ಮೌನದಿಂ ಬಿರಿವ ‘ನಿಸ್ಸೀಮ’ ಕವಿ

Update: 2017-04-01 18:56 GMT

ಪ್ರೊ. ಜಿ.ಎಸ್. ಸಿದ್ದಲಿಂಗಯ್ಯನವರ ಕಾವ್ಯ ಧ್ವನಿ ದಲಿತ ಕವಿ ಡಾ. ಸಿದ್ದಲಿಂಗಯ್ಯನವರ ಕಾವ್ಯದಂತೆ ಸಿಡಿಮದ್ದಿನ ಸ್ಫೋಟವಲ್ಲ. ಅವರದು ಮೌನದಿಂ ಬಿರಿವ ಧ್ವನಿ. ಮೌನದಿಂ ಬಿರಿವ ಆ ಕಾವ್ಯ ಧ್ವನಿಯಲ್ಲಿ ಸುಮದ ಸೌರಭವೂ ಇದೆ, ವಾಸನಾ ಜೀವಿ ಮನುಷ್ಯನ ಮತ್ತು ಅವನ ಪರಿಸರದ ವಾಸನೆಗಳ ಸೌಮ್ಯಾಸ್ಫೋಟವೂ ಇದೆ. ರಾಜಿಸಂಧಾನದ ಒತ್ತಡಗಳಿಗೆ ಮಣಿಯದ ಪ್ರೊ. ಸಿದ್ದಲಿಂಗಯ್ಯನವರು ಬಗ್ಗದಕುಗ್ಗದ ಸತ್ಯಾನ್ವೇಷಿ. ಕೋಪಿಷ್ಟನಾಗಿದ್ದರೂ ಜನರು ಅವರನ್ನು ಪ್ರೀತಿಸುವುದಕ್ಕೆ ಇದೇ ಕಾರಣವಿದ್ದೀತು. ಅವರು ನಿಸ್ಸೀಮ. ಎಂದೇ 85ರ ಹುಟ್ಟುಹಬ್ಬದಲ್ಲಿ ಅಭಿಮಾನಿಗಳು ಅವರಿಗೆ ಅರ್ಪಿಸಿರುವ ಅಭಿನಂದನಾ ಗ್ರಂಥ ‘ನಿಸ್ಸೀಮ’ ಅನ್ವರ್ಥವೂ ಅರ್ಥಪೂರ್ಣವೂ ಆದುದು.


ಕನ್ನಡಕ್ಕೊಬ್ಬರೇ ಕೈಲಾಸಂ
ಕನ್ನಡಕ್ಕೊಬ್ಬರೇ ಕುವೆಂಪು
ಕನ್ನಡಕ್ಕೊಬ್ಬರೇ ಬೇಂದ್ರೆ
ಕನ್ನಡಕ್ಕೊಬ್ಬರೇ ಕಾರಂತ
ಸಾಹಿತ್ಯ, ಕಾವ್ಯ, ರಂಗಭೂಮಿಗೆ ತಮ್ಮ ಅಸದೃಶ ಕೊಡುಗೆಗಳಿಂದ ಕನ್ನಡವನ್ನು ಶ್ರೀಮಂತಗೊಳಿಸಿದ ಮಹಾನುಭಾವರನ್ನು ನೆನಪಿಸಿಕೊಳ್ಳುವ, ಈಗಲೂ ಚಾಲ್ತಿಯಲ್ಲಿರುವ ಒಂದು ಕ್ರಮ ಇದು. ಆದರೆ ಈ ಕ್ರಮದಲ್ಲಿ ಇತ್ತೀಚೆಗೆ ಅಲ್ಪಸ್ವಲ್ಪ ಬದಲಾವಣೆ ಆಗಿದೆ. ಬಿ.ವಿ.ಕಾರಂತರ ಆಗಮನವಾಗಿ ಅವರು ಕನ್ನಡ ರಂಗಭೂಮಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಎತ್ತರಿಸಿದ ಮೇಲೆ ಕನ್ನಡಕ್ಕೆ ಇಬ್ಬರು ಕಾರಂತರಾದರು. ಹಾಗೆಯೇ ಪ್ರೊ. ಜಿ.ಎಸ್.ಎಸ್. ಎಂದಾಗ ಇಬ್ಬರು ಜಿ.ಎಸ್.ಎಸ್. ನಮ್ಮ ಮನಸ್ಸಿನಲ್ಲಿ ಮೂಡುತ್ತಾರೆ. ಒಬ್ಬರು ಪ್ರೊ. ಜಿ.ಎಸ್.ಶಿವರುದ್ರಪ್ಪನವರು ಮತ್ತೊಬ್ಬರು ಪ್ರೊ. ಜಿ.ಎಸ್.ಸಿದ್ದಲಿಂಗಯ್ಯನವರು. ಇಬ್ಬರೂ ಕನ್ನಡ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ತಮ್ಮ ವಿಶಿಷ್ಟ ಛಾಪುಗಳನ್ನು ಸ್ಪಷ್ಟವಾಗಿ ಮೂಡಿಸಿದವರು.

ಈ ಜಿಎಸ್ಸೆಸ್ ದ್ವಯರಲ್ಲಿ ನಾವು ಹಲವು ಸಮಾನ ಗುಣಾತಿಶಯಗಳನ್ನು ಕಾಣುತ್ತೇವೆ. ಮೊದಲಿಗೆ ಇಬ್ಬರೂ ಕನ್ನಡದ ಪ್ರಸಿದ್ಧ ಕವಿಗಳು. ಇಬ್ಬರೂ ಪ್ರಾಧ್ಯಾಪಕರಾಗಿ ಶೈಕ್ಷಣಿಕ ಆಡಳಿಗಾರರಾಗಿ ಕರ್ನಾಟಕದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಶಿಕ್ಷಣದ ಗುಣಮಟ್ಟ ಎತ್ತರಿಸಲು ಶ್ರಮಿಸಿದವರು.ಇಬ್ಬರೂ ಕುವೆಂಪು ಶಿಷ್ಯರು. ಕನ್ನಡ ಕಾವ್ಯ, ಭಾಷೆಗಳಿಗೆ ಸಂಬಂಧಿಸಿದಂತೆ ಇಬ್ಬರೂ ಸೃಜನಶೀಲರು, ಸಂವೇದನಾಶೀಲರು ಮತ್ತು ಪ್ರಜ್ಞಾವಂತರು. ನವೋದಯ, ನವ್ಯ, ದಲಿತ, ಬಂಡಾಯ ಹೀಗೆ ಕನ್ನಡ ಕಾವ್ಯ ಹಾದು ಬಂದಿರುವ ಎಲ್ಲ ಪ್ರಮುಖ ಮಾರ್ಗಗಳನ್ನೂ ದೇಸಿಯನ್ನೂ ಹತ್ತಿರದಿಂದ ನೋಡಿ ಅನುಭವಿಸಿಯೂ ತಮ್ಮ ಅಸ್ಮಿತೆ, ಸ್ವೋಪಜ್ಞತೆಗಳನ್ನು ಎಚ್ಚರದಿಂದ ಬೆಳೆಸಿಕೊಂಡು ಕಾಪಾಡಿಕೊಂಡವರು. ಇಬ್ಬರೂ ಝಗಮಗಿಸುವ ಪ್ರದರ್ಶನ, ಅಬ್ಬರ, ಆವುಟಗಳಿಂದ ದೂರ. ಏಕಾಂತ ಪ್ರಿಯರು, ಮೌನಿ ಸಾಧಕರು. ಹೀಗೆ ಸಮಾನ ಅಂಶಗಳನ್ನು ಗುರುತಿಸುತ್ತಾ ಹೋಗಬಹುದು. ಇರಲಿ. ಇವತ್ತು ಇದಕ್ಕೆಲ್ಲ ಮೀಟುಗೋಲಾದದ್ದು ಕಳೆದ ರವಿವಾರ ಆಚರಿಸಲಾದ ಪ್ರೊ. ಜಿ.ಎಸ್. ಸಿದ್ದಲಿಂಗಯ್ಯನವರ ಎಂಬತ್ತೈದನೆ ಹುಟ್ಟಿದ ಹಬ್ಬ.

ಜಿ.ಎಸ್.ಸಿದ್ದಲಿಂಗಯ್ಯನವರು ಹುಟ್ಟಿದ್ದು ತುಮಕೂರು ಜಿಲ್ಲೆಯ ಬೆಳ್ಳಾವೆಯಲ್ಲಿ. ಬಡತನ ಜನ್ಮಜಾತ ಸಂಗಾತಿಯಾದರೂ ಬಾಲ್ಯದಿಂದಲೂ ಆತ್ಮಗೌರವ-ಘನತೆಗಳನ್ನು ಬಿಟ್ಟುಕೊಡದೆ ಮುನ್ನುಗ್ಗುವ ಪ್ರವೃತ್ತಿ. ತುಮಕೂರು ಹಾಗೂ ಮೈಸೂರುಗಳಲ್ಲಿ ವಿದ್ಯಾಭ್ಯಾಸ. ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಬಿ.ಎ.(ಆನರ್ಸ್)ನಲ್ಲಿ ಮೊದಲ ರ್ಯಾಂಕು ಪಡೆದು ಕಾಲೇಜು ಮೇಷ್ಟ್ರು ಆದರು. 1960-61 ಅವಧಿಯಲ್ಲಿ ಸಿದ್ದಲಿಂಗಯ್ಯನವರು ಕನ್ನಡ ಸ್ನಾತಕೋತ್ತರ ಅಧ್ಯಯನಮಾಡಿ ಎಂ.ಎ. ಪದವಿಯಲ್ಲೂ ಪ್ರಥಮ ಸ್ಥಾನಗಳಿಸಿ ಅಧ್ಯಾಪಕರಾದರು. ಮುಂದೆ ಪ್ರಾಧ್ಯಾಪಕರಾಗಿ, ಶೈಕ್ಷಣಿಕ ಆಡಳಿತಗಾರರಾಗಿ ಸಿದ್ದಲಿಂಗಯ್ಯನವರ ಸೇವೆಯೆಲ್ಲಾ ಕರ್ನಾಟಕ ಸರಕಾರದ ಕಾಲೇಜು ಶಿಕ್ಷಣ ಇಲಾಖೆಯಲ್ಲೇ. ಅಧ್ಯಾಪಕರಾಗಿ ಸೇವೆ ಆರಂಭಿಸಿ, ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಹಂತ ಹಂತವಾಗಿ ಮೇಲೇರಿ ಕಾಲೇಜು ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರಾದರು.

ಹಲವು ವರ್ಷಗಳ ಕಾಲ ಕಾಲೇಜು ಶಿಕ್ಷಣ ಇಲಾಖೆಗೆ ಇಲಾಜು ಮಾಡಿ 1989ರಲ್ಲಿ ನಿವೃತ್ತರಾದರು. ಅಧ್ಯಾಪನ ಮತ್ತು ಶೈಕ್ಷಣಿಕ ಆಡಳಿತದಲ್ಲಿ ಶಿಸ್ತು ಮತ್ತು ದಕ್ಷತೆಗಳಿಂದ ಖ್ಯಾತರಾದ ಪ್ರೊ. ಜಿ.ಎಸ್.ಸಿದ್ದಲಿಂಗಯ್ಯನವರು ಕನ್ನಡದ ಅಗ್ರಪಂಕ್ತಿಯ ಕವಿಗಳಾಗಿಯೂ ಸುಪ್ರಸಿದ್ಧರು. ಸ್ನಾತಕ ವಿದ್ಯಾರ್ಥಿದಿಶೆಯಲ್ಲೇ ಕಾವ್ಯ ಕನ್ನಿಕೆಯ ಮೋಡಿಗೊಳಗಾಗಿ ಕೋರ್ಟ್‌ಶಿಪ್ ಆರಂಭಿಸಿದ ಸಿದ್ದಲಿಂಗಯ್ಯನವರ ಮೊದಲ ಕವನ ಸಂಕಲನ ‘ರಸಗಂಗೆ’ ಪ್ರಕಟವಾದದ್ದು 1960ರಲ್ಲಿ. ನವೋದಯ ಪ್ರತಿಭೆ ಇಳಿಮುಖವಾಗಿ ನವ್ಯ ಕಾವ್ಯ ಪ್ರವರ್ಧಮಾನಕ್ಕೆ ಬರುತ್ತಿದ್ದ ಕಾಲ. ನವ್ಯರನ್ನು ಆಕರ್ಷಿಸಿದ ಎಲಿಯಟ್, ಎಜ್ರಾ ಪೌಂಡ್, ಆಡೆನ್ ಮೊದಲಾದ ಆಂಗ್ಲ ಕವಿಗಳು ಸಿದ್ದಲಿಂಗಯ್ಯನವರನ್ನೂ ಪ್ರಭಾವಿಸದೇ ಇರಲಿಲ್ಲ.

ನವೋದಯ ಮತ್ತು ನವ್ಯ ಎರಡರ ಪ್ರಭಾವಾಲಿಂಗನದಿಂದ ಮುಕ್ತರಾಗಿ ಸ್ವತಂತ್ರ ಅಭಿವ್ಯಕ್ತಿ ಮಾರ್ಗ ರೂಪಿಸಿಕೊಳ್ಳುವ ಹಂಬಲ ಬಲವಾಯಿತು. 1960-1990ರ ನಾಲ್ಕು ದಶಕಗಳ ಅವಧಿಯಲ್ಲಿ ಪ್ರಕಟಗೊಂಡಿರುವ ‘ಚಿತ್ರ-ವಿಚಿತ್ರ’, ‘ಉತ್ತರ’, ‘ಐವತ್ತರ ನೆರಳು’, ‘ಋಷ್ಯಶೃಂಗ’, ‘ಹೇಮಕೂಟ’, ‘ಮುಖಾಮುಖಿ’ ಈ ಸಂಕಲನಗಳಲ್ಲಿ ತಮ್ಮದೇ ಕಾವ್ಯಮಾರ್ಗ ಕಂಡುಕೊಳ್ಳುವ ಸಿದ್ದಲಿಂಗಯ್ಯನವರ ಪ್ರಯೋಗಶೀಲತೆ ಸ್ಪಷ್ಟವಾಗಿ ಗೋಚರಿಸುತ್ತದೆ. ಪ್ರಕೃತಿಯ ವಿರಾಟ್ ಶಕ್ತಿಯ ಜೊತೆಗಿನ ಬೇರ್ಪಡಿಸಲಾಗದ ಸಂಬಂಧ ಸಿದ್ದಲಿಂಗಯ್ಯನವರದು. ‘ರಸ ಗಂಗೆ’ ‘ಮಣ್ಣಿಗಿಳಿದ ಆಕಾಶ’ ಮೊದಲಾಗಿ ಅವರ ಹಲವಾರು ಕವನಗಳಲ್ಲಿ ಪ್ರಕೃತಿ ವಿಲಾಸ ಹಲವು ಮುಖಗಳಲ್ಲಿ ಅಭಿವ್ಯಕ್ತಿ ಪಡೆದಿರುವುದನ್ನು ವಿಮರ್ಶಕರು ಗುರುತಿಸಿದ್ದಾರೆ.

ಪ್ರಕೃತಿಯೊಡನೆ ಕವಿಗಿರುವ ಅವಿನಾಭಾವ ಸಂಬಂಧ, ‘ಗಗನಭೋಗ’, ‘ಸಂಜೆ’, ‘ಶ್ರಾವಣ’, ‘ಶ್ರಾವಣ ಮತ್ತೊಂದು ಚಿತ್ರ’ ಮುಂತಾದ ಕವಿತೆಗಳಲ್ಲಿ ವಿಶೇಷವಾಗಿ ಎದ್ದು ಕಾಣುತ್ತದೆ. ಡಾ.ಎಸ್‌ವಿದ್ಯಾಶಂಕರರು ಗಮನಿಸಿರುವಂತೆ ಸಿದ್ದಲಿಂಗಯ್ಯನವರಿಗೆ ಪ್ರಕೃತಿಯಲ್ಲಿ ಬಹಳ ಪ್ರಿಯವಾದುದು ವಸಂತ ಋತು-ಮಣ್ಣು ಮತ್ತು ಆಕಾಶ. ಕ್ರಮೇಣ ಇವುಗಳೊಂದಿಗಿನ ಮಾನವ ಸಂಬಂಧ ವಿಕೃತಗೊಳ್ಳುತ್ತಿರುವುದು ಕವಿಯನ್ನು ಬಾಧಿಸದೇ ಇಲ್ಲ. ಈ ಮಾತಿಗೆ ನಿದರ್ಶನವಾಗಿ ‘ಪೊಕ್ರಾನ್‌ನಲ್ಲಿ ಸ್ಫೋಟ’, ‘ಮಣ್ಣಿಗಿಳಿದ ಆಕಾಶ’, ‘ಭರವಸೆ’ ಮೊದಲಾದ ಕವಿತೆಗಳನ್ನು ನೋಡಬಹುದು. ‘ಪೊಕ್ರಾನ್‌ನಲ್ಲಿ ಸ್ಫೋಟ’-ಮುಂದುವರಿದ ರಾಷ್ಟ್ರಗಳು ಅಣುವಿಕಿರಣದಿಂದ ಭೂಮಿ ಮತ್ತು ಆಕಾಶಗಳಲ್ಲಿ ವಿನಾಶದ ಬೀಜ ಬಿತ್ತುತ್ತಿರುವ ಆತಂಕದ ಅಭಿವ್ಯಕ್ತಿಯಾದರೆ, ‘ಮಣ್ಣಿಗಿಳಿದ ಆಕಾಶ’ದಲ್ಲಿ ಸುನಾಮಿಯ ಮಾರಣಹೋಮದಿಂದಾದ ನೋವುವಿನಾಶಗಳ ಚಿತ್ರಣವಿದೆ. ಪ್ರಕೃತಿಯ ವಿಕೋಪ, ಮಾನವನ ವಿನಾಶಕಾರಿ ಕೃತ್ಯಗಳನ್ನು ಕಂಡು ಕವಿ ಮನಸ್ಸು ಮುದುಡಿದರೂ ಭವಿಷ್ಯದ ಬಗ್ಗೆ ಭರವಸೆ ಕಳೆದುಕೊಳ್ಳುವುದಿಲ್ಲ.

‘‘ಚಿಗುರಲಿಲ್ಲವೆ ಯೇಟ್ಸ್, ಟಾಲ್‌ಸ್ಟಾಯ್, ಕಾರಂತ ಮುಪ್ಪುಬಂದರೂ ಮಾಗಿ’’ ಎಂದು ಸಮಾಧಾನ ಕಾಣುತ್ತಾರೆ. ಕಾಡನ್ನು ಬೋಳಾಗಿಸುತ್ತಿರುವ ಮನುಷ್ಯನ ಧನದಾಹಿ ಕೃತ್ಯವನ್ನು ಕಂಡು ‘‘ಹೇಗಿತ್ತು ಮಲೆನಾಡು ಎಂದರೆ, ಹೋಗಬೇಕು ಕುವೆಂಪು ಬಳಿಗೆ’’ ಎನ್ನುವ ವ್ಯಂಗ್ಯದಿಂದ ಕುಟುಕುತ್ತಾರೆ. ‘ನಗರಾಯಣ’, ‘ಪಟ್ಟಣೀಕರಣ’ ಕವಿತೆಗಳಲ್ಲಿ ನಗರ ಜೀವನದ ದಾರುಣ ಚಿತ್ರಗಳು ವ್ಯಂಗ್ಯದಲ್ಲಿ ನಮ್ಮನು ತಾಕುತ್ತವೆ. ಗಂಡು-ಹೆಣ್ಣಿನ ಪ್ರೇಮಕಾಮಗಳು ಎಲ್ಲ ಕವಿಗಳಂತೆ ಸಿದ್ದಲಿಂಗಯ್ಯನವರನ್ನೂ ಕಾಡದೆ ಬಿಟ್ಟಿಲ್ಲ.

ಕಂಕಣವೇನಿದು, ನಲ್ಲೆ, ಪ್ರಥಮ ದಿನ ಮೊದಲಾದ ಕವಿತೆಗಳಲ್ಲಿ ದಾಂಪತ್ಯದ ಅರ್ಥ ಮತ್ತು ಪ್ರೀತಿಯ ಸಿಹಿಸಿಹಿ ಅನುಭವಗಳಿದ್ದರೆ, ‘ಯಮುನೆ’, ‘ಋಷ್ಯಶೃಂಗ’ ಮೊದಲಾದ ಕವಿತೆಗಳಲ್ಲಿ ಕಾಮದ ಅನಿವಾರ್ಯತೆ ಮತ್ತು ಹತ್ತಿಕ್ಕಲಾಗದ ಕಾಮದ ದುರಂತ ಪರಿಣಾಮಗಳ ಕಾಣ್ಕೆಯಿದೆ. ಸೃಜನಶೀಲ ಕಾವ್ಯದಂತೆಯೇ ಸಿದ್ದಲಿಂಗಯ್ಯನವರ ಶಾಸ್ತ್ರೀಯ ಅಧ್ಯಯನ ಮತ್ತು ವಿದ್ವತ್ತು ವಿಮರ್ಶೆಯಲ್ಲಿ ಢಾಳಾಗಿ ಪ್ರಕಟಗೊಂಡಿದೆ. ಅವರ ವಿಮರ್ಶೆಯ ವ್ಯಾಪ್ತಿ ಹಳಗನ್ನಡ ನಡುಗನ್ನಡಗಳಿಂದ ಹಿಡಿದು ಹೊಸಗನ್ನಡ ದವರೆಗೆ ವಿಶಾಲವಾದ ಹರಹು ಉಳ್ಳದ್ದು.

ಹಳೆಗನ್ನಡ ನಡುಗನ್ನಡಗಳ ಪರಿಣತಿಯ ಜೊತೆಗೆ ವ್ಯಾಕರಣ, ಛಂದಸ್ಸು, ಕಾವ್ಯ ಮೀಮಾಂಸೆ, ಸಾಹಿತ್ಯ ವಿಮರ್ಶೆಯಲ್ಲೂ ಅವರದು ಅಸ್ಮಿತೆಯ ಪಾಂಡಿತ್ಯ. ಶ್ರೀ ಕವಿ ಲಕ್ಷ್ಮೀಶ, ಪಂಚಮುಖಿ, ಚಾಮರಸ, ಹರಿದಾಸ ಸಾಹಿತ್ಯ ಪರಂಪರೆ, ವಚನ ವಾಙ್ಮಯ ಮತ್ತು ಭಾಷೆ-ಸಿದ್ದಲಿಂಗಯ್ಯನವರ ಗಣನೀಯ ವಿಮರ್ಶಾ ಕೃತಿಗಳು. ಕನ್ನಡ ವಿದ್ವತ್ ಪ್ರಪಂಚದ ವಿಶೇಷ ಮನ್ನಣೆಗೆ ಪಾತ್ರವಾಗಿರುವ ಕೃತಿ, ‘ಲಯವೂ ಅದರ ಪರಿವಾರವೂ’. ಲಯ ಕುರಿತಂತೆ ಸೆಡಿಯಾಪು ಕೃಷ್ಣ ಭಟ್ಟರು ಮೊದಲಾದವರ ಅಧ್ಯಯನ ಮತ್ತು ವಿಶ್ಲೇಷಣೆಗಳನ್ನು ಈ ಕೃತಿಯಲ್ಲಿ ಸುದೀರ್ಘವಾಗಿ ಚರ್ಚಿಸಿರುವ ಸಿದ್ದಲಿಂಗಯ್ಯನವರು ಇಲ್ಲಿಯವರೆಗಿನ ತಪ್ಪುಗ್ರಹಿಕೆ ಮತ್ತು ಕೊರತೆಗಳನ್ನು ಎತ್ತಿ ತೋರಿಸಿ ಲಯದ ಬಗ್ಗೆ ಹೊಸ ಪರಿಕಲ್ಪನೆಯೊಂದನ್ನು ಮಂಡಿಸಿದ್ದಾರೆ. ವಚನ ಸಾಹಿತ್ಯ ಅಧ್ಯಯನ ಮತ್ತು ಸಾಹಿತ್ಯ ವಿಮರ್ಶೆ ಪ್ರೊ. ಸಿದ್ದಲಿಂಗಯ್ಯನವರ ಹೃದಯಕ್ಕೆ ಕಾವ್ಯದಷ್ಟೇ ಪ್ರಿಯವಾದ ವಿದ್ಯಮಾನಗಳು. ಸುಮಾರು ಹದಿನೆಂಟಕ್ಕೂ ಹೆಚ್ಚು ವಿಮರ್ಶಾ ಕೃತಿಗಳನ್ನು ಪ್ರಕಟಿಸಿರುವ ಸಿದ್ದಲಿಂಗಯ್ಯನವರ ವಿಮರ್ಶೆಯಲ್ಲಿ ಸಿಂಹಪಾಲು ವಚನ ಸಾಹಿತ್ಯಕ್ಕೆ ಸಲ್ಲುತ್ತದೆ.

ವಚನ ಸಾಹಿತ್ಯ ಒಂದು ಇಣುಕು ನೋಟ, ವಚನ ವಾಙ್ಮಯ ಮತ್ತು ಭಾಷೆ, ಶಬ್ದ ಸೋಪಾನ-ಇವು ವಚನ ಸಾಹಿತ್ಯ ಕುರಿತ ಗಮನಾರ್ಹ ಕೃತಿಗಳು. ವಚನವೆನ್ನುವ ಒಂದು ಹೊಸ ಅಭಿವ್ಯಕ್ತಿ ಮಾರ್ಗದಲ್ಲಿ ಸಮುದಾ ಯದ ವೈಚಾರಿಕ ಹಾಗೂ ಅನುಭಾವಿಕ ಚಿಂತನೆಗಳು ಹೇಗೆ ಜ್ಞಾನಸ್ಫೋಟಕ್ಕೆ ಪುಟಕೊಟ್ಟವು ಮತ್ತು ದಮನಿತರಲ್ಲಿ ಅಡಗಿಹೋಗಿದ್ದ ದನಿಗಳಲ್ಲಿ ಹೊಸ ಶಕ್ತಿಯ ಸಂಚಲನವನ್ನುಂಟುಮಾಡಿದವು ಎಂಬುದನ್ನು ಸಿದ್ದಲಿಂಗಯ್ಯನವರು ವಚನ ಸಾಹಿತ್ಯ ಅಧ್ಯಯನ ಕೃತಿಗಳಲ್ಲಿ ವಿಶ್ಲೇಷಿಸಿದ್ದಾರೆ. ವಚನಕಾರರ ಚಿಂತನಾಂಶಗಳ ಜೊತೆಗೆ ಭಾಷಾಭಿವ್ಯಕ್ತಿಯಲ್ಲಿನ ಹೊಸತನವನ್ನೂ ಗುರುತಿಸುವ ಸಿದ್ದಲಿಂಗಯ್ಯ ನವರ ಅಧ್ಯಯನ ವಿಶಿಷ್ಟವಾದುದು.

‘ಅಸ್ಪಶ್ಯರು ಮತ್ತು ವಚನಕಾರರು’ ವಚನ ಸಾಹಿತ್ಯ ಅಧ್ಯಯನದಲ್ಲಿ ಮತ್ತೊಂದು ಗಮನಾರ್ಹ ಕೃತಿ. ನವೋದಯ ಕಾವ್ಯದ ಇಬ್ಬರು ಮಾರ್ಗಪ್ರವರ್ತಕ ಕವಿಗಳಾದ ಕುವೆಂಪು ಮತ್ತು ಬೇಂದ್ರೆಯವರನ್ನು ಅಕ್ಕಪಕ್ಕ ಇಟ್ಟು ನೋಡುವ ಒಂದು ವಿಶಿಷ್ಟ ಕೃತಿ: ‘ಭಾಷೆ-ಗೀಷೆ:ಕುವೆಂಪು-ಬೇಂದ್ರೆ’. ನವೋದಯ ಕವಿಗಳು ಕಾವ್ಯ ಭಾಷೆಯನ್ನು ಹೇಗೆ ರೂಪಿಸಿಕೊಂಡರು ಎಂಬುದನ್ನು ತಲಸ್ಪರ್ಶಿ ಅಧ್ಯಯನದಿಂದ ಗ್ರಹಿಸುವ ಈ ಕೃತಿಯಲ್ಲಿ ಸಿದ್ದಲಿಂಗಯ್ಯನವರು ಕುವೆಂಪು ಅವರ ‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯಕ್ಕೆ ವಿಶೇಷ ಗಮನಕೊಟ್ಟಿರುವಂತೆಯೇ ಬೇಂದ್ರೆಯವರ ಕಾವ್ಯದ ಭಾಷೆಯನ್ನೂ ಅಧ್ಯಯನದ ನಿಕಶಕ್ಕೆ ಒಡ್ಡುತ್ತಾರೆ. ಭಾಷೆಯ ಸಾಧ್ಯತೆಯ ಹೊಸ ದಿಕ್ಕುಗಳನ್ನು ರಾಮಾನುಜನ್ ಅವರ ‘ಹೊಕ್ಕುಳಲ್ಲಿ ಹೂವಿಲ್ಲ’ ಕಾವ್ಯದಂತೆ ಕಾಣಿಸುತ್ತಾರೆ.

 ಪ್ರೊ. ಸಿದ್ದಲಿಂಗಯ್ಯನವರ ಕೃತಿಗಳ ಸಂಖ್ಯೆ ಎರಡಂಕಿಯನ್ನು ದಾಟಿ ಎಷ್ಟೋ ವರ್ಷಗಳಾಗಿವೆ. ಕಾವ್ಯ, ವಿಮರ್ಶೆಯ ಜೊತೆಗೆ ಜೀವನ ಚರಿತ್ರೆ, ಗ್ರಂಥ ಸಂಪಾದನೆ ಮತ್ತು ಅನುವಾದಗಳು ಅವರ ಪ್ರತಿಭೆಯ ಇತರ ಕವಲುಗಳು. ‘ಬಸವಣ್ಣ’, ‘ಮಹಾನುಭಾವ ಬುದ್ಧ’, ‘ಭಾಲ್ಕಿಯ ಪಟ್ಟದ ದೇವರು’ ಪ್ರಮುಖ ಜೀವನ ಚರಿತ್ರೆಗಳಾದರೆ, ‘ಶತಾಬ್ದಿ ದೀಪ’, ‘ಜಂಗಮ ಜ್ಯೋತಿ’, ‘ಅಣ್ಣನ ನೂರೊಂದು ವಚನಗಳು’ ‘ಶರಣೇ ರಾಮಮ್ಮ’, ‘ಅಂಬಿಗರ ಚೌಡಯ್ಯ’ ಮೊದಲಾದವು ಸಂಪಾದಿತ ಕೃತಿಗಳು. ಅನುವಾದದಲ್ಲಿ, ‘ವಾಸ್ವಾನಿಯವರ ಕೃತಿಗಳು’, ‘ಸ್ವಾಮಿ ನಿಗಮಾನಂದ’ ಮಹತ್ವದ ಕೃತಿಗಳಾಗಿವೆ.

‘ನೆನಪಿಗೊಗ್ಗರಣೆ’ ಅವರ ಆತ್ಮಕಥೆ. ಪ್ರೊ. ಜಿ.ಎಸ್.ಸಿದ್ದಲಿಂಗಯ್ಯನವರು 1989-1992ರ ವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದವರು. ‘‘ಬ್ರಹ್ಮನೇ ಸ್ವತ: ಬಂದರೂ ನನ್ನನ್ನು ಭ್ರಷ್ಟನನ್ನಾಗಿ ಮಾಡಲು ಸಾಧ್ಯವಿಲ್ಲ’’ ಎಂದು ಅಧ್ಯಕ್ಷರಾದ ಕೂಡಲೇ ಘೋಷಿಸಿದ ಸಿದ್ದಲಿಂಗಯ್ಯನವರು ನಡೆಯಲ್ಲಿ ಅದನ್ನು ಸಾಕ್ಷಾತ್ಕರಿಸಿ ತೋರಿಸಿ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾದವರು. ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಬೆಂಗಳೂರು ಕೇಂದ್ರಿತ ಸಾಹಿತ್ಯ ಪರಿಷತ್ತಿನ ಅಧಿಕಾರ ವಿಕೇಂದ್ರೀಕರಣಕ್ಕೆ ಆದ್ಯತೆ ನೀಡಿದರು. ಜಿಲ್ಲೆ, ತಾಲೂಕು, ಹೋಬಳಿಗಳಿಗೆ ಕನ್ನಡದ ಕಂಪು ಪಸರಿಸಲು ಪ್ರಯತ್ನಿಸಿದರು. ಸಿದ್ದಲಿಂಗಯ್ಯನವರು ಪಂಪ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಜ್ಞಾನ ಪೀಠ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳ ಆಯ್ಕೆ ಸಮಿತಿಯಲ್ಲಿದ್ದು ಕೆಲಸ ಮಾಡಿದವರು. ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಸಿದ್ದಲಿಂಗಯ್ಯನವರನ್ನರಿಸಿ ಬಂದಿವೆ.

ಪ್ರೊ. ಜಿ.ಎಸ್.ಸಿದ್ದಲಿಂಗಯ್ಯನವರ ಕಾವ್ಯ ಧ್ವನಿ ದಲಿತ ಕವಿ ಡಾ. ಸಿದ್ದಲಿಂಗಯ್ಯನವರ ಕಾವ್ಯದಂತೆ ಸಿಡಿಮದ್ದಿನ ಸ್ಫೋಟವಲ್ಲ. ಅವರದು ಮೌನದಿಂ ಬಿರಿವ ಧ್ವನಿ. ಮೌನದಿಂ ಬಿರಿವ ಆ ಕಾವ್ಯ ಧ್ವನಿಯಲ್ಲಿ ಸುಮದ ಸೌರಭವೂ ಇದೆ, ವಾಸನಾ ಜೀವಿ ಮನುಷ್ಯನ ಮತ್ತು ಅವನ ಪರಿಸರದ ವಾಸನೆಗಳ ಸೌಮ್ಯಾಸ್ಫೋಟವೂ ಇದೆ. ರಾಜಿಸಂಧಾನದ ಒತ್ತಡಗಳಿಗೆ ಮಣಿಯದ ಪ್ರೊ. ಸಿದ್ದಲಿಂಗಯ್ಯನವರು ಬಗ್ಗದಕುಗ್ಗದ ಸತ್ಯಾನ್ವೇಷಿ. ಕೋಪಿಷ್ಟನಾಗಿದ್ದರೂ ಜನರು ಅವರನ್ನು ಪ್ರೀತಿಸುವುದಕ್ಕೆ ಇದೇ ಕಾರಣವಿದ್ದೀತು. ಅವರು ನಿಸ್ಸೀಮ. ಎಂದೇ 85ರ ಹುಟ್ಟುಹಬ್ಬದಲ್ಲಿ ಅಭಿಮಾನಿಗಳು ಅವರಿಗೆ ಅರ್ಪಿಸಿರುವ ಅಭಿನಂದನಾ ಗ್ರಂಥ ‘ನಿಸ್ಸೀಮ’ ಅನ್ವರ್ಥವೂ ಅರ್ಥಪೂರ್ಣವೂ ಆದುದು.

Writer - ಜಿ.ಎನ್. ರಂಗನಾಥ್ ರಾವ್

contributor

Editor - ಜಿ.ಎನ್. ರಂಗನಾಥ್ ರಾವ್

contributor

Similar News