ಮುಸ್ತಫಾ-ಜಾನಕಿ ಸ್ನೇಹಿತರಾದರು!

Update: 2017-04-05 18:48 GMT

ಇದೆಲ್ಲ ನಡೆದು ಮೂರು ನಾಲ್ಕು ತಿಂಗಳಾಗಬಹುದು. ಒಂದು ದಿನ ಜಾನಕಿಯನ್ನು ಜ್ವರ ಅಂಟಿಕೊಂಡಿತು. ಜ್ವರ ಎಷ್ಟು ತೀವ್ರವಾಗಿತ್ತು ಎಂದರೆ ನಾಲ್ಕು ದಿನ ತರಗತಿಗೆ ಹಾಜರಾಗುವುದಕ್ಕೆ ಸಾಧ್ಯವಾಗಲಿಲ್ಲ. ಊರಿನಿಂದ ತಂದೆ, ತಾಯಿ ಇಬ್ಬರೂ ತಕ್ಷಣ ಕಾರು ಮಾಡಿಕೊಂಡು ಬಂದರು. ಜಾನಕಿ ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳಲಿ ಎಂದು ವೈದ್ಯರು ಸಲಹೆ ನೀಡಿದ್ದುದರಿಂದ ಮಗಳನ್ನು ಕರೆದುಕೊಂಡೇ ಹೋದರು.

ಜಾನಕಿಗೆ ಮಾತ್ರ ತಳಮಳ. ‘‘ಅಪ್ಪಾಜಿ, ಪರೀಕ್ಷೆ ಹತ್ತಿರ ಬಂತು...’’

‘‘ಆರೋಗ್ಯ ಮುಖ್ಯ ಮಗಳೇ...’’ ಗುರೂಜಿ ಸಂತೈಸಿದರು. ಪಪ್ಪುವಿನ ತಂದೆ ಅನಂತ ಭಟ್ಟರು ಜಾನಕಿಯ ಆರೋಗ್ಯ ವಿಚಾರಿಸಲು ಬಂದರು.

‘‘ಹೇಗಿದ್ದಿ ಜಾನಕಿ...’’ ಕೇಳಿದರು.

‘‘ಚೆನ್ನಾಗಿದ್ದೇನೆ ಸಾರ್...ಪಪ್ಪು ಹೇಗಿದ್ದಾನೆ...’’ ಜಾನಕಿ ವಿಚಾರಿಸಿದಳು.

‘‘ಅವನು ಹೇಗಿರುವುದು...ನಿನಗೆ ಗೊತ್ತಿದ್ದದ್ದೇ...ಅವನು ಉಪ್ಪಿನಂಗಡಿ ಕಾಲೇಜಿನಲ್ಲಿ ಆರ್ಟ್ಸ್ ಓದುತ್ತಿದ್ದಾನೆ...ಯಾವಾಗಲೂ ನಿನ್ನದೇ ಜಪ....’’

ಜಾನಕಿ ನಕ್ಕಳು. ಎಸೆಸೆಲ್ಸಿಯಲ್ಲಿ ಸದಾ ತನ್ನ ಹಿಂದೆಯೇ ಪಪ್ಪು ಸುತ್ತುತ್ತಿರುವುದನ್ನು ನೆನೆದುಕೊಂಡಳು. ಯಾಕೋ ಮುಸ್ತಫಾ ನೆನಪಾದ.

‘‘ಕಾಲೇಜು ಹೇಗಿದೆಯಮ್ಮ?’’ ಅನಂತ ಭಟ್ಟರು ಕೇಳಿದರು.

ಜಾನಕಿ ವೌನವಾದಳು. ‘‘ಯಾಕಮ್ಮ? ಕಾಲೇಜು ಇಷ್ಟವಾಗಲಿಲ್ಲವೇ?’’ ಮತ್ತೆ ಕೇಳಿದರು.

‘‘ಪೊಲಿಟಿಕ್ಸ್ ಸ್ವಲ್ಪ ಜಾಸ್ತಿ ಕಾಲೇಜಿನಲ್ಲಿ...’’ ಎಂದಳು ಜಾನಕಿ.

‘‘ಅದಕ್ಕೆಲ್ಲ ನೀನು ತಲೆಕೊಡಬೇಡಮ್ಮ. ಕಾಲೇಜು ಎಂದಮೇಲೆ ಅದೆಲ್ಲ ಇರುತ್ತದೆ. ನೀನು ಓದಿನ ಕಡೆ ಗಮನಕೊಡು...ಒಳ್ಳೆಯ ವಿದ್ಯಾರ್ಥಿಗಳ ಸಂಗ ಮಾಡು...ಸಜ್ಜನರ ಸಂಗ ಹೆಜ್ಜೇನು ಸವಿದಂತೆ...’’

‘‘ಸರಿ ಸಾರ್’’ ಜಾನಕಿ ತಲೆಯಾಡಿಸಿದಳು.

 ಎರಡು ದಿನದಲ್ಲಿ ಚೇತರಿಸಿದ್ದೇ ಆಕೆ ಮತ್ತೆ ಪುತ್ತೂರು ಬಸ್ ಹತ್ತಿದಳು.

 ‘‘ಕಾರಿನಲ್ಲಿ ಬಿಡುತ್ತೇನೆ’’ ಎಂದು ಗುರೂಜಿ ಹೇಳಿದರೂ ಆಕೆ ಬೇಡವೆಂದು ಬಸ್‌ನಲ್ಲಿ ಹೊರಟಳು.

ಒಂದೆಡೆ ಪರೀಕ್ಷೆ ಹತ್ತಿರ ಬರುತ್ತಿದೆ. ನಾಲ್ಕೈದು ದಿನಗಳ ತರಗತಿ ಬೇರೆ ಕೈ ಬಿಟ್ಟಿದೆ. ಅವಳಿಗೆ ಚಿಂತೆ ಹತ್ತಿತ್ತು. ಅತ್ಯುತ್ತಮ ಅಂಕ ಪಡೆಯುವುದು ಅವಳ ಗುರಿಯಾಗಿತ್ತು. ಹೀಗಿರುವಾಗ, ಈ ಜ್ವರ ತನ್ನ ಅಂಕವನ್ನೆಲ್ಲ ತಿಂದು ಬಿಡುತ್ತದೆಯೋ ಏನೋ ಎಂದು ಭಯವಾಗತೊಡಗಿತು. ಹಾಸ್ಟೆಲ್‌ಗೆ ಹೋದದ್ದೇ ಮೊದಲು ಯಾರಿಂದಾದರೂ ನೋಟ್ಸ್ ಪಡೆದು ಎಲ್ಲವನ್ನು ಬರೆದುಕೊಳ್ಳಬೇಕು. ಹೀಗೆ ಪ್ರಯಾಣ ದುದ್ದಕ್ಕೂ ಯೋಚಿಸುತ್ತಿದ್ದಳು.

ಹಾಸ್ಟೆಲ್‌ಗೆ ಬಂದದ್ದೇ ಆಕೆ ಮೀನಾಕ್ಷಿಯಲ್ಲಿ ನೋಟ್ಸ್ ಕೇಳಿದಳು. ಆದರೆ ಅದನ್ನು ನಂಬಿ ಪರೀಕ್ಷೆ ಬರೆಯುವಂತಿಲ್ಲ ಎನ್ನುವುದು ನೋಟ್ಸ್ ಬಿಡಿಸಿದಾಗ ಅವಳಿಗೆ ಅರ್ಥವಾಯಿತು. ಮೀನಾಕ್ಷಿ ನೋಟ್ಸ್ ಬರೆಯುವುದರಲ್ಲಿ ತೀರಾ ಸೋಮಾರಿಯಾಗಿದ್ದಳು. ಎಲ್ಲವನ್ನೂ ಅರ್ಧಂಬರ್ಧ ಬರೆದಿಟ್ಟಿದ್ದಳು. ‘‘ನನಗೆ ಒಳ್ಳೆಯ ನೋಟ್ಸ್ ಬೇಕು. ಕಳೆದ ನಾಲ್ಕು ದಿನಗಳ ನೋಟ್ಸನ್ನು ಮತ್ತೆ ಬರೆಯಬೇಕು...ಯಾರನ್ನು ಕೇಳುವುದು?’’ ಮೀನಾಕ್ಷಿಯ ಮುಂದೆ ಪ್ರಶ್ನೆಯನ್ನಿಟ್ಟಳು. ಮೀನಾಕ್ಷಿ ಕೆಲವು ಹೆಸರುಗಳನ್ನು ಹೇಳಿದಳು.

ಆದರೆ ಆಕೆಗೆ ತನ್ನಷ್ಟೇ ಪ್ರತಿಭಾವಂತ ವಿದ್ಯಾರ್ಥಿಯ ನೋಟ್ಸ್ ಬೇಕಾಗಿತ್ತು. ತನಗಿಂತ ಮೊದಲ ಸ್ಥಾನದಲ್ಲಿರುವವನು ಒಬ್ಬನೇ. ‘‘ಮೀನಾಕ್ಷಿ...ಆ ಮುಸ್ತಫಾನಲ್ಲಿ ನೋಟ್ಸ್ ಕೇಳಿ ಕೊಡುತ್ತೀಯ?’’

ಮೀನಾಕ್ಷಿ ಬೆಕ್ಕಸಬೆರಗಾಗಿ ಜಾನಕಿಯನ್ನು ನೋಡಿದಳು.

‘‘ಈಗ ತರಗತಿಯಲ್ಲಿ ಒಳ್ಳೆಯ ನೋಟ್ಸ್ ಇರೋದು ಮುಸ್ತಫಾನ ಬಳಿ ಮಾತ್ರ...’’ ಜಾನಕಿ ತನ್ನ ಮಾತನ್ನು ಸಮರ್ಥಿಸಿಕೊಂಡಳು.

‘‘ಅದಕ್ಕೆ ಆ ಜಾತಿಯವನಲ್ಲಿ ನೋಟ್ಸ್ ಕೇಳುವುದಾ...ನನ್ನಿಂದ ಸಾಧ್ಯವಿಲ್ಲ. ನನಗೆ ಅವನನ್ನು ಕಂಡರೆ ಆಗುವುದಿಲ್ಲ...ಅವನೊಟ್ಟಿಗೆ ಮಾತನಾಡಿದ್ದು ಗೊತ್ತಾದರೆ ತಂದೆ ಕೊಂದೇ ಬಿಡಬಹುದು...’’ ಮೀನಾಕ್ಷಿ ಹೇಳಿದಳು.

‘‘ಆದರೆ ಬೇರೆ ದಾರಿಯೇ ಇಲ್ಲ...ನಾಲ್ಕು ದಿನದ ನೋಟ್ಸ್ ನಾನು ಬರೆದುಕೊಳ್ಳದೇ ಇದ್ದರೆ ಈ ಬಾರಿ ಪರೀಕ್ಷೆಯಲ್ಲಿ ಮೇಲೆ ಬೀಳುವ ಲಕ್ಷಣ ನನಗೆ ಕಾಣುವುದಿಲ್ಲ...’’ ಜಾನಕಿ ತನಗೆ ತಾನೇ ಗೊಣಗಿದಳು. ‘‘ನೀನು ಕೇಳದೇ ಇದ್ದರೆ ನಾನೇ ಅವನಲ್ಲಿ ಕೇಳುತ್ತೇನೆ...’’ ‘‘ಹೊಟ್ಟೆ ಉರಿಯಿಂದ ಅವನು ಕೊಡದೇ ಹೋದರೆ...’’ ಮೀನಾಕ್ಷಿ ಅನುಮಾನ ಮುಂದಿಟ್ಟಳು.

‘‘ಕೊಡದಿದ್ರೆ ಬಿಡು. ಕೇಳಿ ನೋಡು...’’

ಅಂದು ತರಗತಿಯಲ್ಲಿ ಮೀನಾಕ್ಷಿಯ ಕಣ್ಣು ಮುಸ್ತಫಾನ ಮೇಲೆಯೇ ಇತ್ತು. ಯಾವ ಸಂದರ್ಭ ದಲ್ಲಿ ಅವನನ್ನು ಭೇಟಿ ಮಾಡಿ, ನೋಟ್ಸ್ ಕೇಳುವುದು ಎಂದು ಲೆಕ್ಕಾಚಾರ ಹಾಕುತ್ತಿದ್ದಳು. ಮುಸ್ತಫಾ ಪಾಠದಲ್ಲಿ ತಲ್ಲೀನನಾಗಿದ್ದ. ಪಾಠ ಮುಗಿದ ಬಳಿಕವೂ ಅದೇನೋ ಓದುತ್ತಾ, ಬರೆಯುತ್ತಾ ಕಾಲ ಕಳೆಯುತ್ತಿದ್ದ. ಮಧ್ಯಾಹ್ನ ಊಟಕ್ಕೆ ಬಿಡುವ ಹೊತ್ತಲ್ಲಿ ಅವನನ್ನು ಮೀನಾಕ್ಷಿ ಮುಖಾಮುಖಿಯಾದಳು.

‘‘ಮುಸ್ತಫಾ, ಒಂದು ಸಹಾಯವಾಗಬೇಕಾಗಿತ್ತು...’’ ಕಷ್ಟಪಟ್ಟು ಮೀನಾಕ್ಷಿ ಬಾಯಿ ತೆರೆದಳು.

ತನ್ನೆದುರು ಮೀನಾಕ್ಷಿ ಬಂದು ನಿಂತದ್ದು ಕಂಡೇ ಮುಸ್ತಫಾ ಆತಂಕಿತನಾಗಿದ್ದ. ಈಗ ಸಹಾಯ ಬೇಕು ಎಂದು ಕೇಳುತ್ತಿದ್ದಾಳೆ. ‘‘ಎಂತ ಆಗಬೇಕು?’’ ಕನ್ನಡಕ ಸರಿಪಡಿಸುತ್ತಾ ಕೇಳಿದ.

‘‘ಜಾನಕಿ ಕಳೆದ ನಾಲ್ಕು ದಿನಗಳಿಂದ ರಜೆ ಹಾಕಿದ್ದಳು. ಅವಳಿಗೆ ಸಿಕ್ಕಾಪಟ್ಟೆ ಜ್ವರವಿತ್ತು. ಅವಳಿಗೆ ನಿನ್ನ ನೋಟ್ಸ್ ಬೇಕಂತೆ...’’

ಮುಸ್ತಫಾನಿಗೆ ತುಂಬಾ ಖುಷಿಯಾಗಿ ಬಿಟ್ಟಿತ್ತು. ತಕ್ಷಣವೇ ಕೇಳಿದ ನೋಟ್ಸನ್ನು ಎತ್ತಿ ಕೊಟ್ಟೇ ಬಿಟ್ಟ. ಜಾನಕಿ ಆ ತರಗತಿಯ ಪ್ರತಿಷ್ಠೆಯ ಹೆಸರು. ಅವಳೇ ತನ್ನಲ್ಲಿ ನೋಟ್ಸ್ ಕೇಳಿದಳು ಎನ್ನುವುದು ಅವನಿಗೆ ಸಂಭ್ರಮದ ವಿಷಯವಾಗಿತ್ತು. ಅವನಿಂದ ನೋಟ್ಸ್ ಇಸಿದುಕೊಂಡವಳೇ ನೇರ ಜಾನಕಿಯ ಬಳಿ ನಡೆದಳು ಮೀನಾಕ್ಷಿ.

‘‘ತಗೊಮ್ಮ ನೋಟ್ಸ್....ನನಗೋ ಭೂಮಿಯೇ ಬಾಯಿ ಬಿರಿದು ನುಂಗಿದ ಅನುಭವವಾಯಿತು.... ನೋಟ್ಸ್ ಕೊಡುವಾಗ ಅವನ ಬಿಂಕ ನೋಡ ಬೇಕಾಗಿತ್ತು’’

ಮುಸ್ತಫಾನ ನೋಟ್ಸ್‌ನ ಅಚ್ಚುಕಟ್ಟು ಜಾನಕಿಗೆ ತುಂಬಾ ಇಷ್ಟವಾಯಿತು.

 ‘‘ಮೀನಾಕ್ಷಿ...ಅವನ ಅಕ್ಷರ ಮುತ್ತು ಪೋಣಿಸಿಟ್ಟ ಹಾಗಿದೆ ಕಣೇ...’’ ಎಂದಳು ಜಾನಕಿ.

ಮೀನಾಕ್ಷಿಗೆ ಆ ಹೊಗಳಿಕೆ ಇಷ್ಟವಾಗಲಿಲ್ಲ. ಸ್ಪೆಲ್ಲಿಂಗ್ ಮಿಸ್ಟೇಕ್‌ಗಳು ಎಲ್ಲೊ ಒಂದೆರಡಷ್ಟೇ ಇದ್ದವು. ಮೇಷ್ಟ್ರು ವೇಗವಾಗಿ ಹೇಳುತ್ತಾ ಹೋದಂತೆ...ಅಷ್ಟೇ ವೇಗವಾಗಿ ತಪ್ಪಿಲ್ಲದೆ, ಮುದ್ದಾಗಿ ಬರೆಯುವುದೆಂದರೆ ಸುಲಭವಲ್ಲ. ಎರಡು ದಿನಗಳ ಕಾಲ ಆತನ ನೋಟ್ಸನ್ನು ನಕಲು ಮಾಡಿದ ಜಾನಕಿ ಪುಸ್ತಕವನ್ನು ಕೊಡುವಾಗ ಅದರಲ್ಲಿ ‘‘ಥ್ಯಾಂಕ್ಸ್ -ಮುಸ್ತಫಾ’’ ಎಂದು ಚೀಟಿ ಬರೆದಿಟ್ಟಳು. ಈ ಬಾರಿ ಪುಸ್ತಕವನ್ನು ಮೀನಾಕ್ಷಿ ಕೈಯಲ್ಲಿ ಕೊಡದೇ ತಾನೇ ಮುಸ್ತಫಾನ ಬಳಿ ಸಾರಿ ಕೊಟ್ಟಳು. ‘‘ನಿನ್ನ ಅಕ್ಷರ ಮುತ್ತಿನ ಹಾಗಿದೆ...ಥ್ಯಾಂಕ್ಸ್...’’ ಎಂದು ಹೇಳಿದಳು ಜಾನಕಿ. ಅವನ ಕಣ್ಣಲ್ಲಿ ನೂರು ವೋಲ್ಟೇಜ್‌ನ ಬಲ್ಪ್ ಬೆಳಗಿ ಬಿಟ್ಟಿತು. ‘‘ಪರವಾಗಿಲ್ಲ...ಯಾವತ್ತು ಬೇಕಾದರೂ ಕೇಳಿ... ನಾನು ಕೊಡುತ್ತೇನೆ....’’ ಎಂದ ಮುಸ್ತಫಾ.

‘‘ಸರಿ’’ ಎಂದ ಜಾನಕಿ ಒಮ್ಮೆಲೆ ಕೇಳಿದಳು ‘‘ನೀನು ರಾಮಾಯಣ ಕತೆ ಎಲ್ಲಿ ಓದಿದ್ದು?’’

‘‘ಸಣ್ಣದರಲ್ಲಿ ಅಮರ ಚಿತ್ರ ಕತೆ ಓದುತ್ತಾ ಇದ್ದೆ...ಮನೆಗೆ ಅಪ್ಪ ಕತೆ ಪುಸ್ತಕಗಳನ್ನು ತರ್ತಾ ಇರ್ತಾರೆ...ಅದರಿಂದ ಓದಿದೆ...ಅಪ್ಪನಿಗೂ ರಾಮಾಯಣ ಗೊತ್ತು...’’ ಎಂದ.

‘‘ಹೌದಾ?’’ ಜಾನಕಿಗೆ ಅಚ್ಚರಿ.

‘‘ನಿಮ್ಮ ತಂದೆ ಎಲ್ಲ ಮುಸ್ಲಿಮರ ಹಾಗೆ ಅಲ್ಲ...’’ ಎಂದು ಮೆಚ್ಚುಗೆ ಸೂಚಿಸಿದಳು. ಮುಸ್ತಫಾನಿಗೂ ತುಂಬಾ ಖುಷಿಯಾಯಿತು.

‘‘ನಿಮಗೆ ಗೊತ್ತಾ...ನನ್ನ ತಂದೆ ಮತ್ತು ಕನ್ನಡ ಪಂಡಿತರು ಕ್ಲಾಸ್‌ಮೇಟ್ಸ್ ಅಂತೆ. ಮೇಷ್ಟ್ರೇ ಹೇಳಿದರು...’’

‘‘ಗೊತ್ತಿದೆ. ಅವತ್ತು ಪಂಡಿತರೇ ಕ್ಲಾಸ್‌ನಲ್ಲಿ ಹೇಳಿದರಲ್ಲ...’’ ಇಲ್ಲವಾದರೆ ಮುಸ್ತಫಾ ಇದನ್ನೆಲ್ಲ ಮೈಗೂಡಿಸಿಕೊಳ್ಳಲು ಸಾಧ್ಯವೇ?

‘‘ನನ್ನ ತಂದೆ ಈ ಕಾಲೇಜಿನ ಸ್ಥಾಪಕ ಸದಸ್ಯರು...ಗೊತ್ತಾ?’’ ಜಾನಕಿ ಹೇಳಿದಳು.

‘‘ನನಗೆ ಗೊತ್ತು...’’ ಮುಸ್ತಫಾ ಹೇಳಿದ. ಮುಸ್ತಫಾನ ಜೊತೆಗೆ ಅಷ್ಟು ಹೊತ್ತು ಜಾನಕಿ ಮಾತನಾಡಿದ್ದು ಮೀನಾಕ್ಷಿಗೆ ಇಷ್ಟವಾಗಲಿಲ್ಲ ಅಂದು ಹಾಸ್ಟೆಲ್‌ನಲ್ಲಿ ಮಲಗುವ ಹೊತ್ತಿನಲ್ಲಿ ಮೀನಾಕ್ಷಿ ಕಡಕ್ ಹೇಳಿಯೇ ಬಿಟ್ಟಳು. ‘‘ನೋಡು...ಅವನಲ್ಲಿ ಅಷ್ಟೆಲ್ಲ ಮಾತನಾಡಬೇಡ...ನಿನಗೆ ಗೊತ್ತಿಲ್ಲ ಅವರ ವಿಷಯ...’’

‘‘ಮುಸ್ತಫಾ ಎಲ್ಲ ಮುಸ್ಲಿಮರ ಹಾಗೆ ಅಲ್ಲ ಕಣೇ...ಅವನ ಅಪ್ಪನಿಗೆ ರಾಮಾಯಣ ಗೊತ್ತಂತೆ....ಅವರ ಮನೆಯಲ್ಲಿ ರಾಮ-ಸೀತೆಯ ಫೋಟೋ ಉಂಟಂತೆ...’’ ಜಾನಕಿ ಕೊನೆಯ ಸಾಲನ್ನು ಬೇಕೆಂದೇ ಸೇರಿಸಿದ್ದಳು. ಮೀನಾಕ್ಷಿ ಆ ಕಾರಣದಿಂದಲಾದರೂ ಅವನ ಬಗ್ಗೆ ಮೃದುವಾಗಲಿ ಎನ್ನುವುದು ಅವಳ ಆಸೆಯಾಗಿತ್ತು. ‘‘ಏನೇ ಇರಲಿ. ನಮ್ಮ ಜಾಗ್ರತೆಯಲ್ಲಿ ನಾವಿರಬೇಕು. ಅಷ್ಟೇ....’’ ಮೀನಾಕ್ಷಿ ಅಧಿಕಾರಯುತ ಧ್ವನಿಯಲ್ಲಿ ಹೇಳಿದಳು.

ಆಮೇಲೆ ಆಗಾಗ ಮುಸ್ತಫಾನನ್ನು ಕಂಡರೆ ಜಾನಕಿ ಮುಗುಳ್ನಗುತ್ತಿದ್ದಳು. ಅದರಾಚೆಗೆ ಮಾತನಾಡುವ ಧೈರ್ಯ ಅವರಲ್ಲಿರಲಿಲ್ಲ. ಎಬಿವಿಪಿಯ ಹುಡುಗರು ನೋಡಿದರೆ ಸುಮ್ಮನೆ ರಾದ್ಧಾಂತವಾದೀತು ಎಂಬ ಭಯವೂ ಅವಳಿಗಿತ್ತು. ಆ ವರ್ಷದ ಪರೀಕ್ಷೆ, ವಾರ್ಷಿಕೋತ್ಸವ, ಸಾಂಸ್ಕೃತಿಕ ಸ್ಪರ್ಧೆಯ ಸಂದರ್ಭದಲ್ಲಿ ಆಗಾಗ ಮುಸ್ತಫಾನ ಜೊತೆಗೆ ಜಾನಕಿ ಮುಖಾಮುಖಿಯಾಗುತ್ತಲೇ ಇದ್ದಳು. ಈಗೀಗ ಜಾನಕಿಯೂ ಒಂದಿಷ್ಟು ಔದಾರ್ಯವನ್ನು ತೋರಿಸುತ್ತಿದ್ದಳು. ಮುಸ್ತಫಾನ ಪ್ರತಿಭೆಯನ್ನು ಒಪ್ಪಿಕೊಳ್ಳಲು ಪ್ರಯತ್ನಿಸುತ್ತಿದ್ದಳು.

ಭಾಷಣ ಸ್ಪರ್ಧೆಯ ಸಂದರ್ಭದಲ್ಲಿ ‘‘ಈ ಬಾರಿಯೂ ನಿನಗೇ ಮೊದಲ ಬಹುಮಾನ...’’ ಎನ್ನುವಷ್ಟು ಮನಸ್ಸನ್ನು ಅಗಲ ಮಾಡಿಕೊಂಡಿದ್ದಳು. ಮುಸ್ತಫಾನೋ...ಜಾನಕಿಗೆ ಪ್ರಥಮ ಬಹುಮಾನ ಸಿಕ್ಕಿ, ತನಗೆ ದ್ವಿತೀಯ ಸಿಕ್ಕಿದರೆ ಸಾಕು ಎಂದು ಒಳಗೊಳಗೆ ದೇವರಲ್ಲಿ ಪ್ರಾರ್ಥಿಸುತ್ತಿದ್ದ. ಯಾಕೆಂದರೆ, ಸೋತ ಜಾನಕಿಯ ಮುಖವನ್ನು ನೋಡಿದಾಗ ಅವನಲ್ಲಿ ಯಾವುದೋ ಅಪರಾಧ ಪ್ರಜ್ಞೆ ಕಾಡುತ್ತಿತ್ತು. ಎಲ್ಲಿ ಅದು ನಮ್ಮ ಅಳಿದುಳಿದ ಸ್ನೇಹವನ್ನು ದೂರ ಮಾಡಿ ಬಿಡುತ್ತದೋ ಎಂಬ ಭಯ ಅವನನ್ನು ಕಾಡುತ್ತಿತ್ತು. ಹಾಗೂ ಹೀಗೂ ವಿವೇಕ ಶ್ರೀ ಕಾಲೇಜಿನ ಒಂದು ವರ್ಷ ಕಳೆದೇ ಹೋಯಿತು. ಮೊದಲ ವರ್ಷದ ಫಲಿತಾಂಶ ಹೊರಗೆ ಬಿತ್ತು.

ಫಲಿತಾಂಶದಲ್ಲ್ಲಿ ಜಾನಕಿ ಪ್ರಥಮ ಸ್ಥಾನ ಪಡೆದಿದ್ದಳು. ಪ್ರಥಮ ಸ್ಥಾನಿಯಾಗಿದ್ದ ಮುಸ್ತಫಾ ಆರನೆ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದ. ಫಲಿತಾಂಶದಿಂದ ಮುಸ್ತಫಾ ನಿಜಕ್ಕೂ ಮಂಕಾಗಿದ್ದ. ಜಾನಕಿ ಮುಂದಿರುವುದು ಅವನಿಗೆ ಸಮಾಧಾನ ತಂದಿತ್ತು. ತಾನು ಚೆನ್ನಾಗಿಯೇ ಬರೆದಿದ್ದೆ, ದ್ವಿತೀಯ ಸ್ಥಾನ ತನ್ನದಾಗಬೇಕಾಗಿತ್ತು ಎಂದು ಅವನು ಪದೇ ಪದೇ ಮನದಲ್ಲಿ ಅಂದುಕೊಳ್ಳುತ್ತಿದ್ದ.

(ರವಿವಾರ ಸಂಚಿಕೆಗೆ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News