ರಾಷ್ಟ್ರೀಯ ಶಿಕ್ಷಕರ ಪರೀಕ್ಷೆಯಿಂದ ಕನ್ನಡ ಸೇರಿ 17 ಭಾಷೆಗಳನ್ನು ತೆಗೆದು ಹಾಕಿದ ಸಿಬಿಎಸ್‌ಇ
ಹೊಸದಿಲ್ಲಿ, ಜೂ.18: ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ 2018ರ ಆಯ್ಕೆಗಳ ಪಟ್ಟಿಯಿಂದ ಕೇಂದ್ರ ಶಿಕ್ಷಣ ಮಂಡಳಿಯು ಹದಿನೇಳು ಭಾಷೆಗಳನ್ನು ತೆಗೆದುಹಾಕಿದೆ ಎಂದು ಆಂಗ್ಲ ಪತ್ರಿಕೆ ಸೋಮವಾರ ವರದಿ ಮಾಡಿದೆ. ತಮಿಳು, ಮಲಯಾಳಂ, ಕನ್ನಡ, ಗುಜರಾತಿ ಹಾಗೂ ಬೆಂಗಾಳಿ ಸೇರಿದಂತೆ ಹದಿನೇಳು ಭಾಷೆಗಳನ್ನು ತೆಗೆದು ಹಾಕಲಾಗಿದ್ದು ಕೇವಲ ಹಿಂದಿ, ಇಂಗ್ಲಿಷ್ ಮತ್ತು ಸಂಸ್ಕೃತವನ್ನು ಉಳಿಸಲಾಗಿದೆ ಎಂದು ವರದಿ ತಿಳಿಸಿದೆ.
ಇಲ್ಲಿಯವರೆಗೆ ಅಭ್ಯರ್ಥಿಗಳು 20 ಭಾಷೆಗಳ ಪೈಕಿ ಎರಡನ್ನು ಆಯ್ಕೆ ಮಾಡಬೇಕಾಗಿತ್ತು. ಆದರೆ ಈಗ ಮೂರು ಭಾಷೆಗಳ ಪೈಕಿ ಎರಡನ್ನು ಆಯ್ಕೆ ಮಾಡುವಂತಾಗಿದೆ. ಕೇಂದ್ರೀಯ ವಿದ್ಯಾಲಯ ಹಾಗೂ ಸಿಬಿಎಸ್‌ಇ ಅಂಗಸಂಸ್ಥೆಯಾದ ಖಾಸಗಿ ಸಂಸ್ಥೆಗಳಲ್ಲಿ ಶಿಕ್ಷಕರ ನೇಮಕಾತಿಗೆ ಈ ಪರೀಕ್ಷೆ ಕಡ್ಡಾಯವಾಗಿದೆ. ಈ ಪರೀಕ್ಷೆಯನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಒಂದನೇ ತರಗತಿಯಿಂದ ಐದರವರೆಗೆ ಕಲಿಸುವ ಮತ್ತು ಆರರಿಂದ ಎಂಟನೇ ತರಗತಿವರೆಗೆ ಕಲಿಸುವ ವರ್ಗಗಳಾಗಿ ವಿಂಗಡಿಸಲಾಗಿದೆ. ಈ ಪರೀಕ್ಷೆಯಲ್ಲಿ ಎರಡು ಭಾಷೆಗಳನ್ನು ಆಯ್ಕೆ ಮಾಡುವುದು ಕಡ್ಡಾಯವಾಗಿದ್ದು ಮೊದಲನೆಯದು ತಾವು ಕಲಿಸುವ ಮಾಧ್ಯಮದ ಭಾಷೆಯ ಮೇಲಿನ ಹಿಡಿತವನ್ನು ಸಾಬೀತುಪಡಿಸುವ ಸಲುವಾಗಿಯಾದರೆ, ಎರಡನೆಯದು ಸಮಾಲೋಚನೆ ಮತ್ತು ಗ್ರಹಿಕೆಯ ಉದ್ದೇಶದಿಂದ ಆಯ್ಕೆ ಮಾಡಬೇಕಾಗಿದೆ. ಸರಕಾರದ ಈ ನಿರ್ಧಾರದಿಂದ ದಕ್ಷಿಣ ರಾಜ್ಯಗಳ ಅಭ್ಯರ್ಥಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
2016ರಲ್ಲಿ ತಮಿಳುನಾಡಿನ 12,700 ಅಭ್ಯರ್ಥಿಗಳು ಈ ಪರೀಕ್ಷೆಯಲ್ಲಿ ಕುಳಿತಿದ್ದರು. ಅವರು ಮೊದಲನೆಯ ಭಾಷೆ ಇಂಗ್ಲಿಷ್ ಹಾಗೂ ಎರಡನೆಯ ಭಾಷೆಯಾಗಿ ತಮಿಳನ್ನು ಆಯ್ಕೆ ಮಾಡಿಕೊಂಡಿದ್ದರು ಎಂದು ಪತ್ರಿಕಾ ವರದಿ ತಿಳಿಸಿದೆ. ಈ ಕ್ರಮವು, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ, ಪಶ್ಚಿಮ ಬಂಗಾಳ ಮತ್ತು ಗುಜರಾತ್‌ನ ಭಾಷಾ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಹಕ್ಕುಗಳನ್ನು ನಿರ್ಲಕ್ಷಿಸುವ ಮೂಲಕ ಸಂವಿಧಾನದ ವಿಧಿ 14, 15, 16 ಮತ್ತು 21ನ್ನು ಉಲ್ಲಂಘಿಸಿದೆ ಎಂದು ಶಿಕ್ಷಣತಜ್ಞ ಪ್ರಿನ್ಸ್ ಗಜೇಂದ್ರ ಬಾಬು ತಿಳಿಸಿದ್ದಾರೆ.