ಭಾರತದ ನೈಸರ್ಗಿಕ ಸಂಪತ್ತಿನ ಹರಾಜು
2018ರ ಕರಡು ಅರಣ್ಯ ನೀತಿಯು ಮೇಲ್ನೋಟಕ್ಕೆ ನಿರುಪದ್ರವಿ ಎನಿಸಿದರೂ ಎಂದಿನಂತೆ ನಿಜವಾದ ರಾಕ್ಷಸ ವಿವರಗಳಲ್ಲಿ ಅಡಗಿ ಕುಳಿತಿದ್ದಾನೆ. ಈ ಹಿಂದಿನ ಹಲವಾರು ಸರಕಾರಗಳಂತೆ ಈ ನೀತಿಯೂ ಸಹ ಅರಣ್ಯಗಳು ನಿರ್ವಹಿಸುವ ಇನ್ನಿತರ ಹಲವಾರು ಪಾತ್ರಗಳ ಬಗ್ಗೆ ಬಾಯುಪಚಾರದ ಮಾತುಗಳನ್ನು ಆಡುತ್ತದೆ. ಆದರೆ ಕಾಡುಗಳನ್ನು ಒಂದು ಆರ್ಥಿಕ ಸಂಪನ್ಮೂಲವನ್ನಾಗಿ ಪರಿಗಣಿಸುವ ದೃಷ್ಟಿಯೆಡೆಗೆ ಮಾತ್ರ ಬಲವಾಗಿ ವಾಲಿಕೊಳ್ಳುತ್ತದೆ.
ಭಾರತ ಸರಕಾರವು ಕಾರ್ಪೊರೇಟ್ ಸಂಸ್ಥೆಗಳಿಗೆ ಪರಭಾರೆ ಮಾಡುತ್ತಿರುವುದು ಕೇವಲ ಕೆಲವು ಐತಿಹಾಸಿಕ ಸ್ಮಾರಕಗಳನ್ನಲ್ಲ. ಅದರ ಜೊತೆಗೆ ಅರಣ್ಯ ಭೂಮಿಯೆಂದು ವರ್ಗೀಕರಿಸಲ್ಪಟ್ಟು ಅಷ್ಟೊಂದು ‘ಉತ್ಪಾದಕತೆ’ಯನ್ನು ಹೊಂದಿರದ ಕುರುಚುಲು ಕಾಡುಗಳನ್ನೂ ಸಹ ಅದು ಕಾರ್ಪೊರೇಟ್‌ಗಳಿಗೆ ಪರಭಾರೆ ಮಾಡಬೇಕೆಂದಿದೆ. ಕಾರ್ಪೊರೇಟ್ ಸಂಸ್ಥೆಗಳಿಗೆ ರಾಷ್ಟ್ರೀಯ ಪ್ರಾಮುಖ್ಯತೆಯುಳ್ಳ ಕೆಂಪುಕೋಟೆಯಂಥ ಐತಿಹಾಸಿಕ ಸ್ಮಾರಕಗಳನ್ನು ಪರಭಾರೆ ಮಾಡುತ್ತಿರುವುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪಾರವಾದ ವಾದ-ವಿವಾದಗಳಾಗುತ್ತಿವೆ. ಆದರೆ ಭಾರತದ ಮಹತ್ವದ ನೈಸರ್ಗಿಕ ಸಂಪನ್ಮೂಲವಾದ ಅರಣ್ಯ ಸಂಪತ್ತನ್ನು ಖಾಸಗಿ ಉದ್ಯಮಿಗಳಿಗೆ ಕೊಡುಗೆಯಾಗಿ ನೀಡುತ್ತಿರುವ ವಿಷಯವು ಮಾತ್ರ ಸೆಳೆಯಬೇಕಾದಷ್ಟು ಗಮನವನ್ನೇ ಸೆಳೆದಿಲ್ಲ.
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ಇಲಾಖೆಯು ತಾನು ಮಾರ್ಚ್‌ನಲ್ಲಿ ಬಿಡುಗಡೆ ಮಾಡಿದ ಕರಡು ರಾಷ್ಟ್ರೀಯ ಅರಣ್ಯ ಕಾಯ್ದೆ (ಎನ್‌ಎಫ್‌ಪಿ) 2018ಕ್ಕೆ ಬಂದಿರುವ ಸಲಹೆಗಳನ್ನು ಮತ್ತು ಆಕ್ಷೇಪಣೆಗಳನ್ನು ಪರಿಶೀಲಿಸುತ್ತಿದೆ. ಈ ಎನ್‌ಎಫ್‌ಪಿಯು 1988ರಲ್ಲಿ ಜಾರಿಗೆ ಬಂದ 30 ವರ್ಷಗಳಷ್ಟು ಹಿಂದಿನ ಕಾಯ್ದೆಯನ್ನು ಬದಲಾಯಿಸಲಿದೆ. ಮೇಲ್ನೋಟಕ್ಕೆ ನೋಡುವುದಾದರೆ ಹಳೆಯ ನೀತಿಯೊಂದನ್ನು ಪರಿಷ್ಕರಿಸುವುದರಲ್ಲಿ ಅದರಲ್ಲೂ ಹವಾಮಾನ ಬದಲಾವಣೆಯ ಹಿನ್ನೆಲೆಯಲ್ಲಿ ದತ್ತವಾಗಿರುವ ಹೊಸ ಮಾಹಿತಿಗಳನ್ನು ಆಧರಿಸಿ ಹಳೆಯ ನೀತಿಗಳನ್ನು ಪರಿಷ್ಕರಿಸುವುದರಲ್ಲಿ ಯಾವ ತಪ್ಪೂ ಇಲ್ಲ. ಹವಾಮಾನ ಬದಲಾವಣೆಗೆ ಕಾರಣವಾಗಿರುವ ಹಸಿರುಮನೆ ಅನಿಲಗಳಲ್ಲಿ ಪ್ರಮುಖವಾಗಿರುವ ಕಾರ್ಬನ್ ಡೈಆಕ್ಸೈಡ್ ಅನಿಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದರಲ್ಲಿ ಕಾಡುಗಳು ಪ್ರಮುಖ ಪಾತ್ರ ವಹಿಸುತ್ತವೆ. ಏಕೆಂದರೆ ಅವುಗಳಿಗೆ ಕಾರ್ಬನ್ ಡೈಆಕ್ಸೈಡನ್ನು ಹೀರಿಕೊಳ್ಳುವ ಶಕ್ತಿ ಇದೆ. ಆದರೆ ಈ ಹೊಸ ಕಾಯ್ದೆಯು ಹವಾಮಾನ ಸಂಬಂಧಿಯಾದ ಯಾವುದೇ ಕಾಳಜಿಗಳನ್ನು ಗಣನೆಗೆ ತೆಗೆದುಕೊಂಡಿಲ್ಲ.
ಅದರ ನಿಜವಾದ ಉದ್ದೇಶಗಳು ಹಲವಾರು ಪರಿಸರವಾದಿಗಳಿಗೂ ಮತ್ತು ನಾಗರಿಕ ಸಮಾಜದ ಸಂಸ್ಥೆಗಳಿಗೂ ಅಪಾರವಾದ ಆತಂಕವನ್ನು ಹುಟ್ಟಿಸಿದೆ. ಹಿಂದಿನ 1998ರ ರಾಷ್ಟ್ರೀಯ ಅರಣ್ಯ ನೀತಿಯು 1952ರಲ್ಲಿ ಜಾರಿಗೆ ಬಂದಿದ್ದ ನೀತಿಯನ್ನು ಬದಲಾಯಿಸಿತ್ತು. 1952ರ ನೀತಿಯಲ್ಲಿ ಅರಣ್ಯವನ್ನು ಇನ್ನೂ ಒಂದು ಆರ್ಥಿಕ ಸಂಪನ್ಮೂಲವೆಂದೇ ಭಾವಿಸುವ ವಸಾಹತುವಾದಿ ತಿಳುವಳಿಕೆಯೇ ಇಣುಕುತ್ತಿತ್ತು. 1988ರ ನೀತಿಯು ಅದನ್ನು ಬದಲಿಸಿ ಒಂದು ದೇಶದ ವಾತಾವರಣ ಮತ್ತು ಪರಿಸರಗಳಲ್ಲಿ ಸಮತೋಲನ ಉಳಿಸಿಕೊಳ್ಳುವುದರಲ್ಲಿ ಕಾಡುಗಳಿಗಿರುವ ಪಾತ್ರದ ಬಗ್ಗೆ ಆಗ ವಿಕಸನಗೊಳ್ಳುತ್ತಿದ್ದ ತಿಳುವಳಿಕೆಯನ್ನು ಅಳವಡಿಸಿಕೊಂಡಿತ್ತು. ಅದು ಅರಣ್ಯವೆಂದರೆ ಆ ಕಾಡಿನ ಮರಗಳಲ್ಲಿರುವ ಕಟ್ಟಿಗೆಯ ಒಟ್ಟಾರೆ ಮೊತ್ತವೆಂದು ಅರ್ಥಮಾಡಿಕೊಳ್ಳದೆ ಅರಣ್ಯವನ್ನು ಜೀವವೈವಿಧ್ಯದ ಆವಾಸ ಸ್ಥಾನವೆಂದೂ, ಮಣ್ಣಿನ ಹಾಗೂ ಜಲಮೂಲದ ರಕ್ಷಕನೆಂದೂ, ಅರಣ್ಯವಾಸಿಗಳು ಬಳಸುವ ಇನ್ನಿತರ ಅರಣ್ಯೋತ್ಪನ್ನವನ್ನು ಒದಗಿಸುತ್ತದೆಂದೂ ಅರ್ಥಮಾಡಿಕೊಂಡಿತ್ತು. ಮತ್ತು ಕೆಲವು ವಿಶೇಷ ಹಾಗೂ ನಿರ್ದಿಷ್ಟ ಸಂದರ್ಭಗಳನ್ನು ಹೊರತುಪಡಿಸಿ ಅರಣ್ಯವನ್ನು ಅರಣ್ಯೇತರ ಉದ್ದೇಶಗಳಿಗೆ ಬಳಸಿಕೊಳ್ಳುವುದರ ಬಗ್ಗೆ ಕಟ್ಟುನಿಟ್ಟಾದ ನಿಗಾ ವಹಿಸಬೇಕೆಂಬ ಅಂಶವನ್ನೂ ಒಳಗೊಂಡಿತ್ತು. ಆದರೆ ಆ ನೀತಿಯ ಅನುಷ್ಠಾನದಲ್ಲಿ ಹಲವಾರು ಕೊರತೆಗಳಿದ್ದವು. ಭಾರತದ ಅರಣ್ಯವನ್ನು ಉಳಿಸಿಕೊಳ್ಳುವುದು ಸುಲಭದ ಕೆಲಸವಲ್ಲವಾದರೂ 1988ರ ನೀತಿಯ ಮಹತ್ವವೇನೆಂದರೆ ಅದು ಹಿಂದಿನ ನೀತಿಗೆ ಹೋಲಿಸಿದಲ್ಲಿ ಹಲವು ವಿಷಯಗಳಲ್ಲಿ ಹಲವು ಮಹತ್ವದ ಭಿನ್ನತೆಗಳನ್ನು ಹೊಂದಿತ್ತು.
ಅರಣ್ಯ ನೀತಿಗಳನ್ನು ರೂಪಿಸುವ ದಿಕ್ಕಿನಲ್ಲಿ ಬಂದ ಈ ಬದಲಾವಣೆಗಳು ನಿಧಾನವಾಗಿ ಅರಣ್ಯವಾಸಿಗಳ ಹಕ್ಕುಗಳನ್ನು ಮತ್ತು ಅರಣ್ಯವನ್ನು ರಕ್ಷಿಸುವುದರಲ್ಲಿ ಅರಣ್ಯವಾಸಿಗಳ ಪಾತ್ರವನ್ನು ಅಂಗೀಕರಿಸುವಲ್ಲಿ ತನ್ನ ಕೊಡುಗೆಯನ್ನು ನೀಡಿತು. 2006ರ ಪಥಪ್ರವರ್ತಕ ‘ಅಧಿಸೂಚಿತ ಪಂಗಡ ಮತ್ತಿತರ ಸಾಂಪ್ರದಾಯಿಕ ಅರಣ್ಯವಾಸಿಗಳ (ಅರಣ್ಯ ಹಕ್ಕುಗಳ ಮಾನ್ಯತೆ) ಕಾಯ್ದೆ’ಯು ಈ ಹಕ್ಕುಗಳನ್ನು ಮತ್ತಷ್ಟು ದೃಢಗೊಳಿಸಿತು. ಈ ಕಾಯ್ದೆಯು ಈಗಾಗಲೇ ತನ್ನ ಪರಿಣಾಮವನ್ನು ಬೀರುತ್ತಿದೆ. ಉದಾಹರಣೆಗೆ ಒಡಿಶಾದ ನಯಾಮ್‌ಗಿರಿ ಪರ್ವತ ಪ್ರದೇಶದ ಆದಿವಾಸಿಗಳು ತಮ್ಮ ಕಾಡುಗಳಲ್ಲಿ ಬಾಕ್ಸೈಟ್ ಗಣಿಗಾರಿಕೆ ಮಾಡುವುದರ ವಿರುದ್ಧ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. 2018ರ ಕರಡು ಅರಣ್ಯ ನೀತಿಯು ಮೇಲ್ನೋಟಕ್ಕೆ ನಿರುಪದ್ರವಿ ಎನಿಸಿದರೂ ಎಂದಿನಂತೆ ನಿಜವಾದ ರಾಕ್ಷಸ ವಿವರಗಳಲ್ಲಿ ಅಡಗಿ ಕುಳಿತಿದ್ದಾನೆ. ಈ ಹಿಂದಿನ ಹಲವಾರು ಸರಕಾರಗಳಂತೆ ಈ ನೀತಿಯೂ ಸಹ ಅರಣ್ಯಗಳು ನಿರ್ವಹಿಸುವ ಇನ್ನಿತರ ಹಲವಾರು ಪಾತ್ರಗಳ ಬಗ್ಗೆ ಬಾಯುಪಚಾರದ ಮಾತುಗಳನ್ನು ಆಡುತ್ತದೆ. ಆದರೆ ಕಾಡುಗಳನ್ನು ಒಂದು ಆರ್ಥಿಕ ಸಂಪನ್ಮೂಲವನ್ನಾಗಿ ಪರಿಗಣಿಸುವ ದೃಷ್ಟಿಯೆಡೆಗೆ ಮಾತ್ರ ಬಲವಾಗಿ ವಾಲಿಕೊಳ್ಳುತ್ತದೆ. ಹೀಗಾಗಿ ಅದು ಅರಣ್ಯಗಳ ಕಡಿಮೆ ಉತ್ಪಾದಕತೆಯ ಬಗ್ಗೆ ಕಾಳಜಿಯನ್ನು ವ್ಯಕ್ತಪಡಿಸುತ್ತಾ ಅರಣ್ಯೋತ್ಪನ್ನಗಳಿಗೆ ಹವಾಮಾನ ಸಂವೇದಿ ಮೌಲ್ಯ ಸರಣಿಯನ್ನು (ಕ್ಲೈಮೇಟ್ ಸ್ಮಾರ್ಟ್ ವ್ಯಾಲ್ಯೂ ಚೇನ್) ಕಲ್ಪಿಸುವ ಮಾತುಗಳನ್ನಾಡುತ್ತದೆ.
ಇದನ್ನು ಬಗೆಹರಿಸಲು ಶೇ.40ಕ್ಕಿಂತ ಕಡಿಮೆ ಮರಗಳ ಸಾಂದ್ರತೆ ಮಾತ್ರವುಳ್ಳ ಕಾಡುಗಳನ್ನು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಪುನರುಜ್ಜೀವನಗೊಳಿಸುವ ಪ್ರಸ್ತಾಪವನ್ನು ಮಾಡಿದೆ. ಆದರೆ ನಮ್ಮ ಹಿಂದಿನ ಅನುಭವಗಳು ತೋರಿಸಿಕೊಟ್ಟಿರುವಂತೆ ಇಂತಹ ಸಹಭಾಗಿತ್ವಗಳು ದೇಶೀಯ ವೈವಿಧ್ಯಗಳನ್ನೆಲ್ಲಾ ನಾಶ ಮಾಡಿ ತ್ವರಿತವಾಗಿ ಬೆಳೆಯುವ ಪರದೇಶಿ ಏಕವಿಧದ ಮರಗಳನ್ನು ಬೆಳೆಸುತ್ತವೆ. ಹೀಗಾಗಿ ಈ ಸಹಭಾಗಿತ್ವದ ಪರಿಣಾಮದಲ್ಲಿ ಕೈಗಾರಿಕಾ ಪ್ಲಾಂಟೇಷನ್‌ಗಳು ಜನ್ಮ ತಾಳುತ್ತವೆಯೇ ವಿನಃ ಸಹಜ ಅರಣ್ಯವಲ್ಲ. ಮೇಲಾಗಿ ಕಾಡಿನಂಥ ಸಮುದಾಯ ಸಂಪನ್ಮೂಲದಲ್ಲಿ ವಾಸವಾಗಿರುವ ಅರಣ್ಯವಾಸಿಗಳ ಮತ್ತು ಅಲೆಮಾರಿಗಳ ಹಕ್ಕುಗಳನ್ನು ಕಿತ್ತುಕೊಂಡು ಅಲ್ಲಿಂದ ಅವರನ್ನು ಎತ್ತಂಗಡಿ ಮಾಡಲಾಗುತ್ತದೆ. ಟಿಂಬರ್ ಆಧಾರಿತ ಕಾರ್ಖಾನೆಗಳಿಗೆ ಬೇಕಿರುವಷ್ಟು ಮರದಿನ್ನೆಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸ್ಥಳೀಯವಾಗಿ ಲಭ್ಯವಾಗದೆ ಆಮದು ಮಾಡಿಕೊಳ್ಳಬೇಕಿರುವುದರಿಂದ ಟಿಂಬರ್ ಉದ್ಯಮವು ಎದುರಿಸುತ್ತಿರುವ ಬಿಕ್ಕಟ್ಟನ್ನು ಈ ಸಲಹೆಗೆ ಸಮರ್ಥನೆಯನ್ನಾಗಿ ನೀಡಲಾಗಿದೆ. ಅಷ್ಟು ಮಾತ್ರವಲ್ಲದೆ ಕಾಡು ನಾಶಕ್ಕೆ ಕಾರಣವಾಗಿರುವ ಇತರ ಪ್ರಮುಖ ಅಂಶಗಳ ಬಗ್ಗೆಯೂ ಈ ನೀತಿಯು ಯಾವುದೇ ಗಮನ ಹರಿಸಿಲ್ಲ.
ಉದಾಹರಣೆಗೆ ಅಭಿವೃದ್ಧಿ ಮತ್ತಿತರ ಯೋಜನೆಗಳಿಗಾಗಿ ಕಾಡು ನಾಶವಾಗುತ್ತಿರುವುದು ಅತಿ ದೊಡ್ಡ ಸಮಸ್ಯೆ. ಪರಿಸರವಾದಿ ವಕೀಲರಾದ ರಿತ್ವಿಕ್ ದತ್ತಾ ಮತ್ತು ರಾಹುಲ್ ಚೌಧರಿಯವರು 2013ರಲ್ಲಿ ಹಾಕಿದ ಮಾಹಿತಿ ಹಕ್ಕು ಅರ್ಜಿಗೆ ಒದಗಿಸಲಾಗಿರುವ ಮಾಹಿತಿಯ ಪ್ರಕಾರ ಅಣೆಕಟ್ಟು, ಗಣಿಗಾರಿಕೆ, ರಸ್ತೆ ನಿರ್ಮಾಣದಂಥ ಅಭಿವೃದ್ಧಿ ಯೋಜನೆಗಳಿಗಾಗಿ ಪ್ರತಿನಿತ್ಯ 135 ಹೆಕ್ಟೇರುಗಳಷ್ಟು ಕಾಡನ್ನು ನಾಶಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ವಾಸ್ತವವಾಗಿ ಈ ಕರಡು ನೀತಿಯನ್ನು ಚರ್ಚಿಸುತ್ತಿರುವ ಹೊತ್ತಿನಲ್ಲೇ ಪರಿಸರ ಸೂಕ್ಷ್ಮ ಪ್ರದೇಶವಾದ ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡದ ನಡುವೆ ರಸ್ತೆಯನ್ನು ನಿರ್ಮಿಸಲು 30,000 ಮರಗಳನ್ನು ಕಡಿದುಹಾಕುವ ಯೋಜನೆಯನ್ನು ಘೋಷಿಸಲಾಗಿದೆ. ಮತ್ತು ಕಲ್ಲಿದ್ದಲು ಗಣಿಗಾರಿಕೆಗಾಗಿ ಅರಣ್ಯಭೂಮಿಯನ್ನು ಪರಭಾರೆ ಮಾಡಿರುವುದರ ಸುತ್ತ ಹುಟ್ಟಿಕೊಂಡಿರುವ ವಿವಾದವೂ ಸಹ ಇನ್ನೂ ಬಗೆಹರಿದಿಲ್ಲ. ಈ ಬಗೆಯ ಯೋಜನೆಗಳಿಗಾಗಿ ಅರಣ್ಯಭೂಮಿಯನ್ನು ಹಸ್ತಾಂತರ ಮಾಡುವುದರಿಂದ ಅರಣ್ಯವು ತುಂಡು ತುಂಡಾಗುತ್ತಿರುವ ಬಗ್ಗೆ ಹೆಚ್ಚು ಚರ್ಚೆಗಳೆಲ್ಲೂ ನಡೆಯುತ್ತಿಲ್ಲ. ನೀತಿಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಿದಲ್ಲಿ ಪರಸ್ಪರ ಆತುಕೊಂಡಿರುವ ಅರಣ್ಯಗಳನ್ನು ಸಂರಕ್ಷಿಸುವ ಸಾಧ್ಯತೆಗಳಿವೆ. ಆದರೆ ಅವುಗಳನ್ನು ತುಂಡುತುಂಡಾಗಿ ಮಾಡಿದಾಗ ಅವುಗಳನ್ನು ಒತ್ತುವರಿ ಮಾಡುತ್ತಾ ನಿಧಾನವಾಗಿ ಕಬಳಿಸಿಬಿಡುವುದು ಸುಲಭವಾಗಲಿದೆ. ಈ ಪ್ರಕ್ರಿಯೆಯನ್ನು ನಾವು ನಗರ ಪ್ರದೇಶಗಳಲ್ಲಿ ಗಮನಿಸಿದ್ದೇವೆ.
ಕುರುಚುಲು ಕಾಡು ಅಥವಾ ಯಾವುದೇ ಕಾಡನ್ನು ಖಾಸಗಿ ಹಿತಾಸಕ್ತಿಗಳ ಸುಪರ್ದಿಗೆ ಕೊಡುವುದರಿಂದ ಆಗುವ ಅಪಾಯದ ಬಗ್ಗೆ 1988ರ ರಾಷ್ಟ್ರೀಯ ಅರಣ್ಯ ನೀತಿಗೆ ಅರಿವಿತ್ತು. ಆದರೂ ಪ್ರಸ್ತುತ ಕರಡು ನೀತಿಯಲ್ಲಿ ಅದೇ ಖಾಸಗೀಕರಣ ನೀತಿಯನ್ನು ತುರುಕಲಾಗಿದೆ. ಒಂದೊಮ್ಮೆ ಈ ಯೋಜನೆಯೇನಾದರೂ ಅಂಗೀಕಾರವಾದಲ್ಲಿ ದೇಶದ ಶೇ.40ರಷ್ಟು ನೈಸರ್ಗಿಕ ಕಾಡುಗಳು ಖಾಸಗಿ ಕ್ಷೇತ್ರಕ್ಕಾಗಿ ಮರಮಟ್ಟು (ಟಿಂಬರ್) ಒದಗಿಸುವ ಕಾರ್ಖಾನೆಗಳಾಗಲಿವೆ. ಅಂಥಾ ಒಂದು ಪ್ರತಿಗಾಮಿ ನೀತಿಯಿಂದ ಪರಿಸರಕ್ಕಾಗಲೀ ಅಥವಾ ಅದನ್ನೇ ನಂಬಿಕೊಂಡು ಬದುಕುತ್ತಿರುವ 30 ಕೋಟಿ ಜನರಿಗಾಗಲೀ ಯಾವುದೇ ಲಾಭವಿಲ್ಲ. ದುರದೃಷ್ಟಕರವಾದ ವಿಷಯವೇನೆಂದರೆ ಭೂಮಿ, ಕಾಡು ಮತ್ತು ನೀರಿನಂಥ ಯಾವುದೇ ನೈಸರ್ಗಿಕ ಸಂಪನ್ಮೂಲಗಳಿಂದ ಅತ್ಯಧಿಕ ಆದಾಯವನ್ನು ಹೇಗೆ ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಆಸಕ್ತಿಯುಳ್ಳ ಸರಕಾರಕ್ಕೆ ಮಾತ್ರ ಈ ನೀತಿ ಅತ್ಯಂತ ಅರ್ಥಪೂರ್ಣವಾಗಿ ಕಾಣುತ್ತಿದೆ.
ಕೃಪೆ: Economic and Political Weekly