ಆಸೀಸ್ ಆಟಗಾರರು ವಂಚಕರು, ಜನಾಂಗೀಯವಾದಿಗಳು ಎಂದಾದರೆ ನಾವೇನು ಸಭ್ಯರೇ?
ರಾಜ್ಯ ಮತ್ತು ರಣಜಿ ತಂಡಗಳ ಮಟ್ಟದಲ್ಲಿ ಕಟ್ಟುನಿಟ್ಟು ಇರುತ್ತದೆಯೇ ಎಂದು ನನಗೆ ಅಷ್ಟು ಗೊತ್ತಿಲ್ಲ. ಏಕೆಂದರೆ ನಾನು ಆ ಹಂತದಲ್ಲಿ ಆಡಿಲ್ಲ. ಆದರೆ ರಾಜ್ಯ ಮಟ್ಟಕ್ಕಿಂತ ಒಂದೇ ಹಂತ ಕೆಳಗಿರುವ ಕ್ಲಬ್ ತಂಡಗಳಲ್ಲಿ ವಂಚಕ ಹಾಗು ಚೆಂಡು ವಿರೂಪಗೊಳಿಸುವ ಆಟಗಾರರ ಪಡೆಯೇ ಇರುತ್ತದೆ. 90ರ ಹಾಗು 2000 ದ ಪ್ರಾರಂಭದ ವರ್ಷಗಳಲ್ಲಿ ನಾನು ಬೆಂಗಳೂರಿನಲ್ಲಿ ಲೋವರ್ ಡಿವಿಜನ್ ಕ್ಲಬ್ ಕ್ರಿಕೆಟ್ ತಂಡಗಳಲ್ಲಿ ಆಡುವಾಗ ಇದು ಅತ್ಯಂತ ಸರ್ವೇ ಸಾಮಾನ್ಯವಾಗಿತ್ತು.
ನಮ್ಮ ತಂಡದ ನಾಯಕನಾಗಿದ್ದು ಬಳಿಕ ಕೆಪಿಎಲ್ ನಲ್ಲಿ ಆಡಿದ ಆಟಗಾರ ನಮಗೆ ಸೆಂಟರ್ ಫ್ರೆಶ್ ಚೀವಿಂಗ್ ಗಮ್ ಸಾಕಷ್ಟು ಇಟ್ಟುಕೊಳ್ಳಿ ಎಂದು ಹೇಳುತ್ತಿದ್ದ. ಆ ಚೀವಿಂಗ್ ಗಮ್ ಒಳಗಿದ್ದ ಜೆಲ್ ಬಳಸಿ ಚೆಂಡನ್ನು ಪಾಲಿಶ್ ಮಾಡಲಾಗುತ್ತಿತ್ತು. ಸುಮಾರು 10 ಓವರ್ ಗಳ ಬಳಿಕ ಹೀಗೆ ಪಾಲಿಶ್ ಮಾಡಿದ ಚೆಂಡು ಇದ್ದಕ್ಕಿದ್ದಂತೆ ವಿಕೆಟ್ ನಿಂದ ಅತ್ತಿತ್ತ ಓಡುತ್ತಿತ್ತು. ಸಾಮಾನ್ಯವಾಗಿ ಕ್ಲಬ್ ಕ್ರಿಕೆಟ್ ಆಡುವ ಮ್ಯಾಟ್ ವಿಕೆಟ್ ಗಳಲ್ಲಿ ಇಲ್ಲದಿದ್ದರೆ ಚೆಂಡು ಹಾಗೆ ತಿರುಗಲು ಸಾಧ್ಯವೇ ಇಲ್ಲ. ಈ ಬಗ್ಗೆ ಅಂಪೈರ್ ಗಳಿಗೂ ಯಾವತ್ತೂ ಯಾವುದೇ ಸಂಶಯ ಬಂದೇ ಇಲ್ಲ ಯಾಕೆ ಎಂದು ನನಗೆ ಗೊತ್ತಾಗಿಲ್ಲ.
ರಾಷ್ಟ್ರೀಯ ತಂಡಕ್ಕೆ ಆಡಿರುವ ನಮ್ಮ ಒಬ್ಬ ಕೋಚ್ ಗೆ ಈ ಕಳ್ಳಾಟದ ಬಗ್ಗೆ ಗೊತ್ತಿದ್ದರೂ ಅವರು ಈ ಬಗ್ಗೆ ಏನೂ ಮಾಡಲಿಲ್ಲ. ಅದಿರಲಿ. ಈಗ ಭಾರತೀಯರು ಈಗ ಆಸೀಸ್ ಆಟಗಾರರ ಬಗ್ಗೆ ಇಷ್ಟೊಂದು ತಲೆಕೆಡಿಸಿಕೊಂಡಿರುವುದು ಯಾಕೆ ಎಂದು ನನಗೆ ಅರ್ಥವಾಗಿಲ್ಲ. ಅವರನ್ನು ವಂಚಕರು , ಜನಾಂಗೀಯವಾದಿಗಳು ಎಂದು ಜರೆಯುತ್ತಿದ್ದಾರೆ ನಮ್ಮವರು. ಆಂಡ್ರೂ ಸೈಮಂಡ್ಸ್ ಗೆ ನಮ್ಮ ಹರ್ಭಜನ್ ಸಿಂಗ್ ಎಷ್ಟು ಕೆಟ್ಟದಾಗಿ ಮಾತನಾಡಿದ್ದಾನೆ ಎಂದು ನಮ್ಮ ಜನರು ಅಷ್ಟು ಬೇಗ ಮರೆತು ಬಿಟ್ಟರೆ ?, ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ಚೆಂಡು ವಿರೂಪಗೊಳಿಸಿ ಸಿಕ್ಕಿ ಬಿದ್ದಾಗ ನಮ್ಮ ಜನರು ಹೇಗೆ ಕುರುಡಾಗಿ ಅವರಿಬ್ಬರನ್ನು ಬೆಂಬಲಿಸಿದರು ಎಂಬುದೂ ಮರೆತು ಹೋಯಿತೇ?, ಕಪಿಲ್ ದೇವ್ ಹಾಗು ಸುನಿಲ್ ಗವಾಸ್ಕರ್ ವಿರುದ್ಧದ ಮ್ಯಾಚ್ ಫಿಕ್ಸಿಂಗ್ ನ ಗಂಭೀರ ಆರೋಪಗಳ ಬಗ್ಗೆ ಯಾವುದೇ ಸೂಕ್ತ ತನಿಖೆಯೇ ಆಗಿಲ್ಲ ಎಂಬುದೂ ಮರೆತು ಹೋಯಿತೇ ?
ಎಲ್ಲಕ್ಕಿಂತ ಮುಖ್ಯವಾಗಿ , ಬಿಳಿಯರ ತಂಡಗಳನ್ನು ಜನಾಂಗೀಯವಾದಿಗಳು ಎಂದು ಹೇಳುವಾಗ ಈವರೆಗಿನ ಭಾರತೀಯ ಕ್ರಿಕೆಟ್ ತಂಡಗಳು ವಿಶ್ವದಲ್ಲೇ ಅತ್ಯಂತ ಕಡಿಮೆ ವೈವಿಧ್ಯತೆಯಿಂದ ಕೂಡಿದವು ಎಂಬುದನ್ನು ನಮ್ಮ ಜನರು ನಿರ್ಲಕ್ಷಿಸಿ ಬಿಡುತ್ತಾರೆ.
ಎಂಥ ಸೋಗಲಾಡಿಗಳು ನಮ್ಮ ಜನರು ?
(ಲೇಖಕರ ಇಂಗ್ಲಿಷ್ ಫೇಸ್ ಬುಕ್ ಪೋಸ್ಟ್ ನ ಕನ್ನಡ ಅನುವಾದ ಇದು. ಅವರ ಫೇಸ್ ಬುಕ್ ಪೋಸ್ಟ್ ಕೆಳಗಿದೆ)