ನಗದುರಹಿತ ವಹಿವಾಟಿನಿಂದ ಭ್ರಷ್ಟಾಚಾರ ನಿಲ್ಲದು

Update: 2016-12-31 07:48 GMT

ದೇಶಾದ್ಯಂತ ಹೀಗೊಂದು ಆತುರದ ವಾತಾವರಣವನ್ನು ನಿರ್ಮಿಸಲಾಗುತ್ತಿರುವ ಈ ಸಂದರ್ಭದಲ್ಲಿ ಡಿಜಿಟಲ್ ವಹಿವಾಟಿಗೆ ಸಂಬಂಧಪಟ್ಟಂತೆ ಇತರ ದೇಶಗಳ ಅನುಭವ ಹೇಗಿದೆ ಎಂದು ತಿಳಿದುಕೊಳ್ಳುವುದು ಒಳ್ಳೆಯದು ಮಾತ್ರವಲ್ಲ ಅವಶ್ಯವೂ ಆಗಿದೆ.

ನಗದುರಹಿತ ವಹಿವಾಟಿನಿಂದ ಭ್ರಷ್ಟಾಚಾರ ಮತ್ತು ಕಪ್ಪುಹಣದ ಭೂತವನ್ನು ಬಡಿದೋಡಿಸಲು ಸಾಧ್ಯವೆಂದು ಯಾರಾದರೂ ನಂಬಿದ್ದರೆ ಅವರು ಕೊಂಚ ಕೆನ್ಯಾ, ಟಾಂಝಾನಿಯ, ಜಿಂಬಾಬ್ವೆ ಮುಂತಾದ ಕೆಲವು ಆಫ್ರಿಕನ್ ದೇಶಗಳ ಕಡೆ ದೃಷ್ಟಿ ಹಾಯಿಸುವುದು ವಾಸಿ.

ನೋಟು ರದ್ದತಿ ಕಾರ್ಯಾಚರಣೆಯ ಮಧ್ಯದಲ್ಲಿ ಹಠಾತ್ತಾಗಿ ಗುರಿಯನ್ನು ಬದಲಾಯಿಸಿರುವ ಮೋದಿ ಸರಕಾರ ಈಗ ಭ್ರಷ್ಟಾಚಾರ ಮತ್ತು ಕಾಳಧನದ ಸಮಸ್ಯೆಗಳನ್ನು ನಗದುರಹಿತ ಅಥವಾ ಡಿಜಿಟಲ್ ವಹಿವಾಟಿನ ಮುಖಾಂತರ ಮೂಲೋತ್ಪಾಟನೆ ಮಾಡ ಬಹುದೆಂದು ಬಿಂಬಿಸತೊಡಗಿದೆ.

ಗಮನಾರ್ಹವಾಗಿ ಮೋದಿ ತನ್ನ ನವೆಂಬರ್ 8ರ ಭಾಷಣದಲ್ಲಿ ನಗದುರಹಿತ ವಹಿವಾಟಿನ ವಿಷಯವನ್ನು ಪ್ರಸ್ತಾಪಿಸಿಯೆ ಇರಲಿಲ್ಲ. ರೂ. 500 ಮತ್ತು 1000ದ ನೋಟುಗಳನ್ನು ರದ್ದುಪಡಿಸುತ್ತಿರುವುದು ಕಪ್ಪುಹಣ, ಭ್ರಷ್ಟಾಚಾರ, ಖೋಟಾ ನೋಟು ಮತ್ತು ಭಯೋತ್ಪಾದನೆಗಳನ್ನು ತೊಲಗಿಸು ವುದಕ್ಕಾಗಿ ಎಂದಷ್ಟೆ ಹೇಳಿದ್ದರು. ಆದರೆ ಯಾವತ್ತು ಊಹಿಸಿದಷ್ಟು ಕಪ್ಪುಹಣ ಕೈವಶವಾಗುವುದಿಲ್ಲ ಎಂದು ಗೊತ್ತಾಯಿತೋ ಆವತ್ತಿನಿಂದ ಫೋಕಸ್ ಬದಲಾಗಿದೆ.

ಹೆಚ್ಚುಕಮ್ಮಿ ಎಲ್ಲಾ ಕಾಳಧನಿಕರ ಕಪ್ಪುಹಣವನ್ನು ಹೊಸ ಗರಿಗರಿ ನೋಟುಗಳ ಬಿಳಿಹಣವಾಗಿ ಪರಿವರ್ತಿಸುವಲ್ಲಿ ಬ್ಯಾಂಕ್ ಅಧಿಕಾರಿಗಳೇ ಶಾಮೀಲಾಗಿರು ವುದನ್ನು ಕಂಡ ಬಳಿಕ ಈವರೆಗೆ ನೋಟು ರದ್ದತಿಯಿಂದ ಭ್ರಷ್ಟಾಚಾರ ಅಂತ್ಯವಾಗುತ್ತದೆ ಎನ್ನುತ್ತಿದ್ದ ಮೋದಿಭಕ್ತರ ಮಾತಿನ ವರಸೆಯೂ ಬದಲಾಗಿದೆ.

ಈ ಹೊತ್ತು ಮೋದಿಯಿಂದ ಹಿಡಿದು ಮಂತ್ರಿಗಳು, ಶಾಸಕರಾದಿ ಯಾಗಿ ಎಲ್ಲಾ ಸಂಘಪರಿವಾರದವರ ಬಾಯಲ್ಲಿ ಮೊಬೈಲ್ ವಾಲೆಟ್‌ನದೇ ಮಾತು. ಭಾರತವನ್ನು ಒಂದು ನಗದುರಹಿತ ವಹಿವಾಟಿನ ಸ್ವರ್ಗವಾಗಿಸುವ ಭ್ರಮೆಯೊಂದನ್ನು ಬಿತ್ತಲಾಗುತ್ತಿದೆ. ಆ ನಿಟ್ಟಿನಲ್ಲಿ ಜಾಹೀರಾತು, ಕಾರ್ಯಾ ಗಾರ, ಪ್ರಾತ್ಯಕ್ಷಿತೆ ಇತ್ಯಾದಿಗಳನ್ನೊಳಗೊಂಡ ಬಿರುಸಿನ ಕಾರ್ಯಾಚರಣೆ ಪ್ರಾರಂಭವಾಗಿದೆ.

ಡಿಜಿಟಲ್ ಪಾವತಿಯನ್ನು ಉತ್ತೇಜಿಸುವುದಕ್ಕಾಗೆಂದೇ ಮುಖ್ಯಮಂತ್ರಿಗಳು ಮತ್ತು ಕಾರ್ಯದರ್ಶಿಗಳ ಸಮಿತಿಯೊಂದನ್ನು ರಚಿಸಲಾಗಿದೆ. ಡಿಜಿಟಲ್ ಪಾವತಿದಾರರಿಗೆ ನಾನಾ ಬಗೆಯ ತೆರಿಗೆ ರಿಯಾಯಿತಿ ಮತ್ತು ಆಮಿಷ ಗಳನ್ನು ಒಡ್ಡಲಾಗುತ್ತಿದೆ. ಖುದ್ದು ಮೋದಿಯೂ ಒಂಥರಾ ಲಾಟರಿ ಸ್ಕೀಮಿನಂತಹ ಬಹುಮಾನ ಯೋಜನೆಯನ್ನು ಘೋಷಿಸಿದ್ದಾರೆ.

ದೃಶ್ಯ ಹಾಗೂ ಮುದ್ರಣ ಮಾಧ್ಯಮಗಳಲ್ಲಿ ಪುಟಗಟ್ಟಲೆ ಸರಕಾರಿ ಜಾಹೀರಾತುಗಳನ್ನು ಪುಂಖಾನುಪುಂಖವಾಗಿ ಪ್ರಕಟಿಸಲಾಗುತ್ತಿದೆ. ಬೀದಿಬೀದಿಗಳಲ್ಲಿ ಬೃಹತ್ತಾದ ಕಟೌಟ್‌ಗಳು ತಲೆ ಎತ್ತುತ್ತಿವೆ. ಮೋದಿ ಸರಕಾರದ ಜಾಹೀರಾತುಗಳಿಗೂ ಪೇಟಿಎಂನಂತಹ ಕಂಪೆನಿ ಜಾಹೀರಾತುಗಳಿಗೂ ಹೆಚ್ಚು ವ್ಯತ್ಯಾಸವಿಲ್ಲ ಎಂದಾಗಿದೆ.

ಅವೆರಡರ ಸಾಮ್ಯತೆ ಎಷ್ಟಿದೆಯೆಂದರೆ ಖಾಸಗಿ ಕಂಪೆನಿಗಳ ಜಾಹೀರಾತಿನ ವೆಚ್ಚಗಳು ಸರ್ರನೆ ಇಳಿದಿವೆೆಯಂತೆ! ದೇಶಾದ್ಯಂತ ಹೀಗೊಂದು ಆತುರದ ವಾತಾವರಣವನ್ನು ನಿರ್ಮಿಸಲಾಗುತ್ತಿರುವ ಈ ಸಂದರ್ಭದಲ್ಲಿ ಡಿಜಿಟಲ್ ವಹಿವಾಟಿಗೆ ಸಂಬಂಧಪಟ್ಟಂತೆ ಇತರ ದೇಶಗಳ ಅನುಭವ ಹೇಗಿದೆ ಎಂದು ತಿಳಿದುಕೊಳ್ಳುವುದು ಒಳ್ಳೆಯದು ಮಾತ್ರವಲ್ಲ ಅವಶ್ಯವೂ ಆಗಿದೆ.

ನಗದುರಹಿತ ವಹಿವಾಟಿನಿಂದ ಭ್ರಷ್ಟಾಚಾರ ಮತ್ತು ಕಪ್ಪುಹಣದ ಭೂತವನ್ನು ಬಡಿದೋಡಿಸಲು ಸಾಧ್ಯವೆಂದು ಯಾರಾದರೂ ನಂಬಿದ್ದರೆ ಅವರು ಕೊಂಚ ಕೆನ್ಯಾ, ಟಾಂಝಾನಿಯ, ಜಿಂಬಾಬ್ವೆ ಮುಂತಾದ ಕೆಲವು ಆಫ್ರಿಕನ್ ದೇಶಗಳ ಕಡೆ ದೃಷ್ಟಿ ಹಾಯಿಸುವುದು ವಾಸಿ. ಉದಾಹರಣೆಗೆ ಕೆನ್ಯಾವನ್ನು ತೆಗೆದುಕೊಂಡರೆ ಅಲ್ಲಿ ಎಲ್ಲೆಲ್ಲೂ ನಗದುರಹಿತ ವಹಿವಾಟು ನಡೆಯುತ್ತಿರುವುದನ್ನು ಕಾಣಬಹುದು.

ಅಲ್ಲಿನ ಸುಮಾರು 75 ಪ್ರತಿಶತ ವಯಸ್ಕರ ಬಳಿ ಮೊಬೈಲ್ ವಾಲೆಟ್ ಅಥವಾ ಪರ್ಸ್‌ಗಳಿವೆ ಎಂದರೆ ನಗದುರಹಿತ ವಹಿವಾಟಿನ ಬಳಕೆ ಅದೆಷ್ಟು ವ್ಯಾಪಕವಾಗಿದೆ ಎಂದು ತಿಳಿಯಬಹುದು. ಅವರೆಲ್ಲ ತಾವು ಖರೀದಿಸುವ ವಸ್ತು, ಸೇವೆ ಇತ್ಯಾದಿಗಳಿಗೆ ಹಣವನ್ನು ಅದೇ ಯಕ್ಷಿಣಿಗಾರ ಮೋದಿ ಮೊನ್ನೆ ತನ್ನ ಕೈನಲ್ಲಿ ಮಾಡಿ ತೋರಿಸಿದ ಹಾಗೆ ಮೊಬೈಲ್ ಮೂಲಕ ಪಾವತಿಸುತ್ತಿದ್ದಾರೆ.

ಹಣದ ವರ್ಗಾವಣೆಯೂ ಅಲ್ಲಿ ಮೊಬೈಲ್ ಮೂಲಕವೆ ನಡೆಯುತ್ತದೆ. ದೇಶದ ಉದ್ದಗಲಕ್ಕೂ ಇರುವ ರಿಟೇಲ್ ಅಂಗಡಿಗಳಲ್ಲೆಲ್ಲಾ ನಗದುರಹಿತ ಸೇವೆ ಲಭ್ಯವಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿಯ ನಿಯತಕಾಲಿಕವೊಂದರಲ್ಲಿ ಪ್ರಕಟವಾದ ವರದಿಯ ಪ್ರಕಾರ ಇಂತಹ ನಗದುರಹಿತ ವಹಿವಾಟುಗಳು ಅಲ್ಲಿನ ವಾರ್ಷಿಕ ಜಿಡಿಪಿಯ ಶೇ.4.5ರಷ್ಟಿವೆ ಯಂತೆ.

ಈ ರೀತಿ ನಗದುರಹಿತ ವಹಿವಾಟು ವಿಸ್ತೃತವಾಗಿರುವ ಕೆನ್ಯಾ ವಿಶ್ವದ ಅತ್ಯಂತ ಪಾರದರ್ಶಕ ರಾಷ್ಟ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿರಬೇಕಾಗಿತ್ತು, ಅಲ್ಲವೆ? ಆದರೆ ವಾಸ್ತವ ಇದಕ್ಕೆ ತದ್ವಿರುದ್ಧವಿದೆ. ಜಗತ್ತಿನಾದ್ಯಂತ ಭ್ರಷ್ಟಾಚಾರದ ಮೇಲೆ ಕಣ್ಣಿರಿಸಿರುವ ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ಸಂಸ್ಥೆಯ 2015ರ ಸಾಲಿನ ವರದಿಯಲ್ಲಿ ಕೆನ್ಯಾವನ್ನು ವಿಶ್ವದ ಅತ್ಯಂತ ಭ್ರಷ್ಟ ದೇಶಗಳಲ್ಲಿ ಒಂದು (168 ದೇಶಗಳ ಪೈಕಿ ಕೆನ್ಯಾ 139ನೆ ಸ್ಥಾನ ದಲ್ಲಿದೆ) ಎಂದು ಗುರುತಿಸಲಾಗಿದೆ! ಕೆನ್ಯಾದಲ್ಲಿ ಭ್ರಷ್ಟಾಚಾರದ ಮಟ್ಟ ಎಷ್ಟಿದೆ ಎಂಬು ದನ್ನು ಅರಿಯಲು ಒಂದು ನಿದರ್ಶನ ಸಾಕು.

ಅದು 2016ರ ರಿಯೊ ಒಲಿಂಪಿಕ್ಸ್‌ಗೆ ಸಂಬಂಧಿಸಿದ ಘಟನೆ. ರಿಯೊ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ್ದ ಕೆನ್ಯಾ ತಂಡದ ಯುನಿಫಾರ್ಮ್ ಒಂದೇ ರೀತಿ ಇರಲಿಲ್ಲ! ಕಾರಣ? ನೈಕ್ ಸಂಸ್ಥೆ ಕ್ರೀಡಾಪಟುಗಳಿಗೆ ವಿತರಿಸಲೆಂದು ಕೆನ್ಯಾದ ರಾಷ್ಟ್ರೀಯ ಒಲಂಪಿಕ್ ಸಮಿತಿಗೆ ಒದಗಿಸಿದ್ದ ಯುನಿಫಾರ್ಮ್ ಕಿಟ್‌ಗಳ ಒಂದು ಭಾಗವನ್ನು ಅಧಿಕಾರಿಗಳೇ ನುಂಗಿ ಹಾಕಿದ್ದರಂತೆ! ಇನ್ನು ನಗದುರಹಿತ ವ್ಯವಹಾರಗಳು ಅಧಿಕವಿರುವ ಟಾಂಝಾನಿಯ, ಜಿಂಬಾಬ್ವೆ ಮುಂತಾದ ರಾಷ್ಟ್ರಗಳ ಪರಿಸ್ಥಿತಿ ಕೂಡಾ ಕೆನ್ಯಾಕ್ಕಿಂತ ಭಿನ್ನವಾಗಿಲ್ಲ ಎನ್ನುತ್ತದೆ ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್‌ನ ವರದಿ.

ಹೀಗಿರುವಾಗ ಮೋದಿ ಸರಕಾರ ಭಾರತದಲ್ಲಿ ನಗದುರಹಿತ ವ್ಯವಹಾರದ ಅಳವಡಿಕೆಗೆ ಈ ರೀತಿ ಎಲ್ಲಿಲ್ಲದ ಉತ್ತೇಜನ ನೀಡುತ್ತಿರುವುದಕ್ಕೆ ಕಾರಣವೇನು? ಇದೆಲ್ಲವೂ ಡಿಜಿಟಲ್ ವಹಿವಾಟು ನಿಯಂತ್ರಿಸುವ ಸಾಫ್ಟ್‌ವೇರ್ ಸಂಸ್ಥೆಗಳು ಮತ್ತಿತರ ಕಾರ್ಪೊರೇಟ್‌ಗಳ ಉದ್ಧಾರಕ್ಕಾಗಿ ಇರಬಹುದೆ? ಇಂತಹದೊಂದು ಬಲವಾದ ಅನುಮಾನ ಮೂಡುವುದೇಕೆಂದರೆ ಕೆಲವರು ಯೋಚಿಸುವಂತೆ ಡಿಜಿಟಲ್ ವ್ಯವಹಾರ ಪುಕ್ಕಟೆ ಅಲ್ಲ.

ನಾವು ಪ್ರತಿಯೊಂದು ಬಾರಿ ಕಾರ್ಡ್ ಅಥವಾ ಮೊಬೈಲ್ ಮೂಲಕ ದುಡ್ಡು ಪಾವತಿಸಿದಾಗ ನಮ್ಮ ಬ್ಯಾಂಕ್ ಖಾತೆಯಿಂದ ಪೇಟಿಎಂನಂತಹ ಮಧ್ಯವರ್ತಿ ಸಂಸ್ಥೆಗೆ ಕಮಿಷನ್ ಪಾವತಿ ಆಗುತ್ತದೆ.

ಉದಾಹರಣೆಗೆ ಪ್ರತಿ ರೂ. 100ಕ್ಕೆ ರೂ. 1.50 ಕಮಿಷನ್. ಇದೇ ರೂ. 100ನ್ನು ಅಂಗಡಿಯಾತ ತನ್ನ ಖರೀದಿಗೆ ಬಳಸುವಾಗ ಅಂಗಡಿಯಾತನ ಖಾತೆಯಿಂದ ಮತ್ತೆ ರೂ. 1.50 ಕಮಿಷನ್ ಪಾವತಿ ಆಗುತ್ತದೆ. ಹೀಗೆ ಒಂದೇ ಮೊತ್ತಕ್ಕೆ ಹಲವು ಬಾರಿ ಕಮಿಷನ್ ಪಾವತಿಸಲ್ಪಡುತ್ತದೆ! ಒಟ್ಟಾರೆ ಬಳಕೆದಾರನಿಗೆ ನಷ್ಟ, ಕಾರ್ಪೊರೇಟ್‌ಗಳಿಗೆ ಲಾಭವೆ ಲಾಭ!

ಈ ಸಂದರ್ಭದಲ್ಲಿ ಡಿಜಿಟಲ್ ವಹಿವಾಟಿಗೆ ಬೆನ್ನೆಲುಬಾಗ ಬೇಕಿರುವ ‘ಡಿಜಿಟಲ್ ಇಂಡಿಯ’ ಕಾರ್ಯಕ್ರಮ ಇಂದು ಎಲ್ಲಿದೆ ಎಂದು ನೋಡಹೊರಟರೆ ನಿರಾಶೆ ಕಾದಿದೆ. 2019ರ ಒಳಗಾಗಿ ಭಾರತವನ್ನು ಡಿಜಿಟಲ್ ಬ್ಯಾಂಕ್ ಕ್ಷೇತ್ರದಲ್ಲಿ ವಿಶ್ವನಾಯಕನ ಸ್ಥಾನಕ್ಕೇರಿಸಲಿದೆ ಎನ್ನಲಾದ ಡಿಜಿಟಲ್ ಇಂಡಿಯ ಯೋಜನೆಯನ್ನು ಮೋದಿ ಸರಕಾರ ಎರಡೂವರೆ ವರ್ಷಗಳ ಹಿಂದೆ ಭಾರಿ ಬಾಜಾಬಜಂತ್ರಿಯೊಂದಿಗೆ ಪ್ರಾರಂಭಿಸಿದುದನ್ನು ನೆನಪಿಸಿಕೊಳ್ಳಿ.

ಡಿಜಿಟಲ್ ಇಂಡಿಯದ ಮೂಲ ಗುರಿ ಪ್ರಕಾರ ಮಾರ್ಚ್ 2017ರ ಒಳಗಾಗಿ 2.5 ಲಕ್ಷ ಗ್ರಾಮ ಪಂಚಾಯತುಗಳನ್ನು ಆಪ್ಟಿಕಲ್ ಫೈಬರ್ ತಂತಿ ಜಾಲದ ಮೂಲಕ ಒಂದಕ್ಕೊಂದು ಜೋಡಿಸಬೇಕಾಗಿದೆ. ಅದರಂತೆ ಮಾರ್ಚ್ 2016ರ ಒಳಗಾಗಿ 1 ಲಕ್ಷ ಗ್ರಾಮ ಪಂಚಾಯತುಗಳ ನಡುವೆ ಸಂಪರ್ಕ ಕಲ್ಪಿಸಬೇಕಾಗಿತ್ತು.

ಆದರೆ ಅಕ್ಟೋಬರ್ ತನಕ ಬರೀ 15,000 ಸಂಪರ್ಕಗಳಷ್ಟೆ ಮುಗಿದಿವೆ. ಇದು ಅನುಷ್ಠಾನದಲ್ಲಿನ ವಿಳಂಬದ ವಿಷಯವಾಯಿತು. ಆದರೆ ವಿಷಯ ಇದೊಂದೇ ಅಲ್ಲ, ಇನ್ನೂ ಹಲವಾರು ಇವೆ. ಶಿಕ್ಷಣ, ವೈದ್ಯಕೀಯ ಸೇವೆ, ಆಡಳಿತ ಇತ್ಯಾದಿಗಳ ಡಿಜಿಟಲೀಕರಣ ಆಗಬೇಕಾಗಿದ್ದು ಆ ನಿಟ್ಟಿನಲ್ಲಿ ದತ್ತಾಂಶಗಳ ಕಂಪ್ಯೂಟರೀಕರಣ ಸೇರಿದಂತೆ ಮಾಡಬೇಕಾಗಿರುವ ಕೆಲಸ ಬೆಟ್ಟದಷ್ಟಿದೆ.

ಕಾರ್ಯಕ್ರಮ ಯೋಜಿಸಿದಂತೆ ನಡೆದಿದ್ದರೆ ಈ ವರೆಗೆ 2 ಲಕ್ಷ ಗ್ರಾಮ ಪಂಚಾ ಯತುಗಳ ಜೋಡಣೆ ಕಾರ್ಯ ಮುಗಿಯಬೇಕಿತ್ತು. ಡಿಜಿಟಲ್ ಶಿಕ್ಷಣ, ಡಿಜಿಟಲ್ ಆಡಳಿತ, ಡಿಜಿಟಲ್ ಬ್ಯಾಂಕ್ ಇತ್ಯಾದಿಗಳು ಲಭ್ಯವಿರಬೇಕಿತ್ತು. ಪ್ರಸಕ್ತವಾಗಿ ಬ್ಯಾಂಕ್ ಶಾಖೆಗಳು 20-30 ಕಿ.ಮೀ. ದೂರದಲ್ಲಿ ಇರುವಂತಹ ಜಾಗಗಳಲ್ಲಿ ಡಿಜಿಟಲ್ ಬ್ಯಾಂಕ್ ಸೇವೆ ದೊರೆಯುತ್ತಿದ್ದರೆ ಜನರ ಬವಣೆಗಳನ್ನು ಒಂದಷ್ಟು ನೀಗಿಸಲು ಸಾಧ್ಯವಿತ್ತು.

ಜನ ನಿಧಾನಕ್ಕೆ ನಗದುರಹಿತ ಪಾವತಿಯ ಬಗ್ಗೆ ತಿಳಿದುಕೊಂಡು ಅದಕ್ಕೆ ಹೊಂದಿಕೊಳ್ಳುತ್ತಿದ್ದರೋ ಏನೋ. ಡಿಜಿಟಲ್ ಇಂಡಿಯ ಕಾರ್ಯಕ್ರಮದ ಮತ್ತೊಂದು ಪ್ರಮುಖ ಉದ್ದೇಶವೆಂದರೆ 2019ರ ಒಳಗಾಗಿ 10 ಕೋಟಿ ಉದ್ಯೋಗಗಳ ಸೃಷ್ಟಿ. ಆದರೆ ವಾಸ್ತವದಲ್ಲಿ ಆಗಿರುವುದೇನು? ನೋಟು ರದ್ದತಿಯಿಂದಾಗಿ ರೈತರು, ಅನೌಪಚಾರಿಕ ವಲಯದ ಲಕ್ಷಾಂತರ ಕಾರ್ಮಿಕರು ಮತ್ತು ಲಘು ಉದ್ದಿಮೆಗಳ ಪಾಲಿಗೆ ಕೆಟ್ಟ ದಿನಗಳು ಬಂದಿವೆೆ.

ಅದೇ ವೇಳೆ ಈ ಹೊತ್ತು ಭ್ರಷ್ಟಾಚಾರ ಮತ್ತು ಕಪ್ಪುಹಣವನ್ನು ತಡೆಗಟ್ಟುತ್ತೇವೆ ಎಂದು ಬೊಂಬ್ಡಾ ಬಜಾಯಿಸುತ್ತಿರುವವರೇ ಅವ್ಯವಹಾರಗಳಲ್ಲಿ ತೊಡಗಿರುವುದನ್ನು ಕಾಣಬಹುದು.

ಮೋದಿ ಸರಕಾರದಲ್ಲಿ ಎಲ್ಲವೂ ನೆಟ್ಟಗಿಲ್ಲ ಎಂಬುದಕ್ಕೆ ಭಾರತದ ಮಹಾಲೆಕ್ಕಾಧಿಕಾರಿಯವರ ಇತ್ತೀಚಿನ ವರದಿಯೇ ಸಾಕ್ಷಿ. ಮೋದಿ ಸರಕಾರದ ಅವ್ಯವಹಾರಗಳನ್ನು ಬಯಲಿಗೆಳೆಯುವ ಈ ವರದಿ ನಿರ್ದಿಷ್ಟವಾಗಿ ಪೀಯೂಷ್ ಗೋಯಲ್ ನೇತೃತ್ವದ ವಿದ್ಯುತ್ ಸಚಿವಾಲಯ ಮತ್ತು ಡಾ. ಹರ್ಷವರ್ಧನ್ ನೇತೃತ್ವದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯಗಳ ಕಡೆ ಬೆಟ್ಟು ಮಾಡು ತ್ತದೆ.

ಕಳೆದ ಮೂರು ವರ್ಷಗಳಲ್ಲಿ ರೂ. 26,000 ಕೋಟಿಗೂ ಮಿಕ್ಕಿ (grant-in-aid) ಅನುದಾನ ಬಿಡುಗಡೆ ಮಾಡಿರುವ ಇವೆರಡು ಸಚಿವಾಲಯಗಳು ಅದಕ್ಕೆ ಸಂಬಂಧಿಸಿದಂತೆ ಯಾವ ದಾಖಲೆಗಳನ್ನೂ ಇರಿಸಿಲ್ಲವಂತೆ! ಇಲ್ಲಿ ಅನುದಾನ ಅಂದರೆ ಸರಕಾರಕ್ಕೆ, ಸಂಸ್ಥೆಗಳಿಗೆ ಅಥವಾ ವ್ಯಕ್ತಿಗಳಿಗೆ ಅವರ ದೈನಂದಿನ ವೆಚ್ಚ, ಆಸ್ತಿ ಸೃಷ್ಟಿ ಮತ್ತು ಸೇವೆಗಳಿಗಾಗಿ ಸರಕಾರದ ವತಿಯಿಂದ ಪಾವತಿ ಸುವ ಹಣ. ನಿಯಮಗಳಂತೆ ಇಂತಹ ಅನುದಾನದ ಮೊತ್ತ ವರ್ಷಕ್ಕೆ 5 ಕೋಟಿ ಮೀರಿದರೆ ದಾಖಲೆಪತ್ರಗಳನ್ನು ತಯಾರಿಸಬೇಕೆಂದಿದೆ.

‘ಸಹಾರಾ ಪೇಪರ್ಸ್’ ಬಯಲುಗೊಳಿಸಿರುವಂತೆ ಸಹಾರಾ ಸಂಸ್ಥೆಯಿಂದ ಗುಜರಾತ್ ಸಿಎಂಗೆ 40 ಕೋಟಿ 7 ಲಕ್ಷ ರೂಪಾಯಿ ಪಾವತಿಯಾಗಿರುವ ಆರೋಪವನ್ನು ನರೇಂದ್ರ ಮೋದಿ ನಿರಾಕರಿಸಿಲ್ಲ ಎಂಬುದನ್ನು ಗಮನಿಸಬೇಕಾಗಿದೆ.

ಚತುರ ಮೋದಿ ಆರೋಪಕ್ಕೆ ಉತ್ತರಿಸುವ ಬದಲು ಆರೋಪ ಮಾಡಿದವರನ್ನು ಗೇಲಿ ಮಾಡುವ ಮೂಲಕ ವಿಷಯವನ್ನು ತೇಲಿಸಿ ಜನರ ಗಮನವನ್ನು ತಿರುಗಿಸಿದ್ದಾರೆ! ಖುದ್ದು ಬಿಜೆಪಿ ಪಕ್ಷಾಧ್ಯಕ್ಷ ಅಮಿತ್ ಶಾರೇ ಓರ್ವ ನಿರ್ದೇಶಕನಾಗಿ ರುವ ಅಹಮದಾಬಾದ್ ಜಿಲ್ಲಾ ಸಹಕಾರಿ ಬ್ಯಾಂಕಿನ ಮೇಲೆ ದಾಳಿ ಮಾಡಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನವೆಂಬರ್ 8ರಂದೇ ರೂ 500 ಕೋಟಿ ಜಮೆಯಾಗಿರುವುದನ್ನು ಪತ್ತೆಹಚ್ಚಿದ್ದಾರೆ.

ಮೋದಿ ಸರಕಾರಕ್ಕೆ ಕಪ್ಪುಆರ್ಥಿಕತೆಯನ್ನು, ಕಾಳದಂಧೆಗಳನ್ನು ನಿಲ್ಲಿಸುವ ಉದ್ದೇಶವಾಗಲಿ ಪ್ರಾಮಾಣಿಕತೆಯಾಗಲಿ ಇಚ್ಛಾಶಕ್ತಿ ಯಾಗಲಿ ಇಲ್ಲ ಎನ್ನುವುದನ್ನು ಈ ಕೆಳಗಿನ ನಾಲ್ಕು ವಿಷಯಗಳು ಸ್ಪಷ್ಟವಾಗಿ ತೋರಿಸುತ್ತವೆ:

1.) ಮೋದಿ ಸರಕಾರ ರಾಜಕೀಯ ಪಕ್ಷಗಳು ಸ್ವೀಕರಿಸುವ ದೇಣಿಗೆಗಳ ವಿವರಗಳನ್ನು ಪಾರದರ್ಶಕವಾಗಿಸುವುದನ್ನು ವಿರೋಧಿಸುತ್ತಿದೆ. ರಾಜಕೀಯ ಪಕ್ಷಗಳಿಗೆ ದೇಣಿಗೆ ಎಂಬುದು ನಿಜಕ್ಕೂ ಭ್ರಷ್ಟಾಚಾರ, ಕಪ್ಪುಹಣದ ಗಂಗೋತ್ರಿಯಾಗಿದೆ. ಭಾರತದ ಪ್ರಜಾಪ್ರಭುತ್ವವನ್ನು ಕಾರ್ಪೊರೇಟ್ ಪ್ರಭುತ್ವವಾಗಿ ಮಾರ್ಪ ಡಿಸಿರುವ ಖಳನಾಯಕ ಇದೇ ಆಗಿದೆ.

ಚುನಾವಣಾ ಆಯೋಗದ ಮಾಜಿ ಆಯುಕ್ತ ಟಿ. ಎಸ್. ಕೃಷ್ಣಮೂರ್ತಿ ಹೇಳುವಂತೆ ಅನೇಕ ರಾಜಕೀಯ ಪಕ್ಷಗಳು ಸ್ಥಾಪನೆಯಾಗುತ್ತಿರುವುದೇ ಕಪ್ಪುಹಣವನ್ನು ಬಿಳಿಯಾಗಿಸುವುದಕ್ಕೋಸ್ಕರ. ವಿಷಯ ಏನೆಂದರೆ ರಾಜಕೀಯ ಪಕ್ಷಗಳು ಸ್ವೀಕರಿಸುವ ದೇಣಿಗೆ ರೂ. 20,000 ಮೀರಿದರೆ ಮಾತ್ರ ದೇಣಿಗೆಯ ಮೂಲವನ್ನು ತೋರಿಸಬೇಕು ಮತ್ತು ತೆರಿಗೆ ಪಾವತಿಸಬೇಕು ಎಂದಿದೆ.

ಹೀಗಾಗಿ ಒಬ್ಬನೇ ವ್ಯಕ್ತಿ ಅಥವಾ ಸಂಸ್ಥೆ ನೂರಾರು, ಸಾವಿರಾರು ಅಜ್ಞಾತ ವ್ಯಕ್ತಿಗಳ ಹೆಸರಿನಲ್ಲಿ ದೇಣಿಗೆ ನೀಡುತ್ತವೆ ಮತ್ತು ಅವುಗಳಲ್ಲಿ ಪ್ರತಿಯೊಂದೂ ರೂ. 20,000ಕ್ಕಿಂತ ಕಡಿಮೆ ಇರುತ್ತದೆ! ಇದರರ್ಥ ಇದೆಲ್ಲವೂ ಕಪ್ಪುಹಣ. ಸಹಾರಾ ಕಂಪೆನಿಯಿಂದ ಕನಿಷ್ಠ 18 ರಾಜಕೀಯ ಪಕ್ಷಗಳಿಗೆ ಕೋಟಿಗಟ್ಟಲೆ ಹಣ ಸಂದಾಯವಾಗಿರುವ ವಿಚಾರವನ್ನು ಸಹಾರಾ ಪೇಪರ್ಸ್ ಬಯಲುಗೊಳಿಸಿದೆ. ಇದು ಕೇವಲ ಒಂದು ಕಂಪೆನಿಯ ವಿಚಾರ. ಇಂತಹ ಇನ್ನೆಷ್ಟು ಕಂಪೆನಿಗಳು ಇರಬಹುದೆಂದು ನಾವೇ ಊಹಿಸಬಹುದು.

2) ಮೋದಿ ಸರಕಾರ ವಿದೇಶೀ ದೇಣಿಗೆ ಕಾಯ್ದೆಗೆ ತುಂಬಾ ಅನುಕೂಲಕರವಾದ ತಿದ್ದುಪಡಿಯನ್ನು ಮಾಡಿಕೊಂಡಿದೆ. ಡಿಸೆಂಬರ್ 19ರ ಕಾನ್ಪುರದ ಬಿಜೆಪಿ ರ್ಯಾಲಿಯಲ್ಲಿ ಮಾತನಾಡಿದ ಮೋದಿ ‘‘ರಾಜಕೀಯ ಪಕ್ಷಗಳ ವಿದೇಶಿ ದೇಣಿಗೆ ನಿಯಂತ್ರಣ ಕಾನೂನುಗಳಲ್ಲಿ (FCRA) ಒಂದೇ ಒಂದು ಪೂರ್ಣವಿರಾಮವನ್ನಾಗಲಿ ಅಲ್ಪವಿರಾಮವನ್ನಾಗಲಿ ಬದಲಾಯಿಸಿಲ್ಲ’’ ಎಂದರು.

ಆದರೆ ಇದು ಶುದ್ಧ ಸುಳ್ಳು. ಖುದ್ದು ಅವರ ಮಂತ್ರಿ ಕಿರಣ್ ರಿಜಿಜು ಹೇಳಿರುವಂತೆ ಸರಕಾರ ಇದೇ 2016ರ ಮೇನಲ್ಲಿ ಎಫ್‌ಸಿಆರ್‌ಎ ಕಾಯ್ದೆಗೆ ತಿದ್ದುಪಡಿ ತಂದು ವಿದೇಶಿ ಹಣದ ಮೂಲ ಯಾವುದು ಎಂಬುದರ ನಿರೂಪಣೆಯನ್ನು ಬದಲಾಯಿಸಿರುವುದಲ್ಲದೆ ಸದರಿ ತಿದ್ದುಪಡಿಗೆ ಸಂಸತ್ತಿನ ಅನುಮೋದನೆಯನ್ನೂ ಪಡೆದುಕೊಂಡಿದೆ.

ಅಷ್ಟು ಮಾತ್ರವಲ್ಲ ಕಾನೂನಿನ ಕುಣಿಕೆಯಿಂದ ಪಾರಾಗುವುದಕ್ಕೋಸ್ಕರ ಕಾಯ್ದೆಯನ್ನು ಸೆಪ್ಟಂಬರ್ 2010ರಿಂದ ಅನ್ವಯವಾಗುವ ಹಾಗೆ ಮಾಡಲಾ ಗಿದೆ. ಹಾಗಾಗಿ ತಿದ್ದುಪಡಿ ಅನುಮೋದನೆಯಾದ ತಕ್ಷಣ ಈ ಸಂಬಂಧ ಸರ್ವೋಚ್ಚ ನ್ಯಾಯಾಲಯದಲ್ಲಿ ಹೂಡಿದ್ದ ಮೊಕದ್ದಮೆಯನ್ನು ಹಿಂಪಡೆಯಲಾಗಿದೆ!

3) ಮೋದಿ ಸರಕಾರ ಭ್ರಷ್ಟಾಚಾರ ನಿರೋಧ ಕಾಯ್ದೆಗೆ ಮಾಡಿರುವ ತಿದ್ದುಪಡಿ ಭ್ರಷ್ಟಾಚಾರಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡು ವಂತಿದೆ. ಈ ಮಸೂದೆ ಎಲ್ಲಾದರೂ ಸಂಸತ್ತಿನಲ್ಲಿ ಅಂಗೀಕೃತವಾಗಿ ಜಾರಿಗೊಂಡಲ್ಲಿ ಭ್ರಷ್ಟ ರಾಜಕಾರಣಿ ಮತ್ತು ಅಧಿಕಾರಿಗಳ ಕೂಟಗಳಿಗೆ ಎಲ್ಲಾ ವಿಧದ ಗಂಭೀರ ತನಿಖೆಗಳಿಂದ ರಕ್ಷಣೆ ದೊರೆಯಲಿದೆ!

4) ಮೋದಿ ಸರಕಾರ ಅಂತಾರಾಷ್ಟ್ರೀಯ ತೆರಿಗೆ ತಾಣಗಳಲ್ಲೊಂ ದಾದ ಸ್ವಿಝರ್‌ಲ್ಯಾಂಡ್ ಜತೆ ಒಪ್ಪಂದವೊಂದನ್ನು ಮಾಡಿಕೊಂಡು ಆ ಮೂಲಕ ದೊಡ್ಡ ದೊಡ್ಡ ಕಾಳಧನಿಕರು ಸ್ವಿಝರ್‌ಲ್ಯಾಂಡ್‌ನ ಬ್ಯಾಂಕುಗಳಲ್ಲಿರುವ ತಮ್ಮ ಕಪ್ಪುಹಣವನ್ನು ಮತ್ತಷ್ಟು ಸುರಕ್ಷಿತ ತಾಣಗಳಿಗೆ ವರ್ಗಾಯಿಸಲು ಅನುವು ಮಾಡಿಕೊಟ್ಟಿದೆ!

ಭ್ರಷ್ಟಾಚಾರ ಮತ್ತು ಕಪ್ಪುಹಣದ ನಿಗ್ರಹಕ್ಕೆ ನಿಜಕ್ಕೂ ಮಾಡ ಬೇಕಿರುವುದೇನು? ಭ್ರಷ್ಟಾಚಾರವನ್ನು ಪೋಷಿಸಿ ಕಾಳಧನ ಉತ್ಪಾದಿಸುವ ಕಪ್ಪುಆರ್ಥಿಕತೆಯನ್ನು, ಕಾಳದಂಧೆಗಳನ್ನು ನಿಲ್ಲಿಸುವುದರೊಂದಿಗೆ ಮಲಿನಗೊಂಡಿರುವ ಇಡೀ ಆಡಳಿತ ವ್ಯವಸ್ಥೆಯನ್ನೂ ಸ್ವಚ್ಛಪಡಿಸಬೇಕು ಅಲ್ಲವೆ? ಮೂಲತಃ ಇದನ್ನು ಮಾಡದೆ ಬರೀ ಡಿಜಿಟಲ್ ವಹಿವಾಟು ಎಂಬ ಮಂತ್ರದಂಡದಿಂದ ಭ್ರಷ್ಟಾಚಾರದ ಭೂತವನ್ನು ಉಚ್ಛಾಟಿಸಲು ಸಾಧ್ಯವೆ? ಇಲ್ಲ ಎನ್ನುತ್ತಿದೆ ಕೆನ್ಯಾ, ಟಾಂಝಾನಿಯ, ಜಿಂಬಾಬ್ವೆ ಮುಂತಾದ ದೇಶಗಳ ಅನುಭವ. ಕೊನೆಯದಾಗಿ, ಡಿಜಿಟಲ್ ಪಾವತಿಯನ್ನು ಬಳಕೆಗೆ ತರುವುದೆ ಸರಕಾರದ ಉದ್ದೇಶವಾಗಿದ್ದರೆ ಇಷ್ಟೊಂದು ಸಾವು ನೋವು, ಕಷ್ಟನಷ್ಟಗಳಿಗೆ ಕಾರಣವಾಗಿರುವ ನೋಟು ರದ್ದತಿಯ ಮಾರ್ಗವನ್ನು ಆಯ್ಕೆ ಮಾಡಿರುವುದು ಏಕೆ, ಎಂದು, ಹೇಗೆ, ಯಾರು? ಮೋದಿ ಸರಕಾರವೂ ಬಾಯ್ಬಿಡುತ್ತಿಲ್ಲ, ರಿಸರ್ವ್ ಬ್ಯಾಂಕೂ ಮಾಹಿತಿ ನೀಡುತ್ತಿಲ್ಲ.

(ಆಧಾರ: ವಿವಿಧ ಮೂಲಗಳಿಂದ)

ಡಿಜಿಟಲ್ ಪಾವತಿದಾರರಿಗೆ ನಾನಾ ಬಗೆಯ ತೆರಿಗೆ ರಿಯಾಯಿತಿ ಮತ್ತು ಆಮಿಷ ಗಳನ್ನು ಒಡ್ಡಲಾಗುತ್ತಿದೆ. ಖುದ್ದು ಮೋದಿಯೂ ಒಂಥರಾ ಲಾಟರಿ ಸ್ಕೀಮಿನಂತಹ ಬಹುಮಾನ ಯೋಜನೆಯನ್ನು ಘೋಷಿಸಿದ್ದಾರೆ. ದೃಶ್ಯ ಹಾಗೂ ಮುದ್ರಣ ಮಾಧ್ಯಮಗಳಲ್ಲಿ ಪುಟಗಟ್ಟಲೆ ಸರಕಾರಿ ಜಾಹೀರಾತುಗಳನ್ನು ಪುಂಖಾನುಪುಂಖವಾಗಿ ಪ್ರಕಟಿಸಲಾಗುತ್ತಿದೆ. ಬೀದಿಬೀದಿಗಳಲ್ಲಿ ಬೃಹತ್ತಾದ ಕಟೌಟ್‌ಗಳು ತಲೆ ಎತ್ತುತ್ತಿವೆ. ಮೋದಿ ಸರಕಾರದ ಜಾಹೀರಾತುಗಳಿಗೂ ಪೇಟಿಎಂನಂತಹ ಕಂಪೆನಿ ಜಾಹೀರಾತುಗಳಿಗೂ ಹೆಚ್ಚು ವ್ಯತ್ಯಾಸವಿಲ್ಲ ಎಂದಾಗಿದೆ. ಅವೆರಡರ ಸಾಮ್ಯತೆ ಎಷ್ಟಿದೆಯೆಂದರೆ ಖಾಸಗಿ ಕಂಪೆನಿಗಳ ಜಾಹೀರಾತಿನ ವೆಚ್ಚಗಳು ಸರ್ರನೆ ಇಳಿದಿವೆಯಂತೆ!

Writer - ಸುರೇಶ್ ಭಟ್, ಬಾಕ್ರಬೈಲ್

contributor

Editor - ಸುರೇಶ್ ಭಟ್, ಬಾಕ್ರಬೈಲ್

contributor

Similar News