ಛಾಯಾಗ್ರಾಹಕರ ಕೈಗಳಲ್ಲೇ ಪ್ರಾಣ ಬಿಟ್ಟ ಮಕ್ಕಳು

Update: 2017-04-19 12:42 GMT

ಬೆರೂತ್, ಎ. 19: ಸಿರಿಯದ ಪಟ್ಟಣವೊಂದರಲ್ಲಿ ಬಾಂಬ್ ದಾಳಿಯಾದ ಬಳಿಕ, ಸಿರಿಯದ ಛಾಯಾಚಿತ್ರಕಾರನೊಬ್ಬ ತನ್ನ ಕ್ಯಾಮರವನ್ನು ಕೆಳಗಿಟ್ಟು ಗಾಯಗೊಂಡ ಬಾಲಕನೋರ್ವನ ರಕ್ಷಣೆಗೆ ಧಾವಿಸುತ್ತಿರುವ ಹಾಗೂ ಇನ್ನೊಂದು ಮಗು ಮುಖ ಕೆಳಗೆ ಹಾಕಿಕೊಂಡು ಬಿದ್ದಿರುವುದನ್ನು ನೋಡಿ ಉಮ್ಮಳಿಸುವ ಮನಕಲಕುವ ಚಿತ್ರಗಳು ಹರಿದಾಡುತ್ತಿವೆ.

ಕಳೆದ ವಾರ, ಸಮೀಪದ ಗ್ರಾಮಗಳ ನಿರಾಶ್ರಿತರನ್ನು ಸಾಗಿಸುತ್ತಿದ್ದ ಬಸ್ಸುಗಳು ಅಲೆಪ್ಪೊದ ಪಶ್ಚಿಮದಲ್ಲಿರುವ ಬಂಡುಕೋರರ ನಿಯಂತ್ರಣದಲ್ಲಿರುವ ರಶಿದಿನ್ ಪಟ್ಟಣದಲ್ಲಿ ಸ್ವಲ್ಪ ಹೊತ್ತು ನಿಂತಿತು. ಓರ್ವ ವ್ಯಕ್ತಿಯು ಬಸ್‌ಗಳ ಸಮೀಪ ಕಾಯುತ್ತಿದ್ದ ಮಕ್ಕಳನ್ನು ಚಿಪ್ಸ್ ಪ್ಯಾಕೆಟ್‌ಗಳನ್ನು ತೋರಿಸಿ ಕಾರೊಂದರ ಸಮೀಪಕ್ಕೆ ಕರೆಯುತ್ತಿದ್ದನು. ಆಗ ಬಾಂಬೊಂದು ಸ್ಫೋಟಗೊಂಡಿತು.

ಈ ದಾಳಿಯಲ್ಲಿ 126 ಮಂದಿ ಮೃತಪಟ್ಟರು. ಈ ಪೈಕಿ 80 ಮಕ್ಕಳು.

ಸಮೀಪದಲ್ಲೇ ಇದ್ದ ಛಾಯಾಗ್ರಾಹಕ ಹಾಗೂ ಸ್ವಯಂಸೇವಕ ಅಬ್ದ್ ಅಲ್‌ಕಾದರ್ ಹಬಕ್ ಪ್ರಬಲ ಸ್ಫೋಟದಿಂದಾಗಿ ಸ್ವಲ್ಪ ಹೊತ್ತು ಮೂರ್ಛೆ ಹೋದರು.

‘‘ಆ ದೃಶ್ಯ ಭಯಾನಕವಾಗಿತ್ತು. ರೋದಿಸುತ್ತಿದ್ದ ಮಕ್ಕಳು ಕಣ್ಣೆದುರಲ್ಲೇ ಸಾಯುತ್ತಿದ್ದರು’’ ಎಂದು ಹಬಕ್ ಸಿಎನ್‌ಎನ್‌ಗೆ ಹೇಳಿದರು.

 ಅವರು ಮತ್ತು ಅವರ ಸಹೋದ್ಯೋಗಿಗಳು ರಕ್ಷಣೆಗೆ ಧಾವಿಸಿದರು. ಅವರು ಪರೀಕ್ಷಿಸಿದ ಮೊದಲ ಮಗು ಮೃತಪಟ್ಟಿತ್ತು. ಬಳಿಕ ಹಬಕ್ ಇನ್ನೊಂದು ಮಗುವಿನ ಬಳಿ ಓಡಿದರು. ಆ ಮಗು ಕ್ಷೀಣವಾಗಿ ಉಸಿರಾಡುತ್ತಿತ್ತು. ಅದನ್ನು ಎತ್ತಿಕೊಂಡ ಅವರು ಆ್ಯಂಬುಲೆನ್ಸ್‌ನತ್ತ ಧಾವಿಸಿದರು.

‘‘ಈ ಮಗು ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಿತ್ತು ಹಾಗೂ ನನ್ನತ್ತ ನೋಡುತ್ತಿತ್ತು’’ ಎಂದರು.

ಈ ಮನಕಲಕುವ ದೃಶ್ಯಗಳನ್ನು ಇನ್ನೋರ್ವ ಛಾಯಾಚಿತ್ರಗ್ರಾಹಕ ತೆಗೆದರು.

ಛಾಯಾಗ್ರಾಹಕನ ಕೈಯಲ್ಲಿರುವಾಗಲೇ ಮಗುವೊಂದು ಕೊನೆಯುಸಿರೆಳೆಯಿತು. ಈ ಹೃದಯ ವಿದ್ರಾವಕ ಚಿತ್ರವನ್ನು ಇನ್ನೋರ್ವ ಛಾಯಾಗ್ರಾಹಕ ತೆಗೆದರು.

ಈ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡುತ್ತಿವೆ.

ಸಿರಿಯ ಯುದ್ಧ 2011ರಲ್ಲಿ ಆರಂಭಗೊಂಡಂದಿನಿಂದ 3.2 ಲಕ್ಷಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News