ಅಮೆರಿಕದಲ್ಲಿ ಸೌದಿಯಿಂದ 200 ಬಿಲಿಯ ಡಾಲರ್ ಹೂಡಿಕೆ

Update: 2017-05-18 14:59 GMT

►ಟ್ರಂಪ್ ಭೇಟಿ ವೇಳೆ ಒಪ್ಪಂದಕ್ಕೆ ಸಹಿ ಸಾಧ್ಯತೆ

►ವ್ಯಾಪಕ ಉದ್ಯೋಗವಕಾಶಗಳ ಸೃಷ್ಟಿಯ ನಿರೀಕ್ಷೆ

ವಾಶಿಂಗ್ಟನ್,ಮೇ 5: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಚೊಚ್ಚಲ ವಿದೇಶ ಪ್ರವಾಸದ ಸಿದ್ಧರಾಗಿರುವಂತೆಯೇ, ಸೌದಿ ಆರೇಬಿಯವು ಅಮೆರಿಕದಲ್ಲಿ 200 ಶತಕೋಟಿ ಡಾಲರ್ ಹೂಡಿಕೆ ಮಾಡುವುದಾಗಿ ಘೋಷಿಸಿದೆ ಹಾಗೂ ಅಮೆರಿಕದಿಂದ 300 ಶತಕೋಟಿ ಡಾಲರ್ ವೌಲ್ಯದ ಶಸ್ತ್ರಾಸ್ತ್ರಗಳನ್ನು ಖರೀದಿಸುವ ಇಚ್ಛೆಯನ್ನು ವ್ಯಕ್ತಪಡಿಸಿದೆ.

ಅಧ್ಯಕ್ಷ ಟ್ರಂಪ್ ಅವರು ಸೌದಿ ಆರೇಬಿಯಕ್ಕೆ ಭೇಟಿ ನೀಡುವ ಮೂಲಕ ತನ್ನ ಚೊಚ್ಚಲ ವಿದೇಶಯಾತ್ರೆಯನ್ನು ಆರಂಭಿಸಲಿದ್ದಾರೆ.‘‘ಟ್ರಂಪ್ ಭೇಟಿಯ ವೇಳೆ ಸೌದಿ ಆಡಳಿತ ಅಮೆರಿಕದಲ್ಲಿ 200 ಶತಕೋಟಿ ಅಮೆರಿಕ ಡಾಲರ್‌ಗಳ ಹೂಡಿಕೆಗೆ ಸಹಿಹಾಕಲಿದ್ದು, ಇದರಿಂದಾಗಿ ಭಾರೀ ಸಂಖ್ಯೆಯಲ್ಲಿ ಉದ್ಯೋಗಗಳು ಸೃಷ್ಟಿಯಾಗಲಿವೆ’’ ಎಂದು ಅಮೆರಿಕ ಅಧ್ಯಕ್ಷರ ಪ್ರವಾಸದ ರೂಪುರೇಷೆಗಳನ್ನು ಸಿದ್ಧಪಡಿಸುವ ಕಾರ್ಯದಲ್ಲಿ ಪಾಲ್ಗೊಂಡಿರುವ ಹಿರಿಯ ಆಡಳಿತಾಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

‘‘ತಮ್ಮ ಹಣವನ್ನು ಹೂಡಲು ಅಮೆರಿಕವು ಉತ್ತಮ ಸ್ಥಳವೆಂಬುದನ್ನು ಸೌದಿಗಳು ಮನಗಂಡಿದ್ದಾರೆ. ನಮ್ಮ ಆರ್ಥಿಕತೆಯು ನಿಜಕ್ಕೂ ಮೇಲಕ್ಕೇರುತ್ತಿರುವುದು ಅವರಿಗೆ ಅರಿವಾಗಿದೆ. ಅಮೆರಿಕದಲ್ಲಿ ವ್ಯಾಪಕವಾದ ಅವಕಾಶಗಳಿರುವುದನ್ನು ಅರಿತುಕೊಂಡಿದ್ದಾರೆ. ಹೀಗಾಗಿ ಅಮೆರಿಕದಲ್ಲಿ ಹೂಡಿಕೆ ಮಾಡಲು ಅವರು ಬಯಸಿದ್ದಾರೆ, ಇದರಿಂದ ವ್ಯಾಪಕವಾಗಿ ಉದ್ಯೋಗಗಳು ಸೃಷ್ಟಿಯಾಗಲಿದ್ದು, ನಮಗೆ ಇದರಿಂದ ತುಂಬಾ ಪ್ರಯೋಜನವಿದೆ’’ ಎಂದು ಅವರು ಹೇಳಿದ್ದಾರೆ.

‘‘ಇದರ ಜೊತೆಗೆ ಸೌದಿ ಆರೇಬಿಯ 300 ಶತಕೋಟಿ ಡಾಲರ್ ವೌಲ್ಯದ ಮಿಲಿಟರಿ ಉಪಕರಣಗಳನ್ನು ಖರೀದಿಸುವ ಇಂಗಿತವನ್ನು ವ್ಯಕ್ತಪಡಿಸಿದೆ. ಅವರು ಸುಮಾರು 109 ಶತಕೋಟಿ ಡಾಲರ್ ವೌಲ್ಯದ ಒಪ್ಪಂದಗಳಿಗೆ ಸಹಿಹಾಕಲಿದ್ದಾರೆ’’ ಎಂದು ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News