ನೋಬೆಲ್ ಪ್ರಶಸ್ತಿ ಪುರಸ್ಕೃತ ಲಿಯೂ ಕ್ಸಿಯಾಬೋ ನಿಧನ
ಚೀನಾ, ಜು.13:ಚೀನಾದ ಕ್ಯಾನ್ಸರ್ ಪೀಡಿತ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಹಾಗೂ ಪ್ರಜಾಪ್ರಭುತ್ವ ಹೋರಾಟಗಾರ ಲಿಯು ಕ್ಸಿಯಾವೊಬೊ ಗುರುವಾರ ಜೈಲಿನಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಚೀನಾದ ಅಧಿಕಾರಿಗಳು ಘೋಷಿಸಿದ್ದಾರೆ.
ಅವರು ತನ್ನ ಕೊನೆಯ ದಿನಗಳನ್ನು ವಿದೇಶದಲ್ಲಿ ಸ್ವತಂತ್ರವಾಗಿ ಕಳೆಯಲು ಅವಕಾಶ ನೀಡಿ ಎಂಬ ಅಂತಾರಾಷ್ಟ್ರೀಯ ಸಮುದಾಯದ ಮನವಿಯನ್ನು ಚೀನಾ ಧಿಕ್ಕರಿಸಿರುವುದನ್ನು ಸ್ಮರಿಸಬಹುದಾಗಿದೆ.
61 ವರ್ಷದ ಪ್ರಜಾಪ್ರಭುತ್ವ ಹೋರಾಟಗಾರನನ್ನು ಒಂದು ತಿಂಗಳ ಹಿಂದೆ ಜೈಲಿನಿಂದ ಆಸ್ಪತ್ರೆಗೆ ಚಿಕಿತ್ಸೆಗಾಗಿ ವರ್ಗಾಯಿಸಲಾಗಿತ್ತು. ಆಸ್ಪತ್ರೆಗೆ ಭಾರಿ ಬಂದೋಬಸ್ತ್ ಒದಗಿಸಲಾಗಿತ್ತು.
ಕ್ಸಿಯಾವೊಬೊ ಕೊನೆಯ ಹಂತದ ಲಿವರ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು.
ಚೀನಾ ವೈದ್ಯಕೀಯ ವಿಶ್ವವಿದ್ಯಾನಿಲಯದ ಫಸ್ಟ್ ಹಾಸ್ಪಿಟಲ್‌ನ ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲಾದ ಮೂರು ದಿನಗಳ ಬಳಿಕ ಲಿಯು ಮೃತಪಟ್ಟಿದ್ದಾರೆ ಎಂದು ಚೀನಾದ ಈಶಾನ್ಯದ ನಗರ ಶೆನ್ಯಾಂಗ್‌ನ ಆಡಳಿತ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.
ಸಾಹಿತಿಯ ಮರಣವು ಚೀನಾವನ್ನು ಮಗ್ಗುಲ ಮುಳ್ಳಾಗಿ ಹಲವು ದಶಕಗಳಿಂದ ಕಾಡುತ್ತಿದ್ದ ಟೀಕಾಕಾರನೊಬ್ಬನಿಗೆ ಅಂತ್ಯ ಹಾಡಿದೆ. ಭಿನ್ನ ಧ್ವನಿಯ ವಿರುದ್ಧ ಚೀನಾ ನಡೆಸುತ್ತಿದ್ದ ದಮನವನ್ನು ಈ ಪ್ರಕರಣವು ಜಗತ್ತಿನ ಮುಂದಿಟ್ಟಿದೆ.
ಲಿಯು ಕ್ಸಿಯಾವೊಬೊ ಅವರಿಗೆ ಚಿಕಿತ್ಸೆ ನೀಡುತ್ತಿರುವ ಚೀನಾದ ಆಸ್ಪತ್ರೆಯು, ವೈದ್ಯಕೀಯ ಸಮಾಲೋಚನೆಗಾಗಿ ಅಮೆರಿಕ ಮತ್ತು ಜರ್ಮನಿಯ ವೈದ್ಯಕೀಯ ಪರಿಣತರನ್ನು ಚೀನಾಕ್ಕೆ ಆಹ್ವಾನಿಸಿತ್ತು.
ಜೈಲಿನಲ್ಲಿ 2ನೆ ಶಾಂತಿ ನೊಬೆಲ್ ವಿಜೇತನ ಸಾವು
1938ರ ಬಳಿಕ, ನೊಬೆಲ್ ಶಾಂತಿ ಪ್ರಶಸ್ತಿ ವಿಜೇತನೊಬ್ಬ ಜೈಲಿನಲ್ಲೇ ಮೃತಪಟ್ಟ ಎರಡನೆ ಪ್ರಕರಣ ಇದಾಗಿದೆ. 1938ರಲ್ಲಿ ಜರ್ಮನಿಯ ಕಾರ್ಲ್ ವಾನ್ ಒಸೀಸ್ಕಿ ನಾಝಿ ಸರಕಾರದ ಬಂಧನದಲ್ಲೇ ಮೃತಪಟ್ಟಿದ್ದರು. ಇದರೊಂದಿಗೆ ನಾಝಿ ಜರ್ಮನಿಯ ಸಾಲಿಗೆ ಚೀನಾವೂ ಸೇರಿದಂತಾಗಿದೆ.
ಲಿಯು ಅವರನ್ನು ಬಿಡುಗಡೆಗೊಳಿಸಿ ಹಾಗೂ ವಿದೇಶದಲ್ಲಿ ಚಿಕಿತ್ಸೆ ಪಡೆಯುವ ಅವರ ಕೊನೆಯ ಇಚ್ಛೆಯನ್ನು ಈಡೇರಿಸಿ ಎಂಬ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳು ಮತ್ತು ಪಾಶ್ಚಾತ್ಯ ಸರಕಾರಗಳ ಮನವಿಗಳನ್ನು ಚೀನಾ ಸಾರಾಸಗಟಾಗಿ ತಳ್ಳಿ ಹಾಕಿತ್ತು.
ಪ್ರಜಾಪ್ರಭುತ್ವ ಪರ ಹೋರಾಟಗಾರನನ್ನು ಬಿಡುಗಡೆಗೊಳಿಸಿ ವಿದೇಶದಲ್ಲಿ ಚಿಕಿತ್ಸೆ ಪಡೆಯಲು ಅನುಮತಿ ನೀಡುವಂತೆ ಅವರ ಸಾವಿಗೆ ಒಂದು ದಿನದ ಮೊದಲು ಅಮೆರಿಕ ಚೀನಾವನ್ನು ಒತ್ತಾಯಿಸಿತ್ತು.
ಪ್ರಜಾಪ್ರಭುತ್ವದ ಧ್ವನಿಗಾಗಿ ಬಂಧನ
ಮಾನವಹಕ್ಕುಗಳ ರಕ್ಷಣೆ ಮತ್ತು ಚೀನಾದ ರಾಜಕೀಯ ವ್ಯವಸ್ಥೆಯಲ್ಲಿ ಸುಧಾರಣೆಗೆ ಕರೆ ನೀಡುವ ‘ಚಾರ್ಟರ್ 08’ ಹೇಳಿಕೆಯನ್ನು ಬರೆದುದಕ್ಕಾಗಿ ಲಿಯು ಅವರನ್ನು 2008ರಲ್ಲಿ ಬಂಧಿಸಲಾಗಿತ್ತು.
ಅವರಿಗೆ ‘ಬುಡಮೇಲು ಚಟುವಟಿಕೆಗಳಿಗಾಗಿ’ 2009ರಲ್ಲಿ 11 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿತ್ತು.
2010ರಲ್ಲಿ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಯಿತು. ಅಂದಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಖಾಲಿ ಕುರ್ಚಿಯೊಂದು ಅವರನ್ನು ಪ್ರತಿನಿಧಿಸಿತ್ತು.
ಲಿಯು ಅವರನ್ನು ಚೀನಾ ಜೈಲಿನಲ್ಲಿಟ್ಟಿದ್ದರೆ, ಅವರ ಪತ್ನಿಯನ್ನು 2010ರಿಂದ ಗೃಹಬಂಧನದಲ್ಲಿರಿಸಿದೆ.