ಮೊದಲ ಬಾರಿಗೆ ಅಪರಿಚಿತ ಧೂಮಕೇತುವಿನ ದರ್ಶನ

Update: 2017-01-02 15:24 GMT

ವಾಶಿಂಗ್ಟನ್, ಜ. 2: ನಾಸಾ ವಿಜ್ಞಾನಿಗಳು ಪತ್ತೆಹಚ್ಚಿರುವ ಅಪರೂಪದ ಧೂಮಕೇತೊಂದನ್ನು ಈ ವಾರ ಮೊದಲ ಬಾರಿಗೆ ಕೇವಲ ಬೈನಾಕ್ಯುಲರ್ ಮೂಲಕ ವೀಕ್ಷಿಸಬಹುದಾಗಿದೆ. ಬಳಿಕ ಈ ಆಕಾಶಕಾಯವು ತನ್ನ ಕಕ್ಷೆಯಲ್ಲಿ ಸೌರವ್ಯೆಹದ ಹೊರಪದರಕ್ಕೆ ವಾಪಸಾಗುತ್ತದೆ. ಅದು ತನ್ನ ಕಕ್ಷೆಯಲ್ಲಿ ಒಂದು ಸುತ್ತು ಬರಲು ಸಾವಿರಾರು ವರ್ಷಗಳನ್ನು ತೆಗೆದುಕೊಳ್ಳುತ್ತದೆ ಎನ್ನಲಾಗಿದೆ.

‘‘ಉತ್ತಮ ಬೈನಾಕ್ಯುಲರ್ (ದೂರದರ್ಶಕ) ಮೂಲಕ ಈ ಧೂಮಕೇತು ಕಾಣಿಸಿಕೊಳ್ಳುವ ಸಾಧ್ಯತೆ ಅಧಿಕವಾಗಿದೆ. ಆದಾಗ್ಯೂ, ಇದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಯಾಕೆಂದರೆ, ಧೂಮಕೇತುವಿನ ಪ್ರಕಾಶವನ್ನು ಇಂತಿಷ್ಟೇ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ’’ ಎಂದು ಅಮೆರಿಕದ ಜೆಟ್ ಪ್ರೊಪಲ್ಶನ್ ಲ್ಯಾಬರೇಟರಿಯಲ್ಲಿರುವ ನಾಸಾದ ಸೆಂಟರ್ ಫಾರ್ ನಿಯರ್-ಅರ್ತ್ ಆಬ್ಜೆಕ್ಟ್ (ಎನ್‌ಇಒ) ಸ್ಟಡೀಸ್‌ನ ವ್ಯವಸ್ಥಾಪಕ ಪೌಲ್ ಚೋಡಾಸ್ ಹೇಳಿದರು.

2017ರ ಮೊದಲ ವಾರದಲ್ಲಿ ಉತ್ತರ ಗೋಳಾರ್ಧದಲ್ಲಿರುವ ಜನರಿಗೆ ಧೂಮಕೇತು ಸೂರ್ಯೋದಯಕ್ಕಿಂತ ಸ್ವಲ್ಪ ಮೊದಲು ಆಗ್ನೇಯದ ಆಕಾಶದಲ್ಲಿ ಗೋಚರಿಸುತ್ತದೆ.

ಅದು ದಿನದಿಂದ ದಿನಕ್ಕೆ ದಕ್ಷಿಣದತ್ತ ಚಲಿಸಿ ಜನವರಿ 14ರಂದು ಬುಧ ಗ್ರಹದ ಮೂಲಕ ಹಾದು ಹೋಗುವ ಕಕ್ಷೆಯಲ್ಲಿ ಸೂರ್ಯನಿಗೆ ಅತಿ ಸಮೀಪದ ಬಿಂದುವಿನಲ್ಲಿರುತ್ತದೆ. ಬಳಿಕ ಅದು ಸೌರವ್ಯೆಹದ ಹೊರವಲಯದಲ್ಲಿರುವ ತನ್ನ ಕಕ್ಷೆಗೆ ವಾಪಸಾಗುತ್ತದೆ.
ಈ ಧೂಮಕೇತು ಭೂಮಿಗೆ ಯಾವುದೇ ಹಾನಿ ಮಾಡುವುದಿಲ್ಲ ಎಂದು ಭಾವಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News