ಸೇನೆ ಸೇರುವುದು ದೇಶದ್ರೋಹವೇ?
ಪಪ್ಪು ಕೂಡ ನಸು ನಕ್ಕ. ಮಗನ ಮುಖದ ಮಂದಹಾಸ ಕಂಡು ತಾಯಿಯ ಮನಸ್ಸು ಸಮಾಧಾನವಾಯಿತು. ಹಾಗಾದರೆ ನಾಳೆ ಪದ್ಮನಾಭರು ಬರುವುದೊಂದೇ ಬಾಕಿ. ಈತನ ರಜೆ ಮುಗಿಯುವುದರೊಳಗಾಗಿ ಎಲ್ಲ ಕಾರ್ಯಕ್ರಮಗಳನ್ನೂ ಮುಗಿಸಿ ಬಿಡಬೇಕು. ಮರುದಿನ ಮನೆಯಲ್ಲಿ ಸಡಗರ. ಪಪ್ಪುವನ್ನು ಬೇಗನೆ ಎಬ್ಬಿಸಿ ಸಿದ್ಧಗೊಳಿಸಿದರು ತಾಯಿ. ಮನೆಯನ್ನು ಒಪ್ಪ ಓರಣಗೊಳಿಸಿದರು. ವಧುವಿನ ಕಡೆಯವರೇ ಬರುತ್ತಾರೇನೋ ಎಂದು ಅನುಮಾನ ಪಡುವಷ್ಟು ಲಕ್ಷ್ಮಮ್ಮ ಅಂದು ಸಿದ್ಧತೆ ನಡೆಸುತ್ತಿದ್ದರು.
‘‘ಲೇ...ಇವತ್ತು ಬರುತ್ತಿರುವುದು ಬ್ರೋಕರ್ ಪದ್ಮನಾಭ. ಹೆಣ್ಣಿನ ಕಡೆಯವರೇ ಬರುತ್ತಾರೇನೋ ಎಂಬ ಹಾಗೆ ಮಾಡುತ್ತಿದ್ದೀಯಲ್ಲ?’’ ಅನಂತಭಟ್ಟರು ಆಕ್ಷೇಪಿಸಿದರು. ಬೆಳಗ್ಗೆ ಹನ್ನೊಂದು ಗಂಟೆಯ ಹೊತ್ತಿಗೆ ಪದ್ಮನಾಭ ಬಂದು ಜಗಲಿಯ ಮೇಲೆ ಕೂತರು. ಪಪ್ಪು ಕೂಡ ಜಗಲಿಗೆ ಬಂದು ಪದ್ಮನಾಭರಿಗೆ ನಮಸ್ಕರಿಸಿದ. ಪಪ್ಪುವನ್ನು ನೋಡಿದ ಪದ್ಮನಾಭರು ಆವಕ್ಕಾದರು ‘‘ಹುಡುಗ ಭರ್ಜರಿಯಾಗಿ ಬೆಳೆದು ಬಿಟ್ಟಿದ್ದಾನೆ. ನಾನು ಸಣ್ಣದಲ್ಲಿರುವಾಗ ನೋಡಿದ ಪಪ್ಪುವೇ ಅಲ್ಲ. ಇವನೀಗ ನಿಜಕ್ಕೂ ಪ್ರತಾಪ ಸಿಂಹನೇ ಆಗಿ ಬಿಟ್ಟಿದ್ದಾನೆ..’’ ಎನ್ನುತ್ತಾ ಗಹಗಹಿಸಿದರು. ಪಪ್ಪು ನಾಚಿದ. ತಂದೆ ತಾಯಿಗಳು ಹೆಮ್ಮೆಯಿಂದ ಬೀಗಿದರು.
ಕುಶಲೋಪರಿಯ ಬಳಿಕ ಅನಂತಭಟ್ಟರೇ ಮಾತು ತೆಗೆದರು.‘‘ನರಸಿಂಹಯ್ಯರ ಬಳಿ ಹೋಗಿದ್ದಿರಾ? ಪ್ರಸ್ತಾಪಿಸಿದಿರಾ? ಏನಂದರು?’’ ಪದ್ಮನಾಭರು ವೌನವಾದರು.
‘‘ಏನಾಯಿತು? ಅವರು ಸಿಗಲಿಲ್ಲವೇ?’’
‘‘ಹಾಗಲ್ಲ ಮೇಷ್ಟ್ರೇ...ನಮ್ಮ ಹುಡುಗನಿಗೆ ಆ ಚಲ್ಪಟ್ ಹುಡುಗಿ ಸರಿಯಾಗಲಿಕ್ಕಿಲ್ಲ....ಸ್ವಲ್ಪ ಮೈಕೈ ತುಂಬಿದ ಹುಡುಗಿ ಆಗಬೇಕು...’’
‘‘ಏನಾಗಿದೆ ಆ ಹುಡುಗಿಗೆ? ಬಂಗಾರದಂತಹ ಹುಡುಗಿ....ನಮಗೆ ಅದೇ ಹುಡುಗಿ ಆಗಬಹುದು...’’ ಲಕ್ಷ್ಮಮ್ಮ ಈಗ ಬಾಯಿ ತೆರೆದರು.
ಪದ್ಮನಾಭರು ಮತ್ತೆ ವೌನವಾದರು.
‘‘ನೀವು ನರಸಿಂಹಯ್ಯ ಅವರ ಬಳಿ ಪ್ರಸ್ತಾಪ ಮಾಡಿ ದಿರಾ? ಅದು ಹೇಳಿ....’’ ಅನಂತಭಟ್ಟರು ಕೇಳಿದರು.
‘‘ಪ್ರಸ್ತಾಪ ಮಾಡಿದೆ. ಸದ್ಯ ಮಗಳ ಮದುವೆ ಮಾಡುವ ಉದ್ದೇಶ ಇಲ್ಲ....ಎಂದರು’’ ಸಣ್ಣಗೆ ಕೆಮ್ಮಿ ಪದ್ಮನಾಭ ಉತ್ತರಿಸಿದರು.
‘‘ಕಳೆದ ವಾರ ಅವರೇ ನನ್ನ ಬಳಿ ಹೇಳಿದ್ದು, ಮಗಳ ಮದುವೆ ಮುಗಿಸುವ ಉದ್ದೇಶ ಇದೆ...ಯಾವುದಾದರೂ ಒಳ್ಳೆಯ ಸಂಬಂಧ ಇದ್ದರೆ ನೋಡಿ ಅಂತ...’’
ಪದ್ಮನಾಭ ಮತ್ತೆ ವೌನವಾದರು.
‘‘ಯಾಕೆ, ಈ ಸಂಬಂಧ ಅವರಿಗೆ ಇಷ್ಟವಿಲ್ಲವಂತೆಯೋ...?’’
‘‘ಅವರಿಗೆ ಸಂಪ್ರದಾಯಸ್ಥ ಹುಡುಗ ಆಗಬೇಕಂತೆ...’’ ಪದ್ಮನಾಭ ಈಗ ನಿಜ ವಿಷಯವನ್ನು ತಿಳಿಸಿ ಬಿಟ್ಟರು.
‘‘ಸಂಪ್ರದಾಯಸ್ಥ ಹುಡುಗ ಅಂದರೆ...ನಾವು ಸಂಪ್ರದಾಯಸ್ಥರು ಅಲ್ಲ ಅಂತಲೋ...?’’ ಆಘಾತದಿಂದ ಅನಂತ ಭಟ್ಟರು ಕೇಳಿದರು.
‘‘ಹಾಗಲ್ಲ, ಸೇನೆಯಲ್ಲಿರುವ ಹುಡುಗರು ಮದ್ಯ, ಮಾಂಸ ಇವುಗಳನ್ನೆಲ್ಲ ಸೇವಿಸಬೇಕಾಗುತ್ತದೆ...ಸಂಪ್ರ ದಾಯ ಬಿಡಬೇಕಾಗುತ್ತದೆ....ಅವರಿಗೆ ಹೇಗೆ ಹುಡುಗಿ ಕೊಡುವುದು ಎಂದು ಬಿಟ್ಟರು ನರಸಿಂಹಯ್ಯ’’ ಪದ್ಮನಾಭರ ಮಾತಿಗೆ ಅಲ್ಲಿದ್ದವರೆಲ್ಲ ತತ್ತರಿಸಿದ್ದರು. ಪಪ್ಪು ಒಮ್ಮೆಲೇ ಅಲ್ಲಿಂದ ಎದ್ದು ಒಳ ಹೋಗಿ ತನ್ನ ಕೋಣೆ ಸೇರಿಕೊಂಡ. ಪದ್ಮನಾಭ ತುಂಬಾ ಇಕ್ಕಟ್ಟಿಗೆ ಸಿಕ್ಕಿದ್ದರು. ಅಲ್ಲಿದ್ದವರ ಸಂಕಟ ಅವರಿಗೆ ಅರ್ಥವಾಗುವಂತಹದೇ ಆಗಿತ್ತು.
‘‘ಭಟ್ಟರೇ...ಅದು ಬಿಡಿ. ಆ ಹುಡುಗಿ ನಮ್ಮ ಪ್ರತಾಪನಿಗೂ ಸರಿ ಜೋಡಿಯಾಗುವುದಿಲ್ಲ. ಬೇರೆ ಕೆಲವು ಸಂಬಂಧ ಇವೆ....ನೋಡುವ...ನಮ್ಮ ಹುಡುಗ ರಾಜಕಳೆಯಿರುವವನು. ಅವನಿಗೆ ಒಳ್ಳೆಯ ಜೋಡಿಯೊಂದನ್ನು ನಾನು ಹುಡುಕಿ ಕೊಟ್ಟರೆ ಆಯಿತಲ್ಲ....’’
‘‘ಹಾಗಲ್ಲ...ದೇಶಕ್ಕಾಗಿ ಪ್ರಾಣವನ್ನೇ ಕೊಡಲಿಕ್ಕೆ ಹೊರಟ ನನ್ನ ಮಗನನ್ನು ಸಂಪ್ರದಾಯ ಬಿಟ್ಟವನು ಅಂದರೆ ನರಸಿಂಹಯ್ಯ....?’’ ಅನಂತ ಭಟ್ಟರು ಮತ್ತೆ ಕೇಳಿದರು.
‘‘ಅದು ಬಿಡಿ. ಅವರಿಗೆ ಸಂಗೀತ ಬಿಟ್ಟರೆ ಬೇರೇನು ಗೊತ್ತುಂಟು? ಸೇನೆ ಸೇರಿದರೆ ಸಂಪ್ರದಾಯ ಬಿಡಬೇಕು ಎಂದಿದೆಯೇ? ಅವರ ಮಾತು ತಲೆಗೆ ಹಾಕಿಕೊಳ್ಳಬೇಡಿ. ನಾನು ಮೊದಲೇ ಹೇಳಿದೆ...ಅದೊಂದು ಚಲ್ಪಟ್ ಪುಳಿಚಾರ್ ಹುಡುಗಿ...ಅದು ನಮಗೆ ಆಗಲಿಕ್ಕಿಲ್ಲ....’’
‘‘ನನ್ನ ಮಗನಿಗೆ ನಿನ್ನೆ ಆದ ಸನ್ಮಾನವನ್ನು ಆ ನರಸಿಂಹ ನೋಡಬೇಕಾಗಿತ್ತು...ಸಂಪ್ರದಾಯ, ಸಂಸ್ಕಾರ ಇಲ್ಲದ ಹುಡುಗನಿಗೆ ಊರವರೆಲ್ಲ ಸೇರಿ ಸನ್ಮಾನ ಯಾಕೆ ಮಾಡುತ್ತಾರೆ...ತನ್ನ ತಾಯ್ನೆಲವನ್ನು ರಕ್ಷಿಸುವುದಕ್ಕಾಗಿ ಪ್ರಾಣ ಒತ್ತೆ ಇಡುವುದು ಸಂಸ್ಕಾರದ ಲಕ್ಷಣ ಅಲ್ಲವೇ?’’
‘‘ಅದು ಬಿಡಿ ಎಂದೆನಲ್ಲ....’’
‘‘ಯಾಕೆ ಬಿಡಲಿ...ಕೇಳುತ್ತೇನೆ ಅವನಲ್ಲಿ...ಇಲ್ಲಿ ಕೂತು ತಂಬೂರಿ ಬಾರಿಸಿದಾಕ್ಷಣ ಅಲ್ಲಿ ಶತ್ರುಗಳು ಹೆದರಿ ಓಡಿ ಹೋಗುವುದಿಲ್ಲ...ನನ್ನ ಮಗ ಇವತ್ತು ಗಡಿಯಲ್ಲಿ ಇದ್ದುದರಿಂದ ಅವನ ಮನೆಯಲ್ಲಿ ಒಲೆ ಉರಿಯುತ್ತಿದೆ....ಕೇಳುತ್ತೇನೆ ಅವನಲ್ಲಿ...ಅವನ ಮಗಳಲ್ಲೂ ಕೇಳುತ್ತೇನೆ...ನನ್ನ ಮಗ ಅವಳಿಗೆ ಇಷ್ಟವಿದೆಯೋ ಇಲ್ಲವೋ ಅಂತಾ...? ಗುರೂಜಿಯ ಮೂಲಕ ಅವನಿಗೆ ಛೀಮಾರಿ ಹಾಕಿಸುತ್ತೇನೆ....ಅವನ ಸಂಸ್ಕಾರ ಏನು ಎನ್ನುವುದು ಎಲ್ಲರಿಗೂ ಗೊತ್ತಾಗಲಿ....’’ ಅನಂತ ಭಟ್ಟರು ನಡುಗು ಸ್ವರದಲ್ಲಿ ಹೇಳಿದರು.
ಅಷ್ಟರಲ್ಲಿ ಒಳಗಿನಿಂದ ಬಂದ ಪಪ್ಪು ‘‘ಬಿಟ್ಟು ಬಿಡಿ ಅಪ್ಪಾ...ಆ ಹುಡುಗಿ ನಮಗೆ ಬೇಡ...’’ ಎಂದು ಅಬ್ಬರಿಸಿದ. ಅನಂತಭಟ್ಟರು ಮಗನ ಧ್ವನಿಗೆ ಆವಕ್ಕಾದರು.
‘‘ಹೌದು...ಆ ಹುಡುಗಿ ನಮಗೆ ಬೇಡ...’’ ಪದ್ಮನಾಭರು ತಕ್ಷಣ ಧ್ವನಿ ಸೇರಿಸಿದರು ‘‘ನಾನು ಬೇರೆ ಒಳ್ಳೆಯ ಸಂಬಂಧ ಹುಡುಕಿ ಕೊಟ್ಟರೆ ಆಯಿತಲ್ಲ ನಿಮಗೆ....ಅವರ ಹುಡುಗಿಯನ್ನು ಅವರು ಇಟ್ಟುಕೊಂಡು ಉಪ್ಪಿನಕಾಯಿ ಹಾಕಲಿ. ನಮಗೇಕೆ... ಅವರ ಉಸಾಬರಿ? ನೀವು ಇನ್ನು ಇದನ್ನೆಲ್ಲ ಅವರಲ್ಲಿ ಕೇಳುವುದಕ್ಕೆ ಹೋದರೆ ನನ್ನ ಸಂಬಂಧವೂ ಹಾಳಾಗುತ್ತದೆ...ನಾನು ಚಾಡಿ ಹೇಳಿಕೊಟ್ಟೆ ಎಂದಾಗುತ್ತದೆ....’’ ಗೋಗರೆದರು.
ಅನಂತಭಟ್ಟರು ಪ್ರತಿಯಾಡಲಿಲ್ಲ. ಸ್ವಲ್ಪ ಹೊತ್ತಲ್ಲೇ ಪದ್ಮನಾಭರು ಕುಳಿತಲ್ಲಿಂದ ಎದ್ದು ನಿಂತರು.
‘‘ನಾನು ಈಗ ಹೊರಟೆ...ಸ್ವಲ್ಪ ಅರ್ಜೆಂಟ್ ಕೆಲಸ ಇದೆ...ಮುಂದಿನ ವಾರದಲ್ಲಿ ಒಂದು ಒಳ್ಳೆಯ ಸಂಬಂಧದ ಜೊತೆಗೆ ಬರುವೆ...ಅನಂತಭಟ್ಟರೇ ಬೇಜಾರು ಮಾಡಬೇಡಿ...ಮದುವೆ ಸಂಬಂಧ ಎಂದೆಲ್ಲ ಹೇಳುವಾಗ ಇಂತಹದು ಸಾವಿರ ಬರುತ್ತದೆ ಹೋಗುತ್ತದೆ. ನಮಗೆ ಇದೆಲ್ಲ ಸಾಕಷ್ಟು ಅನುಭವವಾಗಿದೆ. ನಿಮಗೆ ಹೊಸತು ಅಷ್ಟೇ...’’ ಎಂದು ಹೊರಡಲನುವಾದರು.
‘‘ಕಾಫಿ ಕುಡಿದು ಹೋಗಿ...’’ ಎಂದರು ಭಟ್ಟರು.
‘‘ಇಲ್ಲ...ಈಗ ಬೇಡ. ಸಂಬಂಧ ಕೂಡಿದ ಬಳಿಕ ಪಾಯಸವನ್ನು ಅಕ್ಕನ ಬಳಿ ಕೇಳಿ ಕುಡಿಯುವೆ....’’ ಎಂದು ಜೋರು ನಕ್ಕು ಅವರು ಹೊರಟರು. ಪದ್ಮನಾಭರ ಮಾತಿನಿಂದ ಲಕ್ಷ್ಮಮ್ಮ ಅಂತೂ ಒಳಗೊಳಗೆ ವಿಲವಿಲ ಒದ್ದಾಡಿದ್ದರು. ಪಪ್ಪು ಕೋಣೆ ಸೇರಿದ. ಅನಂತಭಟ್ಟರು ಪರಿಸ್ಥಿತಿಯನ್ನು ಸುಧಾರಿಸುವ ಪ್ರಯತ್ನವನ್ನು ಮಾಡಿದರು. ‘‘ನೋಡೇ ಇವಳೇ...ನೀನು ಆ ನರಸಿಂಹಯ್ಯನ ಮಾತಿನ ಬಗ್ಗೆ ತಲೆಕೆಡಿಸಿಕೊಳ್ಳಬೇಡ. ನಿನಗೆ ಇಷ್ಟ ಅಂತ ಆ ಸಂಬಂಧದ ಬಗ್ಗೆ ನಾ ಆಸಕ್ತಿ ವಹಿಸಿದ್ದೇ ಹೊರತು, ನನಗೇನು ಅವನ ಮಗಳನ್ನು ಸೊಸೆಯಾಗಿ ತರುವುದು ಇಷ್ಟ ಇದ್ದಿರಲಿಲ್ಲ. ಅವನ ಅಪ್ಪ, ಅಜ್ಜನ ಕತೆ ಏನು ಎನ್ನುವುದು ನನಗೆ ಗೊತ್ತು. ಹುಡುಗಿ ಪರವಾಗಿಲ್ಲ, ಸಂಗೀತ ಕಲಿತಿದ್ದಾಳೆ ಎಂದು ಹೂಂ ಎಂದಿದ್ದೆ ಹೊರತು, ನರಸಿಂಹಯ್ಯನನ್ನು ಅವನ ವಂಶವನ್ನು ನೋಡಿ ಅಲ್ಲ. ನೀ ಬಿಡು. ಆದದ್ದೆಲ್ಲ ಒಳಿತಿಗೆ. ಪಪ್ಪುವಿಗೆ ಒಳ್ಳೆ ಸಂಸ್ಕಾರ ಇರುವ ಕುಟುಂಬದ ಒಳ್ಳೆಯ ಹುಡುಗಿ ಸಿಗುತ್ತಾಳೆ....ಇನ್ನೊಂದು ವಾರದಲ್ಲಿ ಸಂಬಂಧ ಕೂಡಿಸುತ್ತೇನೆ ನೋಡು...’’
ಲಕ್ಷ್ಮಮ್ಮ ಪ್ರತಿಕ್ರಿಯಿಸಲಿಲ್ಲ. ಪಪ್ಪು ಕೋಣೆಯ ಬಾಗಿಲು ಹಾಕಿಕೊಂಡಿದ್ದ. ಅವರ ದೃಷ್ಟಿ ಆ ಬಾಗಿಲ ಕಡೆಗೇ ಇತ್ತು.
***
ಇದಾಗಿ ಒಂದು ವಾರ ಕಳೆದರೂ ಪದ್ಮನಾಭರ ಪತ್ತೆಯೇ ಇರಲಿಲ್ಲ. ಈ ನಡುವೆ ಅನಂತಭಟ್ಟರೂ ಮಗನ ಮದುವೆಯನ್ನು ಮುಗಿಸಿ ಬಿಡುವ ಕುರಿತಂತೆ ತರಾತುರಿಯಲ್ಲಿದ್ದರು. ನರಸಿಂಹಯ್ಯರ ಮಾತು ಅವರಲ್ಲಿ ಒಂದು ಹಟವನ್ನು ಹುಟ್ಟಿಸಿತ್ತು. ಒಳ್ಳೆಯ ಸಂಪ್ರದಾಯ ಕುಟುಂಬದಿಂದ ಹುಡುಗಿಯನ್ನು ತಂದು ನರಸಿಂಹಯ್ಯರನ್ನು ಹಣಿಯುವ ಉದ್ದೇಶ ಅವರದಾಗಿತ್ತು. ತಂದೆಯ ಉದ್ದೇಶಕ್ಕೆ ಪಪ್ಪು ಕೂಡ ಬೇಡ ಅನ್ನಲಿಲ್ಲ.
‘‘ನಿಮಗೂ ಅಮ್ಮನಿಗೂ ಇಷ್ಟ ಆದರೆ ಸಾಕು. ನಾನು ಆ ಹುಡುಗಿಯನ್ನು ಮದುವೆಯಾಗುತ್ತೇನೆ ಅಪ್ಪ’’ ಎಂದು ಬಿಟ್ಟ.
ಅಂದು ತಂದೆ ಮಗ ಇಬ್ಬರು ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಬಸ್‌ಸ್ಟಾಂಡ್‌ನಲ್ಲಿ ಬಸ್ ಕಾಯುತ್ತಿರುವಾಗ ಥಕ್ಕನೆ ಪದ್ಮನಾಭರು ಮುಖಾಮುಖಿಯಾದರು. ಪದ್ಮನಾಭರು ಸಿಕ್ಕಿಬಿದ್ದ ಕಳ್ಳನಂತೆ ಹಲ್ಲುಕಿರಿದರು.
‘‘ನಾಳೆ ನಾನೇ ಬರಬೇಕು ಎಂದಿದ್ದೆ ಭಟ್ಟರೆ, ಅಷ್ಟರಲ್ಲಿ ನೀವೇ ಸಿಕ್ಕಿದಿರಿ. ಬನ್ನಿ. ಇಲ್ಲಿ ಬೇಡ... ಹೊಟೇಲಲ್ಲಿ ಚಹಾ ಕುಡಿಯುತ್ತಾ ಮಾತನಾಡುವ...’’ ಪದ್ಮನಾಭರು ಸಿಕ್ಕಿದ್ದು ಭಟ್ಟರಿಗೂ ನಿರಾಳವಾಯಿತು. ಎಲ್ಲರೂ ಹತ್ತಿರದಲ್ಲೇ ಇರುವ ವಿಶ್ವಭವನ ಹೊಟೇಲ್‌ಗೆ ಹೋಗಿ, ಒಳಗಿನ ಖಾಸಗಿ ಕೊಠಡಿಯಲ್ಲಿ ಕೂತು ಚಹಾ ಹೇಳಿದರು.
ಪದ್ಮನಾಭರು ಅದು ಇದೂ ಎಂದು ಮಾತನಾಡುತ್ತಾರೆಯೇ ಹೊರತು ವಿಷಯಕ್ಕೆ ಬರುತ್ತಿಲ್ಲ ಎನ್ನುವಾಗ ಅನಂತಭಟ್ಟರೇ ಮಾತೆತ್ತಿದರು. ‘‘ಸಂಬಂಧ ಕೂಡಿಸುತ್ತೇನೆ ಎಂದು ಹೇಳಿ ಹೋದವರ ಪತ್ತೆಯೇ ಇಲ್ಲವಲ್ಲ ಪದ್ಮನಾಭರೇ?’’
ಪದ್ಮನಾಭರು ಸಣ್ಣಗೆ ಕೆಮ್ಮಿ ಮಾತು ಆರಂಭಿಸಿದರು ‘‘ಒಂದಿಷ್ಟು ಹುಡುಕಿದೆ. ಮಿಲಿಟರಿ ಹುಡುಗ ಎಂದಾಗ ಒಂದೊಂದು ನೆಪ ಹೇಳಿ ಹಿಂದೆ ಸರಿಯುತ್ತಾರೆ ಭಟ್ಟರೆ...’’
ಅನಂತಭಟ್ಟರು ಒಮ್ಮೆಗೆ ತಣ್ಣಗಾಗಿ ಬಿಟ್ಟರು
‘‘ಅಂದರೆ ಮಿಲಿಟರಿಗೆ ಸೇರುವುದು ದೇಶದ್ರೋಹದ ಕೆಲಸವಂತೆಯ?’’ ತನಗೆ ತಾನೇ ಮಾತನಾಡುವವರಂತೆ ಭಟ್ಟರು ಗೊಣಗಿದರು. ಪಪ್ಪು ಮಾತ್ರ ನಿರ್ಲಿಪ್ತ ಮುಖಭಾವದಿಂದಿದ್ದ.
‘‘ಹಾಗಲ್ಲ ಭಟ್ಟರೆ...ನೀವೇ ಯೋಚನೆ ಮಾಡಿ. ನಮ್ಮ ಪಪ್ಪು ಸಂಪ್ರದಾಯಸ್ಥನೇ ಇರಬಹುದು. ಮಾಂಸ, ಮದ್ಯ ಮುಟ್ಟದೇ ಇದ್ದಿರಬಹುದು. ಆದರೆ ಮಾಂಸ, ಮದ್ಯ ಸೇವಿಸುವವರ ಜೊತೆಗೆ ಒಡನಾಡಲೇ ಬೇಕಲ್ಲ. ಮತ್ತೆ ಮಿಲಿಟರಿ ಅಂದ ಮೇಲೆ ರಿಸ್ಕಿನ ಕೆಲಸವಲ್ಲವ? ಅವರು ಹೇಳುವುದು ಅವರ ಪಾಲಿಗೆ ಸರಿ. ನಾವು ಒತ್ತಾಯ ಮಾಡ್ಲಿಕ್ಕೆ ಆಗುತ್ತದಾ?’’
(ಗುರುವಾರದ ಸಂಚಿಕೆಗೆ)