ಕೊಂಡಿ ಕಳಚಿದರೆ ಎಲ್ಲ ಮುಗಿಯಿತೇ?

Update: 2016-10-05 18:34 GMT

ಧಾರವಾಹಿ-31

‘ಹೀಗೆ ನಾಲ್ಕು ತಿಂಗಳು ಹತ್ತು ದಿನ ಕಳೆಯಿತು.

ನನ್ನ ಇದ್ದತ್‌ನ ದಿನಗಳು ಮುಗಿದಿತ್ತು.

ಅಂದು ಬೆಳಗ್ಗೆ ಮತ್ತೆ ಮನೆಯಲ್ಲಿ ಹತ್ತಿರದ ಬಂಧುಗಳು, ನೆರೆಹೊರೆಯವರು ಸೇರಿದರು. ನನ್ನಮ್ಮ ಸ್ನಾನ ಮಾಡಿಸಿದರು. ಹೊಸ ಜರಿಸೀರೆ ಉಡಿಸಿದರು. ಇದ್ದತ್‌ನ ಕಾರ್ಯಕ್ರಮಕ್ಕಾಗಿ ನಿನ್ನಜ್ಜ ನನಗೆ ಹೊಸ ಸೀರೆ ತಂದಿದ್ದರು. ನನ್ನ ಬಳಿ ಇದ್ದ ಆಭರಣಗಳನ್ನೆಲ್ಲ ನನಗೆ ತೊಡಿಸಿದರು. ಕಾಲಿಗೆ, ಸೊಂಟಕ್ಕೆ ಬೆಳ್ಳಿಯ ಆಭರಣಗಳನ್ನು ಹಾಕಿದರು. ತಲೆಗೆ ಪರಿಮಳದ ಎಣ್ಣೆ ಹಾಕಿ ಬಾಚಿದರು. ಹೂ ಮುಡಿಸಿದರು. ಕಣ್ಣಿಗೆ ಕಾಡಿಗೆ ಹಚ್ಚಿದರು. ನನ್ನನ್ನು ಮದುಮಗಳಂತೆ ಸಿಂಗರಿಸಿ ಒಂದು ಕುರ್ಚಿಯಲ್ಲಿ ಕುಳ್ಳಿರಿಸಿದರು. ನನ್ನ ಸುತ್ತಲೂ ಮಹಿಳೆಯರು ಸೇರಿದ್ದರು. ಅಳಬೇಕೋ-ನಗಬೇಕೋ ನನಗೊಂದೂ ಅರ್ಥವಾಗುತ್ತಿರಲಿಲ್ಲ. ನನ್ನೊಳಗೆ ಯಾವ ಭಾವನೆಗಳೂ ಇರಲಿಲ್ಲ. ನಾನೊಂದು ಯಂತ್ರದಂತಾಗಿ ಬಿಟ್ಟಿದ್ದೆ.

ಮೌಲವಿಯವರು ಬಂದರು. ಅಜ್ಜ ವರಾಂಡ ತುಂಬಾ ಚಾಪೆ ಹಾಸಿದರು. ಅದರಲ್ಲಿ ಮೌಲವಿ ಕುಳಿತರು. ಅವರಿಗೆ ಎದುರಾಗಿ ಎಲ್ಲ ಗಂಡಸರು ಕುಳಿತರು. ಮೌಲವಿ ಯಾಸೀನ್ ಓದಿದರು. ಮೌಲೂದು ಓದಿದರು. ಫಾತಿಹಾ ಓದಿದರು. ದುಆ ಮಾಡಿದರು. ಎಲ್ಲರಿಗೂ ‘ತೌಬಾ’ ಹೇಳಿಕೊಟ್ಟರು. ಆನಂತರ ಎಲ್ಲರಿಗೂ ಊಟ. ನೈಚೋರು-ಮಾಂಸದೂಟ. ವಿವಿಧ ಬಗೆಯ ಅಪ್ಪ, ಸಿಹಿತಿಂಡಿಗಳ ಜೊತೆ ಕುಡಿಯಲು ಚಾ, ನಾಲ್ಕು ತಿಂಗಳ ಹಿಂದೆ ಅಳುತ್ತಿದ್ದವರು, ಕಣ್ಣೀರು ಹಾಕುತ್ತಿದ್ದವರು, ನನಗೆ ಸಾಂತ್ವನ, ಸಮಾಧಾನ ಹೇಳುತ್ತಿದ್ದವರು ಇಂದು ನಗುತ್ತಿದ್ದರು. ಹೊಟ್ಟೆ ತುಂಬಾ ಉಣ್ಣುತ್ತಿದ್ದರು. ಸಿಹಿ ಚಪ್ಪರಿಸುತ್ತಿದ್ದರು. ಊಟವಾಗುತ್ತಲೇ ಮತ್ತೆ ಒಬ್ಬೊಬ್ಬರೇ ಚದುರತೊಡಗಿದರು. ಸಂಜೆಯಾಗುವಾಗ ಮನೆ ಬಿಕೋ ಎನ್ನತೊಡಗಿತ್ತು.

ಅಂದು ರಾತ್ರಿ.

ನಾನು ಅಡುಗೆ ಮನೆಯಲ್ಲಿದ್ದೆ. ಇಡೀ ಮನೆಯನ್ನು ಮೌನ ಆವರಿಸಿಬಿಟ್ಟಿತ್ತು. ಇದ್ದಕ್ಕಿದ್ದಂತೆ ಯಾರೋ ಮೆಲು ಧ್ವನಿಯಲ್ಲಿ ಮಾತನಾಡಿದಂತೆ ಕೇಳಿಸಿತು. ನಾನು ಕಿವಿಯಾಣಿಸಿದೆ. ಹೌದು ಯಾರೋ ಮಾತನಾಡುತ್ತಿದ್ದಾರೆ. ನಾನು ಹೆಜ್ಜೆ ಬದಲಿಸುತ್ತಾ ವರಾಂಡಕ್ಕೆ ಬಂದೆ. ಯಾರೂ ಕಾಣಲಿಲ್ಲ. ನಿನ್ನ ಅಜ್ಜನ ಕೋಣೆಯತ್ತ ನೋಡಿದೆ. ಅದರ ಕಿಟಕಿ-ಬಾಗಿಲುಗಳೆಲ್ಲ ಮುಚ್ಚಿತ್ತು. ಮತ್ತೆ ಪಿಸು ಮಾತು ಕೇಳತೊಡಗಿತು. ಕಿವಿಗೊಟ್ಟು ಆಲಿಸಿದೆ. ಹೌದು, ಅಜ್ಜನ ಕೋಣೆಯಿಂದ ಮಾತುಗಳು ಕೇಳಿ ಬರುತ್ತಿರುವುದು! ಕುತೂಹಲ ತಡೆಯಲಾರದೆ ಕಿಟಕಿ ಸಂದಿನಿಂದ ಇಣುಕಿದೆ. ಲಾಟೀನಿನ ಮಂದ ಬೆಳಕಿನಲ್ಲಿ ನಿನ್ನಜ್ಜ ಕಲಂಬಿಯ ಮೇಲೆ ಕುಳಿತ್ತಿದ್ದುದು ಕಾಣಿಸಿತು. ಅವರ ಬಲ ಪಕ್ಕದಲ್ಲಿ ಅವರ ಅಕ್ಕ. ಎಡ ಪಕ್ಕದಲ್ಲಿ ನನ್ನ ತಂದೆ-ತಾಯಿ ನಿಂತಿದ್ದರು. ನನ್ನ ಕುತೂಹಲ ಮತ್ತೂ ಹೆಚ್ಚಾಯಿತು. ನಾನು ಕಿಟಕಿಯ ಸಂದಿಗೆ ಕಿವಿ ಇಟ್ಟು ನಿಂತೆ.

‘‘ಹೀಗೆ ಎಷ್ಟು ದಿನಾಂತ ಇರಲಿಕ್ಕಾಗುತ್ತೆ. ಇಂದಲ್ಲ ನಾಳೆ ಅವಳು ಈ ಮನೆಯಿಂದ ಹೋಗಲೇ ಬೇಕಲ್ಲ’’ - ಅವರಕ್ಕನ ಮಾತು.

‘‘ನಮಗೂ ಇನ್ನು ಇಲ್ಲಿ ಇರಲಿಕ್ಕೆ ಆಗುವುದಿಲ್ಲ.ಮನೆಗೆ ಬೀಗ ಹಾಕಿ ಬಂದಿದ್ದೇವೆ. ಹೋಗಲೇ ಬೇಕು’’ - ಅಪ್ಪನ ಮಾತು.

‘‘ನೀವು ಹೋದ ಮೇಲೆ ಅವರಿಬ್ಬರೇ ಇಲ್ಲಿ ಇರಲಿಕ್ಕಾಗ್ತದಾ. ಒಂದು ಮನೆಯಲ್ಲಿ ಹೀಗೆ ಒಂದು ಹೆಣ್ಣು- ಒಂದು ಗಂಡು ಮಾತ್ರ ಜೊತೆಯಾಗಿದ್ದರೆ ಜನ ಏನೆಂದಾರು’’ -ಅವರ ಅಕ್ಕನ ಮಾತು.

‘‘ಇಲ್ಲ. ನಾವು ಅವಳನ್ನು ಕರೆದುಕೊಂಡು ಹೋಗುತ್ತೇವೆ’’ - ಅಮ್ಮನ ಮಾತು.

‘‘ಕರೆದುಕೊಂಡು ಹೋಗಲಿಕ್ಕೆ ಅವಳೇನು ಚಿಕ್ಕ ಮಗುವಲ್ಲವಲ್ಲ. ಅವಳು ಬರುವುದಿಲ್ಲ ಹೇಳಿದರೆ ಏನು ಮಾಡುತ್ತೀರಿ’’ ಅವರ ಅಕ್ಕನ ಮಾತು.

‘‘ಇಲ್ಲ, ನಾವು ಹೇಗಾದರೂ ಅವಳಿಗೆ ಬುದ್ಧಿ ಹೇಳಿ ಸರಿ ಮಾಡುತ್ತೇವೆ’’ -ಅಮ್ಮನ ಮಾತು.

‘‘ಅವತ್ತು ಕೋಣೆಯಲ್ಲಿ ಚಿಲಕ ಹಾಕಿ ನಾನು ಸಾಯುತ್ತೇನೆ ಎಂದಿದ್ದವಳು ಎಲ್ಲಿಯಾದರೂ ಏನಾದರೂ ಮಾಡಿಕೊಂಡರೆ ಯಾರಿಗೆ ಕೆಟ್ಟ ಹೆಸರು ಬರುವುದು?’’ ಅವರಕ್ಕನ ಮಾತು.

ಮತ್ತೆ ಕೋಣೆ ತುಂಬಾ ನಿಶ್ಶಬ್ದ.

‘‘ನೋಡಿ, ನಾನು ಹೀಗೆ ಕಡಕ್ಕಾಗಿ ಮಾತಾಡ್ತೇನೆ ಎಂದು ನೀವು ಬೇಸರ ಮಾಡಬಾರದು. ನೀವು ಎಲ್ಲರೂ ಇಲ್ಲಿಯೇ ಉಳಿಯುವುದಾದರೆ ನನ್ನದೇನು ಅಭ್ಯಂತರವಿಲ್ಲ. ಹಾಗಿದ್ದರೂ ಜನರ ಬಾಯಿಗೆ ನಾವು ಆಹಾರವಾಗುವುದಂತೂ ಖಂಡಿತ. ಒಟ್ಟಾರೆ ಈ ಮನೆಯ ಮಾನ ಉಳಿಯಬೇಕು. ಅದು ನಿಮ್ಮ ಕೈಯಲ್ಲಿದೆ.’’ ಅವರ ಅಕ್ಕನ ಮಾತು.

‘‘ಒಂದೆರಡು ಮೂರು ದಿನ ಸಮಯ ಕೊಡಿ. ನಾವು ಅವಳಿಗೆ ಬುದ್ಧಿ ಹೇಳುತ್ತೇವೆ. ಖಂಡಿತ ಕರೆದುಕೊಂಡು ಹೋಗುತ್ತೇವೆ’’. - ತಾಯಿಯ ಮಾತು.

‘‘ಅಲ್ಲ, ಅವಳಿಗೆ ಇಷ್ಟು ಪ್ರಾಯ ಆಗಿದೆ. ಅಷ್ಟೂ ಬುದ್ಧಿ ಇಲ್ಲವಾ ಅವಳಿಗೆ. ಹಟ ಮಾಡಲಿಕ್ಕೆ ಇದೇನು ಮಕ್ಕಳಾಟವಾ’’ - ಅವರಕ್ಕನ ಮಾತು.

‘‘ಇಲ್ಲ. ಇನ್ನು ಮೂರು ದಿನಕ್ಕಿಂತ ಹೆಚ್ಚು ನಾವು ಈ ಮನೆಯಲ್ಲಿ ಉಳಿಯುವುದಿಲ್ಲ. ನಮ್ಮನ್ನು ನಂಬಿ’’ ಅಮ್ಮನ ಮಾತು.

‘‘ಸರಿ, ನಾನು ಬರುವ ವಾರ ಹೋಗ್ತೇನೆ. ಅದಕ್ಕೆ ಮೊದಲು ನೀವಿಲ್ಲಿಂದ ಹೋಗಬೇಕು’’ ಅವರಕ್ಕನ ಮಾತು.

ಮತ್ತೆ ನನಗೆ ಅಲ್ಲಿ ನಿಲ್ಲಲಾಗಲಿಲ್ಲ. ಕಾಲೆಳೆಯುತ್ತಾ ಬಂದು ಕೋಣೆ ಸೇರಿಕೊಂಡೆ.

ಈ ಮಾತುಗಳನ್ನೆಲ್ಲ ಕೇಳಿದ ನನಗೆ ಏನೂ ಅನಿಸಲಿಲ್ಲ. ಅವರೆಲ್ಲ ಹೇಳುವುದು ಸರಿಯಾಗಿಯೇ ಇದೆ. ಈ ಮನೆಯಲ್ಲಿ ಇರಲಿಕ್ಕೆ ನಾನು ಯಾರು? ನನಗೂ ಈ ಮನೆಗೂ ಏನು ಸಂಬಂಧ? ನಾನು ಹೊರಗಿನಿಂದ ಬಂದವಳು. ಈ ಮನೆಯ ಒಬ್ಬನ ಹೆಂಡತಿಯಾಗಿ ಬಂದವಳು. ಅವರೇ ಇಲ್ಲದ ಮೇಲೆ ನನಗಿಲ್ಲಿ ಏನು ಕೆಲಸ. ಈ ಸಂಬಂಧಗಳೇ ಹೀಗೆ - ವ್ಯವಸ್ಥೆ ಮಾಡಿಟ್ಟ ಸಂಬಂಧಗಳು? ಇಲ್ಲಿ ಭಾವನೆಗಳಿಗೆ ಬೆಲೆಯೇ ಇಲ್ಲ. ಕೊಂಡಿ ಕಳಚಿದರೆ ಮುಗಿಯಿತು. ಮತ್ತೆ ನಾವ್ಯಾರೋ ಅವರ್ಯಾರೋ. ಒಬ್ಬ ಕೆಲಸದವಳಾಗಿ ಈ ಮನೆಯಲ್ಲಿ ಇರಲಿಕ್ಕೂ ನನಗೆ ಅವಕಾಶವಿಲ್ಲ. ಇಷ್ಟರ ತನಕ ಈ ಮನೆಗಾಗಿ ದುಡಿದದ್ದು, ಈ ಮನೆಯವರಿಗಾಗಿ ಸವೆದದ್ದು, ಪ್ರಾರ್ಥಿಸಿದ್ದು, ಅತ್ತದ್ದು ಎಲ್ಲ ಸುಳ್ಳು. ಎಲ್ಲ ಭ್ರಮೆ.

ಆದರೆ ನನಗೆ ಸೋಜಿಗವಾದದ್ದು ನಿನ್ನಜ್ಜನ ವರ್ತನೆ. ಅವರೆಲ್ಲ ಅಷ್ಟೊಂದು ಮಾತನಾಡುತ್ತಿದ್ದರೆ, ನಿನ್ನಜ್ಜನ ಬಾಯಿಯಿಂದ ಒಂದೇ ಒಂದು ಶಬ್ದ ಹೊರ ಬೀಳಲಿಲ್ಲ. ಕಲ್ಲಿನಂತೆ ಬಾಯಿಗೆ ಬೀಗ ಹಾಕಿ ಕುಳಿತಿದ್ದ ಅವರ ವರ್ತನೆ ನೋಡಿ, ಆ ಕ್ಷಣವೇ ನನ್ನ ಹೃದಯ ಒಡೆದು ಚೂರು ಚೂರಾಗಿತ್ತು. ಅವರು ನನ್ನನ್ನು ಹೋಗು ಎಂದರೂ ನನಗೆ ಅಷ್ಟೊಂದು ನೋವಾಗುತ್ತಿರಲಿಲ್ಲ. ಅವರ ಆ ಮೌನ ನನ್ನನ್ನು ಘಾಸಿಗೊಳಿಸಿತ್ತು. ಈ ಲೋಕದಲ್ಲಿ ನನಗಿನ್ನು ಯಾವುದೂ ಬೇಡ ಅನಿಸಿಬಿಟ್ಟಿತ್ತು.

ಅಂದು ರಾತ್ರಿ ನಾನು ಒಂದು ನಿರ್ಧಾರಕ್ಕೆ ಬಂದು ಬಿಟ್ಟೆ. ಇನ್ನು ನಾನು ಈ ಮನೆಯಲ್ಲಿ ಇರಬಾರದು - ಇರುವುದು ಸರಿಯಲ್ಲ. ಈ ಮನೆಯ ಸಂಬಂಧವನ್ನು ಸಂಪೂರ್ಣ ಕಳೆದುಕೊಳ್ಳಬೇಕು. ನಾಳೆ ಒಂದು ದಿನ ಇಲ್ಲಿದ್ದು ಮನೆಯನ್ನೆಲ್ಲ ಶುಚಿಗೊಳಿಸಿ, ನಾಡಿದ್ದು ಹೊರಟು ಬಿಡಬೇಕು. ಈ ನಿರ್ಧಾರ ತೆಗೆದುಕೊಳ್ಳುವಾಗ ನನ್ನ ಹೃದಯ ಬಡಿದುಕೊಳ್ಳಲಿಲ್ಲ. ಮನಸ್ಸು ನೋವಿನಿಂದ ಚೀರಲಿಲ್ಲ. ಕಣ್ಣೀರ ಕೋಡಿ ಹರಿಸಲಿಲ್ಲ. ಯಾಕೆಂದರೆ ಆ ಕ್ಷಣದಿಂದಲೇ ನನ್ನ ಹೃದಯ, ಮನಸ್ಸು, ಭಾವನೆಗಳೆಲ್ಲವೂ ಸತ್ತು ಹೋಗಿತ್ತು. ನಾನು ಕಳೆದು ಹೋಗಿದ್ದೆ. ಈ ಮನೆ, ಈ ಲೋಕದಿಂದಲೇ ನಾನು ಕಳೆದು ಹೋಗಿದ್ದೆ. ಮರುದಿನ ಅಪ್ಪ- ಅಮ್ಮ ಕೋಣೆಗೆ ಬಂದವರು ನನ್ನ ಮುಂದೆ ಕುಳಿತರು.

‘‘ನೋಡಮ್ಮಾ, ನಾವಿನ್ನು ಈ ಮನೆಯಲ್ಲಿರುವುದು ಸರಿಯಲ್ಲ. ನಾಳೆ ಬೆಳಗ್ಗೆ ಹೊರಟು ಬಿಡುವ’’ ಅಮ್ಮ ಹೆದರಿದವರಂತೆ ತಡವರಿಸಿದರು.

ನಾನು ಮಾತನಾಡಲಿಲ್ಲ.

‘‘ನೋಡಮ್ಮಾ, ಇದು ಈ ಮನೆಯ, ಅಬ್ಬುವಿನ ಮಾನದ ಪ್ರಶ್ನೆ. ಗೌರವದ ಪ್ರಶ್ನೆ. ನಾವಿಲ್ಲಿದ್ದರೆ ಎಲ್ಲರಿಗೂ ಕೆಟ್ಟ ಹೆಸರು ಬರಬಹುದು’’ ಅಪ್ಪನ ಮಾತಿನಲ್ಲಿ ನೋವಿತ್ತು. ಈಗಲೂ ನಾನು ಏನೂ ಹೇಳಲಿಲ್ಲ.

ಅಪ್ಪ-ಅಮ್ಮ ಮತ್ತೆ ನನಗೆ ಬುದ್ಧಿ ಹೇಳಿದರು. ನಾನು ಈ ಮನೆಯಲ್ಲಿದ್ದರೆ ಆಗುವ ದುಷ್ಪರಿಣಾಮದ ಬಗ್ಗೆ ಹೇಳಿದರು. ನನಗೊಬ್ಬಳು ಮದುವೆಯಾಗಲಿಕ್ಕೆ ಇರುವ ತಂಗಿಯ ಬಗ್ಗೆ ನೆನಪಿಸಿದರು. ಅವರು ಎಷ್ಟು ಹೇಳಿದರೂ ಏನೂ ಹೇಳಿದರೂ ನಾನು ನನ್ನ ಮೌನ ಮುರಿಯಲಿಲ್ಲ.

ನನ್ನ ಮೌನ ಕಂಡು ಆಕಾಶವೇ ಕಳಚಿ ಬಿದ್ದಂತೆ ಅವರು ತಲೆಯ ಮೇಲೆ ಕೈ ಹೊತ್ತು ಕುಳಿತು ಬಿಟ್ಟರು.

ಅಂದಿಡೀ ನಾನು ಮನೆಯನ್ನೆಲ್ಲ ಶುಚಿಗೊಳಿಸಿದೆ. ಎಲ್ಲ ವಸ್ತುಗಳನ್ನೂ ಒರೆಸಿ, ಶುಚಿಗೊಳಿಸಿ ಜೋಡಿಸಿದೆ. ಮನೆಯ ಕಂಬಗಳು, ಗೋಡೆ, ಕಿಟಕಿ, ಬಾಗಿಲು, ಎಲ್ಲ ವಸ್ತುಗಳ ಜೊತೆ ಮಾತನಾಡಿದೆ. ನನ್ನ ವಿದಾಯವನ್ನು ಹೇಳಿದೆ. ಆನಂತರ ಅಡುಗೆ ಮನೆಗೆ ಬಂದು ವಸ್ತುಗಳನ್ನೆಲ್ಲ ಜೋಡಿಸಿಡುತ್ತಿದ್ದಾಗ ಸಪ್ಪಳವಾದಂತಾಗಿ ತಿರುಗಿ ನೋಡಿದೆ. ನಿನ್ನಜ್ಜನ ಅಕ್ಕ ನಿಂತಿದ್ದರು. ಅವರು ನನ್ನ ಪಕ್ಕ ಬಂದು ತಲೆ ಸವರಿದರು.

‘‘ನೋಡಮ್ಮ, ನಾಳೆ ನೀವೆಲ್ಲ ಹೋಗಬೇಕು. ಇನ್ನು ನೀನು ಈ ಮನೆಯಲ್ಲಿರುವುದು ಸರಿಯಾಗುವುದಿಲ್ಲ. ಎಲ್ಲ ವಿಷಯವನ್ನೂ ನಾನು ನಿನ್ನ ತಂದೆ-ತಾಯಿಗೆ ಹೇಳಿದ್ದೇನೆ. ಅರ್ಥ ಆಯಿತಲ್ಲಾ...’’

ನಾನು ಉತ್ತರಿಸಲಿಲ್ಲ.

ಅಷ್ಟು ಹೇಳಿದ ಅವರು ಹೊರಟು ಹೋದರು. ಅವರ ಒರಟು ಮಾತುಗಳನ್ನು ಕೇಳಿ ನನಗೇನೂ ಅನಿಸಲಿಲ್ಲ.

ಅಂದು ರಾತ್ರಿ ನಾನು ದಿನಾ ಉಡುವ ನಾಲ್ಕೈದು ಬಟ್ಟೆ-ಸೀರೆಗಳನ್ನು ಚೀಲಕ್ಕೆ ತುಂಬಿಸಿಟ್ಟೆ. ಚಿನ್ನ-ಬೆಳ್ಳಿಯ ಒಡವೆಗಳು, ಬೆಲೆಬಾಳುವ ಯಾವ ವಸ್ತುಗಳನ್ನೂ ನಾನು ತೆಗೆದುಕೊಳ್ಳಲಿಲ್ಲ. ಗಂಡನೇ ಇಲ್ಲದ ಮೇಲೆ ನನಗೇಕೆ ಈ ಒಡವೆಗಳು. ಈ ಬೆಲೆ ಬಾಳುವ ವಸ್ತುಗಳು. ಇದನ್ನು ಹಾಕಿ ನನಗೆಲ್ಲಿ ಮೆರೆಯಲಿಕ್ಕಿದೆ. ಅದೆಲ್ಲವನ್ನೂ ಇಲ್ಲೇ ಬಿಟ್ಟು ಹೋಗಲು ನಾನು ನಿರ್ಧರಿಸಿದ್ದೆ.

ನಿನ್ನಜ್ಜ ಇನ್ನೂ ಮನೆಗೆ ಬಂದಿರಲಿಲ್ಲ. ಅವರಲ್ಲಿ ಒಂದು ಮಾತು ಹೇಳಬೇಕು. ಹೇಗೆ ಹೇಳುವುದು? ಅವರ ಮುಂದೆ ನಿಂತು ‘‘ನಾನು ಹೋಗುತ್ತೇನೆ’’ ಎಂದು ಹೇಳಲಿಕ್ಕೆ ನನ್ನಿಂದ ಸಾಧ್ಯವಾಗಬಹುದೇ? ಆದರೂ ಹೇಳಲೇ ಬೇಕು. ಕೊನೆಯ ಮಾತು. ವಿದಾಯ ಮಾತು ಹೇಳಲೇಬೇಕು. ಹೇಳುವುದು ಧರ್ಮ. ಹೃದಯ ಹೇಳಲೇಬೇಕು ಎಂದು ಒತ್ತಾಯಿಸತೊಡಗಿತು. ಅವರಿಗಾಗಿ ಕಾಯತೊಡಗಿದೆ.

 ಸ್ವಲ್ಪ ಸಮಯದ ನಂತರ ಅಜ್ಜ ಬಂದು ಕೋಣೆ ಸೇರಿದ್ದು ಗಮನಿಸಿದೆ. ಬಲಗೈಯಿಂದ ಹೃದಯವನ್ನು ಒತ್ತಿ ಹಿಡಿದುಕೊಂಡು ಅಜ್ಜನ ಕೋಣೆಯ ಬಾಗಿಲಿಗೆ ಬಂದು ನಿಂತೆ. ನನ್ನ ಹೃದಯ ಈಗ ಜೋರಾಗಿ ಬಡಿದುಕೊಳ್ಳತೊಡಗಿತ್ತು. ಆ ಬಡಿತದ ಶಬ್ದವಲ್ಲದೆ ನನಗೀಗ ಬೇರೇನೂ ಕೇಳುತ್ತಿರಲಿಲ್ಲ. ಹಾಗೆಯೇ ನಿಂತವಳು ಒಮ್ಮೆ ಕೆಮ್ಮಿದೆ.

ನಿನ್ನಜ್ಜ ನನ್ನನ್ನು ನೋಡಿದವರೇ ‘‘ಹಾಂ... ಫಾತಿಮಾ.. ಬಾ ಒಳಗೆ...’’ ಎನ್ನುತ್ತಾ ಲಾಟೀನಿನ ದೀಪ ದೊಡ್ಡದು ಮಾಡಿದರು.

ಒಳಗೆ ಹೋಗಲು ನನ್ನ ಕಾಲುಗಳು ಸಹಕರಿಸಲಿಲ್ಲ.

‘‘ಒಳಗೆ ಬಾ...’’ ಅವರು ಮತ್ತೆ ಕರೆದರು. ಆ ಕರೆಯಲ್ಲಿ ಜೇನಿನ ಸಿಹಿಯಿತ್ತು.

ನಾಲ್ಕು ಹೆಜ್ಜೆ ಮುಂದಿಟ್ಟೆ. ಮತ್ತೆ ನನ್ನಿಂದಾಗಲಿಲ್ಲ.

ಈಗ ಅವರೇ ನನ್ನ ಬಳಿ ಬಂದು ನಿಂತು ‘‘ಏನು ಫಾತಿಮಾ’’ ಕೇಳಿದರು.

‘‘ನಾನು ಬೆಳಗ್ಗೆ ಹೋಗ್ತೇನೆ’’ ಅಷ್ಟು ಹೇಳುವಾಗ ನಾನು ಅತ್ತು ಬಿಟ್ಟಿದ್ದೆ.

ನಿನ್ನಜ್ಜ ಮಾತನಾಡಲಿಲ್ಲ. ನನ್ನ ಬಾಯಿಯಿಂದ ಮತ್ತೆ ಮಾತು ಹೊರಡಲಿಲ್ಲ. ಅವರ ಮೌನ ಕಂಡು ನಾನು ಹೊರಡಲು ತಿರುಗಿದೆ.

‘‘ಫಾತಿಮಾ...’’ ಅವರ ಕರೆ ನನ್ನನ್ನು ತಡೆದು ನಿಲ್ಲಿಸಿತ್ತು.

‘‘ಫಾತಿಮಾ, ನಾನು ನಿನ್ನನ್ನು ಹೋಗಲು ಹೇಳಲಿಲ್ಲ.’’

‘‘ಅದು ನನ್ನ ಧರ್ಮ’’

‘‘ನಿನಗೆ ಹೋಗಲೇ ಬೇಕಾ ಫಾತಿಮಾ’’

‘‘ಈ ಮನೆಯ ಕೆಲಸದಾಳಾಗಿರುವ ಭಾಗ್ಯವೂ ದೇವರು ನನಗೆ ಕೊಡಲಿಲ್ಲ’’.

‘‘................’’

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಂವಿಧಾನ -75