ಬುಲೆಟ್ ಟ್ರೈನ್: ಭೂಮಿಯೇ ಸಿಗದೆ ಭೂಮಿ ಪೂಜೆ!

Update: 2017-09-18 18:09 GMT

‘ಬುಲೆಟ್ ಟ್ರೈನ್ ಹಟಾವೋ, ಲೋಕಲ್ ಟ್ರೈನ್ ಸುಧಾರೋ’ ಇದು ಮುಂಬೈಯ ಇತ್ತೀಚಿನ ಸ್ಲೋಗನ್. ಶಿವಸೇನೆ ಸಹಿತ ಅನೇಕ ಆದಿವಾಸಿ ಸಂಘಟನೆಗಳು ಇದೀಗ ಆಂದೋಲನದತ್ತ ಮುಖಮಾಡಿವೆ. ಅತಿವೇಗದ ಅಹ್ಮದಾಬಾದ್-ಮುಂಬೈ ಟ್ರೈನ್ ಯೋಜನೆಯು ವಾಸ್ತವದಲ್ಲಿ ದೇಶವಾಸಿಗಳಿಗೆ ಆವಶ್ಯಕತೆ ಇಲ್ಲದ್ದು. ಈ ಯೋಜನೆಯಿಂದ ಯಾವ ಸಮಸ್ಯೆ ಪರಿಹಾರವಾಗಲಿದೆ? ತಾಂತ್ರಿಕ ಮತ್ತು ವಿಜ್ಞಾನ ಕ್ಷೇತ್ರದ ಪ್ರಗತಿಯ ಯೋಜನೆಗಳು ಬೇಕು. ಆದರೆ ಬುಲೆಟ್ ಟ್ರೈನ್ ರಾಷ್ಟ್ರೀಯ ಅಗತ್ಯವೇ? 1,08,000 ಕೋಟಿ ರೂಪಾಯಿಯ ಅಂದಾಜು ವೆಚ್ಚದ ಈ ಯೋಜನೆಗೆ ಕನಿಷ್ಠ ಎಂದರೂ 30 ಸಾವಿರ ಕೋಟಿ ರೂಪಾಯಿ ಮಹಾರಾಷ್ಟ್ರ ಸರಕಾರದಿಂದ ಪಡೆಯಲಾಗುತ್ತದೆ. ರೈತರ ಸಾಲ ಮನ್ನಾ ಬೇಡಿಕೆ ಅನೇಕ ಸಮಯದಿಂದ ಇದೆಯೇ ಹೊರತು ಬುಲೆಟ್ ಟ್ರೈನ್ ಬೇಡಿಕೆ ಯಾರೂ ಇರಿಸಿಲ್ಲ. ಮೋದಿಯವರ ಈ ಕನಸು ಜನಸಾಮಾನ್ಯರದ್ದಲ್ಲ, ಉದ್ಯಮಿಗಳ ಕನಸಾಗಿದೆ. ಈ ಕೆಲಸಕ್ಕೆ ಮೆಶಿನರಿಯಿಂದ ಹಿಡಿದು ಕಾರ್ಮಿಕರ ತನಕ ಜಪಾನ್‌ನಿಂದಲೇ ಬರುತ್ತಾರೆ. ಹಾಗಾಗಿ ಉದ್ಯೋಗದ ಅವಕಾಶಗಳೂ ನಮಗೆ ಇಲ್ಲಿ ಕಂಡುಬರುವುದಿಲ್ಲ. ಮುಂಬೈ ಪಕ್ಕದ ಪಾಲ್ಘಾರ್‌ನಲ್ಲಿ ಆದಿವಾಸಿ ರೈತರು ಬುಲೆಟ್ ಟೈನ್ ವಿರುದ್ಧ ಆ ದಿನ ಪ್ರತಿಭಟನೆ ನಡೆಸಿ ‘‘ಇದಕ್ಕಾಗಿ ಈ ಪ್ರದೇಶದಲ್ಲಿ ಒಂದು ಇಂಚು ಜಮೀನು ಕೂಡಾ ನೀಡುವುದಿಲ್ಲ’’ ಎಂದು ಘೋಷಿಸಿದರು. ‘‘ಬುಲೆಟ್ ಟ್ರೈನ್‌ಗೆ ಜಮೀನು ಇನ್ನೂ ಸಿಕ್ಕಿಲ್ಲ, ಆದರೆ ಮೋದಿಯವರು ಜಪಾನ್‌ನ ಶಿಂಜೋ ಅಬೆ ಜೊತೆ ಭೂಮಿ ಪೂಜೆ ನಡೆಸಿದ್ದಾರೆ. ಇದೆಂತಹ ವಿಪರ್ಯಾಸ?’’ ಎಂದು ಪ್ರಶ್ನಿಸಿದ್ದಾರೆ ಪಾಲ್ಘಾರ್‌ನ ಭೂಮಿ ಸೇನೆಯ ಅಧ್ಯಕ್ಷ ಕಾಲೂ ಕಾಕಾ ಧೋಧಡೆ.

‘‘ಬುಲೆಟ್ ಟ್ರೈನ್ ಮತ್ತು ವಾಢವನ್ ಬಂದರಿಗಾಗಿ ಈ ಪರಿಸರದ ಜಮೀನಿನ ದೊಡ್ಡ ಭಾಗ ಹೋದರೆ ಇಲ್ಲಿನ ರೈತರು, ಆದಿವಾಸಿಗಳು ನಿರ್ಗತಿಕರಾಗುವರು. ಸರಕಾರ ಇಲ್ಲಿ ಗ್ರಾಮ ಪಂಚಾಯತ್‌ನ ಕಾನೂನು ಉಲ್ಲಂಘಿಸಿ ಆದಿವಾಸಿಗಳ ಜಮೀನು ನುಂಗಿ ಹಾಕಿದರೆ ದೊಡ್ಡ ಆಂದೋಲನ ನಡೆಯಬಹುದು. ಇದನ್ನು ಮೋದಿ ಸರಕಾರ ಗಮನಿಸಬೇಕು’’ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಆದಿವಾಸಿ ಏಕತಾ ಪರಿಷತ್, ಶೇತ್ಕಾರಿ ಸಂಘರ್ಷ ಸಮಿತಿ, ಭೂಮಿ ಸೇನೆ, ಸೂರ್ಯಪಾಣೀ ಬಚಾವ್, ಯುವ ಭಾರತ್, ವಾಢ್‌ವಣ್ ಬಂದರು ವಿರೋಧಿ, ಕಷ್ಟಕಾರಿ ಸಂಘಟನೆ.... ಇವೆಲ್ಲ ಸಂಘಟನೆಗಳು ಎಚ್ಚರಿಕೆ ನೀಡಿವೆ.

ಮೆಟ್ರೋ-3 ಸುರಂಗ ಮಾರ್ಗದ ಕಾಮಗಾರಿ: ಪುರಾತತ್ವ ಕಟ್ಟಡಗಳಲ್ಲಿ ಕಂಪನ!

ಮೆಟ್ರೋ-3ರ ಪ್ರಸ್ತಾವಿತ ಕಾಮಗಾರಿ ಯೋಜನೆಯಲ್ಲಿ ಸುರಂಗದ ಕೆಲಸವನ್ನು ತಡೆ ಹಿಡಿಯಬೇಕು ಎಂದು ಸಲ್ಲಿಸಲಾದ ಜನಹಿತ ಅರ್ಜಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿದೆ. ಈ ಮೆಟ್ರೋ ಲೈನ್ ಕೊಲಬಾ-ಬಾಂದ್ರಾ-ಸೀಪ್ಜ್ (ಅಂಧೇರಿ ಪೂರ್ವ) ದಾರಿಯಾಗಿ ಹಾದು ಹೋಗಲಿದೆ. ಈ ದಾರಿಯಲ್ಲಿ ಮುಖ್ಯವಾಗಿ ಮುಂಬೈಯ ಕೋಟೆ (ಫೋರ್ಟ್) ಕ್ಷೇತ್ರದಲ್ಲಿ ಬ್ರಿಟಿಷ್ ಕಾಲದ ಅನೇಕ ಕಟ್ಟಡಗಳಿವೆ. ಇವುಗಳಿಗೆ ತೀವ್ರ ಹಾನಿ ಸಂಭವಿಸಲಿವೆ ಎನ್ನಲಾಗಿತ್ತು. ಆದರೆ ಮುಖ್ಯ ನ್ಯಾಯಾಧೀಶೆ ಮಂಜುಳಾ ಚೆಲ್ಲೂರು ಮತ್ತು ನ್ಯಾಯಾಧೀಶ ಎನ್.ಎಂ. ಜಾಮ್‌ದರ್ ಅವರು ‘‘ಸರಕಾರಕ್ಕೆ ಅದರ ಕೆಲಸ ಮಾಡಲು ಬಿಡಬೇಕು. ಇಲ್ಲವಾದರೆ ಜನರು ಆಡಳಿತದವರ ತಲೆ ಮೇಲೆ ಕೂತರೆ ಯಾವ ಕೆಲಸವೂ ಆಗಲಾರದು’’ ಎಂದು ತೀರ್ಪು ನೀಡಿದರು. ಇದಕ್ಕಾಗಿ ಸರಕಾರ ಐ.ಐ.ಟಿ. ಮುಂಬೈಯ ವಿಶೇಷಜ್ಞರ ಸಲಹೆ ಪಡೆಯಲು ಸೂಚಿಸಲಾಗಿದೆ. ಎಂ.ಎಂ.ಆರ್.ಡಿ.ಎ, ಮಹಾರಾಷ್ಟ್ರ ಸರಕಾರ, ಮುಂಬೈ ಮೆಟ್ರೋ ರೈಲ್ ಕಾರ್ಪೊರೇಶನ್ ಲಿ. ವಿರುದ್ಧ ಜನಹಿತ ಅರ್ಜಿ ದಾಖಲಿಸಲಾಗಿದೆ. ಈ ಅರ್ಜಿಯನ್ನು ಡಿ.ಎನ್.ರೋಡ್‌ನಲ್ಲಿ (ಸಿ.ಎಸ್.ಟಿ.ಯಿಂದ ಫೋರ್ಟ್ ಕಡೆ ಹೋಗುವ ರಸ್ತೆ) ಕಂಡು ಬರುವ 119 ವರ್ಷ ಹಳೆಯ ಪುರಾತತ್ವ ಮಹತ್ವದ ಜೆ.ಎನ್.ಪೆಟಿಟ್ ಇನ್‌ಸ್ಟಿಟ್ಯೂಟ್‌ನ ಟ್ರಸ್ಟಿಗಳು ಸಲ್ಲಿಸಿದ್ದರು. ಆಗಸ್ಟ್ 25ರಂದು ಜೆ.ಎನ್.ಪೆಟಿಟ್ ಕಟ್ಟಡದ ಒಂದು ಭಾಗ ಕುಸಿದು ಬಿದ್ದಿತು. ಯಾಕೆಂದರೆ ಮೆಟ್ರೋ-3ರ ಸುರಂಗ ಮಾರ್ಗದ ಕೆಲಸ ನಡೆಯುತ್ತಿದೆ. ಹಾಗೂ ಇದರಿಂದ ತುಂಬಾ ಕಂಪನ ಹಾಗೂ ಅಕ್ಕಪಕ್ಕದ ಕಟ್ಟಡಗಳು ಒಂದಿಷ್ಟು ಹಾನಿಗೀಡಾಗಿತ್ತು. ತಾವು ಮೆಟ್ರೋ-3ರ ಕೆಲಸದ ವಿರೋಧ ಮಾಡುತ್ತಿಲ್ಲ. ಆದರೆ ಫೋರ್ಟ್ ಕ್ಷೇತ್ರದ ಪುರಾತತ್ವ ಕಟ್ಟಡಗಳಿಗೆ ಇದರಿಂದ ಅಪಾಯವಿದೆ. ಹಾಗಾಗಿ ಇಲ್ಲಿ ಸಮೀಕ್ಷೆ ನಡೆಸಬೇಕು ಎಂದು ಅರ್ಜಿದಾರರು ಹೇಳಿದ್ದರು. ಆದರೆ ನ್ಯಾಯಾಧೀಶೆ ಚೆಲ್ಲೂರು ಅವರು ‘‘ಮೆಟ್ರೋ ಕೆಲಸ ಕಾರ್ಯಗಳಿಗೆ ನ್ಯಾಯಾಲಯ ತಡೆಹಿಡಿಯುವುದಿಲ್ಲ. ಹಾಗಿದ್ದೂ ತಜ್ಞರ ಜೊತೆ ಚರ್ಚಿಸಲಾಗುವುದು. ಮೆಟ್ರೋ ಕೆಲಸವನ್ನು ತಡೆಹಿಡಿಯುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ’’ ಎಂದಿದ್ದಾರೆ.

ಆನ್‌ಲೈನ್ ಮೌಲ್ಯಮಾಪನ: ಒಂದೇ ವಿಷಯದಲ್ಲಿ 111 ವಿದ್ಯಾರ್ಥಿಗಳು ಅನುತ್ತೀರ್ಣ

ಚರ್ಚ್‌ಗೇಟ್‌ನ ರಾಜಕೀಯ ವಿಧಿಕಾನೂನು ಮಹಾವಿದ್ಯಾನಿಲಯ (ಜಿಎಲ್‌ಸಿ) ಇದರ 111 (ನೂರ ಹನ್ನೊಂದು) ವಿದ್ಯಾರ್ಥಿಗಳು ‘ಲಾ ಆಫ್ ಎವಿಡೆನ್ಸ್ (ಸಾಕ್ಷ್ಯ ಕಾನೂನು) ವಿಷಯದಲ್ಲಿ ಅನುತ್ತೀರ್ಣರಾಗಿದ್ದಾರೆ.
ಇಷ್ಟೊಂದು ವಿದ್ಯಾರ್ಥಿಗಳು ಒಂದೇ ವಿಷಯದಲ್ಲಿ ಅನುತ್ತೀರ್ಣರಾಗಿರು ವುದು ವಿದ್ಯಾರ್ಥಿಗಳಿಗೆ ಆಶ್ಚರ್ಯ ಉಂಟಾಗಿದೆ. ವಿದ್ಯಾರ್ಥಿಗಳ ದೂರಿನ ಮೇರೆಗೆ ಮಹಾವಿದ್ಯಾನಿಲಯದ ಪ್ರಾಚಾರ್ಯ ಡಾ. ಅಜಯ್ ನಾಥಾನಿ, ಮುಂಬೈ ವಿಶ್ವವಿದ್ಯಾನಿಲಯದ ಪರೀಕ್ಷಾ ನಿರ್ದೇಶಕರಿಗೆ ಪತ್ರ ಬರೆದು ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನ ಮಾಡುವಂತೆ ವಿನಂತಿಸಿದ್ದಾರೆ.
ಕಳೆದ ಶೈಕ್ಷಣಿಕ ಅವಧಿಯಲ್ಲಿ ನಡೆದ ಪರೀಕ್ಷೆಯಲ್ಲಿ ಈ ಮಹಾ ವಿದ್ಯಾನಿಲಯದ ಮೂರು ವರ್ಷದ ಎಲ್‌ಎಲ್‌ಬಿಯ ಆರನೆ ಸತ್ರದ ಪರೀಕ್ಷೆಯಲ್ಲಿ 260 ವಿದ್ಯಾರ್ಥಿಗಳು ಕೂತಿದ್ದರು. ಇದರಲ್ಲಿ 58 ವಿದ್ಯಾರ್ಥಿ ಗಳು ಸಾಕ್ಷ್ಯ ಕಾನೂನು ವಿಷಯದಲ್ಲಿ ಅನುತ್ತೀರ್ಣರಾಗಿದ್ದಾರೆ. ಇತರ ವಿಷಯಗಳಲ್ಲಿ ಉತ್ತಮ ಅಂಕ ಪಡೆದಿದ್ದಾರೆ. ಇದೇ ರೀತಿ ಎಲ್‌ಎಲ್‌ಬಿ 5ನೆ ವರ್ಷದ ಹತ್ತನೆ ಸತ್ರದ ಪರೀಕ್ಷೆಯಲ್ಲಿ 227 ವಿದ್ಯಾರ್ಥಿಗಳು ಕೂತಿದ್ದರು. ಇದರಲ್ಲೂ 53 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಒಟ್ಟು ಒಂದೇ ವಿಷಯದಲ್ಲಿ 111 ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುವುದು ಸಂಶಯ ಉಂಟುಮಾಡಿದೆ. ಉಳಿದ ವಿಷಯಗಳಲ್ಲಿ ಉತ್ತಮ ಅಂಕ ಬಂದಿರುತ್ತದೆ. ಈ ವರ್ಷ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಆನ್‌ಲೈನ್ ಆಗಿದ್ದು ಏನೋ ಎಡವಟ್ಟು ಆಗಿರುತ್ತದೆ ಎಂದು ಸಂಶಯಿಸಲಾಗಿದೆ. ಇದು ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳುಗೆಡವಿದೆ. ವಿ.ವಿ. ಫಲಿತಾಂಶ ಬಹಳಷ್ಟು ತಡವಾಗಿ ಕೂಡ ಬಂದಿದ್ದು ಸರಕಾರ ಟೀಕೆಗಳನ್ನು ಎದುರಿಸಿತ್ತು.

ಮುಂಬೈ ಹಬ್ಬಗಳಲ್ಲಿ ಪೊಲೀಸರಿಗೆ ಬೆದರಿಕೆ ಕರೆಗಳು

ಮಾಯಾನಗರಿ ಮುಂಬೈಯು ಸದಾಕಾಲ ಆತಂಕವಾದಿಗಳ ಕೆಂಗಣ್ಣನ್ನು ಎದುರಿಸುತ್ತಲೇ ಇದೆ. ಅದರಲ್ಲೂ ಹಬ್ಬಗಳು ಬರುವಾಗೆಲ್ಲಾ ಈ ಭಯ ಹೆಚ್ಚಾಗುತ್ತಿದೆ. ಸ್ವಾತಂತ್ರ್ಯ ದಿನವಾದ ಆಗಸ್ಟ್ 15ರಿಂದ ಗಣಪತಿ ವಿಸರ್ಜನೆಯ ತನಕ ಮುಂಬೈ ಪೊಲೀಸರಿಗೆ 105 ದಾಳಿ ಬೆದರಿಕೆಯ ಕರೆಗಳು ಬಂದಿವೆ. ಅರ್ಥಾತ್ ಕಳೆದ ಒಂದು ತಿಂಗಳಲ್ಲಿ ಮುಂಬೈಗೆ ದಾಳಿ ನಡೆಸುವುದಾಗಿ 105 ಅನಾಮಿಕ ಕರೆಗಳನ್ನು ಪೊಲೀಸರು ಸ್ವೀಕರಿಸಿದ್ದಾರೆ. ಪ್ರಕರಣದಲ್ಲಿ ಮುಂಬೈಯ ಪೊಲೀಸ್ ಆಯುಕ್ತ ದತ್ತಾ ಪಡಸಲ್ಗೀಕರ್ ಅವರು ಪ್ರತಿಕ್ರಿಯಿಸಿ ಮುಂಬೈ ಸದಾ ಅಲರ್ಟ್ ಆಗಿರುತ್ತದೆ. ಬೆದರಿಕೆ ಕರೆಗಳು ಬರುತ್ತಲೇ ಇರುತ್ತದೆ. ಉತ್ತಮ ಸುರಕ್ಷೆ ನಾವು ಒದಗಿಸುತ್ತಿದ್ದೇವೆ. ಉತ್ಸವಗಳಲ್ಲಿ ಪೊಲೀಸರು ಹೆಚ್ಚಿನ ಸುರಕ್ಷೆ ಒದಗಿಸುತ್ತಿದ್ದಾರೆ. ಇನ್ನೇನು ನವರಾತ್ರಿ ಬಂತು. ಜನ ದಾಂಡಿಯಾ ಸಂಭ್ರಮದಲ್ಲಿರುತ್ತಾರೆ. ಹೀಗಾಗಿ ಹೆಚ್ಚಿನ ಅಲರ್ಟ್ ಪೊಲೀಸರು ಕೈಗೊಂಡಿದ್ದಾರೆ ಎಂದಿದ್ದಾರೆ.

ಘನ ವಾಹನಗಳಿಗೆ ಮುಂಬೈ ಪ್ರವೇಶಕ್ಕೆ ಸಮಯ ನಿಗದಿ!

ಮುಂಬೈಯಲ್ಲಿ ಗಂಭೀರವಾಗಿರುವ ಟ್ರಾಫಿಕ್ ಸಮಸ್ಯೆಯಿಂದ ಪಾರಾಗಲು ಇದೀಗ ಮುಂಬೈ ಟ್ರಾಫಿಕ್ ವಿಭಾಗವು ಎಲ್ಲಾ ಪ್ರಕಾರದ ಭಾರೀ ಗಾತ್ರದ ವಾಹನಗಳಿಗೆ ಬೆಳಗ್ಗೆ 7ರಿಂದ ರಾತ್ರಿ 10ರ ತನಕ ಮುಂಬೈ ಯಲ್ಲಿ ಪ್ರವೇಶ ಮಾಡುವುದಕ್ಕೆ ತಡೆ ಹೇರಿದೆ. ಟ್ರಾಫಿಕ್ ವಿಭಾಗದ ಪೊಲೀಸ್ ಉಪ ಆಯುಕ್ತ ಮತ್ತು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ಡಾ. ಸೌರಭ್ ತ್ರಿಪಾಠಿಯವರು ಅಧಿಸೂಚನೆ ಜಾರಿಗೊಳಿಸಿ ಈ ಆದೇಶ ಪ್ರಕಟಿಸಿದ್ದಾರೆ. ಈ ಆದೇಶ ಮುಂಬೈಯ ಎಲ್ಲಾ ರಸ್ತೆಗಳಿಗೆ ಅನ್ವಯವಾಗಲಿದೆ. ಅತ್ಯವಶ್ಯಕ ಸೇವೆ ನೀಡುವ ವಾಹನಗಳಿಗೆ ಈ ಆದೇಶದಿಂದ ರಿಯಾಯಿತಿ ನೀಡಲಾಗಿದೆ. ಅಧಿಸೂಚನೆಯ ಅನುಸಾರ ಮುಂಬೈ ನಗರ, ಪೂರ್ವ ಮತ್ತು ಪಶ್ಚಿಮ ಉಪನಗರಗಳಲ್ಲಿ ಜನಸಾಮಾನ್ಯರ ಸುರಕ್ಷೆಯ ಬಗ್ಗೆ ಗಮನಹರಿಸಿ ಈ ನಿರ್ಣಯ ಕೈಗೊಳ್ಳಲಾಗಿದೆ. ಇತ್ತೀಚಿನ ದಿನಗಳಲ್ಲಿ ಟ್ರಾಫಿಕ್ ಸಮಸ್ಯೆ ವಿಪರೀತವಾಗಿದೆ. ಹಾಗಾಗಿ ಭಾರೀ ಗಾತ್ರದ ವಾಹನಗಳಿಗೆ ಬೆಳಗ್ಗೆ 7 ರಿಂದ ರಾತ್ರಿ 10ರ ತನಕ ಒಳ ಪ್ರವೇಶವಿಲ್ಲ. ಬೆಸ್ಟ್ ಬಸ್ಸು, ಎಸ್‌ಟಿ ಬಸ್ಸು, ಶಾಲಾ ಬಸ್ಸುಗಳು, ಖಾಸಗಿ ಕಂಪೆನಿಗಳ ಬಸ್ಸುಗಳು, ಮುಂಬೈ ದರ್ಶನ್ ಬಸ್ಸುಗಳು, ಆವಶ್ಯಕ ಸೇವೆಗಳ ವಾಹನಗಳು, ಹಾಲು, ತರಕಾರಿ, ನೀರಿನ ಟ್ಯಾಂಕರ್, ಪೆಟ್ರೋಲ್, ಆ್ಯಂಬುಲೆನ್ಸ್, ಫೈರ್ ಬ್ರಿಗೇಡ್, ಸರಕಾರಿ ವಾಹನಗಳಿಗೆ ಇದು ಅನ್ವಯವಾಗುವುದಿಲ್ಲ.

ಹೊಂಡ ತೋಡಿದ್ದಕ್ಕೆ ಗಣೇಶ ಮಂಡಲಗಳಿಗೆ ದಂಡ

ಮುಂಬೈಯ ಲಾಲ್‌ಬಾಗ್ ಚಾ ರಾಜಾ ಗಣೇಶ ಮಂಡಲಕ್ಕೆ ಈ ಬಾರಿ ಪರಿಸರದಲ್ಲಿ 243 ಹೊಂಡಗಳನ್ನು ಮಾಡಿದ್ದಕ್ಕಾಗಿ 4.46 ಲಕ್ಷ ರೂ. ದಂಡವನ್ನು ಮಹಾನಗರ ಪಾಲಿಕೆ ವಿಧಿಸಿದೆ. ಯಾಕೆಂದರೆ ಮುಂಬೈ ಮನಪಾದ ಅನುಮತಿಯನ್ನು ಪಡೆಯದೆ ಈ ಹೊಂಡಗಳನ್ನು ಅಗೆದಿದ್ದಾರೆ. ಪ್ರತೀ ಹೊಂಡಕ್ಕೆ 2 ಸಾವಿರ ರೂ. ದಂಡ ವಿಧಿಸಲಾಗಿದೆ. ಇದರ ಜೊತೆ ಮುಂಬೈ ಮನಪಾ ಒಟ್ಟು 13 ಮಂಡಲಗಳಿಗೆ 12 ಲಕ್ಷದ 94 ಸಾವಿರ ರೂ. ದಂಡ ವಿಧಿಸಿದೆ. ಆದರೆ ಲಾಲ್‌ಬಾಗ್ ಚಾ ರಾಜಾ ಮಂಡಲಕ್ಕೆ ಅತಿಹೆಚ್ಚಿನ ದಂಡ ವಿಧಿಸಲಾಗಿದೆ.

ಶಾಸಕರಿಗೆ ಇನ್ನು ಘಾಟ್‌ಕೋಪರ್‌ನಲ್ಲಿ ವಾಸ್ತವ್ಯದ ವ್ಯವಸ್ಥೆ

ಮುಂಬೈಯ ನರೀಮನ್ ಪಾಯಿಂಟ್‌ನಲ್ಲಿರುವ ವಿಧಾನ ಭವನದ ಸಮೀಪವಿರುವ ಶಾಸಕರ ನಿವಾಸದ ಮನೋರಾ ಕಟ್ಟಡವನ್ನು ಶಿಥಿಲಗೊಂಡ ಕಾರಣದಿಂದ ಸರಕಾರವು ನವೆಂಬರ್ ಒಂದರೊಳಗೆ ಖಾಲಿಗೊಳಿಸಲು ನಿರ್ಧರಿಸಿದೆ. ಆನಂತರ ಮನೋರಾ ಕಟ್ಟಡವನ್ನು ಕೆಡವಿ ಹಾಕಿ ಅಲ್ಲಿ ಶಾಸಕರಿಗಾಗಿ ಭವ್ಯ ಟವರ್ ನಿರ್ಮಿಸಲಾಗುವುದು. ಇದುವರೆಗೆ ಮನೋರಾದಲ್ಲಿ ವಾಸಿಸುತ್ತಿರುವ ಶಾಸಕರಿಗೆ ಘಾಟ್‌ಕೋಪರ್ ಮತ್ತು ಅನ್ಯ ಕ್ಷೇತ್ರಗಳಲ್ಲಿ ಪರ್ಯಾಯ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗುವುದು. ಈ ಬಾರಿ ಮಳೆಗಾಲದ ಅಧಿವೇಶನದ ಸಮಯ ಮನೋರಾ ನಿವಾಸದ ಪ್ಲ್ಯಾಸ್ಟರ್ ಜರಿದು ಬಿದ್ದು ಶಾಸಕರೊಬ್ಬರು ಅದೃಷ್ಟವಶಾತ್ ಪಾರಾಗಿದ್ದರು. ಈ ಬಗ್ಗೆ ವಿಧಾನ ಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ತೀವ್ರ ಚರ್ಚೆಯಾದ ನಂತರ ಕಟ್ಟಡ ಕೆಡವಿಹಾಕಲು ನಿರ್ಧರಿಸಲಾಗಿದೆ.

Writer - ಶ್ರೀನಿವಾಸ್ ಜೋಕಟ್ಟೆ

contributor

Editor - ಶ್ರೀನಿವಾಸ್ ಜೋಕಟ್ಟೆ

contributor

Similar News