ಅವಸಾನದತ್ತ ಸಾರ್ವಜನಿಕ ವಿಶ್ವವಿದ್ಯಾನಿಲಯಗಳು

Update: 2018-04-07 05:13 GMT

ವಿಶ್ವವಿದ್ಯಾನಿಲಯಗಳ ವಿದ್ಯಮಾನಗಳಲ್ಲಿ ಸರಕಾರದ ವಿನಾಶಕಾರಿ ಮಧ್ಯಪ್ರವೇಶದ ವಿರುದ್ಧ ಮತ್ತು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಕೊಡುತ್ತಿದ್ದ ಆರೋಪ ಹೊತ್ತವರನ್ನು ರಕ್ಷಿಸುತ್ತಿರುವುದರ ವಿರುದ್ಧ ಇತ್ತೀಚೆಗೆ ದಿಲ್ಲಿಯಲ್ಲಿ ನಡೆದ ಪ್ರತಿಭಟನೆಯ ವೇಳೆಯಲ್ಲಿ ಜೆಎನ್‌ಯುದ ವಿದ್ಯಾರ್ಥಿಗಳ, ಅಧ್ಯಾಪಕ ವರ್ಗದವರ ಮೇಲೆ ಮಾತ್ರವಲ್ಲದೆ ಪತ್ರಕರ್ತರ ಮೇಲೂ ಕ್ರೂರವಾಗಿ ದಾಳಿ ನಡೆಸುವುದರ ಮೂಲಕ ಸರಕಾರವು ತನ್ನ ನೈಜ ಉದ್ದೇಶಗಳನ್ನು ಬಯಲುಮಾಡಿಕೊಂಡಿದೆ. ಭಾರತದ ವಿಶ್ವವಿದ್ಯಾನಿಲಯ ವ್ಯವಸ್ಥೆಯಲ್ಲಿ ಸರಕಾರದ ಮಧ್ಯಪ್ರವೇಶ ಹೊಸದೇನಲ್ಲವಾದರೂ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವಂತಹ ನಿರಂತರ ದಾಳಿಗಳು ಮಾತ್ರ ಹಿಂದೆಂದೂ ಸಂಭವಿಸಿರಲಿಲ್ಲವೆಂದೇ ಹೇಳಬಹುದು.

ಮಧ್ಯಯುಗದ ಕಥೆಗಾರ ಮಿನ್ಹಾಜ್ ಸಿರಾಜ್ ಅವರು 12ನೇ ಶತಮಾನದ ಅಂಚಿನಲ್ಲಿ ಪೂರ್ವ ಭಾರತವನ್ನು ಗೆದ್ದುಕೊಂಡ ಭಕ್ತಿಯಾರ್ ಖಿಲ್ಜಿಯವರು ಬಿಹಾರದ ಒಂದು ಕೋಟೆಯ ಮೇಲೆ ದಾಳಿ ನಡೆಸಿದ್ದನ್ನು ದಾಖಲಿಸುತ್ತಾರೆ. ಆ ಕಥೆಯ ಪ್ರಕಾರ ಕೋಟೆಯನ್ನು ವಶಪಡಿಸಿಕೊಂಡ ಖಿಲ್ಜಿಗೆ ಅಲ್ಲಿ ಕಂಡುಬಂದದ್ದು ದೊಡ್ಡ ಸಂಖ್ಯೆಯ ಬ್ರಾಹ್ಮಣರು ಮತ್ತು ಅಪಾರವಾದ ಪುಸ್ತಕಗಳು. ಆಗ ತಾನು ಆಕ್ರಮಿಸಿರುವುದು ಕೋಟೆಯನ್ನಲ್ಲ ಬದಲಿಗೆ ಒಂದು ವಿಶ್ವವಿದ್ಯಾನಿಲಯವನ್ನು ಎಂಬುದು ಆತನಿಗೆ ಅರಿವಾಗುತ್ತದೆ.

ತಬಾಕತ್-ಇ-ನಾಸಿರಿ ಎಂಬ ಗ್ರಂಥದಲ್ಲಿ ಉಲ್ಲೇಖವಾಗಿರುವ ಈ ವಾಕ್ಯಗಳನ್ನು ಬಲಪಂಥೀಯ ಪಂಡಿತರು ತಪ್ಪಾಗಿ ಅರ್ಥೈಸಲು ಸದಾ ಹಾತೊರೆಯುತ್ತಿರುತ್ತಾರೆ. ಅವರ ಪ್ರಕಾರ ಇದು ಮುಸ್ಲಿಂ ದಾಳಿಕೋರನೊಬ್ಬ ಪುರಾತನವಾದ ನಳಂದಾ ವಿಶ್ವವಿದ್ಯಾನಿಲಯದ ಮೇಲೆ ನಡೆಸಿದ್ದ ದಾಳಿಯ ಕಥನ. ಅದೇನೇ ಇದ್ದರೂ ಈ ಕಥನವು ಹಾಲೀ ಸರಕಾರ ಮತ್ತದರ ಬೆಂಬಲಿಗರು ಸಾರ್ವಜನಿಕ ವಿಶ್ವವಿದ್ಯಾನಿಲಯಗಳನ್ನು ಜ್ಞಾನದ ಕೇಂದ್ರಗಳೆಂದು ಭಾವಿಸದೆ ದೇಶದ್ರೋಹಿಗಳ ಆವಾಸ ಸ್ಥಾನವೆಂದು ಭಾವಿಸಿ ನಡೆಸುತ್ತಿರುವ ದಾಳಿಗೆ ಒಂದು ಒಳ್ಳೆಯ ಉಪಮೇಯವನ್ನಂತೂ ಒದಗಿಸುತ್ತಿದೆ. ಉದಾಹಣೆಗೆ ಕಳೆದ ವರ್ಷ ಜವಾಹರಲಾಲ್ ವಿಶ್ವವಿದ್ಯಾನಿಲಯದಲ್ಲಿ (ಜೆಎನ್‌ಯು) ನಡೆದ ಕಾರ್ಗಿಲ್ ಯುದ್ಧದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದ ನಿವೃತ್ತ ಸೇನಾಧಿಕಾರಿ ಜೆ.ಡಿ. ಭಕ್ಷಿಯವರು ‘‘ಇದೀಗ ಜೆಎನ್‌ಯು ಅನ್ನು ಮರಳಿ ಗೆದ್ದುಕೊಂಡಿರುವ ಸರಕಾರ ಆಕ್ರಮಣವನ್ನು ಮುಂದುವರಿಸಿ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯ ಮತ್ತು ಜಾಧವ್‌ಪುರ್ ವಿಶ್ವವಿದ್ಯಾನಿಲಯಗಳ ಕೋಟೆಗಳನ್ನೂ ಧ್ವಂಸ ಮಾಡಬೇಕು’’ ಎಂದು ಕರೆನೀಡಿದ್ದರು.

ವಿಶ್ವವಿದ್ಯಾನಿಲಯಗಳ ವಿದ್ಯಮಾನಗಳಲ್ಲಿ ಸರಕಾರದ ವಿನಾಶಕಾರಿ ಮಧ್ಯಪ್ರವೇಶದ ವಿರುದ್ಧ ಮತ್ತು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಕೊಡುತ್ತಿದ್ದ ಆರೋಪ ಹೊತ್ತವರನ್ನು ರಕ್ಷಿಸುತ್ತಿರುವುದರ ವಿರುದ್ಧ ಇತ್ತೀಚೆಗೆ ದಿಲ್ಲಿಯಲ್ಲಿ ನಡೆದ ಪ್ರತಿಭಟನೆಯ ವೇಳೆಯಲ್ಲಿ ಜೆಎನ್‌ಯು ವಿದ್ಯಾರ್ಥಿಗಳ, ಅಧ್ಯಾಪಕ ವರ್ಗದವರ ಮೇಲೆ ಮಾತ್ರವಲ್ಲದೆ ಪತ್ರಕರ್ತರ ಮೇಲೂ ಕ್ರೂರವಾಗಿ ದಾಳಿ ನಡೆಸುವುದರ ಮೂಲಕ ಸರಕಾರವು ತನ್ನ ನೈಜ ಉದ್ದೇಶಗಳನ್ನು ಬಯಲುಮಾಡಿಕೊಂಡಿದೆ. ಭಾರತದ ವಿಶ್ವವಿದ್ಯಾನಿಲಯ ವ್ಯವಸ್ಥೆಯಲ್ಲಿ ಸರಕಾರದ ಮಧ್ಯಪ್ರವೇಶ ಹೊಸದೇನಲ್ಲವಾದರೂ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವಂತಹ ನಿರಂತರ ದಾಳಿಗಳು ಮಾತ್ರ ಹಿಂದೆಂದೂ ಸಂಭವಿಸಿರಲಿಲ್ಲವೆಂದೇ ಹೇಳಬಹುದು.

ಸಾರ್ವಜನಿಕ ವಿಶ್ವವಿದ್ಯಾನಿಲಯಗಳಿಗೆ ಎರಡು ಅಂತರ್‌ಸಂಬಂಧವುಳ್ಳ ಅತ್ಯಂತ ಪ್ರಾಥಮಿಕ ಕರ್ತವ್ಯಗಳಿರುತ್ತವೆ. ಮೊದಲನೆಯದಾಗಿ ಹಾಲಿ ಅಸ್ತಿತ್ವದಲ್ಲಿರುವ ಜ್ಞಾನದ ಸೀಮೆಗಳನ್ನು ಅದು ಮತ್ತಷ್ಟು ವಿಸ್ತರಿಸಬೇಕು. ಅದು ಸಂಭವಿಸಬೇಕೆಂದರೆ ಎಲ್ಲಾ ಗ್ರಹೀತ ತಿಳುವಳಿಕೆಗಳ ಬಗ್ಗೆ ಮತ್ತು ಆ ತಿಳುವಳಿಕೆಗಳನ್ನು ಎತ್ತಿಹಿಡಿಯುವ ಅಧಿಕಾರ ರಚನೆಗಳ ಬಗ್ಗೆ ವಿಮರ್ಶಾತ್ಮಕ ಧೋರಣೆಗಳನ್ನು ಬೆಳೆಸಿಕೊಳ್ಳಬೇಕು. ಮೊದಲನೆಯ ಉದ್ದೇಶಕ್ಕೆ ಆತುಕೊಂಡೇ ಇರುವ ಎರಡನೆಯ ಕರ್ತವ್ಯವೆಂದರೆ ಅವು ಜವಾಬ್ದಾರಿಯುತ ಮತ್ತು ಚಿಂತನಶೀಲ ನಾಗರಿಕರನ್ನು ಉತ್ಪಾದಿಸಬೇಕು. ಇದಾಗಬೇಕೆಂದರೆ ಎಲ್ಲಾ ಸಾಂಪ್ರದಾಯಿಕ ಜ್ಞಾನಗಳನ್ನು ಪ್ರಶ್ನಿಸುವ ಮತ್ತು ಎಲ್ಲಾ ಬಗೆಯ ಯಾಜಮಾನಿಕ ಸಂಸ್ಥೆಗಳನ್ನೂ ವಿಮರ್ಶಾತ್ಮಕವಾಗಿ ಪರಿಶೀಲಿಸುವಂಥ ತರಬೇತಿಯನ್ನು ವಿದ್ಯಾರ್ಥಿಗಳಿಗೆ ನೀಡಬೇಕು. ಹೀಗಾಗಿ ಸಾರ್ವಜನಿಕ ವಿಶ್ವವಿದ್ಯಾನಿಲಯಗಳು ಮೊದಲು ಸಂವಾದಿಯಾಗಬೇಕಿರುವುದು ಸಾರ್ವಜನಿಕರೊಂದಿಗೆಯೇ ವಿನಃ ಸರಕಾರದೊಂದಿಗಲ್ಲ. ಆದ್ದರಿಂದ ಸರಕಾರ ಮತ್ತು ಅದು ನಿಯಂತ್ರಿಸುವ ಸಂಸ್ಥೆಗಳು ಎಷ್ಟರಮಟ್ಟಿಗೆ ಯಾಜಮಾನ್ಯ ಸಿದ್ಧಾಂತಗಳ ಅಭಿವ್ಯಕ್ತಿಯಾಗಿರುತ್ತವೋ ಅಷ್ಟರಮಟ್ಟಿಗೆ ಸರಕಾರದ ಎಲ್ಲಾ ಕ್ರಮಗಳನ್ನು ವಿಮರ್ಶಾತ್ಮಕ ಮೌಲ್ಯಮಾಪನಕ್ಕೆ ಗುರಿಪಡಿಸುವುದು ಸಾರ್ವಜನಿಕ ವಿಶ್ವವಿದ್ಯಾನಿಲಯಗಳ ಪ್ರಥಮ ಕರ್ತವ್ಯವೇ ಆಗಿರುತ್ತದೆ.

ಅಧಿಕಾರದಲ್ಲಿರುವವರನ್ನು ನಿರಂತರ ಉಸ್ತುವಾರಿಯಲ್ಲಿಟ್ಟಿರುವುದು ಒಂದು ಸಜೀವ ಪ್ರಜಾತಂತ್ರದ ನಿದರ್ಶನವೇ ಆಗಿರುತ್ತದೆ. ಹೀಗಾಗಿ ಯಾವುದನ್ನು ಈ ಸರಕಾರವು ದೇಶ ವಿರೋಧಿ ಎಂದು ಕರೆಯುತ್ತದೆಯೋ ಅದು ಸಾರ್ವಜನಿಕ ವಿಶ್ವವಿದ್ಯಾನಿಲಯಗಳ ಜವಾಬ್ದಾರಿಯೇ ಆಗಿದೆ. ಸರಕಾರದ ಕ್ರಮಗಳನ್ನು ಪ್ರಶ್ನಿಸುವುದು ದೇಶದ್ರೋಹ ಎಂದಾಗುವುದಾದರೆ ಸಾರ್ವಜನಿಕ ವಿಶ್ವವಿದ್ಯಾನಿಲಯಗಳು ಅದನ್ನು ನ್ಯಾಕ್ ಕೊಡುವ ಶ್ರೇಯಾಂಕಗಳಿಗಿಂತ ಮೌಲ್ಯಯುತವಾದ ಗೌರವವೆಂದು ಭಾವಿಸಬೇಕು.

ಒಂದು ಪ್ರಜಾತಂತ್ರದಲ್ಲಿ ಸರಕಾರ ಮತ್ತು ವಿಶ್ವವಿದ್ಯಾನಿಲಯಗಳ ನಡುವೆ ಕೊಡು-ಕೊಳ್ಳುವ ಸಂಬಂಧಗಳಿರಬೇಕು. ಸಾರ್ವಜನಿಕ ವಿಶ್ವವಿದ್ಯಾನಿಲಯಗಳು ಜ್ಞಾನವನ್ನು ಉತ್ಪಾದಿಸಬೇಕು ಮತ್ತು ಸರಕಾರಗಳು ಅಂಥ ಜ್ಞಾನದ ನೆರವನ್ನು ನಾಗರಿಕರ ಕಲ್ಯಾಣಕ್ಕೆ ಮತ್ತು ಅವರ ಹಕ್ಕುಗಳನ್ನು ಮತ್ತು ಸ್ವಾತಂತ್ರ್ಯಗಳನ್ನು ವಿಸ್ತರಿಸುವುದಕ್ಕೆ ಮತ್ತು ಸಾಮಾಜಿಕ ನ್ಯಾಯವನ್ನು ಉತ್ತೇಜಿಸುವುದಕ್ಕೆ ಬಳಸಿಕೊಳ್ಳಬೇಕು. ಅಷ್ಟು ಮಾತ್ರವಲ್ಲದೆ, ಶಾಸಕರನ್ನೂ ಒಳಗೊಂಡಂತೆ, ನ್ಯಾಯಾಧೀಶರು, ಮಂತ್ರಿಗಳು ಮತ್ತು ತಂತ್ರಜ್ಞರಂಥ ಸಾರ್ವಜನಿಕ ಸೇವಕರಿಗೆ ತರಬೇತಿ ಕೊಡುವುದೂ ಸಹ ಒಂದು ಸಾರ್ವಜನಿಕ ವಿಶ್ವವಿದ್ಯಾನಿಲಯದ ಕರ್ತವ್ಯವಾಗಿರುತ್ತದೆ. ವಿಪರ್ಯಾಸದ ಸಂಗತಿಯೆಂದರೆ ಒಬ್ಬ ಸಾಮಾನ್ಯ ಗುಮಾಸ್ತನಿಂದ ಹಿಡಿದು ಸರಕಾರದ ಮುಖ್ಯಸ್ಥರವರೆಗೆ ಎಲ್ಲರೂ ವಿಶ್ವವಿದ್ಯಾನಿಲಯದ ವ್ಯವಸ್ಥೆಯ ಉತ್ಪನ್ನಗಳೇ ಆಗಿದ್ದರೂ ಹಣಕಾಸಿನ ಕೊರತೆಯ ಹೆಸರಲ್ಲೋ ಅಥವಾ ಶತ್ರುಗಳ ಕೋಟೆ ಎಂದು ಹಣೆಪಟ್ಟಿ ಲಗತ್ತಿಸಿಯೋ ಅದೇ ವಿಶ್ವವಿದ್ಯಾನಿಲಯ ವ್ಯವಸ್ಥೆಯನ್ನು ನಾಶಗೊಳಿಸಲು ಸರಕಾರ ಸಿದ್ಧವಾಗಿದೆ. ಇದಕ್ಕೆ ಪ್ರತಿಯಾಗಿ ಒಂದು ಸಾರ್ವಜನಿಕ ವಿಶ್ವವಿದ್ಯಾನಿಲಯವು ಯಾವುದೇ ನಿರ್ಬಂಧ ಅಥವಾ ಭೀತಿಗಳಿಲ್ಲದೆ ಕೆಲಸ ಮಾಡುವಂಥ ವಾತಾವರಣವನ್ನು ಸರಕಾರಗಳು ಖಾತರಿಗೊಳಿಸಬೇಕಿರುತ್ತದೆ. ಒಂದು ವಿಶ್ವವಿದ್ಯಾನಿಲಯಕ್ಕೆ ಸ್ವಾಯತ್ತತೆಯನ್ನು ಕೊಡಮಾಡುವುದರ ಮೂಲಕ ಸರಕಾರಗಳು ಉಪಕಾರವನ್ನೇನು ಮಾಡುತ್ತಿಲ್ಲ. ಅದು ಸರಕಾರದ ಹೊಣೆಗಾರಿಕೆಯಾಗಿದ್ದು ಪ್ರಜಾತಂತ್ರವನ್ನು ರಕ್ಷಿಸಬೇಕಿರುವ ಅದರ ಜವಾಬ್ದಾರಿಯ ಭಾಗವೂ ಆಗಿದೆ.

ಸ್ವಾಯತ್ತತೆಯನ್ನು ಉತ್ತೇಜಿಸುವುದೆಂದರೆ ಸರಕಾರದ ಉಸ್ತುವಾರಿಗೆ ಸೀಮಿತವಾಗುವುದೆಂದೂ ಆಗಬಹುದು. ಆದರೆ ಅದು ಶೈಕ್ಷಣಿಕ ಪಠ್ಯಗಳನ್ನು ಮತ್ತು ಸಂಶೋಧನಾ ಕಾರ್ಯಸೂಚಿಗಳನ್ನು ನಿಗದಿಪಡಿಸುವ ರೀತಿಯಲ್ಲೋ ಅಥವಾ ಆಳುವ ಪಕ್ಷದ ಬಾಲಬಡುಕರನ್ನು ಪ್ರಮುಖ ಸ್ಥಾನಗಳಿಗೆ ನೇಮಿಸುವ ರೀತಿಯಲ್ಲೋ ಅಥವಾ ಕಾನೂನು ಪಾಲಕ ಯಂತ್ರಾಂಗದ ಮೂಲಕ ವಿಶ್ವವಿದ್ಯಾನಿಲಯದ ಶೈಕ್ಷಣಿಕ ಬದುಕಿನಲ್ಲಿ ಶಿಸ್ತನ್ನು ತರುವಂತಹ ಕ್ರಮಗಳ ರೂಪದಲ್ಲೋ ಖಂಡಿತಾ ಇರಬಾರದು. ಉತ್ತಮ ಗುಣಮಟ್ಟದ ಮತ್ತು ತನ್ನ ಸರೀಕರಿಂದ ಗೌರವಿಸಲ್ಪಡುವಂಥ ವಿದ್ವಾಂಸರಿಗೆ ಮತ್ತು ವೃತ್ತಿಪರರಿಗೆ ಆಯಾ ಸಂಸ್ಥೆಗಳನ್ನು ನಡೆಸುವಲ್ಲಿ ಹೆಚ್ಚಿನ ಪಾತ್ರವನ್ನು ಖಾತರಿಪಡಿಸುವುದೇ ಸರಕಾರ ವಹಿಸಬಹುದಾದ ಸರಿಯಾದ ಪಾತ್ರವಾಗಿರುತ್ತದೆ.

ಅಷ್ಟು ಮಾತ್ರವಲ್ಲದೆ ಸಂಶೋಧಕರಿಗೆ, ಅಧ್ಯಾಪಕರಿಗೆ ಮತ್ತು ವಿದ್ಯಾರ್ಥಿಗಳಿಗೆ ತಮ್ಮ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಲು ಬೇಕಾದ ಮೂಲಭೂತ ಸೌಕರ್ಯ ಮತ್ತು ಅಗತ್ಯವಾದ ಸಂಪನ್ಮೂಲಗಳನ್ನು ಒದಗಿಸಿ ಅವರನ್ನು ಮಾರುಕಟ್ಟೆ ಶಕ್ತಿಗಳ ಗುಲಾಮರಾಗದಂತೆ ತಡೆಯುವುದೂ ಸಹ ಸರಕಾರದ ಕರ್ತವ್ಯವಾಗಿರುತ್ತದೆ. ಇದರ ಜೊತೆಗೆ ವಿಶ್ವವಿದ್ಯಾನಿಲಯದ ಸಮುದಾಯದ ಎಲ್ಲಾ ಹಂತಗಳಲ್ಲೂ ಎಲ್ಲಾ ಹಿನ್ನಲೆಯ ನಾಗರಿಕರ ಪ್ರಾತಿನಿಧ್ಯವೂ ಇರುವಂತೆ ನೋಡಿಕೊಂಡು ಸಾಮಾಜಿಕ ನ್ಯಾಯವನ್ನು ಪಾಲಿಸುವುದು ಮತ್ತು ಆ ಮೂಲಕ ವಿಶ್ವವಿದ್ಯಾನಿಲಯಗಳು ಸಮಾಜದ ಯಾಜಮಾನ್ಯ ಹಿನ್ನಲೆಯ ವರ್ಗ ಮತ್ತು ಜಾತಿಗಳ ಉಪಕರಣಗಳಾಗದಂತೆ ತಡೆಗಟ್ಟುತ್ತಾ ಅವಕಾಶಗಳಲ್ಲಿ ಸಮಾನತೆಯನ್ನು ಕಾಪಾಡಿಕೊಳ್ಳುವ ತನ್ನ ಸಾಂವಿಧಾನಿಕ ಜವಾಬ್ದಾರಿಯನ್ನು ಪಾಲಿಸುವುದೂ ಸಹ ಸರಕಾರದ ಕರ್ತವ್ಯವಾಗಿರುತ್ತದೆ. ಆದರೆ ಇವತ್ತು ಯಾವುದನ್ನು ಸ್ವಾಯತ್ತತೆ ಎಂದು ಪ್ರಚಾರ ಮಾಡಲಾಗುತ್ತಿದೆಯೋ ಅದರಲ್ಲಿ ಸರಕಾರವು ಒಂದು ಸಾರ್ವಜನಿಕ ವಿಶ್ವವಿದ್ಯಾನಿಲಯಗಳಲ್ಲಿ ತಾನು ವಹಿಸಬೇಕಾದ ಪಾತ್ರಕ್ಕೆ ತದ್ವಿರುದ್ಧವಾದ

ಪಾತ್ರವನ್ನು ವಹಿಸುತ್ತಿದೆ. ವಾಸ್ತವವಾಗಿ ಆ ಮೂಲಕ ನಾಗರಿಕರ ಪ್ರತಿಯಾಗಿ ತನಗಿದ್ದ ಎಲ್ಲಾ ಜವಾಬ್ದಾರಿಗಳನ್ನು ಕಳೆದುಕೊಳ್ಳುತ್ತಿದೆ. ಇತ್ತೀಚೆಗೆ ಮಾನವ ಸಂಪನ್ಮೂಲ ಮಂತ್ರಿಗಳು ವಿಶ್ವವಿದ್ಯಾನಿಲಯಗಳಿಗೆ ಹಂತಹಂತವಾಗಿ ಸ್ವಾಯತ್ತತೆಯನ್ನು ನೀಡಲಾಗುವುದೆಂದು ನೀಡಿರುವ ಹೇಳಿಕೆಯು ಸಾರಾಂಶದಲ್ಲಿ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ನೀಡಲಾಗುತ್ತಿದ್ದ ಸಾರ್ವಜನಿಕ ಸಂಪನ್ಮೂಲವನ್ನು ಹಿಂದೆಗೆದುಕೊಳ್ಳುವ ನೀತಿಗೆ ಮತ್ತೊಂದು ಹೆಸರಾಗಿದೆ. ಇದರರ್ಥವೇನೆಂದರೆ ವಿಶ್ವವಿದ್ಯಾನಿಲಯದ ಶಾಖೆಗಳು ಆರ್ಥಿಕ ದೃಷ್ಟಿಯಿಂದ ವ್ಯವಹಾರ ಯೋಗ್ಯವಾಗಲು ಮಾರುಕಟ್ಟೆ ಶಕ್ತಿಗಳಿಗೆ ಶರಣು ಹೋಗಬೇಕು. ಇದು ಒಂದು ಸಾರ್ವಜನಿಕ ವಿಶ್ವವಿದ್ಯಾನಿಲಯಗಳ ಮೇಲಿನ ದಾಳಿ ಮಾತ್ರವಲ್ಲ ಒಂದು ಪ್ರಜಾತಾಂತ್ರಿಕವಾಗಿ ಆಯ್ಕೆಯಾದ ಸರಕಾರವು ಯಾವುದರಿಂದ ತನ್ನ ಮಾನ್ಯತೆಯನ್ನು ಗಳಿಸಿಕೊಳ್ಳುತ್ತದೋ ಆ ಸಾಮಾಜಿಕ ಒಪಂದದ ಉಲ್ಲಂಘನೆಯೂ ಆಗಿದೆ.

ಪ್ರಚಲಿತ ದಂತಕಥೆಗಳ ಪ್ರಕಾರ ನಳಂದಾ ವಿಶ್ವವಿದ್ಯಾನಿಲಯದಲ್ಲಿದ್ದ ಎಲ್ಲಾ ಪುಸ್ತಕಗಳನ್ನು ಸಂಪೂರ್ಣವಾಗಿ ಸುಟ್ಟುಹಾಕಲು ಮೂರು ತಿಂಗಳು ಬೇಕಾದವಂತೆ. ಸಾರ್ವಜನಿಕ ವಿಶ್ವವಿದ್ಯಾನಿಲಯಗಳನ್ನೂ ಸಹ ಒಂದೇ ದಿನದಲ್ಲಿ ನಾಶಮಾಡಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ನಿರಂತರವಾಗಿ ಹೋರಾಡುತ್ತಿರುವುದು ನಿಜವಾದರೂ ಸರಕಾರದ ಉದ್ದೇಶವೇನೆಂಬುದರ ಬಗ್ಗೆ ಮಾತ್ರ ಕಿಂಚಿತ್ತು ಸಂದೇಹವೂ ಉಳಿದಿಲ್ಲ. ತನ್ನ ಮತದಾರರನ್ನು ಮುಠಾಳರನ್ನಾಗಿಸಿ ಬಚಾವಾಗಬಹುದೆಂದು ಸರಕಾರವು ಭಾವಿಸಿದ್ದರೂ ಇತಿಹಾಸದ ಆಕ್ರೋಶದಿಂದ ಬಚಾವಾಗಲು ಸಾಧ್ಯವಿಲ್ಲ.

ಕೃಪೆ: Economic and Political Weekly

Writer - ಅನು: ಶಿವಸುಂದರ್

contributor

Editor - ಅನು: ಶಿವಸುಂದರ್

contributor

Similar News