ವಿಜ್ಞಾನ ಮತ್ತು ಸಂಶೋಧನೆ ಕ್ಷೇತ್ರಗಳಲ್ಲಿಯ ಆರು ಪ್ರೊಫೆಸರ್‌ಗಳಿಗೆ ಇನ್ಫೋಸಿಸ್ ಪುರಸ್ಕಾರ
ಬೆಂಗಳೂರು,ನ.13: ವಿಜ್ಞಾನ ಮತ್ತು ಸಂಶೋಧನಾ ಕ್ಷೇತ್ರಗಳ ವಿವಿಧ ವರ್ಗಗಳಲ್ಲಿನ ಸಾಧನೆಗಳಿಗಾಗಿ ಆರು ಪ್ರತಿಷ್ಠಿತ ಪ್ರೊಫೆಸರ್‌ಗಳನ್ನು ಇನ್ಫೋಸಿಸ್ ವಿಜ್ಞಾನ ಪ್ರತಿಷ್ಠಾನ(ಐಎಸ್‌ಎಫ್)ದ 2018ನೇ ಸಾಲಿನ ಇನ್ಫೋಸಿಸ್ ಪುರಸ್ಕಾರಗಳಿಗಾಗಿ ಆಯ್ಕೆ ಮಾಡಲಾಗಿದೆ. ಈ ವಾರ್ಷಿಕ ಪ್ರಶಸ್ತಿಯು ಶುದ್ಧ ಚಿನ್ನದ ಪದಕ,ಪ್ರಶಂಸಾ ಪತ್ರ ಮತ್ತು ಒಂದು ಲಕ್ಷ ಡಾಲರ್ ಬಹುಮಾನವನ್ನೊಳಗೊಂಡಿದೆ.
ಭಾರತವು ವಿಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ಹೊಸತನದ ಆವಿಷ್ಕಾರಗಳ ಕೇಂದ್ರವಾಗಿ ತನ್ನ ಸ್ಥಾನವನ್ನು ಸದೃಢಗೊಳಿಸಬೇಕಿದೆ. ಕೆಲವು ಅತ್ಯಂತ ಪ್ರತಿಭಾವಂತ ವಿಜ್ಞಾನಿಗಳು ಮತ್ತು ಸಂಶೋಧಕರನ್ನು ಗೌರವಿಸುವುದು ಹಾಗೂ ವಿಜ್ಞಾನದಲ್ಲಿ ಅತ್ಯುತ್ಕೃಷ್ಟ ಸಾಧನೆಗಾಗಿ ದೇಶದ ಅನ್ವೇಷಣೆಯನ್ನು ಮುಖ್ಯವಾಗಿ ಬಿಂಬಿಸುವುದು ಇನ್ಫೋಸಿಸ್ ಪುರಸ್ಕಾರದ ಉದ್ದೇಶವಾಗಿದೆ ಎಂದು ಐಎಸ್‌ಎಫ್‌ನ ಟ್ರಸ್ಟಿ ಹಾಗೂ ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿ ಅವರು ಮಂಗಳವಾರ ಇಲ್ಲಿ ಹೇಳಿಕೆಯಲ್ಲಿ ತಿಳಿಸಿದರು.
ಖ್ಯಾತ ವಿಜ್ಞಾನಿಗಳು ಮತ್ತು ಪ್ರೊಫೆಸರ್‌ಗಳನ್ನೊಳಗೊಂಡ ಆರು ಸದಸ್ಯರ ಆಯ್ಕೆ ಸಮಿತಿಯು ಆರು ವಿಭಾಗಗಳಲ್ಲಿ 244 ನಾಮಕರಣಗಳ ಪೈಕಿ ಆರು ಪುರಸ್ಕಾರ ವಿಜೇತರನ್ನು ಆಯ್ಕೆ ಮಾಡಿದೆ.
ಇಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ ಕ್ಷೇತ್ರದಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ)ಯ ಪ್ರೊ.ನವಕಾಂತ ಭಟ್, ಮಾನವೀಯ ವಿಭಾಗದಲ್ಲಿ ದಿಲ್ಲಿಯ ಜೆಎನ್‌ಯುದ ಸ್ಕೂಲ್ ಆಫ್ ಆರ್ಟ್ಸ್ ಮತ್ತು ಎಸ್ಥೆಟಿಕ್ಸ್‌ನ ಪ್ರೊಫೆಸರ್ ಹಾಗೂ ಡೀನ್ ಕವಿತಾ ಸಿಂಗ್,ಜೀವ ವಿಜ್ಞಾನಕ್ಕಾಗಿ ಮುಂಬೈನ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆಯ ಜೀವಶಾಸ್ತ್ರ ವಿಭಾಗದ ಸಹ ಪ್ರೊಫೆಸರ್ ರೂಪ್ ಮಲಿಕ್,ಗಣಿತ ವಿಜ್ಞಾನ ಕ್ಷೇತ್ರದಲ್ಲಿ ಫ್ರಾನ್ಸ್‌ನ ಸ್ರಾಸ್‌ಬರ್ಗ್ ವಿವಿಯ ಇನ್‌ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್ಡ್ ಸ್ಟಡಿಯ ಪ್ರೊಫೆಸರ್ ಹಾಗೂ ಗಣಿತ ಪೀಠದ ಅಧ್ಯಕ್ಷೆ ನಳಿನಿ ಅನಂತರಾಮನ್,ಭೌತವಿಜ್ಞಾನ ಕ್ಷೇತ್ರದಲ್ಲಿ ಬೆಂಗಳೂರಿನ ಐಐಎಸ್‌ಸಿಯ ಸೆಂಟರ್ ಫಾರ್ ಅಟಮಾಸ್ಫರಿಕ್ ಮತ್ತು ಓಷನಿಕ್ ಸೈನ್ಸ್‌ಸ್‌ನ ಪ್ರೊ.ಎಸ್.ಕೆ.ಸತೀಶ ಮತ್ತು ಸಮಾಜ ವಿಜ್ಞಾನಕ್ಕಾಗಿ ಅಮೆರಿಕದ ಚಿಕಾಗೋ ವಿವಿಯ ಕಂಪ್ಯೂಟೇಷನ್ ಮತ್ತು ಬಿಹೇವಿಯರಲ್ ಸೈನ್ಸ್‌ನ ಪ್ರೊ.ಸೆಂಧಿಲ್ ಮುಲ್ಲೈನಾಥನ್ ಅವರನ್ನು ಆಯ್ಕೆ ಮಾಡಲಾಗಿದೆ.