ಅಜ್ಜನ ಹಳಿ ತಪ್ಪಿದ ಜೀವನಕ್ರಮ

Update: 2016-09-17 18:42 GMT

ಧಾರವಾಹಿ26

ಅಂದು ನಾನು ನನ್ನ ಗಂಡನನ್ನು ಸ್ನಾನ ಮಾಡಿಸಿ, ನನ್ನ ಭುಜವನ್ನೇ ಆಧಾರವಾಗಿಸಿ ನಡೆಸಿಕೊಂಡು ಬಂದು ಚಾವಡಿಯಲ್ಲಿ ಕುರ್ಚಿಯಲ್ಲಿ ಕುಳ್ಳಿರಿಸಿ ತಲೆ ಒರೆಸುತ್ತಿದ್ದೆ. ಇದ್ದಕ್ಕಿದ್ದಂತೆ ಗಂಡ ನನ್ನ ಸೊಂಟವನ್ನು ಬಳಸಿ ತಬ್ಬಿಕೊಂಡರು. ನಾನು ಬಿಡಿಸಿಕೊಳ್ಳಲಿಲ್ಲ. ಯಾಕೆಂದರೆ ಅವರು ನನ್ನನ್ನು ಅಷ್ಟೊಂದು ಪ್ರೀತಿಸುತ್ತಿದ್ದರು. ಎಷ್ಟೋ ಸಲ ಅವರ ಪ್ರೀತಿ ಅಸಹಾಯಕತೆಯಿಂದ ಕರಗಿ ಕಣ್ಣೀರಾಗಿ ಹರಿಯುವುದನ್ನು ನಾನು ನೋಡಿದ್ದೆ. ನಾನು ನಿಂತು ಅವರ ತಲೆ, ಬೆನ್ನು, ಒರೆಸುತ್ತಲೇ ಇದ್ದೆ. ಕ್ಷಣಕ್ಷಣಕ್ಕೂ ಅವರ ಹಿಡಿತ ಬಲಗೊಳ್ಳುತ್ತಲೇ ಇತ್ತು. ಅವರ ತುಂಟಾಟಕ್ಕೆ ನಾನು ಅಡ್ಡಿಪಡಿಸಲಿಲ್ಲ. ನಾನು ನನ್ನ ಕೆಲಸದಲ್ಲಿಯೇ ನಿರತಳಾಗಿದ್ದೆ. ಏನೋ ಸದ್ದಾದಂತಾಗಿ ಎಚ್ಚರಗೊಂಡು ತಲೆ ಎತ್ತಿದರೆ ನಿನ್ನ ಅಜ್ಜ. ನಿನ್ನಜ್ಜ ನಮ್ಮಿಬ್ಬರನ್ನೂ ಕಣ್ಣೊಳಗೆ ತುಂಬಿಕೊಳ್ಳುತ್ತಾ ನಿಂತಿದ್ದರು. ಆ ಕಣ್ಣುಗಳಲ್ಲಿ ಸಾವಿರ ನಕ್ಷತ್ರಗಳು ಮಿನುಗುತ್ತಿದ್ದವು. ನಾನು ಆ ಮನೆ ಹೊಕ್ಕ ಮೇಲೆ ಆ ಮುಖದಲ್ಲಿ ಅಷ್ಟೊಂದು ಮಂದಹಾಸ, ತೃಪ್ತಿ ಕಂಡದ್ದು ಅದೇ ಮೊದಲು. ಹೀಗೆ ಸುಮಾರು ಮೂರು ವರ್ಷಗಳು ಕಳೆಯಿತು. ಈ ಮನೆಯಲ್ಲಿ ತಮ್ಮ ಖುಷಿಯಾಗಿದ್ದರೆ ನಿನ್ನ ಅಜ್ಜ ಖುಷಿಯಾಗಿರುತ್ತಿದ್ದರು. ತಮ್ಮ ನಕ್ಕರೆ ಅಜ್ಜ ನಗುತ್ತಿದ್ದರು. ತಮ್ಮ ಅತ್ತರೆ ಅಳುತ್ತಿದ್ದರು. ತನ್ನ ಜೀವನವನ್ನೇ ತಮ್ಮನ ಸಂತೋಷಕ್ಕಾಗಿ, ಹೆಂಡತಿಯ ಸೇವೆಗಾಗಿ ಮುಡಿಪಾಗಿಟ್ಟಿದ್ದರು. ಇಷ್ಟಲ್ಲದೆ ಅವರ ಬದುಕಲ್ಲಿ ಬೇರೇನನ್ನೂ ನಾನು ಕಂಡಿಲ್ಲ. ನಾನು ಆ ಮನೆಯಲ್ಲಿ ಎಲ್ಲರನ್ನೂ ಸಂತೋಷವಾಗಿಡಲು ನನ್ನಿಂದಾದಷ್ಟು ಪ್ರಯತ್ನಿಸುತ್ತಿದ್ದೆ. ಈ ಮನೆಯನ್ನು ನಾನು ನನ್ನ ದೇಹದಂತೆ ನೋಡಿಕೊಂಡೆ. ಈ ಮನೆಯಲ್ಲಿರುವ ಮೂವರನ್ನೂ ನನ್ನ ದೇಹದ ಅಂಗಗಳಂತೆ ಜೋಪಾನ ಮಾಡಿದೆ. ಅರ್ಧ ರಾತ್ರಿ ಎಚ್ಚರವಾದಾಗಲೂ ಎದ್ದು ನನ್ನ ಗಂಡನನ್ನು, ನಿನ್ನ ಅಜ್ಜನನ್ನು, ಅಜ್ಜನ ಹೆಂಡತಿಯನ್ನು ಒಮ್ಮೆ ನೋಡಿ ಬಂದು ಮಲಗುತ್ತಿದ್ದೆ. ಹೀಗೆ ತಾಯಿ ಪುಟ್ಟ ಮಕ್ಕಳನ್ನು ನೋಡಿಕೊಳ್ಳುವಂತೆ ನಾನು ಈ ಮನೆಯಲ್ಲಿದ್ದ ಮೂವರನ್ನೂ ನೋಡಿಕೊಳ್ಳುತ್ತಿದ್ದೆ. ಅದೊಂದು ದಿನ ಮಸೀದಿಯಿಂದ ಮುಂಜಾನೆಯ ಬಾಂಗ್ ಬಂದು ಕಿವಿಗಪ್ಪಳಿಸಿದಾಗ ನನಗೆ ಎಚ್ಚರ ವಾಯಿತು. ನಿನ್ನ ಅಜ್ಜ ಪ್ರತಿದಿನ ಬಾಂಗ್‌ಗಿಂತ ಅರ್ಧ ಗಂಟೆ ಮೊದಲೇ ಎದ್ದು ಚಾವಡಿಯ ದೀಪ ಹಾಕುತ್ತಿದ್ದರು. ಬಾಂಗ್ ಆದ ಕೂಡಲೇ ವುಝೂ ಮಾಡಿ ಮಸೀದಿಗೆ ತೆರಳುತ್ತಿದ್ದರು. ಅವರು ಮುಂದಿನ ಬಾಗಿಲು ತೆರೆದ ಸದ್ದು ಕೇಳಿದ ಕೂಡಲೇ ನಾನು ಹೋಗಿ ಬಾಗಿಲು ಹಾಕಿಕೊಳ್ಳುತ್ತಿದ್ದೆ. ಆದರೆ ಅಂದು ಬಾಂಗ್ ಮುಗಿದು ಅದೆಷ್ಟೋ ಹೊತ್ತು ಕಳೆದರೂ ಚಾವಡಿಯ ದೀಪ ಉರಿಯಲಿಲ್ಲ. ಬಾಗಿಲು ತೆರೆದ ಸದ್ದು ಕೇಳಲಿಲ್ಲ. ನಾನು ಎದ್ದು ಚಾವಡಿಗೆ ಬಂದೆ. ಅಲ್ಲಿ ಕತ್ತಲೆ ಆವರಿಸಿಕೊಂಡಿತ್ತು. ದೀಪ ಉರಿಸಿ ಮುಂಬಾಗಿಲು ನೋಡಿದೆ. ಅದಿನ್ನೂ ಚಿಲಕ ಹಾಕಿತ್ತು. ಅಜ್ಜನ ಕೋಣೆಯತ್ತ ನೋಡಿದೆ ಬಾಗಿಲು ಸ್ವಲ್ಪತೆರೆದುಕೊಂಡಿತ್ತು. ಒಳಗೆ ಕತ್ತಲೆ. ಅಜ್ಜ ಯಾವತ್ತೂ ತನ್ನ ಹೆಂಡತಿಯ ಕೋಣೆಯಲ್ಲದೆ ಬೇರೆ ಕಡೆ ಮಲಗುತ್ತಿರಲಿಲ್ಲ. ಹೆಂಡತಿಯ ಪಕ್ಕವೇ ಬೇರೆಯೇ ಒಂದು ಮಂಚದಲ್ಲಿ ಅವರು ಮಲಗುತ್ತಿದ್ದುದು. ನಾನು ಅಜ್ಜನ ಕೋಣೆಯ ಪಕ್ಕ ಹೋಗಿ ಬಾಗಿಲಿಗೆ ಕಿವಿಯಾಣಿಸಿದೆ. ಇಲ್ಲ, ಅಲ್ಲಿ ಮೌನ ಮಡುಗಟ್ಟಿತ್ತು. ಅಜ್ಜನಿಗೆ ನಿದ್ದೆ ಹಿಡಿದಿರಬಹುದೇ... ಅಲ್ಲ ಬೇರೇನಾದರೂ ಅನಾರೋಗ್ಯ... ಮತ್ತೆ ನನಗೆ ತಡೆಯಲಾಗಲಿಲ್ಲ. ಕೋಣೆಗೆ ನುಗ್ಗಿದವಳೇ ದೀಪ ಹಾಕಿದೆ. ಅಂದು ಅಲ್ಲಿ ಕಂಡ ದೃಶ್ಯ ಈಗಲೂ ನನ್ನ ಕಣ್ಣಿಗೆ ಕಟ್ಟಿದಂತಾಗುತ್ತಿದೆ. ನನ್ನ ಹೃದಯದಲ್ಲಿ ಅಚ್ಚೊತ್ತಿಕೊಂಡು ಬಿಟ್ಟಿದೆ. ಹೆಂಡತಿಯ ದೇಹವನ್ನು ಅಪ್ಪಿಹಿಡಿದು ಅವರ ಮುಖಕ್ಕೆ ತನ್ನ ಮುಖವನ್ನು ಒತ್ತಿ ಹಿಡಿದು ನಿನ್ನಜ್ಜ ಮಂಚದಲ್ಲಿ ಕುಳಿತಿದ್ದರು. ನನಗೆ ಏನು ಮಾಡಬೇಕೆಂದೇ ತೋಚಲಿಲ್ಲ. ನಾನು ಭಯದಿಂದ ತತ್ತರಿಸಿ ಹೋಗಿದ್ದೆ. ‘‘ಏನಾಯಿತು...?’’ ಕೇಳಿದೆ.

ಅಜ್ಜ ಮಾತನಾಡಲಿಲ್ಲ. ಅವರ ಕಣ್ಣಿಂದ ಹರಿಯುತ್ತಿದ್ದ ನೀರು ಹೆಂಡತಿಯ ಮುಖ, ತಲೆಯನ್ನೆಲ್ಲ ಒದ್ದೆಗೊಳಿಸಿತ್ತು.

‘‘ಏನಾಯಿತು... ಅಕ್ಕನಿಗೆ ಏನಾಯಿತು...?’’ ಮತ್ತೆ ಕೇಳಿದೆ. ಈಗಲೂ ನಿನ್ನಜ್ಜ ಮಿಸುಕಾಡಲಿಲ್ಲ. ಒಂದೇ ಭಂಗಿಯಲ್ಲಿ ಕುಳಿತು ರೋದಿಸುತ್ತಿದ್ದ ಅವರನ್ನು ಕಂಡು ಕಿರುಚುತ್ತಾ ಹೋಗಿ ಗಂಡನನ್ನು ಕರೆದೆ. ಅದಾಗಲೇ ನಿನ್ನಜ್ಜನ ಹೆಂಡತಿಯ ಪ್ರಾಣ ಪಕ್ಷಿ ಹಾರಿಹೋಗಿತ್ತು. ಅಲ್ಲಿಗೆ ನಿನ್ನಜ್ಜನ ಬದುಕಿನ ಮೊದಲ ಅಧ್ಯಾಯ ಮುಕ್ತಾಯಗೊಂಡಿತ್ತು. ಆನಂತರ ನಿನ್ನ ಅಜ್ಜನ ಜೀವನಕ್ರಮವೇ ಬದಲಾಗಿ ಬಿಟ್ಟಿತ್ತು. ಅವರು ಸರ್ವಸ್ವವನ್ನೂ ಕಳೆದುಕೊಂಡು ಬಿಟ್ಟವರಂತೆ ಮೌನವಾಗಿ ಬಿಟ್ಟಿದ್ದರು. ಬೆಳಗ್ಗೆದ್ದು ಮಸೀದಿಗೆ ಹೋದರೆ ಅಲ್ಲಿಯೇ ಕುಳಿತು ಬಿಡುವುದು, ಎಲ್ಲೆಲ್ಲೋ ಹೋಗಿ ಊಟ ಮಾಡುವುದು, ತಿಂಡಿ ತಿನ್ನುವುದು. ರಾತ್ರಿ ಮನೆಗೆ ತಡವಾಗಿ ಬರುವುದು. ಒಮ್ಮಿಮ್ಮೆ 2-3 ದಿನ ಮನೆ ಬಿಟ್ಟು ಎಲ್ಲಿಗೋ ಹೋಗಿ ಬಿಡುವುದು ನಡೆಯತೊಡಗಿತು. ಇದರಿಂದ ಅವರ ತಮ್ಮನೂ ಬೇಸರಗೊಂಡಿದ್ದರು. ನನಗೆ ಇದನ್ನೆಲ್ಲ ಹೇಗೆ ಸರಿಪಡಿಸುವುದು, ಯಾರಲ್ಲಿ ಹೇಳುವುದು ಎಂಬುದೇ ತಿಳಿಯದಾಯಿತು. ಒಂದು ದಿನ ರಾತ್ರಿ ತಡವಾಗಿ ಬಂದ ನಿನ್ನ ಅಜ್ಜ ಕೋಣೆ ಸೇರಿ ಬಾಗಿಲು ಹಾಕಿಕೊಂಡರು. ನಾನು ಬಡಿಸಿಟ್ಟು ಸ್ವಲ್ಪಹೊತ್ತು ಕಾದೆ. ಅವರು ಬರಲಿಲ್ಲ. ಮತ್ತೆ ಕಾಯಲಾಗದೆ ಹೋಗಿ ಬಾಗಿಲು ತಟ್ಟಿದೆ. ತೆರೆದುಕೊಳ್ಳಲಿಲ್ಲ. ಮತ್ತೆ ಜೋರಾಗಿಯೇ ತಟ್ಟಿದೆ. ಸ್ವಲ್ಪಹೊತ್ತಿನ ನಂತರ ತೆರೆದುಕೊಂಡಿತು. ‘‘ಊಟ ಬಡಿಸಿದ್ದೇನೆ. ತಣ್ಣಗಾಗ್ತಿದೆ’’ ಎಂದೆ ನೆಲ ನೋಡುತ್ತಾ. ‘‘ನನಗೆ ಬೇಡ.’’

‘‘ಯಾಕೆ ಬೇಡ’’

‘‘ಹಸಿವಿಲ್ಲ.’’

‘‘ಯಾಕೆ ಹಸಿವಿಲ್ಲ’’

‘‘ಗೊತ್ತಿಲ್ಲ’’

‘‘ಏನು ತಿಂದಿದ್ದೀರಿ’’

‘‘......’’

‘‘ಮಧ್ಯಾಹ್ನ ಊಟ ಮಾಡಿದ್ದೀರಾ’’

‘‘......’’

ನಾನು ಇಷ್ಟೊಂದು ಅಧಿಕಾರದಿಂದ ನಿನ್ನಜ್ಜನ ಜೊತೆ ಮಾತನಾಡಿದ್ದು ಇದೇ ಮೊದಲು. ‘‘ಅಲ್ಲಿ ನಿಮ್ಮ ತಮ್ಮನೂ ಊಟ ಮಾಡುತ್ತಾ ಇಲ್ಲ. ನಿದ್ದೆ ಮಾಡುತ್ತಾ ಇಲ್ಲ. ಅವರಿಗೆ ನಿಮ್ಮದೇ ಚಿಂತೆಯಾಗಿ ಬಿಟ್ಟಿದೆ. ಅವರು ಊಟ ಮಾಡಿ ಎಂದರೆ ಅಣ್ಣ ಬರಲಿ ಹೇಳುತ್ತಾರೆ. ನೀವು ಬಂದರೆ ಹಸಿವಿಲ್ಲ ಹೇಳುತ್ತೀರಿ, ನಾನು ಏನು ಮಾಡಬೇಕು?’’

‘‘ಅವನು ಊಟ ಮಾಡಿದನಾ?’’

‘‘ಇಲ್ಲ.’’

‘‘ಕರಿ ಅವನನ್ನು. ಇಬ್ಬರಿಗೂ ಬಡಿಸು. ನಾನು ಈಗ ಬಂದೆ’’ ಅಜ್ಜ ಬಚ್ಚಲಿಗೆ ನಡೆದರು.

ನಾನು ಇಬ್ಬರಿಗೂ ಬಡಿಸಿ ಗಂಡನನ್ನು ಕರೆತಂದು ಸುಪ್ರದ ಎದುರು ಕುಳ್ಳಿರಿಸಿದೆ. ನಿನ್ನ ಅಜ್ಜನೂ ಬಂದು ಅವರ ಪಕ್ಕ ಕುಳಿತರು. ಇಬ್ಬರೂ ತಟ್ಟೆಯ ಮುಂದೆ ಮೌನವಾಗಿ ಕುಳಿತು ಬಿಟ್ಟಿದ್ದರು. ‘‘ಇನ್ನೊಂದು ತಟ್ಟೆ ತಾ’’ ನಿನ್ನಜ್ಜ ಹೇಳಿದರು. ‘‘ಯಾಕೆ’’ ಕೇಳಿದೆ. ‘‘ತಾ. ನೀನು...’’ ಬೇಗ ಹೋಗಿ ಮತ್ತೊಂದು ತಟ್ಟಿಗೆ ಬಡಿಸಿ ತಂದು ಸುಪ್ರದಲ್ಲಿಟ್ಟೆ.

‘‘ಕುಳಿತುಕೋ’’

‘‘ಯಾರು...’’

‘‘ನೀನೇ, ಕುಳಿತುಕೊ’’

‘‘ಇಲ್ಲ, ನಾನು ಮತ್ತೆ ಮಾಡ್ತೇನೆ.’’

‘‘ಎಷ್ಟು ದಿನ ಆಯಿತು ನೀನು ಊಟ ಮಾಡದೆ?’’

ಅಜ್ಜನ ತೀಕ್ಷ್ಣ ಕಣ್ಣುಗಳನ್ನು ಎದುರಿಸಲಾಗದೆ ನಾನು ತಲೆತಗ್ಗಿಸಿದೆ. ಸುಳ್ಳು ಹೇಳಲು ಸಾಧ್ಯವಾಗದೆ ನಾನು ಸುಮ್ಮನೆ ನಿಂತು ಬಿಟ್ಟೆ. ‘‘ಕುಳಿತುಕೋ, ಊಟ ಮಾಡು’’

ನಿನ್ನಜ್ಜನ ಮಾತಿನಲ್ಲಿ ಈಗ ಆದೇಶವಿತ್ತು. ನಾನು ಮೊದಲ ಬಾರಿಗೆ ಅವರ ಮುಂದೆ ಕುಳಿತಿದ್ದೆ.

‘‘ಅಣ್ಣಾ...’’

ಅಣ್ಣ ತಲೆ ಎತ್ತಿ ತಮ್ಮನ ಮುಖ ನೋಡಿದರು. ‘‘ಯಾಕಣ್ಣ ನೀನು ಸರಿಯಾಗಿ ಮನೆಗೆ ಬರ್ತಾ ಇಲ್ಲ, ಸರಿಯಾಗಿ ಊಟ ಮಾಡ್ತಾ ಇಲ್ಲ.’’

‘‘ನಿನ್ನ ಅತ್ತಿಗೆ ಹೋಗಿ ಬಿಟ್ಟಳಲ್ಲಪ್ಪಾ...’’ ನಿನ್ನಜ್ಜನ ಮಾತಿನಲ್ಲಿ ನೋವು ತುಂಬಿಕೊಂಡಿತ್ತು. ‘‘ನೀನು ಹೀಗೆ ಕೊರಗುತ್ತಾ ಇದ್ದರೆ ಅವರು ಮತ್ತೆ ತಿರುಗಿ ಬರ್ತಾರಾ ಅಣ್ಣಾ’’

‘‘ಆದರೂ ಅವಳಿಲ್ಲದ ಈ ಮನೆ...’’

‘‘ನನಗೆ ನಿನ್ನನ್ನು ಬಿಟ್ಟರೆ ಬೇರೆ ಯಾರಿದ್ದಾರೆ ಅಣ್ಣಾ?’’

‘‘ನಿನಗೆ ಫಾತಿಮಾ ಇದ್ದಾಳೆ.. ನಿನ್ನನ್ನು ಮಗುವಿನಂತೆ ನೋಡಿಕೊಳ್ಳುತ್ತಾಳೆ.’’ ನನ್ನ ಕಣ್ಣಿಂದ ಉದುರಿದ ಹನಿಯೊಂದು ತಟ್ಟೆಗೆ ಬಿದ್ದು ಅನ್ನದ ಜೊತೆ ಬೆರೆತು ಹೋಯಿತು. ಮೂವರೂ ಮೌನವಾಗಿ ಊಟ ಮಾಡತೊಡಗಿದೆವು. ಊಟ ಮುಗಿಸಿ ನೀರು ಕುಡಿದವರೇ ನಿನ್ನ ಅಜ್ಜ. ‘‘ನಾನಿನ್ನು ಮೊದಲಿನಂತೇ ಇರುತ್ತೇನೆ. ಯಾರಿಗೂ ಬೇಸರ ಮಾಡುವುದಿಲ್ಲ. ಯಾರನ್ನೂ ನೋಯಿಸುವುದಿಲ್ಲ. ಕಾಯಿಸುವುದಿಲ್ಲ. ಎಲ್ಲರೂ ಖುಷಿಯಾಗಿರಬೇಕು, ಸಂತೋಷವಾಗಿರಬೇಕು. ನಗುನಗುತ್ತಾ ಇರಬೇಕು.’’ ಎಂದವರೇ ಎದ್ದು, ಎಡಕೈಯಲ್ಲಿ ತಮ್ಮನ ತಲೆ ಸವರಿ ಕೈ ತೊಳೆದು ಹೋಗಿ ಕೋಣೆ ಸೇರಿಕೊಂಡು ಬಿಟ್ಟರು. ಅಂದಿನಿಂದ ನಿನ್ನಜ್ಜ ಮೊದಲಿನಂತಾಗಲು ಪ್ರಯತ್ನಿಸುತ್ತಿದ್ದರು. ಸಾಧ್ಯವಾಗದಿದ್ದಾಗ ನಟಿಸುತ್ತಿದ್ದರು. ಸಮಯಕ್ಕೆ ಸರಿಯಾಗಿ ಊಟಕ್ಕೆ ಬರುತ್ತಿದ್ದರು. ನಮ್ಮ ಜೊತೆಯೇ ಊಟಕ್ಕೆ ಕುಳಿತು, ಊಟದ ಶಾಸ್ತ್ರ ಮಾಡುತ್ತಿದ್ದರು. ಆದರೂ ನಿನ್ನಜ್ಜ ಹೆಚ್ಚಾಗಿ ಮನೆಯಿಂದ ಹೊರಗೇ ಇರುತ್ತಿದ್ದರು. ಊರಿನವರ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿ ಕೊಡಲು ತೊಡಗಿದವರು ಮತ್ತೆ ಸಂಪೂರ್ಣ ಸಮಾಜ ಸೇವೆಯಲ್ಲಿ ತೊಡಗಿಕೊಂಡರು. ಇದೇ ಸಮಯದಲ್ಲಿ ಅವರನ್ನು ಜನ ಪಂಚಾಯಿತಿಗೆ ಕರೆಯ ತೊಡಗಿದ್ದು. ಪಂಚಾಯಿತಿ ಮಾಡಲು ತೊಡಗಿದ ಮೇಲೆ ಒಂದಲ್ಲ ಒಂದು ಸಮಸ್ಯೆ ಹೇಳಿಕೊಂಡು ಜನ ಮನೆಗೆ ಬರತೊಡಗಿದರು. ಅವರು ಇಡೀ ಊರಿಗೇ ಬೇಕಾದ ಒಬ್ಬ ಗಣ್ಯ ವ್ಯಕ್ತಿಯಾಗಿ ಗುರುತಿಸಿಕೊಳ್ಳತೊಡಗಿದರು. ಜನರ ಸೇವೆಯಲ್ಲಿ ಅವರು ತನ್ನ ನೋವು, ದುಃಖವನ್ನೆಲ್ಲ ಮರೆಯತೊಡಗಿದರು. ‘‘ಒಮ್ಮೆ ಏನಾಯಿತು ಗೊತ್ತಾ?’’ ಸ್ವಲ್ಪಹೊತ್ತು ನೆನಪಿಸಿದವರಂತೆ ಮೌನವಾಗಿ ಕುಳಿತ ಅಜ್ಜಿ ಮತ್ತೆ ಹೇಳತೊಡಗಿದರು. ಅಂದು ಮಧ್ಯಾಹ್ನ ಊಟಕ್ಕೆ ಬಂದ ನಿನ್ನಜ್ಜ ನನ್ನನ್ನು ಹುಡುಕಿಕೊಂಡು ಅಡುಗೆ ಮನೆಗೆ ಬಂದಿದ್ದರು. ಅವರು ಯಾವತ್ತೂ ಹಾಗೆ ಅಡುಗೆ ಮನೆಗೆ ಬಂದವರಲ್ಲ. ಅವರು ಯಾವಾಗಲೂ ಮನೆಯೊಳಗೆ ಬರುವಾಗ ಹೊಸ್ತಿಲಲ್ಲಿ ನಿಂತು ಒಮ್ಮೆ ಜೋರಾಗಿ ಕೆಮ್ಮುತ್ತಿದ್ದರು. ಅದು ಅವರು ಬಂದ ಸೂಚನೆ. ಆದರೆ ಅಂದು ಅಡುಗೆ ಮನೆ ಬಾಗಿಲಿಗೆ ಬಂದು ನಿಂತವರೇ ‘ಫಾತಿಮಾ’ ಎಂದು ಕರೆದರು. ಆ ಕರೆ ಜೇನಿಗಿಂತಲೂ ಸಿಹಿ ಯಾಗಿತ್ತು. ನನಗೆ ಆಶ್ಚರ್ಯವಾಗಿತ್ತು. ‘‘ಫಾತಿಮಾ... ನಾಳೆ ನನಗೆ ನಿನ್ನ ಊರಿನ ಕಡೆ ಹೋಗಲಿಕ್ಕಿದೆ. ಬೆಳಗ್ಗೆ ಕಾರು ಬರ್ತದೆ. ನೀನು ಬಾ, ರಫೀಕೂ ಬರಲಿ. ಒಟ್ಟಿಗೆ ನಿಮ್ಮ ಮನೆಗೆ ಹೋಗಿ ಬರೋಣ.’’ ಅವರ ಮಾತಿನಲ್ಲಿದ್ದ ಸಂಭ್ರಮ ಕಂಡು ನಾನು ಮೂಕಿ ಯಾಗಿ ಬಿಟ್ಟಿದ್ದೆ. ಅಂದಿಡೀ ಅವರು ಖುಷಿಯಿಂದ ಎಲ್ಲರ ಜೊತೆ ಬಾಯಿ ತುಂಬಾ ಮಾತನಾಡಿದ್ದರು. ಹೊಟ್ಟೆ ತುಂಬಾ ಊಟ ಮಾಡಿದ್ದರು. ಮರುದಿನ ಬೆಳಗ್ಗೆ ಬೇಗ ಹೋಗಿದ್ದ ನಿನ್ನಜ್ಜ ಸ್ವಲ್ಪ ಹೊತ್ತಿನಲ್ಲೇ ಕಾರು ತೆಗೆದುಕೊಂಡು ಬಂದರು. ಬರುವಾಗ ಕಾರಿನ ಡಿಕ್ಕಿ ತುಂಬಾ ಹಣ್ಣು ಹಂಪಲು, ತರಕಾರಿ, ಅಕ್ಕಿ, ಬೇಳೆ, ಬಟ್ಟೆ ಕಂಡು ನನ್ನ ಎದೆಯೊಳಗೆ ಯಾರೊ ಕೈ ಹಾಕಿ ಕಲಕಿದಂತಾಗಿತ್ತು. ಕಾರು ಹೊರಟಿತು. ಮುಂದಿನ ಸೀಟಿನಲ್ಲಿ ನಿನ್ನಜ್ಜ. ಹಿಂದಿನ ಸೀಟಿನಲ್ಲಿ ನಾನು, ನನ್ನ ಗಂಡ. ಅಂದು ನಿನ್ನ ಅಜ್ಜನ ಸಂಭ್ರಮ ನೋಡಬೇಕಾಗಿತ್ತು. ಅದನ್ನು ವರ್ಣಿಸಲು ಈಗ ನನ್ನಲ್ಲಿ ಪದಗಳೇ ಇಲ್ಲ. ವರ್ಷಗಳ ನಂತರ ತವರಿಗೆ ಬಂದ ನನ್ನ ಮನಸ್ಸು ತುಂಬಿ ಬಂದಿತ್ತು. ಅಪ್ಪ, ಅಮ್ಮ, ತಂಗಿ ಎಲ್ಲರೂ ನನ್ನನ್ನು ಸುತ್ತುವರಿದಿದ್ದರು. ನಮ್ಮನ್ನೆಲ್ಲ ಇಳಿಸಿ, ಕಾರಿನಲ್ಲಿದ್ದ ವಸ್ತುಗಳನ್ನೆಲ್ಲ ಮನೆಯೊಳಗೆ ಇರಿಸಿದ ನಿನ್ನಜ್ಜ, ತನ್ನ ಕೆಲಸಕ್ಕೆ ಹೊರಟು ನಿಂತರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಂವಿಧಾನ -75