ಮುಸ್ತಫಾನ ಲವ್‌ಜಿಹಾದ್!

Update: 2017-04-19 18:59 GMT

ತಿಂಗಳುಗಳ ಮೇಲೆ ತಿಂಗಳು ಉರುಳುತ್ತಿದ್ದವು. ಜಾನಕಿ ಗಂಭೀರವಾದಳು. ಮೀನಾಕ್ಷಿಯ ಜೊತೆಗಿನ ಒಡನಾಟವನ್ನೂ ಬಿಟ್ಟು ಪುಸ್ತಕಕ್ಕೆ ಇನ್ನಷ್ಟು ಅಂಟಿಕೊಂಡಳು. ದ್ವಿತೀಯ ಪಿಯುಸಿಯ ಅಂತಿಮ ಪರೀಕ್ಷೆ ಹತ್ತಿರವಾಗ ತೊಡಗಿತ್ತು. ಪರೀಕ್ಷೆಗೆ ಬೇಕಾದ, ಹೊರ, ಒಳ ತರಬೇತಿಗೆ ಜಾನಕಿ ಸಿದ್ಧಳಾಗತೊಡಗಿದಳು.

ಅದೊಂದು ಶನಿವಾರ ಮಧ್ಯಾಹ್ನ ಮೀನಾಕ್ಷಿಯ ಜೊತೆಗೆ ಜಾನಕಿ ಪುತ್ತೂರು ಬಸ್‌ಸ್ಟಾಂಡ್ ಸಮೀಪದ ಜನರಲ್ ಸ್ಟೋರ್‌ಗೆ ಹೋಗಿದ್ದಳು. ಕೆಲವು ಪರೀಕ್ಷಾ ಸಾಮಗ್ರಿಗಳನ್ನು ಕೊಂಡು ಹಾಸ್ಟೆಲ್‌ಗೆಂದು ಹೊರಟು ನಿಂತಾಗ ಅವಳಿಗೆ ತುಸು ದೂರದ ಬಸ್ ನಿಲ್ದಾಣದಲ್ಲಿ ಯಾರೋ ಪರಿಚಿತನೊಬ್ಬನನ್ನು ಕಂಡಂತಾಯಿತು. ನೋಡಿದರೆ, ಮುಸ್ತಫಾ!

‘‘ಮೀನಾಕ್ಷಿ ಅಲ್ಲಿ ನೋಡು ಮುಸ್ತಫಾ...’’ ಜಾನಕಿ ಅಕ್ಷರಶಃ ಚೀರಿದ್ದಳು. ಮೀನಾಕ್ಷಿ ಬೆದರಿ ಅತ್ತ ನೋಡಿದಳು. ನೋಡಿದರೆ ದೂರದಲ್ಲಿ ಮುಸ್ತಫಾ ಯಾವುದೋ ಬಸ್‌ಗೆಂದು ಕಾಯುತ್ತಾ ನಿಂತಿದ್ದ.

‘‘ಅವನಲ್ಲಿರಲಿ. ನಿನಗ್ಯಾಕೆ ಅವನ ವಿಷಯ...ಬಾ ಹೋಗುವ...’’ ಮೀನಾಕ್ಷಿ ಗೆಳತಿಯ ಕೈ ಹಿಡಿದುಕೊಂಡಳು. ‘‘ಈಗ ಬಂದೆ...’’ ಎನ್ನುತ್ತಾ ಮೀನಾಕ್ಷಿಯಿಂದ ಜಾನಕಿ ಕೈ ಬಿಡಿಸಿಕೊಂಡು ಮುಸ್ತಫಾ ಇದ್ದಲ್ಲಿಗೆ ಧಾವಿಸಿದಳು. ಮೀನಾಕ್ಷಿ ಅಸಹಾಯಕಳಾಗಿದ್ದಳು.

‘‘ಜಾನಕಿ ನಿಲ್ಲು...ನಿಲ್ಲು...’’ ಎನ್ನುವ ಮೀನಾಕ್ಷಿಯ ಕೂಗು ಕೇಳಿಸಲೇ ಇಲ್ಲ. ಜಾನಕಿ ನೇರವಾಗಿ ಹೋದವಳೇ ಮುಸ್ತಫಾನ ಬೆನ್ನು ಮುಟ್ಟಿ ಅಚ್ಚರಿಕೊಟ್ಟಳು. ‘‘ಯಾರಿಗೂ ಹೇಳದೆ ಎಲ್ಲಿಗೆ ಹೋದದ್ದು...ನಿನಗೆ ಆಕ್ಸಿಡೆಂಟ್ ಆಯಿತಂತೆ ಹೌದಾ...ನೀನು ಗಲ್ಫ್ ಹೋಗುತ್ತೀಯಂತೆ...ಕಾಲೇಜಿಗೆ ಇನ್ನು ಬರುವುದೇ ಇಲ್ಲವಂತೆ...’’ ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಹಾಕ ತೊಡಗಿದಳು.

ಆದರೆ ಮುಸ್ತಫಾ ಮಾತ್ರ ಜಾನಕಿಯನ್ನು ಅಪರಿಚಿತಳನ್ನು ನೋಡುವಂತೆ ನೋಡಿದ. ಅವನ ತುಟಿಗಳು ಭಯದಿಂದ ಅದುರುತ್ತಿದ್ದವು. ಅವನು ಆತಂಕದಿಂದ ಅತ್ತಿತ್ತ ನೋಡತೊಡಗಿದ.

‘‘ಹೇ...ನಾನು ಕಣೋ ಜಾನಕಿ. ಹಾಗೆ ಯಾಕೆ ನೋಡುತ್ತಿದ್ದೀಯ...ಮಾತನಾಡೋ...ಕಾಲೇಜು ಯಾಕೆ ಬಿಟ್ಟೆ...?’’ ಜಾನಕಿ ಮತ್ತೆ ಅವನ ತೋಳು ಅಲುಗಿಸಿ ಮಾತನಾಡಿದಳು.

ಮುಸ್ತಫಾ ಮಾತ್ರ ಮಾತಿಲ್ಲದೆ ನಿಂತಲ್ಲೇ ಕಂಪಿಸ ತೊಡಗಿದ. ಮುಸ್ತಫಾ ತನ್ನನ್ನು ಅಪರಿಚಿತನಂತೆ ನೋಡುತ್ತಿರುವುದು ಜಾನಕಿಗೆ ನಿಜಕ್ಕೂ ಆಘಾತ ತಂದಿತ್ತು. ‘‘ಯಾಕೋ...ಏನಾಯ್ತೋ...?’’ ಮತ್ತೆ ಜಾನಕಿ ಪ್ರಶ್ನಿಸಿದಳು.

ಅಷ್ಟರಲ್ಲಿ ಪಕ್ಕದ ಬೀಡಾ ಅಂಗಡಿಯಿಂದ ಒಬ್ಬ ದಢೂತಿ ಅಸಾಮಿ ಧಾವಿಸಿ ಬಂದ. ಅವನ ಜೊತೆಗೆ ಕೇಸರಿ ಶಾಲು ಹೊದ್ದ ಇನ್ನಿಬ್ಬರಿದ್ದರು.

ದಢೂತಿ ಅಸಾಮಿಯೊಬ್ಬ ಮುಸ್ತಫಾನ ಕೆನ್ನೆಗೆ ಛಟೀರನೇ ಭಾರಿಸಿದ.

‘‘ಅಮ್ಮಾ....’’ ಎಂದು ಮುಸ್ತಫಾ ಚೀರಿದ. ಆ ಏಟಿಗೆ ಅವನ ಕನ್ನಡಕ ಅಷ್ಟು ದೂರ ಬಿದ್ದಿತ್ತು.

‘‘ಲವ್ ಮಾಡುವುದಕ್ಕೆ ಹಿಂದೂ ಹುಡುಗಿಯರೇ ಬೇಕೇನೋ...ನಿನಗೆ. ಅವತ್ತು ಬಿದ್ದದ್ದು ಸಾಕಾಗಲಿಲ್ಲವಾ? ನಿನ್ನ ತಂದೆ ಕೈ ಕಾಲಿಗೆ ಬಿದ್ದುದಕ್ಕೆ ಜೀವಂತ ಬಿಟ್ಟದ್ದು...ಗುರೂಜಿಯ ಮಗಳನ್ನೇ ಲವ್‌ಜಿಹಾದ್ ಮಾಡುವಷ್ಟು ಧೈರ್ಯವಾ ನಿನಗೇ?’’ ಆತ ಅಬ್ಬರಿಸಿದ.

 ಜನ ಗುಂಪು ಗುಂಪಾಗಿ ಸೇರಿಕೊಳ್ಳತೊಡಗಿದರು.

‘‘ಹಿಂದೂ ಹುಡುಗಿಯರು ದಾರಿಯಲ್ಲಿ ಹೋಗುವುದಕ್ಕೆ ಗೊತ್ತಿಲ್ಲ...ಚುಡಾಯಿಸುವುದು ಇವರ ಜಾತಿಯವರಿಗೆ ಅಭ್ಯಾಸ ಆಗಿ ಬಿಟ್ಟಿದೆ. ಗುರೂಜಿಯ ಮಗಳ ಜೊತೆಗೆ ಈ ಸಾಬಿ ಅಸಭ್ಯವಾಗಿ ನಡೆದು ಕೊಂಡಿದ್ದಾನೆ...’’ ಯಾರೋ ಜೋರಾಗಿ ಬೊಬ್ಬೆ ಹೊಡೆದರು.

ಜಾನಕಿಗೆ ಒಂದೂ ಅರ್ಥವಾಗುತ್ತಿರಲಿಲ್ಲ. ಮುಸ್ತಫಾನಿಗೆ ಅವರೇಕೆ ಹೊಡೆದರು...ಏನು ನಡೆಯುತ್ತಿದೆ....? ಅವಳು ದಿಗ್ಭ್ರಾಂತಳಾಗಿದ್ದಳು. ಅಷ್ಟರಲ್ಲಿ ಒಬ್ಬ ‘‘ನೀನು ಬಾಮ್ಮ....ನಿನ್ನನ್ನು ಹಾಸ್ಟೆಲ್‌ಗೆ ತಲುಪಿಸುತ್ತೇನೆ...ನೀನು ಇದರಲ್ಲಿ ಸಿಕ್ಕಿಕೊಳ್ಳಬೇಡ...’’ ಎಂದು ಆಕೆಯನ್ನು ಗುಂಪಿನಿಂದ ಹೊರಗೆ ಎಳೆದುಕೊಂಡ.

ದೂರದಲ್ಲಿ ಮೀನಾಕ್ಷಿಯೂ ಅಳುತ್ತಾ ನಿಂತಿದ್ದಳು. ಇಬ್ಬರನ್ನೂ ಆಟೋ ರಿಕ್ಷಾದಲ್ಲಿ ಹತ್ತಿಸಿದ ಆತ ಹಾಸ್ಟೆಲ್‌ಗೆ ಬಿಟ್ಟ. ರಿಕ್ಷಾದಿಂದ ಇಳಿಯುವಾಗ ಜಾನಕಿ ಅಳುತ್ತಾ ‘‘ಅಣ್ಣಾ ಅವರು ಮುಸ್ತಫಾನಿಗೆ ಹೊಡೆದದ್ದು ಯಾಕೆ? ಅವರಿಗೆ ಹೊಡೆಯಬೇಡ ಎಂದು ಹೇಳಿ. ಅವನು ಆ ಜಾತಿಯ ಎಲ್ಲರ ಹಾಗೆ ಅಲ್ಲ...ಅವನು ತುಂಬಾ ಒಳ್ಳೆಯವನು...’’ ಎಂದು ಗೋಗರೆಯತೊಡಗಿದಳು.

‘‘ನಿನಗೆ ಇದೆಲ್ಲ ಗೊತ್ತಾಗುವುದಿಲ್ಲ ಅಮ್ಮ. ನೀನು ಕಾಲೇಜು ಓದಿನ ಕಡೆಗೆ ಗಮನ ಕೊಡು. ಅದೆಲ್ಲ ನಾವು ನೋಡಿಕೊಳ್ಳುತ್ತೇವೆ...ಗುರೂಜಿಗೆ ಪೋನ್ ಮಾಡುತ್ತೇನೆ. ಅವರು ಬಂದು ಎಲ್ಲ ಸರಿ ಮಾಡುತ್ತಾರೆ. ನೀನು ಹೆದರಬೇಡ...’’ ಎಂದವನೇ ಅದೇ ರಿಕ್ಷಾದಲ್ಲಿ ವಾಪಸಾದ. ಹಾಸ್ಟೆಲ್‌ನಲ್ಲಿ ಮೀನಾಕ್ಷಿ ಮತ್ತು ಜಾನಕಿ ಇಬ್ಬರು ಆತಂಕದಿಂದ ಕೂತಿದ್ದರು. ಪರಸ್ಪರ ಏನು ಮಾತನಾಡುವುದು ಎಂದೇ ಅವರಿಗೆ ತೋಚುತ್ತಿರಲಿಲ್ಲ. ಜಾನಕಿ ಇದ್ದಕ್ಕಿದ್ದಂತೆ ಜೋರಾಗಿ ಹುಚ್ಚಿಯಂತೆ ಅಳತೊಡಗಿದಳು. ಮೀನಾಕ್ಷಿ ಅವಳ ಹತ್ತಿರ ಧಾವಿಸಿದಳು. ಅಷ್ಟರಲ್ಲಿ ಒಬ್ಬೊಬ್ಬರಾಗಿ ಹಾಸ್ಟೆಲ್‌ನ ವಿದ್ಯಾರ್ಥಿನಿಯರು ಅವಳ ಕೊಠಡಿಗೆ ಆಗಮಿಸ ತೊಡಗಿದರು.

‘‘ಎಲ್ಲ ಹೋಗಿ...ಎಲ್ಲ ಹೋಗಿ...’’ ಮೀನಾಕ್ಷಿ ಅಬ್ಬರಿಸಿ ಬಾಗಿಲು ಹಾಕಿಕೊಂಡವಳು ಜಾನಕಿಯ ಕಡೆಗೆ ಒಮ್ಮೆಲೆ ತಿರುಗಿದಳು ‘‘ನಾನು ಬೇಡ ಬೇಡ ಎಂದು ಹೇಳುತ್ತಲೇ ಇದ್ದೆ. ನಿನ್ನಿಂದಾಗಿ ಅವರೆಲ್ಲ ಸೇರಿ ಆ ಮುಸ್ತಫಾನನ್ನು ಕೊಂದೇ ಬಿಡುತ್ತಾರೆ...’’

ಮೀನಾಕ್ಷಿಯ ಅಬ್ಬರಕ್ಕೆ ಜಾನಕಿ ಸ್ತಂಭೀಭೂತಳಾದಳು. ತುಸು ಹೊತ್ತಿನ ಬಳಿಕ ಮೀನಾಕ್ಷಿಯ ಬಳಿ ಸಾರಿ ಕೇಳಿದಳು ‘‘ನಾನೇನು ಮಾಡಿದೆ?’’

‘‘ಮಾಡುವುದೆಲ್ಲ ಮಾಡಿ ನಾನೇನು ಮಾಡಿದೆ? ಅವತ್ತು ಅವನು ಕೊಟ್ಟ ಅಂತ ಆ ಪೆನ್ನನ್ನು ಉಡುಗೊರೆ ಪಡೆದದ್ದು ಯಾಕೆ? ಸರಿ, ಅದನ್ನು ಇಡೀ ತರಗತಿಗೆ ತೋರಿಸಿದ್ದು ಯಾಕೆ? ಮುಸ್ತಫಾನಿಗೆ ಆಕ್ಸಿಡೆಂಟಾದದ್ದು ಅಲ್ಲ...ನಿನ್ನನ್ನು ಅವನು ಲವ್ ಮಾಡುತ್ತಿದ್ದೇನೆ ಎಂದು ಯಾರಲ್ಲೋ ಹೇಳಿದ್ದನಂತೆ...ಅದಕ್ಕೆ ಕೆಲವು ಸಂಘಟನೆಯವರು ಹೊಡೆಸಿದ್ದಂತೆ...ಕೈಕಾಲು ಮುರಿಯುವ ಹಾಗೆ ಹೊಡೆದಿದ್ದರು....ಲವ್ ಜಿಹಾದ್ ಮಾಡಲು ಅವನನ್ನು ಅವನ ಜಾತಿಯವರು ನಿನ್ನ ಬಳಿ ಕಳುಹಿಸಿದ್ದಂತೆ...ಇದೆಲ್ಲ ನಿನಗೆ ಗೊತ್ತಾ?’’

ಜಾನಕಿಗೆ ಮೀನಾಕ್ಷಿಯ ಮಾತುಗಳು ಸಿಡಿಲಿನಿಂತೆ ಅಪ್ಪಳಿಸುತ್ತಿದ್ದವು. ‘‘ಮುಸ್ತಫಾನ ತಂದೆ ಆ ಸಂಘಟನೆಯವರ ಬಳಿ ಹೋಗಿ ಕೈ ಮುಗಿದು, ಇನ್ನು ನನ್ನ ಮಗನನ್ನು ಕಾಲೇಜಿಗೆ ಕಳುಹಿಸುವುದೇ ಇಲ್ಲ ಎಂದು ಗೋಗರೆದ ಮೇಲೆ ಬಿಟ್ಟದ್ದಂತೆ...ಕೋಮುಗಲಭೆ ಆಗುತ್ತಿತ್ತು ಗೊತ್ತುಂಟಾ? ನಿನ್ನಿಂದ ಇಡೀ ಪುತ್ತೂರಿಗೆ ಬೆಂಕಿ ಬೀಳುತ್ತಿತ್ತು ಗೊತ್ತುಂಟಾ? ಅವರ ಜಾತಿಯವರೂ ಗಲಾಟೆ ಮಾಡುವುದಕ್ಕೆ ಒಟ್ಟಾಗಿದ್ದರು. ಆದರೆ ಮುಸ್ತಫಾನ ತಂದೆ ಅದಕ್ಕೆ ಅವಕಾಶ ಕೊಡಲಿಲ್ಲವಂತೆ. ಈಗ ನೋಡು... ಅವನು ಅವನಷ್ಟಕ್ಕೇ ಅಲ್ಲಿ ನಿಂತಿರುವಾಗ ನೀನು ಅವನ ಬಳಿ ಓಡಿದ್ದೇಕೆ? ಇನ್ನು ಅವನನ್ನು ಕೊಂದು ಹಾಕುತ್ತಾರೆ...ನಿನಗೆ ಸಂತೋಷ ತಾನೇ? ಕೊಂದು ಹಾಕಿದರೆ ಅವರ ಜಾತಿಯವರು ಸುಮ್ಮಗೆ ಬಿಡುತ್ತಾರ?’’

ಜಾನಕಿ ನಿಂತಲ್ಲೇ ನಡುಗತೊಡಗಿದಳು ‘‘ನಾನು ಅಪ್ಪಾಜಿಗೆ ಪೋನ್ ಮಾಡುವೆ. ಅವರು ಬಂದು ಎಲ್ಲ ಸರಿ ಮಾಡುತ್ತಾರೆ. ಮುಸ್ತಫಾನ ತಪ್ಪಿಲ್ಲ ಎಂದು ಹೇಳುವೆ...’’ ತಡಬಡಿಸಿದಳು.

‘‘ಫೋನ್ ಮಾಡುವುದಂತೆ...ಸರಿ ಮಾಡುವುದಂತೆ...ಮುಸ್ತಫಾನಿಗೆ ಅವತ್ತು ಹಲ್ಲೆ ನಡೆಸುವ ಎರಡು ದಿನಕ್ಕೆ ಮೊದಲು ನಿನ್ನನ್ನು ನಿನ್ನ ಅಪ್ಪಾಜಿ ಬಂದು ಮನೆಗೆ ಕರೆದುಕೊಂಡು ಹೋದರಲ್ಲ. ಅಷ್ಟು ಅವಸರದಲ್ಲಿ ಯಾಕೆ ಕರೆದುಕೊಂಡು ಹೋದದ್ದು ಎಂದು ಗೊತ್ತಾ ನಿನಗೆ?’’ ಮೀನಾಕ್ಷಿ ಮತ್ತೊಂದು ಬಾಂಬ್ ಹಾಕಿದ್ದಳು. ಆಕೆಯ ಮಾತಿನಿಂದ ಜಾನಕಿ ತತ್ತರಿಸಿದಳು.

‘‘ನಿನ್ನ ತಂದೆಗೆ ಯಾವುದೋ ಅನಾಮಿಕ ಪತ್ರ ಹೋಗಿತ್ತಂತೆ. ನಿಮ್ಮ ಮಗಳು ಇಲ್ಲಿ ಸಾಬಿಯ ಜೊತೆಗೆ ಸುತ್ತುತ್ತಿದ್ದಾಳೆ.... ನಿಮ್ಮ ಮಗಳು ನಿಮ್ಮ ಕೈಗೆ ಸಿಗಬೇಕಾದರೆ ಬೇಗ ಬಂದು ಸರಿ ಪಡಿಸಿ ಎಂದೂ ಪತ್ರದಲ್ಲಿ ಬರೆದಿದ್ದರಂತೆ....’’

ಜಾನಕಿಗೀಗ ಎಲ್ಲವೂ ಒಂದೊಂದಾಗಿ ಸ್ಪಷ್ಟವಾಗತೊಡಗಿತು ‘‘ಇದನ್ನೆಲ್ಲ ನನಗೆ ಮೊದಲೇ ಯಾಕೆ ಹೇಳಲಿಲ್ಲ?’’

‘‘ಎಂತ ಹೇಳುವುದು. ನಿನ್ನ ತಂದೆಯೇ ಮುಸ್ತಫಾನಿಗೆ ಹೊಡೆಸಿದರು ಎಂದು ಹೇಳಬೇಕಿತ್ತಾ?’’ ಮೀನಾಕ್ಷಿಯ ಪ್ರಶ್ನೆ ಜಾನಕಿಯ ಎದೆಯನ್ನು ಇರಿದೇ ಬಿಟ್ಟಿತು. ಅವಳು ಕುಳಿತು ಬಿಕ್ಕಿ ಬಿಕ್ಕಿ ಅಳತೊಡಗಿದಳು. ಅಪ್ಪಾಜಿ ಅವಳ ಬದುಕಿನ ಅತ್ಯುನ್ನತವಾದ ಆದರ್ಶವಾಗಿದ್ದರು. ಅದಕ್ಕೆ ಚೂರು ಧಕ್ಕೆಯಾದರೂ ಅವಳು ಸಹಿಸಿಕೊಳ್ಳಲು ಸಿದ್ಧಳಿರಲಿಲ್ಲ. ಮೀನಾಕ್ಷಿಯ ಮಾತನ್ನು ಜೋರಾಗಿ ವಿರೋಧಿಸಬೇಕು ಎಂದು ಅವಳಿಗೆ ಅನ್ನಿಸಿತು. ಆದರೆ ಹೇಗೆ? ಎನ್ನುವುದು ಹೊಳೆಯಲಿಲ್ಲ. ಮುಸ್ತಫಾನ ಪ್ರಾಣ ಉಳಿದರೆ ಸಾಕು ಎಂದು ಅವಳು ಮನದೊಳಗೆ ಪ್ರಾರ್ಥಿಸತೊಡಗಿದಳು. ಅಂದು ಸಂಜೆ ಏಳು ಗಂಟೆಯ ಹೊತ್ತಿಗೆ ಪ್ರಾಂಶುಪಾಲರು ಮತ್ತು ಕನ್ನಡ ಪಂಡಿತರು ಹಾಸ್ಟೆಲ್ ಕೊಠಡಿಗೆ ಭೇಟಿ ನೀಡಿದರು ‘‘ಏನೂ ಹೆದರ ಬೇಡಮ್ಮ. ಎಲ್ಲ ಸರಿಯಾಗಿದೆ....ನಿನ್ನ ಅಪ್ಪಾಜಿಯವರೂ ಬಂದಿದ್ದಾರೆ....ಪೊಲೀಸ್ ಸ್ಟೇಶನ್‌ನಲ್ಲಿ ಏನೋ ಒಂದು ಸಭೆ ನಡೆಯುತ್ತಿದೆ. ಅಲ್ಲಿದ್ದಾರೆ...’’ ಪಂಡಿತರು ಸಮಾಧಾನ ಮಾಡಿದರು.

 ಜಾನಕಿ ಏನೂ ಹೇಳಲಿಲ್ಲ. ಇದ್ದಕ್ಕಿದ್ದಂತೆಯೇ ಪ್ರಾಂಶುಪಾಲ ಕಾಮತರು ಕೇಳಿ ಬಿಟ್ಟರು ‘‘ವಿಷಯ ಹೌದಾ...ನಿನಗಾಗಿಯೇ ಮುಸ್ತಫಾ ಅಲ್ಲಿ ಕಾಯುತ್ತಿದ್ದನಂತೆ...ನೀವಿಬ್ಬರು ಬಸ್‌ನಲ್ಲಿ ಮುಂಬೈಗೆ ಓಡಿಹೋಗುವ ಪ್ಲಾನ್ ಮಾಡಿದ್ದರಂತೆ....?’’

ಈಗ ಮೀನಾಕ್ಷಿ ಸಿಡಿದಳು ‘‘ಸಾರ್ ಅವರಿಗೆಲ್ಲ ತಲೆಗೆಟ್ಟಿದೆ. ನಾವು ಪರೀಕ್ಷೆಗೆ ಬೇಕಾದ ಸಲಕರಣೆಗೆ ಜನರಲ್ ಸ್ಟೋರ್‌ಗೆ ಹೋಗಿದ್ದೆವು. ಅಲ್ಲಿ ದೂರದಲ್ಲಿ ಮುಸ್ತಫಾ ನಿಂತದ್ದು ಕಂಡು ಜಾನಕಿ ಓಡಿ ಹೋಗಿ ಮಾತನಾಡಲು ಪ್ರಯತ್ನಿಸಿದ್ದಾಳೆ. ಅಷ್ಟರಲ್ಲಿ ಜನ ಸೇರಿದ್ದಾರೆ....’’ ‘‘ಸರಿ ಅಮ್ಮ. ವಿಷಯ ಎಲ್ಲಾ ಗೊತ್ತು ನನಗೆ. ಪರೀಕ್ಷೆ ಹತ್ತಿರವಾಗುತ್ತಿರುವಾಗ ಇದೆಲ್ಲ ನಡೆಯಬಾರದಿತ್ತು. ಗುರೂಜಿಯವರು ಹಾಸ್ಟೆಲ್‌ಗೆ ಬರಬಹುದು. ಅವರು ಏನು ಹೇಳಿದರೂ ಪ್ರತಿಯಾಗಿ ಮಾತನಾಡಬೇಡ...’’ ಕನ್ನಡ ಪಂಡಿತರು ಹೇಳಿದರು. ಅವರು ಗದ್ಗದ ಸ್ವರದಲ್ಲಿ ಮಾತನಾಡುತ್ತಿದ್ದರು. ‘‘ಸಾರ್ ಅವರೆಲ್ಲ ಸೇರಿ ಮುಸ್ತಫಾನನ್ನು ಕೊಂದೇ ಬಿಟ್ಟರಾ...?’’ ಎಂದು ಕೇಳಿದ ಜಾನಕಿ ಗಳಗಳನೆ ಅಳತೊಡಗಿದಳು.

‘‘ಇಲ್ಲಮ್ಮ ಅಂಥದ್ದೇನೂ ಆಗಿಲ್ಲ. ಅವನು ಇನ್ನೆರಡು ದಿನಗಳಲ್ಲಿ ಗಲ್ಫ್‌ಗೆ ಹೋಗುತ್ತಾನೆ. ಅಲ್ಲಿಗೆ ಎಲ್ಲ ಸರಿಯಾಗುತ್ತದೆ...’’ ಪಂಡಿತರು ಸಮಾಧಾನಿಸಿದರು. ಮೀನಾಕ್ಷಿಯನ್ನು ಜಾನಕಿಯ ಜೊತೆಗೇ ಇರಲು ಹೇಳಿದ ಪಂಡಿತರು ಮತ್ತು ಪ್ರಾಂಶುಪಾಲರು ಅಲ್ಲಿಂದ ತೆರಳಿದರು.

ರಾತ್ರಿ ಎಂಟು ಗಂಟೆಗೆ ಗುರೂಜಿ ಹಾಸ್ಟೆಲ್‌ನ ಬಾಗಿಲು ಬಡಿದರು. ಮೀನಾಕ್ಷಿ ಬಾಗಿಲು ತೆರೆದಳು.

‘‘ಜಾನಕಿ ನಿನ್ನ ಪುಸ್ತಕ, ಬಟ್ಟೆ ಬರೆಯ ಪೆಟ್ಟಿಗೆಯನ್ನು ರೆಡಿ ಮಾಡು. ಹಾಸ್ಟೆಲ್‌ನಲ್ಲಿ ಓದಿದ್ದು ಸಾಕು. ಇನ್ನು ಮನೆಯಲ್ಲೇ ಓದಿ ಪರೀಕ್ಷೆಗೆ ಹಾಜರಾದರೆ ಆಯಿತು...’’ ಮಾತಿನಲ್ಲಿ ಆದೇಶವಿತ್ತು.

(ರವಿವಾರದ ಸಂಚಿಕೆಗೆ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News