ಮಾತುಕತೆ ನಡೆಸದ ಇಸ್ರೇಲ್‌ಗೆ ನಾಯಕರ ಖಂಡನೆ
ರಮಲ್ಲಾ (ಫೆಲೆಸ್ತೀನ್), ಎ. 20: ಇಸ್ರೇಲ್‌ನ ಜೈಲುಗಳಲ್ಲಿ ಉಪವಾ ಸತ್ಯಾಗ್ರಹ ನಡೆಸುತ್ತಿರುವ ಫೆಲೆಸ್ತೀನ್ ಕೈದಿಗಳೊಂದಿಗೆ ಮಾತುಕತೆ ನಡೆಸಲು ಇಸ್ರೇಲ್ ನಿರಾಕರಿಸಿರುವುದನ್ನು ಫೆಲೆಸ್ತೀನ್ ನಾಯಕರು ಖಂಡಿಸಿದ್ದಾರೆ ಹಾಗೂ ಸತ್ಯಾಗ್ರಹನಿರತರ ಪೈಕಿ ಯಾರಾದರೂ ಮೃತಪಟ್ಟರೆ ‘ಹೊಸತೊಂದು ಸಂಘರ್ಷ’ ಆರಂಭವಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸೋಮವಾರದಿಂದ ನಡೆಯುತ್ತಿರುವ ಉಪವಾಸ ಸತ್ಯಾಗ್ರಹದಲ್ಲಿ ಸುಮಾರು 1,500 ಫೆಲೆಸ್ತೀನಿ ಕೈದಿಗಳು ಭಾಗವಹಿಸುತ್ತಿದ್ದಾರೆ ಎಂದು ಫೆಲೆಸ್ತೀನ್ ಪ್ರಾಧಿಕಾರದ ಬಂದೀಖಾನೆ ವ್ಯವಹಾರಗಳ ಇಲಾಖೆಯ ಮುಖ್ಯಸ್ಥ ಇಸ್ಸ ಖರಾದೆ ಹೇಳಿದರು.
ಎಎಫ್‌ಪಿ ಸುದ್ದಿ ಸಂಸ್ಥೆಯು ಇಸ್ರೇಲ್‌ನ ಕಾರಾಗೃಹ ಇಲಾಖೆಯನ್ನು ಸಂಪರ್ಕಿಸಿದಾಗ, ಎಷ್ಟು ಕೈದಿಗಳು ಮುಷ್ಕರದಲ್ಲಿ ಭಾಗವಹಿಸುತ್ತಿದ್ದಾರೆ ಎಂಬುದನ್ನು ತಿಳಿಸಲು ಅಧಿಕಾರಿಗಳು ನಿರಾಕರಿಸಿದರು.
ಉಪವಾಸ ಸತ್ಯಾಗ್ರಹದ ನೇತೃತ್ವವನ್ನು ಇಸ್ರೇಲ್‌ನ ಜೈಲೊಂದರಲ್ಲಿ ಕೈದಿಯಾಗಿರುವ ಜನಪ್ರಿಯ ಫೆಲೆಸ್ತೀನ್ ನಾಯಕ ಮರ್ವನ್ ಬರ್ಘೌಟಿ ವಹಿಸಿದ್ದಾರೆ. ಎರಡನೆ ಫೆಲೆಸ್ತೀನಿ ‘ಇಂಟಿಫಾಡ’ (ಬಂಡಾಯ)ದಲ್ಲಿ ವಹಿಸಿದ ಪಾತ್ರಕ್ಕಾಗಿ ಬರ್ಘೌಟಿಗೆ ಇಸ್ರೇಲ್‌ನಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಉತ್ತಮ ವೈದ್ಯಕೀಯ ನೆರವು ಮತ್ತು ಟೆಲಿಫೋನ್ ಸೌಕರ್ಯ ಸೇರಿದಂತೆ ಹಲವು ಬೇಡಿಕೆಗಳನ್ನು ಉಪವಾಸನಿರತ ಕೈದಿಗಳು ಮುಂದಿಟ್ಟಿದ್ದಾರೆ.
ಸುಮಾರು 6,500 ಫೆಲೆಸ್ತೀನೀಯರನ್ನು ವಿವಿಧ ಅಪರಾಧಗಳಿಗಾಗಿ ಇಸ್ರೇಲ್ ಬಂಧಿಸಿ ಜೈಲುಗಳಲ್ಲಿಟ್ಟಿದೆ.
ಫೆಲೆಸ್ತೀನ್ ಕೈದಿಗಳು ಹಲವು ಬಾರಿ ಉಪವಾಸ ಸತ್ಯಾಗ್ರಹಗಳನ್ನು ನಡೆಸಿದ್ದರೂ, ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಈವರೆಗೆ ನಡೆದಿಲ್ಲ.ಬಂಧಿತರಿಗೆ ಬಲವಂತವಾಗಿ ಉಣಿಸಲು ಅಧಿಕಾರ ನೀಡುವ ಕಾನೂನನ್ನು ಜಾರಿಗೊಳಿಸಲು ಅಧಿಕಾರಿಗಳು ಹಿಂಜರಿಯುವುದಿಲ್ಲ ಎಂದು ಇಸ್ರೇಲ್‌ನ ಕಾನೂನು ಸಚಿವ ಅಯೆಲೆಟ್ ಶಕೀದ್ ಹೇಳಿದ್ದಾರೆ.