ಮಹಾಮಳೆಗೆ ತತ್ತರಿಸಿದ ಮುಂಬೈಕರ್

Update: 2017-09-04 18:52 GMT

ಮುಂಬೈ ಮಹಾನಗರ ಪ್ರಕೃತಿಯ ಹೊಡೆತದ ಎದುರು ಅಸಹಾಯಕ ಎಂದು ಮತ್ತೊಮ್ಮೆ ಸಾಬೀತು ಪಡಿಸಿದೆ. 29 ಆಗಸ್ಟ್, 2017ರಂದು ಮತ್ತೊಮ್ಮೆ ಮುಂಬೈಯಲ್ಲಿ ನಾವೆಲ್ಲ ರಾತ್ರಿ ಕಚೇರಿಯಲ್ಲೇ ಮಲಗುವ ದೃಶ್ಯ ಪುನರಾವರ್ತನೆ ಆಯಿತು. ಇದೇ ದೃಶ್ಯ 26 ಜುಲೈ, 2005ರಂದೂ ಕಾಣಿಸಿತ್ತು. ಅಂದು ಬೆಳಗ್ಗೆ ರೈಲು ಹಿಡಿದು ಕಚೇರಿಗೆ ಬಂದವರೆಲ್ಲಾ ಸಂಜೆ ವಾಪಸು ಮನೆ ಕಡೆ ಹೋಗಲಾಗದೆ ಸಿಕ್ಕಿ ಬಿದ್ದರು. ಮೊನ್ನೆ ಮೂರು ಗಂಟೆಯಲ್ಲಿ ಸುರಿದ ಭಾರೀ ಮಳೆ ಮತ್ತು ಸಮುದ್ರದ ಭರತ ಒಟ್ಟು ಸೇರಿ ಮುಂಬೈ ಜನಜೀವನ ಪೂರ್ಣವಾಗಿ ಸ್ತಬ್ಧಗೊಳ್ಳುವಂತಾಯಿತು. ಮತ್ತೆ ಮುಂಬೈ ಮಹಾನಗರ ಪಾಲಿಕೆ ಟೀಕೆಗೆ ಗುರಿಯಾಯಿತು. ಜುಲೈ 26ರ ಆ ಹನ್ನೆರಡು ವರ್ಷಗಳ ಘಟನೆಯ ನಂತರ ಈಗ ಆಗಸ್ಟ್ 29 ಮುಂಬೈಯಲ್ಲಿ ಒಂದೇ ದಿನದಲ್ಲಿ ಸುರಿದ ಅತ್ಯಧಿಕ ಮಳೆ ಎನಿಸಿತು.

2005ರ ಜುಲೈ 26ರಂದು ಒಂದು ಗಂಟೆಯಲ್ಲಿ 944 ಮಿಲಿಮೀಟರ್ ಮಳೆ ಸುರಿದಿತ್ತು ಹಾಗೂ ಮುಂಬೈ ಪೂರ್ತಿ ಮುಳುಗಿತ್ತು. ಆನಂತರ ನೂರಾರು ಯೋಜನೆಗಳನ್ನು ಮನಪಾ ಮತ್ತು ಸರಕಾರ ಮುಂಬೈ ನಗರಕ್ಕಾಗಿ ಹಮ್ಮಿಕೊಂಡಿತ್ತು. ಅದರೆ ಮೊನ್ನೆ ಆಗಸ್ಟ್ 29ರಂದು ಪುನರಾವರ್ತನೆ ಕಾಣಿಸಿದಾಗ ಯಾವ ಯೋಜನೆಗಳೂ ಲಾಭಕ್ಕೆ ಬರಲಿಲ್ಲ.

ಅತ್ಯಂತ ಶ್ರೀಮಂತ ಮಹಾನಗರ ಪಾಲಿಕೆ ಎನ್ನುವ ಮುಂಬೈ ಮನಪಾದ ಅಸಹಾಯಕತೆ ಇದೀಗ ಮತ್ತೆ ಗೋಚರಿಸಿದೆ. ಒಂದಂತೂ ನಿಜವಾಗಿದೆ. ಜೋರಾಗಿ ಮಳೆ ಬಂದರೆ ಆಡಳಿತಕ್ಕೆ ಅದನ್ನು ಎದುರಿಸುವ ಯಾವ ಸಾಧ್ಯತೆಗಳೂ ಇಲ್ಲ ಎಂಬುದು. 2005ರ ನಂತರದ ಏನೆಲ್ಲಾ ಘೋಷಣೆಗಳು ಕಾಣಿಸಿತ್ತೋ ಹನ್ನೆರಡು ವರ್ಷಗಳ ನಂತರ ಮತ್ತೆ ಅದೇ ದೃಶ್ಯ ಪುನರಾವರ್ತನೆ ಆಯಿತು. ಆ ದಿನ ಅನಿರೀಕ್ಷಿತವಾಗಿ ಭಾರೀ ಮಳೆ ಬಂದಿದ್ದು ನಿಜ. ಆದರೆ ಜೋರಾಗಿ ಮಳೆ ಸುರಿದರೆ ಯಾವ ರೀತಿ ಪರಿಸ್ಥಿತಿ ಯನ್ನು ಎದುರಿಸಬೇಕು ಎನ್ನುವ ಬಗ್ಗೆ ಮನಪಾ ಆಡಳಿತದಲ್ಲಿ ಯಾವ ಸಿದ್ಧತೆಗಳೂ ಯಾಕೆ ಕಾಣಿಸಲಿಲ್ಲ?

ಮುಂಬೈ ರಸ್ತೆಗಳ ಡ್ರೈನೇಜ್ ಸಿಸ್ಟಮ್ ಗಂಟೆಗೆ 25 ಮಿಲಿಮೀಟರ್ ಮಳೆಯನ್ನು ಮಾತ್ರ ಹೊರಬಹುದಾಗಿದೆ. ಇದರ ಸಾಮರ್ಥ್ಯ ವೃದ್ಧಿಯಾಗಿ 50 ಮಿಲಿಮೀಟರ್ ಮಾಡುವ ಕೆಲಸ ಆರಂಭವಾಗಿದೆ. ಆದರೆ ಕೇಂದ್ರ ಸರಕಾರದಿಂದ 1,500 ಕೋಟಿ ರೂಪಾಯಿ ಫಂಡ್ ಬಂದ ನಂತರವೂ ಈ ಯೋಜನೆ ಕೇವಲ 40 ಶೇ. ಮಾತ್ರ ನಡೆದಿದೆ. ಜಮಾ ಆಗಿರುವ ನೀರನ್ನು ಹೊರಗೆ ಹಾಕಲು ಮುಂಬೈಯಲ್ಲಿ ಇರುವುದು ಆರು ಪಂಪಿಂಗ್ ಸ್ಟೇಷನ್ ಮಾತ್ರ. ಕಳೆದ ಎರಡು ಮೂರು ವರ್ಷಗಳಲ್ಲಿ ಇದಕ್ಕಾಗಿ 1,200 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಆದರೂ ನೀರು ಒಳಗಡೆ ಜಾಮ್ ಆಗುತ್ತಿದೆ. ಅದೇ ರೀತಿ ಸೀವರ್ ಮತ್ತು ನಾಲೆಗಳ ಸ್ವಚ್ಛತೆ ಕೂಡಾ ಸಮರ್ಪಕ ರೀತಿಯಲ್ಲಿ ಆಗುತ್ತಿಲ್ಲ. ಅರ್ಥಾತ್ ನಗರದ ಸ್ವಚ್ಛತಾ ತಂತ್ರ ಕ್ಷೀಣವೇ ಇದೆ. ನಗರದ ನಡುವೆ ಹರಿಯುವ ಮೀಠೀ ನದಿ ಇಂದು ಒಂದು ನಾಲೆಯ ಸ್ವರೂಪದಲ್ಲಿ ಹರಿಯುತ್ತಿದೆ. ಇನ್ನು ಕೆಲವು ಚಿಕ್ಕ ನದಿಗಳು ಕಸ ತ್ಯಾಜ್ಯಗಳಿಂದ ತುಂಬಿ ಮಾಯವೇ ಆಗಿಬಿಟ್ಟಿವೆ.

26 ಜುಲೈ, 2005 ರ ಮಳೆಯ ಹಾನಿಯನ್ನು ಕಂಡ ಕೆಲವು ಸಾಮಾಜಿಕ ಸಂಘಟನೆಗಳು ಮತ್ತು ಕಾರ್ಯಕರ್ತರು ಮುಂಬೈಯಲ್ಲಿ ನಡೆಯುತ್ತಿರುವ ಅನಧಿಕೃತ ನಿರ್ಮಾಣಗಳ ವಿಷಯವಾಗಿ ಪ್ರಶ್ನೆ ಚಿಹ್ನೆ ಎಬ್ಬಿಸಿದ್ದರು. ಆದರೆ ಯಾವುದೇ ಸರಕಾರವೂ ಈ ಬಗ್ಗೆ ಗಂಭೀರ ಗಮನವನ್ನೇ ನೀಡುತ್ತಿಲ್ಲ. ಮುಂಬೈಗೆ ಆಗಬೇಕಿರುವುದು ಸದ್ಯಕ್ಕೆ ಒಂದು ಸಮರ್ಥವಾದ ಡ್ರೈನೇಜ್ ಸಿಸ್ಟಮ್. ಇಲ್ಲವಾದರೆ ಮುಂಬೈಯ ಲೈಫ್‌ಲೈನ್ ಲೋಕಲ್ ರೈಲುಗಳೂ ಮಳೆಯ ನೀರಿನಿಂದ ಪ್ರಭಾವಿತಗೊಳ್ಳುತ್ತಾ ಬರುವುದು.

ಪ್ರಕೃತಿ ವಿಕೋಪಗಳು ಬರುತ್ತಲೇ ಇರುವುದು. ನಾಳೆಯ ದಿನ ಬೇರೊಂದು ರೂಪದಲ್ಲಿ ಬರಬಹುದು. ಅದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಆದರೆ ಅದರಿಂದ ಪಾರಾಗಲು ಬೇಕಾದ ಸಿದ್ಧತೆಗಳು ಇನ್ನಷ್ಟು ಸಶಕ್ತವಾಗಿ ನಡೆಯಬೇಕಾಗಿದೆ.

ಆಗಸ್ಟ್ 28ರಂದು ಸೋಮವಾರ ದಿನವಿಡೀ ಸುರಿದ ಮುಸಲಧಾರೆ ಮತ್ತು ಮಂಗಳವಾರ ಆಗಸ್ಟ್ 29ರಂದು 3ಗಂಟೆಯಲ್ಲಿ ಸುರಿದ ಕುಂಭದ್ರೋಣ ಮಳೆ ನಗರದ ವೇಗವನ್ನು ನಿಲ್ಲಿಸಿ ಬಿಟ್ಟಿತು. ಅಂದು ಐದನೆ ದಿನದ ಗಣೇಶ ಪ್ರತಿಮೆಗಳ ವಿಸರ್ಜನೆ ಮಾಡುವುದಿತ್ತು. ಆದರೆ ತಗ್ಗು ಪ್ರದೇಶಗಳೆಲ್ಲ ನೀರಿನಿಂದ ಮುಳುಗಿತು. ಸಯನ್, ಕುರ್ಲಾ, ಪರೇಲ್, ದಾದರ್, ಲಾಲ್‌ಬಾಗ್, ಬೈಕಲಾ...... ಎಲ್ಲಾ ಜಲಾವೃತವಾಯಿತು. ಅತ್ತ ರೈಲು ಓಡಾಟವೂ ಸ್ಥಗಿತಗೊಂಡಿತು. ಮನಪಾ, ಸರಕಾರ ಜನರಿಗೆ ಮನೆಯಿಂದ ಹೊರಬಾರದಂತೆ ಸೂಚನೆ ನೀಡಿತು. (ಬಂದವರು ಪಜೀತಿ !) ಮರುದಿನ ಶಾಲಾ ಕಾಲೇಜ್, ಸರಕಾರಿ ಕಚೇರಿಗಳಿಗೆ ರಜೆ ಸಾರಲಾಯಿತು. ಪಶ್ಚಿಮ, ಮಧ್ಯ ಮತ್ತು ಹಾರ್ಬರ್ ಮೂರೂ ಲೋಕಲ್ ರೈಲುಗಳು ಓಡಾಟ ನಿಲ್ಲಿಸಿದ್ದವು.

ಐದನೆ ದಿನದ ದೊಡ್ಡ ದೊಡ್ಡ ಗಣೇಶ ಮಂಡಲಗಳಿಗೆ ಗಣೇಶ ಪ್ರತಿಮೆಯನ್ನು ವಿಸರ್ಜಿಸಲಾಗಲಿಲ್ಲ. ಸಮುದ್ರದತ್ತ ತೆರಳಲು ಅನುಮತಿಯೂ ಇರಲಿಲ್ಲ. ಹೆಚ್ಚಿನ ರಸ್ತಗಳೆಲ್ಲ ಮುಳುಗಿದ್ದರಿಂದ ಗಣೇಶನ ಮೆರವಣಿಗೆಯೂ ಸಾಧ್ಯವಿರಲಿಲ್ಲ. ಮುಂಬೈಯ ಶ್ರೀಮಂತ ಗಣಪತಿ ಎನ್ನುವ ಜಿಎಸ್‌ಬಿಯ ಗಣೇಶ ಪ್ರತಿಮೆ ಮರುದಿನ ವಿಸರ್ಜಿಸಿದರೆ ಕೆಲವು ಗಣೇಶ ಮಂಡಲಿಗಳು ನೀರಲ್ಲಿ ಮುಳುಗಿದ್ದರಿಂದ ಅದೇ ದಿನ ವಿಸರ್ಜನೆ ಮಾಡಿದ್ದೂ ಇದೆ. (ಅನಂತ ಚತುರ್ದಶಿಯ ತನಕ ಕಾಯಲಿಲ್ಲ ಕೆಲವರು.)

ಎಲ್ಲಕ್ಕಿಂತ ಅಪರೂಪದ ಸಂಗತಿ ಎಂದರೆ ಆಗಸ್ಟ್ 29ರಂದು ಲಾಲ್‌ಬಾಗ್ ಚಾ ರಾಜಾ ಗಣೇಶೋತ್ಸವ ಮಂಡಳಿಯ ಗಣೇಶ ಪ್ರತಿಮೆ ವೀಕ್ಷಿಸಲು ಸಂಜೆಯ ನಂತರ ಭಕ್ತರು ಬರುವುದು ಕಡಿಮೆಯಾದದ್ದು!. ಮಧ್ಯ ರಾತ್ರಿಯಂತೂ ಮುಖ ದರ್ಶನಕ್ಕೆ ಭಕ್ತರೇ ಇರಲಿಲ್ಲ.! ಆರು ಗಂಟೆ, ಎಂಟು ಗಂಟೆ ಕಾಲ ಲಾಲ್‌ಬಾಗ್ ರಾಜಾ ಗಣೇಶನನ್ನು ಕಾಣಲು ಸಾಲಲ್ಲಿ ಭಕ್ತರು ನಿಲ್ಲುವುದು ಎಲ್ಲರಿಗೂ ಗೊತ್ತು. ಆದರೆ ಗಣೇಶೋತ್ಸವದ ಇತಿಹಾಸದಲ್ಲೇ ಆ ರಾತ್ರಿಗೆ ಭಕ್ತರ ಸಂಖ್ಯೆ ತೀರಾ ಕುಸಿದಿತ್ತು. ಸಾವಿರಾರು ಪೊಲೀಸರ ಕಾವಲು ಇರುವ ಈ ಮಂಡಳಿಯಲ್ಲಿ ಆಗಸ್ಟ್ 29ರ ರಾತ್ರಿಗೆ ಗಣಪತಿಯ ಮುಖ ದರ್ಶನಕ್ಕಾಗಿ ತೆರಳುವ ಮುಖ್ಯದ್ವಾರವನ್ನೇ ತೆರೆಯಲಾಗಿದ್ದು ಪೊಲೀಸರೇ ಇರಲಿಲ್ಲ. (ನಮ್ಮ ಪತ್ರಿಕಾ ಕಚೇರಿ ಇದರ ಪಕ್ಕದಲ್ಲಿದೆ.) ನಮ್ಮ ಕನ್ನಡ ದೈನಿಕ ‘ಕರ್ನಾಟಕ ಮಲ್ಲ’ ಸಹಿತ ಅನೇಕ ಪತ್ರಿಕೆಗಳು ಆ ದಿನ ಸಿಬ್ಬಂದಿ ಕೊರತೆಯಿಂದಾಗಿ ಮರುದಿನಕ್ಕೆ ಎಂದಿನ ಪುಟ ಸಂಖ್ಯೆಗಳನ್ನು ಕಡಿತಗೊಳಿಸಿದ್ದವು.

ಆಗಸ್ಟ್ 29ರಂದು ಸುರಿದ ಭಾರೀ ಮಳೆ 2005ರ ಜುಲೈಯಲ್ಲಿ ಸುರಿದ ಮಳೆಯನ್ನು ನೆನಪಿಸಿದರೆ (12 ವರ್ಷಗಳ ನಂತರ) ಆಗಸ್ಟ್ ತಿಂಗಳಲ್ಲಿ ಇಷ್ಟೊಂದು ಭಾರೀ ಮಳೆ ಸುರಿದದ್ದು 1997ರ ನಂತರ ಇದೇ ಮೊದಲು. ಅಂದರೆ 20 ವರ್ಷಗಳ ನಂತರ ಆಗಸ್ಟ್ ತಿಂಗಳಲ್ಲಿ ಇಷ್ಟೊಂದು ಭಾರೀ ಮಳೆ ಸುರಿದಿತ್ತು. ಕೆ.ಇ.ಎಂ. ಆಸ್ಪತ್ರೆಯ ಒಳಗಡೆ ನೀರು ಹರಿದಿದ್ದು ಕೆಳಗಿದ್ದ ವಾರ್ಡ್‌ನ 30 ರೋಗಿಗಳನ್ನು ಮೊದಲ ಮಾಳಿಗೆಗೆ ಶಿಫ್ಟ್ ಮಾಡಿದ್ದರು. ಪೊಲೀಸ್, ಮನಪಾ ಸಹಾಯವಾಣಿಯನ್ನು ಟಿ.ವಿಯಲ್ಲಿ ಬಿಡುಗಡೆಗೊಳಿಸಿ ಜನರಿಗೆ ತಲುಪಿಸಿದರು. ಈ ಮಳೆಯ ಪ್ರಭಾವದಿಂದ ಪಶ್ಚಿಮ ರೈಲ್ವೆಗೆ ಚೇತರಿಸಲು ಒಂದು ದಿನ ಹಿಡಿದರೆ ಹಾರ್ಬರ್ ಮತ್ತು ಮಧ್ಯ ರೈಲ್ವೆಗೆ ಎರಡು ದಿನ ಹಿಡಿಯಿತು.

ಮಳೆಯ ದಿನ ಎಲ್ಲೆಲ್ಲಿ ಲೋಕಲ್ ರೈಲು ನಿಂತಿತ್ತೋ ಅವುಗಳಲ್ಲಿ ಹಲವು ರೈಲುಗಳ ಇಂಜಿನ್ ನೀರು ತುಂಬಿ ಹಾಳಾಗಿದ್ದು ರಿಪೇರಿ ಮಾಡಿದ ನಂತರವೇ ಒಂದೊಂದೂ ಚಲಿಸಲಾರಂಭಿಸಿತ್ತು. ಆದರೆ ಆಸನ್‌ಗಾಂವ್ ಮತ್ತು ವಾಸಿಂದ್ ನಡುವೆ ತುರಂತೋ ಎಕ್ಸ್‌ಪ್ರೆಸ್ ಹಳಿ ತಪ್ಪಿದ್ದರಿಂದ ಮಧ್ಯ ರೈಲ್ವೆ ಓಡಾಟಕ್ಕೆ ಆ ದಿನ ಮತ್ತೊಂದು ಹೊಡೆತ ಬಿದ್ದಿತ್ತು.

ಲೋಕಲ್ ರೈಲುಗಳಲ್ಲಿ ಟ್ರಾಕ್ಷನ್ ಮೋಟಾರ್ ಮತ್ತು ಎಕ್ಸೆಲ್ ಸಿಸ್ಟಮ್ ಇರುತ್ತದೆ. ಟ್ರಾಕ್ಷನ್ ಮೋಟಾರ್ ಟ್ರಾಕ್‌ನಿಂದ 400 ಮಿ.ಮೀ. ಎತ್ತರದಲ್ಲಿರುತ್ತದೆ. ಟ್ರಾಕ್‌ನಲ್ಲಿ 150-200 ಮಿ.ಮೀ. ನೀರು ತುಂಬಿದರೂ ರೈಲು ಓಡಿಸಬಹುದಾಗಿದೆ. ಆದರೆ ಮೊನ್ನೆ ಇದಕ್ಕಿಂತ ಹೆಚ್ಚು ನೀರು ತುಂಬಿದ್ದರಿಂದ ಟ್ರಾಕ್ಷನ್ ಮೋಟಾರ್ ಪ್ರಭಾವಿತಗೊಂಡಿತ್ತು. ಆಗಸ್ಟ್ 29ರ ಜಲ ತಾಂಡವಕ್ಕೆ ಹಲವರು ಸಾವನ್ನಪ್ಪಿದರೆ ಅನೇಕ ಜನ ನಾಪತ್ತೆಯಾಗಿದ್ದಾರೆ. ಇವರಲ್ಲಿ ಈ ಸಲದ ಮಳೆಗೆ ಒಬ್ಬರು ವೈದ್ಯರು ನೀರಲ್ಲಿ ಮುಳುಗಿ(ತೆರೆದ ಮ್ಯಾನ್‌ಹೋಲ್‌ಗೆ ಬಿದ್ದು) ಸತ್ತರೆ ಇನ್ನೋರ್ವ ವಕೀಲರು ನೀರಿನ ನಡುವೆ ನಿಂತಿದ್ದ ಕಾರಿನ ಒಳಗಡೆಯೇ ಉಸಿರುಗಟ್ಟಿ ಸಾವನ್ನಪ್ಪಿದ್ದು ಸುದ್ದಿಯಾಗಿದೆ. (2005ರ ಮಳೆಯಲ್ಲೂ ಈ ರೀತಿಯಾಗಿತ್ತು.). ಹೈಕೋರ್ಟ್ ಡಾ.ದೀಪಕ್ ಅವರು ತೆರೆದ ಮ್ಯಾನ್ ಹೋಲ್‌ಗೆ ಬಿದ್ದು ಸಾವನ್ನಪ್ಪಿದ್ದನ್ನು ಮುಂದಿಟ್ಟು ಮನಪಾಕ್ಕೆ ನೋಟಿಸ್ ಜಾರಿ ಗೊಳಿಸಿದೆ.

ಇದೀಗ ಮಳೆ ಕಡಿಮೆಯಾಗಿದ್ದರೂ ಆನಂತರ ಬರಬಹುದಾದ ರೋಗಗಳನ್ನು ಎದುರಿಸುವ ಬಗ್ಗೆ ಮುಂಬೈ -ಥಾಣೆ ಮೊದಲಾದ ಕಡೆ ಬೈಠಕ್ ನಡೆಸಲಾಗಿದೆ. ಆಗಸ್ಟ್ 29ರ ಮಳೆಯಿಂದಾಗಿ ಚರಂಡಿಗಳ ನೀರೆಲ್ಲ ಅನೇಕ ಮನೆಗಳ ಒಳಗಡೆ ನುಗ್ಗಿದೆ. ಇದರಲ್ಲಿ ಮಲವಿಸರ್ಜನೆಯ ನೀರೂ ಸೇರಿದ್ದರಿಂದ ನಂತರ ಬರಬಹುದಾದ ರೋಗಗಳ ಬಗ್ಗೆ ಮನಪಾ ಮುಂಜಾಗೃತಾ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಬೈಠಕ್ ಕರೆದಿದೆ. ಅನೇಕ ಗಟಾರಗಳ ನೀರಲ್ಲಿ ಇಲಿ ಹೆಗ್ಗಣಗಳ ಜೊತೆ ಬೆಕ್ಕು - ನಾಯಿಗಳೂ ಸತ್ತಿವೆ. ಮನಪಾ ಆಯುಕ್ತರು ಅಧಿಕಾರಿಗಳ ಬೈಠಕ್ ಕರೆದಿದ್ದು ಎಲ್ಲಾ ಕಡೆ ಔಷಧಿ ಸಿಂಪಡಿಸಲು ಆರೋಗ್ಯ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ತಡ ಮಾಡದೆ ಔಷಧಿಗಳನ್ನು ಅಗತ್ಯ ಕ್ಷೇತ್ರಗಳಿಗೆ ರವಾನಿಸಲು ಸೂಚಿಸಲಾಗಿದೆ. ಅತ್ತ ಸ್ವಚ್ಛತಾ ಕಾರ್ಮಿಕರ ರಜೆಯನ್ನೂ ಆಯುಕ್ತರು ರದ್ದುಗೊಳಿಸಿದ್ದರು.

ಮೆಟ್ರೋ ಕಾಮಗಾರಿ ಕಾರಣ!?

ಈ ಕುಂಭದ್ರೋಣ ಮಳೆಯಿಂದ ಮುಂಬೈ ಜನತೆ ತತ್ತರಿಸಿದ್ದರೂ ಇದಕ್ಕೆ ಮಹಾನಗರಪಾಲಿಕೆ ಹೊಣೆಯಲ್ಲ ಎಂಬ ರಾಗವನ್ನು ಆಡಳಿತ ಶಿವಸೇನೆಯ ಉದ್ಧವ್ ಠಾಕ್ರೆ ಹಾಡಿದ್ದಾರೆ. ಅವರ ‘ಸಾಮ್ನಾ’ದಲ್ಲಂತೂ ಮೆಟ್ರೋ ಕಾಮಗಾರಿ ಇದಕ್ಕೆ ಕಾರಣ ಎಂದಿದೆ! ‘‘ಈ ಬಾರಿ ಗಟಾರ - ನಾಲೆ ಸ್ವಚ್ಛತೆ ಉತ್ತಮ ರೀತಿಯಿಂದ ಆಗಿತ್ತು. ಭಾರೀ ಮಳೆ ಒಮ್ಮೆಗೆ ಬಂದರೆ ಏನೂ ಮಾಡಲು ಸಾಧ್ಯವಿಲ್ಲ. ಕೋಟಿಗಟ್ಟಲೆ ರೂಪಾಯಿ ಖರ್ಚು ಮಾಡಿ ನಾಲೆ ಸ್ವಚ್ಛಗೊಳಿಸಲಾಗಿದೆ’’ ಎಂದಿದ್ದಾರೆ. ‘‘ಈ ಘಟನೆಗೆ ರಾಜಕೀಯದ ಬಣ್ಣ ಹಚ್ಚಬೇಡಿ’’ ಎಂದಿದ್ದಾರೆ.

ಮನಪಾದ 30 ಸಾವಿರ ಸಿಬ್ಬಂದಿ ಆ ಸಂದರ್ಭದಲ್ಲಿ ಜನತೆಯ ಸೇವೆಗೆ ಮುಂದಾಗಿದ್ದನ್ನು ಮನಪಾ ಕಮಿಷನರ್ ಅಜಯ್ ಮೆಹ್ತಾ ಹೇಳಿದ್ದಾರೆ. ಮುಂಬೈ ವರ್ಲಿಯಲ್ಲಿ ಈ ತನಕ ಈ ರೀತಿ ನೀರು ನಿಂತದ್ದು ಸ್ಥಳೀಯರು ಕಾಣಲಿಲ್ಲವಂತೆ. ರಸ್ತೆಗಳಲ್ಲಿ ನೀರು ತುಂಬಿ ರಸ್ತೆ ಸಮುದ್ರದಂತೆ ಕಾಣಲು ಮುಖ್ಯ ಕಾರಣ ಮುಂಬೈಯ ವಿಭಿನ್ನ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಮುಂಬೈ ಮೆಟ್ರೋ-3ರ ನಿರ್ಮಾಣ ಕಾರ್ಯಗಳು. ಸರಕಾರ ಈ ಬಗ್ಗೆ ಗಮನವನ್ನೇ ಹರಿಸಿಲ್ಲ. ಇದು ಸರಕಾರದ ನಿರ್ಲಕ್ಷ್ಯ. ಆಗಸ್ಟ್ 29 ರಂದು ಮುಂಬೈ ಮಹಾನಗರದ ತುಂಬಾ ನೀರು ತುಂಬಲು ಮೆಟ್ರೋ ಕಾಮಗಾರಿಯೇ ಕಾರಣ ಎಂದು ‘ಸಾಮ್ನಾ’ ಮುಖಪುಟದಲ್ಲಿ ಬರೆದಿದೆ.ಈ ಸಂದರ್ಭದಲ್ಲಿ ಬೆಸ್ಟ್ ಬಸ್ಸು ಆಡಳಿತ, ನೇವಿ ಮತ್ತು ಎನ್.ಡಿ.ಆರ್.ಎಫ್. ತಂಡ ಮುಂಬೈಕರ್ ಸೇವೆಗೆ ಮುತುವರ್ಜಿ ವಹಿಸಿರುವುದೂ ಗಮನಿಸಬೇಕಾದ ಸಂಗತಿ.

ಹವಾಮಾನ ಇಲಾಖೆಯು ಮುಂಬೈ ಮತ್ತು ಉಪನಗರಗಳಲ್ಲಿ ಮುಂದಿನ 24 ಗಂಟೆ (ಆಗಸ್ಟ್ 30 ರಂದು) ಭಾರೀ ಮಳೆ ಬರುವ ಸಾಧ್ಯತೆ ಇದೆ ಎಂದು ಘೋಷಿಸಿತ್ತು. (ಆದರೆ ಮರುದಿನ ಅಂತಹ ಮಳೆ ಬರಲಿಲ್ಲ) ಹಾಗಾಗಿ ಬುಧವಾರದಂದು ಎಲ್ಲೆಲ್ಲಿ ನೀರು ಕಡಿಮೆ ನಿಂತಿತ್ತೋ ಅಂತಹ ರಸ್ತೆಗಳಲ್ಲಿ ಬೆಸ್ಟ್ 200ಕ್ಕೂ ಅಧಿಕ ಸಂಖ್ಯೆಯಲ್ಲಿ ಹೆಚ್ಚುವರಿ ಬಸ್ಸುಗಳನ್ನು ಓಡಿಸಿತು. ಆದಿನ ಸೋಶಿಯಲ್ ಮೀಡಿಯಾದಲ್ಲೂ ಗಣ್ಯರು ಜನರ ಸುರಕ್ಷತೆಯ ಕುರಿತಂತೆ ವಿಶೇಷ ಕಾಳಜಿ ವ್ಯಕ್ತ ಪಡಿಸಿದ್ದರು. ಸೋಶಿಯಲ್ ಮೀಡಿಯಾ ಬಳಕೆದಾರರು ಕೂಡಾ ತಮ್ಮ ತಮ್ಮ ಸ್ತರದಲ್ಲಿ ಜನಜಾಗೃತಿ ಮೂಡಿಸಿದ್ದರು.

ಆಗಸ್ಟ್ 29ರ ಮಳೆ ರೈಲು ಓಡಾಟ, ಬಸ್ಸು ಓಡಾಟ ಮತ್ತು ವಿಮಾನ ಓಡಾಟದ ಮೇಲೆ ತೀವ್ರ ಪರಿಣಾಮ ಬೀರಿದ್ದನ್ನು ಕಂಡಾಗ ಮುಂಬೈಕರ್‌ಗೆ ಜುಲೈ 26ರ ನೆನಪು ಮರುಕಳಿಸಿದ್ದು ಆಶ್ಚರ್ಯವೇನಲ್ಲ. ಅನೇಕರು ಆ ದಿನ ಕಚೇರಿಗಳಲ್ಲಿ ಶಾಲೆಗಳಲ್ಲಿ, ಮಸೀದಿಗಳಲ್ಲಿ, ಧರ್ಮಛತ್ರಗಳಲ್ಲಿ, ಗಣೇಶ ಮಂಡಲಗಳಲ್ಲಿ ರಾತ್ರಿ ತಂಗಿದ್ದರು. ಅಂದು ಅವರಿಗೆಲ್ಲ್ಲ ಅಲ್ಲಿ ಉಪಾಹಾರದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಜುಲೈ 26 (2005)ರ ಮಳೆ ಮೂರು - ನಾಲ್ಕು ದಿನ ತೊಂದರೆ ಉಂಟುಮಾಡಿತ್ತು. ಆದರೆ ಆಗಸ್ಟ್ 29ರ ಮಳೆ ಅಂತಹ ತೊಂದರೆ ಹೆಚ್ಚು ದಿನ ಕೊಡಲಿಲ್ಲ. ಏಕೆಂದರೆ ಮರುದಿನ ಆಗಸ್ಟ್ 30ರಂದು ಬೆಳಗ್ಗೆ ಅನೇಕ ಕಡೆ ನೀರು ಇಳಿಯ ತೊಡಗಿತ್ತು.

ಹವಾಮಾನ ಇಲಾಖೆ ಮತ್ತು ಮುಂಬೈ ಮನಪಾ ನಡುವೆ ಹೊಂದಾಣಿಕೆ ಇಲ್ಲ ಎನ್ನುವ ಆರೋಪ ಕೂಡಾ ಆಡಳಿತದಲ್ಲಿರುವ ಶಿವಸೇನೆ ತಳ್ಳಿ ಹಾಕಿದೆ.

Writer - ಶ್ರೀನಿವಾಸ್ ಜೋಕಟ್ಟೆ

contributor

Editor - ಶ್ರೀನಿವಾಸ್ ಜೋಕಟ್ಟೆ

contributor

Similar News

ಸಂವಿಧಾನ -75