಾಕೊಟಿ ಕ್ಯಾದಗೆ’, ಇದು ‘ಗೊಂಡೆ’- ಇವೆಲ್ಲ ತಲೆಯ ಆಭರಣಗಳು. ಇದು ನೋಡು, ಉಂಗುರಗಳು.
‘‘ಅಜ್ಜಿ...! ಇಷ್ಟೊಂದು ಉಂಗುರಗಳು!’’ ತಾಹಿರಾ ಬಾಯಿಗೆ ಕೈ ಅಡ್ಡ ಹಿಡಿದು ಉದ್ಗರಿಸಿದಳು.


ನೋಡು, ಇದುಂಟಲ್ಲ ‘ನವರತ್ನಗಳ ಉಂಗುರ’. ಈಗ ಇಂತದ್ದು ಸಿಗುವುದಿಲ್ಲ. ಇದು ಮದುವೆ ಸಂದರ್ಭದಲ್ಲಿ ತ್ಯಾಂಪಣ್ಣ ಶೆಟ್ಟಿ ಇನಾಮು ಕೊಟ್ಟದ್ದು. ನೋಡು, ಈ ಹುಲಿಯ ಉಗುರಿನ ಸರ ಕೂಡಾ ಅವರೇ ಕೊಟ್ಟಿದ್ದು. ಇದನ್ನು ನಿನ್ನಜ್ಜ ಹಾಕಿಕೊಳ್ಳಬೇಕೂಂತ ತ್ಯಾಂಪಣ್ಣ ಯಾವಾಗಲೂ ಒತ್ತಾಯ ಮಾಡುತ್ತಲೇ ಇದ್ದರು. ಆದರೆ ನಮ್ಮ ಗಂಡಸು ಚಿನ್ನ ಹಾಕ್ತಾರಾ. ಅದು ಹರಾಂ ಅಲ್ವಾ. ಅದಕ್ಕೆ ನಿನ್ನಜ್ಜ ಅದನ್ನು ಒಮ್ಮೆಯೂ ಹಾಕಿಕೊಳ್ಳಲಿಲ್ಲ. ಇದನ್ನು ನನಗೆ ಕೊಟ್ಟರು. ಈ ಸರ ನಾನು ಹಾಕ್ಲಿಲ್ಲ. ಉಂಗುರ ಯಾವಾಗಲೊಮ್ಮೆ, ಎಲ್ಲಿಗಾದರೂ ಹೋಗುವಾಗ ಹಾಕಿಕೊಳ್ಳುತ್ತಾ ಇದ್ದೆ. ‘‘ಇದನ್ನೆಲ್ಲಾ ಪೆಟ್ಟಿಗೆಯಲ್ಲಿ ಯಾಕಿ ಇಟ್ಟಿದ್ದೀರಿ ಅಜ್ಜಿ, ನೀವು ಹಾಕಿಕೊಳ್ಳಬಾರದಾ?’’ ತಾಹಿರಾ ಕೇಳಿದಳು.
‘‘ಮೊದಲು ಹಾಕಿಕೊಳ್ಳುತ್ತಾ ಇದ್ದೆ. ಈಗ ಹಾಕಿಕೊಳ್ಳುವುದಿಲ್ಲ’’.
ನೀವು ಹಾಕಿಕೊಳ್ಳುವುದಿಲ್ಲವಲ್ಲಾ, ಸುಮ್ಮನೆ ಒಳಗೆ ಯಾಕೆ ಇಡುವುದು, ನನಗೆ ಕೊಡಿ, ನಾನು ಹಾಕಿಕೊಳ್ಳುತ್ತೇನೆ’’ ತಾಹಿರಾ ಹೇಳಿ ತುಂಟ ನಗೆ ನಕ್ಕಳು.
ಅಜ್ಜಿ ಮಾತನಾಡಲಿಲ್ಲ. ಒಂದೊಂದೇ ಆಭರಣವನ್ನು ಪೆಟ್ಟಿಗೆಗೆ ಸೇರಿಸಿ ಬೀಗ ಹಾಕಿ ಕಲಂಬಿಯಲ್ಲಿಟ್ಟರು. ಮತ್ತೊಂದು ಪೆಟ್ಟಿಗೆಯನ್ನು ತಂದು ಹಾಸಿಗೆಯ ಮೇಲಿಟ್ಟು ಬೀಗ ತೆರೆದರು. ಅದರ ತುಂಬಾ ಬೆಳ್ಳಿಯ ಆಭರಣಗಳು.

ಅಜ್ಜಿ ಅದರಿಂದ ಬೆಲ್ಟ್‌ನಂತಹ ಒಂದು ಆಭರಣವನ್ನು ಎತ್ತಿಕೊಂಡರು. ಇದು ಅರಞಾನ- ಸೊಂಟಕ್ಕೆ ಹಾಕಿಕೊಳ್ಳುವಂತಹದ್ದು. ಇದು ನೋಡು- ‘ಕುಣಿಪು’, ಇದು ‘ಕಾಲ್ಡೊ ಸರಪೊಲಿ’, ಇದು ‘ಕಾಲ್ಪಲೆ’- ಇದೆಲ್ಲ ಕಾಲಿಗೆ ಹಾಕಿಕೊಳ್ಳುವ ಆಭರಣಗಳು.
ತಾಹಿರಾ ನೋಡುತ್ತಿದ್ದಂತೆಯೇ ಅಜ್ಜಿ ಮತ್ತೆ ಒಂದೊಂದನ್ನೇ ಎತ್ತಿ ಪೆಟ್ಟಿಗೆಗೆ ಸೇರಿಸಿದರು. ಬೀಗ ಹಾಕಿ ಕಲಂಬಿಯಲ್ಲಿಟ್ಟರು.
ಮತ್ತೆ ಒಂದು ದೊಡ್ಡ ಕಬ್ಬಿಣದ ಪೆಟ್ಟಿಗೆಯನ್ನು ಎತ್ತಿ ತಂದು ಹಾಸಿಗೆಯ ಮೇಲಿಟ್ಟು ಅದರ ಬೀಗ ತೆಗೆದರು. ಅದರ ತುಂಬಾ ಸೀರೆಗಳು!
ನೋಡು, ಇದು ಪಟ್ಟೆ ಸೀರೆ, ಇದು ಕಿನ್ಕಾಪು ಸೀರೆ. ಇದು ಚಿನ್ನದ ಜರಿ ಸೀರೆ, ಇದು ಬೆಳ್ಳಿ ಜರಿ ಸೀರೆ... ಇದು ನೋಡು ನನ್ನ ಮದುವೆ ಸೀರೆ... ಹೀಗೆ ಅಜ್ಜಿ ಒಂದೊಂದೇ ಸೀರೆಯನ್ನೆತ್ತಿ ತೋರಿಸಿ, ಮತ್ತೆ ಮಡಚಿ ಪೆಟ್ಟಿಗೆಯಲ್ಲಿಡುತ್ತಿದ್ದರು. ಅವರೀಗ ಮೊಮ್ಮಗಳಿಗೆ ಎಲ್ಲವನ್ನೂ ತೋರಿಸಬೇಕು ಎನ್ನುವುದಕ್ಕಿಂತಲೂ ತಾನೂ ಅದನ್ನು ನೋಡಬೇಕು ಎನ್ನುವ ಆಸೆ ಹೆಚ್ಚಿದ್ದಂತೆ ಕಾಣುತ್ತಿತ್ತು. ಸೀರೆಗಳನ್ನೆಲ್ಲ ಜೋಡಿಸಿಟ್ಟು ಪೆಟ್ಟಿಗೆಗೆ ಬೀಗ ಹಾಕಿ ಕಲಂಬಿಯಲ್ಲಿಟ್ಟವರು ಮತ್ತೊಂದು ಕಬ್ಬಿಣದ ಪೆಟ್ಟಿಗೆಯನ್ನು ತಂದು ಬೀಗ ತೆರೆದರು. ಅದರ ತುಂಬೆಲ್ಲಾ ಗಂಡಸರ ಬಟ್ಟೆಗಳು.
‘‘ಇದೆಲ್ಲಾ ನಿನ್ನ ಅಜ್ಜಂದು’’ ಎಂದು ಹೇಳಿದ ಅಜ್ಜಿ, ಒಂದೊಂದೇ ಬಟ್ಟೆಗಳನ್ನು ತೆಗೆದು ಹೊರಗಿ ಟ್ಟರು. ಈಗ ಅವರು ಮಾತನಾಡುತ್ತಿರಲಿಲ್ಲ. ಏನೋ ನೆನಪಿಸಿಕೊಳ್ಳುತ್ತಿರುವವರಂತೆ ಒಂದೊಂದೇ ಬಟ್ಟೆಯನ್ನು ಎತ್ತಿ ನೋಡುತ್ತಿದ್ದರು. ಅದನ್ನು ಮೃದು ವಾಗಿ ಸವರುತ್ತಿದ್ದರು. ಕೆಲವದನ್ನು ಮುಖಕ್ಕೆ ಒತ್ತಿಕೊಳ್ಳುತ್ತಿದ್ದರು. ಹಾಗೆಯೇ ಮಡಚಿ ಪೆಟ್ಟಿಗೆಗೆ ಸೇರಿಸುತ್ತಿದ್ದರು... ಪೆಟ್ಟಿಗೆಯನ್ನು ಕಲಂಬಿಯೊಳಗಿಟ್ಟು ಬೀಗ ಹಾಕಿ ಬಂದವರು ಮಂಚದ ಮೇಲೆ ಮೌನವಾಗಿ ಕುಳಿತುಬಿಟ್ಟರು.
‘‘ಅಜ್ಜೀ...’’ ತಾಹಿರಾ ಅವರ ಭುಜಕ್ಕೆ ತಲೆ ಒರಗಿಸಿ ಅಪ್ಪಿಹಿಡಿದು ಕರೆದಳು.
ಅಜ್ಜಿ ಓಗೊಡಲಿಲ್ಲ.
‘‘ಅಜ್ಜೀ... ನನ್ನ ಅಜ್ಜಿಗೆ ಏನಾಯಿತು?’’ ಅವಳು ತನ್ನ ಕೆನ್ನೆಯನ್ನು ಅಜ್ಜಿಯ ಕೆನ್ನೆಗೆ ಒತ್ತಿ ಹಿಡಿದು ಅವರ ತಲೆ ಸವರಿದಳು.
‘‘.............’’
‘‘ನನ್ನ ಅಜ್ಜಿಗೆ ನನ್ನ ಮೇಲೆ ಕೋಪನಾ?’’
‘‘ಹೂಂ...?’’
‘‘ಯಾಕಜ್ಜಿ ಕೋಪ?’’
‘‘ಕೋಪನಾ... ಯಾಕಮ್ಮಾ ಕೋಪ? ನೀನು ನನ್ನ ಕರುಳ ಕುಡಿ. ನನ್ನ ಚಿನ್ನ. ನನ್ನನ್ನು ನೋಡಲೆಂದೇ ಹುಡುಕಿಕೊಂಡು ಬಂದವಳು. ನಿನ್ನ ಮೇಲೆ ಯಾಕಮ್ಮಾ ಕೋಪ. ಏನೋ ನೆನಪಾಯಿತು.’’ ಅಜ್ಜಿ ಮೊಮ್ಮಗಳನ್ನು ತಬ್ಬಿಕೊಂಡು ಮುತ್ತಿಕ್ಕಿದರು. ಅವರು ಮತ್ತೆ ಮೊದಲಿನಂತಾದರು.
‘‘ಅಜ್ಜಿ, ನೀವು ಈ ಆಭರಣಗಳನ್ನೆಲ್ಲಾ ಯಾಕೆ ಪೆಟ್ಟಿಗೆಯಲ್ಲಿ ಹಾಕಿ ಮುಚ್ಚಿಟ್ಟಿದ್ದೀರಿ. ಅದನ್ನೆಲ್ಲಾ ಹಾಕಿಕೊಳ್ಳಬಾರದಾ? ಹಾಕಿಕೊಂಡರೆ ಎಷ್ಟು ಚಂದ ಕಾಣ್ತೀರಿ. ಅವುಗಳನ್ನೆಲ್ಲ ಹಾಕಿ, ರೇಷ್ಮೆ ಸೀರೆ ಉಡಿಸಿ ನಿಮ್ಮನ್ನು ನೋಡಬೇಕೂಂತ ಆಸೆ. ಹಾಕಿಕೊಳ್ಳುತ್ತೀರಾ ಅಜ್ಜಿ’’
‘‘ಬೇಡಮ್ಮಾ, ಹಾಗೆಲ್ಲ ಹಾಕಿಕೊಳ್ಳಬಾರದು’’
‘‘ಯಾಕೆ?’’
‘‘ನಿನ್ನಜ್ಜ ಹೇಳಿದ್ದಾರೆ, ಹಾಕಿಕೊಳ್ಳಬಾರದೂಂತ’’
‘‘ಯಾವಾಗ ಹೇಳಿದ್ದು ಅಜ್ಜ?’’
‘‘ದಿನಾ ಹೇಳ್ತಾರೆ’’ ಅಜ್ಜಿ ಎಳೆ ಮಗುವಿನಂತೆ ಹೇಳುತ್ತಿದ್ದರು.
‘‘ಮೊದಲು ಅದನ್ನೆಲ್ಲಾ ಹಾಕಿಕೊಳ್ಳುತ್ತಿರಲಿಲ್ಲವಾ?’’
‘‘ದಿನಾ ಹಾಕ್ತಾ ಇದ್ದೆ. ಎಲ್ಲವನ್ನೂ ಹಾಕಿಕೊಳ್ಳುತ್ತಾ ಇದ್ದೆ. ಒಂದನ್ನು ಒಳಗಿಟ್ಟರೂ ನಿನ್ನ ಅಜ್ಜ ಬೇಜಾರು ಮಾಡುತ್ತಾ ಇದ್ದರು. ಅದನ್ನೆಲ್ಲ ಹಾಕಿಕೊಂಡರೆ ನಾನು ತುಂಬಾ ಚಂದ ಕಾಣ್ತೀನೇಂತ ಹೇಳುತ್ತಾ ಇದ್ದರು’’
‘‘ಆಮೇಲೆ..?’’
‘‘ನಾನು ಇದನ್ನೆಲ್ಲ ಹಾಕಿಕೊಂಡರೆ ನಿನ್ನ ಅಜ್ಜ ಹೆಮ್ಮೆಯಿಂದ ನನ್ನನ್ನೇ ದಿಟ್ಟಿಸಿ ನೋಡುತ್ತಾ ಕುಳಿತು ಬಿಡುತ್ತಿದ್ದರು. ನನ್ನ ಹಿಂದೇನೇ ಸುತ್ತುತ್ತಾ ಇರುತ್ತಿದ್ದರು’’ ಅಜ್ಜಿಯ ಮುಖ ನಾಚಿಕೆಯಿಂದ ಕೆಂಪಗಾಗತೊಡಗಿತ್ತು.
‘‘ಆಮೇಲೆ’’

‘‘ಆಮೇಲೆ... ಆಮೇಲೆ.. ಥೂ... ನಿನಗೆಲ್ಲ ಹೇಳಬೇಕು. ನಾನು ಹೇಳುವುದಿಲ್ಲಪ್ಪ. ಅದನ್ನೆಲ್ಲ ಮಕ್ಕಳಿಗೆ ಹೇಳಬಾರದು. ಅಜ್ಜಿಯ ಮಾತಿನಲ್ಲಿ ತುಂಟತನವಿತ್ತು. ಕಣ್ಣುಗಳಲ್ಲಿ ಸಾವಿರ ದೀಪಗಳು ಒಮ್ಮೆಲೆ ಹೊತ್ತಿಕೊಂಡಂತೆ ಬೆಳಕಿತ್ತು. ‘‘ಅಜ್ಜಿ, ಈ ಆಭರಣಗಳನ್ನೆಲ್ಲ ನನಗೆ ಕೊಡುತ್ತೀರ, ನಾನು ಹಾಕಿಕೊಳ್ಳಲಾ?’’
‘‘ಏನೂ...!’’ ಅಜ್ಜಿಯ ಧ್ವನಿಯಲ್ಲಿ ಕೋಪವಿತ್ತು.
‘‘ಆ ಆಭರಣಗಳನ್ನೆಲ್ಲಾ ನಾನು ಹಾಕಿಕೊಳ್ಳಲಾ ಎಂದು ಕೇಳಿದೆ’’
‘‘ಬೇಡಮ್ಮಾ’’
‘‘ಯಾಕೆ?’’
‘‘ಅಜ್ಜ ಬೈತಾರೆ’’
‘‘ಸರಿ, ಅದರಲ್ಲಿ ಒಂದು ಉಂಗುರ ಕೊಡ್ತೀರಾ, ಅಜ್ಜಿಯ ನೆನಪಿಗೆ’’
‘‘ಇಲ್ಲ, ಯಾವುದೂ ಕೊಡುವುದಿಲ್ಲ. ಅಜ್ಜನ ಹತ್ತಿರ ಕೇಳದೆ ಒಂದು ಕಡ್ಡಿಯೂ ಕೊಡುವುದಿಲ್ಲ. ಅಜ್ಜ ಹೇಳಿದರೆ ಕೊಡುತ್ತೇನೆ’’
‘‘ಸರಿ, ಅಜ್ಜನ ಹತ್ತಿರ ಕೇಳಿ ಕೊಡಿ. ಯಾವಾಗ ಕೇಳ್ತೀರಾ?’’
‘‘ಅಜ್ಜ ಬಂದಾಗ ಕೇಳ್ತೇನೆ ಕೊಡು ಎಂದರೆ ಖಂಡಿತ ಕೊಡುತ್ತೇನೆ’’
‘‘ಯಾವಾಗ ಬರ್ತಾರೆ ಅಜ್ಜ?’’ ತಾಹಿರಾ ಅಜ್ಜಿಯ ಕಣ್ಣುಗಳನ್ನೇ ನೋಡಿದಳು. ಆ ಕಣ್ಣುಗಳಲ್ಲಿ ಮತ್ತೆ ಹೊಳಪು.
(ಗುರುವಾರದ ಸಂಚಿಕೆಗೆ)

Writer - ಮುಹಮ್ಮದ್ ಕುಳಾಯಿ

contributor

Editor - ಮುಹಮ್ಮದ್ ಕುಳಾಯಿ

contributor

Similar News