ಜಗತ್ತಿನ ಅತಿ ಎತ್ತರದ 7 ಪರ್ವತಗಳನ್ನು ಅತಿ ವೇಗವಾಗಿ ಏರಿ ದಾಖಲೆ!
ಆಸ್ಟ್ರೇಲಿಯಾದ ಪರ್ವತಾರೋಹಿಯೊಬ್ಬರು ವೌಂಟ್ ಎವರೆಸ್ಟ್ ಪರ್ವತದ ತುದಿಯನ್ನು ಕಳೆದ ಸೋಮವಾರ ತಲಪುವ ಮೂಲಕ ಜಗತ್ತಿನ ಏಳು ರಾಷ್ಟ್ರಗಳ ಅತಿ ಎತ್ತರದ ಶೃಂಗಗಳನ್ನು ವೇಗವಾಗಿ ಏರಿದ ರ್ವತಾರೋಹಿಯಾಗಿ ದಾಖಲೆ ಮಾಡಿದ್ದಾರೆ.
ಅಂಟಾರ್ಟಿಕಾದ ಅತಿ ಎತ್ತರದ ಪರ್ವತ ವೌಂಟ್ ವಿಷನ್ ಹತ್ತಿದ ಬಳಿಕ ಪರ್ವತಾರೋಹಿ ಸ್ಟೀವ್ ಪ್ಲೈನ್ ಎವರೆಸ್ಟ್ ಅನ್ನು 117 ದಿನಗಳಲ್ಲಿ ಏರಿದ್ದಾರೆ. ಈ ಹಿಂದಿನ ಪರ್ವತಾರೋಹಣಕ್ಕಿಂತ 9 ದಿನ ಕಡಿಮೆ ತೆಗೆದುಕೊಂಡಿರುವುದರಿಂದ ಅವರು ದಾಖಲೆ ಸೃಷ್ಟಿಸಿದಾರೆ.
ಸ್ಟೀವ್ ಅವರು ಜಾನ್ ಗುಪ್ತಾ ಹಾಗೂ ಪೆಂಬಾ ಶೆರ್ಪಾ ಅವರೊಂದಿಗೆ ಸೋಮವಾರ ಬೆಳಗ್ಗೆ ಶಿಖರ ತಲುಪಿದ್ದರು ಎಂದು ಎವರೆಸ್ಟ್ ಆರೋಹಣದ ಸಂದರ್ಭ ಸರಕು ಸಾಗಾಟ ಮಾಡುವ ನೇಪಾಳದಲ್ಲಿರುವ ಹಿಮಾಲಯ ಗೈಡ್ ಈಶ್ವರಿ ಪೌದೆಲ್ ಹೇಳಿದ್ದಾರೆ.
ಅವರು 8,848 ಮೀಟರ್ (29,030) ಪರ್ವತದ ತುದಿಯಲ್ಲಿ ನಿಂತಿರುವುದನ್ನು ಜಿಪಿಎಸ್ ಟ್ರಾಕರ್ ತೋರಿಸಿದೆ. ಈಜಿನ ಸಂದರ್ಭ ನಡೆದ ಅಪಘಾತವೊಂದರಲ್ಲಿ ಬೆನ್ನಿನ ಮೂಳೆಗೆ ಹಾನಿ ಮಾಡಿಕೊಂಡ ನಾಲ್ಕು ವರ್ಷಗಳ ಬಳಿಕ ಅವರು ದಾಖಲೆ ಮುರಿಯುವ ಈ ಪರ್ವತಾರೋಹಣವನ್ನು ಆರಂಭಿಸಿದ್ದರು. ‘‘ನಾವು ಈಗ ಕ್ಯಾಂಪ್ 4ರಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದೇವೆ. ನಾಳೆ ಬೆಳಗ್ಗೆ ಶಿಖರದ ತುದಿ ತಲುಪುವ ಗುರಿ ಇರಿಸಿಕೊಂಡು ಇಂದು ಸಂಜೆ ಪರ್ವತ ಏರಲು ಆರಂಭಿಸಿದ್ದೇವೆ’’ ಎಂದು ಅವರು ಕಳೆದ ರವಿವಾರ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದರು.
ಬ್ರಿಟಷ್ ಪರ್ವತಾರೋಹಿ ಗುಪ್ತಾ ಅವರೊಂದಿಗೆ ಏಳು ಶಿಖರಗಳನ್ನು ಏರಿರುವ ಪ್ಲೈನ್ ‘‘ಹಲೋ... ಜಗತ್ತಿನ ಅತಿ ಎತ್ತರದಿಂದ! ನಾವು ಎವರೆಸ್ಟ್ ಶಿಖರದ ಮೇಲಿದ್ದೇವೆ. ನನಗೇನು ನೋಡಲು ಸಾಧ್ಯ ಹಾಗೂ ನನಗೇನು ಅನಿಸುತ್ತಿದೆ ಎಂದು ಹೇಳಲು ಪದಗಳೇ ಸಾಕಾಗುತ್ತಿಲ್ಲ. ಇದು ತುಂಬಾ ಭಾವನಾತ್ಮಕ’’ ಎಂದು ಅವರು ಹೇಳಿದ್ದಾರೆ.
ಏಳು ಪರ್ವತಗಳನ್ನು ಅತೀ ವೇಗವಾಗಿ ಏರಿದ ದಾಖಲೆಯನ್ನು ಹಿಂದಿನ ವರ್ಷ ಪೋಲಿಶ್ ಪರ್ವತಾರೋಹಿ ಜಾನುಝ್ ಕೊಚಾನ್‌ಸ್ಕಿ ಮಾಡಿದ್ದರು. ಅವರು 126 ದಿನಗಳಲ್ಲಿ ಏರಿದ್ದರು.