ಹಲಗೆ-ಬಳಪವ ಪಿಡಿಯದಗ್ಗಳಿಕೆ

Update: 2016-11-02 17:58 GMT

ವಿದ್ಯುನ್ಮಾನ ಯುಗದಲ್ಲಿ ಯಂತ್ರ-ತಂತ್ರಗಳ ಜ್ಞಾನವು ಬದುಕಿನ ಎಲ್ಲ ಕ್ಷೇತ್ರಗಳನ್ನೂ ಆವರಿಸಿದೆ. ಇಂತಹ ಸ್ಥಿತಿ-ಪರಿಸ್ಥಿತಿಯಲ್ಲಿ ಸಾಹಿತ್ಯ ಅಂತಲ್ಲ ಯಾವ ಕಲೆಯೂ ಸಮಕಾಲೀನ ಪ್ರಭಾವದಿಂದ ತಪ್ಪಿಸಿಕೊಳ್ಳಲಾಗದು. ಬದುಕು ಹೇಗೇ ಇರಲಿ, ನಾನಿದನ್ನು ಮತ್ತು ಹೀಗೆಯೇ ಬರೆಯುತ್ತೇನೆ, ಇಲ್ಲವೇ ಚಿತ್ರಿಸುತ್ತೇನೆ ಎಂದುಕೊಂಡರೆ ಬಸ್ಸು ತಪ್ಪುವುದು ಖಂಡಿತ. ಬರೆಹದ ಮಾಧ್ಯಮವು ಬದಲಾಗಿದೆ; ಕಾಗದದ ಮೇಲೆ ಪೆನ್ನಿನಲ್ಲಿ ಬರೆಯುವ ಕ್ರಮವು ಬದಲಾಗಿ ಕಂಪ್ಯೂಟರಿನಲ್ಲಿ ಬರೆದು ಮೇಲ್ ಮಾಡುವುದೇ ಸುಲಭ ಅನ್ನಿಸುತ್ತದೆ. ಇತ್ತೀಚೆಗಿನವರೆಗೂ ಕೈಯಿಂದ ಪೆನ್ನಿನಲ್ಲಿ ಬರೆದರಷ್ಟೇ ಮನಸ್ಸಿನ ಯೋಚನೆಗಳು, ವಿಚಾರಗಳು ತೋಳಿನಿಂದ ಕೈಗೆ, ಕೈಯಿಂದ ಪೆನ್ನಿಗೆ ಅಲ್ಲಿಂದ ಕಾಗದಕ್ಕೆ ಹರಿದು ಒಂದು ಪ್ರಜ್ಞಾಪ್ರವಾಹದೋಪಾದಿಯಲ್ಲಿ ಸಾಗುತ್ತದೆಯೆಂಬ ನಂಬಿಕೆಯಿತ್ತು. ಆಗ ಬೆರಳಚ್ಚು ಕೂಡಾ ಒಂದು ಕೃತಕ ಪ್ರಕ್ರಿಯೆಯಾಗಿ ಕಾಣುತ್ತಿತ್ತು ಮತ್ತು ಅದು ಮುದ್ರಣಾಲಯದ ಕೆಲಸವೇ ಹೊರತು ಬರೆಹಗಾರನ ಕೆಲಸವಲ್ಲವೆಂಬ ದೃಢನಂಬಿಕೆಯಿದ್ದ ಹಿರಿಕಿರಿಯರು ಅನೇಕರಿದ್ದರು. ಆಗ ಅದಕ್ಕೂ ಮೊದಲೇ ತಾಳೆಗರಿಯಲ್ಲಿ ಬರೆದ ಕೃತಿ ಒಂದೇ ಪ್ರತಿಯಾಗಿ ಉಳಿದರೆ ಮುಂದೆ ಅದು ಅಳಿಯುವುದಿಲ್ಲವೇ ಎಂದು ಯೋಚಿಸುತ್ತಿದ್ದ ಕಾಲವಿತ್ತೇ ಎಂಬ ಕಲ್ಪನೆ ಪಕ್ಕನೆ ಮನಸ್ಸಿನಲ್ಲಿ ಮೂಡುವುದಿಲ್ಲ. ಇನ್ನೂ ಹಿಂದೆ ಹೋದರೆ ಬರೆಹವೇ ಇಲ್ಲದ ಕಾಲದಲ್ಲೂ ಇಂದು ಮತ್ತು ಸ್ವಲ್ಪಹಿಂದೆ ನಾವು ಬರೆಹದ ರೂಪದಲ್ಲಿ ಕಾಣುತ್ತಿದ್ದ, ಕಾಣಿಸುತ್ತಿದ್ದ ಎಲ್ಲ ಬಗೆಯ ಸಾಂಸ್ಕೃತಿಕ ಅಭಿವ್ಯಕ್ತಿಗಳೂ ನಾಲಗೆಯಲ್ಲಷ್ಟೇ ಉಳಿಯುತ್ತಿದ್ದ ಕಾಲವಿತ್ತು. ಜಾನಪದ ಎಂದರೆ ಇದೇ ಅಲ್ಲವೇ? ಆಗ ಅದು ಕಿವಿಯಿಂದ ಕಿವಿಗೆ ಸಾಗಿದರೆ ಉಳಿಯುವ ಸಾಧ್ಯತೆಯಿತ್ತೇ ಎಂದು ಯಾರು ಕೇಳಿದರು? ಇದನ್ನೆಲ್ಲ ನೋಡಿದರೆ ಕಾಗದರಹಿತ ಯುಗ ಸನಿಹದಲ್ಲಿದೆ ಎಂದು ಅನ್ನಿಸುತ್ತಿರಲಿಲ್ಲವೇ?

ಹಿರಿಯರೊಬ್ಬರು ಹಿಂದೂ ದೇವತೆ ಸರಸ್ವತಿಯ ಉದಾಹರಣೆ ನೀಡಿದ್ದರು: ಸರಸ್ವತಿಯ ಚಿತ್ರ (ಇಲ್ಲವೇ ಮೂರ್ತಿಯನ್ನು- ಇಲ್ಲಿ ಚಿತ್ರದ ಉದಾಹರಣೆಯನ್ನು ನೀಡಿದ್ದೇನೆ) ಗಮನಿಸಿ. ಒಂದು ಶತಮಾನಕ್ಕೂ ಹಿಂದಿನ ಚಿತ್ರಗಳನ್ನು ನೋಡಿದರೆ ಸರಸ್ವತಿಯ ಕೈಯಲ್ಲಿ ಓಲೆಗರಿಗಳ ಕಟ್ಟಿತ್ತು. ಅದೊಂದು ಗ್ರಂಥ. ಅನಂತರದ ಚಿತ್ರಗಳಲ್ಲಿ ಸರಸ್ವತಿಯ ಕೈಯಲ್ಲಿ ಕಾಗದದ ಹಾಳೆಯ ಪುಸ್ತಕವಿದೆ. ಈಗಿನ್ನೂ ಹೊಸ ತಂತ್ರಜ್ಞಾನವು ಆಕೆಯ ಚಿತ್ರದ ಮೇಲೆ ಪ್ರಭಾವ ಬೀರಿಲ್ಲವಾದರೂ ಪ್ರಾಯಃ ಆಕೆಯ ಕೈಯಲ್ಲಿ ಸಿಡಿ ಮತ್ತು ಇನ್ನೂ ಭವಿಷ್ಯದಲ್ಲಿ ಆಕೆಯ ಕೈಯಲ್ಲಿ ಏನೂ ಇಲ್ಲದೆಯೇ ಇರಬಹುದೇನೋ? ಇನ್ನೂ ಒಂದು ಮಗ್ಗುಲಿನಿಂದ ಈ ಬದಲಾವಣೆಯನ್ನು ಗಮನಿಸಿದರೆ ಮೊದಲಿನ ಗ್ರಂಥಗಳ ಮೇಲೆ ಸಂಸ್ಕೃತದ ಕೃತಿಯಿದ್ದರೆ ಅನಂತರದ ಕೃತಿಗಳ ಮೇಲೆ ಹಿಂದಿ ಇಲ್ಲವೇ ಕನ್ನಡ ಹೀಗೆ ಅವರವರ ಮಾತೃಭಾಷೆಯಲ್ಲಿ ಕೃತಿಯ ಹೆಸರನ್ನು ಚಿತ್ರಿಸಲಾಗುತ್ತಿದೆ. ಹೀಗೆ, ಬದಲಾವಣೆಗೆ ನಮ್ಮ ಆಸಕ್ತಿ ಮತ್ತು ಗ್ರಹಿಸುವ ಕ್ರಮವು ಒಗ್ಗುತ್ತದೆ. ನಿತ್ಯದ ಆಸಕ್ತಿಗಳನ್ನೇ ನೋಡಿ: ದೇವರ ಮೇಲಿನ ಭಕ್ತಿಗೂ ನಮ್ಮ ಜೀವನದ ನಡೆನುಡಿಗೂ ಸಂಬಂಧವೇ ಇಲ್ಲ. ಪಂಚೆ, ಪ್ಯಾಂಟ್, ಬರ್ಮುಡಾ ಅಥವಾ ಮಹಿಳೆಯರಾದರೆ ಸೀರೆ, ಚೂಡಿ-ದಾರ, ಜೀನ್ಸ್, ಹೀಗೆ ಉಡುಗೆ ತೊಡುಗೆ ಆಧುನಿಕತೆಗೆ ಅನುಗುಣವಾಗಿ ಬದಲಾದರೂ ಭಕ್ತಿಗೆ, ದೇವಸ್ಥಾನದಲ್ಲಿ ಹಣೆಗೆ ಕುಂಕುಮ ಹಾಕುವುದಕ್ಕೆ ಈ ಉಡುಗೆ-ತೊಡುಗೆಗಳ ಪರಿವೆಯಿರುವುದಿಲ್ಲ. ಆದ್ದರಿಂದ ದೇವರಿಗೂ ಈ ಬದಲಾವಣೆಯ ಗಾಳಿ ತಾಗದಿರುವುದಿಲ್ಲ. ಅವನಿಗೂ ಆನ್‌ಲೈನ್ ಪೂಜೆ, ಕ್ರೆಡಿಟ್ ಕಾರ್ಡ್ ನ ಮೂಲಕ ಪಾವತಿ ಇವೆಲ್ಲ ಸಹ್ಯವಾಗುತ್ತದೆ. ಧರ್ಮಾಧಿಕಾರಿಗಳು, ಮಠಾಧೀಶರು ಕೈಯಲ್ಲಿ ಪವಿತ್ರಗ್ರಂಥಗಳ ಬದಲು ಲೋಕೋತ್ತರ ವಿದ್ಯಮಾನಗಳನ್ನು ಗಮನಿಸಲು ಮೊಬೈಲನ್ನು ಸದಾ ಹಿಡಿದಿರುತ್ತಾರೆ. ಹೀಗೆ ಸಮಾಜದ ಯಾವುದೇ ಮುಖವನ್ನು ಗಮನಿಸಿದರೂ ಬದಲಾವಣೆಯ ತಾಪ ಅನಿವಾರ್ಯ. ಪರಿಸ್ಥಿತಿ ಹೀಗಿರುವಾಗ ನಾವು ಹೀಗೆಯೇ ಇರುತ್ತೇವೆಂದು ಹಠ ಹಿಡಿಯುವುದು ಸಲ್ಲದೆಂಬ ಅಭಿಮತಕ್ಕೆ ಪುರಸ್ಕಾರ ಸಿಗುತ್ತದೆಂದು ನಂಬಿದ್ದೇನೆ. ಹಿಂದಿನ ತಲೆಮಾರು ಪುಸ್ತಕಗಳನ್ನು ಓದಿಯೇ ಬೆಳೆದರು. ಈಗಲೂ ಪುಸ್ತಕಗಳಿವೆ. ಮುದ್ರಣ ಪ್ರಪಂಚ ಆಧುನಿಕವಾದಂತೆ ಪ್ರಕಟಣೆ ಸುಲಭವಾಗಿದೆ. ಒಂದೇ ದಿನದಲ್ಲಿ ಎಂತಹ ಪುಸ್ತಕಗಳನ್ನೂ ಮುದ್ರಿಸಬಹುದು. ಹಿಂದೆಲ್ಲ ಗ್ರಂಥಾಲಯಗಳ ಪುಸ್ತಕಗಳನ್ನು ಮನೆಗೆ ಕೊಂಡೊಯ್ದು ಓದುವವರ ಸಂಖ್ಯೆ ಹೆಚ್ಚಿತ್ತು. ಈಗ ಅಪರೂಪವಾಗಿದೆ; ಗ್ರಂಥಾಲಯಗಳಲ್ಲಿ ಹಿರಿಯ ನಾಗರಿಕರ ಇಲ್ಲವೇ ಮಧ್ಯವಯಸ್ಸು ಮೀರಿದವರ ಸಂಖ್ಯೆಯೇ ಹೆಚ್ಚುತ್ತಿದೆ. ಎಳೆಯರು ಕಾಣಿಸುತ್ತಿಲ್ಲ. ಪುಸ್ತಕಗಳು ನಶಿಸಿಹೋಗುತ್ತಿವೆಯೆಂಬುದನ್ನು ನಿರಾಕರಿಸುವಂತೆ ಸಾಕಷ್ಟು ಪುಸ್ತಕಗಳು ಪ್ರಕಟವಾಗುತ್ತಿವೆ. ಅವುಗಳು 'ಟಾಪ್ ಟೆನ್' ಎಂದು ವರ್ಗೀಕರಿಸಿಕೊಳ್ಳುವಲ್ಲಿಯ ವರೆಗೂ ಪ್ರಚಾರ ನಡೆಯುತ್ತದೆ. ನಿಜಕ್ಕೂ ಇಷ್ಟೊಂದು ಮಂದಿ ಪುಸ್ತಕಗಳನ್ನೋದುತ್ತಾರೆಯೇ ಎಂದು ಪ್ರಶ್ನಿಸಿದರೆ ತಕ್ಷಣ 'ಹೌದು' ಎಂಬ ಅಭಿಮಾನಪೂರ್ವಕ ಉತ್ತರ ಸಿಗುತ್ತದೆ. ಪುಸ್ತಕ ಮಾರಾಟ ಬೇರೆ; ಪುಸ್ತಕದ ಓದು ಬೇರೆ. ಪ್ರಕಟವಾಗುವ ಬಹುತೇಕ ಪುಸ್ತಕಗಳ ಒಂದು ಪಾಲು ಸಾದರ-ಸ್ವೀಕಾರ, ಪುಸ್ತಕ ಪರಿಚಯ/ವಿಮರ್ಶೆಗೆ, ಇನ್ನೊಂದು ಭಾಗ ಬಂಧು-ಬಳಗ-ಸ್ನೇಹಿತರಿಗೆ ಕೊಡುಗೆಯಾಗಿ, ಇನ್ನೊಂದಷ್ಟು ಪ್ರತಿಗಳು ಪ್ರಶಸ್ತಿಗಳ ಸ್ಪರ್ಧೆಗೆ, ಹೀಗೆ ಉಚಿತವಾಗಿ ಹಂಚಿ ಮುಗಿಯುತ್ತದೆ. ಕೆಲವು ಪುಸ್ತಕಗಳು ಸಿದ್ಧಾಂತದ ಬಲದಿಂದಲೋ, ಧರ್ಮ, ರಾಜಕೀಯ, ಅಧಿಕಾರ, ಪ್ರಭಾವ ಮುಂತಾದವುಗಳು ಸೃಷ್ಟಿಸುವ ಸಮೂಹ ಸನ್ನಿಯ ಫಲದಿಂದಲೋ ಮಾರಾಟವಾಗುತ್ತವೆ. ಆದರೆ ಇವನ್ನು ಆ ಖರೀದಿ ವಿಕ್ರಮಿಗಳು ಓದುತ್ತಾರೆಂದು ನಿರೀಕ್ಷಿಸುವುದು ತಪ್ಪಾಗುತ್ತದೆ. ಪುಸ್ತಕಗಳು ಓದಲ್ಪಡದಿರುವುದಕ್ಕೆ ಇನ್ನೂ ಒಂದು ಕಾರಣವಿದೆ. ಈಗ ಅಂತರ್ಜಾಲದಲ್ಲಿ ಪುಸ್ತಕಗಳನ್ನು ಓದಬಹುದು. ಕಿಂಡ್ಲ್‌ನಂತಹ ಮಾಧ್ಯಮಗಳ ಮೂಲಕ ಇಂದಿನ ಹೊಸ ತಲೆಮಾರು ಓದುತ್ತಾರೆ. ಕಂಪ್ಯೂಟರ್, ಐಪ್ಯಾಡ್, ಮೊಬೈಲ್ ಮುಂತಾದ ಸಾಧನಗಳಲ್ಲಿ ಓದಿದರೆ ಕಣ್ಣುಗಳು ಬಳಲಿ ಟೆನ್ನಿಸ್ ಬಾಲಿನಂತಾಗುತ್ತವೆಂದು ಮತ್ತು ಬಾಲ್ಯದಲ್ಲೇ ಕಣ್ಣುನೋವು ಬಂದು ಕನ್ನಡಕದ ಅನಿವಾರ್ಯತೆ ಬರುತ್ತದೆಂದು ಹಿರಿಯರು ಹೇಳಿದರೂ ಕಿರಿಯರು ಅದನ್ನು ಒಪ್ಪುವುದು ಕಷ್ಟ. ಟಿವಿ ಬಂದಾಗಲೂ ಅದನ್ನೇ ಹೇಳಿದರು. ಹಾಗೆಂದು ಅದು ನಶಿಸಿತೇ?
ಅನೇಕ ಪತ್ರಿಕೆಗಳಿವೆ. ಇವುಗಳಲ್ಲಿ ಬರುವ ಎಲ್ಲವೂ ಓದಲ್ಪಡುತ್ತವೆಂದೇನಿಲ್ಲ. ಬಂದ ಲೇಖನಗಳೇ ಮತ್ತೆ ಮತ್ತೆ ಬೇರೆ ಬೇರೆ ರೂಪಗಳಲ್ಲಿ ಬರುವುದೂ ಉಂಟು. ಇಂದಿನ ಪತ್ರಿಕೆಗಳು ಚಿತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತವೆಂಬ ಸಾಮಾನ್ಯ ಆರೋಪವಿದೆ. ಇದು ನಿಜವೆಂಬಂತೆ ಪ್ರವಾಸ ಕಥನಗಳು, ದೃಶ್ಯಾವಳಿಗಳು ಬೇರೆ ಬೇರೆ ಲೇಖನಿಗಳಲ್ಲಿ ಇಳಿದು ಬರುತ್ತವೆ. ಓದುಗರ ನೆನಪು ತಾತ್ಕಾಲಿಕವಲ್ಲವಾದರೂ ಅದೇ ಅರ್ಹತೆಯು ಖರೀದಿಸಿದ ಎಲ್ಲರಿಗೂ ಇರುವುದಿಲ್ಲವಾದ್ದರಿಂದ ಅದರ ದುರುಪಯೋಗವು ನಡೆಯುತ್ತಲೇ ಇರುತ್ತದೆ. ಪ್ರವಾಸಿ ತಾಣಗಳಾದ ಕೊಡಗು, ಕೆಮ್ಮಣ್ಣುಗುಂಡಿ, ಜೋಗ್, ಮೈಸೂರು ಮತ್ತಿತರ ರಾಜ್ಯದ ಕುರಿತ ಎಷ್ಟೊಂದು ಲೇಖನಗಳು ಅವೇ ಚಿತ್ರಗಳೊಂದಿಗೆ ಪ್ರಕಟವಾಗಿವೆ; ಆಗುತ್ತಿವೆ! ಕೆಲವು ವರ್ಷಗಳ ಹಿಂದೆ ಹಳ್ಳಿ-ಹಳ್ಳಿಯಲ್ಲೂ ಕ್ಷೌರದಂಗಡಿಯಲ್ಲಿ ಇಂತಹ ದೃಶ್ಯಾವಳಿಗಳು ಕಟ್ಟು ಹಾಕಿಸಿಕೊಂಡು ಗೋಡೆಯೇರುತ್ತಿದ್ದವು. ಈಗೀಗ ಆಗಿರುವ ಒಂದು ಬದಲಾವಣೆಯೆಂದರೆ ಈ ರಾಜ್ಯದ ಪುಣ್ಯ ಕ್ಷೇತ್ರಗಳ, ಪ್ರವಾಸಿಧಾಮಗಳ ಬದಲಿಗೆ ದೇಶ ವಿದೇಶಗಳ ವಿಶೇಷ ತಾಣಗಳ ಕುರಿತು ಚಿತ್ರ-ಲೇಖನಗಳು ಬರುತ್ತಿವೆ. ಒಂದು ಹಂತದವರೆಗೆ ಮಾತ್ರ ಇವೆಲ್ಲ ಸಹ್ಯ. (ಸಾಲದ್ದಕ್ಕೆ ಅವು ಪುಸ್ತಕ ರೂಪದಲ್ಲಿ ಬರುತ್ತವೆ!)
ಈಗ ಅವೆಲ್ಲ ಮಾಯವಾಗಿವೆ. ಆಧುನಿಕತೆಯು ಎರಡು ರೀತಿಯಲ್ಲಿ ಈ ತಂಗಳಿಗೆ ಪರ್ಯಾಯವನ್ನೊದಗಿಸಿದೆ. ಒಂದು: ಈ ಮಾಹಿತಿಗಳೆಲ್ಲ ಅಂತರ್ಜಾಲಗಳಲ್ಲಿ ದೊರಕುತ್ತಿವೆ. ಎಂತಹ ಮತ್ತು ಯಾವ ಚಿತ್ರಗಳನ್ನಾದರೂ ಸುಲಭವಾಗಿ ಡೌನ್‌ಲೋಡ್ ಮಾಡಬಹುದು. ಆದ್ದರಿಂದ ಯಾರಿಗೂ ಚಿತ್ರಗಳ ಖಯಾಲಿಯಿಲ್ಲ. ಎರಡು: ಎಲ್ಲರೂ ಈಗ ಪ್ರವಾಸ ಹೋಗಲು ಶಕ್ತರಿದ್ದಾರೆ. ಹಿಂದೆ ವಿಮಾನವೇರುವುದೆಂದರೆ (ಅಪವಾದವನ್ನು ಹೊರತುಪಡಿಸಿ) ಸೂಟು-ಬೂಟು ಧರಿಸಬೇಕೆಂಬ ಅಲಿಖಿತ ನೀತಿ ಸಂಹಿತೆಯಿತ್ತು. ಈಗ ತಲೆಯಲ್ಲಿ ಬ್ಯಾಗ್ ಹೊತ್ತು ಹವಾಯಿ ಚಪ್ಪಲಿ ಹಾಕಿ ವಿಮಾನವೇರಿದರೂ ಯಾರೂ ಲೆಕ್ಕಿಸುವುದಿಲ್ಲ. ಅಷ್ಟರ ಮಟ್ಟಿಗೆ ಪರಿಸ್ಥಿತಿ ಸುಧಾರಿಸಿದೆ. ಇದೂ ಆಧುನಿಕತೆಯ ಕಾಣಿಕೆ!
ಎರಡು: ಹಿಂದೆ ಇದ್ದ ಪತ್ರಿಕೆ ಮತ್ತು ಅನಂತರ ಬಂದ ಟಿವಿ ಮುಂತಾದ ಮಾಧ್ಯಮಗಳ ಸರ್ವಾಧಿಕಾರವು ನಶಿಸುತ್ತಿದೆ. ಸೋಷಿಯಲ್ ಮೀಡಿಯಾಗಳಾದ ಫೇಸ್‌ಬುಕ್, ಟ್ವಿಟ್ಟರ್, ಮುಂತಾದವುಗಳಿಂದಾಗಿ ಸಂಪಾದಕರು ಮಾಡಬಹುದಾದ ಆಯ್ಕೆಯ ಪ್ರಕ್ರಿಯೆಯ ಒಂದು ಹಂತವೇ ಇಲ್ಲದಾಗಿದೆ. ಯಾರು ಬೇಕಾದರೂ ಹೇಗೆ ಬೇಕಾದರೂ ಅಭಿವ್ಯಕ್ತಿಸಬಹುದು- ಸೈಬರ್ ಕಾನೂನಿನ ನಿರ್ಬಂಧಗಳಿಗೊಳಪಟ್ಟು! ಇದನ್ನು ಬಹಳಷ್ಟು ಮಂದಿ ಅಭಿವ್ಯಕ್ತಿ ಸ್ವಾತಂತ್ರ್ಯದ ಕ್ರಾಂತಿಯೆಂದು ಭಾವಿಸುತ್ತಾರೆ. ಈ ಮಾಧ್ಯಮಗಳ ಇನ್ನೂ ಒಂದು ಅನುಕೂಲವೆಂದರೆ, ಇವು ಸುಲಭವಾಗಿ ತಲುಪುತ್ತವೆ. ಇದರಿಂದಾಗಿ ಅನೇಕರು ತಮ್ಮ ಲೇಖನಗಳನ್ನು ತಮಗೆ ಬೇಕಾದವರು ಓದಲೆಂದು ಅಂತರ್ಜಾಲದಲ್ಲಿ ತೇಲಿಬಿಡುತ್ತಾರೆ. ಅನೇಕ ಬಾರಿ ಪತ್ರಿಕೆಗಳಲ್ಲಿ ಓದಿದ್ದಕ್ಕಿಂತ ಹೆಚ್ಚು ಮಂದಿ ಈ ಮಾಧ್ಯಮಗಳಲ್ಲಿ ಓದುತ್ತಾರೆ ಮತ್ತು ಪ್ರತಿಕ್ರಿಯಿಸುತ್ತಾರೆ. ಇನ್ನು ಕೆಲವು ಬಾರಿ ಪತ್ರಿಕೆಗಳಲ್ಲಿ ಆಗಿರುವ ಪ್ರಕಟಣೆಯು ಹೊಸತಲೆಮಾರಿಗೂ, ಪತ್ರಿಕೆಗಳಿಂದ ವಿವಿಧ ಕಾರಣಗಳಿಗಾಗಿ ದೂರವಾಗಿರುವ ಹಳೆಯ ತಲೆಮಾರಿಗೂ ಗೊತ್ತಾಗುವುದೇ ಈ ಮಾಧ್ಯಮಗಳಿಂದ. ಅನೇಕರು ಬ್ಲಾಗ್‌ಗಳನ್ನು ನಿರ್ಮಿಸಿ ವಿವಿಧ ಪ್ರಕಾರದ ಲೇಖನಗಳಿಗೆ/ಬರವಣಿಗೆಗಳಿಗೆ ಅವಕಾಶ ಮಾಡಿದ್ದಾರೆ. ಈ ಬ್ಲಾಗ್‌ಗಳ ಸಂಪಾದಕರಿಗೆ ಸ್ವಲ್ಪ ಮಟ್ಟಿನ ಆಯ್ಕೆಯ ಹಕ್ಕಿದ್ದರೂ ಬೇಡಿಕೆಗನುಗುಣವಾಗಿ ತಕ್ಷಣ ಪ್ರಕಟಣೆಯ ಅನುಕೂಲವಿದೆ.
ಇದು ಜಾಗತಿಕ ಮತ್ತು ಕಾಲಯಾನದ ಬೆಳವಣಿಗೆ. ಆದ್ದರಿಂದ ಯಾರೂ ಇದು ನಮ್ಮ ಕಾಲಕ್ಕೆ ವಿಶೇಷವಾದ, ಮತ್ತು ನಮ್ಮ ದೇಶಕ್ಕೆ, ಭಾಷೆಗೆ ಮೀಸಲಾದ ಸಮಸ್ಯೆಯೆಂದು ಭಾವಿಸಬೇಕಾಗಿಲ್ಲ. ಈ ಬದಲಾವಣೆಯು ಯಾರಿಗೂ ಕೀಳರಿಮೆಯನ್ನೂ ತರಬೇಕಾಗಿಲ್ಲ. 'ಇದು ಪುಸ್ತಕದ ಕೊನೆಯಲ್ಲ' (ಜಿ ಜಿ ್ಞಟಠಿ ಠಿಛಿ ಛ್ಞಿ ಟ್ಛ ಠಿಛಿ ಆಟಟ) ಎಂಬ ಪ್ರಶ್ನೋತ್ತರ ಮಾದರಿಯ ಪುಸ್ತಕವನ್ನು ಜೋ ಕ್ಲಾಡ್ ಕ್ಯಾರಿ ಮತ್ತು ಉಂಬರ್ಟೋ ಇಕೊ ಎಂಬ ಫ್ರೆಂಚ್ ಸಾಹಿತಿಗಳು ಪ್ರಕಟಿಸಿ ಪುಸ್ತಕಕ್ಕೆ ಸಾವಿಲ್ಲ, ಅದು ಬೇರೆ ಬೇರೆ ರೂಪದಲ್ಲಿ ಪುನರ್ಜನ್ಮವನ್ನು, ಪುನರುತ್ಥಾನವನ್ನು ಪಡೆಯುತ್ತದೆಂಬ ಪ್ರಮೇಯವನ್ನು ಹುಡುಕಿದ್ದಾರೆ. ಓಲೆಗರಿಯಲ್ಲಿದ್ದ ಸೃಷ್ಟಿ ಕಾಗದಕ್ಕೆ ಬಂದು ಅಲ್ಲಿಂದ ಸಿ.ಡಿ.ಗೆ ಬಂದು ಇನ್ನೂ ಏನೇನೋ ಆಗಬಹುದೇ ವಿನಾ ಮನುಷ್ಯನ ಮೂಲಭೂತ ಆಸಕ್ತಿಯನ್ನು, ಕುತೂಹಲವನ್ನು ತಣಿಸಲಾರವು ಎಂದೂ, ಯಾವುದೇ ಒಂದು ಪ್ರಕಾರವು ಇನ್ನೊಂದಕ್ಕಿಂತ ಶ್ರೇಷ್ಠವೆಂದು ಭಾವಿಸುವುದು ತಪ್ಪಾಗುತ್ತದೆಯೆಂದೂ ಊಹಿಸಬಹುದು.
ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ ಎಂದು ಕುಮಾರವ್ಯಾಸನು ಹೇಳಿದ್ದು ಭಿನ್ನ ಅರ್ಥದಲ್ಲಾದರೂ ಅದು ಆಧುನಿಕ ಯುಗದಲ್ಲಿ ಸಾಧ್ಯವಾಗಿದೆ. ಸಾವಿರ ವರ್ಷದ ನಂತರ ಹೇಗಿರುತ್ತದೆಯೋ ಬಲ್ಲವರಾರು?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News