ಜಾಧವ ಪ್ರಕರಣದ ಆರೋಪ ಪಟ್ಟಿ, ತೀರ್ಪಿನ ಪ್ರತಿಗಾಗಿ ಭಾರತದ ಆಗ್ರಹ

Update: 2017-04-14 14:08 GMT

 ಇಸ್ಲಾಮಾಬಾದ್,ಎ.14: ತನ್ನ ಪ್ರಜೆ ಕುಲಭೂಷಣ ಜಾಧವ್ ಅವರಿಗೆ ಮರಣ ದಂಡನೆಯನ್ನು ವಿಧಿಸಲಾಗಿರುವ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದ ಆರೋಪ ಪಟ್ಟಿ ಮತ್ತು ತೀರ್ಪಿನ ಪ್ರಮಾಣೀಕೃತ ಪ್ರತಿಗಳನ್ನು ತನಗೆ ನೀಡುವಂತೆ ಭಾರತವು ಶುಕ್ರವಾರ ಪಾಕಿಸ್ತಾನವನ್ನು ಆಗ್ರಹಿಸಿದೆ. ಅಲ್ಲದೆ,ಜಾಧವ್‌ಗೆ ನ್ಯಾಯವಾದಿಗಳ ನೆರವಿಗೆ ಅವಕಾಶ ಒದಗಿಸುವಂತೆಯೂ ಕೋರಿದೆ. ಪಾಕಿಸ್ತಾನದ ಸೇನಾ ನ್ಯಾಯಾಲಯವು ಗೂಢಚರ್ಯೆ ಆರೋಪದಲ್ಲಿ ಜಾಧವ್‌ಗೆ ಮರಣದಂಡನೆಯನ್ನು ವಿಧಿಸಿದೆ.

ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ರಾಯಭಾರಿ ಗೌತಮ್ ಬಂಬವಲೆ ಅವರು ಪಾಕ್ ವಿದೇಶಾಂಗ್ ಕಾರ್ಯದರ್ಶಿ ತೆಹ್ಮಿನಾ ಜಂಜುವಾ ಅವರನ್ನು ಭೇಟಿಯಾಗಿ ಈ ಆಗ್ರಹವನ್ನು ಮಂಡಿಸಿದರು.

 ಜಾಧವ್‌ಗೆ ನ್ಯಾಯವಾದಿಗಳ ನೆರವಿಗೆ ಅವಕಾಶ ಒದಗಿಸುವಂತೆ ನಮ್ಮ ಕೋರಿಕೆ ಯನ್ನು ಪಾಕ್ ಕಳೆದೊಂದು ವರ್ಷದಲ್ಲಿ 13 ಬಾರಿ ನಿರಾಕರಿಸಿದೆ. ನಾವು ಮೇಲ್ಮನವಿ ಸಲ್ಲಿಸಲು ಸಾಧ್ಯವಾಗುವಂತಾಗಲು ಪಾಕ್ ವಿದೇಶಾಂಗ ಕಾರ್ಯದರ್ಶಿಯಲ್ಲಿ ಮತ್ತೊಮ್ಮೆ ಮನವಿ ಮಾಡಿಕೊಂಡಿದ್ದೇನೆ ಎಂದು ಬಂಬವಲೆ ಸುದ್ದಿಸಂಸ್ಥೆಗೆ ತಿಳಿಸಿದರು.

ರಾಜತಾಂತ್ರಿಕ ಪರ್ಯಾಯಗಳ ಹೊರತಾಗಿ ತೀರ್ಪಿನ ವಿರುದ್ಧ ಜಾಧವ್ ಕುಟುಂಬದಿಂದ ಮೇಲ್ಮನವಿ ಸಲ್ಲಿಕೆ ಸೇರಿದಂತೆ ಪಾಕಿಸ್ತಾನದ ಕಾನೂನು ವ್ಯವಸ್ಥೆಯಡಿ ಲಭ್ಯವಿರುವ ಕಾನೂನು ಪರಿಹಾರಗಳ ಬಗ್ಗೆಯೂ ಭಾರತವು ಪರಿಶೀಲಿಸುತ್ತಿದೆ ಎಂದು ದಿಲ್ಲಿಯಲ್ಲಿನ ಮೂಲಗಳು ತಿಳಿಸಿವೆ.

ಗುರುವಾರ ರಾವಲ್ಪಿಂಡಿಯ ಸೇನೆಯ ಕೇಂದ್ರಕಚೇರಿಯಲ್ಲಿ ಸೇನಾ ಮುಖ್ಯಸ್ಥ ಜಕಮರ್ ಬಾಜ್ವಾ ಅಧ್ಯಕ್ಷತೆಯಲ್ಲಿ ನಡೆದ ಹಿರಿಯ ಕಮಾಂಡರ್‌ಗಳ ಸಭೆಯು ಜಾಧವ್‌ಗೆ ವಿಧಿಸಲಾಗಿರುವ ಮರಣದಂಡನೆಯೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳದಿರಲು ನಿರ್ಧರಿಸಿದೆ.

ವಕೀಲರಿಗೆ ಎಚ್ಚರಿಕೆ

ಮರಣದಂಡನೆಗೆ ಗುರಿಯಾಗಿರುವ ಜಾಧವ್‌ಗೆ ಕಾನೂನು ನೆರವು ಒದಗಿಸಲು ಮುಂದಾಗುವ ವಕೀಲರ ವಿರುದ್ಧ ತಾನು ಕ್ರಮವನ್ನು ಜರುಗಿಸುವುದಾಗಿ ಲಾಹೋರ್ ಉಚ್ಚ ನ್ಯಾಯಾಲಯದ ವಕೀಲರ ಸಂಘವು ಶುಕ್ರವಾರ ಎಚ್ಚರಿಕೆ ನೀಡಿದೆ.

ಭಾರತೀಯ ಗೂಢಚಾರಿ ಕುಲಭೂಷಣ ಜಾಧವ್‌ಗೆ ಸೇವೆಯನ್ನು ಒದಗಿಸುವ ವಕೀಲರ ಸದಸ್ಯತ್ವವನ್ನು ರದ್ದುಗೊಳಿಸಲು ಸಂಘವು ಸರ್ವಾನುಮತದಿಂದ ನಿರ್ಧರಿಸಿದೆ ಎಂದು ಸಂಘದ ಮಹಾ ಕಾರ್ಯದರ್ಶಿ ಆಮೆರ್ ಸಯೀದ್ ರಾಣ್ ಅವರು ತಿಳಿಸಿದರು.

ಜಾಧವ್ ಪ್ರಕರಣದಲ್ಲಿ ಯಾವುದೇ ವಿದೇಶಿ ಒತ್ತಡಕ್ಕೆ ಮಣಿಯದಂತೆ ಸಂಘವು ಸರಕಾರವನ್ನು ಕೇಳಿಕೊಂಡಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News