ರಾಜ್ಯಪಾಲರೇ ಎಲ್ಲವನ್ನೂ ತೀರ್ಮಾನಿಸುತ್ತಿರುವಾಗ...
ಸುಪ್ರೀಂ ಕೋರ್ಟು ಸಕಾಲಿಕವಾಗಿ ಮಧ್ಯಪ್ರವೇಶ ಮಾಡಿ ಮರುದಿನವೇ ಅಂದರೆ ಮೇ 19ರಂದೇ ಬಹುಮತವನ್ನು ಸಾಬೀತು ಮಾಡಬೇಕೆಂದು ಆದೇಶಿಸಿದ್ದರಿಂದ ದುಷ್ಟ ಮತ್ತು ಅನೈತಿಕ ದಾರಿಗಳಿಂದ ಬಹುಮತವನ್ನು ಕ್ರೋಡೀಕರಿಸಿಕೊಳ್ಳುವ ಪ್ರಯತ್ನಗಳು ಬಂದಾಗಿ ಸರಕಾರ ರಚನೆಯ ಪ್ರಕ್ರಿಯೆಯ ಪಾವಿತ್ರ್ಯವು ಸ್ವಲ್ಪಮಟ್ಟಿಗಾದರೂ ಉಳಿದುಕೊಳ್ಳುವಂತಾಯಿತು.
ಕಳೆದ ನಾಲ್ಕು ವಿಧಾನಸಭಾ ಚುನಾವಣೆಗಳಲ್ಲಿ ಕರ್ನಾಟಕದ ಮತದಾರರು ಮೂರು ಬಾರಿ ಯಾವೊಂದು ಪಕ್ಷಕ್ಕೂ ನಿರ್ಣಾಯಕ ಬಹುಮತವನ್ನು ನೀಡಿಲ್ಲ. ಇದೇ ಮೇ 12ರಂದು ಕರ್ನಾಟಕದ 222 ವಿಧಾನಸಭಾ ಸ್ಥಾನಗಳಿಗಾಗಿ ನಡೆದ ಚುನಾವಣೆಯಲ್ಲಿ ತಮ್ಮ ಪಕ್ಷವು ಎಲ್ಲ ಪಕ್ಷಗಳಿಗಿಂತ ಅತಿ ಹೆಚ್ಚು, 104 ಸ್ಥಾನಗಳನ್ನು ಗಳಿಸಿರುವುದರಿಂದ ಜನಾದೇಶ ತಮ್ಮ ಪಕ್ಷದ ಪರವಾಗಿದೆ ಎಂದು ಬಿಜೆಪಿ ಪ್ರತಿಪಾದಿಸುತ್ತಿದೆ. ಆದರೆ ತಮ್ಮ ಪಕ್ಷಕ್ಕೆ ಅತಿ ಹೆಚ್ಚು ಓಟುಗಳು ದಕ್ಕಿರುವುದರಿಂದ ಮತ್ತು ಆಳುವ ಪಕ್ಷವಾಗಿದ್ದರೂ ತಮ್ಮ ಪಕ್ಷಕ್ಕೆ ಕಳೆದ ಚುನಾವಣೆಗಿಂತ ಹೆಚ್ಚಿನ ಓಟುಗಳು ದಕ್ಕಿರುವುದರಿಂದ ಜನಾದೇಶವು ತಮ್ಮ ಪಕ್ಷದ ವಿರುದ್ಧವಾಗಿಲ್ಲವೆಂದು ಕಾಂಗ್ರೆಸ್ ಪ್ರತಿಪಾದಿಸುತ್ತಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಒಟ್ಟಾಗಿ ತಮಗೆ ಶೇ.50ಕ್ಕಿಂತ ಹೆಚ್ಚಿನ ಮತಗಳು ಮತ್ತು ಸೀಟುಗಳೂ ಸಿಕ್ಕಿರುವುದರಿಂದ ಸರಕಾರ ರಚಿಸುವ ಜನಾದೇಶವು ತಮ್ಮ ಪರವಾಗಿದೆಯೆಂದು ಒಟ್ಟಾಗಿ ಪ್ರತಿಪಾದನೆ ಮಾಡುತ್ತಿವೆ.
ಇಂತಹ ಸಂದರ್ಭಗಳಲ್ಲಿ ಹೀಗೆಯೇ ನಡೆದುಕೊಳ್ಳಬೇಕೆಂಬ ಯಾವುದೇ ಸ್ಪಷ್ಟ ನಿರ್ದೇಶನಾ ಸೂತ್ರಗಳಾಗಲೀ, ಕಾನೂನುಗಳಾಗಲೀ ಇಲ್ಲದಿರುವುದರಿಂದ ಸರಕಾರ ರಚನೆಯ ಬಗ್ಗೆ ಬಿಜೆಪಿಯ ಅಥವಾ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಪ್ರತಿಪಾದನೆಯನ್ನು ಒಪ್ಪಿಕೊಳ್ಳುವುದರಲ್ಲಿ ಕರ್ನಾಟಕದ ರಾಜ್ಯಪಾಲರಾದ ವಜೂಭಾಯಿ ವಾಲಾರವರು ತನ್ನಿಂತಾನೇ ಯಾವುದೇ ಕಾನೂನಾತ್ಮಕ ತಪ್ಪನ್ನು ಎಸಗುತ್ತಿರಲಿಲ್ಲ. ಚುನಾವಣೆಯ ನಂತರ ಜನಾದೇಶ ಸ್ಪಷ್ಟವಿರದಿರುವಾಗ ಹೆಚ್ಚು ಸ್ಥಾನಗಳನ್ನು ಗಳಿಸುವ ದೊಡ್ಡ ಪಕ್ಷ ಅಥವಾ ಬಹುಮತಕ್ಕೆ ಸಾಲುವಷ್ಟು ಸ್ಥಾನಗಳನ್ನು ಒಟ್ಟುಮಾಡಿಕೊಳ್ಳುವ ಚುನಾವಣೋತ್ತರ ಮೈತ್ರಿಕೂಟಗಳ ನಡುವೆ ಯಾವುದನ್ನು ಮೊದಲು ಸರಕಾರ ರಚಿಸಲು ಆಹ್ವಾನಿಸಬೇಕೆಂಬ ಬಗ್ಗೆ ಸುಪ್ರೀಂಕೋರ್ಟಿನ ಯಾವುದೇ ತೀರ್ಪುಗಳು ರಾಜ್ಯಪಾಲರಿಗೆ ಸ್ಪಷ್ಟ ನಿರ್ದೇಶನವನ್ನೇನೂ ನೀಡಿಲ್ಲ. ಒಂದು ಸ್ಥಿರ ಸರಕಾರದ ರಚನೆಯ ಅಗತ್ಯವನ್ನು ಮತ್ತು ಲಭ್ಯವಿರುವ ಸಂಖ್ಯಾ ಬಲಾಬಲಗಳ ಬಗ್ಗೆ ತಮ್ಮ ಸೂಕ್ತ ವಿವೇಚನೆಯನ್ನು ಬಳಸಿ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ರಾಜ್ಯಪಾಲರಿಗಿದೆ. ಅದೇನೇ ಇದ್ದರೂ ಸರಕಾರ ರಚಿಸಲು ನೀಡುವ ಆಹ್ವಾನವು ಸರಕಾರ ರಚನಾ ಪ್ರಕ್ರಿಯೆಯಲ್ಲಿ ಅಂತಿಮ ನಡೆಯೇನಲ್ಲ. ಸರಕಾರವನ್ನು ರಚಿಸಲು ರಾಜ್ಯಪಾಲರಿಂದ ಆಹ್ವಾನಿಸಲ್ಪಡುವ ಯಾವುದೇ ಪಕ್ಷವು ಸದನದಲ್ಲಿ ತನ್ನ ಬಹುಮತವನ್ನು ಸಾಬೀತುಪಡಿಸಬೇಕಿರುತ್ತದೆ.
ಚುನಾವಣೆಗಳು ವಿವಿಧ ಬಗೆಯ ಫಲಿತಾಂಶಗಳನ್ನು ಹೊರಹಾಕುವುದರಿಂದ ರಾಜ್ಯಪಾಲರು ಹೀಗೆಯೇ ನಡೆದುಕೊಳ್ಳಬೇಕೆಂಬ ಕಟ್ಟುನಿಟ್ಟಿನ ನಿರ್ದೇಶನಗಳು ಹಲವಾರು ಬಾರಿ ತದ್ವಿರುದ್ಧ ಪರಿಣಾಮಗಳನ್ನುಂಟುಮಾಡಬಹುದು. ಒಂದು ವಿಧಾನಸಭೆಲ್ಲಿ ಕಾನೂನು ಬದ್ಧವಾಗಿ ಮತ್ತು ಅಷ್ಟೇನೂ ಕಾನೂನು ಮಾನ್ಯವಲ್ಲದ ರೀತಿಗಳಲ್ಲೂ ಬಹುಮತವನ್ನು ಕ್ರೋಡೀಕರಿಸಿಕೊಳ್ಳಬಹುದು. ಆದರೆ ಒಂದು ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರು ಸರಕಾರವನ್ನು ರಚಿಸಲು ಅನೈತಿಕ ಮಾರ್ಗಗಳನ್ನು ಅನುಸರಿಸಲು ಸಾಧ್ಯವಾದಷ್ಟು ಅವಕಾಶ ಕೊಡದ ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಕರ್ನಾಟಕದಲ್ಲಿ ಬಿ.ಎಸ್.ಯಡಿಯೂರಪ್ಪನವರನ್ನು ಸರಕಾರ ರಚಿಸಲು ಆಹ್ವಾನಿಸಿದ್ದಲ್ಲದೆ ಬಹುಮತ ಸಾಬೀತುಪಡಿಸಲು ಅವರಿಗೆ 15 ದಿನಗಳಷ್ಟು ಕಾಲಾವಕಾಶವನ್ನು ನೀಡಿದ ರಾಜ್ಯಪಾಲ ವಜೂಭಾಯಿ ವಾಲಾ ಅವರ ಕ್ರಮವು ರಾಜ್ಯಪಾಲರಂಥ ಸಾಂವಿಧಾನಿಕ ಹುದ್ದೆಗಳಲ್ಲಿ ಇರುವವರಿಂದ ಅಂಥ ಉನ್ನತ ನಡವಳಿಕೆಗಳನ್ನು ಇಂದಿನ ಕಾಲಘಟ್ಟದಲ್ಲಿ ನಿರೀಕ್ಷಿಸಲಾಗದೆಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತಿದೆ. ನಮ್ಮ ಸಂವಿಧಾನ ರಚನಾ ಸಭೆಯು ರಾಜ್ಯಪಾಲರುಗಳು ರಾಗದ್ವೇಷ ರಹಿತವಾಗಿ, ತಟಸ್ಥವಾಗಿ ಮತ್ತು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುತ್ತಾರೆಂದು ನಿರೀಕ್ಷಿಸಿತ್ತು. ಆದರೆ ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸವು ನಮ್ಮ ಸಂವಿಧಾನ ರಚನಾ ಸಭೆಯ ನಿರೀಕ್ಷೆಗಳನ್ನು ಹುಸಿಯಾಗಿಸಿದೆ. 1950ರ ದಶಕದಲ್ಲಿ ಆಗಿನ ಮದ್ರಾಸ್ ರಾಜ್ಯದ ರಾಜ್ಯಪಾಲರಾಗಿದ್ದ ಪ್ರಕಾಶ ಅವರು ಚುನಾವಣೋತ್ತರದಲ್ಲಿ ರೂಪುಗೊಂಡ ಮೈತ್ರಿಕೂಟವನ್ನು ಪರಿಗಣಿಸದೆ ಆಗಿನ್ನೂ ವಿಧಾನಸಭೆಯ ಸದಸ್ಯರೂ ಕೂಡ ಆಗಿರದಿದ್ದ ಕಾಂಗ್ರೆಸ್‌ನ ಸಿ. ರಾಜಗೋಪಾಲಾಚಾರಿಯವರನ್ನು ಸರಕಾರ ರಚಿಸಲು ಆಹ್ವಾನಿಸಿದ್ದರು. ಇದು ಸಂವಿಧಾನ ರಚನಾ ಸಭೆಯ ನಿರೀಕ್ಷೆಗಳನ್ನು ಎಷ್ಟು ಬೇಗ ಹುಸಿಗೊಳಿಸಲ್ಪಟ್ಟಿತೆಂಬುದಕ್ಕೆ ನಿದರ್ಶನವಾಗಿದೆ.
ಪ್ರಸ್ತುತ ಪ್ರಕರಣದಲ್ಲಿ ರಾಜ್ಯಪಾಲ ವಜೂಭಾಯಿ ವಾಲರವರ ಪಕ್ಷಪಾತಿ ನಡವಳಿಕೆಗಳು ಮತ್ತು ದುರುದ್ದೇಶಗಳು ಎದ್ದುಕಾಣುತ್ತಿವೆ. ಅತ್ಯಂತ ರಹಸ್ಯವಾಗಿ ಯಡಿಯೂರಪ್ಪನವರಿಗೆ ಸರಕಾರ ರಚಿಸಲು ಆಹ್ವಾನಿಸಿದ್ದು ಮತ್ತು ಬೆಳಗಾಗುವುದರೊಳಗೆ ಪ್ರಮಾಣವಚನ ಭೋಧಿಸಿದ್ದನ್ನೂ ಒಳಗೊಂಡಂತೆ ವಜೂಭಾಯಿವಾಲಾ ಅವರ ಪ್ರತಿಯೊಂದು ನಡೆಯೂ ಬಿಜೆಪಿಗೆ ಅನುಕೂಲಕಾರಿಯಾಗುವಂತೆ ಪಕ್ಷಪಾತಿಯಾಗಿತ್ತು. ಪ್ರಸ್ತುತ ಪ್ರಕರಣಗಳ ವಾಸ್ತವ ಸತ್ಯಗಳು ಕಣ್ಣಿಗೆ ರಾಚುವಂತಿವೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಬಹುಮತಕ್ಕೆ ಬೇಕಾಗಿರುವ 112ಕ್ಕಿಂತಲೂ ಹೆಚ್ಚಿನ ಸ್ಥಾನಬಲವಿದೆ. ಬಿಜೆಪಿಗೆ ಅಷ್ಟು ಸ್ಥಾನಬಲವಿಲ್ಲ. ಅಷ್ಟಾದರೂ ಬಿಜೆಪಿಯನ್ನು ಸರಕಾರ ರಚಿಸಲು ಆಹ್ವಾನಿಸಿದ್ದು ಮಾತ್ರವಲ್ಲದೆ ಬಹುಮತವನ್ನು ಸಾಬೀತು ಮಾಡುವ ಮುನ್ನ ಕಾಂಗ್ರೆಸ್-ಜೆಡಿಎಸ್‌ಗಳಿಂದ ತಮಗೆ ಬೇಕಿರುವಷ್ಟು ಸದಸ್ಯರನ್ನು ಪಕ್ಷಾಂತರ ಮಾಡಲು ಏನು ಬೇಕೋ ಎಲ್ಲವನ್ನು ಮಾಡಲು ಬೇಕಿರುವಷ್ಟು ಸಮಯಾವಕಾಶವನ್ನು ಸಹ ನೀಡಲಾಯಿತು. ಅಷ್ಟು ಮಾತ್ರವಲ್ಲ. 2005ರ ಅನಿಲ್‌ಕುಮಾರ್ ಝಾ ಮತ್ತು ಭಾರತ ಸರಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂಕೋರ್ಟು ನೀಡಿರುವ ಆದೇಶಕ್ಕೆ ವಿರುದ್ಧವಾಗಿ ರಾಜ್ಯಪಾಲರು ಸದನದಲ್ಲಿ ಬಹುಮತ ಸಾಬೀತು ಮಾಡುವ ಮುನ್ನವೇ ಒಬ್ಬ ಆಂಗ್ಲೋ-ಇಂಡಿಯನ್ ಸದಸ್ಯರನ್ನೂ ಸಹ ನಾಮಕರಣ ಮಾಡಲು ಮುಂದಾಗಿತ್ತು.
ಇದು ರಾಜ್ಯಪಾಲರ ಪಕ್ಷಪಾತಿತನವನ್ನು ಅನುಮಾನಕ್ಕೆಡೆಯಿಲ್ಲದಂತೆ ರುಜುವಾತು ಮಾಡಿತು. ಆದರೆ ಸುಪ್ರೀಂ ಕೋರ್ಟು ಸಕಾಲಿಕವಾಗಿ ಮಧ್ಯಪ್ರವೇಶ ಮಾಡಿ ಮರುದಿನವೇ ಅಂದರೆ ಮೇ 19ರಂದೇ ಬಹುಮತವನ್ನು ಸಾಬೀತುಮಾಡಬೇಕೆಂದು ಆದೇಶಿಸಿದ್ದರಿಂದ ದುಷ್ಟ ಮತ್ತು ಅನೈತಿಕ ದಾರಿಗಳಿಂದ ಬಹುಮತವನ್ನು ಕ್ರೋಡೀಕರಿಸಿಕೊಳ್ಳುವ ಪ್ರಯತ್ನಗಳು ಬಂದಾಗಿ ಸರಕಾರ ರಚನೆಯ ಪ್ರಕ್ರಿಯೆಯ ಪಾವಿತ್ರ್ಯವು ಸ್ವಲ್ಪಮಟ್ಟಿಗಾದರೂ ಉಳಿದುಕೊಳ್ಳುವಂತಾಯಿತು. ಪ್ರಾಯಶಃ, ಸದನದಲ್ಲಿ ಬಹುಮತವನ್ನು ಸಾಬೀತು ಮಾಡುವ ಮುನ್ನ ಆಂಗ್ಲೋ ಇಂಡಿಯನ್ ಸದಸ್ಯರ ನೇಮಕಾತಿ ಮತ್ತು ಸಚಿವ ಸಂಪುಟವನ್ನು ರಚಿಸದೆಯೇ ಸರಕಾರವನ್ನು ನಡೆಸಲು ಮುಂದಾದ ಯಡಿಯೂರಪ್ಪನವರ ಅವಸರದ ನಡವಳಿಕೆಗಳು, ಈ ಪ್ರಕ್ರಿಯೆ ಹಿಂದೆ ಇರಬಹುದಾದ ದುರುದ್ದೇಶಗಳ ಬಗ್ಗೆ ಸುಪ್ರೀಂ ಕೋರ್ಟಿಗೆ ಇದ್ದ ಸಂದೇಹವನ್ನು ಗಟ್ಟಿಗೊಳಿಸಿರಬೇಕು. ಸುಪ್ರೀಂಕೋರ್ಟಿನ ಸಾಂಸ್ಥಿಕ ವಿಶ್ವಾಸಾರ್ಹತೆಯೇ ಅತ್ಯಂತ ಕುಸಿತ ಕಂಡಿರುವ ಈ ಹೊತ್ತಿನಲ್ಲಿ ಈ ಮಹತ್ವದ ರಾಜಕೀಯ ಪ್ರಕ್ರಿಯೆಯ ಮೇಲುಸ್ತುವಾರಿಯನ್ನು ವರಿಷ್ಠ ನ್ಯಾಯಾಲಯವು ಸಾಕಷ್ಟು ತಟಸ್ಥವಾಗಿ ಮತ್ತು ನಿಷ್ಪಕ್ಷಪಾತವಾಗಿ ನಡೆಸಿದೆ ಎಂದೇ ಹೇಳಬೇಕು.
ಅದೇನೇ ಇದ್ದರೂ ರಾಜ್ಯಪಾಲರ ಕಚೇರಿಯ ಈ ದುರುದ್ದೇಶಪೂರ್ವಕ ನಡವಳಿಕೆಯ ಬಗ್ಗೆ ಯಾವುದೇ ಒಬ್ಬ ವ್ಯಕ್ತಿಯನ್ನೋ ಅಥವಾ ಒಂದು ಪಕ್ಷವನ್ನೋ ದೂರಲು ಸಾಧ್ಯವಿಲ್ಲ. ಕೇಂದ್ರದಲ್ಲಿದ್ದ ಪ್ರತಿಯೊಂದು ಸರಕಾರವು ಸಹ ರಾಜ್ಯಪಾಲರ ಕಚೇರಿಯನ್ನು ದುರುಪಯೋಗಪಡಿಸಿಕೊಂಡು ರಾಜ್ಯಗಳ ರಾಜಕಾರಣದಲ್ಲಿ ಮೂಗುತೂರಿಸಲು ಬಳಸಿಕೊಂಡಿವೆ ಅಥವಾ ಬಳಸಿಕೊಳ್ಳಲು ಪ್ರಯತ್ನಿಸಿವೆ. ರಾಷ್ಟ್ರಪತಿ ಆಳ್ವಿಕೆಯನ್ನು ಹೇರಲು ಶಿಫಾರಸು ಮಾಡುವ ಮೂಲಕ ಅಥವಾ ಆಳುವ ಪಕ್ಷದಿಂದ ಪಕ್ಷಾಂತರವನ್ನು ಪ್ರಚೋದಿಸಿ ಸರಕಾರದ ಬಹುಮತವನ್ನು ಪ್ರಶ್ನಿಸುವಂತೆ ಮಾಡುವ ಮೂಲಕ ರಾಜ್ಯಪಾಲರು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ ಸೇವೆಯನ್ನು ಮಾಡಿದ್ದಾರೆ. ಹೀಗಾಗಿ ವಜೂಭಾಯಿ ವಾಲಾ ಅವರ ಕ್ರಮಗಳು ಸ್ವತಂತ್ರ ಭಾರತದ ಇತಿಹಾಸದಲ್ಲಿ ಅಪರೂಪದ ಪ್ರಕರಣವಲ್ಲ.
ಒಂದು ವೇಳೆ ಭಾರತದ ಪ್ರಜಾತಂತ್ರದ ಆರೋಗ್ಯವನ್ನು ನಿಯಮಿತವಾಗಿ, ಸ್ವತಂತ್ರವಾಗಿ ಮತ್ತು ಮುಕ್ತವಾಗಿ ಚುನಾವಣೆಗಳು ನಡೆಯುತ್ತಿದೆಯೇ ಎಂಬುದನ್ನು ಆಧರಿಸಿ ತೀರ್ಮಾನಿಸುವುದಾದರೆ ಭಾರತದ ಪ್ರಜಾತಂತ್ರ ಆರೋಗ್ಯ ಗಟ್ಟಿಯಾಗಿದೆ ಎಂದು ಹೇಳಬಹುದು. ಆದರೆ ಚುನಾವಣೆಯ ನಂತರದ ಬೆಳವಣಿಗೆಗಳನ್ನು ಗಮನಿಸುವುದಾದರೆ ಈ ಅಭಿಪ್ರಾಯಗಳು ನಾಟಕೀಯವಾಗಿ ಬದಲಾಗಿಬಿಡುತ್ತವೆ. ಕಳೆದ ವರ್ಷ ಗೋವಾ, ಮಣಿಪುರ ಮತ್ತು ಮೇಘಾಲಯಗಳಲ್ಲಿ ಸಂಭವಿಸಿದ್ದನ್ನು ಗಮನಿಸುವುದಾದರೆ ಚುನಾವಣೆಯ ಫಲಿತಾಂಶಗಳಿಗೂ ಸರಕಾರದ ರಚನೆಗಳಿಗೂ ಯಾವುದೇ ಸಂಬಂಧವಿರುವುದಿಲ್ಲವೆಂಬುದು ಸ್ಪಷ್ಟವಾಗುತ್ತದೆ ಮತ್ತು ಈಗ ಕರ್ನಾಟಕದ ವಿಧಾನಸಭಾ ಚುನಾವಣೆಗಳು ಭಾರತದ ಸಾಂವಿಧಾನಿಕ ಪ್ರಜಾಸತ್ತೆಯ ನೈಜ ಸ್ಥಿತಿಯನ್ನು ಸ್ಪಷ್ಟಪಡಿಸುತ್ತಿದೆ.
ಕೃಪೆ: Economic and Political Weekly