40 ಸ್ಥಾನಗಳು 100-120 ಆಗುವುದು... ಎಲ್ಲೋ.. ಏನೋ ಆಗಿದೆ ಎಂದರ್ಥ

Update: 2018-05-15 05:44 GMT

Last Take

40 ಸ್ಥಾನಗಳು 100-120 ಆಗುವಂತಹ ಅಚ್ಚರಿಗಳು ಘಟಿಸುವುದು ವಿಶೇಷ ಸಂದರ್ಭಗಳಲ್ಲಿ ಮಾತ್ರ. ಒಂದೋ ಆಡಳಿತ ಪಕ್ಷದ ವಿರುದ್ಧ ಪ್ರಬಲವಾದ ಆಡಳಿತ ವಿರೋಧಿ ಅಲೆ ಇರಬೇಕು, ಇಲ್ಲವಾದರೆ ಪ್ರತಿಪಕ್ಷದ ಪರ ಅಲೆ ಇರಬೇಕು.

1989, 1999, 2013ರ ವಿಧಾನಸಭಾ ಚುನಾವಣೆಯ ಕಾಲದಲ್ಲಿ ಆಡಳಿತ ವಿರೋಧಿ ಅಲೆಯ ಕಾರಣದಿಂದಾಗಿಯೇ ಕಾಂಗ್ರೆಸ್ ಬಹುಮತ ಗಳಿಸಿತ್ತು. 1985 ರಲ್ಲಿ  ಹೆಗಡೆ ಪರ, 2008ರಲ್ಲಿ ಯಡಿಯೂರಪ್ಪ ಪರವಾದ ಅಲೆಯ ಕಾರಣದಿಂದಾಗಿ ಕ್ರಮವಾಗಿ ಜನತಾ ಮತ್ತು ಬಿಜೆಪಿ ಬಹುಮತ ಗಳಿಸಿತ್ತು.

1977 ಮತ್ತು 1980ರ ಲೋಕಸಭಾ ಚುನಾವಣೆಯ ಕಾಲದಲ್ಲಿದ್ದ ಆಡಳಿತ ವಿರೋಧಿ ಅಲೆಯಿಂದಾಗಿ ಕ್ರಮವಾಗಿ ಜನತಾ ಪಕ್ಷ ಮತ್ತು ಕಾಂಗ್ರೆಸ್ ಬಹುಮತ ಪಡೆದಿತ್ತು. 1984ರಲ್ಲಿ ಮೃತ ಇಂದಿರಾಗಾಂಧಿ ಪರ ಮತ್ತು 2014ರಲ್ಲಿ ನರೇಂದ್ರ ಮೋದಿ ಪರ ಇದ್ದ ಅಲೆಯಿಂದಾಗಿ ಕ್ರಮವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಬಹುಮತ ಪಡೆದಿತ್ತು.

ರಾಜ್ಯ ಸುತ್ತಿ ಬಂದ ರಾಜ್ಯ-ದೇಶದ ಪತ್ರಕರ್ತರ ಪ್ರಕಾರ ಇಲ್ಲಿ ಆಡಳಿತ ವಿರೋಧಿ ಅಲೆಯಾಗಲಿ, ಬಿಜೆಪಿ ಪರವಾದ ಪ್ರಬಲ ಅಲೆಯಾಗಲಿ ಇಲ್ಲ. ಹೀಗಿದ್ದಾಗ 40 ಸ್ಥಾನ 100 ಆಗೋದು ಹೇಗೆ ಎನ್ನುವುದಷ್ಟೇ ಪ್ರಶ್ನೆ.

ಕೆಲವರು ಬಿಜೆಪಿ ಜತೆ ಕೆಜೆಪಿ ವಿಲೀನದಿಂದ ಬಿಜೆಪಿಗೆ 100-110 ಸೀಟುಗಳು ಬರುತ್ತೆ ಎಂದು ಹೇಳುತ್ತಾರೆ. ಇದರಲ್ಲಿ ಸ್ವಲ್ಪ ಸತ್ಯಾಂಶ ಇದೆ. ಆದರೆ ಯಾವ ತರ್ಕ ಬಳಸಿದರೂ ಯಡಿಯೂರಪ್ಪನವರಿಂದಾಗಿ 40 ಸ್ಥಾನ 80 ಇಲ್ಲವೆ ಅದು ಮೂರು ಪಟ್ಟು ಹೆಚ್ಚಾಗಬಹುದೇ?

ಬಿಜೆಪಿ ವಿರುದ್ಧ ಇನ್ನೂ ನಾಲ್ಕು ಅಂಶಗಳಿವೆ. ಮೊದಲನೆಯದಾಗಿ ಕನಿಷ್ಠ 75 ಸ್ಥಾನಗಳಲ್ಲಿ ಬಿಜೆಪಿಗೆ ಗಂಭೀರ ಅಭ್ಯರ್ಥಿಗಳಿಲ್ಲ (ಮುಖ್ಯವಾಗಿ ದಕ್ಷಿಣ ಕರ್ನಾಟಕದಲ್ಲಿ) 

ಎರಡನೆಯದಾಗಿ ಕೇವಲ ಐದು ವರ್ಷಗಳ ಹಿಂದೆ ಇದೇ ಮತದಾರರು ಯಡಿಯೂರಪ್ಪ, ರೆಡ್ಡಿ, ರಾಮುಲು, ಕಟ್ಟಾ ಮುಖಗಳನ್ನು ತಿರಸ್ಕರಿಸಿದ್ದಾರೆ.

ಮೂರನೆಯದಾಗಿ ಯಾವ ಕೋನದಲ್ಲಿ ಕನ್ನಡಿ ಹಿಡಿದರೂ ಮುಖ್ಯಮಂತ್ರಿ ಅಭ್ಯರ್ಥಿಗಳಾಗಿರುವ ಸಿದ್ದರಾಮಯ್ಯನವರು ಯಡಿಯೂರಪ್ಪನವರಿಗಿಂತ ಹೋಲಿಕೆಯಲ್ಲಿ ಸಮರ್ಥರು ಎನ್ನುವ ಅಭಿಪ್ರಾಯವೇ ಬರುತ್ತದೆ.

ನಾಲ್ಕನೆಯದಾಗಿ ಸಿದ್ದರಾಮಯ್ಯನವರ ಬಗ್ಗೆ ವಿರೋಧ ಪಕ್ಷಗಳು ಮಾಡುತ್ತಿರುವ ಏಕೈಕ ಆರೋಪವೆಂದರೆ ಅವರು ಮೇಲ್ಜಾತಿ ವಿರೋಧಿ, ಅಹಿಂದ ಪರ ಎನ್ನುವುದು. ತರ್ಕಕ್ಕಾಗಿ ಈ ಆರೋಪ ನಿಜವೆಂದು ಸ್ವೀಕರಿಸಿದರೂ ಇಂತಹ ಧ್ರುವೀಕರಣದಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ನಷ್ಟಕ್ಕಿಂತಲಾಭ ಹೆಚ್ಚು.

ಈ ಎಲ್ಲ ವಾಸ್ತವಗಳನ್ನು ಮೀರಿಯೂ ಬಿಜೆಪಿಗೆ ಬಹುಮತ ಬಂದರೆ.. ಎಲ್ಲೋ.. ಏನೋ ಆಗಿದೆ ಎಂದರ್ಥ.

Writer - ದಿನೇಶ್ ಅಮೀನ್ ಮಟ್ಟು

contributor

Editor - ದಿನೇಶ್ ಅಮೀನ್ ಮಟ್ಟು

contributor

Similar News