ತವರೂರ ಸಂಭ್ರಮದ ನಂತರ...

Update: 2016-09-21 18:32 GMT

‘‘ಮಧ್ಯಾಹ್ನ ಊಟಕ್ಕೆ ಬನ್ನಿ’’ ನಾನು ಅವರ ಬಳಿ ಹೋಗಿ ಹೇಳಿದೆ. ಅವರು ಒಂದು ಕ್ಷಣ ನಿಂತರು. ಅವರ ಮುಖದ ತುಂಬಾ ನಗು. ಸಂತಸ.

‘‘ಬರ್ತೇನೆ, ವಿಶೇಷ ಅಡುಗೆ ಆಗಬೇಕು... ಏನು ಮಾಡ್ತೀ?’’ ಅವರು ಹುಬ್ಬೇರಿಸಿ ಕೇಳಿದರು. ನನಗೆ ಈ ಪ್ರಶ್ನೆ ಅನಿರೀಕ್ಷಿತವಾಗಿತ್ತು. ‘‘ನಿಮಗೇನು ಬೇಕು ಹೇಳಿ ಅದನ್ನೆಲ್ಲ ಮಾಡ್ತೇನೆ.’’

ಅಜ್ಜನ ಮುಖ ಮತ್ತೆ ಅರಳಿತು. ಅವರು ಇಷ್ಟೊಂದು ಖುಷಿಯಾಗಿದ್ದುದನ್ನು ನಾನು ಹಿಂದೆಂದೂ ಕಂಡಿರಲಿಲ್ಲ. ‘‘ಸುಮ್ಮನೆ ಹೇಳಿದೆ. ನಿನಗೇನು ಇಷ್ಟವೋ ಅದನ್ನು ಮಾಡು’’ ಎಂದವರೇ ಕಾರು ಹತ್ತಿದರು. ಹೆಂಡತಿಯ ಜೊತೆ ಬೀಗರ ಮನೆಗೆ ಬಂದ ನನ್ನ ಗಂಡನಿಗೂ ಸಂಭ್ರಮ. ಅವರು ಆ ಪುಟ್ಟ ಗುಡಿಸಲಿನಲ್ಲಿ ಆರಾಮ ಕುರ್ಚಿಯಲ್ಲಿ ಒರಗಿ ಎಲ್ಲರೊಂದಿಗೂ ಮಾತನಾಡುತ್ತಿದ್ದರು. ಅಪರೂಪಕ್ಕೆ ಮನೆಗೆ ಬಂದ ಅಳಿಯನನ್ನು ಯಾವ ರೀತಿ ಸತ್ಕರಿಸಬೇಕು ಎಂದು ತಿಳಿಯದೆ ತಂದೆ- ತಾಯಿ ಕೈಕಾಲು ಕಟ್ಟಿ ಹಾಕಿದವರಂತೆ ಒದ್ದಾಡುತ್ತಿದ್ದರು.

ಮಧ್ಯಾಹ್ನವಾಗುತ್ತಲೇ ಕಾರು ಬಂದು ಮನೆ ಅಂಗಳದಲ್ಲಿ ನಿಂತಿತು. ನಾವೆಲ್ಲ ನೋಡುತ್ತಿದ್ದಂತೆಯೇ ನಿನ್ನ ಅಜ್ಜ ಕಾರಿನಿಂದ ಇಳಿದರು. ಅವರ ಕೈಯ ಲ್ಲೊಂದು ದೊಡ್ಡ ಚೀಲ. ಆ ಚೀಲ ತುಂಬಾ ಸಿಹಿತಿಂಡಿಗಳು. ಒಳಗೆ ಬಂದವರೇ ಬೆಂಚಿಯಲ್ಲಿ ಕುಳಿತು ಬೆವರೊರೆಸತೊಡಗಿದರು. ಮತ್ತೆ ಎಲ್ಲರನ್ನೂ ಕರೆದು ಬಾಯಿ ತುಂಬಾ ಮಾತನಾಡಿದರು. ಕ್ಷೇಮ ವಿಚಾರಿಸಿದರು. ಚಾವಡಿಯಲ್ಲಿ ಸುಪ್ರ ಹಾಸಿ ಮಣೆ ಇಟ್ಟೆ. ಅಮ್ಮ ಬಡಿಸಿದ್ದ ತಟ್ಟೆಗಳನ್ನೆಲ್ಲ ತಂದು ಸುಪ್ರದಲ್ಲಿ ಜೋಡಿಸಿದೆ. ಅಜ್ಜನನ್ನೂ, ಗಂಡನನ್ನೂ ಒಳಗೆಯೇ ತಸ್ತ್‌ನಲ್ಲಿ (ಕೈ ತೊಳೆಯುವ ಅಗಲವಾದ ಪಾತ್ರೆ) ಕೈ ತೊಳೆಯಿಸಿದೆ. ಇಬ್ಬರೂ ಊಟಕ್ಕೆ ಕುಳಿತರು. ತಂದೆ ಅವರಿಗೆ ಜೊತೆ ನೀಡಿದರು. ನೈಚೋರು, ಕೋಳಿ ಕರಿ, ಕೋಳಿ ಹುರಿದದ್ದು, ಮೀನು ಹುರಿದದ್ದು, ಹಪ್ಪಳ, ಉಪ್ಪಿನಕಾಯಿ... ಹೀಗೆ ನನಗೆ ಏನೆಲ್ಲ ಗೊತ್ತಿದೆಯೋ ಅದನ್ನೆಲ್ಲ ಅಂದು ಮಾಡಿ ಬಡಿಸಿದ್ದೆ. ನಿನ್ನಜ್ಜ ಊಟ ಮಾಡಲು ತೊಡಗಿದವರು ಆಮೇಲೆ ಒಂದು ಮಾತೂ ಆಡಲಿಲ್ಲ. ತಲೆ ಮೇಲಕ್ಕೆ ಎತ್ತಲಿಲ್ಲ. ಊಟ ಮಾಡದೆ ಎಷ್ಟೋ ದಿನಗಳಾದವರಂತೆ ಬಡಿಸಿದ್ದನ್ನೆಲ್ಲ ಗಬಗಬನೆ ತಿನ್ನತೊಡಗಿದರು. ಮತ್ತೆ ಮತ್ತೆ ಕೇಳಿ ಹಾಕಿಸಿಕೊಂಡರು. ಅವರು ಹೊಟ್ಟೆ ತುಂಬಾ ತಿಂದದ್ದು ನೋಡಿ ನನ್ನ ಹೊಟ್ಟೆ ತುಂಬಿ ಹೋಗಿತ್ತು. ಊಟ ಮಾಡಿದ ಮೇಲೆ ಒಂದರ್ಧ ಗಂಟೆ ಮಲಗುವುದು ನಿನ್ನಜ್ಜನ ಅಭ್ಯಾಸ. ಪುಟ್ಟ ಕೋಣೆಯಲ್ಲಿ ಎರಡು ಬೆಂಚುಗಳನ್ನು ಜೋಡಿಸಿ ಅದರ ಮೇಲೊಂದು ಚಾದರ ಹಾಸಿ, ತಲೆದಿಂಬು ಇಟ್ಟು ಬಂದು ‘‘ಸ್ವಲ್ಪ ಹೊತ್ತು ಮಲಗಿ’’ ಎಂದು ಅಜ್ಜನಿಗೆ ಹೇಳಿದೆ. ನಾನು ಹೇಳುವುದನ್ನೇ ಕಾಯುತ್ತಿದ್ದವರಂತೆ ಅವರು ಒಂದು ಮಾತೂ ಆಡದೆ ಹೋಗಿ ಮಲಗಿ ಬಿಟ್ಟರು. ನಾವೆಲ್ಲ ಊಟ ಮುಗಿಸಿ ಹೊರಡಲನುವಾದಾಗ ಗಂಟೆ ನಾಲ್ಕು ಕಳೆದಿತ್ತು. ಅಜ್ಜ ಇನ್ನೂ ಎದ್ದಿರಲಿಲ್ಲ. ನಾವು ಮತ್ತೂ ಅರ್ಧ ಗಂಟೆಯಷ್ಟು ಕಾದೆವು. ಅಜ್ಜ ಏಳಲಿಲ್ಲ. ನಾನು ಕೋಣೆಗೆ ಇಣುಕಿದೆ. ಅಂಗಾತ ಮಲಗಿ ಎದೆಯ ಮೇಲೆ ಕೈ ಇಟ್ಟು ಅಜ್ಜ ಗೊರಕೆ ಹೊಡೆಯುತ್ತಿದ್ದರು. ಮೆಲ್ಲ ಹೆಜ್ಜೆ ಬದಲಿಸುತ್ತಾ ಕೋಣೆಗೆ ಹೋಗಿ ನೋಡಿದೆ. ಅಜ್ಜನ ಮುಖದ ತುಂಬಾ ಬೆವರ ಹನಿಗಳು ನಕ್ಷತ್ರಗಳಂತೆ ಮಿನುಗುತ್ತಿದ್ದವು. ಅಯ್ಯೋ ಎನಿಸಿ ಅಲ್ಲೇ ಇದ್ದ ಬೀಸಣಿಗೆಯಿಂದ ಅವರ ಮುಖಕ್ಕೆ ಗಾಳಿ ಹಾಕತೊಡಗಿದೆ. ಎಳೆ ಮಗುವಿನಂತಹ ಮುಖ. ನಿದ್ದೆಯಲ್ಲೂ ಆ ಮುಖದ ತುಂಬಾ ಮುಗುಳ್ನಗು. ಆ ಮುಖವನ್ನು ನಾನು ಸರಿಯಾಗಿ ನೋಡಿದ್ದೇ ಅಂದು. ಹಾಗೆಯೇ ನೋಡುತ್ತಾ ನೋಡುತ್ತಾ ಆ ಮುಖವನ್ನು ನಾನು ನನ್ನೆದೆಯಲ್ಲಿ ತುಂಬಿಕೊಳ್ಳತೊಡಗಿದ್ದೆ. ಆವತ್ತೇ ನನ್ನ ಎದೆಗೂಡಿನಲ್ಲಿ ಅವರ ಆ ಮುಖವನ್ನು ನನಗರಿವಿಲ್ಲದೆ ಪ್ರತಿಷ್ಠಾಪಿಸಿ ಬಿಟ್ಟಿದ್ದೆ. ನನ್ನ ರಕ್ತದ ಕಣಕಣಗಳಲ್ಲೂ ನಿನ್ನ ಅಜ್ಜ ಸೇರಿಕೊಂಡು ಬಿಟ್ಟಿದ್ದರು. ಅವರ ಒಳಿತಲ್ಲದೆ, ಅವರ ಸುಖವಲ್ಲದೆ ನನಗೆ ನನ್ನ ಈ ಬದುಕಿನಲ್ಲಿ ಬೇರೇನೂ ಇಲ್ಲ ಎಂಬಂತಾಗಿ ಬಿಟ್ಟಿದ್ದೆ. ಅದು ಪ್ರೀತಿಯೋ, ಪ್ರೇಮವೋ, ಆರಾಧನೆಯೋ, ಗೌರವವೋ ಅದೊಂದು ನನಗೆ ಗೊತ್ತಿಲ್ಲ. ಈಗ ನನ್ನ ಎದೆಯನ್ನು ಬಗೆದರೂ ಅವರ ಮುಖವಲ್ಲದೆ ಅಲ್ಲಿ ಬೇರೇನೂ ಸಿಗದು. ಹೀಗೆ ಅದೆಷ್ಟೋ ಹೊತ್ತು ಅವರ ಮುಖವನ್ನೇ ಮೈಮರೆತು ನೋಡುತ್ತಾ ಗಾಳಿ ಬೀಸುತ್ತಾ ನಾನು ಹಾಗೆಯೇ ನಿಂತು ಬಿಟ್ಟಿದ್ದೆ. ಮತ್ತೂ ಅಜ್ಜ ಎಚ್ಚರವಾ ಗದ್ದು ಕಂಡು ಕೋಣೆಯಿಂದ ಹೊರಗೆ ಬಂದಿದ್ದೆ. ಆನಂತರವೂ ನಾವ್ಯಾರು ನಿನ್ನ ಅಜ್ಜನನ್ನು ಎಬ್ಬಿಸಲು ಹೋಗಲಿಲ್ಲ. ಎಲ್ಲರೂ ಅವರು ಏಳುವವರೆಗೂ ಚಾವಡಿಯಲ್ಲಿ ಮಾತನಾಡುತ್ತಾ ಕಳೆದೆವು. ಸುಮಾರು ಆರು ಗಂಟೆಯ ಹೊತ್ತಿಗೆ ಅಜ್ಜ ಅವರಾಗಿಯೇ ಎಚ್ಚರವಾಗಿ ಕೋಣೆಯಿಂದ ಹೊರಬಂದರು. ‘‘ತುಂಬಾ ಹೊತ್ತು ಮಲಗಿ ಬಿಟ್ಟೆ ಅಲ್ಲವಾ... ಹೋಗೋಣವಾ?’’

ನಾನು ನಿನ್ನ ಅಜ್ಜನ ಮುಖ ನೋಡಿದೆ. ಸ್ನಾನ ಮಾಡಿ ಬಂದವರಂತೆ ಅಲ್ಲಿ ಶುಭ್ರತೆಯಿತ್ತು. ಗೆಲುವು ತುಂಬಿಕೊಂಡಿತ್ತು. ನಾವೆಲ್ಲ ಹೊರಟೆವು. ಎಲ್ಲರೂ ಕಾರು ಹತ್ತಿದ ಮೇಲೆ ಅಜ್ಜ ನನ್ನ ತಂದೆಯನ್ನು ಕರೆದು ‘‘ಈ ಮನೆಯ ಹುಲ್ಲು ತೆಗೆದು ಹೆಂಚು ಹೊದಿಸಬೇಕು. ಇನ್ನೂ ಒಂದು ಕೋಣೆ ಜೋಡಿಸಬೇಕು. ನಾನು ಜನ ಕಳುಹಿಸಿಕೊಡುತ್ತೇನೆ. ಏನೆಲ್ಲ ಆಗಬೇಕು ಅವರಲ್ಲಿ ಹೇಳಿ’’ ಎಂದವರೇ ಕಾರು ಹತ್ತಿದರು. ಅಪ್ಪಕಣ್ಣು ಪಿಳಿಪಿಳಿ ಮಾಡುತ್ತಾ ಮಾತು ಬಂದಾದವರಂತೆ ಕಂಬ ದಂತೆ ನಿಂತಿದ್ದರು. ಕಾರು ಹೊರಟಿತ್ತು. ಅಂದು ರಾತ್ರಿ ಮಲಗಿದ್ದ ನನಗೆ ಗಂಡನ ನರಳಾಟ ಕೇಳಿ ಎಚ್ಚರವಾಗಿತ್ತು. ನೋಡಿದರೆ ಗಂಡನ ಮೈ ಕೆಂಡದಂತೆ ಸುಡುತ್ತಿತ್ತು. ಗಡಬಡಿಸಿ ಎದ್ದು ಕುಳಿತವಳು ಅವರನ್ನು ಕರೆದೆ. ಅವರಿಗೆ ಎಚ್ಚರ ವಾಗಲಿಲ್ಲ. ತಟ್ಟಿ ಎಬ್ಬಿಸಲು ಪ್ರಯತ್ನಿಸಿದೆ. ಅವರು ಕಣ್ಣು ತೆರೆಯಲಿಲ್ಲ. ಕನವರಿಸುವವರಂತೆ ಏನೇನೋ ಮಾತನಾಡತೊಡಗಿದರು. ನನಗೆ ಭಯವಾಯಿತು. ಎದ್ದು ಹೋಗಿ ನಿನ್ನ ಅಜ್ಜನ ಕೋಣೆಯ ಬಾಗಿಲು ತಟ್ಟಿದೆ.

 ಅಜ್ಜ ಬಂದವರು ಅವರನ್ನು ಕೂಗಿ ಕರೆದರು. ಮುಖಕ್ಕೆ ನೀರು ಹಾಕಿ ತಟ್ಟಿ ಎಬ್ಬಿಸಲು ನೋಡಿದರು. ಅವರು ಎಚ್ಚರಗೊಳ್ಳಲಿಲ್ಲ. ಅವರ ನರಳಾಟ, ಜ್ವರ ಹೆಚ್ಚುತ್ತಲೇ ಇತ್ತು. ನಾವಿಬ್ಬರೂ ಬೆಳಕು ಹರಿಯುವವರೆಗೂ ಅವರ ಪಕ್ಕವೇ ಅವರ ಆರೈಕೆ ಮಾಡುತ್ತಾ ಕುಳಿತು ಬಿಟ್ಟಿದ್ದೆವು. ನಿನ್ನಜ್ಜನ ಚಡಪಡಿಕೆ ನೋಡಿ ನನಗೂ ಗಾಬರಿಯಾಗಿತ್ತು. ಬೆಳಗಾಗುತ್ತಲೇ ನಿನ್ನ ಅಜ್ಜ ಪಂಡಿತರಲ್ಲಿಗೆ ಓಡಿದರು. ಪಂಡಿತರು ಬಂದು ಪರೀಕ್ಷಿಸಿ ಕಷಾಯ, ಮಾತ್ರೆ ಕೊಟ್ಟು ಮತ್ತೆ ಸಂಜೆ ಬರುವುದಾಗಿ ಹೇಳಿ ಹೊರಟರು. ಮಧ್ಯಾಹ್ನವಾಗುತ್ತಲೇ ಜ್ವರ ಸ್ವಲ್ಪಕಡಿಮೆಯಾಯಿತು. ನಿನ್ನ ಅಜ್ಜ ಆಕಾಶವೇ ತಲೆಯ ಮೇಲೆ ಕಳಚಿ ಬಿದ್ದವರಂತೆ ತಮ್ಮನ ಪಕ್ಕ ಕುಳಿತು ಬಿಟ್ಟಿದ್ದರು. ಇಡೀ ಮನೆ ಸ್ಮಶಾನದಂತಾಗಿತ್ತು. ಸಂಜೆಯಾಗುತ್ತಲೇ ಮತ್ತೂ ಜ್ವರ ಕಡಿಮೆಯಾಯಿತು. ನಿನ್ನಜ್ಜನೇ ಅವರಿಗೆ ಗಂಜಿ ನೀರು ಕುಡಿಸಿದರು. ಮತ್ತೆ ಪಂಡಿತರು ಬಂದು ಪರೀಕ್ಷಿಸಿ ಕಷಾಯ-ಮಾತ್ರೆ ಕೊಟ್ಟು ಹೋದರು. ತಮ್ಮನ ಜ್ವರ ಬಿಟ್ಟದ್ದು ನೋಡಿ ನಿನ್ನಜ್ಜ ಸ್ವಲ್ಪ ಗೆಲುವಾದರು. ಆದರೆ ಅಂದು ಮಧ್ಯರಾತ್ರಿಯಾಗುತ್ತಲೇ ಮತ್ತೆ ಜ್ವರ ಉಲ್ಬಣಿಸಿತ್ತು. ಮತ್ತೆ ಪಂಡಿತರು ಬಂದು ಪರೀಕ್ಷಿಸಿ ಮದ್ದು ಕೊಟ್ಟವರು ‘‘ನೀವೊಮ್ಮೆ ಇವರನ್ನು ಡಾಕ್ಟರ್‌ಗೆ ತೋರಿಸುವುದು ಒಳ್ಳೆಯದು ಅಬ್ಬು ಬ್ಯಾರಿಗಳೇ. ನಮ್ಮ ಕಾಮತ್ ಡಾಕ್ಟರ್ ಇದ್ದಾರಲ್ಲ, ಅವರಿಗೊಮ್ಮೆ ತೋರಿಸಿ’’ ಎಂದು ಹೇಳಿದರು. ಕಾಮತ್ ಡಾಕ್ಟರ್ ಊರಿಗೇ ಹೆಸರುವಾಸಿಯಾಗಿ ದ್ದವರು. ಆ ಊರಿಗೆ ಇದ್ದದ್ದು ಅವರೊಬ್ಬರೇ ಡಾಕ್ಟರ್. ನಡೆಯಲಾಗದವರು, ವೃದ್ಧರು, ಗರ್ಭಿಣಿಯರು, ಪುಟ್ಟ ಮಕ್ಕಳಿಗೆ ಏನಾದರೂ ಕಾಯಿಲೆ ಕಾಣಿಸಿಕೊಂಡರೆ ಅವರಿಗೆ ಹೇಳಿ ಕಳುಹಿಸಿದರೆ ಸಾಕು, ತನ್ನ ಮದ್ದಿನ ಚರ್ಮದ ಬ್ಯಾಗನ್ನು ಸೈಕಲ್‌ನ ಕ್ಯಾರಿಯರ್‌ಗೆ ಸಿಕ್ಕಿಸಿಕೊಂಡು ಪ್ರತ್ಯಕ್ಷವಾಗಿ ಬಿಡುತ್ತಿದ್ದರು. ಕಾಮತ್ ಡಾಕ್ಟರ್ ಬಂದವರು ಪರೀಕ್ಷಿಸಿ ಒಂದು ಚುಚ್ಚು ಮದ್ದು ಕೊಟ್ಟರು. ಮಾತ್ರೆ ಕೊಟ್ಟರು. ಮತ್ತೆ ನಿನ್ನಜ್ಜನನ್ನು ಹೊರಗೆ ಕರೆದುಕೊಂಡು ಹೋಗಿ ‘‘ಅಬ್ಬು ಬ್ಯಾರಿಗಳೇ, ನಿಮ್ಮ ತಮ್ಮನನ್ನು ಮಂಗಳೂರಿನ ದೊಡ್ಡ ಡಾಕ್ಟರ್‌ಗೆ ಒಮ್ಮೆ ತೋರಿಸುವುದು ಒಳ್ಳೆಯದು. ನಾನು ಚೀಟಿ ಬರೆದು ಕೊಡುತ್ತೇನೆ’’ ಎಂದರು. ನಿನ್ನಜ್ಜನ ಪ್ರತಿಕ್ರಿಯೆಗೂ ಕಾಯದೆ ಬ್ಯಾಗ್‌ನಿಂದ ಕಾಗದ ಪೆನ್ನು ತೆಗೆದು ಬರೆದು ನಿನ್ನಜ್ಜನ ಕೈಗೆ ಕೊಟ್ಟು ‘‘ಸಾಧ್ಯವಾದರೆ ಈ ದಿನವೇ ಕರೆದುಕೊಂಡು ಹೋಗಿ’’ ಎಂದರು. ನಾನು ಬಾಗಿಲಲ್ಲಿ ನಿಂತು ಅವರ ಮಾತನ್ನು ಕೇಳಿಸಿಕೊಳ್ಳುತ್ತಿದ್ದೆ. ‘‘ಏನಾಗಿದೆ ಡಾಕ್ಟರ್ ನನ್ನ ತಮ್ಮನಿಗೆ?’’ ಅಜ್ಜನ ಕಣ್ಣ ತುಂಬಾ ಭಯವಿತ್ತು. ‘‘ನೀವೇನೂ ಹೆದರಬೇಕಾಗಿಲ್ಲ. ದೊಡ್ಡ ಡಾಕ್ಟರ್‌ಗೆ ಒಮ್ಮೆ ತೋರಿಸುವುದು ಒಳ್ಳೆಯದೂಂತ ಹೇಳಿದೆ ಅಷ್ಟೇ, ಈವತ್ತೇ ಕರೆದುಕೊಂಡು ಹೋಗಿ’’ ಎಂದು ಒತ್ತಿ ಹೇಳಿದವರೇ ಡಾಕ್ಟರ್ ಮತ್ತೆ ಮಾತಿಗೆ ಅವಕಾಶ ಕೊಡದೆ ಸೈಕಲ್ ಏರಿ ಹೊರಟು ಬಿಟ್ಟರು. ನಿನ್ನ ಅಜ್ಜ ಮತ್ತೆ ಬಂದು ತಮ್ಮನ ಪಕ್ಕ ಕುಳಿತರು. ಅವರ ತಲೆ-ಬೆನ್ನು ಸವರಿದರು.

‘‘ನಾವೊಮ್ಮೆ ಮಂಗಳೂರು ತನಕ ಹೋಗಿ ಬರೋಣ, ನಾನೀಗ ಬರ್ತೇನೆ’’ ಎಂದು ತಮ್ಮನಿಗೆ ಹೇಳಿದವರು ನನ್ನ ಮುಖ ನೋಡಿ ಎದ್ದು ನಿಂತರು. ಅವರು ಕೋಣೆಯಿಂದ ಹೊರಗೆ ಬಂದಾಗ ನಾನು ಅವರ ಹಿಂದೆಯೇ ಬಂದೆ. ‘‘ಯಾಕೆ ಮಂಗಳೂರಿಗೆ ಕರೆದುಕೊಂಡು ಹೋಗುವುದು. ಏನಾಗಿದೆ ಅವರಿಗೆ?’’

‘‘ಗೊತ್ತಿಲ್ಲ, ಡಾಕ್ಟರಲ್ಲಿ ಕೇಳಿದೆ, ಏನೂ ಇಲ್ಲ ಅಂತ ಹೇಳಿದರು’’ ಅಜ್ಜ ನಿಂತವರು ತಿರುಗಿ ನೋಡದೆ ಹೇಳಿದರು. ‘‘ಏನೂ ಇಲ್ಲ ಅಂದ ಮೇಲೆ, ಮಂಗಳೂರಿಗೆ ಯಾಕೆ ಕರೆದುಕೊಂಡು ಹೋಗುವುದು?’’

‘‘ಸುಮ್ಮನೆ, ಒಮ್ಮೆ ತೋರಿಸಿಕೊಂಡು ಬನ್ನಿ ಎಂದರು ಡಾಕ್ಟರ್.’’

‘‘ಸುಮ್ಮನೆ!’’

‘‘ನಾನು ಕಾರು ತರ್ತೇನೆ, ನೀವು ತಯಾರಾಗಿರಿ.’’

‘‘ನಿಲ್ಲಿ, ನೀವು ನನ್ನಿಂದ ಏನೋ ಅಡಗಿಸುತ್ತಾ ಇದ್ದೀರಿ. ಹೇಳಿ ಅವರಿಗೆ ಏನಾಗಿದೆ?’’

‘‘ಏನೂ ಆಗಿಲ್ಲ.’’

‘‘ನೀವು ಸುಳ್ಳು ಹೇಳುತ್ತಾ ಇದ್ದೀರಿ. ಅವರು ನನ್ನ ಗಂಡ, ಸತ್ಯ ಹೇಳಿ?’’

‘‘...........’’

‘‘ತಿಂಡಿ ತಿಂದು ಹೋಗಿ...’’

ಅಜ್ಜ ಮಾತನಾಡದೆ ಅಂಗಳ ಇಳಿದು ನಡೆದೇ ಬಿಟ್ಟರು. ನಾನು ಗರಬಡಿದವಳಂತೆ ನಿಂತು ಬಿಟ್ಟಿದ್ದೆ. ಕೋಣೆಯಲ್ಲಿ ಅವರು ಕೆಮ್ಮುತ್ತಿರುವುದು ಕೇಳಿ ಒಳ ನಡೆದೆ.

 ಅವರು ಉಸಿರಾಡಲು ಒದ್ದಾಡುತ್ತಿರುವಂತೆ ಕೆಮ್ಮುತ್ತಿ ದ್ದರು. ಸ್ವಲ್ಪಬಿಸಿ ನೀರು ಕುಡಿಸಿದೆ. ಎದೆ ನೀವಿದೆ. ಕೆಮ್ಮು ಕಡಿಮೆಯಾಯಿತು. ಹಣೆ ಮುಟ್ಟಿ ನೋಡಿದೆ ಜ್ವರ ಇಳಿದಿತ್ತು. ಅವರ ಕಣ್ಣು ತುಂಬ ನೀರಿತ್ತು. ಮುಖ ಬಿಳುಚಿಕೊಂಡಿತ್ತು. ಗಂಜಿ ನೀರು ಕೊಟ್ಟೆ. ಬೇಡ ಎಂದರು. ಮುಖ ತೊಳೆಸಿ, ಬಟ್ಟೆ ಬದಲಿಸಿ, ಅವರನ್ನು ತಬ್ಬಿ ಹಿಡಿದುಕೊಂಡು ನಿನ್ನಜ್ಜನಿಗಾಗಿ ಕಾದು ಕುಳಿತೆ. ಮತ್ತೆ ಕೆಮ್ಮು ಶುರುವಾಯಿತು. ಬಿಸಿ ನೀರು ಕುಡಿಸಲು ಹೋದೆ. ಅದಕ್ಕೆ ಅವಕಾಶವೇ ಇಲ್ಲದಂತೆ ಕೆಮ್ಮು ಕ್ಷಣಕ್ಷಣಕ್ಕೂ ಜಾಸ್ತಿಯಾಗುತ್ತಾ ಹೋಯಿತು. ಜೊತೆಗೆ ಹಿತ್ತಾಳೆಯ ಪಾತ್ರೆಗೆ ಬಡಿದಂತೆ ಎದೆಯೊಳಗಿಂದ ಗುಂಯ್-ಗುಂಯ್ ಸದ್ದು. ಮತ್ತೆ ನೀರು ಕುಡಿಸಲು ಪ್ರಯತ್ನಿಸಿದೆ. ಸಾಧ್ಯವಾಗಲಿಲ್ಲ. ಎದೆ ನೀವಿದೆ, ಬೆನ್ನು ಸವರಿದೆ. ಕೆಮ್ಮು ಕಡಿಮೆಯಾಗಲಿಲ್ಲ. ಅವರಿಗೆ ಈಗ ಕೆಮ್ಮಲು ಶಕ್ತಿ ಇಲ್ಲದೆ ಬಾಯಿಯಿಂದ ಜೊಲ್ಲು ಸುರಿಯಲು ಪ್ರಾರಂಭವಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಂವಿಧಾನ -75