ಕಾದಂಬರಿ ಧಾರಾವಾಹಿ-33

Update: 2016-10-12 18:32 GMT

--ಹೊಸ ಉಡುಗೆಗೆ ನಾಚಿಕೆಯ ಮೆರುಗು!--
‘‘ಅಜ್ಜೀ, ಹೇಗಿದ್ದಾಳೆ ನಿಮ್ಮ ಮೊಮ್ಮಗಳು?’’

‘‘ಹೇಗಿದ್ದಾಳೆ ಎಂದರೆ?’’ ಅಜ್ಜಿ ಕಣ್ಣು ಮಿಟುಕಿಸುತ್ತಾ ಕೇಳಿದರು. ‘‘ಮೊಮ್ಮಗಳು ಇಷ್ಟವಾದಳಾಂತ.’’

‘‘ಹೂಂ, ಅವಳು ನನ್ನ ಮೊಮ್ಮಗಳಲ್ಲವಾ’’ ಅಜ್ಜಿಯ ಮಾತಿನಲ್ಲಿ ಹೆಮ್ಮೆಯಿತ್ತು. ‘‘ಅಜ್ಜಿಗೆ ಈಗ ಊಟ ಮಾಡಲಿಕ್ಕೆ ಮೊಮ್ಮಗಳು ಬೇಕು. ತಿಂಡಿ ತಿನ್ನಲಿಕ್ಕೆ ಮೊಮ್ಮಗಳು ಬೇಕು. ಬೆನ್ನು ಉಜ್ಜಲಿಕ್ಕೆ ಮೊಮ್ಮಗಳು ಬೇಕು. ತಲೆ ಕಟ್ಟಲಿಕ್ಕೆ ಮೊಮ್ಮಗಳು ಬೇಕು. ಕಾಲೊತ್ತಲಿಕ್ಕೆ ಮೊಮ್ಮಗಳು ಬೇಕು. ಮದ್ದು ಕುಡಿಸಲಿಕ್ಕೆ ಮೊಮ್ಮಗಳು ಬೇಕು. ಎಲ್ಲದಕ್ಕೂ ಮೊಮ್ಮಗಳು. ಅವಳಿಲ್ಲದೆ ಒಂದು ಕೆಲಸವೂ ಇಲ್ಲ. ಅವಳಿಗೂ ಹಾಗೆ ಅಜ್ಜಿಯೆಂದರೆ ಪ್ರಾಣ. ಬೆಳಗ್ಗೆ ತಿಂಡಿ ತಿಂದು ಇಬ್ಬರೂ ಕೋಣೆಯೊಳಗೆ ಸೇರಿಕೊಂಡರೆ ಮಾತು-ಮಾತು-ಮಾತು. ಅದೇನು ಮಾತಾಡ್ತಾರಾ! ಮತ್ತೆ ಮಧ್ಯಾಹ್ನ ಹೋಗಿ ಊಟಕ್ಕೆ ಕರೆಯಬೇಕು. ಇಲ್ಲದಿದ್ದರೆ ಬರುವುದಿಲ್ಲ. ಅಂತೂ ಮೊಮ್ಮಗಳು ಬಂದ ಮೇಲೆ ಅಜ್ಜಿಯಂತೂ ಗೆಲುವಾಗಿದ್ದಾರೆ.’’ ಐಸು ಅಜ್ಜಿಯನ್ನು ನೋಡಿ ಹೇಳಿದಳು. ಅಜ್ಜಿ ಮಾತನಾಡಲಿಲ್ಲ. ‘‘ಅಜ್ಜಿಗೆ ಹಸಿವಾಗುತ್ತದೇಂತ ಕಾಣುತ್ತೆ. ನಾನು ತಿಂಡಿ ಬಡಿಸುತ್ತೇನೆ’’ ಐಸು ಎದ್ದು ಹೋದಳು. ನಾಸರ್ ಎದ್ದು ಅಜ್ಜಿಯ ಪಕ್ಕ ಹೋಗಿ ಕುಳಿತು ಅವರನ್ನು ತಬ್ಬಿಕೊಂಡು ಅವರ ಕೆನ್ನೆಗೆ ತನ್ನ ಕೆನ್ನೆ ಒತ್ತಿ ಹಿಡಿದು ‘‘ಅಜ್ಜೀ, ನಿಮಗೆ ಮೊಮ್ಮಗಳು ತುಂಬ ಇಷ್ಟನಾ’’ ಕೇಳಿದ.
‘‘ಹೂಂ...’’
‘‘ಅಜ್ಜಿ ಹಳೆಯದನ್ನೆಲ್ಲ ನೆನಪಿಸಿಕೊಳ್ಳಬಾರದು. ಖುಷಿಯಾಗಿರಬೇಕು. ಆಯಿತಾ.’’
‘‘................’’

‘‘ಏಳಿ ಅಜ್ಜಿ ತಿಂಡಿ ತಿನ್ನುವ’’ ಅವನು ಅಜ್ಜಿಯನ್ನು ಎಬ್ಬಿಸಿ ತಬ್ಬಿಕೊಂಡೇ ಬಂದು ಊಟದ ಮೇಜಿನ ಮುಂದೆ ಕುಳ್ಳಿರಿಸಿದ. ನಾಸರ್‌ನ ಪ್ರೀತಿಯಲ್ಲಿ ಅಜ್ಜಿ ಮಗುವಿನಂತಾಗಿದ್ದರು. ಮುಖ ತೊಳೆದು ಕೋಣೆಗೆ ಬಂದ ತಾಹಿರಾ ಬಟ್ಟೆ ಬದಲಿಸಿ ಕನ್ನಡಿಯ ಮುಂದೆ ನಿಂತಳು. ಅವಳು ತಿರುಗಿ, ಬಗ್ಗಿ, ಸರಿದು ಮತ್ತೆ ಮತ್ತೆ ತನ್ನ ದೇಹವನ್ನು ನೋಡಿದಳು. ಹೌದು, ನಾಸರ್ ಹೇಳಿದ್ದು ನಿಜ. ನಾನೀಗ ದಪ್ಪಗಾಗಿದ್ದೇನೆ. ಬಿಳಿಯಾಗಿದ್ದೇನೆ. ಸುಂದರಿಯಾಗಿದ್ದೇನೆ. ಆಳೆತ್ತರದ ಕನ್ನಡಿಯ ಮುಂದೆ ನಿಂತಿದ್ದವಳು ತನ್ನನ್ನು ತಲೆಯಿಂದ ಪಾದದವರೆಗೂ ಸೂಕ್ಷ್ಮವಾಗಿ ನೋಡುತ್ತಾ ಹಾಗೆಯೇ ನಿಂತು ಬಿಟ್ಟಿದ್ದಳು. ‘‘ತಾಹಿರಾ, ಬಾ ತಿಂಡಿ ತಿನ್ನು. ಅಜ್ಜಿ ಕಾಯುತ್ತಾ ಇದ್ದಾರೆ.’’ ನಾಸರ್‌ನ ಕರೆ. ಒಮ್ಮೆಲೆ ಬೆಚ್ಚಿ ಬಿದ್ದಂತಾಗಿ ತಾಹಿರಾ ತಿರುಗಿ ನೋಡಿದಳು. ಕೋಣೆಯಲ್ಲಿ ಯಾರೂ ಕಾಣಲಿಲ್ಲ. ಕನ್ನಡಿ ನೋಡಿದವಳ ಮುಖ ನಾಚಿಕೆಯಿಂದ ಕೆಂಪೇರತೊಡಗಿತ್ತು. ಮತ್ತೆ ಕನ್ನಡಿಗೆ ಮುತ್ತೊಂದನ್ನಿತ್ತು ಕೋಣೆಯ ಬಾಗಿಲಿಗೆ ಬಂದಳು. ಊಟದ ಮೇಜಿನ ಮುಂದೆ ಅಜ್ಜಿ, ನಾಸರ್ ಕುಳಿತಿದ್ದರು. ನಾಸರ್‌ನನ್ನು ನೋಡಿದ ಅವಳ ಹೆಜ್ಜೆ ಮತ್ತೆ ನಿಧಾನವಾಯಿತು. ತಿಂಡಿಯ ತಟ್ಟೆಗಳನ್ನು ತಂದ ಐಸು ಬಾಗಿಲಲ್ಲಿ ನಿಂತಿರುವ ತಾಹಿರಾಳನ್ನು ಕಂಡು ‘‘ಬಾ. ಇವತ್ತು ಎಲ್ಲ ಒಟ್ಟಿಗೆ ತಿಂಡಿ ತಿನ್ನೋಣ’’ ಎಂದು ಅವಳನ್ನು ಕರೆದಳು. ಅವಳ ಕಾಲು ಮುಂದಡಿ ಇಡಲಿಲ್ಲ. ಅವಳು ನಿಂತೇ ಇದ್ದಳು. ಐಸು ಹೋಗಿ ಅವಳನ್ನು ಎಳೆದುಕೊಂಡು ಬಂದು ಅಜ್ಜಿಯ ಪಕ್ಕ ಕುಳ್ಳಿರಿಸಿ, ತಾನು ಮಗನ ಬಳಿ ಕುಳಿತಳು. ತನಗೆದುರಾಗಿ ನಾಸರ್ ಕುಳಿತಿರುವುದರಿಂದ ಮುಜುಗರವಾಗಿ ತಲೆಕೆಳಗೆ ಹಾಕಿ ಕುಳಿತವಳು, ಬೇಗ ಬೇಗನೆ ತಿನ್ನತೊಡಗಿದಳು. ಐಸು ಮತ್ತೆ ಮತ್ತೆ ಬಡಿಸಿದಳು. ‘‘ಎಂತ ನಾಚಿಕೆ ಇದು ನಿನ್ನದು. ಇಷ್ಟು ಓದಿದ್ದೀ. ಪಟ್ಟಣದಲ್ಲಿರುವ ಹುಡುಗಿಯರು ಇಷ್ಟೊಂದು ನಾಚಿಕೊಳ್ಳುತ್ತಾರಾ... ತಿನ್ನು’’ ಐಸುಗೆ ಅವಳ ಮುಖ ಕೆಂಪಗಾಗಿದ್ದು ಕಂಡು ಆಶ್ಚರ್ಯವಾಗಿತ್ತು. ಹೌದು, ನಾನೇಕೆ ನಾಚಿಕೊಳ್ಳಬೇಕು. ಎಷ್ಟೊಂದು ಹುಡುಗರನ್ನು ನಾನು ನೋಡಿಲ್ಲ.

ಮಾತನಾಡಿಸಿಲ್ಲ. ಕಾಲೇಜಿನಲ್ಲಿ ಓದಿ, ಓಡಾಡಿ, ಬೆರೆತವಳು ನಾನು. ಆದರೆ ಇವನನ್ನು ನೋಡುವಾಗ ನನ್ನ ಹೃದಯವೇಕೆ ಬಡಿದುಕೊಳ್ಳುತ್ತಿದೆ. ನನ್ನ ಮನಸ್ಸೇಕೆ ತೊಯ್ದಿಡುತ್ತಿದೆ. ಅವಳು ಮನಸ್ಸಿನಲ್ಲಿಯೇ ಯೋಚಿಸಿದವಳು ತಲೆ ಎತ್ತಿ ಅವನತ್ತ ನೋಡಿದಳು. ಅವನ ಕಣ್ಣುಗಳು ಅವಳನ್ನೇ ನೋಡುತ್ತಿದ್ದವು. ಆ ಕಣ್ಣುಗಳಲ್ಲಿ ಮೆಚ್ಚುಗೆಯಿತ್ತು. ಸಂಭ್ರಮವಿತ್ತು. ಅವಳಿಗೆ ಮತ್ತೆ ಅಲ್ಲಿ ಕುಳಿತುಕೊಳ್ಳಲಾಗಲಿಲ್ಲ. ಬೇಗ ಬೇಗ ತಿಂದು, ನೀರು ಕುಡಿದು ಎದ್ದು ಬಿಟ್ಟಳು. ‘‘ಹೋಗು ಕೈ ತೊಳೆದು ಬಾ, ನಾಸರ್ ಎಲ್ಲರಿಗೂ ಹಬ್ಬಕ್ಕೆ ಬಟ್ಟೆ ತಂದಿದ್ದಾನೆ, ನೋಡುವಾ...’’ ಐಸು ಹೇಳಿದಳು. ಕೈ ತೊಳೆದು ಬಂದವಳನ್ನು ಅಜ್ಜಿಯ ಕೋಣೆಗೆ ಕರೆತಂದು ಕುಳ್ಳಿರಿಸಿದ ಐಸು, ತಾನು ಅಲ್ಲೇ ಅಜ್ಜಿ ಪಕ್ಕ ಕುಳಿತಳು. ನಾಸರ್ ತನ್ನ ಬ್ಯಾಗನ್ನು ಎಳೆದುಕೊಂಡು ಬಂದು ಮಂಚದ ಮೇಲಿಟ್ಟು ಬಿಡಿಸಿದ. ಬ್ಯಾಗಿನ ತುಂಬಾ ಹೊಸ ಬಟ್ಟೆಗಳು!


ಮೊದಲು ಒಂದು ಸೀರೆಯನ್ನು ಬ್ಯಾಗ್‌ನಿಂದ ತೆಗೆದ ಅವನು ‘‘ಇದು ನನ್ನ ಅಜ್ಜಿಗೆ’’ ಎಂದು ಅಜ್ಜಿಯ ಕೈಗೆ ಕೊಟ್ಟು ಅವರ ಹಣೆಗೊಂದು ಮುತ್ತು ಕೊಟ್ಟ. ಮತ್ತೊಂದನ್ನು ತೆಗೆದು ತನ್ನ ತಾಯಿಗೆ ಕೊಟ್ಟ. ಮತ್ತೆ ಅಜ್ಜಿಯ ಎಲ್ಲ ಮಕ್ಕಳಿಗೆ, ಮೊಮ್ಮಕ್ಕಳಿಗೆ, ಅಳಿಯಂದಿರಿಗೆ ಒಂದೊಂದೇ ಬಟ್ಟೆ, ಸೀರೆ ತೆಗೆದು ಅಜ್ಜಿಗೆ ತೋರಿಸುತ್ತಾ ತಾಯಿಯ ಕೈಗೆ ಕೊಟ್ಟನು. ತಾಹಿರಾ ಕಣ್ಣಗಲಿಸಿ ನೋಡುತ್ತಿದ್ದಳು. ಇಷ್ಟೊಂದು ಜನರಿಗೆ ಇಷ್ಟೊಂದು ಬಟ್ಟೆಗಳನ್ನು ಹೊತ್ತು ತಂದಿದ್ದಾನಲ್ಲಾ ಎಂದು ಅವಳಿಗೆ ಆಶ್ಚರ್ಯವಾಗಿತ್ತು. ಅವಳ ನೋಟದಲ್ಲಿ ಮೆಚ್ಚುಗೆಯಿತ್ತು. ‘‘ನೋಡಮ್ಮಾ, ಇದೊಂದು ಸೀರೆ’’ ನಾಸರ್ ಒಂದು ಸೀರೆಯನ್ನು ತೆಗೆದು ಬಿಡಿಸಿದ. ಹಾಲು ಬಿಳುಪು ಸೀರೆಗೆ ಬಂಗಾರದ ಬಣ್ಣದ ತೆಳು ಅಂಚು. ಅದೇ ಬಣ್ಣದ ಸೆರಗು. ಸೀರೆ ನೋಡುತ್ತಿದ್ದಂತೆಯೇ ಮೂವರ ಕಣ್ಣುಗಳೂ ಬೆಳಗಿದವು. ‘‘ತುಂಬಾ ಚೆನ್ನಾಗಿದೆ ಸೀರೆ.’’ ಮೂವರ ಬಾಯಿಗಳೂ ಒಟ್ಟಿಗೆ ಮಾತನಾಡಿದವು. ‘‘ಈ ಸೀರೆಯನ್ನು ಆರಿಸಲು ನಾನು ಎಷ್ಟು ಕಷ್ಟ ಪಟ್ಟೆ ಗೊತ್ತಾ ಅಮ್ಮ. ಕಡಿಮೆ ಎಂದರೂ ಒಂದು ವಾರ ಸುತ್ತಾಡಿದ್ದೇನೆ.’’ ನಾಸರ್ ಹೇಳಿದ. ‘‘ಯಾರಿಗೆ ಈ ಸೀರೆ?’’ ಐಸು ಕೇಳಿದಳು. ‘‘ಇದು ನನ್ನ ಅಜ್ಜಿಯ ಪ್ರೀತಿಯ ಮೊಮ್ಮಗಳಿಗೆ, ನಿನ್ನ ಈ ಸೊಸೆಗೆ.’’


ತಾಹಿರಾಳಿಗೆ ಎದೆಯೊಳಗಿನ ತಂತಿಯನ್ನು ಯಾರೋ ಮೀಟಿದಂತಾಗಿ ಕ್ಷಣ ಹೊತ್ತು ಹಾಗೆಯೇ ನಿಂತುಬಿಟ್ಟಳು. ‘‘ನನಗೆ ಸೀರೆ! ನಾನು ಸೀರೆ ಉಡುವುದಿಲ್ಲ’’ ಅವಳಿಗರಿವಿಲ್ಲದೆ ಅವಳ ಬಾಯಿಯಿಂದ ಮಾತು ಹೊರಬಿತ್ತು. ಅಷ್ಟರಲ್ಲೇ ಆತ ಅದರ ಸೆರಗನ್ನು ಬಿಡಿಸಿ ಅವಳ ಹೆಗಲಿಗೆ ಹೊದಿಸಿ ಬಿಟ್ಟಿದ್ದ ‘‘ಹೇಗೆ ಕಾಣ್ತಾಳೆ ಅಜ್ಜಿ...’’ ಆತ ಕೇಳಿದ. ಅಜ್ಜಿಯ ಮುಖದ ತುಂಬ ನಗು. ತಾಹಿರಾ ಗೊಂಬೆಯಂತೆ ನಿಂತು ಬಿಟ್ಟಿದ್ದಳು. ‘‘ಅಮ್ಮ ಈ ಸೀರೆ ಇವಳಿಗೆ ಒಪ್ಪುತ್ತಾ.’’

‘‘ತುಂಬಾ ಚೆನ್ನಾಗಿ ಒಪ್ಪುತ್ತದೆಯ ಪ್ಪಾ’’ ಐಸುಳ ಮುಖ ಸಂತೋಷ ದಿಂದ ಬಿರಿಯಿತು. ‘‘ಹಬ್ಬದ ದಿನ ನೀನು ಈ ಸೀರೆ ಉಡಬೇಕು’’ ಎನ್ನುತ್ತಾ ನಾಸರ್ ಅವಳ ದೇಹದಿಂದ ಸೀರೆ ತೆಗೆದು ಮಡಚಿಟ್ಟ.
ತಾಹಿರಾ ಮಾತನಾಡಲಿಲ್ಲ.


ಮತ್ತೊಂದು ಚೂಡಿದಾರ ತೆಗೆದು ಅಜ್ಜಿಯ ಕೈಗಿಟ್ಟ. ತಿಳಿ ಗುಲಾಬಿ ಬಣ್ಣದ ಅದರ ಮೈತುಂಬಾ ಬಂಗಾರದ ಬಣ್ಣದ ಕುಸುರಿ ‘‘ಇದ್ಯಾರಿಗೋ?’’ ಐಸು ಕೇಳಿದಳು.
‘‘ಸೀರೆ ಉಡದ ಅಜ್ಜಿಯ ಮೊಮ್ಮಗಳಿಗೆ.’’

ಅಜ್ಜಿಯ ಕೈಯಿಂದ ಚೂಡಿದಾರ ತೆಗೆದುಕೊಂಡ ಐಸು ಅದನ್ನು ತಾಹಿರಾಳ ಭುಜಕ್ಕೆ ಹೊದಿಸಿದವಳು ಮತ್ತೆ ಮತ್ತೆ ನೋಡಿದಳು. ‘‘ತುಂಬಾ ಒಪ್ಪುತ್ತೆ, ರಾಣಿಯಂತೆ ಕಾಣುತ್ತಾಳೆ ನನ್ನ ಮಗಳು.’’

ನಾಸರ್ ಅವಳ ಸೌಂದರ್ಯವನ್ನು ತನ್ನ ಕಣ್ಣೊಳಗೆ ತುಂಬಿಸಿಕೊಳ್ಳುತ್ತಾ ಕಂಬದಂತೆ ನಿಂತಿದ್ದ. ತಾಹಿರಾಳ ಕಣ್ಣುಗಳು ಒದ್ದೆಯಾಗಿತ್ತು. ಅವರೆಲ್ಲರ ಪ್ರೀತಿಯ ನೆರೆಯಲ್ಲಿ ಅವಳು ಕೊಚ್ಚಿಹೋಗಿ ಬಿಟ್ಟಿದ್ದಳು.


‘‘ಸಂಜೆ ದರ್ಜಿಯನ್ನು ಬರ ಹೇಳಬೇಕು. ಸೀರೆಗಳ ಅಂಚುಗಳಿಗೆಲ್ಲ ಹೊಲಿಗೆ ಹಾಕಿಸಬೇಕು. ರವಕೆ, ಅಜ್ಜಿಯ ಕುಪ್ಪಸ ಹೊಲಿಯಲು ಕೊಡಬೇಕು’’ ಎನ್ನುತ್ತಾ ಐಸು ಬಟ್ಟೆಗಳನ್ನೆಲ್ಲ ಬ್ಯಾಗಿಗೆ ತುಂಬಿಸತೊಡಗಿದಳು. ತಾಹಿರಾ ಮೂಕಳಾಗಿ ಬಿಟ್ಟಿದ್ದಳು. ಕಾಲೆಳೆಯುತ್ತಾ ಒಂಟಿಯಾಗಿ ಕೋಣೆಯಿಂದ ಹೊರಬಂದು ಚಾವಡಿಯಲ್ಲಿ ನಡೆಯುತ್ತಿದ್ದಂತೆಯೇ ‘ತಾಹಿರಾ’ ನಾಸರ್‌ನ ಕರೆ ಅವಳನ್ನು ತಡೆದು ನಿಲ್ಲಿಸಿತು. ಅವಳು ತಿರುಗಿದಳು. ನಾಸರ್ ತಾಯಿಯ ಭುಜ ಹಿಡಿದು ಅವಳ ಎದುರು ನಿಂತಿದ್ದ. ‘‘ಯಾಕಮ್ಮಾ, ನಿನ್ನ ಕಣ್ಣಲ್ಲಿ ನೀರು?’’ ಐಸು ಆತಂಕದಿಂದ ಕೇಳಿದಳು. ತಾಹಿರಾ ಅಂಗೈಯಿಂದ ಕಣ್ಣೊರೆಸಿಕೊಳ್ಳುತ್ತಾ ‘‘ಏನಿಲ್ಲ’’ ಎಂಬಂತೆ ತಲೆಯಾಡಿಸಿದಳು. ‘‘ಮತ್ತೆ! ಏನಾದರೂ ಬೇಜಾರಾಯಿತಾ?’’

‘‘ಇಲ್ಲ’’ ತಾಹಿರಾ ಮತ್ತೆ ತಲೆಯಾಡಿಸಿದಳು. ‘‘ಮತ್ತೇಕೆ ಕಣ್ಣೀರು?’’

ತಾಹಿರಾಳಿಗೆ ಮತ್ತೆ ತಡೆಯಲಾಗಲಿಲ್ಲ. ಐಸುಳನ್ನು ತಬ್ಬಿ ಹಿಡಿದು ಅವಳ ಹೆಗಲ ಮೇಲೆ ತಲೆ ಇಟ್ಟು ಬಿಕ್ಕತೊಡಗಿದಳು. ಅವಳ ಅಳು ನೋಡಿ ಇಬ್ಬರೂ ಕಕ್ಕಾಬಿಕ್ಕಿಯಾಗಿದ್ದರು. ನಾಸರ್ ತಲೆ ಕೆಳಗೆ ಹಾಕಿ ತನ್ನ ಕೋಣೆ ಸೇರಿದರೆ, ಐಸು ಅವಳನ್ನು ತಬ್ಬಿಕೊಂಡು ಅವಳ ಕೋಣೆಗೆ ನಡೆದಳು. ಮಂಚದಲ್ಲಿ ಕುಳ್ಳಿರಿಸಿ ತನ್ನ ಸೆರಗಿನಿಂದ ಅವಳ ಕಣ್ಣು ಮುಖ ಒರೆಸಿದಳು. ‘‘ಯಾಕಮ್ಮ ಅತ್ತದ್ದು. ಸೀರೆ ನಿನಗೆ ಬೇಡವಾ?’’ ಐಸುಗೆ ಅವಳ ಅಳು ಅರ್ಥವಾಗಿರಲಿಲ್ಲ. ‘‘ಅದಕ್ಕಲ್ಲ ಮಾಮಿ’’
‘‘ಮತ್ಯಾಕೆ?’’

‘‘ನನಗೆ ಬುದ್ಧಿ ಬಂದ ಮೇಲೆ ಈ ತನಕ ಒಂದು ಕರ್ಚೀಪು ಕೂಡಾ ಯಾರೂ ತಂದು ಕೊಟ್ಟಿರಲಿಲ್ಲ. ಏನು ಬೇಕಿದ್ದರೂ ಅಮ್ಮ ದುಡ್ಡು ಕೊಡುತ್ತಿದ್ದರು. ನಾನೇ ಗೆಳತಿಯರೊಂದಿಗೆ ಹೋಗಿ ಖರೀದಿಸುತ್ತಿದ್ದೆ. ಇಂದು ಇದು ನನಗೆ ಹೊಸ ಅನುಭವ. ಒಬ್ಬರು ಪ್ರೀತಿಯಿಂದ ನಮಗೆ ತಂದು ಕೊಡುವುದಕ್ಕೂ, ನಾವೇ ಹೋಗಿ ದುಡ್ಡು ಕೊಟ್ಟು ಖರೀದಿಸುವುದಕ್ಕೂ ಇರುವ ವ್ಯತ್ಯಾಸ ಈ ದಿನ ನನಗೆ ತಿಳಿಯಿತು. ಇನ್ನೊಬ್ಬರನ್ನು ಖುಷಿಪಡಿಸಬೇಕು ಎಂಬ ನಿಮ್ಮೆಲ್ಲರ ಕಾಳಜಿ, ಆ ಮೂಲಕ ನೀವು ಪಡುತ್ತಿರುವ ಸುಖ, ಸಂತೋಷ, ನಿಮ್ಮೆಲ್ಲರ ಒಳ್ಳೆಯ ಮನಸ್ಸು, ಈ ಮನೆ ತುಂಬಾ ತುಳುಕುತ್ತಿರುವ ಪ್ರೀತಿ ನೋಡಿ ಅತ್ತು ಬಿಟ್ಟೆ ಮಾಮಿ ನಾನು’’ ಅಷ್ಟು ಹೇಳಿದ ತಾಹಿರಾ ಐಸುಳ ಮಡಿಲಲ್ಲಿ ತಲೆ ಇಟ್ಟು ಬಿದ್ದುಕೊಂಡಳು. ಐಸು ಮಾತನಾಡಲಿಲ್ಲ. ಎತ್ತಲೋ ನೋಡುತ್ತಿದ್ದವಳ ಕೈ ತಾಹಿರಾಳ ತಲೆಯನ್ನು ಸವರುತ್ತಿತ್ತು. ಈಗ ಅವಳ ಹೃದಯ ತುಂಬಿಬಂದು ಕಣ್ಣು ಮಂಜಾಗತೊಡಗಿತ್ತು. ‘‘ಏನಂತಮ್ಮಾ ನಿನ್ನ ಸೊಸೆದ್ದು?’’ ಅವರ ಮಾತನ್ನೆಲ್ಲ ಕೇಳಿಸಿಕೊಂಡಿದ್ದ ನಾಸರ್ ಒಳಗೆ ಹೋಗಿ ಅಮ್ಮನ ಪಕ್ಕ ಕುಳಿತ. ತಾಹಿರಾ ದಡಕ್ಕನೆ ಎದ್ದು ಕುಳಿತಳು. ‘‘ಏನಿಲ್ಲ, ಅವಳಿಗೆ ನೀನು ತಂದ ಸೀರೆ ಇಷ್ಟವಾಗಲಿಲ್ಲವಂತೆ’’ ಐಸು ತಾಹಿರಾಳ ಕೆನ್ನೆ ಚಿವುಟಿ ನಗುತ್ತಾ ಹೇಳಿದಳು. ‘‘ಹಾಗಲ್ಲ’’ ತಾಹಿರಾ ತನ್ನೆರಡು ಅಂಗೈಯನ್ನು ರೆಕ್ಕೆಯಂತೆ ಆಡಿಸುತ್ತಾ ಕಣ್ಣು ಬಾಯಿ ಅಗಲಿಸುತ್ತಾ ಹೇಳಿದಳು. ‘‘ಮತ್ತೆ ಹೇಗೆ?’’ ನಾಸರ್ ಅವಳ ಮುಖ ನೋಡಿದ. ಆ ಮುಖ ಕೆಂಪಾಗಿತ್ತು. ಕಣ್ಣ ರೆಪ್ಪೆಗಳು ಜೋರಾಗಿ ಬಡಿದುಕೊಳ್ಳುತ್ತಿತ್ತು. ನಾಸರ್ ಜೋರಾಗಿ ನಕ್ಕ. ಅವನ ಜೊತೆ ಐಸು ನಕ್ಕಳು. ತಾಹಿರಾ ನಾಚಿಕೆಯಿಂದ ಮಾಮಿಯ ಸೆರಗಿನಿಂದ ಮುಖ ಮುಚ್ಚಿಕೊಂಡಳು.
ಆನಂತರ ನಾಸರ್ ಅವಳನ್ನು ನೋಡುವ, ಅವಳ ಜೊತೆ ಮಾತನಾಡುವ ಯಾವ ಸಂದರ್ಭವನ್ನೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಮತ್ತೆ ಮತ್ತೆ ಮಾತನಾಡ ಬೇಕೆಂಬ ಆಸೆ ಅವನಲ್ಲಿ ಚಿಗುತುಕೊಳ್ಳತೊಡಗಿತ್ತು.
(ರವಿವಾರದ ಸಂಚಿಕೆಗೆ)

Writer - ಮುಹಮ್ಮದ್ ಕುಳಾಯಿ

contributor

Editor - ಮುಹಮ್ಮದ್ ಕುಳಾಯಿ

contributor

Similar News