ಸಾಕಾರಗೊಳ್ಳದ ಪ್ರಜಾತಾಂತ್ರಿಕ ಆಶೋತ್ತರಗಳು
ಗಣರಾಜ್ಯವೆಂದು ಕರೆದುಕೊಂಡರೂ ವಾಸ್ತವವಾಗಿ ಗಣರಾಜ್ಯ ತತ್ವಗಳು ಪಾಲನೆಯಾಗದೆ ಕೇಂದ್ರದ ಆಧಿಪತ್ಯವನ್ನು ಹೆಚ್ಚಿಸುತ್ತಾ ಬರಲಾಗುತ್ತಿದೆ. ಈಗ ಮೊದಲಿದ್ದಷ್ಟೂ ಒಕ್ಕೂಟ ತತ್ವಗಳು ಪಾಲನೆಯಾಗದೆ ‘ಒಂದು ದೇಶ ಒಂದೇ ತೆರಿಗೆ’ ‘ಆಧಾರ್ ಬದುಕಿನ ಆಧಾರ’ ಎಂದೆಲ್ಲಾ ಆಕರ್ಷಕವೆನಿಸುವ ಘೋಷಣೆಗಳಡಿ ಕೇಂದ್ರ ರಾಜ್ಯಗಳ ಮೇಲಿನ ಹಿಡಿತವನ್ನು ಬಿಗಿಗೊಳಿಸುತ್ತಿದೆ. ಒಂದು ದೇಶ ಒಂದೇ ಭಾಷೆ, ಒಂದೇ ಧರ್ಮ, ಒಂದೇ ಸಂಸೃತಿ, ಒಂದೇ ಪಕ್ಷ, ಒಂದೇ ಸರಕಾರ ಎಂದು ಪ್ರಚಾರ ಶುರುವಿಟ್ಟುಕೊಳ್ಳಲಾಗಿದೆ. ಹಾಗೆಯೇ ಮುಂದುವರಿದು ‘ಒಬ್ಬರದೇ ಅಧಿಕಾರ’ ಎನ್ನುವಷ್ಟರ ಮಟ್ಟಕ್ಕೆ ಎಳೆದುಕೊಂಡುಹೋಗುವ ಲಕ್ಷಣಗಳು ಗೋಚರಿಸತೊಡಗಿವೆ.
ಭಾರತ ದೇಶವನ್ನು ರೂಪುಗೊಳಿಸಿ ಈಗ ಏಳು ದಶಕಗಳು ಕಳೆದಿವೆ. ಬ್ರಿಟಿಷ್ ಪೂರ್ವದಲ್ಲಿ ರಾಜರುಗಳು ಪಾಳೇಗಾರರಿಂದ ಕೂಡಿದ ಸಾವಿರಾರು ಸಂಸ್ಥಾನಗಳಿದ್ದ ಈಗಿನ ಭಾರತವೆಂದು ಕರೆಸಿಕೊಂಡಿರುವ ಭೂಪ್ರದೇಶದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ಬಂದ ನಂತರ ಅವುಗಳು ನೂರಾರು ರಾಜಸಂಸ್ಥಾನಗಳಾದವು. ಅವುಗಳಲ್ಲಿ ಬಹುತೇಕ ರಾಜಸಂಸ್ಥಾನಗಳು ಬ್ರಿಟಿಷರ ಸಾಮಂತರಾಗಿಯೇ ಬದಲಾದವರಾಗಿದ್ದವು. ಮೈಸೂರಿನ ಟಿಪ್ಪುಸುಲ್ತಾನನಂತಹ ಕೆಲವೇ ಸಾಮ್ರಾಟರು ಮಾತ್ರ ಬ್ರಿಟಿಷರ ಸಾಮಂತರಾಗಲು ಒಪ್ಪದೇ ಸ್ವತಂತ್ರ್ಯ ಸಂಸ್ಥಾನಗಳಾಗಿ ಉಳಿದಿದ್ದವು. ಆದರೆ ಟಿಪ್ಪುವಿನ ಆಡಳಿತದ ಮೈಸೂರು ಸಾಮ್ರಾಜ್ಯ ಹೆಚ್ಚುಕಮ್ಮಿ ಈಗಿನ ಭಾರತದ ಅರ್ಧಕ್ಕಿಂತಲೂ ಹೆಚ್ಚಿನ ಭೂಭಾಗವನ್ನು ಒಳಗೊಂಡಿತ್ತು. ಉಳಿದವುಗಳು ಚಿಕ್ಕಪುಟ್ಟ ಸಂಸ್ಥಾನಗಳಾಗಿದ್ದವು. ಟಿಪ್ಪುವನ್ನು ಹೊರತುಪಡಿಸಿದಂತೆ ಇದ್ದ ರಾಜರು ಟಿಪ್ಪುವಿನಷ್ಟು ಸ್ವತಂತ್ರ ನಿಲುವಿದ್ದವರಾಗಿರಲಿಲ್ಲ. ಯಾಕೆಂದರೆ ಟಿಪ್ಪುಸುಲ್ತಾನ ಕೇವಲ ಬ್ರಿಟಿಷರಿಂದ ಸ್ವತಂತ್ರವಾಗಿರಬೇಕೆಂಬ ನಿಲುವಿನವನಾಗಿರಲಿಲ್ಲ. ಆತ ಯೂರೋಪ್‌ನಲ್ಲಿ ಹದಿನೆಂಟನೇ ಶತಮಾನದಲ್ಲಿ ಆದಂತಹ ಆ ಸಂದರ್ಭದ ಭಾರೀ ಕ್ರಾಂತಿಕಾರಿ ಸಾಮಾಜಿಕ ಹಾಗೂ ರಾಜಕೀಯ ಬದಲಾವಣೆಯ ಹರಿಕಾರನಾಗಿದ್ದ ಒಬ್ಬ ಸಾಮ್ರಾಟ. ಅಂದರೆ ಬಂಡವಾಳಶಾಹಿ ಬದಲಾವಣೆಯ ಹರಿಕಾರ. ಅದಕ್ಕೆ ಆತನ ಜಾತ್ಯತೀತ ನಿಲುವುಗಳು ಹಾಗೂ ದಲಿತ ದಮನಿತರ ಪರವಾದ ನಿಲುವುಗಳು. ಪಾಳೇಗಾರರ ಹಿಡಿತದಲ್ಲಿದ್ದ ಭೂಮಿಗಳನ್ನು ಭೂಹೀನರಿಗೆ ಹಂಚಿದ್ದು, ಸ್ಥಾಪಿಸಿದ ಯಂತ್ರಚಾಲಿತ ಕಾರ್ಖಾನೆಗಳು, ಮಾಡಿದ ಮಸ್ಲಿನ್ ಬಟ್ಟೆ, ರಾಕೆಟ್ ತಂತ್ರಜ್ಞಾನ ಇತ್ಯಾದಿ ಆವಿಷ್ಕಾರಗಳು ಕೆಲವು ಉದಾಹರಣೆಗಳಾಗಿವೆ.
ಆದರೆ ಈ ಬೆಳವಣಿಗೆ ಟಿಪ್ಪುವಿನ ಮರಣದೊಂದಿಗೆ ಸ್ತಬ್ಧವಾಯಿತು ಎನ್ನಬಹುದು. ಯಾಕೆಂದರೆ ನಂತರ ಬ್ರಿಟಿಷರು ಊಳಿಗಮಾನ್ಯ ರಾಜರನ್ನು ತಮ್ಮ ಸಾಮಂತರನ್ನಾಗಿ ಮಾಡಿಕೊಂಡು ಆಡಳಿತ ನಡೆಸಲು ಶುರುಮಾಡಿದರು. ಭೂಮಾಲಕ ಜೀತಗಾರ ಸಂಬಂಧಗಳೇ ಪ್ರಧಾನವಾಗಿ ಮುಂದುವರಿದವು.
ಅಲ್ಲಿಗೆ ಹನ್ನೆರಡನೇ ಶತಮಾನದ ಶರಣ ಚಳವಳಿಯಿಂದ ಆರಂಭವಾದ ಪ್ರಜಾತಾಂತ್ರೀಕರಣ ಪ್ರಕ್ರಿಯೆಯು ಟಿಪ್ಪುವಿನ ಮರಣದ ನಂತರ ನಿಂತುಹೋದಂತಾಯಿತು. ನಂತರ ಬ್ರಿಟಿಷ್ ವಿರೋಧಿ ಹೋರಾಟಗಳು ಪ್ರಜಾತಾಂತ್ರಿಕ ಆಶೋತ್ತರಗಳೊಂದಿಗೆ ಆರಂಭವಾಗಲು ಸ್ವಲ್ಪಕಾಲ ಹಿಡಿಯಿತು. ಯಾವಾಗ ಬ್ರಿಟಿಷ್ ವಿರೋಧಿ ಹೋರಾಟಗಳು ಕಾವು ಪಡೆದು ಅದು ಪ್ರಜಾತಾಂತ್ರಿಕ ಬದಲಾವಣೆಯ ಆಶೋತ್ತರಗಳನ್ನು ಹೊಂದಲಾರಂಭಿಸಿತೋ ಆಗ ದಿಗಿಲುಗೊಂಡ ಬ್ರಿಟಿಷರು ಕಾರ್ಯಾಚರಣೆಗಿಳಿದರು. ಅದರಂತೆ ಹಳೇ ಪಾಳೇಗಾರರುಗಳ ನೇತೃತ್ವದಲ್ಲಿ ಸ್ವಾತಂತ್ರ್ಯ ಚಳವಳಿಗಳು ಸಿಲುಕುವಂತೆ ಮಾಡುವ ತಂತ್ರಹೂಡಿದ್ದರು.
ಜೊತೆಗೆ ಕಾಂಗ್ರೆಸ್ ಪಕ್ಷವನ್ನು ಕೂಡ ಬ್ರಿಟಿಷರೇ ಮುಂದಡಿ ಇಟ್ಟು ಎ. ಒ. ಹ್ಯೂಮ್ ಮೂಲಕ ಸ್ಥಾಪಿಸಿದ್ದರು. ನಿಜವಾದ ಸ್ವಾತಂತ್ರ್ಯಕ್ಕಾಗಿ ಕೆಚ್ಚಿನಿಂದ ಹೋರಾಡುತ್ತಿರುವ ರೈತರು, ಆದಿವಾಸಿಗಳು ಇನ್ನಿತರ ಜನಸಮುದಾಯಗಳನ್ನು ತಮ್ಮ ತೆಕ್ಕೆಯೊಳಗೆ ತೆಗೆದುಕೊಂಡು ದಿಕ್ಕುತಪ್ಪಿಸುವ ಉದ್ದೇಶವನ್ನು ಅದು ಹೊಂದಿತ್ತು. ಇದರ ಹೊರತಾಗಿಯೂ ಬ್ರಿಟಿಷರು ಇಲ್ಲಿ ನೇರ ಆಡಳಿತ ನಡೆಸಲು ಸಾಧ್ಯವಾಗದ ಪರಿಸ್ಥಿತಿ ತಲೆತೋರಿತು. ಅನಿವಾರ್ಯವಾಗಿ ಮೇಲ್ಜಾತಿ ಮೇಲ್ವರ್ಗ ಮತ್ತು ಭಾರೀ ಭೂಒಡೆಯರ ಪ್ರತಿನಿಧಿಗಳ ನೇತೃತ್ವದ ಕಾಂಗ್ರೆಸ್ ಪಕ್ಷದ ನಾಯಕ ಜವಾಹರಲಾಲ್ ನೆಹರೂ ಕೈಗೆ ಅಧಿಕಾರ ಹಸ್ತಾಂತರವನ್ನು 1947ರ ಆಗಸ್ಟ್ 15ರ ಮಧ್ಯ ರಾತ್ರಿಯಲ್ಲಿ ಬ್ರಿಟಿಷ್ ವಸಾಹತುಶಾಹಿಗಳು ಮಾಡಿದರು. ವಾಸ್ತವದಲ್ಲಿ ಕಾಂಗ್ರೆಸ್ ಭಾರತದ ಜನಸಾಮಾನ್ಯರ ಪ್ರತಿನಿಧಿಯೆಂದು ಅಂಗೀಕಾರಗೊಂಡಿರಲೇ ಇಲ್ಲ. ಆದರೆ ಬ್ರಿಟಿಷ್ ವಸಾಹತುಶಾಹಿಗಳು ಮಾತ್ರ ಅಧಿಕಾರ ಹಸ್ತಾಂತರ ಮಾಡಲು ಕಾಂಗ್ರೆಸ್ ಅನ್ನು ಆಯ್ಕೆ ಮಾಡಿದ್ದರಲ್ಲಿ ಆಶ್ಚರ್ಯ ಪಡುವಂತಹದ್ದೇನೂ ಇಲ್ಲ. ಯಾಕೆಂದರೆ ಅದನ್ನು ಅವರೇ ಸಾಕಿ ಬೆಳೆಸಿದ್ದು ತಾನೆ.
ನಂತರದ ಬೆಳವಣಿಗೆಗಳು 500ಕ್ಕೂ ಹೆಚ್ಚು ಸ್ವತಂತ್ರ ಸಂಸ್ಥಾನಗಳನ್ನು ಭಾರತ ದೇಶದ ವ್ಯಾಪ್ತಿಯೊಳಗೆ ಸೇರಿಸುವ ಪ್ರಕ್ರಿಯೆಗಳು. ಈಗ ಮೋದಿಯಿಂದ ಭಾರೀ ರೀತಿಯಲ್ಲಿ ಹೊಗಳಲ್ಪಡುತ್ತಾ ಬೃಹತ್ ಪುತ್ಥಳಿಯಾಗಿ ಸ್ಥಾಪಿಸಲ್ಪಟ್ಟ ಗುಜರಾತಿನ ಸರ್ದಾರ್ ವಲ್ಲಭಬಾಯ್ ಪಟೇಲ್ ಆಗಿನ ಗೃಹ ಮಂತ್ರಿಯಾಗಿದ್ದರು. ಪ್ರಜಾ ಪ್ರಭುತ್ವ ಸ್ಥಾಪನೆಯ ಆಶ್ವಾಸನೆಗಳನ್ನು ಮುಂದಿಡಲಾಗಿದ್ದರೂ ಪ್ರಜಾತಾಂತ್ರಿಕ ವಿಧಾನವಲ್ಲದ ಆಮಿಷಗಳು, ಬೆದರಿಕೆಗಳು, ಸೇನಾ ಕಾರ್ಯಾಚರಣೆಗಳ ಮೂಲಕ ಸಂಸ್ಥಾನಗಳನ್ನು ಭಾರತದೊಳಗೆ ಸೇರಿಸಿಕೊಳ್ಳುವ ಕಾರ್ಯವನ್ನು ಮಾಡಲಾಯಿತು. 1947 ಆಗಸ್ಟ್ 15ರ ನಂತರದ ಈ ಪ್ರಕ್ರಿಯೆಗಳಲ್ಲಿ ಕೂಡ ಬ್ರಿಟಿಷ್ ಪ್ರಭುತ್ವ ಕಾಂಗ್ರೆಸ್‌ನೊಂದಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ನಿರಂತರವಾಗಿ ಕೈ ಜೋಡಿಸಿತ್ತು. ಅದರ ಪರಿಣಾಮವಾಗಿ ಇಂದಿಗೂ ಮುಂದುವರಿದಿರುವ ಕಾಶ್ಮೀರ, ಈಶಾನ್ಯ ಭಾರತದ ರಾಜ್ಯಗಳಲ್ಲಿನ ರಾಷ್ಟ್ರೀಯತಾ ಹೋರಾಟಗಳನ್ನು ನಾವು ಕಾಣುತ್ತಿದ್ದೇವೆ. ಈ ಪ್ರದೇಶಗಳಲ್ಲಿ ಬ್ರಿಟಿಷರ ನೇರ ಆಡಳಿತ ಹೋಗಿ ಎಪ್ಪತ್ತು ವರ್ಷಗಳಾದರೂ ಈಗಲೂ ಸೇನಾ ಬಲಗಳ ಮೂಲಕವೇ ಆಡಳಿತ ನಡೆಸಬೇಕಾದ ಪರಿಸ್ಥಿತಿಯಿದೆಯೆಂದರೆ ಪರಿಸ್ಥಿತಿಯ ಗಂಭೀರತೆ ಅರಿವಾಗಬಹುದು.
ಚುನಾವಣೆಗಳು, ಸ್ಥಳೀಯ ಸರಕಾರಗಳು ಇಲ್ಲಿ ನಾಮಮಾತ್ರದ್ದಾಗಿ ಮಾತ್ರ ಇವೆ ಎನ್ನುವಂತಹ ಸ್ಥಿತಿಯಿದೆ. ಅಂಬೇಡ್ಕರ್ ನೇತೃತ್ವದಲ್ಲಿ ಸಂವಿಧಾನ ರಚನೆಯಾಗಿ ಭಾರತ ಸಮಾಜವಾದಿ ಹಾಗೂ ಬಂಡವಾಳಶಾಹಿ ವ್ಯವಸ್ಥೆಗಳಲ್ಲಿನ ಒಳ್ಳೆಯ ಅಂಶಗಳನ್ನು ಒಳಗೊಂಡಿರುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಪ್ಪಿಕೊಂಡು ಅಳವಡಿಸಿಕೊಂಡಿರುವ ದೇಶವೆಂದು ಕರೆದುಕೊಳ್ಳಲಾಯಿತು. ಆದರೆ ಅನುಷ್ಠಾನದ ವಿಚಾರ ಬಂದಾಗ ಅವೆಲ್ಲಾ ಪಕ್ಕಕ್ಕೆ ಸರಿಸಲ್ಪಡುತ್ತಾ ಬಂದಿರುವುದು ಎದ್ದು ಕಾಣುವ ವಿಚಾರ. ಭೂಮಿ ಸಂಪತ್ತುಗಳು ಜನರ ನಡುವೆ ಹಂಚಿಕೆಯಾಗದೆ ತೀವ್ರ ಅಸಮಾನತೆಗಳು ಬೆಳೆದು ನಿಲ್ಲುತ್ತಾ ಬಂದಿದೆ. ಜಾತಿ ಅಸಮಾನತೆ, ಮಹಿಳಾ ಅಸಮಾನತೆಗಳಲ್ಲಿ ಮೂಲಭೂತ ಬದಲಾವಣೆ ಇನ್ನೂ ಬಂದಿಲ್ಲದಿರುವುದು ಇಂದಿಗೂ ಕಣ್ಣಿಗೆ ರಾಚುತ್ತಿರುವ ವಿಚಾರ. ದೇಶದಲ್ಲಿ ಉತ್ಪಾದನೆಯಾಗುತ್ತಾ ಬಂದ ಒಟ್ಟು ಸಂಪತ್ತಿನ ಬಹುಪಾಲು ಅಂಬಾನಿ, ಅದಾನಿ, ಟಾಟಾ, ಬಿರ್ಲಾ ಇತ್ಯಾದಿ ಕೆಲವೇ ಗುಜರಾತಿ, ಮಾರವಾಡಿ, ಪಾರ್ಸಿ, ಬನಿಯಾ ಕಾರ್ಪೊರೇಟುಗಳ ಕೈಗೆ ಸೇರಿಸಲ್ಪಡುತ್ತಾ ಬಂದಿದೆ.
ದೇಶದ ಶೇ.70ರಷ್ಟು ಸಂಪತ್ತು ಕೇವಲ ಹತ್ತರಷ್ಟಿರುವ ಕಾರ್ಪೊರೇಟುಗಳ ಕೈಗಳಿಗೆ ಸೇರಿಕೊಂಡಿದೆ ಎಂದು ಕೆಲವು ವರದಿಗಳು ಆಗಾಗ ಹೇಳುತ್ತವೆ. ಉತ್ತರ ಭಾರತ, ದಕ್ಷಿಣಭಾರತದ ನಡುವೆ ತೀವ್ರ ವೈರುಧ್ಯಗಳು ಬೆಳೆಯುತ್ತಿವೆ. ಅಷ್ಟೇ ಅಲ್ಲದೆ ರಾಜ್ಯಗಳ ನಡುವೆ ಉತ್ತರ ಭಾರತದ ಹಿಂದಿ ವಲಯದ ಹಿಡಿತದಲ್ಲಿರುವ ಕೇಂದ್ರ ಸರಕಾರಗಳ ಪಕ್ಷಪಾತಿ ಧೋರಣೆಗಳ ಬಗ್ಗೆ ಭಾರೀ ಮಟ್ಟದ ವೈರುಧ್ಯಗಳು ಬೆಳೆಯುತ್ತಿವೆ. ಅಂದರೆ ಪ್ರಜಾ ತಾಂತ್ರಿಕವಾದ ಒಕ್ಕೂಟ ತತ್ವಗಳಡಿ ಕೇಂದ್ರ ರಾಜ್ಯ ಸಂಬಂಧಗಳನ್ನು ರೂಪುಗೊಳಿಸುತ್ತಾ, ಬಳಸುತ್ತಾ, ಬೆಳೆಸದಿರುವ ಪರಿಣಾಮವಾಗಿ ಕೇಂದ್ರ ಸರಕಾರಗಳ ಹಿಡಿತ ಹೆಚ್ಚಾಗುತ್ತಾ ರಾಜ್ಯಗಳ ಭಾಷೆಗಳು, ಸಂಸ್ಕೃತಿಗಳು, ಜನಪದೀಯ ಪರಂಪರೆಗಳು ವಿಕಾಸಗೊಳ್ಳುತ್ತಾ ಅರಳಲು ಸಾಧ್ಯವಾಗದೇ ನಶಿಸಿಹೋಗುವ ಅಪಾಯಗಳಿಗೆ ಗುರಿಯಾಗಿವೆ. ಮೊನ್ನೆ ಇದೇ ನವೆಂಬರ್ ಒಂದರಂದು ಕರ್ನಾಟಕ, ಕೇರಳ, ತಮಿಳುನಾಡುಗಳಂತಹ ರಾಜ್ಯಗಳು ತಮ್ಮ ರಾಜ್ಯಗಳು ಉದಯವಾದ ದಿನಗಳನ್ನು ಆಚರಿಸಿಕೊಂಡವು. ಆದರೆ ಇಂದು ರಾಜ್ಯಗಳ ಆಡಳಿತಗಳ ಮೇಲೆ ಕೇಂದ್ರದ ಆಧಿಪತ್ಯ ಹಿಂದೆಂದೂ ಇಲ್ಲದಷ್ಟು ಹೆಚ್ಚಿ ಹತ್ತು ಹಲವು ಹೇರಿಕೆಗಳನ್ನು ರಾಜ್ಯಗಳ ಮೇಲೆ ಮಾಡಲಾಗುತ್ತಿದೆ. ರಾಜ್ಯಗಳ ಸ್ವಾಯತ್ತೆ ಎನ್ನುವುದು ನಾಮ ಮಾತ್ರದ ವಿಚಾರವಾಗುತ್ತಿದೆ.
ಗಣರಾಜ್ಯವೆಂದು ಕರೆದುಕೊಂಡರೂ ವಾಸ್ತವವಾಗಿ ಗಣರಾಜ್ಯ ತತ್ವಗಳು ಪಾಲನೆಯಾಗದೆ ಕೇಂದ್ರದ ಆಧಿಪತ್ಯವನ್ನು ಹೆಚ್ಚಿಸುತ್ತಾ ಬರಲಾಗುತ್ತಿದೆ. ಈಗ ಮೊದಲಿದ್ದಷ್ಟೂ ಒಕ್ಕೂಟ ತತ್ವಗಳು ಪಾಲನೆಯಾಗದೆ ‘ಒಂದು ದೇಶ ಒಂದೇ ತೆರಿಗೆ’ ‘ಆಧಾರ್ ಬದುಕಿನ ಆಧಾರ’ ಎಂದೆಲ್ಲಾ ಆಕರ್ಷಕವೆನಿಸುವ ಘೋಷಣೆಗಳಡಿ ಕೇಂದ್ರ ರಾಜ್ಯಗಳ ಮೇಲಿನ ಹಿಡಿತವನ್ನು ಬಿಗಿಗೊಳಿಸುತ್ತಿದೆ. ಒಂದು ದೇಶ ಒಂದೇ ಭಾಷೆ, ಒಂದೇ ಧರ್ಮ, ಒಂದೇ ಸಂಸೃತಿ, ಒಂದೇ ಪಕ್ಷ, ಒಂದೇ ಸರಕಾರ ಎಂದು ಪ್ರಚಾರ ಶುರುವಿಟ್ಟುಕೊಳ್ಳಲಾಗಿದೆ. ಹಾಗೆಯೇ ಮುಂದುವರಿದು ‘ಒಬ್ಬರದೇ ಅಧಿಕಾರ’ ಎನ್ನುವಷ್ಟರ ಮಟ್ಟಕ್ಕೆ ಎಳೆದುಕೊಂಡುಹೋಗುವ ಲಕ್ಷಣಗಳು ಗೋಚರಿಸತೊಡಗಿವೆ. ಸಾಂವಿಧಾನಿಕ ಅಂಗವಾದ ನ್ಯಾಯಾಂಗದ ಸ್ವಾಯತ್ತತೆ ಹಿಂದೆಂದೂ ಇಲ್ಲದಷ್ಟು ಕುಸಿದು ಅದರ ಮೇಲೆ ಕೇಂದ್ರ ಸರಕಾರದ ಪ್ರಭಾವ ಮತ್ತು ಹಿಡಿತ ಹೆಚ್ಚಾಗುತ್ತಿರುವುದು ಕಾಣುತ್ತಿದೆ. ಇದನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರೆೇ ದೇಶದ ಜನರ ಮುಂದೆ ನೇರವಾಗಿಯೇ ಹೇಳಿದ್ದಾರೆ.
ನ್ಯಾಯಾಲಯದ ತೀರ್ಪುಗಳು ಕೂಡ ರಾಜಕೀಯ ಬಣ್ಣಗಳನ್ನು ಭಾರೀ ಮಟ್ಟದಲ್ಲಿ ಮೆತ್ತಿಕೊಳ್ಳುತ್ತಿರುವುದು ಅನುಭವಕ್ಕೆ ಬರುತ್ತಿರುವ ವಿಚಾರ. ಇನ್ನು ಚುನಾವಣಾ ಆಯೋಗ, ಮಾಹಿತಿ ಹಕ್ಕು ಆಯೋಗ, ರಿಸರ್ವ್ ಬ್ಯಾಂಕ್, ದಿಲ್ಲಿ ವಿಶೇಷ ಪೊಲೀಸ್ ಕಾಯ್ದೆಯಡಿ ರಚಿತವಾದ ಸಿಬಿಐಯಂತಹ ಸಂಸ್ಥೆಗಳ ಕಾರ್ಯ ಚಟುವಟಿಕೆಗಳನ್ನು ಎಲ್ಲಾ ಕಾಯ್ದೆ ಕಾನೂನುಗಳನ್ನು ಗಾಳಿಗೆ ತೂರಿ ಕೇಂದ್ರ ಸರಕಾರದ ತಾಳಕ್ಕೆ ತಕ್ಕಂತೆ ಕುಣಿಸುವ ಪ್ರಕ್ರಿಯೆಗಳು ಹಿಂದೆಂದಿಗಿಂತಲೂ ಅಪಾಯಕಾರಿ ಮಟ್ಟ ತಲುಪಿರುವುದು ಅನುಭವಕ್ಕೆ ಬಂದಿರುವ ವಿಚಾರ. ಅಂದರೆ ಸಂವಿಧಾನವನ್ನು ಮೊದಲಿನಿಂದಲೂ ಸರಕಾರಗಳು ಜನಸಾಮಾನ್ಯರ ಕಣ್ಣಿಗೆ ಮಣ್ಣೆರಚಲು ಮಾತ್ರ ಉಪಯೋಗಿಸುತ್ತಾ ವಾಸ್ತವದಲ್ಲಿ ಅದೇ ಸಂವಿಧಾನವನ್ನು ಉಲ್ಲಂಘಿಸುತ್ತಲೇ ಬರಲಾಗಿದೆ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳು ನಮಗೆ ಸಿಗುತ್ತವೆ. ಇಂದು ಮೊದಲಿದ್ದ ಸಂವಿಧಾನ ಅಳವಡಿಕೆ ಎಂಬ ಪರದೆಯನ್ನು ಕೂಡ ಕಳಚಿ ನೇರವಾಗಿಯೇ ನಡೆಯುವ ಹಂತ ತಲುಪಿದೆ.
ಈ ಬೆಳವಣಿಗೆಗಳು ಒಮ್ಮೆಗೆ ದುತ್ತೆಂದು ಉದ್ಭವಿಸಿದ್ದಲ್ಲ. ಇಂದಿನ ಈ ಎಲ್ಲಾ ಬೆಳವಣಿಗೆಗಳಿಗೂ ಮೂಲ ಅಧಿಕಾರ ಹಸ್ತಾಂತರ, ಕಾಂಗ್ರೆಸ್ ಬ್ರಿಟಿಷ್ ಪ್ರಭುತ್ವದ ಸಖ್ಯ; ನಂತರ ಅಮೆರಿಕ, ರಶ್ಯಾ, ಜಪಾನ್, ಜರ್ಮನಿ, ಇಸ್ರೇಲ್ ಮೊದಲಾದ ಪ್ರಭುತ್ವಗಳೊಂದಿಗೆ ಇದುವರೆಗೂ ಅಧಿಕಾರ ನಡೆಸುತ್ತಾ ಬಂದ ಭಾರತದ ಸರಕಾರಗಳ ಸಖ್ಯಗಳು; ಇವೆಲ್ಲಾ ಮುಖ್ಯ ಕಾರಣವಾಗಿವೆ.
ಇಂದು ಈ ಶಕ್ತಿಗಳಿಗೆ ಹಿಂದೆಲ್ಲಾ ಪ್ರತಿಪಾದಿಸುತ್ತಿದ್ದ ಪ್ರಜಾಪ್ರಭುತ್ವ ಪದ್ಧತಿಯ ಕಾನೂನು ಕಟ್ಟಳೆಗಳನ್ನು ಮೇಲ್ಮಟ್ಟದಲ್ಲೂ ಕೂಡ ಪಾಲಿಸಲು ಸಾಧ್ಯವಾಗದಿರುವುದು ಜಾಗತಿಕ ವಿದ್ಯಮಾನವಾಗಿ ನಮಗೆ ಕಾಣುತ್ತಿದೆ. ಅದು ಅವರು ಇಂದು ಎದುರಿಸುತ್ತಿರುವ ಆರ್ಥಿಕ ಹಾಗೂ ರಾಜಕೀಯ ಬಿಕ್ಕಟ್ಟಿನ ಪರಿಸ್ಥಿತಿ. ತಮ್ಮ ಕಾರ್ಪೊರೇಟ್ ಸಂಕಷ್ಟಗಳನ್ನು ನೀಗಿಸಿಕೊಳ್ಳಲು ಅವರಿಗೆ ಬೇಕಾದ ವ್ಯವಸ್ಥೆಯೊಂದನ್ನು ಅವರು ರೂಪಿಸ ತೊಡಗಿದ್ದಾರೆ. ಅಲ್ಲಿ ಅವರಿಗೆ ಹತ್ತು ಹಲವು ಕಾನೂನುಗಳ ಅಡ್ಡಿ ಆತಂಕಗಳಿರಬಾರದು. ಅದೇ ನಿರಂಕುಶ ಫ್ಯಾಶಿಸ್ಟ್ ವ್ಯವಸ್ಥೆ. ಅದರಲ್ಲಿ ತಮ್ಮ ಪಾಲು ಪಡೆಯಲು ಬಹುತೇಕ ಚುನಾವಣೆಗಳಿಗೆ ಮಾತ್ರ ಇರುವ ರಾಜಕೀಯ ಪಕ್ಷಗಳು ಶ್ರಮಿಸುತ್ತಿರುವುದನ್ನು ನಾವೀಗ ನೋಡುತ್ತಿದ್ದೇವೆ. ಅದರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮುಂಚೂಣಿಯಲ್ಲಿವೆ.
ದೇಶ ಮುಂದಿನ ವರ್ಷ ಚುನಾವಣೆಗೆ ಹೋಗುತ್ತಿದೆ. ಆ ಸಮಯದೊಳಗೆ ಏನು ಬೇಕಾದರೂ ಸಂಭವಿಸುವ ಸಾಧ್ಯತೆಗಳು ಕಾಣುತ್ತಿವೆ. ಅಮಿತ್ ಶಾ, ಪೇಜಾವರ ಮಠಾಧೀಶರಂತಹ ವ್ಯಕ್ತಿಗಳು ನ್ಯಾಯಾಂಗಕ್ಕೇ ನಿರ್ದೇಶನ ನೀಡುತ್ತಾ ಇಂತಿಂತಹ ಕೆಲಸಗಳನ್ನು ಮಾಡಬಾರದು, ಮಾಡಬೇಕು ಎಂದು ಬಹಿರಂಗವಾಗಿ ಕರೆ ಕೊಡಲು ಶುರು ಮಾಡಿದ್ದಾರೆ. ನ್ಯಾಯಾಂಗದ ಪರಿಧಿಯನ್ನು ತೀರ್ಮಾನಿಸುತ್ತಿದ್ದಾರೆ. ಇದುವರೆಗೂ ಮೂಲೆಗೆ ಹಾಕಿದ್ದ ರಾಮನನ್ನು ಒರೆಸಿ ಎತ್ತಿಕೊಂಡು ಮಂದಿರ ಕಟ್ಟುವ ಬಗ್ಗೆ ಭಾರೀ ದನಿಯಿಂದ ಮಾತನಾಡಲು ತೊಡಗಿ ದ್ದಾರೆ. ಸರ್ವ ಜಾತಿಯ, ಸರ್ವಧರ್ಮದ ಜನರು ಹೋಗಬಹು ದಾಗಿದ್ದ ಶಬರಿಮಲೆಯನ್ನು ಬ್ರಾಹ್ಮಣಶಾಹಿಗಳ ಶ್ರದ್ಧಾ ಕೇಂದ್ರವನ್ನಾಗಿ ಪರಿವರ್ತಿಸುತ್ತಾ ಕೋಮು ಗಲಭೆ, ಜಾತಿ ಗಲಭೆ, ಲಿಂಗ ಗಲಭೆ ಎಬ್ಬಿಸಲು ಇನ್ನಿಲ್ಲದ ಪ್ರಯತ್ನ ಆರಂಭಿಸಲಾಗಿದೆ. ಕೋರೆಗಾಂವ್ ಗಲಭೆ ಹಾಗೂ ಕೊಲೆಗಳಿಗೆ ಕಾರಣರಾಗಿದ್ದವರ ಮೇಲೆ ಪ್ರಥಮ ಮಾಹಿತಿ ವರದಿಯನ್ನು ದಾಖಲಿಸದೆ ಆರೋಪ ಪಟ್ಟಿಯಿಂದ ಹೊರಗಿಟ್ಟು ಬದಲಿಗೆ ದಲಿತ ದಮನಿತರ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಜಾತಂತ್ರವಾದಿಗಳು, ಬುದ್ಧಿಜೀವಿಗಳನ್ನು ಕೋರೆಗಾಂವ್ ಗಲಭೆಗೆ ಕಾರಣರೆಂದು ಬಂಧಿಸಲಾಗಿದೆ. ಭೀಮ ಕೋರೆಗಾಂವ್‌ನಲ್ಲಿ ಎಲ್ಗಾರ್ ಪರಿಷದ್ ಸಂಘಟಿಸಿದ್ದ ನಿವೃತ್ತ ನ್ಯಾಯಾಧೀಶರನ್ನೇ ಎಸಿಪಿ ಮಟ್ಟದ ಅಧಿಕಾರಿಗಳು ಬಂಧಿಸುವ ಬೆದರಿಕೆ ಹಾಕಲು ತೊಡಗಿದ್ದಾರೆ. ಜನಸಾಮಾನ್ಯರು ತಮ್ಮ ಹಾಗೂ ದೇಶದ ಭವಿಷ್ಯದ ಬಗ್ಗೆ ತಾವೇ ಜವಾಬ್ದಾರಿ ತೆಗೆದುಕೊಳ್ಳದ ಹೊರತು ಬೇರೆ ಪರಿಹಾರ ಕಾಣಲು ಸಾಧ್ಯವಿಲ್ಲ.
ಮಿಂಚಂಚೆ: nandakumarnandana67gmail.com