ಭಾರತದ ಕ್ರಿಕೆಟ್ ಬ್ರಾಹ್ಮಣರ ಕ್ರಿಕೆಟ್ ಆದಾಗ!
ಭಾರತ ಭಾಗ್ಯ ವಿಧಾತ ಡಾ. ಬಿ.ಆರ್. ಅಂಬೇಡ್ಕರ್‌ರವರ ಜನ್ಮದಿನದ ಆಚರಣೆಯ ಸಂಭ್ರಮ ಎಲ್ಲೆಡೆ ಕಾಣುತ್ತಿದೆ.
ರಾಜಕಾರಣಿ, ಚಿಂತಕ, ಬರಹಗಾರ, ಹೋರಾಟಗಾರರ ಚಟುವಟಿಕೆಗಳಲ್ಲಿ ಹಂಚಿಹೋಗಿದ್ದ ಅಂಬೇಡ್ಕರ್‌ರ ಬದುಕಿನಲ್ಲಿ ಕ್ರೀಡಾಸಕ್ತಿಯೂ ಇತ್ತು ಎಂಬುದು ಅಷ್ಟಾಗಿ ಜನರ ಗಮನಕ್ಕೆ ಬಂದಿಲ್ಲ. ಅದಕ್ಕೆ ಕಾರಣ ಒಬ್ಬ ದಲಿತ ಕ್ರಿಕೆಟರ್. ಇದು ಅವರ ಗೆಳೆಯನಾಗಿದ್ದ, ನಂತರ ವಿರೋಧಿಯೂ ಆದ ಬಾಬಾಜಿ ಪಲ್‌ವಂಕರ್ ಬಾಲೂ ಎಂಬ ಕ್ರಿಕೆಟರ್‌ನ ಬದುಕಿನ ಕತೆ.
ಈ ಬಾಲೂ ಕರ್ನಾಟಕದವರೆಂಬುದು ಇನ್ನೊಂದು ವಿಶೇಷ.
19ನೆ ಶತಮಾನದ ಕೊನೆಯ ದಶಕಗಳಲ್ಲಿ ಭಾರತದಲ್ಲಿ ಕಾಣಿಸಿಕೊಂಡ ಕ್ರಿಕೆಟ್ ಆಟವು ಮೊದಮೊದಲಿಗೆ ಯೂರೋಪಿಯನ್ನರ ಮನರಂಜನೆಯ ಬಿಡುವಿನ ಆಟವಾಗಿ ಕಾಲೂರಿತು. ನಂತರ ನಗರ ಕೇಂದ್ರಗಳಲ್ಲಿ ಬ್ರಿಟಿಷರೊಂದಿಗೆ ಪಾಲುದಾರರಾಗಿದ್ದ ಭಾರತೀಯ ಉನ್ನತ ವರ್ಗ ಹಾಗೂ ಮೇಲ್ಜಾತಿ ಜನರು ಕ್ರಿಕೆಟ್ ಆಡತೊಡಗಿದರು. ಆಗ ಸಹಜವಾಗಿಯೇ ಭಾರತೀಯ ಸಮಾಜದ ಬಹುದೊಡ್ಡ ಸಾಕು ಕಾಯಿಲೆ ‘ಜಾತಿ’ಯೂ ಕ್ರಿಕೆಟ್‌ಗೆ ಕಾಲಿಟ್ಟಿತು.
1876ರಲ್ಲಿ ಒರ್ವ ದಲಿತ ಸೈನಿಕನ ಮಗನಾಗಿ ಧಾರವಾಡದಲ್ಲಿ ಹುಟ್ಟಿದ ಪಲ್‌ವಂಕರ್ ಬಾಲೂ ಮುಂದೆ ಜೀವನ ನಿರ್ವಹಣೆಗಾಗಿ ಪೂನಾಗೆ ಹೋದರು. ಅಲ್ಲಿನ ಜಂಖಾನ ಕ್ರಿಕೆಟ್ ಕ್ಲಬ್‌ನಲ್ಲಿ ಪಿಚ್ ಸಿದ್ಧಪಡಿಸುವ ಸಹಾಯಕನಾಗಿ ಕೆಲಸಕ್ಕೆ ಸೇರಿದಾಗ ಅವರ ಮಾಸಿಕ ವೇತನ ಮೂರು ರೂಪಾಯಿ ಇತ್ತು.
ಪೂನಾ ಜಂಖಾನ ಕ್ಲಬ್‌ನಲ್ಲಿ ಕ್ರಿಕೆಟ್ ಪ್ರಾಕ್ಟೀಸ್ ಮಾಡಲು, ಮ್ಯಾಚ್ ಆಡಲು ಬರುತ್ತಿದ್ದ ಬ್ರಿಟಿಷರು ಹಾಗೂ ಭಾರತೀಯ ಮೇಲ್ವರ್ಗ/ಜಾತಿಗಳಿಗೆ ಸೇರಿದ್ದ ಆಟಗಾರರನ್ನು ನೋಡುತ್ತಾ ಬೆಳೆದ ದಲಿತ ಬಾಲೂ ಸ್ವಯಂ ಪ್ರೇರಣೆಯಿಂದ ಬೌಲಿಂಗ್ ಕಲಿತರು. ಬ್ರಿಟಿಷ್ ಅಧಿಕಾರಿ ಮಿ. ಟ್ರಾಸ್ ಎಂಬಾತ ಅದನ್ನು ಗಮನಿಸಿ ಬಾಲೂಗೆ ಉತ್ತೇಜನ ನೀಡಿದ. ನಂತರ ತಂಡದ ಕ್ಯಾಪ್ಟನ್ ಜೆ.ಜಿ. ಗ್ರೇಗ್ ಬಾಲೂನ ಸ್ಪಿನ್ ಬೌಲಿಂಗ್ ಕೌಶಲ್ಯ ಗಮನಿಸಿ ತನಗೆ ಪ್ರತೀದಿನ ಬೌಲಿಂಗ್ ಮಾಡುವಂತೆ ಕೇಳಿಕೊಂಡ. ಬಾಲೂ ಗ್ರೇಗ್‌ನನ್ನು ಪ್ರತೀ ಬಾರಿ ಔಟ್ ಮಾಡಿದಾಗಲೂ ಬಹುಮಾನವಾಗಿ ಎಂಟು ಆಣೆಗಳು ಸಿಗುತ್ತಿತ್ತು. ಆದರೆ ಅದೇ ಜಂಖಾನ ಕ್ಲಬ್‌ನಲ್ಲಿ ಆಡಲು ಬರುತ್ತಿದ್ದ ಭಾರತೀಯ ಬ್ರಾಹ್ಮಣ ಕ್ರಿಕೆಟ್ ಆಟಗಾರರು ಬಾಲೂ ಅಸ್ಪಶ್ಯನೆಂಬ ಕಾರಣಕ್ಕೆ ಅವನಿಂದ ಬೌಲಿಂಗ್ ಮಾಡಿಸಿ ಪ್ರಾಕ್ಟೀಸ್ ಮಾಡಲು ಒಪ್ಪುತ್ತಿರಲಿಲ್ಲ. ಆದರೆ ಅಷ್ಟರಲ್ಲಿ ಬಾಲೂ ಬೌಲಿಂಗ್ ಕೌಶಲ್ಯ ಅನೇಕರ ಗಮನ ಸೆಳೆದಿತ್ತು.
ಕೊನೆಗೊಮ್ಮೆ ಪೂನಾದ ಹಿಂದೂಗಳ ತಂಡ ಯೂರೋಪಿಯನ್ ಟೀಂ ವಿರುದ್ಧ ಒಂದು ಮ್ಯಾಚ್ ಆಡಲು ಹೊರಟಾಗ ಸ್ಪಿನ್ನರ್ ಬಾಲೂರನ್ನು ಹಿಂದೂಗಳ ಟೀಂಗೆ ಸೇರಿಸಿಕೊಳ್ಳಬೇಕೆಂಬ ಅಭಿಪ್ರಾಯ ಬಂದಾಗ ಬ್ರಾಹ್ಮಣ ಆಟಗಾರರು ಬಲವಾಗಿ ವಿರೋಧಿಸಿದರು. ಆದರೂ ತಂಡದಲ್ಲಿದ್ದ ಕೆಲ ತೆಲುಗು ಭಾಷಿಕ ಆಟಗಾರರ ಒತ್ತಾಯದಿಂದ ಬಾಲೂಗೆ ತಂಡದಲ್ಲಿ ಸ್ಥಾನ ಸಿಕ್ಕಿತು. ಆದರೆ ಊಟದ ಬಿಡುವು, ನೀರು ಕುಡಿಯುವಾಗ ಬಾಲೂಗೆ ತಂಡದ ಜೊತೆ ಇರಲು ಅವಕಾಶ ನೀಡದ ಕಾರಣ ಅವರೊಬ್ಬರೇ ಪ್ರತ್ಯೇಕವಾಗಿ ಹೊರಗಡೆ ಊಟ ಮಾಡಿ ನೀರು ಕುಡಿಯಬೇಕಾಯಿತು. ಅಂದಿನ ಮ್ಯಾಚ್‌ನಲ್ಲಿ ಬಾಲೂ ಹೆಚ್ಚಿನ ವಿಕೆಟ್ ಪಡೆದರು. ಆಗ ಪುಣೆ ನಗರದಲ್ಲಿ ಪ್ಲೇಗ್ ಕಾಣಿಸಿಕೊಂಡಿತು. ಬಾಲೂ ವಿಧಿ ಇಲ್ಲದೆ ಹಾಗೂ ಕ್ರಿಕೆಟ್‌ನಲ್ಲಿ ಇನ್ನೂ ಉತ್ತಮ ಅವಕಾಶ ಹುಡುಕಿಕೊಂಡು ಬಾಂಬೆ ನಗರಕ್ಕೆ ಬಂದರು. ಸೇನೆ ಸೇರಿದರು. ಬಾಂಬೆಯ ಪರಮಾನಂದ ಜೀವನ್‌ದಾಸ್ ಹಿಂದೂ ಜಂಖಾನ ಕ್ರಿಕೆಟ್ ಕ್ಲಬ್ ಸೇರಿ ಆಟ ಮುಂದುವರಿಸಿದರು. ಆದರೆ ಅಲ್ಲೂ ಅವರ ಜಾತಿ ಕಾರಣಕ್ಕೆ ವಿರೋಧ ಎದುರಿಸಬೇಕಾಯಿತು. ಇದನ್ನೆಲ್ಲಾ ದಿಟ್ಟತನದಿಂದ ಎದುರಿಸಿದ ಬಾಲೂ 1911ರಲ್ಲಿ ಭಾರತೀಯರ ತಂಡ ಮೊದಲ ಬಾರಿಗೆ ಇಂಗ್ಲೆಂಡ್ ಟೂರ್‌ಗೆ ಹೊರಟಾಗ ತಂಡದಲ್ಲಿ ಸ್ಥಾನ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು. ಅವರ ಕ್ರಿಕೆಟ್ ಸಾಧನೆ ಅತ್ಯುತ್ತಮವಾಗಿದ್ದಾಗಲೂ ಅಸ್ಪಶ್ಯನೆಂಬ ಕಾರಣಕ್ಕೆ ಬಾಲೂ ಕ್ಯಾಪ್ಟನ್ ಆಗಲು ಬ್ರಾಹ್ಮಣ ಹಾಗೂ ಪಾರ್ಸಿ ಆಟಗಾರರು ವಿರೋಧಿಸಿದ್ದರು.
ಅಂಬೇಡ್ಕರ್ ದಲಿತರ ವಿಮೋಚನೆಗಾಗಿ ಸಕ್ರಿಯರಾಗುತ್ತಿದ್ದಾಗ ಅವರ ಗಮನ ಸೆಳೆದುಕೊಂಡ ಬಾಲೂ ದಲಿತ ಹೀರೋ ಎಂಬ ಶ್ಲಾಘನೆಯನ್ನು ಅಂಬೇಡ್ಕರ್‌ರಿಂದ ಪಡೆದರು. ಮುಂದೆ ರಾಜಕಾರಣಿಯೂ ಆದ ಬಾಲೂ ಗಾಂಧಿ ಅನುಯಾಯಿಯಾಗಿ ಅಂಬೇಡ್ಕರ್ ನಿಲುವುಗಳನ್ನು ಹಲವು ಬಾರಿ ವಿರೋಧಿಸಿದರು. 1937ರಲ್ಲಿ ಬಾಂಬೆ ಶಾಸನಸಭಾ ಚುನಾವಣೆಗಳು ನಡೆದಾಗ ಮುಂಬೈನಲ್ಲಿ ಅಂಬೇಡ್ಕರ್ ವಿರುದ್ಧ ಹಿಂದೂ ಮಹಾಸಭಾದ ಅಭ್ಯರ್ಥಿಯಾಗಿ ಬಾಲೂ ಸ್ಪರ್ಧಿಸಿ ಸೋತರು. 1955ರಲ್ಲಿ ಬಾಲೂ ನಿಧನರಾದಾಗ ಅವರ ಅಪಕ್ವ ರಾಜಕೀಯ ನಿಲುವುಗಳ ಹೊರತಾಗಿಯೂ ಒಬ್ಬ ಉತ್ತಮ ಕ್ರಿಕೆಟರ್ ಆಗಿ ಕೀರ್ತಿಗಳಿಸಿ ನೇಪಥ್ಯಕ್ಕೆ ಸರಿದು ಹೋದರು.
ಆದರೆ ಭಾರತೀಯ ಕ್ರಿಕೆಟ್‌ನಲ್ಲಿ ಆಗ ಕಾಣಿಸಿಕೊಂಡ ಜಾತಿ ತಾರತಮ್ಯ ಅಥವಾ ಬ್ರಾಹ್ಮಣ ಆಧಿಪತ್ಯ 20ನೆ ಶತಮಾನದ ಕೊನೆಯವರೆಗೂ ಮುಂದುವರಿಯಿತು.
ಕ್ರಿಕೆಟ್ ಆಟವು ಫುಟ್‌ಬಾಲ್, ಹಾಕಿ, ಬಾಸ್ಕೆಟ್‌ಬಾಲ್, ಈಜು, ಕುಸ್ತಿಗಳಂತೆ ಅಪಾರ ದೈಹಿಕ ಶ್ರಮ ಕೇಳುವ ಆಟವೇನಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ತಲಾ ಹನ್ನೊಂದು ಜನರಿರುವ ಎರಡು ಟೀಂಗಳ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ಮಾಡುವ ಟೀಂನ ಒಂಬತ್ತು ಮಂದಿ ಪೆವಿಲಿಯನ್‌ನಲ್ಲಿ ವಿಶ್ರಾಂತರಾಗಿ ಕುಳಿತಿರುತ್ತಾರೆ. ಉಳಿದಂತೆ ಫೀಲ್ಡಿಂಗ್ ಟೀಂನಲ್ಲಿ ಓಡುವವರೆಂದರೆ ಒಬ್ಬ ಬೌಲರ್, ಬ್ಯಾಟ್ಸ್‌ಮೆನ್ ಹೊಡೆದಲ್ಲಿ ಒಬ್ಬ ಫೀಲ್ಡರ್ ಬಾಲ್ ಹಿಂದೆ ಓಡುತ್ತಾರಷ್ಟೆ! ಇಂತಹ ಆಟ ಕ್ರಿಕೆಟ್ 20ನೆ ಶತಮಾನವಿಡೀ ಹೆಚ್ಚಾಗಿ ಬ್ರಾಹ್ಮಣ ಆಟಗಾರರ ಹತೋಟಿಯಲ್ಲಿತ್ತು. ಹಾಗಾಗಿ ಅವರಿಗೆ ಬಾಲೂನಂತಹ ಅಸ್ಪಶ್ಯನೊಬ್ಬನ ಆಗಮನ, ವಿನೋದ್ ಕಾಂಬ್ಳಿಯಂತಹ ಪ್ರತಿಭಾವಂತ ಬ್ಯಾಟ್ಸ್‌ಮೆನ್‌ನ ಹಾಜರಿ ಸಹಿಸಲಾಗದ ಕಸಿವಿಸಿ ಉಂಟು ಮಾಡಿದ್ದು ಸಹಜವೇ ಆಗಿತ್ತು. ಪರಸ್ಪರ ಸ್ಪರ್ಶವಿರದ, ಶ್ರಮವೂ ಇರದ ಕ್ರಿಕೆಟ್ ಸಾಮಾಜಿಕ ಸ್ಥಾನಮಾನ, ಹಣ ಗಳಿಸುವ ಸಾಧನವೂ ಆಗುತ್ತಾ ಹೋದಂತೆ ಅಲ್ಲಿಯೂ ಅಘೋಷಿತ ಜಾತಿ ಪ್ರಜ್ಞೆ ಕೆಲಸ ಮಾಡಿತು.
1947ರಿಂದ ಇತ್ತೀಚಿನವರೆಗಿನ ಭಾರತ ಕ್ರಿಕೆಟ್ ತಂಡದಲ್ಲಿ ಆಡಿದ 120 ಆಟಗಾರರ ಜಾತಿ ಹಿನ್ನೆಲೆಯ ಒಂದು ಅಂದಾಜು ಅಂಕಿ ಅಂಶಗಳು ಗಮನ ಸೆಳೆಯುವಂತಿವೆ.
ಈ ಕುತೂಹಲಕಾರಿ ಅಂಕಿ-ಅಂಶಗಳನ್ನು ನಾವು ನಿರ್ಲಕ್ಷಿಸಲಾಗುವುದಿಲ್ಲ. ಇದರ ಇನ್ನಿತರ ಆಯಾಮವೇನೆಂದರೆ ಬಹುತೇಕ ಬ್ರಾಹ್ಮಣ ಆಟಗಾರರು ಬ್ಯಾಟ್ಸ್‌ಮೆನ್‌ಗಳಾಗಿಯೂ, ಶೂದ್ರರು ಬೌಲರ್ ಹಾಗೂ ಖ್ಯಾತ ಫೀಲ್ಡರುಗಳಾಗಿಯೂ ಸಂದಿರುವುದು. ಇದಕ್ಕೆ ಜಾತಿ ಹಾಗೂ ವರ್ಗ ತಾರತಮ್ಯದ ವಾಸ್ತವ ನೆಲೆಗಟ್ಟೂ ಇದೆ.
ಕೆಳಜಾತಿಯ ಶೂದ್ರನೊಬ್ಬ ಬೌಲರ್ ಆಗಲು ಕೈಯಲ್ಲಿ ಬಾಲ್ ಒಂದಿದ್ದರೆ ಸಾಕಾಗುತ್ತದೆ. ಆದರೆ ಬ್ಯಾಟ್ಸ್‌ಮೆನ್ ಆಗಬೇಕೆಂದರೆ ಉತ್ತಮ ಬ್ಯಾಟ್, ಪ್ಯಾಡ್, ಹೆಡ್‌ಗೇರ್, ಮಡ್‌ಗಾರ್ಡ್, ಹ್ಯಾಂಡ್ ಗ್ಲೌಸ್, ಥೈಪ್ಯಾಡ್, ಎಲ್‌ಬೋ ಗಾರ್ಡ್ ಇವೆಲ್ಲಾ ಬೇಕಾಗುತ್ತವೆ. ಸಹಜವಾಗೆ ಮೇಲ್ಜಾತಿ ಹಾಗೂ ಮೇಲ್ವರ್ಗದವರಿಗೆ ಮಾತ್ರ ಎಟುಕಬಲ್ಲ ಪರಿಕರಗಳಿವು.
ಬೌಲರ್ ಹಾಗೂ ಫೀಲ್ಡರ್‌ಗಳು ಬಸಿಯುವಷ್ಟು ಬೆವರನ್ನು ಬ್ಯಾಟ್ಸ್‌ಮೆನ್‌ಗಳು ಹರಿಸುವುದಿಲ್ಲ ಎಂಬ ಮಾತು ತೀರ ಉತ್ಪ್ರೇಕ್ಷೆಯದ್ದಿರಲಾರದು. ಕ್ರೀಡೆಗಳಲ್ಲಿ ಕಾಣಿಸಿಕೊಳ್ಳುವ ಜಾತಿ/ವರ್ಣ/ವರ್ಗ ಭೇದಗಳ ಬಗ್ಗೆ ಸಾಕಷ್ಟು ಅಧ್ಯಯನಗಳಾಗಿವೆ.
ಅಮೆರಿಕದಲ್ಲಿ ಹೆಚ್ಚು ಬೆವರು ಸುರಿಸಬೇಕಾದ ಬಾಸ್ಕೆಟ್‌ಬಾಲ್ ಆಟದಲ್ಲಿ ಶೇ. 80ರಷ್ಟು ಕರಿಯರಿದ್ದರೆ ಕ್ರಿಕೆಟ್‌ಗಿಂತ ವಿರಾಮದ ಆಟವಾಗಿರುವ ಬೇಸ್‌ಬಾಲ್‌ನಲ್ಲಿ ಶೇ. 80ರಷ್ಟು ಬಿಳಿಯರಿರುತ್ತಾರೆ.
ಕ್ರಿಕೆಟ್‌ನಲ್ಲೂ ವರ್ಣಭೇದ ನೀತಿ ಅನೇಕ ಬಾರಿ ವಿವಾದಕ್ಕೆ ಕಾರಣವಾಗಿದೆ. ಇಂಗ್ಲೆಂಡ್-ವೇಲ್ಸ್ ಕ್ರಿಕೆಟ್ ಬೋರ್ಡ್ 1998 ರಲ್ಲಿ ಈ ಬಗ್ಗೆ ಪರಿಶೀಲಿಸಲು ಸಮಿತಿಯೊಂದನ್ನು ನೇಮಿಸಿ ‘ ಏಜಿಠಿ ್ಕಚ್ಚಜಿಞ ್ಛಟ್ಟ ಖಜ್ಡಿೞಎಂಬ ವರದಿ ಪ್ರಕಟಿಸಿತ್ತು.
ಭಾರತದಲ್ಲಿ ಅಂತಹ ಸಂಶೋಧನೆ ಸಮಿತಿ ರಚನೆ, ವರದಿಗಳ ಉಸಾಬರಿಗೆ ಯಾರು ಹೋದಂತಿಲ್ಲ.
ನಮ್ಮಲ್ಲಿನ ಬಹುತೇಕ ಮೇಲ್ಜಾತಿ ಕ್ರಿಕೆಟ್ ಆಟಗಾರರಲ್ಲಿ ಕ್ರೀಡಾಪಟುಗಳಿಗಿರಬೇಕಾದ ಆರೋಗ್ಯಕರ ವ್ಯಕ್ತಿತ್ವ ಕಾಣಸಿಗುವುದಿಲ್ಲ. ಹಾಗಾಗಿ ಬ್ಯಾಟಿಂಗ್‌ನಲ್ಲಿ ವಿಫಲನಾದಾಗ ಸಚಿನ್ ತೆಂಡೂಲ್ಕರ್ ಕುಕ್ಕೆ ಸುಬ್ರಮಣ್ಯಕ್ಕೆ ಬಂದು ನಾಗದೋಷ ನಿವಾರಣಾ ಪೂಜೆ ಮಾಡಿಸುತ್ತಾರೆ. ಇಂಡಿಯಾ ಟೀಂನ ಗೆಲುವಿಗಾಗಿ ಅಭಿಮಾನಿಗಳು ಹೋಮ, ಉರುಳು ಸೇವೆ ಮಾಡುವಂತೆ ಪ್ರಚೋದಿಸಿ ಅಂತಹ ಕೆಲಸಗಳನ್ನು ಮಹೋನ್ನತ ಕ್ರೀಡಾಚರಣೆ ಎಂಬಂತೆ ಮಾಧ್ಯಮಗಳಲ್ಲಿ ವ್ಯವಸ್ಥಿತವಾಗಿ ಬಿಂಬಿಸಲಾಗುತ್ತದೆ. ಕ್ರಿಕೆಟ್ ಅನ್ನು ಹಿಂದೂ-ಮುಸ್ಲಿಮರ ನಡುವಿನ ಜಗಳದ ವಿಚಾರದಂತೆಯೂ ಆರೆಸ್ಸೆಸ್ ಅನೇಕ ಬಾರಿ ಬಳಸುತ್ತದೆ. ಇತ್ತೀಚಿಗೆ ಭಾರತದ ಕ್ರಿಕೆಟ್ ಟೀಂನಲ್ಲಿ ಬ್ರಾಹ್ಮಣ ಆಟಗಾರರ ಸಂಖ್ಯೆ ಮೊದಲಿನಂತಿಲ್ಲದಿದ್ದರೂ ಸಹ ಒಟ್ಟಾರೆ ಕ್ರಿಕೆಟ್ ಮತ್ತದರ ಪರಿಧಿಯಲ್ಲಿ ಬ್ರಾಹ್ಮಣ್ಯದ ಮೌಲ್ಯಗಳಂತೂ ತುಂಬಿವೆ. ಆಶ್ಚರ್ಯದ ಸಂಗತಿ ಏನೆಂದರೆ ಪಾಕಿಸ್ತಾನದ ವಿರುದ್ಧ ಭಾರತ ತಂಡವು ಕ್ರಿಕೆಟ್ ಆಡಕೂಡದೆಂದು, ಆಡುವುದಿಲ್ಲವೆಂತಲೂ ನಮ್ಮ ಕ್ರಿಕೆಟ್ ಬೋರ್ಡ್ ಹಾಗೂ ಆಟಗಾರರು ಅದನ್ನು ದೇಶಪ್ರೇಮವೆಂದು ಬಿಂಬಿಸಿಕೊಳ್ಳುತ್ತಾರಲ್ಲವೇ?
ಆದರೆ ನಮ್ಮ ಅನೇಕ ಮಾಜಿ/ಹಾಲಿ ಕ್ರಿಕೆಟರ್‌ಗಳು ಕ್ರೀಡಾ ಸಾಮಗ್ರಿಗಳನ್ನು ತಯಾರಿಸುವ ಕಂಪೆನಿಗಳನ್ನು ಸ್ಥಾಪಿಸಿ ಬ್ಯುಸಿನೆಸ್ ನಡೆಸುತ್ತಿದ್ದಾರೆ. ಹಾಲಿ ಭಾರತೀಯ ಕ್ರಿಕೆಟ್ ಕೋಚ್ ಅನಿಲ್ ಕುಂಬ್ಳೆ ‘ಟೆನ್‌ವಿಕ್ ಸ್ಪೋರ್ಟ್ಸ್’ ಎಂಬ ದೊಡ್ಡ ಕಂಪೆನಿಯ ಮಾಲಕನೂ ಹೌದು. ಇಂತಹವರೆಲ್ಲಾ ಪಾಕಿಸ್ತಾನದೊಂದಿಗೆ ನಾವು ಕ್ರಿಕೆಟ್ ಆಡಬಾರದೆಂಬ ಮಾತಿಗೂ ದನಿಗೂಡಿಸುತ್ತಾರೆ. ಐಪಿಎಲ್ ಕ್ರಿಕೆಟ್‌ನಲ್ಲಿ ಪಾಕ್ ಆಟಗಾರರಿಗೆ ಪ್ರವೇಶವಿರದಂತೆ ನೋಡಿಕೊಂಡಿದ್ದಾರೆ. ಆದರೆ ಅವರು ತಯಾರಿಸುವ ಕ್ರೀಡಾ ವಸ್ತುಗಳನ್ನು ಪಾಕಿಸ್ತಾನಕ್ಕೂ ರಫ್ತು ಮಾಡಿ ಕೋಟ್ಯಂತರ ರೂಪಾಯಿ ಲಾಭ ಗಳಿಸುತ್ತಿದ್ದಾರೆ.
ಇದಲ್ಲವೆ ದೇಶಭಕ್ತಿ !
ಅಂಬೇಡ್ಕರ್‌ರ ಗೆಳೆಯನಾಗಿದ್ದ ಕರ್ನಾಟಕದ ಪಲ್‌ವಂಕರ್ ಬಾಲೂ ಭಾರತೀಯ ಕ್ರಿಕೆಟ್‌ನಲ್ಲಿ ಅನುಭವಿಸಿದ ಅಸ್ಪಶ್ಯತೆಯ ಅವಮಾನ ಹಾಗೂ ನೋವುಗಳೆಲ್ಲಾ ಬಿಳಿಯರು ಆಫ್ರಿಕನ್ನರ ವಿರುದ್ಧ ಆಚರಿಸುತ್ತಿದ್ದ ವರ್ಣಭೇದ ನೀತಿಯಂತೆಯೇ ಇತ್ತು. ಬಹುಶಃ ಈಗಲೂ ಇದ್ದಿರಲೇಬೇಕು.
ಯಾಕೀ ಅನುಮಾನ ಗೊತ್ತೇ ?
ಭಾರತೀಯ ಕ್ರಿಕೆಟ್ ಟೀಂನಲ್ಲಿ ಈಗಲೂ ಒಬ್ಬ ದಲಿತ ಹಿನ್ನೆಲೆಯ ಆಟಗಾರನಿಗೂ ಸ್ಥಾನ ನೀಡುತ್ತಿಲ್ಲ.