ಚಂದ್ರಶೇಖರ ಕಂಬಾರ -ಹೊಸ ಹೊಣೆಗಾರಿಕೆ

Update: 2018-03-10 18:34 GMT

 ಕಂಬಾರರು ಅಕಾಡಮಿಗಳ ಒಳಹೊರಗುಗಳನ್ನು ಬಲ್ಲವರು. ಮಿಗಿಲಾಗಿ ಎರಡು ಅವಧಿಗೆ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಅದನ್ನು ಕೇವಲ ಪದವಿಗಳನ್ನು ಕೊಡುವ ವಿಶ್ವವಿದ್ಯಾನಿಲಯವನ್ನಾಗಿಸದೆ ಕನ್ನಡ ಸಂಶೋಧನಾ ಕೇಂದ್ರವಾಗಿ ಬೆಳೆಸಿದ ಕೀರ್ತಿಯ ಕಂಬಾರರಿಗೆ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಆಡಳಿತದಲ್ಲಿ ಶ್ರೇಷ್ಠತೆಯನ್ನು ಗುರುತಿಸುವ, ಅಸಮತೆ-ಅನ್ಯಾಯಗಳನ್ನು ನೀಗಿಸುವ ತಾರತಮ್ಯ ಜ್ಞಾನವೂ, ಅಪಾರವಾದ ಅನುಭವವೂ ಇದೆ. ಇದರಿಂದ ಕೇಂದ್ರ ಸಾಹಿತ್ಯ ಅಕಾಡಮಿಯ ಒಳಿತಿಗೆ ಲಾಭವಾಗಲಿದೆ ಎಂದು ಹೇಳಬಹುದು.

ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡ ಸಾಹಿತಿಯೊಬ್ಬರು ಮೂರನೆಯ ಸಲ ರಾಷ್ಟ್ರಮಟ್ಟದ ಸರ್ವೋಚ್ಚ ಸಾಹಿತ್ಯ ವೇದಿಕೆಯಾದ ಕೇಂದ್ರ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿ ಚುನಾಯಿತರಾಗಿರುವುದು ಕನ್ನಡಿಗರು ಹೆಮ್ಮೆಪಡಬಹುದಾದ ಸಂಗತಿ. ಈ ಮೊದಲು ನವ್ಯ ಕಾವ್ಯ ಪ್ರವರ್ತಕರಲ್ಲಿ ಆದ್ಯರು ಎನ್ನಲಾದ ವಿನಾಯಕ ಕೃಷ್ಣ ಗೋಕಾಕರು(1983-88) ಮತ್ತು ನವ್ಯದ ಮತ್ತೊಬ್ಬ ಪ್ರಮುಖ ಸಾಹಿತಿ ಯು.ಆರ್.ಅನಂತ ಮೂರ್ತಿಯವರು(1993-98) ಕೇಂದ್ರ ಸಾಹಿತ್ಯ ಅಕಾಡಮಿ ಅಧ್ಯಕ್ಷರಾಗಿ ಚುನಾಯಿತಗೊಂಡು ಸೇವೆ ಸಲ್ಲಿಸಿರುವುದುಂಟು. ಈಗ ಕಳೆದ ಫೆ.12ರಂದು ನಡೆದ ಚುನಾವಣೆಯಲ್ಲಿ ಕನ್ನಡದ ಪ್ರಖ್ಯಾತ ಕವಿ, ನಾಟಕಕಾರ ಚಂದ್ರಶೇಖರ ಕಂಬಾರರು ಒಡಿಶಾದ ಪ್ರತಿಭಾ ರಾಯ್ ಮತ್ತು ಮರಾಠಿಯ ಬಾಲಚಂದ್ರ ನೆಮಾಡೆ ಅವರನ್ನು ಪರಾಭವಗೊಳಿಸಿ ಚುನಾಯಿತರಾಗಿದ್ದಾರೆ.

ಕಾವ್ಯ, ನಾಟಕ, ಕಾದಂಬರಿ, ಜಾನಪದ ಮೊದಲಾದ ಸಾಹಿತ್ಯ ಪ್ರಕಾರಗಳಲ್ಲಿ ಸೃಜನಶೀಲರಾಗಿ, ಸಂಶೋಧಕರಾಗಿ, ಸಂಪಾದಕ/ಸಂಗ್ರಹಕಾರರಾಗಿ ಅದ್ವಿತೀಯ ಸಾಧನೆ ಗೈದಿರುವ ಚಂದ್ರಶೇಖರ ಕಂಬಾರರು ಬಹುಮುಖ ಪ್ರತಿಭೆಯ ಧೀಮಂತರು. ಕನ್ನಡ ಸಾಹಿತ್ಯದಲ್ಲಿ ತಮ್ಮ ಅನನ್ಯ ಅಸ್ಮಿತೆಯನ್ನು ಮೂಡಿಸಿರುವ ಕಂಬಾರರ ಸಾಹಿತ್ಯದ ಕಂಪು ರಾಜ್ಯ/ರಾಷ್ಟ್ರಗಳ ಸೀಮೋಲ್ಲಂಘನ ಮಾಡಿ ಅಂತಾರಾಷ್ಟ್ರೀಯತೆಯ ವರೆಗೆ ಪಸರಿಸಿದೆ. ಅವರ ಖ್ಯಾತಿಯ ಆಯಾಮಗಳೂ ಹಲವಾರು.

ಕಂಬಾರರು ಹುಟ್ಟಿದ್ದು(2-01-1937) ಬಡ ರೈತ ಕುಟುಂಬದಲ್ಲಾದರೂ ಅವರ ಮನೆತನ ಸಾಂಸ್ಕೃತಿಕ ಸಿರಿವಂತಿಕೆ ಮತ್ತು ಕಲಾ ರಸಿಕತೆಗೆ ಹೆಸರಾದದ್ದು. ತಂದೆ ಬಸವಣ್ಣೆಪ್ಪ ನಾಟಕ ಪ್ರಿಯರು, ತಾಯಿ ಚೆನ್ನಮ್ಮ ಜಾನಪದ ಕತೆಗಳ ಕಣಜ. ಜಾನಪದ ಕತೆಗಳು ಮತ್ತು ಬಯಲಾಟ, ಪಾರಿಜಾತದ ಕೌಜಲಗಿ ನಿಂಗಮ್ಮನ ಲಾವಣಿ ಗೀಗೀ ಮೇಳಗಳು-ಹೀಗೆ ಬಾಲ್ಯದಲ್ಲೇ ಜಾನಪದ ಮಾಂತ್ರಿಕ ಲೋಕಕ್ಕೆ ತೆರೆದುಕೊಂಡ ಮನಸ್ಸು ಮುಂದೆ ಪ್ರೌಢವಾದಾಗ ಅದರಿಂದ ಸ್ಫೂರ್ತಿ ಪಡೆದಿದ್ದರಲ್ಲಿ ಸೋಜಿಗವೇನಿಲ್ಲ. 1962ರಲ್ಲಿ ಕನ್ನಡ ಎಂ.ಎ. ಮುಗಿಸಿದ ಕಂಬಾರರಲ್ಲಿ ಸೃಜನಶೀಲ ಪ್ರತಿಭೆ ದಾಂಗುಡಿ ಇಡುತ್ತಿದ್ದ ಆ ಕಾಲಘಟ್ಟ ನವ್ಯ ಕಾವ್ಯ ವಿಜೃಂಭಿಸುತಿದ್ದ ದಿನಗಳು. ಆದರೆ ನವ್ಯದ ಪ್ರಬಲ ಆಕರ್ಷಣೆಯಿಂದ ವಿಚಲಿತರಾಗದೆ ಕಂಬಾರರು ಜಾನಪದ ಪರಂಪರೆಯಿಂದ ಸ್ಫೂರ್ತಿ ಪಡೆದರು. ಜಾನಪದ ಸಂಸ್ಕೃತಿ ಮತ್ತು ಜಾನಪದ ಭಾಷೆಯ ಸತ್ವವನ್ನು ಸಂಪೂರ್ಣವಾಗಿ ಮೈಗೂಡಿಸಿಕೊಂಡರು. ಲಾವಣಿಯ ಭಾಷೆ, ಲಯ ಮತ್ತು ಕಥನ ರೀತಿಗಳಿಂದ ಕವಿಯಾಗಿ, ನಾಟಕಕಾರರಾಗಿ ಅದ್ಭುತ ಮಾದರಿಯಲ್ಲಿ ಬೆಳೆದರು. ‘‘ಉತ್ತರ ಕರ್ನಾಟಕದ ದೇಸಿಯ ಮೇಲೆ ಇವರಿಗಿರುವ ಪ್ರಭುತ್ವ ಬೇಂದ್ರೆಯವರನ್ನು ಬಿಟ್ಟರೆ ಇನ್ನಾವ ಕವಿಯಲ್ಲೂ ಕಂಡುಬರುವುದಿಲ್ಲ’’ (ಗೋಪಾಲಕೃಷ್ಣ ಅಡಿಗ) ‘‘...ಬೇಂದ್ರೆಯವರನ್ನೊಬ್ಬರನ್ನು ಬಿಟ್ಟರೆ ಲಾವಣಿಯ ಶಿಲ್ಪವನ್ನು ಕಾವ್ಯದಲ್ಲಿ ಅಷ್ಟು ಸಮರ್ಥವಾಗಿ ಬಳಸಿಕೊಂಡವರಿಲ್ಲ’’(ಕುರ್ತಕೋಟಿ) ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು. ಹೀಗೆ ನವ್ಯಕ್ಕೆ ಸಮಾನಾಂತರವಾಗಿ ಜಾನಪದ ಸತ್ವ ಹೀರಿಕೊಂಡು ಬೆಳೆದ ಚಂದ್ರಶೇಖರ ಕಂಬಾರರ ದನಿಯಲ್ಲಿ ಕೀರ್ತಿನಾಥ ಕುರ್ತಕೋಟಿಯವರು ಹೇಳಿರುವಂತೆ ‘‘...ಪ್ರಾಚೀನತೆಯ ಮಣ್ಣಲ್ಲಿ ಹುದುಗಿ ಹೋದಂತಿರುವ ಬೇರುಗಳನ್ನು ಅಲುಗಾಡಿಸುವ ಶಕ್ತಿ ಇದೆ. ಇಪ್ಪತ್ತನೆ ಶತಮಾನದ ಆಧುನಿಕ ಪ್ರಜ್ಞೆಯೊಂದು, ಪ್ರಾಚೀನತೆಯ ಮಣ್ಣಲ್ಲಿ ಹುದುಗಿ ಹೋಗಿರುವ ಬೇರುಗಳನ್ನು ಅರಸುತ್ತಾ, ಅವಕ್ಕೆ ಹೊಸ ನೀರು, ಹೊಸಗಾಳಿ, ಹೊಸ ಬೆಳಕನ್ನು ಹಾಯಿಸುತ್ತಾ ಜಾನಪದ ಪರಂಪರೆಯನ್ನು ವರ್ತಮಾನಕ್ಕೆ ದುಡಿಸಿಕೊಂಡ ಒಂದು ಅಪೂರ್ವ ಮಾದರಿ ಚಂದ್ರಶೇಖರರ ಕಂಬಾರರ ಒಟ್ಟು ಸಾಹಿತ್ಯ. 1958ರಲ್ಲಿ ಮೊದಲ ಕವನ ಸಂಕಲನ ‘ಮುಗುಳು’ ಪ್ರಕಟಿಸಿದ ಕಂಬಾರರು ಇಲ್ಲಿಯವರೆಗೆ ‘ಚಕೋರಿ’ ಮಹಾಕಾವ್ಯವೂ ಸೇರಿದಂತೆ ಹತ್ತು ಕವನ ಸಂಕಲನಗಳು, ಇಪ್ಪತ್ತೈದು ನಾಟಕಗಳು, ಐದು ಕಾದಂಬರಿಗಳು, ಹದಿನಾರು ಸಂಶೋಧನಾ ಕೃತಿಗಳೂ ಸೇರಿದಂತೆ ಅರವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದು ಅವರದೇ ಮಾದರಿಯ ಆಧುನಿಕ ಜಾನಪದ ಸಾಹಿತ್ಯದಿಂದ ದೇಶವಿದೇಶಗಳಲ್ಲಿ ಕೀರ್ತಿವಂತರಾಗಿದ್ದಾರೆ. ಪ್ರಶಸ್ತಿ, ಸಮ್ಮಾನಗಳಲ್ಲಿ ‘ಜ್ಞಾನ ಪೀಠ’ದ ಉತ್ತುಂಗಕ್ಕೇರಿದ್ದಾರೆ. ಈಗ ಕೇಂದ್ರ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಪದವಿಯ ಹೊಣೆಗಾರಿಕೆ. ಇದು, ಅನಂತ ಮೂರ್ತಿಯವರು ಹೇಳಿರುವಂತೆ, ‘‘ಅವರ ಅಚ್ಚಕನ್ನಡದ ಅನನ್ಯ ಪ್ರತಿಭೆ’’, ಜ್ಞಾನಾನುಭವಗಳಿಗೆ ಸಹಜವಾಗಿ, ನ್ಯಾಯೋಚಿತವಾಗಿ ಒದಗಿ ಬಂದಿರುವ ಹೊಣೆಗಾರಿಕೆ ಮತ್ತು ಸಂದಿರುವ ಗೌರವವೂ ಹೌದು.

ರಾಜಾಶ್ರಯದಲ್ಲಿ ಪಾಲನೆಪೋಷಣೆ ಪಡೆಯುತ್ತಿದ್ದ ಸಾಹಿತ್ಯ-ಸಂಗೀತ- ಚಿತ್ರಕಲೆ ಇತ್ಯಾದಿಗಳು ಸ್ವಾತಂತ್ರಾನಂತರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಕಾರದತ್ತ ನೋಡುವಂತಾಯಿತು. ರಾಜಾಶ್ರಯ ತಪ್ಪಿದ ಕಲೆಗಳ ಪಾಲನೆ-ಪೋಷಣೆ-ಅಭಿವೃದ್ಧಿ ಕುರಿತು ಸಾಕಷ್ಟು ಚರ್ಚೆ-ಸಮಾಲೋಚನೆ -ಸಂವಾದಗಳನಂತರ ಅಕಾಡಮಿಗಳ ಪರಿಕಲ್ಪನೆ ಗರಿಗೆದರಿತು. ಆಗ ಇಂಥದೊಂದು ಆಲೋಚನೆಗೆ ಮಾದರಿಯಾಗಿ ಕಂಡದ್ದು ಮಧ್ಯಯುಗೀನ ಯೂರೋಪಿನಲ್ಲಿ ಧಾರ್ಮಿಕ ಸಂಸ್ಥೆಗಳ ಪೋಷಣೆಯಲ್ಲಿದ್ದ ಗಿಲ್ಡ್‌ಗಳಿಗೆ ಪರ್ಯಾವಾಗಿ ರೂಪುಗೊಂಡ ಅಕಾಡಮಿಗಳು. ಈ ಅಕಾಡಮಿಗಳ ಮುಖ್ಯ ಆಶಯ ಜಾತ್ಯತೀತ ಕಲಿಕೆ ಮತ್ತು ಜ್ಞಾನಾರ್ಜನೆಯೇ ಆಗಿದ್ದಿತು. ಸ್ವಾತಂತ್ರಾನಂತರ ಭಾರತದಲ್ಲಿ ಈ ಪರಿಕಲ್ಪನೆಯನ್ನೇ ಮಾದರಿಯಾಗಿಟ್ಟುಕೊಂಡು ಅಕಾಡಮಿಗಳನ್ನು ಸ್ಥಾಪಿಸಲಾಯಿತು. ಐವತ್ತರ ದಶಕದಲ್ಲಿ ಸಾಕಾರಗೊಂಡ ಈ ಅಕಾಡಮಿಗಳು ಕೇಂದ್ರ ಸರಕಾರದ ಮೊದಲಿನ ಶಿಕ್ಷಣ ಸಚಿವಾಲಯ ಹಾಗೂ ಈಗಿನ ಮಾನವ ಸಂಪನ್ಮೂಲ ಸಚಿವಾಲಯಗಳ ಅಡಿ ಕೆಲಸ ಮಾಡುತ್ತವೆಯಾದರೂ ಅವು ಸ್ವಾಯತ್ತ ಸಂಸ್ಥೆಗಳು. ಭಾರತೀಯ ಸಂಸ್ಕೃತಿ ಪೋಷಣೆ ಮತ್ತು ಸಾಹಿತ್ಯ-ಕಲೆ-ಸಂಗೀತ- ನಾಟಕ ಮೊದಲಾದವುಗಳ ಮುಖ್ಯ ಧ್ಯೇಯವಾಗುಳ್ಳ ಕೇಂದ್ರ ಅಕಾಡಮಿ ಗಳು ಶುರುವಿನಲ್ಲಿ ಸಾಂಸ್ಕೃತಿಕ ಪರಂಪರೆಯನ್ನು ಪೋಷಿಸಿ ಬೆಳೆಸುವ ಸಂಸ್ಥೆಯೆಂಬ ಛಾಪನ್ನು ಮೂಡಿಸಿದವಾದರೂ ಕ್ರಮೇಣ ಸ್ವಾಯತ್ತೆ ಎಂಬುದು ನಾಮ ಮಾತ್ರವಾಗಿ ಅವು ಅಧಿಕಾರಶಾಹಿಯ ಕಪಿಮುಷ್ಟಿಗೆ ಸಿಕ್ಕಿ ಸರಕಾರದ ವಿಸ್ತೃತ ಶಾಖೆಗಳಾದವು. ಅಕಾಡಮಿಗಳು ಬಹುರೂಪಿ ಸಾಂಸ್ಕೃತಿಕ ಚಟುವಟಿಕೆಗಳ ಪಾಲನೆ-ಪೋಷಣೆ-ಅಭಿವೃದ್ಧಿ ಕಾರ್ಯವನ್ನು ಸಮರ್ಥವಾಗಿ ನಿರ್ವಹಿಸುತ್ತಿಲ್ಲವೆಂಬ ದೂರುಗಳು ಕೇಳಿ ಬಂದವು. ಅಕಾಡಮಿಗಳ ಕಾರ್ಯವೈಖರಿಯ ಅಧ್ಯಯನ ಮತ್ತು ಸುಧಾರಣೆ ಕುರಿತು ಪರ್ಯಾಲೋಚಿಸಿ ಶಿಫಾರಸು ಮಾಡಲು ಸರಕಾರ ಹಕ್ಸರ್ ಸಮಿತಿಯನ್ನು ನೇಮಿಸಿದ್ದು ಹಾಗೂ ಆ ಸಮಿತಿಯ ಶಿಫಾರಸುಗಳು ಮೂಲೆಗುಂಪಾದದ್ದು ಈಗ ಇತಿಹಾಸ.

 ಕೇಂದ್ರ ಸಾಹಿತ್ಯ ಅಕಾಡಮಿಯ ಅಧ್ಯಕ್ಷರನ್ನು ವಿವಿಧ ಭಾಷೆಗಳ ಪ್ರತಿನಿಧಿ ಸದಸ್ಯರುಗಳನ್ನೊಳಗೊಂಡ ಜನರಲ್ ಕೌನ್ಸಿಲ್ ಚುನಾವಣೆ ಮೂಲಕ ಆಯ್ಕೆ ಮಾಡುತ್ತದೆ. ಇದೊಂದು ಪ್ರಜಾಸತ್ತಾತ್ಮಕ ವಿಧಾನ. ಸಂಗೀತ-ನೃತ್ಯ ಹಾಗೂ ಲಲಿತ ಕಲಾ ಅಕಾಡಮಿಗಳ ಅಧ್ಯಕ್ಷರನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವ ಶಾಖೆಯ ಶಿಫಾರಸಿನನ್ವಯ ರಾಷ್ಟ್ರಪತಿ ನೇಮಕ ಮಾಡುತ್ತಾರೆ. ಸಾಹಿತ್ಯ ಅಕಾಡಮಿಯ ಅಧ್ಯಕ್ಷರೂ ಈ ರೀತಿ ಮೇಲಿನಿಂದ ಹೇರಲ್ಪಟ್ಟ ರಾಜಕೀಯ ನೇಮಕವಾಗದಿರುವುದು ಒಂದು ಸಮಾಧಾನದ ಸಂಗತಿ. ಚುನಾಯಿತ ಅಧ್ಯಕರು ರಾಜಕೀಯ ಹಂಗುಗಳ ಮುಲಾಜಿಲ್ಲದೆ ಸ್ವಾಯತ್ತೆಯಿಂದ ಕೆಲಸ ಮಾಡಲು ಮುಕ್ತರಿರುತ್ತಾರೆ. ಇದು ಕಂಬಾರರ ಆಯ್ಕೆಯಲ್ಲಿನ ಧನಾತ್ಮಕ ಅಂಶ.

  ಕೇಂದ್ರ ಸಾಹಿತ್ಯ ಅಕಾಡಮಿಯು ಪ್ರಶಸ್ತಿಗಳ ವಿತರಣೆ, ಫೆಲೋಶಿಪ್ ನೀಡಿಕೆ, ವಿವಿಧ ಭಾರತೀಯ ಭಾಷೆಗಳ ಸಾಹಿತ್ಯ ಕುರಿತ ವಿಚಾರಸಂಕಿರಣ, ಕವಿಗೋಷ್ಠಿಗಳನ್ನು ನಡೆಸುವುದು, ವಿವಿಧ ಭಾರತೀಯ ಭಾಷೆಗಳ ಪುಸ್ತಕಗಳ ಅನುವಾದ, ಪುಸ್ತಕಗಳ ಪ್ರಕಟನೆ ಮೊದಲಾದ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಸಾಹಿತ್ಯ ಅಕಾಡಮಿಯ ಪ್ರಾದೇಶಿಕ ಕಚೇರಿಗಳನ್ನು ಹೊಂದಿದ್ದು ಈ ಕಚೇರಿಗಳ ಮೂಲಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಇಷ್ಟರಮಟ್ಟಿಗೆ ಸಾಹಿತ್ಯ ಅಕಾಡಮಿಯ ಅಧಿಕಾರ ಮತ್ತು ಕಾರ್ಯಕ್ರಮಗಳ ವಿಕೇಂದ್ರೀಕರಣವಾಗಿದೆ.

 ಪ್ರಶಸ್ತಿ, ಫೆಲೋಶಿಪ್, ಬಹುಮಾನಗಳು, ಪುಸ್ತಕ ಅನುವಾದ/ಪ್ರಕಟನೆ ಎಂದಾಗ ಭಾರತದಂಥ ಬಹುಸಂಸ್ಕೃತಿ ಮತ್ತು ಬಹು ಭಾಷಾ ಸಮೃದ್ಧಿಯುಳ್ಳ ರಾಷ್ಟ್ರದಲ್ಲಿ ಅಸಮಾಧಾನಗಳನ್ನು/ದೂರುಗಳನ್ನು ತಳ್ಳಿಹಾಕುವಂತಿಲ್ಲ. ಕೇಂದ್ರ ಸಾಹಿತ್ಯ ಅಕಾಡಮಿಯೂ ಇದಕ್ಕೆ ಅಪವಾದವಲ್ಲ. ಪ್ರಶಸ್ತಿಗಳಿಗೆ ಪುಸ್ತಕಗಳ ಆಯ್ಕೆಯಲ್ಲಿ ಉನ್ನತ ಗುಣಮಟ್ಟ-ಮೌಲ್ಯಗಳನ್ನು ಎತ್ತಿಹಿಡಿಯಬೇಕಾದ ಎಲ್ಲ ನಿಯಮಗಳನ್ನೂ ಗಾಳಿಗೆ ತೂರಲಾಗಿದೆ ಎಂದು ಕೆಲಕಾಲದ ಹಿಂದೆ ವಿವಿಧ ಪ್ರಾದೇಶಿಕ ಭಾಷೆಗಳ ಅರವತ್ತೇಳು ಮಂದಿ ಸಾಹಿತಿಗಳು ದೂರಿದ್ದುಂಟು. ಜೊತೆಗೆ ವ್ಯವಸ್ಥೆಯೊಳಗಣ ನ್ಯೂನತೆ, ಅಶಿಸ್ತುಗಳಿಂದಾಗಿ ಸಾಹಿತಿಗಳೂ ಪ್ರಶಸ್ತಿಗಾಗಿ ಪ್ರಭಾವ/ವಶೀಲಿಬಾಜಿ ನಡೆಸುವಂಥ ಪರಿಸ್ಥಿತಿ ನಿರ್ಮಾಣವಾದಲ್ಲಿ ಅರ್ಹತೆಯುಳ್ಳ ಅತ್ಯುತ್ತಮ ಕೃತಿಗಳೂ ಪ್ರಶಸ್ತಿಯಿಂದ ವಂಚಿತವಾಗುವ ಸಾಧ್ಯತೆಯುಂಟು. ಇತ್ತೀಚಿನ ವರ್ಷಗಳಲ್ಲಿ ಕನ್ನಡದ ಒಂದು ಕೃತಿ ಹೀಗೆ ಪ್ರಶಸ್ತಿಯಿಂದ ವಂಚಿತವಾದ ನಿದರ್ಶನವುಂಟು. ಆಸೆ, ಹಂಬಲಗಳಂಥ ಮಾನವ ಸಹಜ ದೌರ್ಬಲ್ಯಗಳಿಂದ ಸಾಹಿತಿಗಳು ಮುಕ್ತರಾಗಿರಬೇಕು, ಅವರು ಪ್ರಭಾವ/ವಶೀಲಿಬಾಜಿಯಂಥ ನೈಚ್ಯಾನುಸಂಧಾನಕ್ಕಿಳಿಯಬಾರದು ಎಂಬುದು ಇವತ್ತಿನ ಕಾಲಮಾನದಲ್ಲಿ ಅತಿಯಾದ ನಿರೀಕ್ಷೆಯಾಗುತ್ತದೆ. ಆದರೆ ಅಕಾಡಮಿಯ ಕೆಲಸಕಾರ್ಯಕಾರ್ಯಗಳಲ್ಲಿ ಇಂಥ ನಡವಳಿಕೆಗೆ ಇಂಬಾಗುವಂತಹ ಲೋಪದೋಷಗಳಿರಬಾರದೆಂದು ನಿರೀಕ್ಷಿಸುವುದು ಅತಿಯಾಗದು.

 ಚಂದ್ರಶೇಖರ ಕಂಬಾರರಿಗೆ ಇದೆಲ್ಲ ತಿಳಿಯದ ವಿಷಯವೇನಲ್ಲ. ಅಕಾಡಮಿಯೂ ಅವರಿಗೆ ಹೊಸದಲ್ಲ. 1980ರಿಂದ 1983ರವರೆಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿ ಸದಸ್ಯರಾಗಿಯೂ 1983ರಿಂದ 1986ರವರೆಗೆ ಕರ್ನಾಟಕ ನಾಟಕ ಅಕಾಡಮಿ ಅಧ್ಯಕ್ಷರಾಗಿಯೂ ಕೆಲಸಮಾಡಿದ ಅನುಭವ ಕಂಬಾರರಿಗಿದೆ. 1988ರಂದ1991ರವರೆಗೆ ಕೇಂದ್ರ ಸಾಹಿತ್ಯ ಅಕಾಡಮಿ ಸದಸ್ಯರಾಗಿದ್ದ ಅವರು ನಿಕಟಪೂರ್ವ ಉಪಾಧ್ಯಕ್ಷರೂ ಹೌದು. ಹೀಗೆ ಕಂಬಾರರು ಅಕಾಡಮಿಗಳ ಒಳಹೊರಗುಗಳನ್ನು ಬಲ್ಲವರು. ಮಿಗಿಲಾಗಿ ಎರಡು ಅವಧಿಗೆ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಅದನ್ನು ಕೇವಲ ಪದವಿಗಳನ್ನು ಕೊಡುವ ವಿಶ್ವವಿದ್ಯಾನಿಲಯವನ್ನಾಗಿಸದೆ ಕನ್ನಡ ಸಂಶೋಧನಾ ಕೇಂದ್ರವಾಗಿ ಬೆಳೆಸಿದ ಕೀರ್ತಿಯ ಕಂಬಾರರಿಗೆ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಆಡಳಿತದಲ್ಲಿ ಶ್ರೇಷ್ಠತೆಯನ್ನು ಗುರುತಿಸುವ, ಅಸಮತೆ-ಅನ್ಯಾಯಗಳನ್ನು ನೀಗಿಸುವ ತಾರತಮ್ಯ ಜ್ಞಾನವೂ, ಅಪಾರವಾದ ಅನುಭವವೂ ಇದೆ. ಇದರಿಂದ ಕೇಂದ್ರ ಸಾಹಿತ್ಯ ಅಕಾಡಮಿಯ ಒಳಿತಿಗೆ ಲಾಭವಾಗಲಿದೆ ಎಂದು ಹೇಳಬಹುದು.

  ಸಂವಿಧಾನದ ಮಾನ್ಯತೆ ಪಡೆದಿರುವ ಎಲ್ಲ ಭಾರತೀಯ ಭಾಷೆಗಳ ರಕ್ಷಣೆ, ಅಭಿವೃದ್ಧ್ಧಿ, ಸಾಹಿತಿಗಳ ಹಿತರಕ್ಷಣೆ ಕೇಂದ್ರ ಸಾಹಿತ್ಯ ಅಕಾಡಮಿಯ ಮುಖ್ಯ ಹೊಣೆಗಾರಿಕೆಯಾಗಿದೆ. ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳ ಪ್ರಾಬಲ್ಯಗಳು ಮತ್ತು ಆಮಿಷಗಳಿಂದಾಗಿ ಪ್ರದೇಶ ಭಾಷೆಗಳು ಅಳಿವಿನ ಅಪಾಯ ಎದುರಿಸುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಹಾಗೂ ದೇಶದಲ್ಲಿನ ಅಸಹಿಷ್ಣುತೆಯ ವಾತಾವರಣದಿಂದಾಗಿ ಕಂಬಾರರ ಹೊಣೆ ಈಗ ಇನ್ನಷ್ಟು ಹೆಚ್ಚಾಗಿದೆ. ಕಂಬಾರರಿಗೆ ಇದರ ಅರಿವಿದೆ. ಎಂದೇ ಎಲ್ಲ ಭಾಷೆಗಳಿಗೂ ಸಮಾನಸ್ಥಾನಮಾನ ನೀಡುವ ಮೂಲಕ ಸಾಹಿತ್ಯ ಅಕಾಡಮಿಯನ್ನು ಸರ್ವಭಾಷಾ ಸರಸ್ವತಿಯ ದೇಗುಲವನ್ನಾಗಿಸುವ ಮಹತ್ವಾಕಾಂಕ್ಷೆ ಅವರದು. ಪ್ರಖ್ಯಾತ ಲೇಖಕರಾಗಿ ನಾಡಿನ ಉದ್ದಗಲ ಸಾಹಿತಿ ಮಿತ್ರರನ್ನು ಹೊಂದಿರುವ ಕಂಬಾರರಿಗೆ ಅಸಹಿಷ್ಣುತೆಯನ್ನು ತಗ್ಗಿಸುವುದು, ಸರ್ವಭಾಷಾ ಸಮಾನತೆ-ಸಮನ್ವಯ ಸಾಧಿಸುವುದು ಕಷ್ಟದ ಕೆಲಸವಾಗಬಾರದು. ಅಂತೆಯೇ ಮಾತೃಭಾಷೆ ಪ್ರಾಥಮಿಕ ಹಂತದಲ್ಲಿ ಶಿಕ್ಷಣ ಮಾಧ್ಯಮವಾಗಬೇಕೆಂದು ರಾಷ್ಟ್ರಪತಿ, ಪ್ರಧಾನ ಮಂತ್ರಿಯವರಿಗೆ ಮನವಿ ಸಲ್ಲಿಸಿರುವ ಅವರಿಗೆ ಹೊಸ ಹೊಣೆಗಾರಿಕೆ ಪ್ರದೇಶ ಭಾಷಿಕರ ಈ ಎಲ್ಲ ಆಶಯಗಳನ್ನು ಈಡೇರಿಸುವ ನಿಟ್ಟಿನ ಕಾರ್ಯಭಾರದಲ್ಲಿ ಸಹಾಯಕವಾಗಬೇಕು.

ಕಂಬಾರರು ಸಾಹಿತ್ಯ ಅಕಾಡಮಿಯ ಉಪಾಧ್ಯಕ್ಷರಾಗಿ, ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ದಕ್ಷಿಣ ಪ್ರಾದೇಶಿಕ ಕೇಂದ್ರದ ಸಂಚಾಲಕರಾಗಿದ್ದ ನಿಕಟಪೂರ್ವ ಅಧಿಕಾರಾವಧಿಯಲ್ಲಿ ನರಹಳ್ಳಿಯವರ ಪ್ರಯತ್ನದಿಂದಾಗಿ ಬೆಂಗಳೂರು ವಿಶ್ವವಿದ್ಯಾನಿಲಯದ ಸಮೀಪ ನಿವೇಶನವೊಂದು ಮಂಜೂರಾಗಿರುವುದು ಸರಿಯಷ್ಟೆ. ಕಂಬಾರರ ಅಧ್ಯಕ್ಷತೆಯ ಅವಧಿಯಲ್ಲಿ ಈ ನಿವೇಶನದಲ್ಲಿ ದಕ್ಷಿಣ ಪ್ರಾದೇಶಿಕ ಕೇಂದ್ರದ ಭವನ ನಿರ್ಮಾಣಗೊಂಡು ಅಲ್ಲೊಂದು ಸುಸಜ್ಜಿತ ಆಕರ ಗ್ರಂಥಾಲಯ ಸ್ಥಾಪನೆ ಜರೂರಾಗಿ ಆಗಬೇಕಾಗಿದೆ ಎಂಬುದು ಸಾಹಿತ್ಯದ ಅಭ್ಯಾಸಿಗಳ ಆಶಯ.

Writer - ಜಿ.ಎನ್. ರಂಗನಾಥ ರಾವ್

contributor

Editor - ಜಿ.ಎನ್. ರಂಗನಾಥ ರಾವ್

contributor

Similar News