ಆಧುನಿಕ ಜಗತ್ತಿನ ಪ್ರಥಮ ಮಹಿಳಾ ಕಮಾಂಡರ್ ಅಸೆ ಮಲಾ ಹಯಾತಿ

Update: 2017-04-14 18:43 GMT

ಕಳೆದ ದಶಕಗಳ ಇತಿಹಾಸ ಪೂರ್ತಿ ಅತ್ಯುನ್ನತ ಕಾರ್ಯಗಳನ್ನು ಮಾಡಿರುವ ಮಹಿಳೆಯರಿಂದಲೇ ತುಂಬಿದೆ. ವಿಜ್ಞಾನದಿಂದ ಹಿಡಿದು ಲಲಿತಕಲೆ, ಕ್ರೀಡೆ ಹಾಗೂ ಇತರ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ತಮ್ಮ ಪಾರುಪತ್ಯವನ್ನು ಮೆರೆದಿದ್ದಾರೆ. ಪ್ರತಿಯೊಂದು ಕ್ಷೇತ್ರದಲ್ಲೂ ಒಬ್ಬಾಕೆ ಪ್ರಥಮ ಮಹಿಳೆ ಇದ್ದೇ ಇರುತ್ತಾಳೆ. ಮಲಾ ಹಯಾತಿ ಅವರಲ್ಲಿ ಒಬ್ಬಾಕೆ. ಮಲಾ ಹಯಾತಿ ಎಂದೇ ಕರೆಯಲ್ಪಡುವ ಕ್ಯೂಮಲಾ ಹಯಾತಿ ಜಗತ್ತಿನ ಮೊಟ್ಟಮೊದಲ ಮಹಿಳಾ ಅಡ್ಮಿರಲ್ ಆಗಿದ್ದಾರೆ. ಆಕೆಯ ಕತೆ ಮತ್ತು ಸಾಧನೆಗಳು ಸ್ಫೂರ್ತಿದಾಯಕ ಮಾತ್ರವಲ್ಲ, ಅದು ಧೀರ, ಯಶಸ್ವೀ, ಗೌರವಾರ್ಹ ಮತ್ತು ಶ್ಲಾಘನೀಯ ಸಾಹಸಗಾಥೆಯಾಗಿದೆ. ಆಕೆ ಪ್ರತಿಯೊಬ್ಬರಿಗೂ ಮಾದರಿ ಮತ್ತು ಸ್ಫೂರ್ತಿದಾಯಕರಾಗಿದ್ದಾರೆೆ.

ಮಲಾ ಹಯಾತಿಯು 15 ಮತ್ತು 16ನೆ ಶತಮಾನದ ಅಸೆ ಸುಲ್ತಾನರ ಆಳ್ವಿಕೆಯ ಕಾಲದಲ್ಲಿ ಜೀವಿಸಿದ್ದರು. ಆಕೆ ಅಸೆ ದರುಸ್ಸಲಾಮ್ ಸಾಮ್ರಾಜ್ಯದ ಸ್ಥಾಪಕರ ವಂಶಸ್ಥಳಾಗಿದ್ದರು. ವಾಸ್ತವದಲ್ಲಿ ಈ ಸಾಮ್ರಾಜ್ಯದ ಸಂಸ್ಥಾಪಕರಲ್ಲಿ ಒಬ್ಬರಾದ ಸುಲ್ತಾನ್ ಇಬ್ರಾಹೀಂ ಅಲಿ ಮುಗಯತ್ ಸ್ಯಾಹ್ ಈಕೆಯ ಮುತ್ತಜ್ಜನಾಗಿದ್ದರು. ಆಕೆಯ ತಂದೆ ಮತ್ತು ಅಜ್ಜ ಇಬ್ಬರು ಕೂಡಾ ಬಹಳ ಗೌರವಾನ್ವಿತ ಅಡ್ಮಿರಲ್‌ಗಳಾಗಿದ್ದರು. ತನ್ನ ತಂದೆ ಮಾಡಿದ್ದ ಸಾಧನೆಗಳತ್ತ ಆಕರ್ಷಿತಳಾದ ಆಕೆ ಇಸ್ಲಾಮ್ ವಸತಿ ಶಾಲೆ ಪಸಂಟ್ರೆನ್‌ನಲ್ಲಿ ಪದವಿ ಶಿಕ್ಷಣ ಮುಗಿಸಿದ ನಂತರ ಮಾಹದ್ ಬೈತುಲ್ ಸೇನಾ ಅಕಾಡಮಿಯನ್ನು ಸೇರಲು ನಿರ್ಧರಿಸಿದರು. ಅಕಾಡಮಿಯಲ್ಲಿ ನೌಕಾಪಡೆ ಮತ್ತು ಭೂಸೇನೆಯ ತರಬೇತಿಯನ್ನು ನೀಡಲಾಗುತ್ತಿತ್ತು. ಅಲ್ಲಿ ಪದವಿ ಮುಗಿಸಿದ ನಂತರ ಮಲಾ ಹಯಾತಿ ತನ್ನ ಪ್ರೇಮಿ ನೌಕಾಪಡೆಯ ಅಧಿಕಾರಿ ಅಭ್ಯರ್ಥಿಯನ್ನು ವಿವಾಹವಾದರು. ದುರದೃಷ್ಟವಶಾತ್ ಆತ ಪೋರ್ಚುಗೀಸರ ವಿರುದ್ಧ ನಡೆದ ಹರು ಕೊಲ್ಲಿ ಯುದ್ಧದಲ್ಲಿ ಹತ್ಯೆಗೀಡಾದರು. ಕೋಪೋದ್ರಿಕ್ತಳಾದ ಮಲಾ ಹಯಾತಿ ತನ್ನ ಗಂಡನ ಸಾವಿನ ಪ್ರತೀೀಕಾರ ತೀರಿಸುವ ಪಣತೊಟ್ಟರು.

ತನ್ನ ಗಂಡನ ಹೋರಾಟವನ್ನು ಮುಂದುವರಿಸಲು ನಿಶ್ಚಯಿಸಿದ ಆಕೆ ಅಸೆಯ ವಿಧವೆಯರ ನೌಕಾಸೇನೆಯನ್ನು ರಚಿಸುವಂತೆ ಸುಲ್ತಾನರಲ್ಲಿ ಮನವಿ ಮಾಡಿಕೊಂಡರು. ಸುಲ್ತಾನನ ಅನುಮತಿಯ ಮೇರೆಗೆ ಮಹಿಳಾ ನೌಕಾಪಡೆಯನ್ನು ಸ್ಥಾಪಿಸಲಾಗಿ ಅದಕ್ಕೆ ‘ಇನೊಂಗ್ ಬಲೆ ಅರ್ಮಡಾ’ ಎಂದು ಹೆಸರಿಡಲಾಯಿತು ಮತ್ತು ಮಲಾ ಹಯಾತಿ ಅದರ ಮೊದಲ ಅಡ್ಮಿರಲ್ ಆಗಿ ನೇಮಕಗೊಂಡರು. ಮುಂದೆ ಆಕೆ ಡಚ್ಚರು ಮತ್ತು ಪೋರ್ಚುಗೀಸರ ವಿರುದ್ಧ ಹಲವು ಹೋರಾಟಗಳಲ್ಲಿ ತನ್ನ ಸೇನೆಯನ್ನು ಮುನ್ನಡೆಸಿದರು. 1599ರಲ್ಲಿ ಡಚ್ ಕಮಾಂಡರ್‌ಗಳಾದ ಕಾರ್ನೆಲಿಸ್ ಡಿ ಹಾಟ್ಮನ್ ಮತ್ತಾತನ ಸಹೋದರ ಫ್ರೆಡ್ರಿಕ್ ಡಿ ಹಾಟ್ಮನ್ ವ್ಯಾಪಾರ ಸಂಬಂಧವನ್ನು ಸ್ಥಾಪಿಸುವ ಸಲುವಾಗಿ ಸುಲ್ತಾನನ್ನು ಭೇಟಿಯಾದರು. ಅವರನ್ನು ಶಾಂತರೀತಿಯಿಂದ ಸ್ವಾಗತಿಸಲಾಯಿತು.

ಆದರೆ ಕಾರ್ನೆಲಿಸ್ ತನ್ನ ಜೊತೆ ಭಾಂಷಾಂತರಿಯಾಗಿ ಓರ್ವ ಪೋರ್ಚುಗೀಸನನ್ನು ಕರೆತಂದಿದ್ದ. ಇದು ಸುಲ್ತಾನರಿಗೆ ಮಾಡಿದ ಅಪಮಾನವಾಗಿತ್ತು. ಇವರೊಂದಿಗೆ ಹಲವು ಭೀಕರ ಯುದ್ಧಗಳು ನಡೆದವು ಮತ್ತು ಮಲಾ ಹಯಾತಿ ಈ ಎಲ್ಲಾ ಯುದ್ಧಗಳ ನೇತೃತ್ವವಹಿಸಿದ್ದರು. ಡಚ್ಚರನ್ನು ಸೋಲಿಸುವಲ್ಲಿ ಸಫಲವಾದ ಆಕೆ ಕಾರ್ನಲಿಸ್‌ನನ್ನು ಹತ್ಯೆಗೈದು ಆತನ ಸಹೋದರನನ್ನು ಎರಡು ವರ್ಷಗಳ ಕಾಲ ಜೈಲಿಗಟ್ಟಿದರು. ಡಚ್ ನೌಕಾಪಡೆಯನ್ನು ಮುನ್ನಡೆಸಿದ ಪೌಲುಸ್ ವಾನ್ ಕಾರ್ಡೆನ್ ಅಸೆಯ ವ್ಯಾಪಾರಿ ಹಡಗಿನ ಮೇಲೆ ದಾಳಿ ನಡೆಸಿ ಅದರಲ್ಲಿದ್ದ ಕರಿಮೆಣಸನ್ನು ಕೊಳ್ಳೆಹೊಡೆಯುವುದರ ಜೊತೆಗೆ ಆ ಹಡಗನ್ನು ಮುಳುಗಿಸಿದನು. ಒಂದು ವರ್ಷದ ಬಳಿಕ ಅಡ್ಮಿರಲ್ ಜಾಕೊಬ್ ವಾನ್ ನೆಕ್ ಮತ್ತಾತನ ಸಹಚರರು ತಮ್ಮನ್ನು ವ್ಯಾಪಾರಿಗಳೆಂದು ಪರಿಚಯಿಸಿಕೊಂಡು ಕರಿಮೆಣಸು ಖರೀದಿಸಲು ಬಂದಿರುವುದಾಗಿ ತಿಳಿಸಿದರು.

ಆದರೆ ಅವರು ಡಚ್ಚರು ಎಂದು ತಿಳಿದಾಗ ಮಲಾ ಹಯಾತಿ ಡಚ್ಚರ ಹಿಂದಿನ ಕುತಂತ್ರಗಳಿಗೆ ಪರಿಹಾರವಾಗಿ ಅವರನ್ನು ಬಂಧಿಸಿ ಜೈಲಿಗಟ್ಟಿದರು. ಕೆಲವು ತಿಂಗಳ ಬಳಿಕ ಮೌರಿಟ್ಸ್ ವಾನ್ ಒರಂಜೆ ಕ್ಷಮಾಪಣೆ ಕೋರಿದ ರಾಜತಾಂತ್ರಿಕ ಪತ್ರ ಮತ್ತು ಒಂದಷ್ಟು ಉಡುಗೊರೆಗಳನ್ನು ಇಬ್ಬರು ಗುಪ್ತಚರರಾದ ಅಡ್ಮಿರಲ್ ಲಾರೆನ್ಸ್ ಬಿಕರ್ ಮತ್ತು ಜೆರಾರ್ಡ್ ಡಿ ರಾಯ್ ಕೈಗೆ ನೀಡಿ ಅವರನ್ನು ಅಸೆ ಸುಲ್ತಾನರ ಬಳಿ ಕಳುಹಿಸಿದ. ಅದರ ಫಲವಾಗಿ ಮಲಾ ಹಯಾತಿ ಮತ್ತು ಗುಪ್ತಚರರು ಒಪ್ಪಂದವನ್ನು ಮಾಡಿಕೊಂಡರು. ನಂತರ ಆಕೆಯನ್ನು ಸೇನೆಯ ಕಮಾಂಡರ್ ಮತ್ತು ಅರಮನೆಯ ರಕ್ಷಕಿಯಾಗಿ ನೇಮಿಸಲಾಯಿತು. ಇಂಗ್ಲಿಷರು ಮಲಕಾ ಜಲಸಂಧಿಯನ್ನು ಪ್ರವೇಶಿಸಿದಾಗ ಕೂಡಾ ಮಲಾ ಹಯಾತಿ ಪ್ರತಿರೋಧವೊಡ್ಡಿದ್ದರು. ರಾಣಿ ಮೊದಲನೆ ಎಲಿಜಬೆತ್, ಜೇಮ್ಸ್ ಲ್ಯಾಂಕಸ್ಟರ್ ಕೈಯಲ್ಲಿ ಪತ್ರವೊಂದನ್ನು ನೀಡಿ ಸುಲ್ತಾನರ ಬಳಿ ಕಳುಹಿಸಿದರು.

ಆತ ಮಲಾ ಹಯಾತಿ ಜೊತೆ ಮಾತುಕತೆ ನಡೆಸಿದ ನಂತರ ಇಂಗ್ಲಿಷರು ಜಾವಾ ತಲುಪಲು ದಾರಿಯನ್ನು ಬಿಟ್ಟುಕೊಡಲಾಯಿತು. ಮಲಾ ಹಯಾತಿ ಸಾವನ್ನಪ್ಪಿದ ರೀತಿಯೂ ಕಾಕತಾಳಿಯವೇ ಆಗಿತ್ತು. ಆಕೆ ಕೂಡಾ ಗಂಡನಂತೆ ಪೋರ್ಚುಗೀಸರ ವಿರುದ್ಧ ಹೋರಾಡುತ್ತಾ ಸಾವನ್ನಪ್ಪಿದರು. ಇಂದು ಸುಮಾತ್ರಾದಲ್ಲಿ ಹಲವು ವಿಶ್ವವಿದ್ಯಾನಿಲಯಗಳು, ಆಸ್ಪತ್ರೆಗಳು, ರಸ್ತೆಗಳು ಮತ್ತು ನಗರಗಳಿಗೆ ಮಲಾ ಹಯಾತಿಯ ಹೆಸರನ್ನು ನೀಡಲಾಗಿದೆ. ಆಕೆಯ ಮಹೋನ್ನತ ಕಾರ್ಯಗಳನ್ನು ಗೌರವಿಸುವ ಸಲುವಾಗಿ ‘ಲಕ್ಸಮನ ಕ್ಯೂಮಲಾ ಹಯಾತಿ’ ಎಂಬ ಸರಣಿಯನ್ನು ಕೂಡಾ ರಚಿಸಲಾಗಿದೆ. ಮಲಾ ಹಯಾತಿ ಓರ್ವ ಸ್ಮರಣಯೋಗ್ಯ ಮಹಿಳೆಯೆಂಬುದರಲ್ಲಿ ಎರಡು ಮಾತಿಲ್ಲ. ಒಮ್ಮೆ ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸುವಂಥಾ ಛಲ, ಮನೋಸ್ಥೈರ್ಯ ಆಕೆಯಲ್ಲಿತ್ತು.
 

Writer - -ವಿಸ್ಮಯ

contributor

Editor - -ವಿಸ್ಮಯ

contributor

Similar News