ಜೀವಕೋಶ ವಿಜ್ಞಾನಿ ಯೋಷಿನೋರಿ ಓಸುಮಿಗೆ ನೊಬೆಲ್ ಪ್ರಶಸ್ತಿ

Update: 2016-10-22 18:10 GMT

‘‘ಕೋಡಗನ ಕೋಳಿ ನುಂಗಿತ್ತಾ

ನೋಡವ್ವಾ ತಂಗಿ ಕೋಡಗನ ಕೋಳಿ ನುಂಗಿತ್ತಾ

ಆಡು ಆನೆಯ ನುಂಗಿ

ಗೋಡೆ ಸುಣ್ಣವ ನುಂಗಿ ... ... ... ... ...

ಮೆಲ್ಲಲು ಬಂದ ಮುದುಕಿಯನ್ನು ನೆಲ್ಲು ನುಂಗಿತ್ತಾ ತಂಗಿ’’

ಸಂತ ಶಿಶುನಾಳ ಶರೀಫರ ಅತ್ಯಂತ ಜನಪ್ರಿಯ ಹಾಡು ಇದು. ಇಲ್ಲಿ ಕೋಡಗ (ಕೋತಿ)ನನ್ನು ಕೋಳಿ ನುಂಗುತ್ತದೆ. ಆನೆಯನ್ನು ಆಡು ನುಂಗುತ್ತದೆ. ಗೋಡೆಯು ಸುಣ್ಣವ ನುಂಗುತ್ತದೆ. ಮೆಲ್ಲಲು ಬಂದ ಮುದುಕಿಯನ್ನು ಭತ್ತವೇ ನುಂಗುತ್ತದೆ. ಎಲ್ಲವೂ ಪರಮಾಶ್ಚರ್ಯ. ಯೋಚನೆ, ವಿವೇಚನೆಗೆ ನಿಲುಕದವು. ಅವು ಸಂತರು ಕೊಟ್ಟ ರೂಪಕಗಳು. ಅವುಗಳಿಗೆ ಹಲವಾರು ಅರ್ಥಾಲಂಕಾರಗಳಿರುತ್ತವೆ. ಅವು ಸ್ವಾಗತಾರ್ಹ ರೂಪಕಗಳು. ಸಾಮಾಜಿಕವಾಗಿ ಅವುಗಳಿಗೆ ವಿವಿಧ ಆಯಾಮಗಳಿರುತ್ತವೆ.

‘ಅಟೋಫೇಜಿ’ಗೆ ನೊಬೆಲ್ ಪ್ರಶಸ್ತಿ

 ‘ಅಟೋಫೇಜಿ’ ಎಂದರೆ ಸ್ವಯಂ-ನುಂಗುವಿಕೆ. ದೇಹದ ಪ್ರತಿ ಜೀವಕೋಶದೊಳಗಿನ ಇಂತಹ ನುಂಗುವ ಕ್ರಿಯೆಗೆ ಈ ಸಾಲಿನ ವೈದ್ಯಕೀಯ ನೊಬೆಲ್ ಪ್ರಶಸ್ತಿ ದಕ್ಕಿದೆ. ಪ್ರತಿ ಜೀವಕೋಶದ ಒಳಗೆ ನಡೆಯುವ ‘ಆಟೋಫೇಜಿ’ ಯ ಕುರಿತು ಸಂಶೋಧನೆ ನಡೆಸಿ ಎಲ್ಲಾ ವಿವರಗಳನ್ನು ಜಗಕೆ ತೋರಿಸಿಕೊಟ್ಟ ಜಪಾನಿನ ಜೀವಕೋಶ ವಿಜ್ಞಾನಿ ಯೋಷಿನೋರಿ ಓಸುಮಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಎಪ್ಪತ್ತೊಂದು ವರ್ಷ ವಯಸ್ಸಿನ ಓಸುಮಿಯವರು ಪ್ರಸ್ತುತ ಜಪಾನಿನ ಟೋಕಿಯೋ ಇನ್‌ಸ್ಟ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರಾಧ್ಯಾಪಕರು. ಲೈಸೋಸೋಮ್ ಎಂಬ ಸಣ್ಣ ಜೀವಕೋಶಾಂಗ ಇತರ ದೊಡ್ಡ ಗಾತ್ರದ ಕೋಶಾಂಗಗಳನ್ನು ಹಾಗೂ ತ್ಯಾಜ್ಯ ವಸ್ತುಗಳನ್ನು ನುಂಗಿಹಾಕುತ್ತದೆ. ಲೈಸೋಸೋಮಿನ ಗಾತ್ರ 0.1ರಿಂದ 1.2 ಮೈಕ್ರಾನ್‌ಗಳಷ್ಟೆ. ಇದು ವಯಸ್ಸಾದ 3 ಮೈಕ್ರಾನ್‌ಗಳವೆರೆಗಿನ ಮೈಟೋಖಾಂಡ್ರಿಯಾ, 2.5 ಮೈಕ್ರಾನ್‌ಗಳವರೆಗಿನ ಎಂಡೋಪ್ಲಾಸ್ಮಿಕ್ ರೆಟಿಕ್ಯುಲುಮ್ ಹಾಗೂ 1.5 ಮೈಕ್ರಾನ್‌ಗಳವರೆಗಿನ ಪೆರಾಕ್ಸಿಸೋಮ್‌ಗಳನ್ನು ನುಂಗಿಹಾಕುತ್ತದೆ. ಆಡು ಆನೆಯನ್ನು ನುಂಗಿದಂತೆ. ಸಾಮಾನ್ಯ ಓದುಗರಿಗೆ ಅರ್ಥವಾಗಲು ಇದೊಂದು ಕ್ಲಿಷ್ಟಕರ ವಿಷಯ. ಆದ್ದರಿಂದ, ಅದನ್ನು ಸರಳೀಕರಿಸಿ ಓದುಗರ ಮುಂದಿಡುವ ಪ್ರಯತ್ನವಿದು.

ಸ್ವಚ್ಛಕೋಶ ಅಭಿಯಾನ

ಜೀವಕೋಶಗಳಲ್ಲಿ ಚಯಾಪಚಯ ಕ್ರಿಯೆಗಳು ನಿರಂತರ ವಾಗಿ ನಡೆಯುತ್ತಿರುತ್ತವೆ. ಹಾಗೆ ನಡೆದಾಗ ಹಲವಾರು ತ್ಯಾಜ್ಯ ವಸ್ತುಗಳು ಉತ್ಪತ್ತಿಯಾಗುತ್ತವೆ. ಆ ತ್ಯಾಜ್ಯವಸ್ತುಗಳನ್ನು ಕೋಶದೊಳಗೆ ಕ್ರೋಡೀಕರಿಸಿ ಅದಕ್ಕೊಂದು ಕವಚವನ್ನು ನಿರ್ಮಿಸಲಾಗುತ್ತದೆ. ತ್ಯಾಜ್ಯ ವಸ್ತುಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡ ತುಸು ದೊಡ್ಡದಾದ ಆ ಫೇಗೋಫೋರ್ ಎಂಬ ಕವಚವು ಲೈಸೋಸೋಮ್ ಎಂಬ ಚಿಕ್ಕ ಕೋಶಾಂಗದೊಳಕ್ಕೆ ನುಗ್ಗಿಕೊಳ್ಳುತ್ತದೆ. ಈ ಚಿಕ್ಕ ಲೈಸೋಸೋಮ್‌ಗಳಲ್ಲಿ ಹೈಡ್ರೋಲೈಟಿಕ್ ಕಿಣ್ವಗಳಿರುತ್ತವೆ. ಅವು ಬಲಾಢ್ಯ ಕಿಣ್ವಗಳು. ಇತರ ವಸ್ತುಗಳನ್ನು ಜೀರ್ಣಿಸುವ ಕಿಣ್ವಗಳು. ಕವಚದೊಳಗಿನ ತ್ಯಾಜ್ಯವಸ್ತುಗಳನ್ನು ಜೀರ್ಣಕ್ರಿಯೆಗೊಳಪಡಿಸಿ ಕೋಶಗಳನ್ನು ಸ್ವಚ್ಛವಾಗಿರಿಸುತ್ತವೆ. ಇದೊಂದು ರೀತಿಯ ‘ಸ್ವಚ್ಛಕೋಶ ಅಭಿಯಾನ’ ಅರ್ಥಾತ್ ‘ನಿರ್ಮಲಕೋಶ ಅಭಿಯಾನ’. ಹೇಗೆಂದರೆ, ಸ್ವಚ್ಛ ಭಾರತ ಅಭಿಯಾನದಂತೆ ಅಥವಾ ಅದಕ್ಕೂ ಮೊದಲಿದ್ದ ‘ನಿರ್ಮಲ ಭಾರತ’ ಅಭಿಯಾನದಂತೆ.

ಪಿತ್ತಜನಕಾಂಗ, ಹೃದಯ, ಮೆದುಳು, ಮೂತ್ರಕೋಶ ಮುಂತಾದ ದೇಹದ ಅಂಗಾಂಗಗಳಲ್ಲಿ ಆಟೋಫೇಜಿ ನಡೆಯುತ್ತಿರುತ್ತದೆ. ಆ ಮೂಲಕ ಶರೀರದ ಎಲ್ಲಾ ಕೋಶಗಳೂ ಸ್ವಚ್ಛಕೋಶಗಳಾಗುತ್ತವೆ.

ಲೈಸೋಸೋಮ್ ಎಂಬ ಕೋಶಾಂಗಗಳು ಜೀವಕೋಶದೊಳಗಿನ ವಿಷಯುಕ್ತ ಪ್ರೊಟೀನ್, ನಿರುಪಯುಕ್ತ ಸಂಕೀರ್ಣ ವಸ್ತುಗಳು ಮತ್ತು ಮೈಟೋಖಾಂಡ್ರಿಯಾ, ಮೈಕ್ರೋಬಾಡೀಸ್, ಎಂಡೋಪ್ಲಾಸ್ಮಿಕ್ ರೆಟಿಕ್ಯುಲಮ್‌ನಂತಹ ವಯಸ್ಸಾದ ಹಾಗೂ ಘಾಸಿಗೊಂಡ ಕೋಶಾಂಗಗಳನ್ನು ನುಂಗಿಹಾಕುತ್ತವೆ. ಹೊಸ ವಸ್ತುಗಳಿಗೆ ಸ್ಥಳಾವಕಾಶ ಮಾಡಿಕೊಡಲು ಇಂತಹ ಜೀವಕೋಶ ಕ್ರಿಯೆಗಳು ಅಗತ್ಯವಾಗಿ ಬೇಕು. ಹಾಗೆಯೇ, ಸೋಂಕು ಉಂಟಾದಾಗ ಸೂಕ್ಷ್ಮಜೀವಿಗಳನ್ನು ಹೊಸಕಿಹಾಕಲು ಈ ‘ಆಟೋಫೇಜಿ’ ಎಂಬ ಕ್ರಿಯೆ ಅತ್ಯಗತ್ಯ.

ಮೈಟೋಖಾಂಡ್ರಿಯಾಗಳು ಜೀವಕೋಶದ ಶಕ್ತಿಕೇಂದ್ರಗಳು. ಒಂದು ಜೀವಕೋಶದಲ್ಲಿ ಸುಮಾರು 2000 ದವರೆಗೆ ಮೈಟೋಖಾಂಡ್ರಿಯಾ ಗಳಿರುತ್ತವೆ. ವಯಸ್ಸಾಗುತ್ತಿದ್ದಂತೆ ಆಟೋಫೇಜಿಗೆ ಒಳಗಾಗುತ್ತಿರುತ್ತವೆ. ಸೀಳುವ ಕ್ರಿಯೆ (fission)ಯ ಮೂಲಕ ಹೊಸ ಮೈಟೋಖಾಂಡ್ರಿಯಾಗಳ ಉತ್ಪತ್ತಿಯಾಗುತ್ತಿರುತ್ತವೆ. ಪೆರಾಕ್ಸಿಸೋಮ್ ಹಾಗೂ ಎಂಡೋಪ್ಲಾಸ್ಮಿಕ್ ರೆಟಿಕ್ಯುಲಮ್ ಎಂಬ ಕೋಶಾಂಗಗಳೂ ಕೂಡ ಹೊಸದಾಗಿ ಉತ್ಪತ್ತಿಯಾಗುತ್ತಿರುತ್ತವೆ.

ಸ್ಯಾಖರೋಮೈಸೆಸ್ ಸೆರೆವಿಶಿಯೇ ಎಂಬ ಮಾದರಿ

ನೊಬೆಲ್ ಪ್ರಶಸ್ತಿ ಪಡೆದ ಓಸುಮಿಯವರು ತಮ್ಮ ಸಂಶೋಧನೆಗೆ ಸ್ಯಾಖರೋಮೈಸೆಸ್ ಸೆರೆವಿಶಿಯೇ ಎಂಬ ಯೀಸ್ಟ್ ಏಕಾಣುಜೀವಿಯನ್ನು ಬಳಸಿಕೊಂಡರು. ಅದರಲ್ಲಿ ಸರಿಸುಮಾರು 15 ವಂಶವಾಹಿಗಳು ‘ಆಟೋಫೇಜಿ’ ಕ್ರಿಯೆಯಲ್ಲಿ ತೊಡಗುತ್ತವೆ ಎಂದು ಕಂಡುಕೊಂಡರು. ಆ ವಂಶವಾಹಿಗಳಿಗೆ ಎಟಿಜಿ 1 ರಿಂದ 15ಎಂಬ ಅನುಕ್ರಮ ನಾಮಕರಣ ಮಾಡಲಾಗಿದೆ. ಸಹಾಯಕ ಪ್ರಾಧ್ಯಾಪಕರಾಗಿದ್ದ ಅವಧಿಯಲ್ಲಿಯೇ 1990ರ ಸುಮಾರಿಗೆ ಅವರು ತಮ್ಮ ಸಂಶೋಧನೆಯನ್ನು ಪ್ರಾರಂಭಿಸಿದರು. ಅವರ 25 ವರ್ಷಗಳ ಶ್ರಮ ನೊಬೆಲ್ ಪ್ರಶಸ್ತಿಯನ್ನು ತಂದುಕೊಟ್ಟಿದೆ.

ಆಟೋಫೇಜಿಯ ವಿಧಗಳು

ಜೀವಕೋಶದೊಳಗಿನ ನುಂಗುವ ಕ್ರಿಯೆಯನ್ನು ಆಂಗ್ಲಭಾಷೆಯಲ್ಲಿ ‘ಆಟೋಫೇಜಿ’ ಎಂದು ಕರೆಯಲಾಗಿದೆ. ಆಟೋಫೇಜಿಯಲ್ಲಿ ಹಲವಾರು ವಿಧಗಳಿವೆಯಂತೆ. ಮ್ಯಾಕ್ರೋ-ಆಟೋಫೇಜಿಯು ಬಹುಪಾಲು ಕೋಶರಸ (ಸೈಟೋಪ್ಲಾಸ್ಮ್) ಮತ್ತು ಕೋಶಾಂಗ (ಸೆಲ್ ಆರ್ಗನೆಲ್) ಗಳನ್ನು ನುಂಗಿಹಾಕುವ ಪ್ರಕ್ರಿಯೆ. ಮೈಕ್ರೋ-ಆಟೋಫೇಜಿಯು ಕೋಶರಸ ಹಾಗೂ ಚಾಪರಾನ್‌ಗಳು ಗುರುತಿಸಿದ ಕೆಲ ನಿರ್ದಿಷ್ಟ ಸಸಾರಜನಕ ವಸ್ತುಗಳನ್ನು ನುಂಗಿಹಾಕಲು ಪ್ರಯೋಜನಕಾರಿ. ಆಯ್ಕೆ ಯಿಲ್ಲದ ಆಟೋಫೇಜಿಯು ಆಹಾರದ ಕೊರತೆಯಂತಹ ಸಂದರ್ಭಗಳಲ್ಲಿ ನಿತ್ಯನಿರಂತರವಾಗಿ ನಡೆಯುತ್ತಿರುತ್ತದೆ. ಆಯ್ಕೆಯ ಆಟೋಫೇಜಿಯು ಕೋಶದಲ್ಲಿ ಕ್ರೋಡೀಕರಣಗೊಂಡ ವಿಷಯುಕ್ತ ಸಸಾರಜನಕ, ಕೋಶಾಂಗಗಳು, ಬ್ಯಾಕ್ಟೀರಿಯಾ ಹಾಗೂ ವೈರಸ್‌ಗಳಂತಹ ನಿರ್ದಿಷ್ಟ ವಸ್ತುಗಳನ್ನು ನುಂಗಿಹಾಕುತ್ತದೆ.

ವಯಸ್ಸಾಗುವುದನ್ನು ತಡೆಯುವ ಆಟೋಫೇಜಿ

ಕೆಲವರಿಗೆ 60 ವರ್ಷ ವಯಸ್ಸಾಗಿದ್ದರೂ 50 ವರ್ಷ ವಯಸ್ಸಿನವರಂತೆ ಆಕರ್ಷಕವಾಗಿ ಕಾಣುತ್ತಾರೆ. ಕೆಲವರಿಗೆ ಕೇವಲ 50 ವರ್ಷ ವಯಸ್ಸಾಗಿದ್ದರೂ 60 ವರ್ಷದವರಂತೆ ಕಾಣುತ್ತಾರೆ. ಯಾಕೆ ಈ ತದ್ವಿರುದ್ಧ? ಅದಕ್ಕೆ ಉತ್ತರ ಇರುವುದೇ ಆಟೋಫೇಜಿಯಲ್ಲಿ. ದೇಹದ ಪ್ರತಿ ಜೀವಕೋಶಗಳಲ್ಲಿ ಉತ್ಪತ್ತಿಯಾಗುವ ಕಲ್ಮಶ ವಸ್ತುಗಳು ಹಾಗೂ ವಯಸ್ಸಾದ ಕೋಶಾಂಗಗಳು ನಿರಂತರವಾಗಿ ನುಂಗುವ ಕ್ರಿಯೆಗೆ ಒಳಪಡುತ್ತಿದ್ದರೆ, ಅಂತಹ ಕ್ರಿಯೆಗಳು ನಡೆಯುವ ವ್ಯಕ್ತಿಯು ವಯಸ್ಸಾದರೂ ಯುವಕನಂತೆ ಕಾಣುತ್ತಾರೆ. ಆದರೆ, ಇದು ವ್ಯಕ್ತಿಯ ಹಿಡಿತದಲ್ಲಿರುವ, ಆತ ನಿಗ್ರಹಿಸಬಹುದಾದ ಕ್ರಿಯೆಯಲ್ಲ. ನುಂಗುವ ಕ್ರಿಯೆಯು ವಂಶವಾಹಿ (ಜೀನ್) ಗಳ ಆಡಳಿತಕ್ಕೊಳಪಟ್ಟಿರುತ್ತದೆ. ಸುಮಾರು ಹದಿನೈದು ವಂಶವಾಹಿಗಳು ಆಟೋಫೇಜಿ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತವೆ. ಹಾಗೆಯೇ, ಆಟೋಫೇಜಿಯು ಕ್ಯಾನ್ಸರ್, ಹೃದಯ ಕಾಯಿಲೆ, ಮಧುಮೇಹ, ಪಿತ್ತಕೋಶದ ಕಾಯಿಲೆ, ಪಾರ್ಕಿನ್‌ಸನ್ ಕಾಯಿಲೆ, ಮೂರ್ಚೆ ರೋಗ, ಬುದ್ದಿಹೀನತೆ ಮತ್ತಿತರ ಹಲವಾರು ನರಮಂಡಲದ ಕಾಯಿಲೆಗಳು ಬರದಂತೆ ತಡೆಯುತ್ತದೆ.

ಆಟೋಫೇಜಿಯಿಂದ ಆರೋಗ್ಯ

ಆರೋಗ್ಯ ಕಾಪಾಡಿಕೊಳ್ಳಲು ಆಟೋಫೇಜಿಯು ನಿರಂತರವಾಗಿ ನಡೆಯುತ್ತಿರಬೇಕು. ಕೋಶಗಳು ಸ್ವಚ್ಛವಾಗುತ್ತಿರಬೇಕು. ಈ ತರಹದ ಸಂಶೋಧನೆಗೆ ಜೈವಿಕ-ವೈದ್ಯಕೀಯ ಸಂಶೋಧನೆ (ಬಯೋಮೆಡಿಕಲ್ ರೀಸರ್ಚ್) ಎಂದು ಕರೆಯಲಾಗಿದೆ. ಹಲವಾರು ಸಂಶೋಧನಾ ಲೇಖನಗಳು ಕಳೆದ ಹತ್ತು-ಹದಿನೈದು ವರ್ಷಗಳಲ್ಲಿ ಪ್ರಕಟಗೊಂಡಿವೆ. ಕೋಶದೊಳಗಿನ ಎಲ್ಲ ಕ್ರಿಯೆಗಳ ಸಮತೋಲನಕ್ಕಾಗಿ, ಕೋಶಗಳ ವಿಭೇದಕ್ಕಾಗಿ, ಆ ಮೂಲಕ ದೇಹಾರೋಗ್ಯವನ್ನು ಕಾಪಾಡಿಕೊಳ್ಳುವು ದಕ್ಕಾಗಿ ಆಟೋಫೇಜಿ ಅತ್ಯಗತ್ಯ. ಆಟೋಫೇಜಿಯ ಸಂಪೂರ್ಣ ಜ್ಞಾನವು ಮುಂದಿನ ದಿನಗಳಲ್ಲಿ ಹಲವಾರು ಕಾಯಿಲೆಗಳಿಗೆ ಔಷಧಿ ಕಂಡುಹಿಡಿಯಲು ಅನುಕೂಲಕರ ಎಂದು ಭಾವಿಸಲಾಗಿದೆ. ಕೋಶಕ್ರಿಯಾ ವಿಜ್ಞಾನದಲ್ಲಿ ಆಟೋಫೇಜಿಯ ಆವಿಷ್ಕಾರವು ಒಂದು ಪ್ರಮುಖ ಮೈಲಿಗಲ್ಲು. ಇದಕ್ಕಾಗಿ ಯೋಷಿನೋರಿ ಓಸುಮಿ ಅಭಿನಂದನಾರ್ಹರು. ಎಲ್ಲಾ ಜೀವವಿಜ್ಞಾನದ ವಿದ್ಯಾರ್ಥಿಗಳು ಇಂತಹ ನೊಬೆಲ್ ಬಹುಮಾನ ಗಳಿಸಿದ ಸಂಶೋಧನೆಗಳ ಮಾಹಿತಿಯ ಬಗ್ಗೆ ಗಾಢವಾದ ಆಸಕ್ತಿಯಿಟ್ಟುಕೊಳ್ಳುವುದೊಳಿತು.

ಕೋಶದೊಳಗಿನ ಎಲ್ಲ ಕ್ರಿಯೆಗಳ ಸಮತೋಲನಕ್ಕಾಗಿ, ಕೋಶಗಳ ವಿಭೇದಕ್ಕಾಗಿ, ಆ ಮೂಲಕ ದೇಹಾರೋಗ್ಯವನ್ನು ಕಾಪಾಡಿಕೊಳ್ಳುವು ದಕ್ಕಾಗಿ ಆಟೋಫೇಜಿ ಅತ್ಯಗತ್ಯ. ಆಟೋಫೇಜಿಯ ಸಂಪೂರ್ಣ ಜ್ಞಾನವು ಮುಂದಿನ ದಿನಗಳಲ್ಲಿ ಹಲವಾರು ಕಾಯಿಲೆಗಳಿಗೆ ಔಷಧಿ ಕಂಡುಹಿಡಿಯಲು ಅನುಕೂಲಕರ ಎಂದು ಭಾವಿಸಲಾಗಿದೆ. ಕೋಶಕ್ರಿಯಾ ವಿಜ್ಞಾನದಲ್ಲಿ ಆಟೋಫೇಜಿಯ ಆವಿಷ್ಕಾರವು ಒಂದು ಪ್ರಮುಖ ಮೈಲಿಗಲ್ಲು. ಇದಕ್ಕಾಗಿ ಯೋಷಿನೋರಿ ಓಸುಮಿ ಅಭಿನಂದನಾರ್ಹರು.

Writer - ಪ್ರೊ. ಎಂ. ನಾರಾಯಣ ಸ್ವಾಮಿ

contributor

Editor - ಪ್ರೊ. ಎಂ. ನಾರಾಯಣ ಸ್ವಾಮಿ

contributor

Similar News