ಯೇ ದಿಲ್ ಹೈ ಮುಷ್ಕಿಲ್!
ಕಳೆದ ವಾರ ನಾನು ಪ್ರಾಸ್ತಾವಿಕವಾಗಿ ಹೀಗೊಂದು ಚಲನಚಿತ್ರದ ಹೆಸರನ್ನು ಉಲ್ಲೇಖಿಸಿದ್ದೆ. (ಈಗ ಈ ಬಗ್ಗೆ ಸಾಕಷ್ಟು ಲೇಖನಗಳು, ಅಭಿಮತಗಳು ಪ್ರಕಟವಾಗಿವೆಯಾದರೂ ವಿಚಾರದ ಪ್ರಸ್ತುತತೆ ಕಡಿಮೆಯಾಗದು.) ಪಾಕ್ ನಟನೊಬ್ಬ ಪೋಷಕ ಪಾತ್ರವೊಂದರಲ್ಲಿ ನಟಿಸಿದ ಕಾರಣದಿಂದ ಅದರ ಪ್ರದರ್ಶನಕ್ಕೆ ಈ ದೇಶದ ತಥಾಕಥಿತ ದೇಶಭಕ್ತರು ಮತ್ತು ಮುಖ್ಯವಾಗಿ ತಮ್ಮ ರಾಜ್ಯದಲ್ಲೇ ತಮ್ಮ ಅಸ್ತಿತ್ವದ ಯೌವನವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಅಡ್ಡಿಮಾಡಿದರು. ಮತ್ತು ಸಿನೆಮಾದಲ್ಲೇ ಇರುವ ಮಂದಿ ಅನೇಕರು ಅದನ್ನು ಬೆಂಬಲಿಸುವಂತೆ ಮಾತನಾಡಿದರು. ಅಷ್ಟೇ ಅಲ್ಲ, ಕೆಲವು ಕ್ರಿಕೆಟ್ ಕಲಿಗಳೂ ಈ ಬಹಿಷ್ಕಾರ/ನಿಷೇಧವನ್ನು ಬೆಂಬಲಿಸಿದರು. ಉಳಿದಂತೆ ನಮ್ಮ ಅನೇಕ ಕಲಾವಿದ/ಸಾಹಿತಿಗಳೂ ಬೆಂಬಲಿಸಿದರು. ಕೆಲವೇ ಮಂದಿ ಪ್ರವಾಹಕ್ಕೆ ವಿರುದ್ಧವಾಗಿ ನಿಲ್ಲುವ ಧೈರ್ಯ ತೋರಿಸಿ ‘ದೇಶದ್ರೋಹಿ’ಯೆಂಬ ಪಟ್ಟವನ್ನೂ ಪಡೆದರು.
ಇದಿಷ್ಟೇ ಆಗಿದ್ದರೆ ಅಚ್ಚರಿಯಿರಲಿಲ್ಲ. ಆದರೆ ಇದನ್ನು ಸಮತಟ್ಟು ಮಾಡಲು ಈ ಚಲನಚಿತ್ರದ ತಯಾರಕರು ಮತ್ತು ನಿರ್ದೇಶಕರು ಕೇಂದ್ರ ಗೃಹ ಮಂತ್ರಿಗಳನ್ನೂ ಮಹಾರಾಷ್ಟ್ರ ಮುಖ್ಯಮಂತ್ರಿಗಳನ್ನೂ ಭೇಟಿಯಾಗಿ ತಮ್ಮ ಚಲನಚಿತ್ರಕ್ಕೆ ಆಗಿರುವ ವಿಘ್ನವನ್ನು ನಿವಾರಿಸಲು ಬಗೆಬಗೆಯಾಗಿ ಬೇಡಿಕೊಂಡರು. (ಎಂದಿನಂತೆಯೇ ನಮ್ಮ ಪ್ರಧಾನಿಗಳು ಮೌನಕ್ಕೆ ಶರಣಾದರು!) ಈ ಸಿನೆಮಾದ ರೂವಾರಿ ಕರಣ್ ಜೋಹರ್ ತಮ್ಮ ಚಲನಚಿತ್ರಗಳಲ್ಲಿ ಇನ್ನು ಮುಂದೆ ಪಾಕ್ ನಟರಿಗೆ ಅವಕಾಶ ಕೊಡುವುದಿಲ್ಲವೆಂದು ಪ್ರಮಾಣ ಮಾಡಿ ಭಾರೀ ಕಲೋಪಚಾರ ಮಾಡಿದರು. ಪರಿಣಾಮವಾಗಿ ದಯಾಮಯರಾದ ದೇವೇಂದ್ರ ಫಡ್ನವೀಸ್ ಎಂಬ ಮಹಾರಾಷ್ಟ್ರದ ಮುಖ್ಯಮಂತ್ರಿ ಬಹಿಷ್ಕಾರ/ನಿಷೇಧದ ಶಾಪ ನೀಡಿದ ಬ್ರಹ್ಮಶ್ರೀ ರಾಜ್ ಠಾಕ್ರೆಯವರನ್ನು ಬರಮಾಡಿಕೊಂಡು ಅವರ ಸಮಕ್ಷಮದಲ್ಲಿ ಒಂದು ಒಪ್ಪಂದಕ್ಕೆ ಬಂದು ಸಿನೆಮಾ ಪ್ರದರ್ಶನಕ್ಕೆ ಅನುವು ಮಾಡಿಕೊಟ್ಟರು ಎಂಬಲ್ಲಿಗೆ ಎಲ್ಲವೂ ಸುಖಾಂತವಾಯಿತೆಂದು ನಂಬಲಾಗಿದೆ. ಈ ಒಪ್ಪಿಗೆಗೆ ವಿಧಿಸಿದ ದೇಶಭಕ್ತಿಯ ಷರತ್ತೆಂದರೆ ಸದ್ರಿ ಸಿನೆಮಾ ನಿರ್ಮಾಪಕರು ಭಾರತೀಯ ಸೇನೆಗೆ ಐದು ಕೋಟಿ ರೂಪಾಯಿಯ ದೇಣಿಗೆ ನೀಡಬೇಕು. ಈಗ ಮುಷ್ಕಿಲ್ ಇಲ್ಲದೆ ಸಿನೆಮಾ ನೋಡಬಹುದು! ಪಾಕ್ ನಟರಿರುವ ದೃಶ್ಯ ಬಂದಾಗ ತಂಬಾಕು ಸೇವನೆಯ ವಿರುದ್ಧ ಸಂದೇಶ ಬಂದಂತೆ ತೆರೆಯಲ್ಲಿ ‘‘ಪಾಕ್ ನಟ/ನಟಿಯರು ಅಪಾಯಕಾರಿ; ನೋಡಿದರೆ ಆರೋಗ್ಯ ಹಾನಿಯಾದೀತು! ಎಂಬ ಸಂದೇಶವು ಇರುತ್ತದೇನೋ ಗೊತ್ತಿಲ್ಲ.’’
ಇದಾದ ನಂತರ ಭಾರತೀಯ ಸೇನೆಯ ಕೆಲವಾದರೂ ಹಿರಿಯ ಅಧಿಕಾರಿಗಳು, ನಿವೃತ್ತರು, ಈ ದೇಣಿಗೆಯನ್ನು ತಮಗಾದ ಅವಮಾನವೆಂದು ಪರಿಗಣಿಸಿ ಖಡಾಖಂಡಿತವಾಗಿ ನಿರಾಕರಿಸಿದ್ದಾರೆ. ಆದರೆ ಅಧಿಕೃತವಾದ ನಿರಾಕರಣೆ ಸರಕಾರದಿಂದಾಗಲೀ ರಕ್ಷಣಾ ಇಲಾಖೆೆಯಿಂದಾಗಲೀ ಇನ್ನೂ ಬಂದಿಲ್ಲ. ವಿಚಿತ್ರ ವಿಶೇಷವೆಂದರೆ ಕೇಂದ್ರ ಸರಕಾರವಾಗಲಿ, ಮಹಾರಾಷ್ಟ್ರ ಸರಕಾರವಾಗಲಿ ರಾಜ್ ಠಾಕ್ರೆಯನ್ನಾಗಲಿ ಆತನ ಸಂಘಟನೆಯನ್ನಾಗಲಿ ಖಂಡಿಸುವ ಧೈರ್ಯವನ್ನು ತೋರಿಲ್ಲ. ಚಿಕ್ಕಪುಟ್ಟ ಮತೀಯ ಘಟನೆಗಳಿಗೆ ಎಚ್ಚೆತ್ತುಕೊಳ್ಳುವ ದೇಶಭಕ್ತ ರಾಜಕಾರಣಿಗಳು, ಸಂಘಟನೆಗಳು ಮುಸುಕೆಳೆದುಕೊಂಡು ನಿದ್ರೆಯ ನಟನೆಯಲ್ಲಿವೆ. ಉಳಿದ ಎಡೆಬಿಡಂಗಿಗಳು ಮುಂದಿನ ದಿನಗಳು ಹೇಗೆ ಇದ್ದಾವೆಂಬ ನಿರೀಕ್ಷೆಯಲ್ಲಿ ಈ ಬುಗುರಿಯಾಟವನ್ನು ನೋಡುತ್ತ ಕಾಯುತ್ತ ಸುಮ್ಮನಿವೆ. ಅಂತೂ ಭಾರತವು ಕೆಟ್ಟದ್ದನ್ನು ಸಹಿಸುವ ತನ್ನ ಸಹಿಷ್ಣುತೆಗೆ ಬದ್ಧವಾಗಿ ಕುಳಿತಿದೆ. ಸತ್ಯಕ್ಕೆ ಯಾವಾಗಲೂ ಒಂದಕ್ಕಿಂತ ಹೆಚ್ಚು ಮುಖಗಳು. ಕನಿಷ್ಠ ಎರಡು. ಆದ್ದರಿಂದಲೇ ಎಲ್ಲ ಸತ್ಯಗಳೂ ಅರ್ಧಸತ್ಯಗಳೇ. ಈ ಇಡೀ ಪ್ರಹಸನವು ಸಿನೆಮಾದ ಬಿಟ್ಟಿ ಪ್ರಚಾರವೇನೋ ಎಂಬಂತಹ ನಡವಳಿಕೆಯನ್ನು ಸಿನೆಮಾ ನಿರ್ಮಾಪಕ-ನಿರ್ದೇಶಕರು ತೋರಿದಂತಾಗಿದೆ; ಇಂದಿನ ಸಿನೆಮಾ ಜಗತ್ತಿನ (ಅ) ವ್ಯವಹಾರಗಳನ್ನು ಗಮನಿಸಿದರೆ ಹೀಗೂ ಇರಬಹುದೆನಿಸುತ್ತದೆ.
ಆದರೆ ಈ ವಾದದ ಇನ್ನೊಂದು ಮುಖವನ್ನು ನೋಡಿದರೆ ಅದು ಹೆಚ್ಚು ಸಹಜವಾಗಿ ಕಾಣಿಸುತ್ತದೆ; ಕೋಟಿಗಟ್ಟಲೆ ಹಣ ವೆಚ್ಚ ಮಾಡಿದ ನಿರ್ಮಾಪಕನಿಗೆ ಇದಲ್ಲದೆ ಇನ್ನೇನು ಆಯ್ಕೆಯಿದ್ದೀತು ಎಂದೂ ಭಾಸವಾಗುತ್ತದೆ. ಈ ರೀತಿಯ ಬೆದರಿಕೆಯ ನೆರಳಲ್ಲಿ ತನ್ನ ಬಂಡವಾಳವನ್ನು ಮರಳಿ ಪಡೆಯುವುದಕ್ಕೆ, ವ್ಯವಹಾರವನ್ನು ಕಾಪಾಡುವುದಕ್ಕೆ, ಆತ ತೆವಳುವುದಕ್ಕೂ ತಯಾರಿರಬೇಕು. ಅಂತಹ ಪರಿಸ್ಥಿತಿಯನ್ನು ಈ ಗೂಂಡಾರಾಜ್ ಠಾಕ್ರೆ ಸೃಷ್ಟಿಸಿದರು. ಯಾರು ಇಂತಹ ಬೆದರಿಕೆಯನ್ನೊಡ್ಡಿದ್ದಕ್ಕೆ ಜೈಲು ಸೇರಬೇಕಾಗಿತ್ತೋ ಅಂಥವರು ಮುಖ್ಯಮಂತ್ರಿಗಳ ಜೊತೆಗೆ ವಿವಾದಕ್ಕೆ ಪರಿಹಾರ ಹುಡುಕಲು ಭಾಗವಹಿಸಿದರು. ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ಕಾನೂನು ಕಾಲು ಮುರಿದು ಮೂಲೆ ಸೇರಿದ್ದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಡ. ಭಾರತ-ಪಾಕಿಸ್ತಾನದ ನಡುವೆ ಸದ್ಯಕ್ಕೆ ಬದ್ಧವೈರವಿದೆ. ಅಥವಾ ಉಭಯ ದೇಶಗಳ ನಾಯಕರು ತಮ್ಮದೇ ಮತ್ತು ಬಹುತೇಕ ಸಮಾನವಾದ ಮತ್ತು ಸಾಮ್ಯವಿರುವ ಕಾರಣಗಳಿಗಾಗಿ ಈ ಪಟ್ಟನ್ನು ಸಡಿಲಿಸುವ ಲಕ್ಷಣ ಕಾಣುವುದಿಲ್ಲ. ದೇಶದ ಎಲ್ಲ ಸಮಸ್ಯೆಗಳೂ ಮರೆತುಹೋಗುವ ಸಂದರ್ಭಗಳೆಂದರೆ ಯುದ್ಧ ಇಲ್ಲವೇ ಪ್ರಾಕೃತಿಕ ವಿಕೋಪ. ಈಗ ಮೊದಲನೆಯದು ಹೆಚ್ಚು ಸೂಕ್ತವಾಗಿದೆ. ಸೇನೆಗಳು ಸಾಮಾನ್ಯವಾಗಿ ಮಾತನಾಡುವುದಿಲ್ಲ. ಅಧಿಕೃತವಾಗಿ ಯುದ್ಧ ಘೋಷಣೆಯಾದಾಗ ಮಾತ್ರ ಇಡೀ ದೇಶಕ್ಕೆ ಗೊತ್ತಾಗುತ್ತದೆ. ಇಲ್ಲವಾದರೆ ಅದು ಅದರ ಪಾಡಿಗೆ ನಡೆಯುತ್ತಿರುತ್ತದೆ. ಆದರೆ ಈಗ ಭಾರತ-ಪಾಕಿಸ್ತಾನ ಇವೆರಡೂ ತಮ್ಮ ಸಮಾನ ಅಂಶಗಳನ್ನು ಹುಡುಕುವ ಗೋಜಿಗೆ ಹೋಗದೆ, ವ್ಯತ್ಯಾಸಗಳನ್ನು ಪಟ್ಟಿಮಾಡುತ್ತ ಪರಸ್ಪರ ತಲ್ಲಣಗಳಿಗೆ ದಾರಿಮಾಡಿಕೊಡುತ್ತ ರಾಜಕೀಯ ಲಾಭದ ಲೆಕ್ಕಾಚಾರದಲ್ಲಿವೆ. ಇದರಿಂದಾಗಿ ಸಹಜವಾಗಿಯೇ ಈ ವೈರವು ಸಮಾಜದ ಇತರ ಅಂಗಗಳಿಗೂ ಪಸರಿಸಿದೆ. ಪಾಕಿಸ್ತಾನವು ಈಗ ಇರುವುದಕ್ಕಿಂತ ಹೆಚ್ಚು ಚೆನ್ನಾಗಿ ಅಥವಾ ಕಡಿಮೆ ಕೆಟ್ಟದಾಗಿ ಹಿಂದೆ ಇತ್ತೆಂಬುದಕ್ಕೆ ಸಮರ್ಥನೀಯವಾದ ಅಂಶಗಳಿಲ್ಲ. ಹಾಗಿದ್ದರೂ ಪರಸ್ಪರ ತಾಳಿಕೊಳ್ಳುವ ಮತ್ತು ಸ್ನೇಹಹಸ್ತ ಚಾಚುವ ಸಾಧ್ಯತೆಗಳನ್ನು ಹಿಂದಿನ ಸರಕಾರಗಳು ಮಾಡಿದ್ದವು. ವಾಜಪೇಯಿಯವರ ಲಾಹೋರ್ ಬಸ್ ಪ್ರಯಾಣ ಈ ದಿಸೆಯಲ್ಲಿ ದೊಡ್ಡ ಸಾಧನೆ. ಲಾಹೋರಿನಲ್ಲಿ ಹುಟ್ಟಿದ ಅಡ್ವಾಣಿ, ದಿಲ್ಲಿಯಲ್ಲಿ ಹುಟ್ಟಿದ ಮುಶರ್ರಫ್‌ರಂತಹ ಅನೇಕರಿಗೆ ಗಡಿ ಅತ್ಯಂತ ಕೃತಕವಿರಬಹುದು. ತಮ್ಮದೇ ಅನಿವಾರ್ಯತೆಗಳೊಂದಿಗೆ ಮಾತ್ರ ಅವರು ಜನರಲ್ಲಿ ಭಿನ್ನಭಾವವನ್ನು ಬಿತ್ತುತ್ತಾರೆ, ಅಷ್ಟೆ. ಭಾರತ-ಪಾಕಿಸ್ತಾನದ ಗಾಯಕರು ಇಂದಿಗೂ ಲೋಕಪ್ರಿಯರು. ಒಂದೇ ಸಂಪ್ರದಾಯದ ಹಿನ್ನೆಲೆಯೊಂದಿಗೆ ವಿಸ್ತಾರವಾಗುವ ಸಂಗೀತ ಈ ಎರಡೂ ದೇಶಗಳನ್ನು ಜೋಡಿಸಬೇಕಾಗಿತ್ತು. ಉಭಯ ದೇಶಗಳ ಹಾಕಿ, ಕ್ರಿಕೆಟ್ ಮುಂತಾದ ಸಮಾನಾಂಶಗಳು ಈ ಎರಡೂ ದೇಶಗಳನ್ನು ಜಗತ್ತಿನ ದೊಡ್ಡ ಶಕ್ತಿಯಾಗಿ ರೂಪಿಸಬಹುದಿತ್ತು. ಆದರೆ ಸೇತುವೆ ಕಟ್ಟುವ ಬದಲು ಗೋಡೆಕಟ್ಟುವ ಮಂದಿ, ಜರ್ಮನಿಯು ಒಂದಾದ್ದನ್ನು ಮರೆತು ಭೋಪಾಲಕ್ಕಿಂತಲೂ ದಮನಕಾರೀ ವಿಷಾನಿಲವನ್ನು ಹಬ್ಬುತ್ತಿದ್ದಾರೆ. ಮಹಾಭಾರತದ ಪರಂಪರೆಯ ನಮಗೆ ಕೌರವ-ಪಾಂಡವರೇ ಆದರ್ಶವಾದ್ದರಿಂದ ದಾಯಾದಿ ಮತ್ಸರ, ದ್ವೇಷಗಳ ಅರಗಿನ ಮನೆಯೇ ಸುಖ ನೀಡುತ್ತದೆಯೇನೋ?
ಇಂತಹ ಸನ್ನಿವೇಶದಲ್ಲಿ ಒಬ್ಬ ನಟನನ್ನು ಸಹಿಸಿಕೊಳ್ಳಲಾಗುವುದಿಲ್ಲವೆಂದರೆ ಮತ್ತು ಅವನಿಗಾಗಿ ಉಳಿದೆಲ್ಲ ಭಾರತೀಯರನ್ನು ನಷ್ಟಕ್ಕೊಳಪಡಿಸುವುದೆಂದರೆ ಶೀತವಾಗಿದೆಯೆಂದು ಮೂಗನ್ನು ಕೊಯ್ದಂತೆ. ಇದನ್ನು ನಡೆಸುವವರಾದರೂ ಯಾರು? ಕೆಲವೇ ಮಂದಿ ಸಂವಿಧಾನ ವಿರೋಧಿಗಳು; ಸಂವಿಧಾನೇತರ ಚಟುವಟಿಕೆಗಳನ್ನು ನಡೆಸಿಯೂ ಅಗ್ರಪೂಜೆಗೊಂಬವರು. ಸಂವಿಧಾನದ ಉಲ್ಲಂಘನೆಯನ್ನು ಸಹಿಸುವುದೆಂದರೆ ಅನೀತಿಗೆ ಮತ್ತು ಕಾನೂನಿನ ಉಲ್ಲಂಘನೆಗೆ ಬಹಿರಂಗ ಆಹ್ವಾನ ಕೊಟ್ಟಂತೆ. ಅದರಲ್ಲೂ ಸಂವಿಧಾನರಹಿತ ಮತ್ತು ಸಂವಿಧಾನವನ್ನು ಲೆಕ್ಕಿಸದ ಮುಖಂಡರು ಸಮಾಜವನ್ನು ಮುನ್ನಡೆಸಿದರೆ ಅದು ಅಪಾಯಕ್ಕೆ ಆಮಂತ್ರಣ. ಈ ದೇಶದ ಕಳೆದ ಸುಮಾರು ಏಳು ದಶಕಗಳ ಇತಿಹಾಸದಲ್ಲಿ ಸಂವಿಧಾನೇತರ ಅಧಿಕಾರವನ್ನು ಮೊದಲ ಬಾರಿಗೆ ಸವಿದದ್ದು 1970ರ ದಶಕದಲ್ಲಿ ಪ್ರಧಾನಿ ಇಂದಿರಾ ಗಾಂಧಿ. ಪ್ರಜಾಪ್ರಭುತ್ವದ ಸೋಗಿನಲ್ಲಿ ಅಧಿಕಾರಕ್ಕೆ ಬಂದು ಪ್ರಜೆಗಳನ್ನೇ ಮರೆತಂತೆ ಸೊಕ್ಕಿನಿಂದ ಎಲ್ಲ ಅಧಿಕಾರವನ್ನು ಸಂಜಯ ಗಾಂಧಿ ಸೇರಿದಂತೆ ಕೆಲವೇ ಮಂದಿ ಚಲಾಯಿಸಿದ್ದು ಮತ್ತು ಈ ದೇಶದಲ್ಲಿ ತುರ್ತುಸ್ಥಿತಿ ಬಂದದ್ದು ತರಗತಿಯ ಪಾಠವಾಗಬೇಕು. ತುರ್ತುಸ್ಥಿತಿಯ ಆನಂತರ ಇಂದಿರಾ ಗಾಂಧಿ ಬಹುದೊಡ್ಡ ಸೋಲನ್ನು ಅನುಭವಿಸಿದಾಗ ಮತ್ತೆ ಈ ದೇಶದಲ್ಲಿ ಅಂತಹ ಸಂವಿಧಾನೇತರ ಚಟುವಟಿಕೆಗಳಿಗೆ ಕಡಿವಾಣ ಬೀಳಬಹುದೆಂದು ಬಹುಮಂದಿ ನಿರೀಕ್ಷಿಸಿದ್ದರು. ಆದರೆ ಈ ದೇಶ ಮತ್ತು ದೇಶದ ಜನರು ಎಂದಿಗೂ ಬುದ್ಧಿ ಕಲಿಯುವುದಿಲ್ಲವೆಂದು ವಿಶ್ವಕ್ಕೆ ತೋರಿಸಿಕೊಟ್ಟರು. ಮತ್ತೆ ಇಂದಿರಾ ಅಧಿಕಾರ ಪಡೆದರು. ಇದರಿಂದಾಗಿ ಪ್ರಜಾತಂತ್ರದ ಗೆಲುವಿನ ಭ್ರಮನಿರಸನವಾಯಿತು. ಈ ಕಠಿಣ ಪರಿಸ್ಥಿತಿಯಲ್ಲೂ ಜಾತಿ, ಮತ, ಧರ್ಮ ಪ್ರಭಾವಶಾಲಿಯಾಗಿರಲಿಲ್ಲ. ಒಂದರ್ಥದಲ್ಲಿ ಕಾಂಗ್ರೆಸಿನ ದಬ್ಬಾಳಿಕೆಯೂ ಜಾತ್ಯತೀತವೇ! ಅಂದರೆ ಈ ಅವಧಿಯಲ್ಲಿ ಮತಾಂಧರು ಎಷ್ಟೇ ಪ್ರಯತ್ನಿಸಿದರೂ ಜನಮನದ ನಾಡಿಯನ್ನು ಹಿಡಿಯಲು ಶಕ್ತರಾಗಿರಲಿಲ್ಲ. ನಮ್ಮ ಶಿಕ್ಷಣ ಸಂಸ್ಥೆಗಳಲ್ಲಿ, ವಿಶ್ವವಿದ್ಯಾನಿಲಯಗಳಲ್ಲಿ, ಸಂಶೋಧನಾ ಮತ್ತು ಅಧ್ಯಯನ ಸಂಸ್ಥೆಗಳಲ್ಲಿ, ಅಧಿಕಾರ ದುರುಪಯೋಗ, ಸ್ವಕೀಯ ಪಕ್ಷಪಾತ, ಭ್ರಷ್ಟಾಚಾರ ಮುಂತಾದ ಅನಿಷ್ಟಗಳು ನಿರಂತರವಾಗಿ ನಡೆದರೂ ಅದು ಧರ್ಮಾಧಾರಿತವಾಗಿರಲಿಲ್ಲ. ಇದರಿಂದಾಗಿ ಐತಿಹಾಸಿಕ ರಾಜಾಶ್ರಯದಲ್ಲಿ ಶಕ್ತರಾಗಿದ್ದ ಬಲಪಂಥೀಯ ಮತ್ತು ಧಾರ್ಮಿಕ ಸಂಘಟನೆಗಳು ಸಮಾಜೋನ್ನತಿಯ ವಕ್ತಾರರ ವೇಷ ಧರಿಸಿ ಅಧಿಕಾರಕ್ಕೆ ಬರಲು ಅಶಕ್ತರಾದರು.
ಇಷ್ಟಾದರೂ ಸಂವಿಧಾನೇತರ ಅಧಿಕಾರವು ಎಲ್ಲರ ಅದರಲ್ಲೂ ರಾಜಕಾರಣಿಗಳ ಕನಸಿನ ಕೂಸು. ಯಾರಿಗೆ ಬೇಡ ಹೊಣೆರಹಿತ ಅಧಿಕಾರ ಮತ್ತದರ ಫಲ? ಇಂತಹ ಎಲ್ಲರಿಗೆ ಪ್ರಜಾಪ್ರಭುತ್ವವೆಂಬ ಮುಖವಾಡ ತುಂಬಾ ಚೆನ್ನಾಗಿ ಹೊಂದುತ್ತದೆ. ಏನು ಮಾಡಿದರೂ ಪ್ರಜಾಪ್ರಭುತ್ವದ ರಕ್ಷಣೆಗಾಗಿ; ಜನರಿಗಾಗಿ. ಸದ್ಯದ ದೇಶದ ಸ್ಥಿತಿಯನ್ನು ಗಮನಿಸಿ: ಅಸೇತು ಹಿಮಾಚಲ, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಎಲ್ಲಿ ನೊಡಿದರೂ ಕ್ಷೋಭೆ. ಗೋರಕ್ಷಕರ ವೇಷದಲ್ಲಿ ಸಮಾಜಘಾತುಕ ಶಕ್ತಿಗಳು ಎಲ್ಲೆಡೆ ತಲೆಯೆತ್ತಿದ್ದಾರೆ. ಯಾರು ಏನೇ ತಪ್ಪೆಸಗಿದಾಗಲೂ ಇದು ಸಮಾಜದ, ದೇಶದ ವಿರುದ್ಧದ ಅಪರಾಧ ಎಂದು ಬಗೆಯದೆ, ಅದನ್ನು ಮಾಡಿದವನ ಜಾತಿ, ಮತ, ಧರ್ಮ, ಭಾಷೆ ಇವನ್ನು ಗಮನಿಸಿ ಪರ-ವಿರೋಧ ವಾದಗಳು ನಡೆಯುತ್ತಿವೆ. ಪಾಕಿಸ್ತಾನವನ್ನು ಎಷ್ಟೇ ದ್ವೇಷಿಸಬೇಕೆಂದರೂ ಇಮ್ರಾನ್ ಖಾನ್, ವಾಸಿಮ್ ಅಕ್ರಮ್, ಜಾವೆದ್ ಮಿಯಾಂದಾದ್, ಜಹೀರ್ ಅಬ್ಬಾಸ್‌ರಂತಹ ವಿಶ್ವಮಾನ್ಯ ಕ್ರಿಕೆಟ್ ಪಟುಗಳನ್ನು ಅವರು ಅನ್ಯಧರ್ಮೀಯರು ಇಲ್ಲವೇ ವೈರಿರಾಷ್ಟ್ರದವರೆಂದು ಎಷ್ಟೇ ಪರಿಗಣಿಸಿದರೂ ಅವರ ಆಕರ್ಷಕ ಆಟಗಳನ್ನು ಮರೆಯಲು ಸಾಧ್ಯವಾಗುವುದಿಲ್ಲ. ಸಂಗೀತಗಾರರ ಬಗ್ಗೆಯೂ ಇದನ್ನೇ ಹೇಳಬಹುದು. ಪ್ರಾಯಃ ಪಾಕಿಸ್ತಾನದಲ್ಲಿರುವ ಕೆಲವು ಮಂದಿಯಾದರೂ ಹೀಗೆ ಯೋಚಿಸಬಹುದೆಂದು ಅನ್ನಿಸುತ್ತದೆ.
ದಲಾಯಿಲಾಮಾ ಹೇಳಿದಂತೆ ‘‘ಒಳ್ಳೆಯ ಹೃದಯವನ್ನೊಳಗೊಂಡದ್ದು ಮಾತ್ರ ಒಳ್ಳೆಯ ಧರ್ಮವಾಗುತ್ತದೆ.’’ ಅಲ್ಲಿಯವರೆಗೆ ಯೇ ದಿಲ್ ಹೈ ಮುಷ್ಕಿಲ್!