ಇತ್ತೀಚಿನ 3 ಸುಳ್ಳು ಸುದ್ದಿಗಳ ಹಿಂದಿನ ಯೋಜಿತ ಕಾರ್ಯತಂತ್ರ

Update: 2017-06-12 04:33 GMT

ಸಾಮಾಜಿಕ ಜಾಲತಾಣಗಳಲ್ಲಿ ಗಾಳಿಸುದ್ದಿ ಯಂತ್ರಗಳು ರಾತ್ರಿ-ಹಗಲು ಸಕ್ರಿಯವಾಗುತ್ತಿರುವುದಕ್ಕೆ ಇತ್ತೀಚಿನ ಮೂರು ಸುಳ್ಳು ಸುದ್ದಿಗಳೇ ಪುರಾವೆ.

1.ಪ್ಲಾಸ್ಸಿಕ್ ಅಕ್ಕಿ-ಮೊಟ್ಟೆ ಇತ್ಯಾದಿ. 2. ಅಂಗನವಾಡಿಯಲ್ಲಿ ಪರಿಶಿಷ್ಟಜಾತಿ-ಪಂಗಡದ ಮಕ್ಕಳಿಗೆ ಐದು ಮೊಟ್ಟೆ ಮತ್ತು ಇತರರಿಗೆ ಮೂರು ಮೊಟ್ಟೆ 3. ರೈತನ ಖಾತೆಗೆ ಒಂದು ರೂಪಾಯಿ ಜಮೆ.

ಪ್ಲಾಸ್ಟಿಕ್ ಅಕ್ಕಿ, ಮೊಟ್ಟೆ, ಹಣ್ಣು ತರಕಾರಿ ಇತ್ಯಾದಿ ಸುದ್ದಿಗಳ ಹಿಂದಿನ ಹಕೀಕತ್ತು ಬಗ್ಗೆ ಮೊದಲು "ಪ್ರಜಾವಾಣಿ"ಯ ತನ್ನ ಅಂಕಣದಲ್ಲಿ ಇಸ್ಮಾಯಿಲ್ ಬರೆದರು. ಅದರ ನಂತರ "ಬೆಂಗಳೂರು ಮಿರರ್" ಪತ್ರಿಕೆ ಪ್ಲಾಸ್ಟಿಕ್ ಅಕ್ಕಿಯನ್ನು ಕೃಷಿ ವಿಶ್ವವಿದ್ಯಾಲಯಕ್ಕೆ ಕಳುಹಿಸಿ ತಜ್ಞರಿಂದ ಪರೀಕ್ಷೆಗೊಳಪಡಿಸಿ ಅದು ಸುಳ್ಳೆಂದು ವರದಿ ಮಾಡಿತು. ಕೊನೆಗೆ ರಾಜ್ಯದ ಆಹಾರ ಸಚಿವ ಯು.ಟಿ.ಖಾದರ್ ಅವರು ರಾಜ್ಯದ ಐದು ಪ್ರಯೋಗಾಲಯಗಳಿಗೆ ಪ್ಲಾಸ್ಟಿಕ್ ಅಕ್ಕಿ ಕಳುಹಿಸಿ ಪರೀಕ್ಷೆ ಮಾಡಿಸಿ ಅದು ನಿಜ ಅಲ್ಲ ಎಂದು ಹೇಳಿದ್ದಾರೆ.

ಎರಡನೆಯದಾಗಿ, ಎಸ್ ಸಿ ಮತ್ತು ಎಸ್ ಟಿ ಮಕ್ಕಳಿಗೆ ಐದು ಮೊಟ್ಟೆ ಮತ್ತು ಇತರರಿಗೆ ಮೂರು ಮೊಟ್ಟೆ ಎನ್ನುವ ಸುದ್ದಿ ಇದ್ದಕ್ಕಿದ್ದ ಹಾಗೆ ಹರಡತೊಡಗಿತು. ಯಾವುದೇ ತಾರತಮ್ಯ ಇಲ್ಲ ಎಂದು ರಾಜ್ಯ ಸರಕಾರ ಅಧಿಕೃತವಾಗಿ ಹೇಳಿಕೆ ನೀಡಿದರೂ ವಿವಾದ ನಿಂತಿಲ್ಲ. ಅದು ಮೊಟ್ಟೆಯಿಂದ ಹೊರಟು ಸಾಮಾಜಿಕ ನ್ಯಾಯದ ಗೇಲಿ, ಮೀಸಲಾತಿಯ ವಿರುದ್ದದ ಕೂಗಾಗಿ ಬೆಳೆಯುತ್ತಿದೆ.

ಮೂರನೆಯದಾಗಿ ರೈತನ ಬ್ಯಾಂಕ್ ಖಾತೆಗೆ ಒಂದು ರೂಪಾಯಿ ಜಮೆಯ ಸುದ್ದಿ ಕೂಡಾ ಸೋಷಿಯಲ್ ಮೀಡಿಯಾದಲ್ಲಿಯೇ ಮೊದಲು ಕಾಣಿಸಿಕೊಂಡು ನಂತರ ಟಿವಿ ಚಾನೆಲ್ ಮತ್ತು ಪತ್ರಿಕೆಗಳಲ್ಲಿ ಚರ್ಚೆಗೀಡಾಯಿತು. ರೈತರ ಖಾತೆಗಳ ದೃಢೀಕರಣಕ್ಕಾಗಿ ಒಂದು ರೂಪಾಯಿ ಜಮೆ ಮಾಡಲಾಗಿದೆ ಎಂದು ರಾಜ್ಯ ಸರಕಾರ ಸ್ಪಷ್ಟಪಡಿಸಿದ ನಂತರವೂ ವಿವಾದವನ್ನು ಜೀವಂತವಾಗಿಡಲಾಗಿದೆ.

ಅಕ್ಕಿ,ಮೊಟ್ಟೆ ಮತ್ತು ರೈತನನ್ನೇ ಕೇಂದ್ರವನ್ನಾಗಿ ಮಾಡಿಕೊಂಡು ಸೃಷ್ಟಿಯಾಗಿರುವ ಈ ಸುದ್ದಿಗಳು ಕೇವಲ ವಿಕೃತ ಖುಷಿ ಇಲ್ಲವೇ ತಮಾಷೆಯ ಉದ್ದೇಶದ್ದಲ್ಲ. ಇದರ ಹಿಂದೆ ಯೋಜಿತ ಕಾರ್ಯತಂತ್ರ ಇದೆ. ಮುಂದಿನ ದಿನಗಳಲ್ಲಿ ಇಂತಹ ಫೇಕು ಸುದ್ದಿಗಳ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆಗಳು ಸ್ಪಷ್ಟವಾಗಿವೆ. ಇದಕ್ಕಾಗಿಯೇ ಸೋಷಿಯಲ್ ಮೀಡಿಯಾದಲ್ಲಿ ಗುಂಪುಗಳು ಹುಟ್ಟಿಕೊಂಡಿವೆ. ಸರ್ಕಾರ, ಪೊಲೀಸರು ಇದರ ಬಗ್ಗೆ ಏನು ಮಾಡಬಹುದೋ ಅದನ್ನು ಅವರು ಮಾಡುತ್ತಾರೆ. ಇದರ ಹೊರತಾಗಿ ಸಾಮಾಜಿಕ ಜಾಲತಾಣಗಳನ್ನು ಮುಕ್ತ ಚರ್ಚೆ-ಸಂವಾದಗಳ ಅಂಗಳವಾಗಿ ಉಳಿಸಬೇಕೆನ್ನುವವರು ಏನು ಮಾಡಬೇಕೆಂಬುದನ್ನು ಚಿಂತನೆ ಮಾಡಬೇಕಾಗಿದೆ.

ಇಂತಹ ಫೇಕು ಸುದ್ದಿಗಳ ಪ್ರಸಾರ-ಪ್ರಕಟಣೆ ದೊಡ್ಡ ಸಮಸ್ಯೆ ಅಲ್ಲ, ಆದರೆ ಇಂತಹ ಫೇಕುಗಳನ್ನು  ಸೈದ್ಧಾಂತಿಕವಾಗಿ ವಿರೋಧಿಸುವವರು ಕೂಡಾ ತಮಗೆ ಅರಿವಿಲ್ಲದಂತೆ ಇಂತಹ ಸುದ್ದಿಗಳನ್ನು ಷೇರ್ ಮಾಡಿ ಅದಕ್ಕೆ ಪ್ರತಿಕ್ರಿಯಿಸಿದವರ ಜತೆ ಚರ್ಚೆ ಮಾಡುತ್ತಾ ಯಾರೋ ತೋಡಿರುವ ಗುಂಡಿಗೆ ಬೀಳುತ್ತಿರುವುದು ಅಪಾಯಕಾರಿ ಬೆಳವಣಿಗೆ.

ಮುಜಾಫರ್ ನಗರದ ಗಲಭೆಯೂ ಸೇರಿದಂತೆ ದೇಶದಾದ್ಯಂತ ಇತ್ತೀಚೆಗೆ ನಡೆದ ಕೋಮುಗಲಭೆಗಳು ವಾಟ್ಸಪ್ ಸಂದೇಶಗಳ ಮೂಲಕ ಹುಟ್ಟಿಕೊಂಡದ್ದನ್ನು ಮರೆಯುವಂತಿಲ್ಲ. ಅಂತಹದ್ದೊಂದು ಅಪಾಯದ ಸೂಚನೆಯನ್ನು ಗ್ರಹಿಸದೆ ಗಾಸಿಪ್ ಗಾಳಿಯಲ್ಲಿ ನಾವೂ ತೇಲಿಹೋದರೆ ಇತಿಹಾಸ ನಮ್ಮನ್ನು ಕ್ಷಮಿಸಲಾರದು.

(ದಿನೇಶ್ ಅಮೀನ್ ಮಟ್ಟು ಅವರ ರವಿವಾರದ ಫೇಸ್ ಬುಕ್ ಪೋಸ್ಟ್)

Writer - ದಿನೇಶ್ ಅಮೀನ್ ಮಟ್ಟು

contributor

Editor - ದಿನೇಶ್ ಅಮೀನ್ ಮಟ್ಟು

contributor

Similar News