ಜೆಎನ್ಯುನಲ್ಲಿ ಬಹುಜನ ರಾಜಕಾರಣದ ಉದಯ

Update: 2016-09-15 18:36 GMT

ಎಬಿವಿಪಿ ಜೆಎನ್‌ಯುನಲ್ಲಿ ಉಗಮವಾಗಿ 14 ವರ್ಷಗಳ ನಂತರ 2015ರಲ್ಲಿ ಮಾತ್ರ ಸ್ಪರ್ಧಿಸಿದ 4 ಸ್ಥಾನಗಳಲ್ಲಿ 1 ಸ್ಥಾನದಲ್ಲಿ ವಿಜಯಿಯಾಗಲು ಸಾಧ್ಯವಾಗಿತ್ತು. ಆದರೆ ಈ ಬಾರಿ ಒಂದು ಸ್ಥಾನವನ್ನು ಕೂಡ ಗೆಲ್ಲಲು ಅದಕ್ಕೆ ಸಾಧ್ಯವಾಗಲಿಲ್ಲ. ಇಂತಹ ಹಿನ್ನೆಲೆಯಲ್ಲಿ BAPSA  ಉದಯ ಮತ್ತು ಜನಪ್ರಿಯತೆ ಗಮನಾರ್ಹವಾಗಿದೆ.

ಮೊನ್ನೆ ನಡೆದ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಮತ್ತೊಮ್ಮೆ ಎಡಪಂಥೀಯ ಮೈತ್ರಿಕೂಟ (United left) ಪ್ರಥಮ ಬಾರಿಗೆ ವಿಜಯ ಗಳಿಸಿರುವುದು ಎಲ್ಲರಿಗೂ ತಿಳಿದ ವಿಚಾರ. (ಈ ಹಿಂದೆ SFI ಮತ್ತು AISA ಪ್ರತ್ಯೇಕ ಪ್ರತ್ಯೇಕವಾಗಿ ಸ್ಪರ್ಧಿಸಿ ವಿಜಯಿಯಾಗುತ್ತಿದ್ದವು) ಆದರೆ ಎಡಪಂಥೀಯರಿಗೆ ತೀವ್ರತರವಾಗಿ ಪ್ರತಿಸ್ಪರ್ಧಿಯಾಗಿದ್ದ ಬಿರ್ಸಾಮುಂಡಾ ಅಂಬೇಡ್ಕರ್ ಪುಲೆ ವಿದ್ಯಾರ್ಥಿ ಸಂಘಟನೆ (BAPSA) ಯಾವುದೇ ಇತರ ಸಂಘಟನೆಗಳ ಜೊತೆ ಮೈತ್ರಿ ಮಾಡಿಕೊಳ್ಳದೆ ಏಕೈಕ ದೊಡ್ಡ ವಿದ್ಯಾರ್ಥಿ ಸಂಘಟನೆಯಾಗಿ ಹೊರಹೊಮ್ಮಿ ಎರಡನೆ ಸ್ಥಾನದಲ್ಲಿರುವುದು ಮತ್ತು ಅದು ಎತ್ತಿರುವ ಪ್ರಶ್ನೆಗಳು ಹಾಗೂ ಅದು ಚರ್ಚಿಸುತ್ತಿರುವ ಸಂಕಥನಗಳ ಬಗ್ಗೆ ಎಲ್ಲರೂ ಜಾತೀಯತೆಯ ಜಾಣ ಮೌನ ವಹಿಸಿದ್ದಾರೆ ಅಥವಾ ಕುರುಡಾಗಿದ್ದಾರೆ ಅಂತಲೇ ಕಂಡುಬರುತ್ತಿದೆ.

ಸ್ಪಷ್ಟವಾಗಿ ಹೇಳುವುದಾದರೆ, ಎಡಪಂಥೀಯ ಮತ್ತು ಬಲಪಂಥೀಯ ‘ತೀವ್ರವಾದ’ದ ನಡುವೆ ‘ಮಧ್ಯಮ ಮಾರ್ಗ’ವೊಂದನ್ನು ಇರಗೊಡದಂತಹ ಅಸಹನೆ/ಅಸ್ವಸ್ಥತೆ ಸೃಷ್ಟಿ ಆಗುತ್ತಿದೆ ಎಂಬುದರ ಬಗ್ಗೆ ಚಿಂತಕ ಜಿ. ರಾಜಶೇಖರ್ ನಮ್ಮ ಗಮನಕ್ಕೆ, ಈ ವಿದ್ಯಮಾನವನ್ನು ತರುತ್ತಾರೆ. ಇಂತಹ ಅಸ್ವಸ್ಥತೆ ಮತ್ತು ಅಸಹನೆಯೇ ಡಾ. ಅಂಬೇಡ್ಕರ್‌ರವರನ್ನು ಚುನಾವಣಾ ರಾಜಕೀಯದಲ್ಲಿ ಸೋಲಿಸಿತ್ತು ಎಂಬುದನ್ನು ನಾವಿಲ್ಲಿ ನೆನಪಿಸಿಕೊಳ್ಳಲೇಬೇಕಾಗಿದೆ. ಇಂತಹ ಹಿನ್ನೆಲೆಯಲ್ಲಿ ಜೆಎನ್‌ಯುನಲ್ಲಿ ಉಗಮಗೊಂಡಿರುವ ಅಂಬೇಡ್ಕರ್‌ವಾದಿ ಬಹುಜನ ಸಂಕಥನ ಮತ್ತು BAPSAದ ರಾಜಕಾರಣದ ಬಗ್ಗೆ ಎಲ್ಲಾ ಗುಂಪುಗಳು ಅದರಲ್ಲೂ ಮುಖ್ಯವಾಹಿನಿ ಮಾಧ್ಯಮಗಳು ಮೌನ ತಾಳಿವೆ ಎಂದು ಕಂಡುಬರುತ್ತಿದೆ.

ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಯಾಗಿದ್ದ ರಾಹುಲ್ ಪನುರಾಮ್ ಮತ್ತು BAPSA ಎತ್ತಿರುವ, ಭಾರತೀಯ ಎಡಪಂಥೀಯದ ದ್ವಂದ್ವ ಮತ್ತು ಜಾತೀಯತೆ, ಕಮ್ಯುನಿಸಂ ಅಥವಾ ಎಡಪಂಥೀಯತೆಯ ಹೆಸರಿನಲ್ಲಿ ಮೇಲ್ಜಾತಿ ಐಕಾನ್‌ಗಳನ್ನೇ ಸೃಷ್ಟಿ ಮಾಡುತ್ತಿರುವುದರ ಬಗ್ಗೆ, ಕೆಂಪು ಮತ್ತು ಕೇಸರಿಯ ನಡುವೆ ಏನು ವ್ಯತ್ಯಾಸವಿದೆ? ಯಾಕೆ ಈಗಲೂ ಜೆಎನ್‌ಯುನಲ್ಲಿ ಜಾತೀಯತೆಯ ತಾರತಮ್ಯಗಳು ನಡೆಯುತ್ತವೆ? ದಲಿತ-ಬಹುಜನ ಸಮಾಜದಿಂದ ಬಂದಿರುವ ವಿದ್ಯಾರ್ಥಿಗಳ ಡ್ರಾಪ್‌ಔಟ್ ಸಂಖ್ಯೆ ಯಾಕೆ ಜಾಸ್ತಿಯಿದೆ, ಯಾಕೆ ಜಾಸ್ತಿಯಾಗುತ್ತಿದೆ? ದಲಿತ-ಬಹುಜನ ಸಮಾಜದ ವಿದ್ಯಾರ್ಥಿಗಳಿಗೆ ಜೆಎನ್‌ಯುನ ಬೇರೆ ಬೇರೆ ಅಧ್ಯಯನದ ವಿಭಾಗಗಳಲ್ಲಿ ವೈವಾದ ಸಂದರ್ಭಗಳಲ್ಲಿ 0-3 ತನಕ ಅಂಕಗಳನ್ನು ಕೊಡುತ್ತಾರೆ; ಅದೇ ಮೇಲ್ಜಾತಿ ಹಾಗೂ ಇತರ ಜಾತಿ ಜನರಿಗೆ ವೈವಾದದಲ್ಲಿ 15 ರಿಂದ 20 ಅಂಕಗಳನ್ನು ದಯಪಾಲಿಸುತ್ತಾರೆ, ಇವುಗಳಿಗೆಲ್ಲ ಯಾರು ಕಾರಣ? ಮುಂತಾದ ಪ್ರಶ್ನೆಗಳ ಬಗ್ಗೆ ಜೆಎನ್‌ಯು ಕ್ಯಾಂಪಸ್ ಅನ್ನು ಮೀರಿ ಭಾರತದ ಉದ್ದಗಲಕ್ಕೂ ಚರ್ಚೆಗಳು ನಡೆಯಲಿ.

ಇಷ್ಟಕ್ಕೂ ಭಾರತದ ದಲಿತ-ಬಹುಜನರಿಗೆ ಕುತೂಹಲ ಏನೆಂದರೆ ಮೊನ್ನೆ ಮೊನ್ನೆಯವರೆಗೂ SFI, AISA ಮುಂತಾದ ಎಡಪಂಥೀಯರು ಜೆಎನ್‌ಯುನಲ್ಲಿ ಪ್ರತ್ಯೇಕ ಪ್ರತ್ಯೇಕವಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದರು. ಆದರೆ ಈ ಬಾರಿ “United Life” ಅಂತ ಮೈತ್ರಿ ಕೂಟ ಕಟ್ಟಿಕೊಂಡಿ ದ್ದಾದರೂ ಯಾಕೆ? ಬಹುಜನರ ಭಯವೇ? ಬಹುಜನರ ಸಂಕಥನದ ಭಯವೇ? BAPSAದ ಭಯವೇ? Dalit Students Federation ಜೊತೆ ಎಡಪಂಥೀಯ ಮೈತ್ರಿ ಮಾಡಿಕೊಂಡಿದ್ದಾದರೂ ಯಾಕೆ? ನಿಜವಾಗಿಯೂ ಬಲಪಂಥೀಯರು ಯಾವುದೇ ಖಾತೆ ತೆರೆಯದಂತೆ ಮಾಡಿದ್ದಾದರೂ ಯಾರು? ಇಂತಹ ಪ್ರಶ್ನೆಗಳಿಗೆ ತಾರ್ಕಿಕ ಉತ್ತರ ಪ್ರಗತಿಪರರಲ್ಲಿ ನಿರೀಕ್ಷಿಸುವುದು ಕೂಡ ತಪ್ಪಾಗಬಹುದು ಅಂತ ಎನಿಸುತ್ತದೆ. ಅಥವಾ ಇಂತಹ ತಾರ್ಕಿಕ ಪ್ರಶ್ನೆಗಳಿಗೆ ಬಲಪಂಥೀಯರು ಮತ್ತು ಎಡಪಂಥೀಯರು-ಇಬ್ಬರ ಬಳಿಯೂ ವಿಧಿಬದ್ಧವಾದ, ತಾರ್ಕಿಕ ಉತ್ತರಗಳು ಇಲ್ಲ ಎಂದೇ ಅನಿಸುತ್ತಿದೆ; ಆದರೆ ಅವರ ‘ರಾಜಕಾರಣ’ ಮಾತ್ರ ಯಥೇಚ್ಛವಾಗಿ ಇದೆ. ಉದಾಹರಣೆಗೆ, ಹೈದರಾಬಾದ್ ಮೂಲದ BAPSA ದ ವತಿಯಿಂದ ಪ್ರಧಾನ ಕಾರ್ಯದರ್ಶಿ ಪದವಿಗೆ ಸ್ಪರ್ಧಿಸಿದ ಪಲ್ಲಿಕೊಂಡ ಮನಿಕಂಠರ ವಿರುದ್ಧ ಅವರು ‘ದಕ್ಷಿಣ ಭಾರತೀಯ-ಮದ್ರಾಸಿ’ ಅಂತ ಪುಕಾರು ಹಬ್ಬಿಸಿರುವುದು. 44 ವರ್ಷಗಳ ಜೆಎನ್‌ಯುನ ಇತಿಹಾಸದಲ್ಲಿ ಎಡಪಂಥೀಯರೇ ಪ್ರಾಬಲ್ಯ ಮೆರೆದಿದ್ದಾರೆ. ಆದರೆ ಉಗಮಗೊಂಡ 2 ವರ್ಷಗಳಲ್ಲೇ BAPSA  ಎರಡನೇ ಸ್ಥಾನಕ್ಕೆ ಬೆಳೆದು ನಿಂತಿದೆ. ಎಬಿವಿಪಿ ಜೆಎನ್‌ಯುನಲ್ಲಿ ಉಗಮವಾಗಿ 14 ವರ್ಷಗಳ ನಂತರ 2015ರಲ್ಲಿ ಮಾತ್ರ ಸ್ಪರ್ಧಿಸಿದ 4 ಸ್ಥಾನಗಳಲ್ಲಿ 1 ಸ್ಥಾನದಲ್ಲಿ ವಿಜಯಿಯಾಗಲು ಸಾಧ್ಯವಾಗಿತ್ತು. ಆದರೆ ಈ ಬಾರಿ ಒಂದು ಸ್ಥಾನವನ್ನು ಕೂಡ ಗೆಲ್ಲಲು ಅದಕ್ಕೆ ಸಾಧ್ಯವಾಗಲಿಲ್ಲ. ಇಂತಹ ಹಿನ್ನೆಲೆಯಲ್ಲಿ BAPSA  ಉದಯ ಮತ್ತು ಜನಪ್ರಿಯತೆ ಗಮನಾರ್ಹವಾಗಿದೆ.

ಏನೇ ಇರಲಿ, ಇತ್ತೀಚಿನ ದಿನಗಳಲ್ಲಿ ಒಂದು ಮಾತ್ರ ಸತ್ಯವಾಗುತ್ತ ಇದೆ, ಸುಮಾರು ದಶಕಗಳ ಕಾಲ ಅಂಬೇಡ್ಕರ್‌ರವರನ್ನು ದೂರ ಇಟ್ಟವರೆಲ್ಲಾ / ಸೋಲಿಸಿದವರೆಲ್ಲಾ ಈಗ ‘ಜೈಭೀಮ್-ಲಾಲ್ ಸಲಾಂ’ ಲಾಲ್-ನೀಲಾ ಭಾಯಿ-ಭಾಯಿ’ ಅಂತೆಲ್ಲಾ ಘೋಷಣೆಗಳನ್ನು ಕೂಗುವ ಮೂಲಕ ಅಂಬೇಡ್ಕರ್ ಎತ್ತಿದ ಪ್ರಶ್ನೆಗಳು ಸುಳ್ಳುಗಳು ಅಲ್ಲ; ಅಂಬೇಡ್ಕರ್‌ವಾದ ಮತ್ತು ಅಂಬೇಡ್ಕರ್ ರಾಜಕಾರಣದ ಹೊರತು ಭಾರತೀಯ ಸಮಾಜಕ್ಕೆ ಬೇರೆ ಪರ್ಯಾಯವಿಲ್ಲ ಎಂಬುದನ್ನು ಸಾಬೀತು ಮಾಡುತ್ತಿದ್ದಾರೆ. ಇದೆಲ್ಲಾ ಸ್ವಾಗತಾರ್ಹವೇ... ಆದರೆ ಬರೀ ಜೈಭೀಮ್ ಘೋಷಣೆಗಳಿಂದ ಏನೂ ಪ್ರಯೋಜನವಿಲ್ಲ; ಅಂಬೇಡ್ಕರ್ ವಿಚಾರಗಳನ್ನು, ಅಂಬೇಡ್ಕರ್‌ವಾದ ವನ್ನು ರಾಜಕಾರಣವನ್ನಾಗಿ, ಸಾರ್ವಜನಿಕ ಜೀವನವನ್ನಾಗಿ ಪರಿವರ್ತಿಸಲು ನಾವೆಲ್ಲಾ ಎಷ್ಟು ಕಟಿಬದ್ಧರಾಗಿದ್ದೇವೆ ಎಂಬುದರಲ್ಲಿ ಪ್ರಯೋಜನಗಳು ಅಡಗಿವೆ.

Writer - ರಘು ಧರ್ಮಸೇನ

contributor

Editor - ರಘು ಧರ್ಮಸೇನ

contributor

Similar News