ಜನಸಾಮಾನ್ಯರು ಪಾಲ್ಗೊಳ್ಳದ ‘ವಿಶ್ವ ಹಿಂದೂ ಕಾಂಗ್ರೆಸ್’

Update: 2018-09-28 18:42 GMT

ಮುಂದುವರಿದ ಬಂಡವಾಳಶಾಹಿ ರಾಷ್ಟ್ರಗಳಲ್ಲಿನ ಹಿಂದೂಗಳೆಂದು ಗುರುತಿಸಿಕೊಳ್ಳುವವರನ್ನು ಬ್ರಾಹ್ಮಣಶಾಹಿ ಹಿಂದೂ ಫ್ಯಾಶಿಸ್ಟ್ ಚಿಂತನೆಗಳಡಿ ಸಂಘಟಿಸಿಕೊಳ್ಳುವುದೇ ಇವರ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು ಎನ್ನುವುದರಲ್ಲಿ ಅನುಮಾನ ಬೇಕಾಗಿಲ್ಲ. ವಿಶ್ವ ಹಿಂದೂ ಕಾಂಗ್ರೆಸ್ ಎಂದು ಕರೆದುಕೊಂಡ ಈ ಕಾರ್ಯಕ್ರಮಕ್ಕೂ ಹಿಂದೂ ಎಂದು ಗುರುತಿಸಿಕೊಳ್ಳುವ ಸಮುದಾಯಗಳಿಗೂ ಯಾವುದೇ ಸಂಬಂಧವಿಲ್ಲ. ಆದರೆ ಧರ್ಮದಲ್ಲಿರುವ ಕ್ರೂರವಾದ ಅಸ್ಪಶ್ಯತೆ, ಜಾತಿ ಶೋಷಣೆಗಳು, ಕಂದಾಚಾರಗಳು, ಮೂಢ ನಂಬಿಕೆಗಳ ಬಗೆಗಿನ ಚರ್ಚೆಗಳೇನೂ ಈ ಸಭೆಯಲ್ಲಿ ನಡೆದಿಲ್ಲದಿರುವುದು ಆಶ್ಚರ್ಯವೇನೂ ಅಲ್ಲ.


ಇದೇ 2018ರ ಸೆಪ್ಟಂಬರ್ 7ರಿಂದ 9ರವರೆಗೆ ಅಮೆರಿಕದ ಚಿಕಾಗೋದಲ್ಲಿ ಆರೆಸ್ಸೆಸ್ ಮುಖ್ಯಸ್ಥ ಮತ್ತು ಭಾರತದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಜಾಗತಿಕ ಹಿಂದೂ ಕಾಂಗ್ರೆಸ್‌ನಲ್ಲಿ ಭಾಗವಹಿಸಿದ್ದರು. ಉಪರಾಷ್ಟ್ರಪತಿ ಸಾರ್ವಜನಿಕ ವೆಚ್ಚದಲ್ಲಿ ಅಲ್ಲಿ ಭಾಗವಹಿಸಿದ್ದರು. ಅವರು ಅಲ್ಲಿನ ಮುಖ್ಯ ಭಾಷಣಕಾರರೂ ಆಗಿದ್ದರು. ಆ ಸಭೆಯಲ್ಲಿ ಫ್ಯಾಶಿಸ್ಟ್ ಜಿಯೋನಿಸ್ಟ್ ಇಸ್ರೇಲ್‌ನ ಏಜೆಂಟ್ ತಪನ್ ಘೋಷ್, ಅಮೆರಿಕದ ಗೂಢಚಾರ ಸಂಸ್ಥೆ ಸಿಐಎಗೆ ಸಂಬಂಧಪಟ್ಟ ವ್ಯಕ್ತಿಗಳು, ಕಾರ್ಪೊರೇಟ್ ಜಗತ್ತಿನ ಘಟಾನುಘಟಿಗಳು, ಬಾಲಿವುಡ್ ಸೆಲೆಬ್ರಿಟಿಗಳು ಇತ್ಯಾದಿ ಹಲವರು ಭಾಗವಹಿಸಿದ್ದರು.

   ಈ ಕಾರ್ಯಕ್ರಮದ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆಗಳು ಅಮೆರಿಕಾದ್ಯಂತ ನಡೆದಿದ್ದವು. ಸುಮಾರು ಎಂಬತ್ತು ದೇಶಗಳ 2,500 ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಭಾಗವಹಿಸಿದ ಬಹುತೇಕ ಪ್ರತಿನಿಧಿಗಳು, ಮೇಲ್ವರ್ಗದ ಮೇಲ್ಜಾತಿಗೆ ಸೇರಿದವರೇ ಆಗಿದ್ದರು. ಮುಂದುವರಿದ ಬಂಡವಾಳಶಾಹಿ ರಾಷ್ಟ್ರಗಳಲ್ಲಿನ ಹಿಂದೂಗಳೆಂದು ಗುರುತಿಸಿಕೊಳ್ಳುವವರನ್ನು ಬ್ರಾಹ್ಮಣಶಾಹಿ ಹಿಂದೂ ಫ್ಯಾಶಿಸ್ಟ್ ಚಿಂತನೆಗಳಡಿ ಸಂಘಟಿಸಿಕೊಳ್ಳುವುದೇ ಇವರ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು ಎನ್ನುವುದರಲ್ಲಿ ಅನುಮಾನ ಬೇಕಾಗಿಲ್ಲ. ವಿಶ್ವ ಹಿಂದೂ ಕಾಂಗ್ರೆಸ್ ಎಂದು ಕರೆದುಕೊಂಡ ಈ ಕಾರ್ಯಕ್ರಮಕ್ಕೂ ಹಿಂದೂ ಎಂದು ಗುರುತಿಸಿಕೊಳ್ಳುವ ಸಮುದಾಯಗಳಿಗೂ ಯಾವುದೇ ಸಂಬಂಧವಿಲ್ಲ. ಆದರೆ ಧರ್ಮದಲ್ಲಿರುವ ಕ್ರೂರವಾದ ಅಸ್ಪಶ್ಯತೆ, ಜಾತಿ ಶೋಷಣೆಗಳು, ಕಂದಾಚಾರಗಳು, ಮೂಢ ನಂಬಿಕೆಗಳ ಬಗೆಗಿನ ಚರ್ಚೆಗಳೇನೂ ಈ ಸಭೆಯಲ್ಲಿ ನಡೆದಿಲ್ಲದಿರುವುದು ಆಶ್ಚರ್ಯವೇನೂ ಅಲ್ಲ. ಯಾಕೆಂದರೆ ಈ ವಿಶ್ವ ಹಿಂದೂ ಕಾಂಗ್ರೆಸ್, ಬ್ರಾಹ್ಮಣಶಾಹಿ ಫ್ಯಾಶಿಸ್ಟ್ ಸಂಘಟನೆಯಾದ ಆರೆಸ್ಸೆಸ್ ಜಾಗತಿಕ ಮಟ್ಟದಲ್ಲಿ ತನ್ನ ಫ್ಯಾಶಿಸ್ಟ್ ಕಾರ್ಯಸೂಚಿಯನ್ನು ಜಾರಿಗೊಳಿಸಲು ಮಾಡುವ ಸಿದ್ಧತಾ ವೇದಿಕೆಯಾಗಿತ್ತು.

 ಚಿಕಾಗೋದ ಪ್ರಜಾತಾಂತ್ರಿಕ ಮತ್ತು ಫ್ಯಾಶಿಸ್ಟ್ ವಿರೋಧಿ ಜನರು ಈ ವಿಶ್ವ ಹಿಂದೂ ಕಾಂಗ್ರೆಸ್ ಕಾರ್ಯಕ್ರಮವನ್ನು ಬಲವಾಗಿ ವಿರೋಧಿಸಿದರು. ಇದನ್ನು ವಿರೋಧಿಸಿ ವ್ಯಾಪಕ ಪ್ರಚಾರಾಂದೋಲನ ನಡೆಯಿತು. ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್‌ರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದರ ವಿರುದ್ಧವೂ ಪ್ರಚಾರಾಂದೋಲನ ನಡೆಯಿತು. ಭಾರತದಲ್ಲಿ ಆರೆಸ್ಸೆಸ್ ಮುಸ್ಲಿಮರು, ಕ್ರಿಶ್ಚಿಯನ್ನರು, ದಲಿತರು, ಆದಿವಾಸಿಗಳ ಮೇಲೆ ನಡೆಸುತ್ತಿರುವ ಮಾರಣಾಂತಿಕ ದಾಳಿಗಳು, ವೈಚಾರಿಕ ದಾಳಿಗಳ ಕುರಿತು ಪ್ರಚಾರಗಳನ್ನು ನಡೆಸಿದರು.

ಅಮೆರಿಕದಲ್ಲಿನ ಬ್ರಾಹ್ಮಣ ಶಾಹಿ ಫ್ಯಾಶಿಸ್ಟರ ಪರವಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಬೆಂಬಲಿಸುವ ಮೇಲ್ವರ್ಗದ ಮತ್ತು ಮೇಲ್ಜಾತಿಯ ಜನರು ಪ್ರತಿಭಟನೆಗಳನ್ನು ವಿರೋಧಿಸಿ ಪ್ರಚಾರ ನಡೆಸಿದ್ದಲ್ಲದೆ ಅಲ್ಲಿನ ಸರಕಾರಿ ಶಕ್ತಿಗಳ ಬೆಂಬಲವನ್ನು ಪಡೆದುಕೊಂಡರು. ಅಮೆರಿಕ ಫೆಡರಲ್ ಸರಕಾರ ವಿಶ್ವ ಹಿಂದೂ ಕಾಂಗ್ರೆಸ್ ಆಯೋಜಕರ ಬೆಂಬಲಕ್ಕೆ ನಿಂತಿತು. ಚಿಕಾಗೋದ ಮೇಯರ್ ಸ್ವತಃ ಈ ಹಿಂದೂ ಕಾಂಗ್ರೆಸ್ ಅನ್ನು ಬೆಂಬಲಿಸಿದರು. ಟ್ರಂಪ್ ಆಡಳಿತ ಕೂಡ ಈ ಸಮಾವೇಶವನ್ನು ಬೆಂಬಲಿಸಿತ್ತು. ಭಾರತದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ರಾಜಾ ಕೃಷ್ಣಮೂರ್ತಿ ಕೂಡ ಈ ಸಭೆಯಲ್ಲಿ ಭಾಗವಹಿಸಿದ್ದು ಹಲವರ ಹುಬ್ಬೇರುವಂತೆ ಮಾಡಿದ್ದು ನಿಜ. ಆ ಬಗ್ಗೆ ಕಾಂಗ್ರೆಸ್ ಪಕ್ಷ ಕ್ರಮ ತೆಗೆದುಕೊಂಡ ವರದಿಗಳಿಲ್ಲದಿರುವುದು ಆಶ್ಚರ್ಯ ಪಡಬೇಕಾದ ವಿಚಾರವೇನಲ್ಲ.

ಇವೆಲ್ಲದರ ಮಧ್ಯೆಯೇ ಅಲ್ಲಿನ ಪ್ರಜಾತಾಂತ್ರಿಕ ಶಕ್ತಿಗಳು ವಿಶ್ವ ಹಿಂದೂ ಕಾಂಗ್ರೆಸ್ ಆವರಣದೊಳಗೆ ನುಗ್ಗಿ ಆರೆಸ್ಸೆಸ್ ಹಾಗೂ ಮೋದಿ ಆಡಳಿತವನ್ನು ವಿರೋಧಿಸಿ ಘೋಷಣೆಗಳನ್ನು ಮೊಳಗಿಸಿದರು. ಆರೆಸ್ಸೆಸ್ ಹಾಗೂ ಅಮೆರಿಕದ ಹಿಂದುತ್ವ ಫ್ಯಾಶಿಸ್ಟರು ಪ್ರತಿಭಟನಾಕಾರರ ಮೇಲೆ ದೈಹಿಕ ದಾಳಿಗಳನ್ನು ಮಾಡಿದರು, ಪ್ರತಿಭಟನಾ ನಿರತ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಲು ಪ್ರಯತ್ನಿಸಿದರು. ಚಿಕಾಗೋ ನಗರದ ಮೇಯರ್‌ರ ಬೆಂಬಲದೊಂದಿಗೆ ಪ್ರತಿಭಟನಾಕಾರರನ್ನು ಬಂಧಿಸುವಂತೆ ಮಾಡಲಾಯಿತು. ಆದರೆ ಪ್ರತಿಭಟನಾಕಾರರ ಮೇಲೆ ದಾಳಿ ನಡೆಸಿದ ಯಾವುದೇ ಆರೆಸ್ಸೆಸ್‌ನ ಯಾವುದೇ ಬೆಂಬಲಿಗರ ಮೇಲೆ ಮೊಕದ್ದಮೆ ಹೂಡುವುದಾಗಲೀ, ಬಂಧಿಸುವುದಾಗಲೀ ನಡೆಯಲಿಲ್ಲ. ಅಲ್ಲಿ ಆಯೋಜಿಸಿದ್ದ ವಿಶ್ವ ಹಿಂದೂ ಕಾಂಗ್ರೆಸ್‌ನ ವೇದಿಕೆಯಲ್ಲೇ ಹಿಂದೂಯೇತರ ಸಮುದಾಯಗಳನ್ನು ಕಾಡುನಾಯಿಗಳಿಗೆ ಹೋಲಿಸಿದ ಮೋಹನ್ ಭಾಗವತ್ ಮೇಲೂ ಯಾವುದೇ ಪ್ರಕರಣ ದಾಖಲಾಗಲಿಲ್ಲ.

ಸೆಕ್ಯುಲರ್ ಎಂದು ಕರೆದುಕೊಳ್ಳುವ ಹಾಗೂ ಕ್ರಿಶ್ಚಿಯನ್ ಬಹುಸಂಖ್ಯಾತರಿರುವ ಅಮೆರಿಕದಲ್ಲೇ ಇದು ಸಾಧ್ಯವಾಗಿದೆ ಎನ್ನುವುದು ಗಮನಿಸಬೇಕಾದ ವಿಚಾರ. ಅದೇ ಕ್ರಿಶ್ಚಿಯನ್ ಸಮುದಾಯದ ಪಾದ್ರಿಗಳನ್ನು ಜೀವಂತವಾಗಿ ದಹಿಸಿದ, ಸಿಸ್ಟರ್‌ಗಳನ್ನು ಅತ್ಯಾಚಾರ ಮಾಡಿದ ಉದಾಹರಣೆಗಳು ಆರೆಸ್ಸೆಸ್ ಬೆಂಬಲಿಗರ ದುಷ್ಕೃತ್ಯಗಳಲ್ಲಿ ಇದ್ದರೂ ಟ್ರಂಪ್ ಆಡಳಿತ ತನ್ನ ನೆಲದಲ್ಲೇ ಆರೆಸ್ಸೆಸ್ ಬೆಂಬಲಕ್ಕೆ ನಿಂತುಕೊಂಡಿತು. ಟ್ರಂಪ್‌ರ ಈ ದಾರ್ಷ್ಟ್ಯವನ್ನು ಅಮೆರಿಕದ ಮಾನವ ಹಕ್ಕು ಹೋರಾಟಗಾರರು, ಫ್ಯಾಶಿಸ್ಟ್ ವಿರೋಧಿ ಹೋರಾಟಗಾರರು ಗಂಭೀರವಾಗಿ ಪ್ರಶ್ನಿಸುತ್ತಿದ್ದಾರೆ. ಟ್ರಂಪ್ ಆಡಳಿತ ಬ್ರಾಹ್ಮಣಶಾಹಿ ಫ್ಯಾಶಿಸ್ಟ್ ಶಕ್ತಿಗಳೊಂದಿಗೆ ಬಹಿರಂಗವಾಗಿ ಕೈ ಮಿಲಾಯಿಸುತ್ತಿರುವುದನ್ನು ಕಾಣುತ್ತಿರುವ ಅಮೆರಿಕದ ಜನಸಾಮಾನ್ಯರು ಟ್ರಂಪ್‌ರ ಫ್ಯಾಶಿಸ್ಟ್ ನೀತಿಗಳ ವಿಶ್ವ ರೂಪಗಳನ್ನು ಸ್ಪಷ್ಟವಾಗಿ ಕಾಣತೊಡಗಿದ್ದಾರೆ. ಅಮೆರಿಕದ ಸಿಖ್ಸ್ ಫಾರ್ ಜಸ್ಟೀಸ್ (Sikhs for justice) ಎಂಬ ಸಂಘಟನೆ ನ್ಯೂಯಾರ್ಕ್‌ನ ದಕ್ಷಿಣ ಜಿಲ್ಲಾ ನ್ಯಾಯಾಲಯದಲ್ಲಿ ಆರೆಸ್ಸೆಸ್ ಹಿಂದುತ್ವ ಫ್ಯಾಶಿಸ್ಟ್ ಭಯೋತ್ಪಾದಕ ಸಂಘಟನೆಯೆಂದು ಘೋಷಿಸಿ ನಿಷೇಧ ಹೇರಬೇಕೆಂದು ಆಗ್ರಹಿಸಿ ಖಟ್ಲೆ ಹೂಡಿತ್ತು. ಅದನ್ನು ವಿದೇಶಾಂಗ ವ್ಯವಹಾರಗಳಿಗೆ ನೇರವಾಗಿ ಸಂಬಂಧಪಟ್ಟಿರುವ ಕಾರಣ ಹೇಳಿ ನ್ಯಾಯಾಲಯ ತಿರಸ್ಕರಿಸಿತ್ತು. ವಾಸ್ತವದಲ್ಲಿ ಅಮೆರಿಕದ ದೊಡ್ಡ ಕಾರ್ಪೊರೇಟ್‌ಗಳು ಬ್ರಾಹ್ಮಣಶಾಹಿ ಹಿಂದುತ್ವ ಫ್ಯಾಶಿಸ್ಟ್ ಶಕ್ತಿಗಳನ್ನು ಭಾರತದಲ್ಲಿಯೂ ಹಾಗೆಯೇ ಅಮೆರಿಕದಲ್ಲಿಯೂ ಪ್ರೋತ್ಸಾಹದ ಜೊತೆಗೆ ಪ್ರಾಯೋಜನೆಯನ್ನು ಮಾಡುತ್ತಾ ಬಂದಿವೆ. ತಮ್ಮ ಬಿಕ್ಕಟ್ಟುಗಳನ್ನು ಪರಿಹರಿಸಲಾಗದೆ ಜಾಗತಿಕವಾಗಿ ಹಲವು ರೂಪಗಳಲ್ಲಿನ ಫ್ಯಾಶಿಸ್ಟ್ ಶಕ್ತಿಗಳನ್ನು ಹುಟ್ಟುಹಾಕುವ, ಪ್ರೋತ್ಸಾಹಿಸುವ, ಪ್ರಾಯೋಜನೆ ಮಾಡುವ ಕಾರ್ಯಗಳನ್ನು ಈ ಎಲ್ಲಾ ಜಾಗತಿಕ ಕಾರ್ಪೊರೇಟ್‌ಗಳು ಮಾಡುತ್ತಲೇ ಬಂದಿವೆ. ಅದರಲ್ಲಿ ಮೂಲಭೂತವಾದಿ, ಕೋಮುವಾದಿ ಶಕ್ತಿಗಳು ಸೇರಿವೆ.

ಇವೆಲ್ಲದರಿಂದ ಬರುವ ಲಾಭಗಳನ್ನು ಅವರು ಚೆನ್ನಾಗಿಯೇ ಲೆಕ್ಕಾಚಾರ ಹಾಕಿ ಪಡೆಯುತ್ತಿದ್ದಾರೆ. ಕಾರ್ಪೊರೇಟ್‌ಗಳ ಪ್ರತಿನಿಧಿ ಅಲ್ಲದೇ ಸ್ವತಃ ದೊಡ್ಡ ಕಾರ್ಪೊರೇಟ್ ಆಗಿರುವ ಡೊನಾಲ್ಡ್ ಟ್ರಂಪ್‌ರನ್ನು ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲಿಸಲು ಈ ಮೇಲ್ವರ್ಗದ ಜನಾಂಗೀಯ ಬ್ರಾಹ್ಮಣಶಾಹಿ ಹಿಂದುತ್ವ ಗುಂಪುಗಳು ನಿಧಿ ಸಂಗ್ರಹಣೆಯೂ ಸೇರಿದಂತೆ ನೇರವಾಗಿ ಕೆಲಸ ಮಾಡಿರುವುದು ಬಹಿರಂಗಗೊಂಡ ವಿಚಾರ. ಬಾಲಿವುಡ್ ತಾರೆಯರನ್ನು ಕರೆಸಿ ಕಾರ್ಯಕ್ರಮ ಸಂಘಟಿಸಿ ‘ಟ್ರಂಪ್‌ಗಾಗಿ ಹಿಂದೂಗಳು’ ಎಂಬ ಪ್ರಚಾರ ಈ ಗುಂಪು ನಡೆಸಿತ್ತು. ಭಾರತದ ಮೋದಿ ಆಡಳಿತ ಮತ್ತು ಅಮೆರಿಕದ ಟ್ರಂಪ್ ಆಡಳಿತದೊಂದಿಗೆ ಕೊಂಡಿಗಳಾಗಿಯೂ ಈ ಗುಂಪು ವರ್ತಿಸುತ್ತಿದೆ. ಈ ಜನಾಂಗೀಯವಾದಿ ಬ್ರಾಹ್ಮಣಶಾಹಿ ಹಿಂದುತ್ವವಾದಿ ಫ್ಯಾಶಿಸ್ಟರಿಗೂ ಹಿಂದೂಗಳೆಂದು ಸಾಮಾನ್ಯವಾಗಿ ಗುರುತಿಸಿಕೊಳ್ಳುವ ಬಹುಸಂಖ್ಯಾತ ಜನಸಾಮಾನ್ಯರಿಗೂ ಸಂಬಂಧವೇ ಇಲ್ಲ. ಈ ಗುಂಪುಗಳು ಜಾತಿ ದೌರ್ಜನ್ಯಗಳನ್ನಾಗಲಿ, ಮಹಿಳಾ ದೌರ್ಜನ್ಯಗಳನ್ನಾಗಲಿ, ಬಡತನ, ನಿರುದ್ಯೋಗಗಳ ಬಗ್ಗೆಯಾಗಲಿ ಮಾತನಾಡುವುದಿಲ್ಲ. ಆದರೆ ತಾವು ಹಿಂದೂ ಧರ್ಮ ರಕ್ಷಕರು ಎಂಬ ಪೋಸು ನೀಡುವ, ಜನಸಾಮಾನ್ಯರ ಗಮನವನ್ನು ಬೇರೆಡೆಗೆ ತಿರುಗಿಸಿ ಒಡೆದಾಳುವ ಕಾರ್ಯದಲ್ಲಿ ದೊಡ್ಡ ಜಾಗತಿಕ ಕಾರ್ಪೊರೇಟ್‌ಗಳ ಸೇವೆಯಲ್ಲಿ ನಿರತವಾಗಿವೆ. ಅದರಿಂದ ಈ ಗುಂಪುಗಳಿಗೆ ಒಂದಷ್ಟು ಕಾರ್ಪೊರೇಟ್ ಎಂಜಲು ಸಿಗುತ್ತದೆ.

ಜಾಗತಿಕವಾಗಿ ತತ್ತರಗೊಂಡಿರುವ ಕಾರ್ಪೊರೇಟ್‌ಗಳ ಹೇಳತೀರದ ಲೂಟಿಯ ಕಾರಣದಿಂದ ಕಾರ್ಮಿಕರು ಇನ್ನಿತರ ಜನವರ್ಗಗಳು ರೊಚ್ಚಿಗೆದ್ದು ತಮ್ಮ ವಿರುದ್ಧ ಬಂಡೇಳದಂತೆ ತಡೆಯುವ ಪ್ರಮುಖ ಉದ್ದೇಶವನ್ನು ಈ ರೀತಿಯ ಫ್ಯಾಶಿಸ್ಟ್ ಗುಂಪುಗಳ ಮೂಲಕ ಈಡೇರಿಸಲು ಪ್ರಯತ್ನಿಸಲಾಗುತ್ತಿದೆ. ಭಾರತದ ಆರೆಸ್ಸೆಸ್ ಕೂಡ ಅಂತಹ ಗುಂಪುಗಳಲ್ಲಿ ಒಂದು. ಜನಸಾಮಾನ್ಯರನ್ನು ಒಡೆಯದಿದ್ದರೆ ಒಗ್ಗೂಡಿ ಬಿಡುತ್ತಾರೆ ಎಂಬ ಭಯ ತೀವ್ರವಾಗಿ ಈ ಶಕ್ತಿಗಳನ್ನು ಕಾಡುತ್ತಿದೆ. ಮೋದಿ ಅಧಿಕಾರಕ್ಕೆ ಬಂದ ನಂತರ ಈ ಬ್ರಾಹ್ಮಣಶಾಹಿ ಶಕ್ತಿಗಳು ತಮ್ಮ ಹಿಡಿತಗಳನ್ನು ಎಲ್ಲಾ ರಂಗಗಳಲ್ಲೂ ಹೆಚ್ಚು ಮಾಡಿರುವುದು ಜಾಗತಿಕ ಕಾರ್ಪೊರೇಟ್‌ಗಳ ಸಂಚುಗಳ ಭಾಗವೇ ಆಗಿದೆ. ಇಂದು ನಮ್ಮ ದೇಶದಲ್ಲಿ ತೀವ್ರಗೊಂಡಿರುವ ಮುಸ್ಲಿಮರ, ದಲಿತರ, ಆದಿವಾಸಿಗಳ, ಮಹಿಳೆಯರ, ಪ್ರಜಾತಂತ್ರವಾದಿಗಳ, ಮಾನವ ಹಕ್ಕು ಹೋರಾಟಗಾರರ ಮೇಲಿನ ಫ್ಯಾಶಿಸ್ಟ್ ದಾಳಿಗಳನ್ನು ಜಾಗತಿಕ ಕಾರ್ಪೊರೇಟ್‌ಗಳ ಸಂಚುಗಳ ಹಿನ್ನೆಲೆಯಲ್ಲಿ ಗ್ರಹಿಸಬೇಕಿದೆ. ಮುಂದಿನ ಲೋಕಸಭಾ ಚುನಾವಣೆಯನ್ನು ಹೇಗೆಲ್ಲಾ ನಿಭಾಯಿಸಿ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಬಹುದು ಎಂಬ ಲೆಕ್ಕಾಚಾರಗಳನ್ನು ಈ ಶಕ್ತಿಗಳು ಮಾಡುತ್ತಿವೆ. ಈ ಎಲ್ಲಾ ಭಾರೀ ಅಪಾಯಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಹೆಚ್ಚಿಸುವ ಕಾರ್ಯ ಈಗಿನ ಅಗತ್ಯವಾಗಿದೆ. ನಿಜವಾದ ಪರ್ಯಾಯದತ್ತ ಜನರು ಆಲೋಚಿಸುವಂತಾಗಬೇಕಿದೆ.

Writer - ನಂದಕುಮಾರ್ ಕೆ. ಎನ್.

contributor

Editor - ನಂದಕುಮಾರ್ ಕೆ. ಎನ್.

contributor

Similar News