ಪುರಾಣ ರೂಪಕಗಳನ್ನು ಮುರಿಯುವ ‘ರಾಮ ಮಂದಿರ ಯಾಕೆ ಬೇಡ?’

Update: 2018-07-16 18:59 GMT

‘ರಾಮ ಮಂದಿರ ಏಕೆ ಬೇಡ?’ ಕೆ. ಎಸ್. ಭಗವಾನ್ ಅವರು ಬರೆದಿರುವ ವೈಚಾರಿಕ ಲೇಖನಗಳ ಸಂಗ್ರಹ. ಕೃತಿಯ ಹೆಸರೇ ಅದರೊಳಗಿರುವ ವಸ್ತುವನ್ನು ಊಹಿಸುವಂತೆ ಮಾಡುತ್ತದೆ. ರಾಮಮಂದಿರ ರಾಜಕೀಯದ ವಿರುದ್ಧ ಹಲವು ದಶಕಗಳಿಂದ ಭಗವಾನ್ ಮಾತನಾಡುತ್ತಾ ಬಂದಿದ್ದಾರೆ. ಇದರ ಹಿಂದಿರುವ ವೈದಿಕ ರಾಜಕಾರಣದ ವಿರುದ್ಧ ಭಗವಾನ್ ಅವರಷ್ಟು ಸ್ಪಷ್ಟವಾಗಿ ಮಾತನಾಡುತ್ತಾ ಬಂದಿರುವ ಚಿಂತಕರು ಇನ್ನೊಬ್ಬರಿಲ್ಲ. ಈ ಹಿನ್ನೆಲೆಯಲ್ಲಿಯೇ ಅವರನ್ನು ಕೊಲ್ಲುವ ಸಂಚು ಕೂಡ ಇತ್ತೀಚೆಗೆ ಬಹಿರಂಗವಾಗಿದೆ. ಕೇಸರಿ ಉಗ್ರರು ಭಗವಾನ್ ವಿರುದ್ಧ ಕತ್ತಿ ಮಸೆಯುತ್ತಲೇ ಇದ್ದಾರೆ. ಈ ಕೃತಿ ಬಿಜೆಪಿಯವರು ನಿರ್ಮಿಸಲು ಹೊರಟಿರುವ ರಾಮಮಂದಿರವನ್ನಷ್ಟೇ ಖಂಡಿಸುವುದಲ್ಲ. ಬದಲಿಗೆ ರಾಮನೇ ಭಾರತಕ್ಕೆ ಅಪ್ರಸ್ತುತ ಎನ್ನುವುದನ್ನು ಎತ್ತಿ ಹಿಡಿಯುತ್ತಾರೆ. ಈ ಹಿಂದೆ ಪೋಲಂಕಿಯವರು ‘ಸೀತಾಯಣ’ ಇದೇ ರೀತಿಯಲ್ಲಿ ರಾಮನ ವ್ಯಕ್ತಿತ್ವವನ್ನು ಪರಿಚಯಿಸುವ ಪ್ರಯತ್ನ ಮಾಡಿತ್ತು. ರಾಮಾಯಣದಲ್ಲಿ ಸೀತೆಯನ್ನೇ ಕೇಂದ್ರವಾಗಿಟ್ಟುಕೊಂಡು ರಾಮನ ವ್ಯಕ್ತಿತ್ವದ ದೌರ್ಬಲ್ಯಗಳನ್ನು ಅವರು ತೆರೆದಿಟ್ಟಿದ್ದರು.

‘ರಾಮರಾಜ್ಯ’ ಎನ್ನುವ ಪರಿಕಲ್ಪನೆಯನ್ನೇ ವಿರೋಧಿಸುವ ಭಗವಾನ್, ರಾಮಮಂದಿರ ಏಕೆ ಬೇಡ ಎನ್ನುವುದರಿಂದ ಹಿಡಿದು, ವಾಲ್ಮೀಕಿಯನ್ನೇ ಮುಂದಿಟ್ಟುಕೊಂಡು ರಾಮ ಹೇಗೆ ದೇವರಲ್ಲ ಎನ್ನುವುದನ್ನು ಹೇಳುತ್ತಾರೆ. ‘ದೇವತೆಗಳು ಬಡಿದಾಡುವುದಿಲ್ಲ, ಅವರು ವಾದಿಸುತ್ತಾರೆ, ಚರ್ಚಿಸುತ್ತಾರೆ, ಸಂವಾದಿಸುತ್ತಾರೆ. ಅವರ ಮನಸ್ತಾಪ ಅಥವಾ ಭಿನ್ನಾಭಿಪ್ರಾಯ ಅಲ್ಲಿಗೇ ಮುಗಿಯುತ್ತದೆ...’ ಆದರೆ ಇಂತಹ ಯಾವ ಗುಣಗಳೂ ರಾಮನಲ್ಲಿ ಕಾಣುವುದಿಲ್ಲ ಎನ್ನುವುದನ್ನು ಅವರು ತಮ್ಮ ಲೇಖನಗಳಲ್ಲಿ ಬಿಡಿಸಿ ಹೇಳುತ್ತಾರೆ. ಹಾಗಾಗಿ ಮನುಷ್ಯ ತನ್ನ ಮೃಗತನ ಕಳೆದುಕೊಂಡು ಮನುಷ್ಯತ್ವ ಬೆಳೆಸಿಕೊಂಡು ದೇವತ್ವಕ್ಕೆ ಏರಲು ವಿವೇಕ, ವಿಚಾರ, ಮುಕ್ತ ಚಿಂತನೆ, ಸೈರಣೆ, ಪರ ವಿರೋಧಗಳ, ವಿಸ್ತಾರ ಓದು, ಸಂವಾದ ಮತ್ತು ವಿಚಾರಾತ್ಮಕ ಬರವಣಿಗೆ ಅಗತ್ಯವಾಗಿದೆ ಎನ್ನುವುದನ್ನೂ ಅವರ ಲೇಖನಗಳ ಮೂಲಕ ತಿಳಿಸಿಕೊಡುತ್ತಾರೆ.

ಈ ಕೃತಿ ಸಿಂಧೂ ನೆಲದ ಸುರ-ಅಸುರರ ಪುರಾಣ ಕತೆಗಳ ರೂಪಕಗಳನ್ನು ಒಡೆದು ಅದರ ವಾಸ್ತವಗಳನ್ನು ತೆರೆದಿಡುತ್ತದೆ. ರಾಮನ ಹಿನ್ನೆಲೆಯ ಕುರಿತಂತೆ ಜನಸಾಮಾನ್ಯರಿಗೆ ಅರಿಯದ ಹಲವು ವಿವರಗಳನ್ನು ಪುರಾಣಗಳಿಂದಲೇ ಎಳೆದು ಹೊರಗಿಡು ತ್ತಾರೆ. ಬೌದ್ಧ ಚಿಂತನೆಗಳ ವಿರುದ್ಧ ಹೇಗೆ ವೈದಿಕರು ಬೇರೆ ಬೇರೆ ಕತೆಗಳನ್ನು ಕಟ್ಟಿ ಯುದ್ಧ ಸಾರಿದರು ಎನ್ನುವ ಅಂಶಗಳನ್ನು ವಿವರಿಸುತ್ತಾರೆ. ಈ ನಿಟ್ಟಿನಲ್ಲಿ ಇಲ್ಲಿರುವ ಒಂಬತ್ತು ಲೇಖನಗಳೂ ಸತ್ಯವನ್ನು ತೆರೆದಿಡುವ ನಿಗಿ ನಿಗಿ ಕೆಂಡ. ಭಗವದ್ಗೀತೆಯನ್ನು ರಾಷ್ಟ್ರೀಯ ಗ್ರಂಥವನ್ನಾಗಿಸಲು ಹೊರಟಿರುವವರ ಸಂಚುಗಳನ್ನೂ ಈ ಕೃತಿ ಬಯಲಿಗೆಳೆಯುತ್ತವೆ. ‘ಭಗವದ್ಗೀತೆಯು ಸ್ತ್ರೀ, ವೈಶ್ಯ, ಶೂದ್ರರನ್ನು ದ್ವೇಷಿಸುವ ಗ್ರಂಥ’ ಎನ್ನುವುದನ್ನು ಅದರಲ್ಲಿರುವ ಶ್ಲೋಕಗಳ ಆಧಾರದಲ್ಲೇ ಅವರು ಸಾಬೀತು ಪಡಿಸುತ್ತಾರೆ. ಗೀತೆಯಲ್ಲಿ ತುಂಬಿರುವುದೆಲ್ಲ ಬ್ರಾಹ್ಮಣ ಮತವೇ ಹೊರತು ಬೇರಾವುದೂ ಅಲ್ಲ ಎನ್ನುವುದನ್ನು ಅವರು ಸ್ಪಷ್ಟಪಡಿಸುತ್ತಾರೆ. ಲಡಾಯಿ ಪ್ರಕಾಶನ, ಗದಗ ಇವರು ಹೊರತಂದಿರುವ ಕೃತಿಯ ಒಟ್ಟು ಪುಟಗಳು 138. ಮುಖಬೆಲೆ 100 ರೂಪಾಯಿ.

ಆಸಕ್ತರು 94802 86844 ದೂರವಾಣಿಯನ್ನು ಸಂಪರ್ಕಿಸಬಹುದು.

Writer - ಕಾರುಣ್ಯಾ

contributor

Editor - ಕಾರುಣ್ಯಾ

contributor

Similar News