ಜರ್ಮನಿ: ನೂತನ ಅಧ್ಯಕ್ಷರಾಗಿ ಸ್ಟೇನ್‌ಮಿಯರ್ ಆಯ್ಕೆ
Update: 2017-02-12 17:01 GMT
ಬರ್ಲಿನ್, ಫೆ. 12: ಜರ್ಮನಿಯ ‘ಟ್ರಂಪ್ ವಿರೋಧಿ’ ಎಂಬುದಾಗಿ ಬಣ್ಣಿಸಲ್ಪಟ್ಟಿರುವ ಮಾಜಿ ವಿದೇಶ ಸಚಿವ ಫ್ರಾಂಕ್-ವಾಲ್ಟರ್ ಸ್ಟೇನ್‌ಮಿಯರ್ ರವಿವಾರ ದೇಶದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
61 ವರ್ಷದ ಸ್ಟೇನ್‌ಮಿಯರ್ 1,239 ಮತಗಳ ಪೈಕಿ 931 ಮತಗಳನ್ನು ಗಳಿಸಿದರು. ಚಾನ್ಸಲರ್ ಆ್ಯಂಜೆಲಾ ಮರ್ಕೆಲ್‌ರ ಕನ್ಸರ್ವೇಟಿವ್ ಪಕ್ಷವು ಪ್ರಬಲ ಅಭ್ಯರ್ಥಿಯ ಕೊರತೆಯ ಹಿನ್ನೆಲೆಯಲ್ಲಿ, ಹಾಲಿ ಅಧ್ಯಕ್ಷ 77 ವರ್ಷದ ಜೋಕಿಂ ಗೌಕ್‌ರ ಸ್ಥಾನಕ್ಕೆ ಸ್ಟೇನ್‌ಮಿಯರ್‌ರನ್ನು ಆರಿಸಲು ಒಪ್ಪಿಕೊಂಡಿತು.
ಜರ್ಮನಿಯ ಸಂಸದರು ಮತ್ತು ದೇಶದ 16 ರಾಜ್ಯಗಳ ಶಾಸಕರು ವಿಶೇಷ ಫೆಡರಲ್ ಅಸೆಂಬ್ಲಿಯಲ್ಲಿ ಮತದಾನ ಮಾಡಿದರು.
ಕಳೆದ ವರ್ಷ ಅಮೆರಿಕದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯ ವೇಳೆ, ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ‘ದ್ವೇಷವನ್ನು ಬೋಧಿಸುವವ’ ಎಂದು ಬಣ್ಣಿಸಿದ್ದರು.