ಪೆಟ್ರೋಲ್ ಬೆಲೆ ಏರಿಕೆ ಮತ್ತು ಮೂಕ ಸರಕಾರ

Update: 2018-04-05 18:26 GMT

2014ರ ಸುಂಟರಗಾಳಿ ಪ್ರಚಾರ ಕಾಲದ ಮೋಡಿ ಮಾಡುವ ಮಾತುಗಳಿಗೆ ಬೇಸ್ತುಬಿದ್ದ ಅಮಾಯಕ ಮೋದಿಯ ಭಕ್ತರು ಅಂದು ಎಲ್ಲರೊಂದಿಗೆ ‘‘ನಮ್ಮ ಮೋದಿ ಸರಕಾರ ಅಧಿಕಾರಕ್ಕೆ ಬರಲಿ, ಆಗ ನೋಡಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲಗಳು ಹೇಗೆ ಪೈಸೆಗಳ ಲೆಕ್ಕದಲ್ಲಿ ಸಿಗಲಿವೆೆ’’ ಎಂದು ಕೊಚ್ಚುತ್ತಿದ್ದರು. ಈಗ? ಒಂದು ಕಡೆ ಸಬ್ಸಿಡಿಯೂ ಮಾಯವಾಗಿ, ಇನ್ನೊಂದು ಕಡೆ ಬೆಲೆಗಳೂ ಗಗನಕ್ಕೇರಿರುವ ಇವತ್ತಿನ ಸನ್ನಿವೇಶದಲ್ಲಿ ಇವರ ಅಡ್ರೆಸ್ಸೇ ಇಲ್ಲವಾಗಿದೆ.

2014ರ ಚುನಾವಣೆಗಳ ಕಾಲದಲ್ಲಿ ಗಾರುಡಿಗನ ಟೋಪಿಯಿಂದ ಹೊರಬರುವ ರೀತಿಯಲ್ಲಿ ಮೋದಿಯವರ ಬಾಯಿಯಿಂದ ಉದುರಿದ ನಾನಾ ಭರವಸೆಗಳನ್ನು ಅಕ್ಷರಶಃ ನಂಬಿ ಬಿಜೆಪಿಯನ್ನು ಗೆಲ್ಲಿಸಿದವರೆಲ್ಲ ಇಂದು ತಮ್ಮ ನಿರೀಕ್ಷೆಗಳೆಲ್ಲವೂ ನುಚ್ಚುನೂರಾಗಿರುವುದನ್ನು ಕಾಣುತ್ತಿದ್ದಾರೆ. ಮೋದಿ ಸರಕಾರದ ವೈಫಲ್ಯಗಳು ಒಂದೊಂದಾಗಿ ಎದ್ದುಕಾಣತೊಡಗಿವೆ. ಸುಮಾರು ನಾಲ್ಕು ವರ್ಷಗಳ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ ಎಂದಿನ ಹಾಗೆ ಮುಂದುವರಿದಿರುವುದನ್ನು; ನೋಟು ರದ್ದತಿ, ಜಿಎಸ್‌ಟಿ, ಆಧಾರ್ ಮುಂತಾದ ಯೋಜನೆಗಳು ಬಡವರನ್ನು ಹಿಂಡಿಹಿಪ್ಪೆಮಾಡಿರುವುದನ್ನು; ಉಳ್ಳವರ ಸಂಪತ್ತಿನಲ್ಲಿ ಅಪಾರ ಅಭಿವೃದ್ಧಿ ಆಗಿರುವುದನ್ನು; ಕಾರ್ಪೊರೇಟ್ ಕುಳಗಳು ಸಲೀಸಾಗಿ ಬ್ಯಾಂಕುಗಳಿಗೆ ಟೋಪಿ ಹಾಕಿ ವಿದೇಶಕ್ಕೆ ಪಲಾಯನ ಮಾಡುತ್ತಿರುವುದನ್ನು; ಬ್ಯಾಂಕುಗಳಿಗಾದ ನಷ್ಟವನ್ನು ಅಂತಿಮವಾಗಿ ಜನರೇ ಭರಿಸಬೇಕಾಗಿರುವುದನ್ನು; ಉಗ್ರರ ದಾಳಿಗಳ ಪ್ರಮಾಣದಲ್ಲಿ ಹಿಂದಿಗಿಂತ ಹಲವು ಪಟ್ಟು ಏರಿಕೆಯಾಗಿರುವುದನ್ನು; ನಿರುದ್ಯೋಗ ಸಮಸ್ಯೆ ದೈತ್ಯಾಕಾರ ತಾಳಿರುವುದನ್ನು; ದಲಿತರು ಮತ್ತು ಅಲ್ಪಸಂಖ್ಯಾತರ ಮೇಲಿನ ಮಾರಣಾಂತಿಕ ಹಲ್ಲೆಗಳಲ್ಲಿ ಅಪಾರ ಹೆಚ್ಚಳ ಆಗಿರುವುದನ್ನು ನೋಡಿ, ಅನುಭವಿಸಿದ ಜನರು ಬೆಚ್ಚಿಬಿದ್ದಿದ್ದಾರೆ. ದ್ವೇಷ ಮತ್ತು ಹಿಂಸಾಚಾರಗಳನ್ನು ಸಂಭ್ರಮಿಸಿ ಕೇಕೆಹಾಕುವ ಮನೋರೋಗಿ ಸಂಘಪರಿವಾರಿಗರ ಅಟ್ಟಹಾಸಕ್ಕೆ ದಲಿತರು ಮತ್ತು ಅಲ್ಪಸಂಖ್ಯಾತರು ತತ್ತರಿಸಿಹೋಗಿದ್ದಾರೆ.

ಭ್ರಷ್ಟಾಚಾರ, ಕಪ್ಪುಹಣ, ನಿರುದ್ಯೋಗ, ಉಗ್ರರ ದಾಳಿ, ಇಂಧನ ಬೆಲೆಗಳೇ ಮೊದಲಾದ ನೂರಾರು ಸಮಸ್ಯೆಗಳನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ನಿವಾರಿಸಿ ಭಾರತವನ್ನು ಸ್ವರ್ಗಲೋಕವಾಗಿಸುವೆ ಎಂಬರ್ಥದ ಚಮತ್ಕಾರಿ ಮಾತುಗಳು ಜನರನ್ನು ಮೊದಲಿನ ಹಾಗೆ ಮರುಳುಗೊಳಿಸುತ್ತಿಲ್ಲ. ಮೋದಿ ಸರಕಾರ ತ್ರಿವಳಿ ತಲಾಖ್ ಕಾಯ್ದೆಯಲ್ಲಿ ಜೈಲು ಶಿಕ್ಷೆಗೆ ಅವಕಾಶ ಒದಗಿಸಿರುವುದು ಅಸಲಿಗೆ ಮುಸ್ಲಿಂ ಸಮುದಾಯದ ಮೇಲಿನ ಪ್ರಹಾರವೇ ಆಗಿದೆ. ತೀರಾ ಇತ್ತೀಚಿನ ಘಟನೆಯಲ್ಲಿ ಮೊದಲಿಗೆ ದಲಿತ ದೌರ್ಜನ್ಯ ಕಾಯ್ದೆಯ ದುರ್ಬಳಕೆಯನ್ನು ತಡೆಯುವ ಅಗತ್ಯವಿದೆಯೆಂದು ಸುಪ್ರೀಂ ಕೋರ್ಟಿಗೆ ಹೇಳಿದ ಮೋದಿ ಸರಕಾರ, ತೀರ್ಪಿನ ನಂತರ ನಡೆದ ವ್ಯಾಪಕ ಪ್ರತಿಭಟನೆಗಳಿಗೆ ಬೆದರಿ ಉಲ್ಟಾ ಹೊಡೆದಿದೆ. ಆದರೆ ಸದ್ಯಕ್ಕೆ ಅದು ಹಿಂಲಾಗ ಹಾಕಿರುವಂತೆ ತೋರುತ್ತಿದೆಯಾದರೂ, ಅಂಬೇಡ್ಕರರನ್ನು ತನ್ನ ಸರಕಾರ ಗೌರವಿಸಿದಷ್ಟು ಇನ್ಯಾವ ಸರಕಾರವೂ ಗೌರವಿಸಿಲ್ಲ ಎಂಬ ಖೊಟ್ಟಿ ಹೇಳಿಕೆಯ ಹೊರತಾಗಿಯೂ ಒಳಗೊಳಗೆ ಅದರ ದಲಿತ ವಿರೋಧಿ ಮನೋಸ್ಥಿತಿಯಲ್ಲಿ ಬದಲಾವಣೆ ಆಗಿಲ್ಲವೆಂಬುದರಲ್ಲಿ ಅನುಮಾನ ಬೇಡ. ಮೋದಿಯ ಭರವಸೆಗಳ ಪೊಳ್ಳುತನವನ್ನು ಸಂಪೂರ್ಣವಾಗಿ ಬಯಲಿಗೆಳೆಯುವ ಇತ್ತೀಚಿನ ಜ್ವಲಂತ ಬೆಳವಣಿಗೆಯೆಂದರೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ವಿಷಯ. ಮೋದಿ ಸರಕಾರದ ಕೃಪೆಯಿಂದಾಗಿ ಮೊನ್ನೆ (ಏಪ್ರಿಲ್ 4, 2018) ದಿಲ್ಲಿಯಲ್ಲಿ ಪೆಟ್ರೋಲಿನ ದರ ರೂ 73.73ಕ್ಕೆ ಏರಿದೆ! ಸ್ವಾರಸ್ಯಕರವಾಗಿ ಮೇ 2012ರಲ್ಲಿ ಅಲ್ಲಿ ಪೆಟ್ರೋಲಿನ ಬೆಲೆ ಇದಕ್ಕಿಂತ ಕಡಿಮೆ ಇತ್ತು - ರೂ. 73.18ರಷ್ಟಿತ್ತು!!

ಮೇ 2012ರಲ್ಲಿ ಪರಿಸ್ಥಿತಿ ಹೇಗಿತ್ತು? ಅಂದು ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳಲ್ಲಿ ಶೇಕಡಾ 14.5ರಷ್ಟು ಏರಿಕೆಯಾಗಿತ್ತು. ಅದೇ ವೇಳೆ ರೂಪಾಯಿ ಮೌಲ್ಯದಲ್ಲಿ ಶೇಕಡಾ 3.2ರಷ್ಟು ಇಳಿಕೆಯಾಗಿತ್ತು. ಆಗ ಯುಪಿಎ ಸರಕಾರ ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆಗಳಲ್ಲಿ ಅತ್ಯಧಿಕ ಹೆಚ್ಚಳಕ್ಕೆ ಅನುಮೋದನೆ ನೀಡಿತು. ಪರಿಣಾಮವಾಗಿ ನೋಡನೋಡುತ್ತಿದ್ದಂತೆ ಪೆಟ್ರೋಲ್ ಬೆಲೆ ಲೀಟರಿಗೆ ರೂ. 7.54ರಷ್ಟು ಏರಿತು. ದೇಶದ ರಾಜಧಾನಿ ದಿಲ್ಲಿಯಲ್ಲಿ ಜನ ಒಂದು ಲೀಟರ್ ಪೆಟ್ರೋಲ್ ಖರೀದಿಸಲು ರೂ. 73.18ರಷ್ಟು ವೆಚ್ಚ ಮಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಅಂದು ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ಮೋದಿ ಇಂತಹ ಅವಕಾಶಗಳಿಗಾಗಿ ತುದಿಗಾಲಿನಲ್ಲಿ ನಿಂತಿದ್ದರು. 2012ರ ಮೇ 23ರಂದು ಅವರು ಬೆಲೆ ಏರಿಕೆಯನ್ನು ಅತ್ಯಂತ ಕಟುವಾಗಿ ಟೀಕಿಸುತ್ತಾ, ‘‘ಇದು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ವೈಫಲ್ಯಕ್ಕೆ ಅತ್ಯುತ್ತಮ ನಿದರ್ಶನ. ಇದರಿಂದಾಗಿ ಗುಜರಾತ್ ರಾಜ್ಯದ ಮೇಲೆ ನೂರಾರು ಕೋಟಿ ರೂಪಾಯಿಗಳ ಹೊರೆ ಬೀಳಲಿದೆ’’ ಎಂದು ಟ್ವೀಟ್ ಮಾಡಿದರು. ಮುಂದೆ ಚುನಾವಣಾ ಪ್ರಚಾರ ಭಾಷಣವೊಂದರಲ್ಲಿ ತನ್ನ ಎಂದಿನ, ಆದರೆ ಇಂದು ಹಳಸಿರುವ, ಜಿಹ್ವಾಪಟುತ್ವವನ್ನು ಪ್ರದರ್ಶಿಸುತ್ತಾ ಮನಮೋಹನ್ ಸಿಂಗ್‌ರನ್ನು ಓರ್ವ ಅಸಮರ್ಥ ವ್ಯಕ್ತಿಯೆಂದು (ಅಸರ್‌ದಾರ್ ಅಲ್ಲದ ಸರ್ದಾರ್) ಕರೆದರು.

ಒಂದು ವಾರದ ನಂತರ ಬಿಜೆಪಿ ಎಡಪಕ್ಷಗಳ ಗುಂಪಿನೊಂದಿಗೆ ಸೇರಿಕೊಂಡು ಬೃಹತ್ತಾದ ಭಾರತ ಬಂದ್‌ಗೆ ಕರೆ ನೀಡಿತು. ಒಂಬತ್ತು ತಿಂಗಳು ಕಳೆದು ಪೆಟ್ರೋಲ್, ಡೀಸೆಲ್ ಬೆಲೆಗಳಲ್ಲಿ ಮತ್ತೊಮ್ಮೆ ಏರಿಕೆಯಾದಾಗ ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸಲಾಯಿತು. ಬೆಲೆ ಏರಿಕೆಗೆ ರೂಪಾಯಿಯ ಅಪಮೌಲ್ಯ ಮತ್ತು ಕಚ್ಚಾತೈಲದ ಅಂತರ್‌ರಾಷ್ಟ್ರೀಯ ಬೆಲೆಗಳಲ್ಲಿ ಹೆಚ್ಚಳವೇ ಕಾರಣವೆಂಬ ಯುಪಿಎ ಸರಕಾರದ ಹೇಳಿಕೆಗಳನ್ನು ತಿರಸ್ಕರಿಸಿದ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಜೂನ್ 2013ರಲ್ಲಿ ‘‘ಪೆಟ್ರೋಲ್ ಬೆಲೆಯಲ್ಲಿ ಏರಿಕೆಯಾಗಿರುವುದು ಯುಪಿಎ ಸರಕಾರದ ಕಳೆದ 9 ವರ್ಷಗಳ ದೋಷಯುತ ಆರ್ಥಿಕ ನೀತಿಗಳ ಫಲವಾಗಿ’’ ಎಂದು ಹೇಳಿದರು. ಯುಪಿಎ ಸರಕಾರ ಸರಿಯಾದ ಆರ್ಥಿಕ ನೀತಿಗಳನ್ನು ಅನುಸರಿಸಿದ್ದಲ್ಲಿ, ಆರ್ಥಿಕ ವ್ಯವಸ್ಥೆಯನ್ನು ಸುದೃಢವಾಗಿ ಇರಿಸಿದ್ದಲ್ಲಿ ತೈಲ ಬೆಲೆ ಏರಿಕೆಯನ್ನು ಎದುರಿಸಲು ಸಹಾಯಧನ ಒದಗಿಸಬಹುದಿತ್ತು ಎನ್ನುವುದು ಬಿಜೆಪಿಯ ವಾದವಾಗಿತ್ತು! ಬೆಲೆ ಏರಿಕೆಯಿಂದ ಆಕ್ರೋಶಗೊಂಡಿದ್ದ ಜನ ಬಿಜೆಪಿಯ ಕುತರ್ಕವನ್ನು ಅರ್ಥ ಮಾಡಿಕೊಳ್ಳಲು ವಿಫಲರಾದರು. ಅಂತಿಮವಾಗಿ 2014ರ ಚುನಾವಣೆಗಳಲ್ಲಿ ಯುಪಿಎ ಸರಕಾರದ ಪತನಕ್ಕೆ ಪ್ರಧಾನ ಕಾರಣಗಳಲ್ಲೊಂದಾಗಿದ್ದುದೇ ತೈಲ ಬೆಲೆ ಏರಿಕೆ.

ಆದರೆ ಇದೀಗ ಮೋದಿ ಸರಕಾರದ ಆಡಳಿತದಲ್ಲಿ ಪೆಟ್ರೋಲಿನ ದರ ದಿಲ್ಲಿಯಲ್ಲಿ ರೂ. 73.73ಕ್ಕೆ, ಬೆಂಗಳೂರಿನಲ್ಲಿ ರೂ. 75.12ಕ್ಕೆ, ಮುಂಬೈಯಲ್ಲಿ ರೂ. 81.84ಕ್ಕೆ, ಚೆನ್ನೈನಲ್ಲಿ ರೂ. 76.76ಕ್ಕೆ, ಕೋಲ್ಕತಾದಲ್ಲಿ ರೂ. 76.69ಕ್ಕೆ ಏರಿದೆ!. ಇವತ್ತು ದಕ್ಷಿಣ ಏಶ್ಯಾದ ರಾಷ್ಟ್ರಗಳ ಪೈಕಿ ಪೆಟ್ರೋಲ್, ಡೀಸೆಲ್ ಬೆಲೆಗಳು ಅತ್ಯಧಿಕವಿರುವುದು ಭಾರತದಲ್ಲಿ ಎಂದಾಗಿದೆ. ಇಷ್ಟಾದರೂ ಮೋದಿ, ಜೇಟ್ಲಿ ಮುಂತಾದವರನ್ನೊಳಗೊಂಡ ಬಿಜೆಪಿ ನಾಯಕಗಣ ಭಾರತದ ಆರ್ಥಿಕ ವ್ಯವಸ್ಥೆ ಸದೃಢವಾಗಿದೆ; ವಿಶ್ವದ ದೊಡ್ಡ ದೊಡ್ಡ ಆರ್ಥಿಕ ಶಕ್ತಿಗಳನ್ನು ಹಿಂದಿಕ್ಕಿ ವೇಗವಾಗಿ ಬೆಳೆಯುತ್ತಿದೆ ಎಂದು ಕೊಚ್ಚಿಕೊಳ್ಳುತ್ತಿದೆ. ಅತ್ತ ಪೆಟ್ರೋಲ್, ಡೀಸೆಲ್ ಬೆಲೆಗಳು ಯಾವುದೇ ನಿಯಂತ್ರಣವಿಲ್ಲದೆ ಮೇಲ್ಮುಖವಾಗಿ ಚಲಿಸುತ್ತಲೇ ಇವೆ. ಇಷ್ಟಾದರೂ ಮೋದಿ ಸರಕಾರ ಅಪ್ಪಿತಪ್ಪಿಯಾದರೂ ಸಹಾಯಧನದ ಬಗ್ಗೆ ತುಟಿಪಿಟಿಕ್ಕೆನ್ನುತ್ತಿಲ್ಲ.

ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಅಂತರ್‌ರಾಷ್ಟ್ರೀಯ ತೈಲ ಬೆಲೆಗಳು ಸತತ ಮೂರು ವರ್ಷಗಳ ಕಾಲ ಕುಸಿಯುತ್ತಲೇ ಹೋದುದು ಕನಸಿನಲ್ಲೂ ಊಹಿಸಲಾಗದ ಬೆಳವಣಿಗೆಯಾಗಿತ್ತು. ಮೇ 2014ರಲ್ಲಿ ಪ್ರತೀ ಬ್ಯಾರಲ್‌ಗೆ 113 ಡಾಲರ್‌ಗಳಷ್ಟಿದ್ದ ಬೆಲೆ ಜನವರಿ 2015ರಲ್ಲಿ 50 ಡಾಲರ್‌ಗಳಿಗೆ ಇಳಿಯಿತು. 2016ರ ಜನವರಿಯಲ್ಲೊಮ್ಮೆ 29 ಡಾಲರ್‌ಗಳ ಕನಿಷ್ಠ ಮಟ್ಟಕ್ಕೂ ತಲಪಿತ್ತು. ಆದರೇನು, ಕಚ್ಚಾ ತೈಲದ ಬೆಲೆಗಳು ಹೀಗೆ ಅರ್ಧಕ್ಕರ್ಧ ಕುಸಿದರೂ ಮೋದಿ ಸರಕಾರ ಪೆಟ್ರೋಲ್, ಡೀಸೆಲ್ ಬೆಲೆಗಳನ್ನು ಇಳಿಸಲಿಲ್ಲ. ಬದಲು 2015ರ ಫೆಬ್ರವರಿಯಲ್ಲಿ ದಿಲ್ಲಿಯಲ್ಲಿ ಚುನಾವಣಾ ರ್ಯಾಲಿಯೊಂದರ ವೇಳೆ ಮಾತನಾಡಿದ ಮೋದಿ ‘‘ಸರಿ, ನಾನು ಅದೃಷ್ಟವಂತ ಎಂಬುದನ್ನು ಒಪ್ಪಿಕೊಳ್ಳೋಣ. ಆದರೆ ನಿಮಗೆ ಉಳಿತಾಯ ಮಾಡಲು ಸಾಧ್ಯವಾಗಿದೆ. ಮೋದಿಯ ಅದೃಷ್ಟ ಜನರ ಪಾಲಿಗೆ ಲಾಭದಾಯಕವಾಗಿ ಪರಿಣಮಿಸಿದರೆ ಅದಕ್ಕಿಂತ ದೊಡ್ಡ ಸುಯೋಗ ಯಾವುದಿದೆ? ನನ್ನ ಅದೃಷ್ಟ ಚೆನ್ನಾಗಿತ್ತು. ಅದರ ಫಲವಾಗಿ ಪೆಟ್ರೋಲ್, ಡೀಸೆಲ್ ಬೆಲೆಗಳಲ್ಲಿ ಇಳಿಕೆಯಾಗಿ ಜನಸಾಮಾನ್ಯರು ಹೆಚ್ಚು ಉಳಿತಾಯ ಮಾಡಲು ಸಾಧ್ಯವಾದರೆ ಅದೃಷ್ಟಹೀನನನ್ನು ಕರೆತರುವ ಅಗತ್ಯ ಏನಿದೆ?’’ ಎಂದರು.

ಮೋದಿಯವರ ಸುಯೋಗ 2017ರ ಮಧ್ಯಭಾಗದ ತನಕ ಮುಂದುವರಿದಿದೆ. ಆದರೆ ಮೋದಿ ಸರಕಾರ ಈ ಸುಯೋಗದ ಲಾಭವನ್ನು ಜನರಿಗೆ ಹಂಚುವ ಬದಲು ಮೋಸ ಮಾಡಿದೆ. ಅಂತರ್‌ರಾಷ್ಟ್ರೀಯ ತೈಲಬೆಲೆಗಳಲ್ಲಿ ಇಳಿಕೆಯಾದರೂ ಅದರ ಫಲವನ್ನು ಜನಸಾಮಾನ್ಯರಿಗೂ ಲಭ್ಯವಾಗಿಸುವ ಬದಲು ಅಬಕಾರಿ ಸುಂಕದಲ್ಲಿ ಹೆಚ್ಚಳ ಮಾಡುವ ಮೂಲಕ ತನ್ನ ಆದಾಯವನ್ನಷ್ಟೇ ಹೆಚ್ಚಿಸುತ್ತಾ ಹೋಗಿದೆ. ಮೇ 2017ರಿಂದ ಸೆಪ್ಟಂಬರ್ 2017ವರೆಗಿನ ಐದು ತಿಂಗಳುಗಳ ಅವಧಿಯಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 12 ಪಟ್ಟು ಹೆಚ್ಚಿಸಲಾಗಿದೆ! ಅಕ್ಟೋಬರ್‌ನಲ್ಲಿ ತೋರಿಕೆಗೆ ಸುಂಕವನ್ನು ರೂ. 2ರಷ್ಟು ಇಳಿಸಿ ದೊಡ್ಡ ನಾಟಕವಾಡಲಾಯಿತು.

ಪಿಪಿಎಸಿಯ (Petroleum Planning and Analysis Cell; PPAC) ಅಂಕಿಅಂಶಗಳು ಹೇಳುವಂತೆ ಈ ಅವಧಿಯಲ್ಲಿ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು 54 ಪ್ರತಿಶತ ಮತ್ತು ವ್ಯಾಟ್‌ಅನ್ನು 46 ಪ್ರತಿಶತ ಹೆಚ್ಚಿಸಲಾದರೆ ಡೀಲರುಗಳ ಕಮಿಷನ್‌ಅನ್ನು ಶೇಕಡಾ 73ರಷ್ಟು ಇಳಿಸಲಾಯಿತು. ಅದೇ ರೀತಿ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಶೇಕಡಾ 154ರಷ್ಟು ಮತ್ತು ವ್ಯಾಟ್ ಅನ್ನು ಶೇಕಡಾ 48ರಷ್ಟು ಹೆಚ್ಚಿಸಿ ವಿತರಕರ ಕಮಿಷನ್ ಅನ್ನು ಶೇಕಡಾ 73ರಷ್ಟು ಇಳಿಸಲಾಯಿತು. ನವೆಂಬರ್ 2014 ಮತ್ತು ಜನವರಿ 2016 ಮಧ್ಯೆ ಪ್ರತೀ ಲೀಟರ್ ಪೆಟ್ರೋಲ್ ಮೇಲಿನ ಸುಂಕದಲ್ಲಿ ಒಟ್ಟು ರೂ. 11.77ರಷ್ಟು ಹೆಚ್ಚಳವಾದರೆ ಡೀಸೆಲ್ ಮೇಲಿನ ಸುಂಕದಲ್ಲಿ ರೂ. 13.47ರಷ್ಟು ಹೆಚ್ಚಳವಾಗಿದೆ. ಪರಿಣಾಮವಾಗಿ ರೂ. 99,000 ಕೋಟಿಗಳಷ್ಟಿದ್ದ ಸರಕಾರದ ಆದಾಯ ರೂ. 2,42,000 ಕೋಟಿಗಳಿಗೆ ಏರಿದೆ!

2014ರ ಸುಂಟರಗಾಳಿ ಪ್ರಚಾರ ಕಾಲದ ಮೋಡಿ ಮಾಡುವ ಮಾತುಗಳಿಗೆ ಬೇಸ್ತುಬಿದ್ದ ಅಮಾಯಕ ಮೋದಿಯ ಭಕ್ತರು ಅಂದು ಎಲ್ಲರೊಂದಿಗೆ ‘‘ನಮ್ಮ ಮೋದಿ ಸರಕಾರ ಅಧಿಕಾರಕ್ಕೆ ಬರಲಿ, ಆಗ ನೋಡಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲಗಳು ಹೇಗೆ ಪೈಸೆಗಳ ಲೆಕ್ಕದಲ್ಲಿ ಸಿಗಲಿವೆೆ’’ ಎಂದು ಕೊಚ್ಚುತ್ತಿದ್ದರು. ಈಗ? ಒಂದು ಕಡೆ ಸಬ್ಸಿಡಿಯೂ ಮಾಯವಾಗಿ, ಇನ್ನೊಂದು ಕಡೆ ಬೆಲೆಗಳೂ ಗಗನಕ್ಕೇರಿರುವ ಇವತ್ತಿನ ಸನ್ನಿವೇಶದಲ್ಲಿ ಇವರ ಅಡ್ರೆಸ್ಸೇ ಇಲ್ಲವಾಗಿದೆ. 

(ಆಧಾರ: ಇಂಡಿಯ ಟುಡೇನಲ್ಲಿ ಪ್ರಭಾಶ್ ಕೆ. ದತ್ತಾ ಲೇಖನ)

Writer - ಸುರೇಶ್ ಭಟ್, ಬಾಕ್ರಬೈಲ್

contributor

Editor - ಸುರೇಶ್ ಭಟ್, ಬಾಕ್ರಬೈಲ್

contributor

Similar News