‘ಇಂದಿರಾ ಗಾಂಧಿ’ ಹೆಸರು ತೆಗೆದು ಹಾಕಿದ ರಾಜಸ್ಥಾನ ಸರಕಾರ

Update: 2017-07-03 12:30 GMT

ಜೈಪುರ್ : ರಾಜಸ್ಥಾನ ಮಾಧ್ಯಮಿಕ ಶಿಕ್ಷಣ ಮಂಡಳಿಯು ಹತ್ತನೇ ಮತ್ತು ಹನ್ನೆರಡನೇ ತರಗತಿ ಪರೀಕ್ಷೆಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸುವ ವಿದ್ಯಾರ್ಥಿನಿಯರಿಗೆ ನಗದು ಬಹುಮಾನ ನೀಡಲಾಗುವ ಇಂದಿರಾ ಪ್ರಿಯದರ್ಶಿನಿ ಪುರಸ್ಕಾರ್ ಯೋಜನೆಯ ಹೆಸರನ್ನು ಪದ್ಮಾಕ್ಷಿ ಪುರಸ್ಕಾರ್ ಯೋಜನೆ ಎಂದು ಮರುನಾಮಕರಣ ಮಾಡಿದೆ. ಯೋಜನೆಯ ಹೆಸರು ಬದಲಾಯಿಸುವ ಕುರಿತು ಬಿಜೆಪಿ ಸರಕಾರ ಕಳೆದ ತಿಂಗಳು ನಿರ್ಧರಿಸಿದ್ದರೂ ಈ ವಿಚಾರದಲ್ಲಿ ಹೆಚ್ಚಿನ ಪ್ರಚಾರ ನೀಡಿರಲಿಲ್ಲ.

ಪದ್ಮಾಕ್ಷಿಯೆಂದರೆ ಕಮಲದಂತಹ ಕಣ್ಣುಳ್ಳವಳು ಎಂಬ ಅರ್ಥ ನೀಡುತ್ತದೆ. ಪದ್ಮಾಕ್ಷಿ ಎಂಬ ಹೆಸರು ಸರಸ್ವತಿ ದೇವಿಯ ಇನ್ನೊಂದು ಹೆಸರಾಗಿದೆ. ಪ್ರತಿ ವರ್ಷ ಈ ಪ್ರಶಸ್ತಿಯನ್ನು ಬಸಂತ್ ಪಂಚಮಿ ದಿನ ನೀಡಲಾಗುತ್ತದೆ.

ಇಂದಿರಾ ಪ್ರಿಯದರ್ಶಿನಿ ಪುರಸ್ಕಾರ್ ಯೋಜನೆಯನ್ನು ಹಿಂದಿನ ಅಶೋಕ್ ಗೆಹ್ಲೋಟ್ ಸರಕಾರ 2010-11ರಲ್ಲಿ ಆರಂಭಿಸಿದ್ದು ಹನ್ನೆರಡನೇ ತರಗತಿಯ ಟಾಪರುಗಳಿಗೆ ರೂ 50,000 ಹಾಗೂ ಹತ್ತನೇ ತರಗತಿ ಟಾಪರುಗಳಿಗೆ ರೂ 40,000 ನೀಡಲಾಗುತ್ತಿತ್ತು.

2013ರಲ್ಲಿ ಈ ಯೋಜನೆಯಡಿ ನೀಡಲಾಗುತ್ತಿದ್ದ ನಗದು ಹಣವನ್ನು 12ನೇ ತರಗತಿ ಟಾಪರುಗಳಿಗೆ ರೂ 1 ಲಕ್ಷ ಹಾಗೂ 10ನೇ ತರಗತಿ ಟಾಪರುಗಳಿಗೆ ರೂ 50,000 ಎಂದು ಪರಿಷ್ಕರಿಸಲಾಗಿತ್ತು.

ಇದೀಗ ಪದ್ಮಾಕ್ಷಿ ಯೋಜನೆ ಎಂದು ಮರುನಾಮಕರಣಗೊಂಡಿರುವ ಈ ಯೋಜನೆಯಂತೆ ಬಿಪಿಎಲ್ ಕುಟುಂಬಕ್ಕೆ ಸೇರಿದ ಎಂಟನೇ ತರಗತಿ ಟಾಪರುಗಳಿಗೆ ಕೂಡ ನಗದು ಬಹುಮಾನ ದೊರೆಯಲಿದೆ. ಈ ಹಿಂದೆ ಸಾಮಾನ್ಯ ವಿಭಾಗ, ಪರಿಶಿಷ್ಟ ಜಾತಿ, ವರ್ಗ, ಇತರ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿನಿಯರಿಗೆ ಈ ಯೋಜನೆಯ ಪ್ರಯೋಜನ ದೊರೆಯುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News